ಭಕ್ತಿಕೋಟಿಗೆ ರಾಯರ ಬೆಳಕು

ಪೂಜ್ಯಾಯ ರಾಘವೇಂದ್ರಾಯ...

Team Udayavani, Aug 17, 2019, 5:36 AM IST

ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ ಸನ್ನಿಧಾನದಲ್ಲಿ ರಾಯರ ಆರಾಧನೆಯು ಒಂದು ದಿವ್ಯಾನುಭೂತಿಯ ಸಂಭ್ರಮ. ಭಕ್ತಿ- ಭಾವದ ಉತ್ಸವ. ಶ್ರೀ ಗುರು ರಾಘವೇಂದ್ರರು ತೋರಿದ ಮಹಿಮೆಗಳ ಫ‌ಲಕ್ಕೆ ಈ ಭಕ್ತಕೋಟಿಯೇ ಪರಮ ಸಾಕ್ಷಿ. ದೈವಾಂಶ ಸಂಭೂತನ ಆರಾಧನೆಯ ಈ ಪವಿತ್ರ ಘಳಿಗೆಯಲ್ಲಿ ರಾಯರ ಲೋಕದಲ್ಲಿ ಒಂದು ಭಕ್ತಿಪೂರ್ವಕ ಸಂಚಾರ…

ಇಂದು ಭಕ್ತಕೋಟಿ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿ ಧಿಗೆ ಬರುತ್ತದೆ ಎಂದರೆ ಆ ಸ್ಥಳ ಮಹಿಮೆ ಎಂಥದ್ದಿರಬೇಕು ಎಂದು ಊಹಿಸಬಹುದು. ಪವಾಡ ಮಾಡಿದವರೆಲ್ಲ ಮಹಾಮಹಿಮರಾಗಿಲ್ಲ. ಆದರೆ, ದೈವಾಂಶ ಸಂಭೂತರಂತೆ ಅವತರಿಸಿ ಜನರ ಕಷ್ಟ ಕಾರ್ಪಣ್ಯ ನೀಗಿದವರು ಮಹಾಮಹಿಮರಾಗುವರು. ಶ್ರೀ ರಾಘವೇಂದ್ರ ಸ್ವಾಮಿಗಳು ಅಕ್ಷರಶಃ ದೈವಾಂಶಸಂಭೂತರು. ಅದಕ್ಕೇ ಅವರನ್ನು “ಕಲಿಯುಗದ ಕಾಮಧೇನು’ ಎಂದೇ ಕರೆಯುವುದು.

ಗುರು ರಾಘವೇಂದ್ರರು ಮಾಡಿದ ಪವಾಡಗಳು, ತೋರಿದ ಮಹಿಮೆಗಳು ಅಪಾರ. ಇಂದಿಗೂ ಬೃಂದಾವನದಲ್ಲಿ ಅವರು ನೆಲೆಸಿದ್ದಾರೆ ಎನ್ನುವುದು ಅವರ ಪವಾಡಕ್ಕೆ ಮತ್ತೂಂದು ನಿದರ್ಶನ. ಶ್ರೀ ಗೋಪಾಲದಾಸರು, “ರಾ - ಎನ್ನಲು ರಾಶಿ ದೋಷಗಳು ದಹಿಸುವುದು, ಘ- ಎನ್ನಲು ಘನ ಜ್ಞಾನ ಭಕುತಿಯನಿತ್ತು, ವೇಂ- ಎನ್ನಲು ವೇಗಾದಿ ಜನನ ಮರಣ ಗೆದ್ದು, ದ್ರ- ಎನ್ನಲು ದ್ರವಿಣಾಕ್ಷಪ್ರತಿಪಾದ್ಯನಕಾಂಬ’ ಎಂದು ಅವರ ನಾಮಸ್ಮರಣೆಗೆ ಇಷ್ಟು ಫಲವನ್ನು ಹೇಳಿದ್ದಾರೆ.

