ಯೋಗವೆ ಹೇಳಿದ ಮಾತಿದು…

ಜೂ.21 ವಿಶ್ವ ಯೋಗ ದಿನ

Team Udayavani, Jun 19, 2019, 5:00 AM IST

ವಯಸ್ಸು ಆಗುತ್ತಾ ಹೋದರೂ ಚರ್ಮ ನೆರಿಗೆಗಟ್ಟಬಾರದು, ದೇಹಾಕೃತಿ ದಪ್ಪ ಆಗಬಾರದು. ಸದಾ ಸ್ಲಿಮ್‌ ಅಂಡ್‌ ಟ್ರಿಮ್‌ ಆಗಿರಬೇಕು ಎಂಬುದು ಎಲ್ಲ ಹೆಂಗಸರ ಆಸೆ. ಹಾಗಾದ್ರೆ, ಯೋಗವನ್ನು “ದಿನಚರಿ’ಯನ್ನಾಗಿ ಮಾಡಿಕೊಂಡರೆ, ಸ್ಲಿಮ್‌ ಆಗುವುದಷ್ಟೇ ಅಲ್ಲ, ಉತ್ತಮ ಆರೋಗ್ಯವನ್ನೂ ಹೊಂದಬಹುದು.

ಸಾವಿರಾರು ವರ್ಷದಿಂದಲೂ “ಯೋಗ’ ಪದದ ಬಳಕೆ ನಿರರ್ಗಳವಾಗಿ ನಡೆಯುತ್ತಲೇ ಬಂದಿದೆ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಾರಿ ಸಾರಿ ಹೇಳುತ್ತಿರುತ್ತಾನೆ: “ಸಮತ್ವಂ ಯೋಗಮುಚ್ಯತೇ, ಯೋಗ: ಕರ್ಮಸು ಕೌಶಲಂ’ ಎಂದು. ಇದನ್ನು ಯಾಕೆ ಹೇಳಿದೆನೆಂದರೆ, ಯೋಗದ ಅರ್ಥ ಬಹಳ ವಿಶಾಲವಾದುದು. ಯೋಗವು ಬರೀ ದೈಹಿಕ ವ್ಯಾಯಾಮ ಅಲ್ಲ.ನಮ್ಮ ದೈಹಿಕ, ಮಾನಸಿಕ, ಭಾವುಕ ಮತ್ತು ಆಧ್ಯಾತ್ಮಿಕ ಸ್ಥರದಲ್ಲಿ ಅದು ಬಹಳ ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಇಂದಿನ ಜನರಲ್ಲಿ ಆ ಬಗ್ಗೆ ಹೆಚ್ಚು ತಿಳಿವಳಿಕೆಯಿಲ್ಲದ ಕಾರಣ, ಯೋಗ ಅಂದ್ರೆ ತೂಕ ಇಳಿಸುವ ಮತ್ತು ಸೌಂದರ್ಯವರ್ಧಕ ವ್ಯಾಯಾಮ ಎಂಬ ಅಭಿಪ್ರಾಯವಿದೆ. ಆದರೆ, ವಾಸ್ತವದಲ್ಲಿ ಯೋಗ; ಅಕ್ಷಯ ಪಾತ್ರೆಯಿದ್ದಂತೆ. ಮೊಗೆದಷ್ಟೂ ತುಂಬುವ ಅಕ್ಷಯ ಪಾತ್ರೆಯಂತೆ, ನಾನಾ ಲಾಭಗಳನ್ನು ಯೋಗ ತನ್ನೊಳಗಿರಿಸಿಕೊಂಡಿದೆ.

