ಡ್ಯಾನ್ಸರ್‌ ಕಪ್ಪೆ ಡ್ಯಾನ್ಸ್‌ ಯಾಕೆ ಮಾಡುತ್ತೆ?

ಕಣ್‌ ತೆರೆದು ನೋಡಿ

Team Udayavani, Jul 4, 2019, 5:45 AM IST

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ
ಜಗತ್ತಿನೊಳಗೊಂದು ಸುತ್ತು…

ಡ್ಯಾನ್ಸ್‌ ಎಂದ ಕೂಡಲೆ ನಮಗೆ ನೆನಪಾಗೋದು ಮೈಕೆಲ್‌ ಜಾಕ್ಸನ್‌. ಆದರೆ ಡ್ಯಾನ್ಸ್‌ ಮಾಡುವ ಕಲೆ ಮನುಷ್ಯನೊಬ್ಬನಿಗೇ ಅಲ್ಲ ಪ್ರಾಣಿಗಳಿಗೂ ಒಲಿದು ಬಂದಿದೆ. ನವಿಲು ಗರಿ ಬಿಚ್ಚಿ ನರ್ತಿಸುವುದನ್ನು ನೀವು ನೋಡಿರಬಹುದು. ಅದೇ ರೀತಿ ಕಪ್ಪೆ ನರ್ತಿಸುವುದನ್ನು ನೋಡಿದ್ದೀರಾ? ಎಲ್ಲಾ ಪ್ರಭೇದಗಳಲ್ಲಿ ಈ ಪ್ರವೃತ್ತಿ ಕಂಡುಬರುವುದಿಲ್ಲ. ಪ್ರಪಂಚದಾದ್ಯಂತ ಒಟ್ಟು 25 ಕಪ್ಪೆಗಳ ಪ್ರಭೇದಗಳನ್ನು ಡ್ಯಾನ್ಸಿಂಗ್‌ ಕಪ್ಪೆ ಎಂದು ಕರೆದಿದ್ದಾರೆ ಸಂಶೋಧಕರು. ಈ ಕಪ್ಪೆಗಳು ತನ್ನ ಕಾಲುಗಳನ್ನು ಆಕಾಶದೆತ್ತರಕ್ಕೆ ಚಾಚುತ್ತಾ ನರ್ತಿಸುತ್ತವೆ. ಸ್ವಾರಸ್ಯಕರ ಸಂಗತಿ ಎಂದರೆ ನವಿಲುಗಳಲ್ಲಿ ಹೇಗೆ ಗಂಡು ನವಿಲು ಮಾತ್ರ ನರ್ತಿಸುವುದೋ ಅದೇ ರೀತಿ ಕಪ್ಪೆಗಳ ಪ್ರಭೇದಗಳಲ್ಲಿಯೂ ಗಂಡು ಕಪ್ಪೆಗಳೇ ನರ್ತಿಸುವುದು. ಈಗ ಇವು ಯಾಕೆ ನರ್ತಿಸುತ್ತವೆ ಎನ್ನುವುದಕ್ಕೆ ಉತ್ತರ ಹೊಳೆದಿರಬೇಕಲ್ಲ? ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು. ಡ್ಯಾನ್ಸಿಂಗ್‌ ಕಪ್ಪೆಗಳು ಹೆಚ್ಚಾಗಿ ವಾಸಿಸುವುದು ಜಲಪಾತ, ಹಳ್ಳ ಓರೆಕೋರೆಯಾಗಿ ನೀರು ಹರಿಯುವ ಪ್ರದೇಶಗಳಲ್ಲಿ. ಅಲ್ಲಿ ಕೊಟ್ರ ಕೊಟ್ರ ಸದ್ದು ಹೊರಡಿಸುವುದರಿಂದ ಯಾರಿಗೂ ಕೇಳದು. ಹೀಗಾಗಿ ಶಬ್ದದ ಮೂಲಕ ಹೆಣ್ಣು ಕಪ್ಪೆಯನ್ನು ಆಕರ್ಷಿಸುವುದು ದೂರದ ಮಾತು. ಹೀಗಾಗಿ ಕಾಲು ಸನ್ನೆಯ ಮೂಲಕ, ಹೆಜ್ಜೆ ಹಾಕುವುದರ ಮೂಲಕ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತವೆ.