ರಾಯರ ಹುಟ್ಟಿನ ಕತೆ…
ಶೌತಸ್ಮಾರ್ತ ಕರ್ಮಾನುಷ್ಠಾನ ಪರರಾದ ಕೃಷ್ಣಭಟ್ಟರೆಂಬ ವಿದ್ವಾಂಸರಿದ್ದರು. ಷಟ್‌ಕರ್ಮನಿರತರಾದ ಇವರು ಉತ್ತಮ ವೈಣಿಕ ವಿದ್ವಾಂಸರೂ ಆಗಿದ್ದರು. ಇವರ ಮಕ್ಕಳು ಕನಕಾಚಲ ಭಟ್ಟರು ವೈಣಿಕ ವಿದ್ಯೆಯೊಂದಿಗೆ ಶಾಸ್ತ್ರದಲ್ಲಿಯೂ ಅದ್ವಿತೀಯ ಪಂಡಿತರಾಗಿದ್ದರು. ಇವರಿಗೆ ತಿಮ್ಮಣ್ಣ ಭಟ್ಟರೆಂಬ ಸುಪುತ್ರನಿದ್ದ. ಕನಕಾಚಲ ಭಟ್ಟರು, ಕಾವೇರಿ ಪಟ್ಟಣವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಮಗನಿಗೆ ವಿವಾಹ ಸಂಸ್ಕಾರ ಮಾಡಿ, ಅವರು ವೈಕುಂಠ ವಾಸಿಗಳಾದರು. ಗೋಪಿಕಾಂಬಾ, ತಿಮ್ಮಣ್ಣ ಭಟ್ಟರ ಧರ್ಮಪತ್ನಿ. ಶ್ರೀನಿವಾಸನ ಅನುಗ್ರಹದಿಂದ ಈ ದಂಪತಿಗೆ ವೆಂಕಟಾಂಬಾ- ಗುರುರಾಜರೆಂಬ ಮಕ್ಕಳು ಹುಟ್ಟಿದರು. ತಿಮ್ಮಣ್ಣ ಭಟ್ಟ ದಂಪತಿಗೆ ಕ್ರಿ.ಶ. 1598ರಲ್ಲಿ ಮತ್ತೂಬ್ಬ ಸುಪುತ್ರನ ಜನನವಾಯಿತು. ವೆಂಕಟೇಶನ ಅನುಗ್ರಹದಿಂದ ಜನಿಸಿದ ಮಗನಿಗೆ ವೆಂಕಟನಾಥನೆಂದು ನಾಮಕರಣ ಮಾಡಿದರು. ವೆಂಕಟನಾಥನೇ ಇಂದಿನ ಶ್ರೀ ರಾಘವೇಂದ್ರ ಗುರುಗಳು.

ಆರಂಭಿಕ ವಿದ್ಯಾಭ್ಯಾಸ
ವೆಂಕಟನಾಥರು, ಅಕ್ಕ ವೆಂಕಟಾಂಬಾದೇವಿಯ ಯಜಮಾನರಾದ ಲಕ್ಷ್ಮೀ ನರಸಿಂಹಾಚಾರ್ಯರಲ್ಲಿ ಕೋಶ, ಕಾವ್ಯ, ನಾಟಕ, ವ್ಯಾಕರಣಾದಿಗಳನ್ನು ಅಧ್ಯಯನ ಮಾಡಿ ಉತ್ತಮ ವಿದ್ಯಾರ್ಥಿಯಾಗಿ ಬೆಳೆದರು. ಕುಲಗುರುಗಳಾದ ಶ್ರೀ ಸುಧಿಧೀಂದ್ರ ತೀರ್ಥರಲ್ಲಿದ್ದು ತರ್ಕ-ವ್ಯಾಕರಣ- ಮೀಮಾಂಸ- ವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಉತ್ತಮ ವಿದ್ವಾಂಸರಾದರು.

ಗೃಹಸ್ಥಾಶ್ರಮ ಸ್ವೀಕಾರ
ಪಿತೃಋಣದಿಂದ ಮುಕ್ತನಾಗಬೇಕಾದರೆ, ವಿವಾಹಿತನಾಗಿ ವಂಶೋದ್ಧಾರ ಮಾಡಬೇಕು. ಅಣ್ಣ ಗುರುರಾಜಾಚಾರ್ಯರು ನೋಡಿದ ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹಿತರಾಗಿ, ಲಕ್ಷ್ಮೀ ನಾರಾಯಣನೆಂಬ ಸುಪುತ್ರನನ್ನು ಪಡೆದು ಸುಖವಾಗಿದ್ದರು. ವೆಂಕಟನಾಥರ ಪೂರ್ವಜರು ಸಿರಿವಂತರಾಗಿದ್ದರು. ಆದರೆ, ವೆಂಕಟನಾಥರ ದಾರಿದ್ರಕ್ಕೆ ಉಪಮೆ ಸಿಗುವುದಿಲ್ಲ. ಇರುವ ಮನೆ ಸೋರುತ್ತಿತ್ತು, ಬಟ್ಟೆಗಳು ಹರಿದಿದ್ದವು. ಹೊಟ್ಟೆಗೆ ಆಹಾರವಿಲ್ಲ. ಒಂದೊಂದು ಬಾರಿ ಐದಾರು ದಿನ ಉಪವಾಸವಿರುತ್ತಿದ್ದ ಅದೆಷ್ಟೋ ಸಂದರ್ಭಗಳು ಎರಗಿದ್ದವು.