ಅಷ್ಟಾಂಗ ಯೋಗ
ಯೋಗದಲ್ಲಿ- ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಅಷ್ಟ ಅಂಗಗಳಿವೆ. ಮೊದಲ 5 ಅಂಗಗಳು ಬಹಿರಂಗ, ಅಂದರೆ ದೇಹದ ಶಕ್ತಿ, ತೇಜಸ್ಸು ಹೆಚ್ಚಿಸುವ ಕೆಲಸ ಮಾಡುತ್ತವೆ. ಕೊನೆಯ ಮೂರು ಅಂಗಗಳು ನಮ್ಮ ಅಂತರಂಗವನ್ನು ಹೊಕ್ಕು ಜೀವನ ಶೈಲಿಯನ್ನೇ ಬದಲಾಯಿಸುತ್ತವೆ. 8 ವರ್ಷದಿಂದ 80 ವರ್ಷದವರೆಗಿನ ಯಾರು ಬೇಕಾದರೂ ತಮ್ಮ ದೇಹ ಪ್ರಕೃತಿಗೆ ತಕ್ಕ ಹಾಗೆ ಯೋಗ ಮಾಡಬಹುದು. ಒಬ್ಬ ಹೆಣ್ಣು ಮಗಳು ಪ್ರೌಢಾವಸ್ಥೆಯಿಂದಲೇ ಯೋಗದ ಕೆಲವು ಆಸನಗಳನ್ನು ರೂಢಿಸಿಕೊಂಡರೆ ತನ್ನ ಮಾನಸಿಕ, ದೈಹಿಕ ಸಮತೋಲನ ಕಾಪಾಡಿಕೊಳ್ಳಬಹುದು.

ಉಪಯೋಗಗಳು ಹಲವಾರು
ಹದಿಹರೆಯದ ಹುಡುಗಿಯರಿಂದ ಹಿಡಿದು, ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಸರ್ವೇ ಸಾಮಾನ್ಯವಾಗಿ ಕಾಡುವ ಕೆಲವು ಸಮಸ್ಯೆಗಳೆಂದರೆ ಸೌಂದರ್ಯದ ಬಗೆಗಿನ ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಬೊಜ್ಜು, ಮಾನಸಿಕ ಒತ್ತಡ, ಮುಟ್ಟಿನ ಸಮಸ್ಯೆಗಳು. ಅಂಥ ಸಮಸ್ಯೆ ಉಳ್ಳವರು ದಿನಕ್ಕೆ ಕನಿಷ್ಠ ಒಂದು ಗಂಟೆ ಯೋಗ ಮಾಡಿದರೆ ಉತ್ತಮ. ಆಸನ, ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮಗಳು, ದೈಹಿಕ- ಮಾನಸಿಕ ಸಮಸ್ಯೆಗಳಿಗೆ ಬಹಳ ಸಹಾಯಕಾರಿ.

ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಚಲನೆ ಸರಾಗವಾಗಿ ಆಗಿ ಅಂಗಾಂಗದ ಶಕ್ತಿ ಹೆಚ್ಚುತ್ತದೆ. ದೇಹ ನೀವು ಹೇಳಿದಂತೆ ಕೇಳುತ್ತದೆ (flexibility). ಬೆನ್ನೆಲುಬು ಗಟ್ಟಿಯಾಗಿ ಶರೀರ ಒಳ್ಳೆಯ ಸ್ವರೂಪ ಪಡೆಯುತ್ತದೆ. ಇದರಿಂದ ಇಡೀ ದಿನ ಉತ್ಸಾಹದಿಂದ ಯಾವುದೇ ಕೆಲಸವನ್ನು ಬೇಕಾದರೂ ಮಾಡಬಹುದು.

