ನವೆಂಬರ್‌ 14 ಮಾತ್ರವಲ್ಲ…. ಎಲ್ಲ ದಿನಗಳು ಮಕ್ಕಳ ದಿನಗಳೇ

Team Udayavani, Nov 10, 2019, 5:15 AM IST

ಮರದ ನೆರಳಿನಲ್ಲಿ ಪಾಠ ಕೇಳುವ ದಿನಗಳು ಹಿಂದೆ ಸರಿದವೆ? ಮರವನ್ನೂ
ಮೊಬೈಲ್‌ನಲ್ಲಿಯೇ ನೋಡುವ ಕಾಲ ಬರಬಹುದೆ?

ಮೊಬೈಲ್‌ ಎಂಬ ಭ್ರಮಾತ್ಮಕ ಜಗತ್ತು

ಮೊಬೈಲ್‌ ಎಂಬುದು ಎಲ್ಲ ಕಡೆ ಈಗ ಒಂದು ಸಮಸ್ಯೆಯೇ. ಸೌಲಭ್ಯವೇ ಸಮಸ್ಯೆಯಾಗುವ ವಿಚಿತ್ರವಿದು. ಅದರಲ್ಲೂ ಎಲ್ಲ ಹಿರಿಯ ರದ್ದು ಒಂದೇ ರಾಗ, “ಮಕ್ಕಳು ಇಡೀ ದಿನ ಮೊಬೈಲ್‌ನಲ್ಲಿರುತ್ತಾರೆ’.

ಹಾಗೆ ಹೇಳುವ ಹೆತ್ತವರಿಗೆ ಕೊಡಬಹುದಾದ ಉತ್ತರವಿದು, “”ನಿಮ್ಮ ಮಕ್ಕಳು ಇಡೀ ದಿನ ಯಾಕೆ ಮೊಬೈಲ್‌ನಲ್ಲಿ ಮುಳುಗಿರುತ್ತಾರೆಂದರೆ ನೀವು ಕೂಡ ಸದಾಕಾಲ ಮೊಬೈಲ್‌ನಲ್ಲಿಯೇ ಇರುತ್ತೀರಿ”.

ಈ ಹಿಂದೊಂದು ವಾಟ್ಸಾಪ್‌ನಲ್ಲಿ ವೀಡಿಯೋ ಬಂದಿತ್ತು. ವಾಟ್ಸಾಪ್‌ನ ತೊಂದರೆಗಳ ಬಗ್ಗೆ ಮೊಬೈಲ್‌ನ ಸಂದೇಶದ ಮೂಲಕವೇ ಹೇಳಬೇಕಾಗಿರುವುದು ವೈಪರೀತ್ಯವೇ. ಇರಲಿ. ಪುಟ್ಟ ಹುಡುಗಿಯೊಬ್ಬಳು ಅಪ್ಪನ ಕೈಯ ಮೊಬೈಲನ್ನು ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾಳೆ. ಅಪ್ಪನಿಗೆ ಸಿಟ್ಟು ಬಂತು. ಅಮ್ಮನ ಕೈಯ ಮೊಬೈಲ್‌ ಕಸಿಯಲು ಹೋದಳು. ಆಕೆ ದುರುಗುಟ್ಟಿ ನೋಡಿದಳು. ನಿಜವಾಗಿ ಆ ಪುಟ್ಟ ಹುಡುಗಿಗೆ ಬೇಕಾಗಿರುವುದು ಮೊಬೈಲ್‌ ಅಲ್ಲ. ಅಪ್ಪ ಮತ್ತು ಅಮ್ಮ ಮೊಬೈಲ್‌ ಬಿಟ್ಟು ತನ್ನೊಂದಿಗೆ ಆಟವಾಡಬೇಕೆಂಬುದು ಅವಳ ಆಸೆ. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು; ಆಟವಾಡಲು ಜೊತೆಯಿಲ್ಲ. ಪೇಟೆಪಟ್ಟಣಗಳಲ್ಲಿ ಪಕ್ಕದ ಮನೆಗೆ ಹೋಗುವಂತಿಲ್ಲ. ಅಲ್ಲಿನ ಮಗು ಬಂದರೂ ಆಟವಾಡಲು ಜಾಗವಿಲ್ಲ. ಮನೆಯಲ್ಲಿ ಅಮ್ಮ-ಅಪ್ಪನ ಜೊತೆಗೆ ಆಟವಾಡೋಣವೆಂದರೆ ಅವರಿಬ್ಬರೂ ಮೊಬೈಲ್‌ನಲ್ಲಿ ಕಳೆದು ಹೋಗಿದ್ದಾರೆ; ಮತ್ತದೇ ಟಿ.ವಿ. ನೋಡಬೇಕು! ಬರೀ ಬೋರಿಂಗ್‌ !