ಎಮ್ಮೆಗಳಲ್ಲೂ ಇದೆ ಮತದಾನ ವ್ಯವಸ್ಥೆ
ಹಾಂ, ಏನು? ಎಮ್ಮೆಗಳಲ್ಲೂ ಮತದಾನ ವ್ಯವಸ್ಥೆಯೇ? ನಮ್ಮಲ್ಲಾದರೆ ಮತದಾನಕ್ಕೆ ಬ್ಯಾಲೆಟ್‌ ಪೇಪರ್‌, ಇ.ವಿ.ಎಂ ಯಂತ್ರಗಳನ್ನು ಬಳಸುತ್ತೇವೆ. ಅವೇನು ಬಳಸುತ್ತವೇ? ಗೆದ್ದವರಿಗೆ ಪದವಿ ಗಿದವಿ ಏನಾದರೂ ದಕ್ಕುತ್ತದೆಯೇ? ಹೀಗೆಲ್ಲಾ ಯೋಚನೆ ಮಾಡುವ ಮುನ್ನವೇ ಸ್ಪಷ್ಟ ಪಡಿಸಿಬಿಡುತ್ತೇವೆ. ಮೊದಲನೆಯದಾಗಿ ಮತದಾನ ನಡೆಸುವುದು ಆಫ್ರಿಕನ್‌ ಎಮ್ಮೆಗಳು. ಅವು ಮತದಾನ ನಡೆಸುವುದು ಪದವಿ ಪಡೆಯಲು ಅಲ್ಲವೇ ಅಲ್ಲ. ಬ್ಯಾಲೆಟ್‌ ಪೇಪರ್‌ ಅಥವಾ ಇ.ವಿ.ಎಂ.ನ ಅವಶ್ಯಕತೆ ಅವುಗಳಿಗೆ ಇಲ್ಲ. ಅವು ಮತದಾನ ನಡೆಸುವುದು ಯಾವ ದಿಕ್ಕಿನೆಡೆ ಮೇವು ಅರಸುತ್ತಾ ಪ್ರಯಾಣ ಹೊರಡಬೇಕು ಎನ್ನುವುದರ ಬಗ್ಗೆ. ಯಾವ ದಿಕ್ಕಿನೆಡೆ ತಮ್ಮ ಗುಂಪು ಹೋಗಬೇಕೆಂದು ಅವಕ್ಕೆ ಅನ್ನಿಸುತ್ತದೆಯೋ ಆಯಾ ದಿಕ್ಕಿನೆಡೆ ಮುಖ ಮಾಡಿ ಕಲ್ಲಿನಂತೆ ನಿಂತುಬಿಡುತ್ತವೆ. ತಮ್ಮ ಸಹಚರರು ಮೆಜಾರಿಟಿಯಲ್ಲಿ ಯಾವ ದಿಕ್ಕಿನೆಡೆ ಮುಖ ಮಾಡಿ ನಿಂತಿರುವರೋ ಆ ದಿಕ್ಕಿನೆಡೆ ಎಮ್ಮೆಗಳು ಪ್ರಯಾಣ ಹೊರಡುತ್ತವೆ. ಇದನ್ನೇ “ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಎಂದು ಹೇಳುವುದು. ಧ್ವನಿವರ್ಧಕಗಳ ಭರಾಟೆಯಿಲ್ಲ, ಪ್ರಚಾರದ ಕೂಗುಗಳಿಲ್ಲ, ಕರಪತ್ರಗಳನ್ನು ಹಂಚುವುದಿಲ್ಲ. ಸೈಲೆಂಟಾಗಿ ಮತದಾನ ನಡೆದೇ ಹೋಗಿಬಿಡುತ್ತದೆ. ಗೆದ್ದ ಎಮ್ಮೆಗಳು ಸಂಭ್ರಮಾಚರಣೆಯನ್ನೂ ಮಾಡುವುದಿಲ್ಲ. ಎಲ್ಲವೂ ಬಹುಸಂಖ್ಯಾತರ ಅಭಿಪ್ರಾಯವನ್ನು ಗೌರವಿಸಿ ಅದರಂತೆ ನಡೆದುಕೊಂಡು ಬಿಡುತ್ತವೆ.

ಹರ್ಷವರ್ಧನ್‌ ಸುಳ್ಯ


ಈ ವಿಭಾಗದಿಂದ ಇನ್ನಷ್ಟು

  • "ಅಜ್ಜೀ, ನನ್ನ ಹೊಸ ಗೆಳೆಯರು ಬಂದಿದ್ದಾರೆ. ಏನಾದ್ರೂ ಕೊಡು ' ಎಂದು ಸಿರಿ ಹೇಳಿದಳು. "ಐದೇ ನಿಮಿಷ ಮಕ್ಕಳಾ... ಇದೋ ಬಂದೆ ' ಎಂದ ಅಜ್ಜಿ ಲಗುಬಗೆಯಿಂದ ಅಡುಗೆಮನೆಗೆ ಹೀಗೆ...

  • ಚಿನ್ನು ಕೈಲಿ ಸ್ಕೇಲ್‌ ಹಿಡಿದು ಮೋತಿ ನಾಯಿಯ ಬಳಿ "ನಿನ್ನ ಹೆಸರು ಹೇಳು' ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ... ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ...

  • ಮ್ಯಾಜಿಕ್‌ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್‌ ಪ್ರದರ್ಶನವನ್ನು ನೀಡುತ್ತಿರುವಾಗ...

  • ವ್ಯಾಪಾರಿ "ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು' ಎಂದು ಹೇಳಿದ. ಅರುಣ "ಉಚಿತವಾಗಿ ಬೇಡ. ಇದಕ್ಕೂ...

  • ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು...

ಹೊಸ ಸೇರ್ಪಡೆ