ದೇವರು ಕೊಟ್ಟ ಹಣ್ಣು


Team Udayavani, Mar 31, 2018, 1:34 PM IST

11.jpg

 ಸಿದ್ದಗಂಗೆಯ ಸಂತ, ನಡೆದಾಡುವ ದೇವರು, ಅನುಭವ ಬಸವಣ್ಣ… ಡಾ. ಶಿವಕುಮಾರ ಸ್ವಾಮೀಜಿಯರನ್ನು ಜನರು ಕರೆಯುವುದೇ ಹೀಗೆ. ಸಿದ್ದಗಂಗೆಯ ಸಂಪರ್ಕಕ್ಕೆ ಬಂದ ಲಕ್ಷಾಂತರ ಮಕ್ಕಳಿಗೆ ಬದುಕು ನೀಡಿದ್ದು, ಅನ್ನ ಹಾಗೂ ಶಿಕ್ಷಣ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ರೀಗಳ ಹೆಚ್ಚಗಾರಿಕೆ. ನಮ್ಮೆಲ್ಲರ ಪಾಲಿನ ಸೌಭಾಗ್ಯದಂತಿರುವ ಶ್ರೀಗಳಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 111ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಶ್ರೀಗಳ ಸಾನಿಧ್ಯದಿಂದ ತಮ್ಮ ಬದುಕು ಬದಲಾದ ಬಗೆಯನ್ನು ಹಿರಿಯ ಕವಿ ದೊಡ್ಡರಂಗೇಗೌಡರು ವಿವರಿಸಿದ್ದಾರೆ…

ಈ ಆಧುನಿಕ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುಗಳ ಬಗೆಗೆ ವಿದ್ಯಾರ್ಥಿಗಳು ಪೂಜನೀಯ ಭಾವಗಳನ್ನೇನೂ ಬೆಳೆಸಿಕೊಳ್ಳುವುದಿಲ್ಲ! ಇದಕ್ಕೆ ಬದಲಾದ ಪರಿಸರ, ಕೌಟುಂಬಿಕ ಮೌಲ್ಯಗಳ ಸ್ಥಿತ್ಯಂತರ, ಸಮಾಜದಲ್ಲಿ ಆದರ್ಶಗಳೇ ಇಲ್ಲದೆ ಹಣ ಸಂಪಾದಿಸುವ ದುರಾಸೆ… ಈ ಎಲ್ಲವೂ ಸೇರಿ ಇಡೀ ಮಾನವ ಸಮುದಾಯವೇ ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯ ಶೈಥಿಲ್ಯಕ್ಕೆ ಕಾರಣವಾಗಿದೆ. ಆದರೆ, ನಾವು ಕಾಲೇಜು ಓದುವ ಕಾಲಕ್ಕೆ ಖಂಡಿತಾ ಹೀಗಿರಲಿಲ್ಲ ಎಂಬುದು ಸ್ಪಷ್ಟ !

   ಆಗ ಅಪ್ಪ-ಅಮ್ಮನ ಬಗ್ಗೆ ಭಯ ಮಿಶ್ರಿತ ಅಕ್ಕರೆ ಇರುತ್ತಿತ್ತು. ಅಜ್ಜ ಅಜ್ಜಿ ಏನಂದಾರೋ ಎಂಬ ಅಳುಕು. ಗುರುಗಳು ಎಲ್ಲಿ ನಮ್ಮನ್ನು ತಪ್ಪು ತಿಳಿದುಕೊಂಡು ನಮ್ಮ ಬಗೆಗೆ ಕೆಟ್ಟ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೋ ಎಂಬ ಆತಂಕ ನಮ್ಮನಮ್ಮಲ್ಲಿ ಮನೆ ಮಾಡಿರುತ್ತಿತ್ತು. 

   ಸರಿಯಾಗಿ ಹೇಳಬೇಕೆಂದರೆ 1960ರ ದಶಕ. ನಾನು ಪಿಯುಸಿ ಸೇರಿದ ದಿನಗಳು. ಆವತ್ತಿನ ಸಂದರ್ಭದಲ್ಲಿ “ಪೇಟೆ’ ಎಂಬ ಹೆಸರು ಕೇಳಿದರೆ ಸಾಕು. ಪೇಟೆಗಳೆಂದರೆ ಅದೇನೋ ಬೆರಗು, ನಗರಗಳ ಜೀವನಕ್ಕೆ ಹೊಂದಿಕೊಳ್ಳಲಾಗದ ಮುಗ್ಧ ಸ್ಥಿತಿ ನಮ್ಮದು. ಹಾಸ್ಟೆಲ್‌ ಜೀವನ ಬಿಟ್ಟು ಬೇರೆ ಗೊತ್ತಿಲ್ಲ. ನಾವು, ನಮ್ಮ ತರಗತಿಗಳು, ನಾನು-ನಮ್ಮ ಆಟ ಪಾಠ, ನಾವು ನಮ್ಮ ಸೀಮಿತ ಪರಿಧಿಗಳು… ಅಷ್ಟೇ. ಅದರಾಚೆ ಯಾವ ಶೋಧವೂ ಇರಲಿಲ್ಲ. ಅನ್ವೇಷಣೆ ಇರಲಿಲ್ಲ. 