ಅಮೆರಿಕದಲ್ಲಿ ಸಮಾಜ ಅಧ್ಯ ಯನ ಸಂಸ್ಥೆ ಯೊಂದು ಮೊಬೈಲ್‌ ಬಳಕೆಯ ಸಂಬಂಧ ಇತ್ತೀಚೆಗೆ 1135 ಮಂದಿ ಹೆತ್ತವರನ್ನು ಸಂದರ್ಶಿ ಸಮೀಕ್ಷೆ ನಡೆಸಿತು. ಅವರ ಮಕ್ಕಳಲ್ಲಿ 47 ಶೇ. ಮಂದಿ 6 ವರ್ಷಕ್ಕಿಂತ ಮೊದಲೇ ಮೊಬೈಲ್‌ ಬಳಕೆ ಆರಂಭಿಸಿದ್ದಾರಂತೆ. 12 ಶೇ. ಮಂದಿ 1 ಅಥವಾ 2 ವರ್ಷಕ್ಕೇ ಮೊಬೈಲ್‌ ಬಳಸಲಾರಂಭಿಸಿದ್ದಾರೆ. ಈಗ ಈ ಶೇಕಡಾವಾರು ಪ್ರಮಾಣವಂತೂ ಇನ್ನೂ ಹೆಚ್ಚಿಗಿದೆ. ಪುಟಾಣಿಗಳು ಆಹಾರ ಸೇವಿಸಲು ನಿರಾಕರಿಸಿದರೆ ಮೊಬೈಲ್‌ನಲ್ಲಿ ಹಾಡು, ದೃಶ್ಯಗಳನ್ನು ಹಾಕಿ ತೋರಿಸುತ್ತೇವೆ. ರಾಮಾಯಣದ ಕೌಸಲ್ಯೆ ಈಗಲಾದರೆ ರಾಮನಿಗೆ ಮೊಬೈಲ್‌ನಲ್ಲಿಯೇ ಚಂದ್ರನನ್ನು ತೋರಿಸುತ್ತಿದ್ದಳ್ಳೋ ಏನೊ! ಮಕ್ಕಳು ಉಣ್ಣದಿದ್ದರೆ “ಚಂದಮಾಮ’ನನ್ನು ತೋರಿಸುವುದು ಒಂದು ಸಂಪ್ರದಾಯ. ಈ ಮೂಲಕ ಪ್ರಕೃತಿಯ ಕಡೆಗೆ ಪುಟ್ಟದೃಷ್ಟಿಗಳನ್ನು ತೆರೆಸಲು ಪ್ರೇರೇಪಿಸುವುದು ಆಶಯ. ಮಕ್ಕಳು ಪ್ರಕೃತಿಯ ಅಂದವನ್ನು, ಹಕ್ಕಿ ಹಾಡಿನ ಇಂಪನ್ನು , ನೀರ ಹರಿವಿನ ನಾದವನ್ನು ಅನುಭವಿಸಲು ಸಾಧ್ಯವಾದರೆ ಆ ಸಂಸ್ಕಾರ ಜೊತೆಗೇ ಬೆಳೆಯುತ್ತಿರುತ್ತದೆ. ಆದರೆ, ಇವತ್ತಿನ ಮಕ್ಕಳು ಎಲ್ಲವನ್ನೂ ಅನುಭವಿಸುವುದು ಮೊಬೈಲ್‌ ಮೂಲಕವೇ. ಅವರಿಗೆ ಏನನ್ನಿಸುತ್ತದೆ?

