ಪ್ರೇಮವೆಂಬ ಪಾದರಸ

Team Udayavani, Aug 23, 2019, 5:00 AM IST

ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ಈಗಿನ ಯುವಸಮೂಹ ಪ್ರೇಮದ ಬಗ್ಗೆ ಬರೆಯುವುದೇ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ನನಗೆ ಬರೆಯುವ ಹುಚ್ಚಿದೆಯೆಂದು ಗೊತ್ತಿದ್ದವರೆಲ್ಲ, ನೀನು ಪ್ರೇಮಕಥೆ-ಕವನಗಳನ್ನು ಯಾಕೆ ಬರೆಯು ವುದಿಲ್ಲ? ಅಂತ ಪದೇ ಪದೇ ಪ್ರಶ್ನಿಸುತ್ತಿದ್ದರು. ಅವರ ಕಾಟಕ್ಕೆ ಮಣಿದು ನಾನು ಪ್ರೇಮಕಥೆಯನ್ನೋ ಕವನವನ್ನೋ ಬರೆಯಲು ಶುರು ಮಾಡಿದರೆ, ಇದರಲ್ಲೇನು ಹೊಸತಿದೆ- ಈಗಷ್ಟೆ ಎಲ್ಲರೂ ಹೇಳಿರೋದನ್ನ ನಾನೂ ಮತ್ತೆ ಮತ್ತೆ ಹೇಳುತ್ತಿದ್ದೇನೆ ಅಂತ ಅನಿಸುತ್ತಿತ್ತು. ಮದುವೆ-ಮರಣ-ಒಂಟಿತನ ಇವೇ ಮೂರು ಅಂತ್ಯಗಳನ್ನ ಹೊಂದಿರೋದ್ರಿಂದ ಪ್ರೇಮಕಥೆಗಳನ್ನು ಹೇಳ್ಳೋದು ಕಷ್ಟ! ಆದರೆ, ಪ್ರೇಮದ ಕಥೆ ಹೇಳುವುದು ಸುಲಭ!

