ಸುವರ್ಣ ಸುಂದರಿ

ಗ್ಯಾಂಗ್‌ಸ್ಟಾರ್‌ ಕಾಮಿಡಿಯಲ್ಲಿ ವೀರೇಂದ್ರ ಶೆಟ್ಟಿ

Team Udayavani, Oct 4, 2019, 5:05 AM IST

ಇಲ್ಲಿಯವರೆಗೆ ಕನ್ನಡ ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕೇಳುತ್ತಿದ್ದ “ಸವರ್ಣ ದೀರ್ಘ‌ ಸಂಧಿ’ಯ ಹೆಸರು ಈಗ ಗಾಂಧಿನಗರದಲ್ಲೂ ಕೇಳಿಬರುತ್ತಿದೆ. ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸವರ್ಣ ದೀರ್ಘ‌ ಸಂಧಿ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಹಾಡುಗಳು ಹೊರಬಂದಿವೆ.

ಬಹಳ ದಿನಗಳ ನಂತರ ಮೆಲೋಡಿ ಮಾಂತ್ರಿಕ ಮನೋಮೂರ್ತಿ “ಸವರ್ಣ ದೀರ್ಘ‌ ಸಂಧಿ’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಚಿತ್ರದ ಹಾಡುಗಳು ನಿಧಾನವಾಗಿ ಸಿನಿಪ್ರಿಯರನ್ನು ಸೆಳೆಯುತ್ತಿವೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಪತ್ರಕರ್ತ ಅಜಿತ್‌ ಹನುಮಕ್ಕನವರ್‌, ಸಾಹಿತಿ ಜಯಂತ ಕಾಯ್ಕಿಣಿ ಮೊದಲಾದ ಗಣ್ಯರ ಸಮ್ಮುಖದಲ್ಲಿ “ಸವರ್ಣ ದೀರ್ಘ‌ ಸಂಧಿ’ಯ ಹಾಡುಗಳು ಹೊರಬಂದವು.

ಈ ಹಿಂದೆ ತುಳು ಭಾಷೆಯಲ್ಲಿ “ಚಾಲಿ ಪೋಲೀಲು’ ಎನ್ನುವ ಕಾಮಿಡಿ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ “ಸವರ್ಣ ದೀರ್ಘ‌ ಸಂಧಿ’ ಚಿತ್ರದಲ್ಲಿ ತೆರೆಮುಂದೆ ನಾಯಕನಾಗಿ ಮತ್ತು ತೆರೆಹಿಂದೆ ನಿರ್ದೇಶಕನಾಗಿ ಡಬಲ್‌ ರೋಲ್‌ ಪ್ಲೇ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ಕಂ ನಿರ್ದೇಶಕ ವೀರೇಂದ್ರ ಶೆಟ್ಟಿ, “ಕನ್ನಡದಲ್ಲಿ ಹೊಸಥರದ ಚಿತ್ರವನ್ನು ಮಾಡುವ ಯೋಚನೆಯಲ್ಲಿದ್ದಾಗ ಈ ಕಥೆ ಹೊಳೆಯಿತು. ಇದೊಂದು ಕಾಮಿಡಿ, ರೌಡಿಸಂ ಕಥಾಹಂದರವಿರುವ ಚಿತ್ರ. ಚಿತ್ರದ ಕಥೆ ವಿಭಿನ್ನವಾಗಿರುವುದರಿಂದ, ಅದಕ್ಕೆ ತಕ್ಕಂತೆ ಹಾಡುಗಳು ಕೂಡ ವಿಭಿನ್ನವಾಗಿ ಮೂಡಿಬಂದಿವೆ. ಸದ್ಯ ಚಿತ್ರದ ಪ್ರಮೋಶನಲ್‌ ಕೆಲಸಗಳು ನಡೆಯುತ್ತಿದ್ದು, ಇದೇ ಅಕ್ಟೋಬರ್‌ 18ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್‌ ಹಾಕಿಕೊಂಡಿದ್ದೇವೆ. ಈಗಾಗಲೇ ಚಿತ್ರದ ಟೈಟಲ್‌, ಪೋಸ್ಟರ್‌, ಟೀಸರ್‌ ಎಲ್ಲದಕ್ಕೂ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಇದೇ ರೀತಿಯಲ್ಲಿ ಚಿತ್ರವನ್ನು ಸ್ವೀಕರಿಸುವರೆಂಬ ವಿಶ್ವಾಸವಿದೆ’ ಎಂದರು.

ಹಾಡುಗಳ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಮನೋ­ಮೂರ್ತಿ, “ಚಿತ್ರದ ಕಥೆ ಚೆನ್ನಾಗಿದೆ. ಈ ಚಿತ್ರದಲ್ಲಿ ಸಂಗೀತ ನಿರ್ದೇಶಕನ ಜೊತೆ ನಿರ್ಮಾಪಕನ ಜವಾಬ್ದಾರಿ ಕೂಡ ವಹಿಸಿಕೊಂಡಿದ್ದೇನೆ. ಸುಮಾರು ಎಂಟು ತಿಂಗಳ ಸಮಯದಲ್ಲಿ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಇದೆ’ ಎಂದರು.

“ಸವರ್ಣ ದೀರ್ಘ‌ ಸಂಧಿ’ ಚಿತ್ರದಲ್ಲಿ ವೀರೇಂದ್ರ ಶೆಟ್ಟಿ ಅವರಿಗೆ ನವನಟಿ ಕೃಷ್ಣಾ ನಾಯಕಿಯಾಗಿ ಕಾಣಿಸಿಕೊಂಡಿ­ದ್ದಾರೆ. ಉಳಿದಂತೆ ರವಿ ಭಟ್‌, ಪದ್ಮಜಾ ರಾವ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಾಗಿ ಹಾಜರಿದ್ದ ನಿರ್ದೇಶಕ ಯೋಗರಾಜ್‌ ಭಟ್‌, ಜಯಂತ ಕಾಯ್ಕಿಣಿ, ಅಜಿತ್‌ ಹನುಮಕ್ಕನವರ್‌ ಚಿತ್ರದ ಬಗ್ಗೆ ಮಾತನಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಜಿ. ಎಸ್‌. ಕಾರ್ತಿಕ ಸುಧನ್‌


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...

  • ಕನ್ನಡದಲ್ಲಿ ಈ ವಾರ ಮತ್ತೂಂದು "ಕಥಾ ಸಂಗಮ' ತೆರೆಗೆ ಬರುತ್ತಿದೆ. "ಕಥಾ ಸಂಗಮ' ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ...

  • ಕನ್ನಡದಲ್ಲಿ "ಬೆಳದಿಂಗಳ ಬಾಲೆ' ಎಂದೇ ಕರೆಸಿಕೊಳ್ಳುವ ಸುಮನ್‌ ನಗರ್‌ಕರ್‌ ಹೊಸ ಇನ್ನಿಂಗ್ಸ್‌ ಶುರುಮಾಡಿ­ರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ...

  • ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ,...

ಹೊಸ ಸೇರ್ಪಡೆ