ಏನೂ ಅನ್ನಿಸುವುದಿಲ್ಲ.
ಒಬ್ಟಾತ ರಸ್ತೆಯಲ್ಲಿ ಬಿದ್ದದ್ದರೆ ಯಾರಾದರೂ “ಛೆ!’ ಎಂದು ಸಹಾಯಕ್ಕೆ ಧಾವಿಸುವ ಕಾಲವಿತ್ತು. ಆದರೆ, ಇವತ್ತಿನ ಮಂದಿ ಆದೃಶ್ಯವನ್ನು ಸುಮ್ಮನೆ ನೋಡುತ್ತ ನಿಲ್ಲುತ್ತಾರೆ. ಒಂದು ಬಗೆಯ “ಪ್ಯಾಸಿವ್‌ ಆ್ಯಟಿಟ್ಯೂಡ್‌’. ಮೊಬೈಲ್‌ನ ಸ್ಕ್ರೀನ್‌ನಲ್ಲಿ ಯಾರಾದರೂ ಬಿದ್ದದ್ದನ್ನು ಕಂಡರೂ ಏನೂ ಅನ್ನಿಸುವುದಿಲ್ಲ. ಸಂತೋಷವಿರಲಿ, ದುಃಖವಿರಲಿ ಅದನ್ನು ನಿರ್ಲಿಪ್ತ ಭಾವದಿಂದ ನೋಡುವ ಮನೋ ಸ್ಥಿತಿ ಮಕ್ಕಳಲ್ಲಿ ಬೆಳೆದಿರುತ್ತದೆ. ಹಾಗಾಗಿ, ನಿಜ ಜೀವನವನ್ನು ಅವರು ನೋಡುವ ಬಗೆಯೂ ಅದೇ. ಏನೂ ಅನ್ನಿಸಿದ ಒಂದು ಭಾವ.

ಮಕ್ಕಳ ಕೈಗೆ ಮೊಬೈಲ್‌, ಐಫೋನ್‌ ಇತ್ಯಾದಿಗಳನ್ನು ಕೊಟ್ಟು ಒಂದು ಬಗೆಯ ವರ್ಚುವಲ್‌ ವರ್ಲ್ಡ್ನಲ್ಲಿ ಬೆಳೆಸುತ್ತಿದ್ದೇವೆ. ಅವರು ಒಂದು ಬಗೆಯ ಕನಸಿನ ಲೋಕದಲ್ಲಿಯೇ ಬೆಳೆಯುತ್ತಾರೆ. “ದನವನ್ನು ನೋಡಿದ್ದೀರಾ? ಹುಲಿಯನ್ನು ನೋಡಿದ್ದೀರಾ, ಮಾವಿನ ಮರವನ್ನು ನೋಡಿದ್ದೀರಾ’ ಎಂದು ಕೇಳಿದರೆ ಅವರು, “ಹೌದು’ ಎನ್ನುತ್ತಾರೆ. ಆದರೆ, ಅವರು ಅವೆಲ್ಲವನ್ನು ನೋಡಿದ್ದು ಮೊಬೈಲ್‌ ಸ್ಕ್ರೀನ್‌ನಲ್ಲಿಯೇ.
ಗ್ಯಾಜೆಟ್‌ಗಳ ಮಿತಿಮೀರಿದ ಬಳಕೆಯಿಂದಾಗಿ ಮಕ್ಕಳು ಬಹುಬೇಗನೇ ಖನ್ನತೆ ಮತ್ತು ಒಂಟಿತನಗಳಂಥಾ ಸಮಸ್ಯೆಗಳತ್ತ ವಾಲುತ್ತಿದ್ದಾರೆ ಎಂಬುದನ್ನು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಸುತ್ತಮುತ್ತಲಿನವರೊಂದಿಗೆ ತೀರಾ ಕಮ್ಮಿಯಾಗಿಬಿಟ್ಟಿರುವ ನೈಜ ಸಂವಹನ ಮತ್ತು ಆರೋಗ್ಯಕರ ಸಂಬಂಧಗಳು ಒಂಟಿತನ, ಕೀಳರಿಮೆಗಳಂಥ ಸಮಸ್ಯೆಗಳಿಗೆ ದಾರಿಯಾಗಿ ಮಕ್ಕಳ ಆತ್ಮವಿಶ್ವಾಸಕ್ಕೆ ನೇರ ದಾಳಿಯಿಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ 2011ನೇ ವರದಿಯ ಪ್ರಕಾರ ಗ್ಯಾಜೆಟ್‌ ಗಳಿಂದುಂಟಾಗುವ ರೇಡಿಯೇಷನ್‌ ಎಮಿಷನ್‌ಗಳಿಂದ ಮಕ್ಕಳಲ್ಲಿ ಕ್ಯಾಟಗರಿ- 2ಆ ಸಮಸ್ಯೆಗಳು ಕಾಡುವ ಬಗ್ಗೆ ದಾಖಲಿಸಲಾಗಿತ್ತು. ವಿಕಿರಣ ಹೊರಸೂಸುವಿಕೆಯ ಈ ಸಮಸ್ಯೆಯನ್ನು ಕಡೆಗಣಿಸಿದರೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ತೀವ್ರ ಪ್ರತಿಕೂಲ ಪರಿಣಾಮವನ್ನು ಬೀರಬಹುದು ಎಂದು 2013ರಲ್ಲಿ ಟೊರಾಂಟೋ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರಾದ ಡಾ. ಆ್ಯಂಥನಿ ಮಿಲ್ಲರ್‌ ಬಹಿರಂಗಪಡಿಸಿದ್ದರು.