ಮತ್ತೆ ಸುಧಿಧೀಂದ್ರ ತೀರ್ಥರ ಆಶ್ರಮ
ಗುರುಗಳಾದ ಸು ಧೀಂದ್ರತೀರ್ಥರ ಆದೇಶದಂತೆ ಶ್ರೀ ಮಠದಲ್ಲಿ ವಾಸ್ತವ್ಯ ಹೂಡಿ ಪಾಠ ಪ್ರವಚನ ಮಾಡುತ್ತಿದ್ದರು. ಗುರುಗಳ ಜತೆಯಲ್ಲಿ ಸಂಚಾರ ಹೊರಟು ಅನೇಕ ಕಡೆಯಲ್ಲಿ ವಾದಿಗಳನ್ನು ಗೆದ್ದು ಶ್ರೀ ಮಠಕ್ಕೆ ಕೀರ್ತಿ ತರುತ್ತಿದ್ದರು. ವ್ಯಾಕರಣ ಶಾಸ್ತ್ರದಲ್ಲಿ ಇವರ ಅದಿತ್ವಿàಯ ಪಾಂಡಿತ್ಯ ಕಂಡ ಸುಧಿಧೀಂದ್ರ ತೀರ್ಥರು “ಮಹಾಭಾಷ್ಯ’ ಎಂಬ ಬಿರುದು ನೀಡಿ ಸತ್ಕರಿಸಿದರು.

ಸುಧಿಧೀಂದ್ರ ತೀರ್ಥರಿಗೆ ಸ್ವಪ್ನಸೂಚನೆ
ಹಂಸನಾಮಕ ಪರಮ್ಮಾತನ ಈ ಪರಂಪರೆಗೆ ಮುಂದಿನ ವಾರಸುದಾರನು ಯಾರೆಂದು ಹುಡುಕುತ್ತಿದ್ದ ಶ್ರೀ ಸುಧಿಧೀಂದ್ರ ತೀರ್ಥರಿಗೆ ಸ್ವಪ್ನದಲ್ಲಿ ಶ್ರೀ ಮೂಲ ರಾಮದೇವರು ಕಂಡು, “ವೆಂಕಟನಾಥನೇ ನಿಮ್ಮ ಮುಂದಿನ ಪೀಠಾಧಿ ಪತಿ’ ಎಂದು ಸೂಚನೆಯನ್ನಿತ್ತರು. ಇದನ್ನು ಶಿಷ್ಯನ ಮುಂದೆ ಪ್ರಸ್ತಾಪ ಮಾಡಿದಾಗ, ವೆಂಕಟನಾಥರು - “ಈ ಅಪಾರ ದ್ವೈತ ಸಿದ್ಧಾಂತದ ಸಾಮ್ರಾಜ್ಯವೆಲ್ಲಿ? ನಾನೆಲ್ಲಿ? ಭಾರ ಹೊತ್ತು ಸಮುದ್ರ ದಾಟಲು ಹೋದಂತಾಗುತ್ತದೆ. ಅಷ್ಟೇ ಅಲ್ಲ, ನಾನು ಚಿಕ್ಕವನು. ನನ್ನ ಹೆಂಡತಿ ಚಿಕ್ಕವಳು. ಮಗನಿಗೆ ಉಪನಯನ ಮಾಡಿಲ್ಲ’ ಎಂದು ಮನೆಗೆ ಹೋದರು. ಒಂದು ದಿನ ಬೆಳಗಿನ ಜಾವ ಸ್ವಪ್ನದಲ್ಲಿ ವಿದ್ಯಾದೇವಿ ಕಂಡು, ವೆಂಕಟನಾಥನಿಗೆ ಸಂಸಾರದ ಬಗ್ಗೆ ತಿಳಿವಳಿಕೆ ನೀಡಿ, “ಸಂಸಾರವನ್ನು ನೆಚ್ಚಿ ನೀ ಇರಬೇಡ. ನಿನ್ನ ಅವತಾರವು ಶ್ರೀ ಮಧ್ವಾಚಾರ್ಯರ ತತ್ವಶಾಸ್ತ್ರದ ಪ್ರಚಾರಕ್ಕಾಗಿ. ನಿನ್ನ ಗುರುಗಳು ಇನ್ನೆರಡು ವರ್ಷಗಳು ಮಾತ್ರ ಇರುತ್ತಾರೆ. ನಿನ್ನಿಂದ ಅಸಾಧಾರಣ ಕಾರ್ಯಗಳಾಗಬೇಕಿವೆ. ವಿದ್ಯಾದೇವಿಯಾದ ನಾನು ನಿನ್ನ ಕೈಪಿಡಿದು ಜಗತ್ಪ್ರಸಿದ್ಧಳಾಗಬೇಕು ಎಂದಿದ್ದೇನೆ. ನಿನ್ನ ನಾಲಿಗೆಯೆಂಬ ರಂಗಸ್ಥಳದಲ್ಲಿ ನರ್ತನ ಮಾಡಲು ಬಯಸಿದ್ದೇನೆ. ನೀ ಯತಿಯಾಗಬೇಕು. ನೀನು ಯತಿಯಾಗುವುದು, ನಾನು ನಿನ್ನ ಅ ಧೀನಳಾಗಿವುದು ಎರಡೂ ದೈವಸಂಕಲ್ಪ’ ಎಂದು ಹೇಳಿ ಸನ್ಯಾಸಾಶ್ರಮಕ್ಕೆ ಪ್ರಚೋದನೆ ನೀಡಿ ಅದೃಶ್ಯಳಾದಳು.