   ಇಂಥ ಅಧೈರ್ಯದ ದಿನಗಳಲ್ಲಿ ನಮಗೆ ಭರವಸೆಯ ಹೊಂಬೆಳಕನ್ನು ತೋರಿದ ಗುರುಗಳು ಸಿದ್ದಗಂಗೆಯ ಸಂತರು. ಅವರು ನಮ್ಮ ಉಚಿತ ವಿದ್ಯಾರ್ಥಿನಿಲಯಕ್ಕೆ ತಿಂಗಳಿಗೆ ಒಮ್ಮೆಯಾದರೂ ಬರುತ್ತಿದ್ದರು. ಉಪನ್ಯಾಸ ನೀಡುತ್ತಿದ್ದರು ಅವರ ಆಶೀರ್ವಚನದ ಫ‌ಲವಾಗಿ, ತಮಸ್ಸಿನಲ್ಲಿದ್ದ ನಾವು ಹೊಸ ಹೊಸದಾದ ಆಲೋಚನಾ ಕಿರಣಗಳನ್ನು ಕಂಡೆವು. ಆ ವಿಚಾರ ಧಾರೆಗೆ ಮನಸೋತು ಹೊಸತು ವ್ಯಕ್ತಿತ್ವಗಳನ್ನೇ ಪಡೆದೆವು. ಇದು ಸೂರ್ಯಸ್ಪಷ್ಟ ಸತ್ಯ. 

   ಶ್ರೀ ಜಿ. ಎಂ. ಸಿದ್ದರಾಮಣ್ಣ ಅವರು ಶ್ರೀಶ್ರೀಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಪರಮಭಕ್ತರು, ಗುರು ಹಾಕಿದ ಗೆರೆ ದಾಟಿದವರಲ್ಲ. ಹೇಳಿ ಕೇಳಿ ಲೋಕಸೇವಾನಿರತ ಜಿ.ಎಂ. ಸಿದ್ದಣ್ಣನವರಿಗೆ ದಾನ, ಧರ್ಮದ ಬುದ್ಧಿ… ಒಂದು ನೂರು, ನೂರಿಪತ್ತು ಜನಕ್ಕೆ ಪ್ರತಿ ವರ್ಷವೂ ಉಚಿತ ವಿದ್ಯಾರ್ಥಿನಿಲಯದಲ್ಲಿ, ಸಕಲ ಸೌಲಭ್ಯಗಳನ್ನು ನೀಡಿ ( ಶ್ರೀ ಗುರುವಿನ ಮಾರ್ಗದರ್ಶನದಂತೆ) ಬಡವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ಮಾಡುತ್ತಾ ಅವರು ಆದರ್ಶ ವ್ಯಕ್ತಿಯಾಗಿದ್ದರು. ಅವರ ಅಭೀಪ್ಸೆಯಂತೆ ಸಿದ್ದಗಂಗೆಯ ನಮ್ಮ ನಲ್ಮೆಯ ಸ್ವಾಮೀಜಿ ಅವರನ್ನು ತಿಂಗಳಿಗೆ ಒಮ್ಮೆಯಾದರೂ (ಬಹುತೇಕ ಭಾನುವಾರಗಳಂದೇ) ಮುಖ್ಯ ಅತಿಥಿಯಾಗಿ ಕರೆದು ಅವರ ದಿವ್ಯ ಸಾನಿಧ್ಯದಲ್ಲಿ ತಾನೂ ಕುಟುಂಬದ ಸಮೇತ ಕುಳಿತು ಗುರುಗಳ ಬೋಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಲಿಸುತ್ತಿದ್ದರು. ಅವರನ್ನು ನೋಡಿ ನಾವು ಅದೇ ಹಾದಿಯಲ್ಲಿ ಸಾಗಿದ್ದೆವು. ಹೀಗಾಗಿ ತಮ್ಮಂಥಕ್ಕೆ ರಶ್ಮಿರಾಜನ ಬರುವಿನಂತೆ ನಮ್ಮ ಅಜ್ಞಾನಗಳ ಪರಿಧಿ ಹೋಗಲಾಡಿಸಿ ಹೊಂಬೆಳಕಿನ ಸುಜ್ಞಾನ ಬಡಿಸಲು ಶ್ರೀಗಳು ಅಕ್ಕರೆಯಿಂದ ಬರುತ್ತಿದ್ದರು. ಆ ದಿನಗಳಲ್ಲಿ ಶ್ರೀಗಳು ನಿಂತೇ ಉಪನ್ಯಾಸ ನೀಡುತ್ತಿದ್ದರು. ನಾವೆಲ್ಲ ಮಂತ್ರ ಮುಗ್ಧರಾಗಿ ಕೇಳುತ್ತಿದ್ದೆವು. 