ಚಿಕ್ಕಮಕ್ಕಳು ಬಹುಬೇಗನೇ ಗ್ಯಾಜೆಟ್‌ ಲೋಕಕ್ಕೆ ಪರಿಚಿತರಾಗಿ ಬಿಟ್ಟರೆ ಡಿಜಿಟಲ್‌ ಜಗತ್ತಿನಲ್ಲಿ ಒಂದು ನಕಾರಾತ್ಮಕ ಬಗೆಯ ಅಡಿಪಾಯ ವನ್ನು ಹಾಕಿಕೊಳ್ಳುವಲ್ಲಿ ಬೇಗನೇ ಯಶಸ್ವಿಯಾಗುತ್ತಾರೆ ಎನ್ನುತ್ತಾರೆ ಖ್ಯಾತ ಮನೋವಿಜ್ಞಾನಿಯೂ, ಅಮೆರಿಕಾದ ಮಾಡರ್ನ್ ಸೈಕಾಲಜಿ ರಿಸರ್ಚ್‌ ಸೆಂಟರ್‌ನ ನಿರ್ದೇಶಕರೂ ಆಗಿರುವ ಪಮೇಲಾ ರಟ್ಲೆಜ್‌. ದ ಅಮೆರಿಕನ್‌ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಮತ್ತು ದ ಕೆನಡಿಯನ್‌ ಸೊಸೈಟಿ ಆಫ್ ಪೆಡಿಯಾಟ್ರಿಕ್ಸ್ ಹೇಳುವಂತೆ 2 ವರ್ಷದೊಳಗಿನ ಮಕ್ಕಳಿಗೆ ಗ್ಯಾಜೆಟ್‌ಗಳನ್ನು ಪರಿಚಯಿಸುವುದೇ ಉಚಿತವಲ್ಲ. ಈ ವಯಸ್ಸಿನ ಮಕ್ಕಳು ದಿನವೊಂದಕ್ಕೆ 4 ರಿಂದ 5 ಬಾರಿ ಗ್ಯಾಜೆಟ್‌ ಬಳಸಿದರೂ ಅದು ಅವರ ಆರೋಗ್ಯಕರ ಬೆಳವಣಿಗೆಗೆ ಮಾರಕ ಎಂದು ಸಂಶೋಧನೆಗಳು ಅಭಿಪ್ರಾಯಪಟ್ಟಿವೆ.