ಸನ್ಯಾಸತ್ವ ಸ್ವೀಕಾರ
ವಿಶೇಷ ಉಪದೇಶದ ಬಳಿಕ ಸನ್ಯಾಸಕ್ಕೆ ಸಿದ್ಧರಾದ ವೆಂಕಟನಾಥರನ್ನು ತಂಜಾವೂರಿಗೆ ಕರೆದೊಯ್ದು ವಿ ಯುಕ್ತ ಮಾರ್ಗದಿಂದ ತುರೀಯಾಶ್ರಮವನ್ನು ಕರುಣಿಸಿ, ರಾಘವೇಂದ್ರ ತೀರ್ಥರೆಂದು ನಾಮಕರಣ ಮಾಡಲಾಯಿತು. ಶ್ರೀ ಮೂಲ ರಾಮದೇವರು ಮೊದಲಾದ ಪ್ರತಿಮೆಗಳನ್ನು, ಎರಡು ವ್ಯಾಸಮುಷ್ಟಿಗಳನ್ನು, ಗ್ರಂಥಗಳ ರಾಶಿಯನ್ನು, ಶ್ವೇತ ಛತ್ರ- ಬಂಗಾರದ ಪಲ್ಲಕ್ಕಿಯನ್ನು ಕರುಣಿಸಿದರು. ದೀಕ್ಷೆ ಪಡೆದ ಶ್ರೀ ರಾಘವೇಂದ್ರ ತೀರ್ಥರು ಸಂಚಾರ ಕೈಗೊಂಡು ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದರು. ಈ ವೇಳೆಯಲ್ಲೇ ನೊಂದು ಬಂದ ಭಕ್ತರ ಕಷ್ಟಗಳನ್ನು ಪರಿಹರಿಸಿದರು. ಗುರುಗಳ ದೇಹಾಲಸ್ಯವನ್ನು ಮನಗಂಡ ಅವರು, ಗುರುಗಳ ಇಚ್ಛೆಯಂತೆ ಆನೆಗುಂದಿ ತುಂಗಭದ್ರಾ ನದಿ ತೀರದಲ್ಲಿ ಶ್ರೀಮಠದ ಪೂರ್ವಿಕ ಗುರುಗಳ ಮೂಲ ಬೃಂದಾವನವಿರುವ ಸ್ಥಳಕ್ಕೆ ಹೊರಟು ಬಂದರು. ಗುರುಗಳು ಯಾವಾಗ ಹರಿಧ್ಯಾನಪರರಾಗಿ ದೇಹ ತ್ಯಾಗ ಮಾಡಿದರೋ, ಆಗ ಅವರ ಬೃಂದಾವನವನ್ನು ಪ್ರತಿಷ್ಠೆ ಮಾಡಿ, ಮಹಾ ಸಮಾರಾಧನೆಯನ್ನು ನಿರ್ವಹಿಸಿದರು. ಗುರುಗಳ ನಿರ್ಯಾಣದ ನಂತರ, ಈ ಮೂಲ ಮಹಾಸಂಸ್ಥಾನದ ಜವಾಬ್ದಾರಿ ಹೊತ್ತ ಶ್ರೀ ರಾಘವೇಂದ್ರ ಗುರುಗಳು ದೇಶದೆಲ್ಲೆಡೆ ಸಂಚರಿಸಿ, ಜಾತಿ, ಮತ, ಪಂಥದ ಭೇದವಿಲ್ಲದೆ ಸಜ್ಜನರನ್ನು ಉದ್ಧರಿಸುತ್ತ ಸಾಗಿದರು.