PCOD ತೊಂದರೆಯಿಂದ ಕೆಲವು ಹೆಣ್ಣುಮಕ್ಕಳಿಗೆ ಗರ್ಭ ಧರಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ಯೋಗದ ಕೆಲವು ಆಸನಗಳು ಅಂಥ ಸಮಸ್ಯೆಯನ್ನು ಕೂಡಾ ಪರಿಹರಿಸುತ್ತವೆ. ಗರ್ಭಿಣಿಯರಿಗೆ ಹೆರಿಗೆಗೂ ಮುನ್ನ (pre natal) ಮತ್ತು ಹೆರಿಗೆಯ ನಂತರ (post natal) ವಿಶೇಷ ಯೋಗ ಥೆರಪಿ ಇದೆ. ಇದರಿಂದ ಹೆರಿಗೆ ಸುಲಭವಾಗಿ, ಆರೋಗ್ಯಕರ ಮಗುವನ್ನು ಹಡೆಯುವ ಸಾಧ್ಯತೆಗಳು ಹೆಚ್ಚಿವೆ. ತಾಯಿಯಾದ ನಂತರ ದೇಹದ ತೂಕ ಕಾಪಾಡಿಕೊಳ್ಳಲು ಮತ್ತು ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಯೋಗ ಸಹಾಯಕಾರಿ.
ಯಾವ್ಯಾವ ಆಸನಗಳು?

ವೃಕ್ಷಾಸನ, ತ್ರಿಕೋನಾಸನ, ವೀರಭದ್ರಾಸನ, ಪತಂಗಾಸನ, ಭುಜಂಗಾಸನ, ಪಾದ ಹಸ್ತಾಸನ, ಅಧೋಮುಖ ಶ್ವಾನಾಸನ, ಧನುರಾಸನ, ಭೂನಮನಾಸನ ಹೀಗೆ ಹಲವಾರು ಆಸನಗಳು ಮಹಿಳೆಯರಿಗೆ ಉಪಕಾರಿ.

ಗುರುವಿದ್ದರೆ ಒಳಿತು
ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕೃತಿಯೂ ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಹಾಗಾಗಿ, ಅವರವರ ದೇಹಪ್ರಕೃತಿಗೆ ತಕ್ಕಂತೆ ಆಸನಗಳನ್ನು ಕಲಿತು ಮಾಡಬೇಕು. ಎಲ್ಲರಿಗೂ ಎಲ್ಲ ಆಸನಗಳೂ ಸೂಕ್ತವಾಗಿರುವುದಿಲ್ಲ. ಆದರೆ, ಪ್ರತಿಯೊಬ್ಬರೂ ಮಾಡಲೇಬೇಕಾದ ಮತ್ತು ಮಾಡಬಹುದಾದ ಅಸನಗಳಿವೆ. ಅದನ್ನು ಗುರುಮುಖೇನ ಕಲಿತು ಮಾಡುವುದರಿಂದ ಫ‌ಲಿತಾಂಶ ಸೂಕ್ತವಾಗಿ ಸಿಗುತ್ತದೆ. ಯೋಗದಲ್ಲಿ ಏನು ಮಾಡುತ್ತೇವೆ ಅನ್ನುವುದಕ್ಕಿಂತ, ಹೇಗೆ ಮಾಡುತ್ತೇವೆ ಮತ್ತು ಯಾತಕ್ಕಾಗಿ ಮಾಡುತ್ತೇವೆ ಅನ್ನೋದು ಮುಖ್ಯ. ಅದನ್ನು ನುರಿತ ಯೋಗಪಟುಗಳಿಂದ ಮಾತ್ರ ಕಲಿಯಲು ಸಾಧ್ಯ.