ನಾನು ಕಂಡ ಪ್ರೇಮ ಪತ್ರಯುಗದಿಂದ ಡಿಜಿಟಲ್‌ ಯುಗದವರೆಗೆ ಬೆಳೆದು ಬಂದಿದೆ. 2ಜಿ ಯಿಂದ 4ಜಿ ಗೆ ನೆಗೆದಿದೆ. ನಮ್ಮ ಕೈಯಲ್ಲಿರುವ ಮೊಬೈಲು ನಮಗೆ ಬೇಕಾದವರನ್ನು ಪ್ರೀತಿಸುವ ಧೈರ್ಯ ಹಾಗೂ ಗೌಪ್ಯ ಕೊಟ್ಟಿದೆ! ನಾನು ಪ್ರೈಮರಿಯಲ್ಲಿದ್ದಾಗ ಪ್ರೇಮಪತ್ರ ತನ್ನ ಆಳ್ವಿಕೆಯ ಕೊನೆಯ ಮಜಲಿನಲ್ಲಿತ್ತು ! ತರಗತಿಯಲ್ಲಿ ಯಾರಾದರೂ ಆಗೊಮ್ಮೆ ಈಗೊಮ್ಮೆ ಪ್ರೇಮ ಪತ್ರ ಬರೆದು ಸಿಕ್ಕಿ ಬೀಳುತ್ತಿದ್ದರು. ಶಿಕ್ಷಕರು ಅದನ್ನು ಗುಟ್ಟಾಗಿ ಇಡಲು ಮಾಡುವ ಪ್ರಯತ್ನವೆಲ್ಲ ವಿಫ‌ಲವಾಗುತ್ತಿತ್ತು. ಆಗಿನ ಪ್ರೇಮ ಪತ್ರಗಳ್ಳೋ-ಬಹುತೇಕ ಕನ್ನಡ ಸಿನೆಮಾದ ಪ್ರೇಮ ಪತ್ರಗಳಿಂದ ಪ್ರೇರಿತವಾದವು-ಓದಿದ ಯಾರಿಗಾದರೂ ಅದು ಅಮರ ಪ್ರೇಮವೇ ಅಂತ ಅನಿಸುತ್ತಿತ್ತು. ಸಿನೆಮಾದಲ್ಲಿ ಪ್ರೇಮಿಗಳು ಕುಳಿತು ಅಷ್ಟು ಸೊಗಸಾಗಿ ಮಾತನಾಡುತ್ತಿದ್ದರೆ, ಇದ್ದಕ್ಕಿದ್ದಂತೆ ಚಾನೆಲ್‌ ಬದಲಾಯಿಸುವ ಹಿರಿಯರು ಪ್ರೇಮದ ಜೊತೆಜೊತೆಗೆ ಮತ್ತೆಂತದೋ ಇದೆ ಅಂತ ಹಿಂಟ್‌ ಕೊಡುತ್ತಿದ್ದರು. ಅಷ್ಟರಲ್ಲೇ ಮುಂಗಾರುಮಳೆ ಸಿನೆಮಾ ಬಂತು. ಅದನ್ನ ಟಾಕೀಸ್‌ನಲ್ಲಿ ಕೂತು ನೋಡಿದ್ದು, ನಡುವೆ ಎಲ್ಲೋ ನಿದ್ದೆಗೆ ಜಾರಿದ್ದು, ಎದ್ದಾಗ ಮೊಲ ಸತ್ತದ್ದು, ಪ್ರೀತಿ ಮಧುರ ತ್ಯಾಗ ಅಮರ ಅಂತ ಸ್ಕ್ರೀನ್‌ನಲ್ಲಿ ಮೂಡಿದ್ದು, ಆ ವರ್ಷ ಜಾತ್ರೆಯ ಸಂತೆಯಲ್ಲಿ ಮುಂಗಾರು ಮಳೆ ಸರವನ್ನ ಹಠ ಮಾಡಿ ಕೊಂಡದ್ದು-ಎಲ್ಲವೂ ಸರಳ ಪ್ರೇಮ ಕಥೆಯಂತೆಯೇ ನೆನಪಿದೆ. ಸಿನೆಮಾ ಬಿಟ್ಟರೆ ಈ ಪ್ರೇಮದ ಸೀನ್‌ಗಳೆಲ್ಲ ನೋಡಲು ಸಿಗುತ್ತಿದ್ದುದು ಈ ತುಳು ನಾಟಕಗಳಲ್ಲಿ. ಬಡ ಹುಡುಗಿಯನ್ನು ಶ್ರೀಮಂತ ಹುಡುಗ ಪ್ರೀತಿಸುವುದೇ ಅವುಗಳಲ್ಲಿ ಕಥೆ-ಶ್ರೀಮಂತನ್ನು ಮದುವೆಯಾಗಿ ಸುಖವಾಗಿರೋದೇ ಚಂದ ಅಂತನಿಸುತ್ತಿತ್ತು. ಯಕ್ಷಗಾನಗಳಲ್ಲಿಯೂ ಹಲವು ಪ್ರೇಮಪ್ರಸಂಗಗಳೂ ನೋಡಲು ಸಿಗುತ್ತಿದ್ದವು. ರಾಜಕುಮಾರ, ಅವನ ದಡ್ಡ ಮಿತ್ರ, ರಾಜಕುಮಾರಿ ಮತ್ತು ಅವಳ ಸಖಿ- ಇವರು ನಾಲ್ಕು ಜನ ಅರ್ಧ-ಮುಕ್ಕಾಲು ಗಂಟೆ ಕುಣಿಕುಣಿದು, ಪ್ರೇಮಿಸಬೇಕಾದರೆ ಬಹಳ ಕುಣಿಯಬೇಕೆನೋ ಅನ್ನುವ ಭಾವನೆ ಹುಟ್ಟುವ ಹಾಗೆ ಮಾಡುತ್ತಿದ್ದರು