ಪೀಪಿ

ಬಳಸಿದಂತೆ ಒಳಿತು-ಕೆಡುಕು
ಪೋಷಕರು ಮತ್ತು ಶಿಕ್ಷಕರ ಭೇಟಿಯಾಗುವ ಸಂದರ್ಭದಲ್ಲಿ ಒಬ್ಬರು ಪೋಷಕರು ತಮ್ಮ ಮಗನ ಬಗ್ಗೆ ದೂರು ಹೇಳುತ್ತಿದ್ದರು: ಇವನು ಪಠ್ಯಪುಸ್ತಕ ಓದುವುದೇ ಇಲ್ಲ. ಮೂರು ಹೊತ್ತೂ ಮೊಬೈಲ್‌ ಫೋನ್‌ ಮೇಲೆ ಕೆಲಸ ಮಾಡುತ್ತಾನೆ. ನಾವು ಲೆಕ್ಕಗಳನ್ನು ಪೇಪರ್‌ ಮೇಲೆ ಮಾಡಿ ಕಲಿಯುತ್ತಿದ್ದೆವು. ಇವನು ಮೊಬೈಲ್‌ ಮೇಲೆ ಲೆಕ್ಚರ್‌ ನೋಡುತ್ತಾನೆ! ಹೋಮ್‌ವರ್ಕ್‌ ಮಾಡುವುದಕ್ಕೂ ಮೊಬೈಲ್‌ ಬೇಕು!

ಸಭೆಯಲ್ಲಿದ್ದ ಅನೇಕ ಪೋಷಕರು, “ಹೌದು, ಹೌದು!’ ಎಂದು ಒಕ್ಕೊರಲಿನಿಂದ ಸಮರ್ಥಿಸಿದರು. ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲೆ ಆಗಬಹುದಾದ ಹಾನಿಯ ಬಗ್ಗೆ ಮಾತಾಡುವ ಮುನ್ನ ಪೋಷಕರು ಮತ್ತು ಶಿಕ್ಷಕರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಒಂದು ದಿನ ಮೊಬೈಲ್‌ ಮನೆಯಲ್ಲಿ ಮರೆತು ಬಂದರೆ ಜಗತ್ತೇ ಮುಳುಗಿಹೋದ ಹಾಗೆ ಆಡುವ ಜನರನ್ನು ನೀವೂ ನೋಡಿರುತ್ತೀರಿ! ಸಾಮಾಜಿಕ ತಾಣಗಳಲ್ಲಿ ನನ್ನ ಸ್ನೇಹವಲಯದಲ್ಲಿರುವ ಬಹಳಷ್ಟು ಜನರು ಶಾಲಾಕಾಲೇಜುಗಳಲ್ಲಿ ಶಿಕ್ಷಕರು! ತಂದೆತಾಯಿಯರನ್ನು ನೋಡಿಯೇ ಕಲಿಯುವ ಮಕ್ಕಳಿಗೆ ಮೊಬೈಲ್‌ ಬಳಕೆಯನ್ನು ನಿಷೇಧಿಸುವುದು ಸುಲಭವಲ್ಲ. ಮೊಬೈಲ್‌ ಬಳಕೆ ಮಕ್ಕಳಿಗೆ ಹೇಗೆ ಉಪಯುಕ್ತವಾಗಬಲ್ಲದು ಎಂದು ಯೋಚಿಸಿ ಕಾರ್ಯಗತವಾಗುವುದರಲ್ಲಿ ಜಾಣ್ಮೆಯಿದೆ ಎನ್ನಿಸುತ್ತದೆ.