   ಗುರುಗಳು ಮಹಾನ್‌ ಜ್ಞಾನಿಗಳು. ಉಪನ್ಯಾಸ ಮುಗಿದ ಮೇಲೆ “ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಿ’ ಎಂದು ಹೇಳುತ್ತಿದ್ದರು. ನಾವು ಎಷ್ಟೋ ಸಾರಿ, ಬಾಲಿಷವಾದ ಪ್ರಶ್ನೆಗಳನ್ನು ಕೇಳಿದಾಗ್ಯೂ ಉತ್ತರಿಸಲು ಬೇಸರಿಸಿದ್ದಿಲ್ಲ. ಅವರು ಕೋಪಿಸಿಕೊಂಡಿದ್ದನ್ನು ನಾವ್ಯಾರು ನೋಡಿದ್ದಿಲ್ಲ. ಸಿಡುಕಿದ್ದನ್ನೂ ಕಾಣಲಿಲ್ಲ. 

  ಅವರಲ್ಲಿ ನಾನು “ಅನುಭವ ಬಸವಣ್ಣ’ನನ್ನು ಕಂಡೆ. ವಚನ ವಾಜ್ಮಯದ ಪುಂಖಾನುಪುಂಖ ಉಲ್ಲೇಖಗಳಿಂದ, ವ್ಯಾಖ್ಯಾನಗಳಿಂದ ತಿಳಿವಿನ ಲೋಕವೇ ಹೊಳೆಯುತ್ತಿತ್ತು. ಎಷ್ಟೋ ವಿಚಾರ! ಏನೆಲ್ಲಾ ತರ್ಕ! ಎಷ್ಟೊಂದು ಸಾಹಿತ್ಯದ ಪರಿಚಾರಿಕೆ! ಅಗಣಿತ ಧಾರ್ಮಿಕ ವಿಷಯಗಳ ಮಂಡನೆ! ಎಲ್ಲವೂ ತಿಳಿಯಾದ ಕನ್ನಡದಲ್ಲಿ! ಪ್ರೌಢ ಸಂಸ್ಕೃತದಲ್ಲಿ… ಕಬ್ಬಿಣದ ಕಡಲೆಯಂಥ ಆಂಗ್ಲಭಾಷೆಯಲ್ಲಿ…

  ಉಪನ್ಯಾಸ ಆದಮೇಲೆ ನಾವು ಅವರ ಪಾದ ಕಮಲಗಳಿಗೆ ಎರಗಿ ಆಶೀರ್ವಾದ ಬೇಡುತ್ತಿದ್ದೆವು. ಅವರು ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಣೆಗೆ ವಿಭೂತಿ ಇರಿಸಿ, ಯಾವುದಾದರೂ ಒಂದು ಹಣ್ಣನ್ನು ಕೊಡುತ್ತಿದ್ದರು. ನಾವು ಎಂಥದೋ ಒಂದು ಬಗೆಯ ಅಕ್ಕರೆಯ, ಅಮ್ಮನಲ್ಲಿ ಕಾಣಬಹುದಾದ ವಾತ್ಸಲ್ಯ ಭಾವವನ್ನೇ ಕಾಣುತ್ತಿದ್ದೆವು. 

  ಒಂದು ನಾಲ್ಕೈದು ವಾರಗಳಾದ ಮೇಲೆ ಭಾನುವಾರ ಹೇಗೂ ನಿಮಗೆ ಬಿಡುವು ತಾನೆ? ಸಿದ್ದಗಂಗಾ ಕ್ಷೇತ್ರಕ್ಕೆ ಬನ್ನಿ. ಉದ್ದಾನೇಶ್ವರನನ್ನು ಭಕ್ತಿಯಿಂದ ಪೂಜಿಸಿ. ಎಲ್ಲರ ಜೊತೆ ಕುಳಿತು ಪ್ರಸಾದ ಸ್ವೀಕರಿಸಿ. ಬೆಟ್ಟ ಹತ್ತಿ, ಸುತ್ತ ಓಡಾಡಿ, ಕೆಲಸ ಮಾಡಬೇಕೆಂದರೆ, ಸೇವೆ ಮಾಡಬೇಕೆಂದರೆ ನಮ್ಮ ಹೊಲಗಳಿವೆ. ಒಂದೆರಡು ತಾಸು ಶ್ರಮದಾನ ಮಾಡಿ ಎಂದು ಬುದ್ಧಿ ಹೇಳುತ್ತಿದ್ದರು. 