ಮುಕ್ತಿದಾತರು ಶ್ರೀ ರಾಘವೇಂದ್ರ
ಅಪ್ಪಣ್ಣಾಚಾರ್ಯರು, ರಾಯರನ್ನು “ಮೋಕ್ಷ ಪ್ರದಾಯತ್ರೇ ನಮಃ’ ಎಂಬ ಮಾತಿನಿಂದ ಮೋಕ್ಷವನ್ನು ರಾಯರು ಕೊಡಬಲ್ಲರು ಎಂದಿದ್ದಾರೆ. ಇದು ಹೇಗೆ ಎಂಬುದನ್ನು ಜಗನ್ನಾಥದಾಸರು ಒಂದು ಘಟನೆಯನ್ನು ತಮ್ಮ ಕೃತಿಯಲ್ಲಿ ಹೀಗೆ ತಿಳಿಸಿದ್ದಾರೆ…

ಒಮ್ಮೆ ರಾಯರು ಬೃಂದಾವನ ಪ್ರವೇಶ ಮಾಡುವ ಮೊದಲು ತಮಗೆ ಸೇವೆ ಮಾಡುತ್ತಿರುವ ನೀರಿನ ವೆಂಕಣ್ಣನ ಕುರಿತು, “ವೆಂಕಣ್ಣ, ನಿನ್ನ ಸೇವೆಗೆ ಮೆಚ್ಚಿದ್ದೇನೆ. ನಿನಗೇನು ಬೇಕು ಕೇಳಿಕೋ’ ಎಂದರಂತೆ. ಆಗ ವೆಂಕಣ್ಣನು, “ಗುರುಗಳೇ, ಕೊಡುವುದಾದರೆ ಮೋಕ್ಷ ಕೊಡಿ’ ಎಂದು ಬೇಡಿದನು. ಗುರುರಾಜರು ನಸು ನಕ್ಕು ಮುಂದಕ್ಕೆ ಹೋದರಂತೆ. ಎರಡು ಮೂರು ಬಾರಿ ಅವರಿಬ್ಬರಿಗೆ ಈ ತರದ ಮಾತಿನ ಆವೃತ್ತಿ ನಡೆದಿದೆ. ಒಂದು ದಿನ ಚಿತ್ರದುರ್ಗದಲ್ಲಿ ಇದ್ದ ಶ್ರೀ ರಾಯರು ಮತ್ತೆ ವೆಂಕಣ್ಣನನ್ನು ಕೇಳಲಾಗಿ, ಅವನು ಅದೇ ಮೋಕ್ಷ ಬಯಸಿದನಂತೆ. ಸಂತುಷ್ಟರಾದ ಗುರುಗಳು, “ನಾನು ಹೇಳಿದಂತೆ ಮಾಡುವುದಾದರೆ, ಮೋಕ್ಷ ನಿನಗೆ ಕಟ್ಟಿಟ್ಟ ಬುತ್ತಿ’ ಎಂದರಂತೆ. “ಸ್ನಾನ ಮಾಡಿ ಶುದ್ಧ ವಸ್ತು ಉಟ್ಟು, ದ್ವಾದಶ ನಾಮ ಪಂಚೆ ಮುದ್ರೆಗಳಿಂದ ಅಲಂಕೃತನಾಗು. ನಾನು ಅಷ್ಟರಲ್ಲೇ ಒಂದು ಚಿತೆ ನಿರ್ಮಿಸುತ್ತೇನೆ. ನನ್ನನ್ನು ಸ್ಮರಿಸುತ್ತಾ ಅದರಲ್ಲಿ ಜಿಗಿಯಬೇಕು’ ಎಂದರಂತೆ. ಗುರುಗಳ ಆದೇಶದಂತೆ ವೆಂಕಣ್ಣನು, ರಾಯರನ್ನು ಸ್ಮರಿಸುತ್ತಾ ಅಗ್ನಿಯಲ್ಲಿ ಜಿಗಿದ. ಮರುಕ್ಷಣವೇ ಅಗ್ನಿಯು ಪುಷ್ಟರಾಶಿಯಾಗಿ ಮಾರ್ಪಟ್ಟಿತ್ತು. ಎಲ್ಲರೂ ನೋಡುತ್ತಿರುವಾಗಲೇ ದೇವಲೋಕದಿಂದ ಬಂದ ವಿಮಾನವು ವೆಂಕಣ್ಣನನ್ನು ಹೊತ್ತು ತನ್ನ ಲೋಕಕ್ಕೆ ಹೋಯಿತು. ಚಿತ್ರದುರ್ಗದ ರಾಯರ ಮಠದ ಮುಂದೆ, ಶ್ರೀ ರಾಯರು ನೀರಿನ ವೆಂಕಣ್ಣನಿಗೆ ಮೋಕ್ಷ ಕೊಟ್ಟ ಸ್ಥಳವೆಂದು ಅಲ್ಲಿಯ ಜನ ಇಂದಿಗೂ ಗುರುತಿಸುತ್ತಾರೆ.