ಕಲಿಕೆಯಲ್ಲಿ ಸ್ಪಷ್ಟತೆ : ಇಂದು ಶಿಕ್ಷಣಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ಹಿಂದೆ ಶಿಕ್ಷಕರಿಗೆ ಕಪ್ಪುಹಲಗೆ, ಸೀಮೆಸುಣ್ಣ, ಗೋಡೆಗೆ ತೂಗಿದ ನಕ್ಷೆ ಮುಂತಾದ ಕೆಲವು ಪರಿಕರಗಳು ಮಾತ್ರ ಲಭ್ಯವಾಗಿದ್ದವು. ಪಠ್ಯಪುಸ್ತಕಗಳೂ ಎಲ್ಲ ಮಕ್ಕಳಿಗೂ ಸಿಕ್ಕುತ್ತಿರಲಿಲ್ಲ. ಲೈಬ್ರರಿ ಮತ್ತು ಪ್ರಯೋಗಶಾಲೆಗಳು ಎಲ್ಲಾ ಶಾಲೆಗಳಲ್ಲಿ ಇರುತ್ತಿರಲಿಲ್ಲ. ಮೊಬೈಲ್‌ ಫೋನ್‌ ಮೂಲಕ ಇಂದಿನ ಮಕ್ಕಳು ಜಗತ್ತಿನ ಜ್ಞಾನಭಂಡಾರಕ್ಕೇ ಲಗ್ಗೆ ಇಡಬಹುದು. ಎಷ್ಟೋ ಜನ ಪೋಷಕರು ತಮ್ಮ ಮಕ್ಕಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮೊದಲಾದವುಗಳನ್ನು ಬೋಧಿಸಲು ಕಷ್ಟಪಡುವುದನ್ನು ನೋಡುತ್ತೇವೆ. ಏಕೆಂದರೆ ಅವರು ಕಲಿತ ವಿಷಯಗಳಿಗೂ ಇಂದು ಪಠ್ಯದಲ್ಲಿರುವ ವಿಷಯಗಳಿಗೂ ಆಳ-ವಿಸ್ತಾರಗಳಲ್ಲಿ ಅಜಗಜಾಂತರವಿದೆ! ನೀವು ಕೂಡ ಇವರಲ್ಲಿ ಒಬ್ಬರಾದಲ್ಲಿ ಮೊಬೈಲ್‌ ಮೇಲೆ ಅಂತರ್ಜಾಲದ ಮೊರೆ ಹೋಗಿ! ಅಲ್ಲಿರುವ ವಿಷಯವೈಪುಲ್ಯಕ್ಕೆ ನೀವು ಖಂಡಿತ ಮಾರುಹೋಗುತ್ತೀರಿ. ಯಾವುದೇ ವಿಷಯದ ಬಗ್ಗೆ ನಿಮಗೆ ಕನಿಷ್ಠ ಹತ್ತಾದರೂ ವಿಡಿಯೋ ಪಾಠಗಳು ಸಿಕ್ಕುತ್ತವೆ. ಹುಡುಕಿದರೆ ವಿಷಯಗಳನ್ನು ಬಹಳ ಸೊಗಸಾಗಿ ನಿರೂಪಿಸಿರುವ ವಿಡಿಯೋಗಳು ನಿಮಗೆ ಸಿಕ್ಕುತ್ತವೆ. ಸರಿಯಾದ ಸೌಕರ್ಯಗಳಿಲ್ಲದ, ಸೂಕ್ತ ಪಾಠಕ್ರಮಗಳಿಲ್ಲದ ಶಾಲಾಕಾಲೇಜುಗಳು ದೊಡ್ಡ ಸಂಖ್ಯೆಯಲ್ಲಿರುವ ಸಂದರ್ಭದಲ್ಲಿ ಮೊಬೈಲ್‌ ಮೂಲಕ ಅಂತರ್ಜಾಲದ ಜ್ಞಾನಸಮುದ್ರಕ್ಕೆ ಕೊಕ್ಕೆ ಹಾಕುವುದರಲ್ಲಿ ತಪ್ಪೇನೂ ಇಲ್ಲ.