   ಗುರುಗಳು ಅಷ್ಟು ಹೇಳಿದ್ದೇ ಸಾಕು; ನಾವು ಭಾನುವಾರ ಬೆಳಗ್ಗೇನೇ ಬಾಡಿಗೆ ಸೈಕಲ್ಲುಗಳನ್ನು ಪಡೆದು ಐದು ಐದು ಜನ, ಹತ್ತು ಹತ್ತು ಜನ ಮಠದ ಕಡೆಗೆ ಗುಳೇ ಹೊರಡುತ್ತಿದ್ದೆವು!

  ಅದು ಒಂದು ಬಗೆಯ, ಹೊರಸಂಚಾರ! ಮಿನಿ ಪ್ರವಾಸ! ಆಗ ಈಗಿನ ಹಾಗೆ ತುಮಕೂರು- ಸಿದ್ದಗಂಗೆ- ಕ್ಯಾತ್ಸಂದ್ರ ಕೂಡಿಕೊಂಡಿರಲಿಲ್ಲ. ಸಿದ್ದಗಂಗಾ ಹೈಸ್ಕೂಲ್‌ ಎಲ್ಲೆ ದಾಟಿದ ಮೇಲೆ… ಹೊಲಗಳು; ಹೊಲಗಳು, ರಾಗಿ- ಜೋಳದ ಹೊಲಗಳು. ಮಧ್ಯೆ ನಾವು ಕನ್ನಡದ ಹಾಡುಗಳನ್ನು ಹೇಳುತ್ತಾ ಅತ್ಯಂತ ಖುಷಿಯಲ್ಲಿ ಸಿದ್ದಗಂಗೆ ತಲುಪುತ್ತಿದ್ದೆವು. ಅಲ್ಲಿ ಗುರುವಿನ ದರ್ಶನ; ಜ್ಞಾನದ ಹೂರಣದ ಔತಣ. ಹೀಗಾಯಿತು ಹೊಸತಿನ ಅನಾವರಣ. ಶ್ರೀ ಗುರು ಸನ್ನಿದಾನ ಎಂದರೆ “ಜ್ಯೋತಿ ಬೆಳಗುತಿದೆ.. ಪರಂಜ್ಯೋತಿ ಬೆಳಗುತಿದೆ ‘!

  ಅಲ್ಲಿಂದ ಇಂದಿನ ತನಕ ನಾನು ಶ್ರೀ ಗುರುವಿನ ಸಂಸರ್ಗದಲ್ಲಿದ್ದೇನೆ. ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ಅವರೆಲ್ಲರ ಬದುಕಿನ ರೂಪಣಕ್ಕೆ ಮೂಲ ಕಾರಣ ಆದವರು. ನಾವೆಲ್ಲ ಈ ಹೊತ್ತು ನೀತಿ ಮಾರ್ಗದಲ್ಲಿ ಧರ್ಮ ಮಾರ್ಗದಲ್ಲಿ ಬಾಳಿ ಬದುಕುತ್ತಿದ್ದರೆ ಅದಕ್ಕೆ ಕಾರಣ- ತಾರುಣ್ಯದಲ್ಲಿ ವಿದ್ಯಾರ್ಥಿಗಳಾಗಿದ್ದಾಗ ನನಗೆ ದೊರೆತ ಶ್ರೀ ಗುರುವಿನ ಮಾರ್ಗದರ್ಶನ.

   ಗುರುವೇ ನಿಮ್ಮ ಪರಿಸರದಿಂದ-
   ರೂಕ್ಷ ಶಿಲೆಯಾದ ನಾನು ಮೆದುವಾದೆ!
   ಮೆದುವಾದ ನಾನು ಸನ್ನಡತೆಯಿಂದ-
   ಪ್ರೀತಿ ಸ್ನೇಹ ವಿಶ್ವಾಸದರಿವು ಪಡೆದೆ
   ನಿಮ್ಮ ಬೋಧೆ ಬೆಳಕಿಂದ ಆದರ್ಶ ಪ್ರಭೆಯಿಂದ
   ನಾನು ನಿಜಕೂನು ಮನುಜನಾದೆ
   ಬದುಕಿನಲ್ಲಿ ಎಂದೂ ಸಹಜವಾದೆ!

 ಡಾ. ದೊಡ್ಡರಂಗೇಗೌಡ

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.