ಸಿದ್ಧಯ್ಯಸ್ವಾಮಿ ಕುಕನೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • -ಇಂಗ್ಲೆಂಡ್‌-ಆಸ್ಟ್ರೇಲಿಯ ತಂಡದ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ ರೋಚಕ ಚರಿತ್ರೆ ಕ್ರಿಕೆಟ್‌ ಸಂಸ್ಥೆ ಈ ವರ್ಷದಿಂದ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಶುರು...

  • ಡಿವಿಜಿ ವಿರಚಿತ ಮಂಕುತಿಮ್ಮನ ಕಗ್ಗವು ಕನ್ನಡಿಗರ ಪಾಲಿಗೆ ಭಗವದ್ಗೀತೆ ಎಂದೇ ಜನಜನಿತ. ಕಗ್ಗಗಳು ಜನ್ಮ ತಳೆದು, ಇತ್ತೀಚೆಗೆ ತಾನೆ 75 ವರ್ಷಗಳು ತುಂಬಿದವು. ಒಂದೊಂದು...

  • -ಬೆಂಗಳೂರಲ್ಲೂ ರಂಜಿಸಿದ ಮಕ್ಕಳ ಲೀಗ್‌ -ಶಾಲಾ ಮಕ್ಕಳಿಗೊಂದು ಭವಿಷ್ಯದ ಭರವಸೆ ಎಲ್ಲೋ ಇದ್ದ ಕಬಡ್ಡಿ ಪಟುಗಳಿಗೆ ಜೀವನ ನೀಡಿದ್ದು ಪ್ರೊ ಕಬಡ್ಡಿ. ಆರ್ಥಿಕ, ಸಾಮಾಜಿಕವಾಗಿ...

  • ಚಾಲುಕ್ಯರ ರಾಜಧಾನಿ ಅಚ್ಚರಿಯ ರೂಪದಿಂದ ಸೆಳೆಯುತ್ತಿದೆ. ಪುರಾತತ್ವ ಇಲಾಖೆಯ ಕಾಯಕಲ್ಪದ ಸ್ಪರ್ಶದಿಂದ, ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ....

  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಮೀಪವಿರುವ ಪ್ರಸಿದ್ಧ ಪುಣ್ಯಕ್ಷೇತ್ರ. ಒಮ್ಮೆ ದನ ಕಾಯುವ ಹುಡುಗರಿಗೆ, ಸಹಸ್ರಾರು ವರ್ಷಗಳ...

ಹೊಸ ಸೇರ್ಪಡೆ