ಈ ಸಂದರ್ಭದಲ್ಲಿ ಕೆಲವು ಆಕ್ಷೇಪಣೆಗಳು ಕೇಳಿಬರುವುದು ಸಹಜ. ಮಕ್ಕಳಿಗೆ ಇಂಗ್ಲಿಷ್‌ ಪಾಠಗಳು ಅರ್ಥವಾಗುತ್ತವೆಯೇ? ಅವರಿಗೆ ಇಂಗ್ಲಿಷ್‌ ಉಚ್ಚಾರಣೆ ಅರ್ಥವಾಗುತ್ತದೆಯೇ? ಹತ್ತಾರು ಪಾಠಗಳು ಸಿಕ್ಕಾಗ ಯಾವುದನ್ನು ಮಗು ನೋಡಬೇಕು? ನಿಜವೆಂದರೆ ಇಂದು ಪರಿಸ್ಥಿತಿ ಬೇಗ ಬದಲಾಯಿಸುತ್ತಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಹಿಂದಿ ಭಾಷೆಯಲ್ಲಿ ದೊರೆಯುವ ಪಾಠಗಳ ಸಂಖ್ಯೆ ಒಮ್ಮೆಲೇ ಏರಿದೆ. ಮುಂದೆ ಕನ್ನಡ ಮುಂತಾದ ಪ್ರಾದೇಶಿಕ ಭಾಷೆಗಳಲ್ಲೂ ಪಾಠಗಳು ಸಿಕ್ಕುತ್ತವೆ. ಗ್ಲೋಬಲೀಕರಣದ ಯುಗದಲ್ಲಿ ಸ್ಪರ್ಧಿಸಬೇಕಾದ ಮಕ್ಕಳು ಹೊರಗಿನ ದೇಶಗಳಲ್ಲಿ ಪಾಠಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಕಲಿಯುವುದು ಒಳ್ಳೆಯದೇ ಎಂದು ನನ್ನ ಅನ್ನಿಸಿಕೆ. ಈಗ ಮಾಹಿತಿಯ ವೈಪುಲ್ಯ ಎನ್ನುವ ಗಂಭೀರ ಸಮಸ್ಯೆಗೆ ಬರೋಣ. ವಿಪರೀತ ಎನ್ನಿಸುವಷ್ಟು ಪಠ್ಯಸಂಬಂಧಿ ವಿಡಿಯೋಗಳು-ವೆಬ್‌ ತಾಣಗಳು ಸಿಕ್ಕಾಗ ಮಕ್ಕಳು ಗೊಂದಲಕ್ಕೆ ಬೀಳುವುದು ಸಹಜ. ಶಿಕ್ಷಕರು ಮತ್ತು ಪೋಷಕರು ಇಲ್ಲಿ ವಹಿಸಬೇಕಾದ ಪಾತ್ರ ದೊಡ್ಡದು. ಯಾವ ವಿಡಿಯೋಗಳು ಹೆಚ್ಚು ಸೂಕ್ತ ಎನ್ನುವುದನ್ನು ಆರಿಸುವ ಕಲೆಯನ್ನು ಮಕ್ಕಳಿಗೆ ಹೇಳಿಕೊಟ್ಟರೆ ಹುಡುಕಾಟದ ಶ್ರಮ ಕಡಿಮೆಯಾಗುತ್ತದೆ. ಶಾಲೆಯ ಶಿಕ್ಷಕರೇ ಆಕರ ಸಾಮಗ್ರಿಯಾಗಿ ಒಳ್ಳೆಯ ವಿಡಿಯೋ ಪಾಠಗಳನ್ನು ಹೆಕ್ಕಿ ಕೊಡುವುದು ಅತ್ಯಂತ ಸಹಜ ಪರಿಹಾರವೆನ್ನಿಸುತ್ತದೆ.