ಮನಸಿಗೂ ಬೇಕು ಯೋಗ
ಮನಸ್ಸಿನ ಆರೋಗ್ಯಕ್ಕೂ ಯೋಗ ಸಹಕಾರಿ. ಪ್ರಾಣಾಯಾಮದಿಂದ ಉಸಿರಿನ ಮೇಲೆ ಹತೋಟಿ ಇಡಬಹುದು. ದೀರ್ಘ‌ ಉಸಿರಾಟದ ಕ್ರಿಯೆಯಿಂದ ಮೆದುಳಿಗೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆಸನ, ಪ್ರಾಣಾಯಾಮಗಳನ್ನು ಮಾಡುವಾಗ ನಮ್ಮ ಪೂರ್ಣ ಗಮನ, ಮಾಡುವ ಆಸನಗಳ ಕಡೆ ಇರುವುದರಿಂದ ಮನಸ್ಸು ಸಮತ್ವ ಸ್ಥಿತಿಯಲ್ಲಿರುತ್ತದೆ. ದಿನಕ್ಕೆ ಒಂದು ಗಂಟೆ, ಮನಸ್ಸು ಯಾವುದೇ ಚಿಂತೆಯಿಲ್ಲದೆ ಏಕಾಗ್ರತೆಯಿಂದ ಇರುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಪ್ರಾಣಾಯಾಮದಲ್ಲಿ ಕಪಾಲಭಾತಿ, ಅನುಲೋಮ-ವಿಲೋಮ, ನಾಡಿ ಶುದ್ಧಿ, ಭ್ರಮರಿ, ಉದ್ಗೀತ ಹೀಗೆ ಹಲವಾರು ವಿಧಾನಗಳಿವೆ. ಒಂದೊಂದಕ್ಕೂ ಅದರದ್ದೇ ಆದ ಮಹತ್ವವಿದೆ.

ಮಧ್ಯವಯಸ್ಸಿನ ಹೆಂಗಸರಲ್ಲಿ ಕಾಣಿಸಿಕೊಳ್ಳುವ ಮಧುಮೇಹ, ಥೈರಾಯ್ಡ, ಮೆನೋಪಾಸ್‌, ಖನ್ನತೆ ಮುಂತಾದ ಸಮಸ್ಯೆಗಳಿಗೂ ಯೋಗದಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಪದ್ಮಾಸನ, ಪವನಮುಕ್ತಾಸನ, ವಕ್ರಾಸನ, ಕಪೋತ್ಥಾಸನ, ಶವಾಸನ, ಸರ್ವಾಂಗಾಸನ, ವಿಪರೀತ ಕರಣಿ, ಸೇತುಬಂಧಾಸನ, ಹಲಾಸನ ಮತ್ತು ಯೋಗ ನಿದ್ರೆಗಳಿಂದ ಮೇಲೆ ಹೇಳಿದ ತೊಂದರೆಗಳು ಕಡಿಮೆಯಾಗುತ್ತದೆ.

ಯೋಗ್ಯ ಸಮಯ ಯಾವುದು?
ಯೋಗಾಭ್ಯಾಸಕ್ಕೆ ಸೂಕ್ತವಾದ ಸಮಯ ಬ್ರಾಹ್ಮಿ ಮುಹೂರ್ತ. ಅಷ್ಟು ಬೇಗ ಏಳಲು ಆಗದಿದ್ದಲ್ಲಿ, ಆಹಾರ ಸೇವಿಸುವ ಮೊದಲು ಯೋಗಾಭ್ಯಾಸ ಮಾಡಬೇಕು. ಬೆಳಗಿನ ಹೊತ್ತು ಯೋಗಕ್ಕೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುವವರು, ಸೂರ್ಯಾಸ್ತದ ವೇಳೆ ಅಥವಾ ರಾತ್ರಿ ಆಹಾರ ಸೇವಿಸಿದ 2 ಗಂಟೆಗಳ ನಂತರ ಯೋಗಾಸನ ಮಾಡಬಹುದು. ಯೋಗ ಮಾಡುವ ಸಮಯದಲ್ಲಿ ಸಂಪೂರ್ಣ ಗಮನ ಯೋಗದ ಕಡೆಯೇ ಇರಬೇಕು. ಯೋಗ ಮ್ಯಾಟ್‌ ಅಥವಾ ಜಮಖಾನ ಹಾಸಿ, ಅದರ ಮೇಲೆ ಆಸನಗಳನ್ನು ಮಾಡಬೇಕು.

-ಪೂರ್ಣಿಮಾ ಗಿರೀಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು...

  • ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ...

  • ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ....

  • ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು...  ಆಗೆಲ್ಲಾ...

  • ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ....

ಹೊಸ ಸೇರ್ಪಡೆ