ಸಾಮಾಜಿಕ ತಾಣಗಳಲ್ಲಿ ಭಾಗವಹಿಸುವಿಕೆ : ಈಗೀಗ ಶಾಲಾಕಾಲೇಜುಗಳೇ ಸಾಮಾಜಿಕ ತಾಣಗಳನ್ನು ಬಳಸುವುದು ಸಾಮಾನ್ಯವಾಗಿದೆ. ಹಿಂದೊಮ್ಮೆ ಶಿಕ್ಷಕರು ಹೋಮ್‌ವರ್ಕ್‌ ಸಮಸ್ಯೆಗಳನ್ನು ಬೋರ್ಡಿನ ಮೇಲೆ ಬರೆಯಬೇಕಾಗಿತ್ತು ಅಥವಾ ಮಕ್ಕಳಿಗೆ ಉಕ್ತಲೇಖನ ಕೊಡಬೇಕಾಗಿತ್ತು. ಈಗ ವಾಟ್ಸಾಪ್‌ ಮುಂತಾದ ತಾಣಗಳನ್ನು ಬಳಸಿಕೊಂಡು ಶಿಕ್ಷಕರು ಹೋಮ್‌ ವರ್ಕ್‌, ನೋಟ್ಸ… ಮೊದಲಾದವುಗಳನ್ನು ಹಂಚುವುದು ರೂಢಿಯಾಗುತ್ತಿದೆ.

ಮೊಬೈಲ್‌ ಬಳಸುವುದರಿಂದ ಮಕ್ಕಳ ಮೇಲೆ ಹಾನಿಯಾಗುತ್ತದೆ ಎನ್ನುವ ಪೋಷಕರು ತಮ್ಮ ಬಾಲ್ಯವನ್ನು ನೆನೆಸಿಕೊಳ್ಳಬೇಕು. ಆಗ ಟಿ.ವಿ.ಭಾರತಕ್ಕೆ ಹೊಸ ಸಾಧನವಾಗಿತ್ತು. ನಿಮ್ಮ ಪೋಷಕರು ನೀವು ಟಿ.ವಿ. ನೋಡಿ ಕೆಟ್ಟುಹೋಗುತ್ತೀರಿ ಎಂದೇ ಭಾವಿಸಿದ್ದರು! ಮೊಬೈಲ್‌ ಮೇಲೆ ಮಕ್ಕಳಿಗೆ ಕೆಟ್ಟ ವಿಷಯಗಳು ಸಿಕ್ಕುತ್ತವೆ, ಅವರ ಕಣ್ಣು ಹಾಳಾಗುತ್ತದೆ, ಅವರು ದುಷ್ಟಜನರ ಸಂಪರ್ಕಕ್ಕೆ ಬರಬಹುದು ಇತ್ಯಾದಿ ವಾದಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇವೆಲ್ಲಾ ಹೌದು. ಆದರೆ, ನಿಮ್ಮ ಮಕ್ಕಳ ಜೊತೆ ನೀವು ಸಾಕಷ್ಟು ಸಮಯ ಕಳೆದರೆ, ಅವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡರೆ, ಅವರಿಗೆ ನೀವು ಸೂಕ್ತ ಮಾರ್ಗದರ್ಶನ ನೀಡಿದರೆ ಈ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟವಲ್ಲ.

ಸಿ. ಪಿ. ರವಿ ಕುಮಾರ್‌

ಫೊಟೊ : ಫೋಕಸ್‌ ರಘು


ಈ ವಿಭಾಗದಿಂದ ಇನ್ನಷ್ಟು

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ...

  • ಸಂಜೆ ಹೊತ್ತಿನಲ್ಲಿ ಆಕಾಶ ನೋಡುತ್ತ ನನಗೆ ನಾನೇ ಕಳೆದು ಹೋಗು ವುದು ನಾನು ಲಾಗಾಯ್ತಿನಿಂದ ರೂಢಿಸಿಕೊಂಡು ಬಂದಂಥ ಪದ್ಧತಿ. ಹಗಲಿಗೆ ಮಂಕು ಕವಿಯುವ ಆ ಹೊತ್ತಿನಲ್ಲಿ...

  • ನಿಜ ಜೀವನದಲ್ಲಿ ನನ್ನನ್ನು ಯಾಮಾರಿಸುವ ನಿನ್ನ ಚಟವನ್ನು ಯಥಾವತ್ತಾಗಿ ಬರಹದಲ್ಲೂ ಭಟ್ಟಿಇಳಿಸುತ್ತಿರುವೆಯಲ್ಲ ಕೆಟ್ಟ ಗಂಡಸೇ... ಅರಬೀ ಕಡಲಿನ ದೊಡ್ಡ ಮೊಸಳೆಯೊಂದು...

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....