ನಾನು ಹೈಸ್ಕೂಲ್‌ಗೆ ಬಂದಾಗ ಪ್ರೇಮ ಪ್ರವಹಿಸಲು ಪತ್ರವನ್ನು ಬಿಟ್ಟು ಕಾಯಿನ್‌ ಬಾಕ್ಸನ್ನು ಆರಿಸಿತು. ಆಗೆಲ್ಲ ಮನೆಗೊಂದು ನೋಕಿ ಯ ಮೊಬೈಲು-ಅದರಲ್ಲಿರೋ ಹಾವಿನ ಆಟ ಆಡಲು ಅಮ್ಮನ ಬಳಿ ನೂರು ಸಲ ಅಪ್ಪಣೆ ಕೇಳಬೇಕು. ಒಂದು ಮೆಸೇಜಿಗೆ ಒಂದು ರೂಪಾಯಿ ಹೋಗುತ್ತಿದ್ದ ಕಾಲ. ಎಷ್ಟು ಮಾತನಾಡಲಿದ್ದರೂ, ಹೈ, ಊಟ ಆಯ್ತ? ಲೆಕ್ಕ ಮಾಡಿದ್ಯ? ಉತ್ತರ ಕಳಿಸು. ನಾಳೆ ಯಾವ ಬಸ್‌ನಲ್ಲಿ ಬರುತ್ತಿ? ನಾಯಿ ಮರಿ ಈಗ ಹೇಗಿದೆ? ನಾಳೆ ಗ್ರಾಫ್ ಬುಕ್‌ ತಾ ಅಂತ ಒಂದೇ ಮೆಸೇಜಲ್ಲಿ ಎಲ್ಲವನ್ನೂ ಸುಧಾರಿಸುತ್ತಿದ್ದ ಕಾಲ. ಹಾಗಾಗಿ ಪ್ರೇಮಿಗಳ ದೀರ್ಘ‌ ಸಂಭಾಷಣೆಗಳಿಗೆ ಕಾಯಿನ್‌ ಬಾಕ್ಸ್‌ ಗಳೇ ಪ್ರೇಮವಾಹಕಗಳು. ಒಂದು ರೂಪಾಯಿ ಕಾಯಿನ್‌ಗಳಿಗೆ ಆಗ ಬಹಳ ಬೇಡಿಕೆಯಿತ್ತು. ನನ್ನದು ಹುಡುಗಿಯರ ಹೈಸ್ಕೂಲ್‌ ಆದದ್ದರಿಂದ ಹುಡುಗರು ಕಾಣ ಸಿಗುವುದು ಕಡಿಮೆ. ಪ್ರಮೀಳಾ ರಾಜ್ಯದ ಅಭಿಸಾರಿಕೆಯರಿಗೆ ಸುಲಭವಾಗಿ ಸಿಗುವವರೆಂದರೆ ಬಸ್‌ ಕಂಡಕ್ಟರ್‌ ಮತ್ತು ಡ್ರೆçವರ್‌ಗಳು-ಅವರೊಂದಿಗೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದ ಹುಡುಗಿಯರ ಪಟ್ಟಿ ದೊಡ್ಡದಿತ್ತು. ನನ್ನ ಬಸ್‌ನಲ್ಲಂತೂ ಹಲವು ಪ್ರಸಂಗಗಳು ನಡೆಯುತ್ತಿದ್ದವು. ನಾನೂ ನನ್ನ ಗೆಳತಿಯರೂ ಅವುಗಳನ್ನು ಚರ್ಚಿಸಿ ಒಳ್ಳೆಯ ಕಥೆಯ ರೂಪ ಕೊಡುತ್ತಿದ್ದೆವು. ಒಂದು ದಿನ ಶಾಲೆಗೆ ರಜೆ ಹಾಕಿದ್ದರೂ ಮರುದಿನ ಕೇಳುವ ಮೊದಲ ಪ್ರಶ್ನೆ, ನಿನ್ನೆ ಭವಾನಿ ಬಸ್‌ನಲ್ಲೇನಾಯಿತು? ಎಂಬುವುದೇ !

ತರಗತಿಯಲ್ಲಿ ಯಾರ್ಯಾರಿಗೆ ಲವ್‌ ಇದೆ? ಅದು ಯಾವ ಸ್ಥಿತಿಯಲ್ಲಿದೆ? ಹುಡುಗನೋ ಕಂಡಕ್ಟರೋ ಡ್ರೈವರೋ? ಅವರ ವಿರುದ್ಧ ಯಾರು ಗೂಢಚಾರಿಕೆ ಮಾಡಿ ಶಿಕ್ಷಕರ ಬಳಿ ಹೇಳುವ ಸಂಭವವಿದೆ?- ಎಂದೆಲ್ಲ ಲೆಕ್ಕ ಹಾಕಿಡುವ ಚಿತ್ರಗುಪ್ತರ ತಂಡವೇ ಇತ್ತು. ಈ ತಂಡ ಮಾಡುವ ಎಡವಟ್ಟಿನಿಂದಾಗಿ ಕಟ್ಟುನಿಟ್ಟಿನ ಶಿಕ್ಷಕರಿಗೆ ಪ್ರೇಮಿಕೆಯರ ಪ್ರೇಮದ ಗುಟ್ಟು ತಿಳಿದರೆ, ಮನೆಯವರನ್ನು ಕರೆಸಿ ದೊಡ್ಡ ರಾದ್ಧಾಂತವೇ ಆಗುತ್ತಿತ್ತು. ಕೆಲವು ಹುಡುಗಿಯರು ಅರ್ಧದಲ್ಲೇ ಶಾಲೆ ಬಿಡಬೇಕಾಗಿ ಬರುತ್ತಿತ್ತು. ಐದು ರೂಪಾಯಿ ಉಳಿಸಿ ಮ್ಯಾಗಿ ಕೊಳ್ಳುವ ಅಂತ ಯೋಚನೆ ಮಾಡುವವರ ಜೊತೆ ಜೊತೆಗೆ ಪ್ರೇಮದಲ್ಲಿ ಬಿದ್ದು ಹೇಳಲಾರದ ಸಂಕಟ ಅನುಭವಿಸಿ, ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರರಾದವರೂ ಇದ್ದರು. ಬೇಕು ಬೇಕೆಂದೇ ಯಾರೂ ಬದುಕನ್ನು ಸಿಕ್ಕು ಸಿಕ್ಕಾಗಿಸಿಕೊಳ್ಳುವುದಿಲ್ಲ ತಾನೆ? ಪ್ರೇಮಿಸುವುದು ದೊಡ್ಡ ಅಪರಾಧ ಅಂತ ಎಲ್ಲರೂ ನಂಬಿದ್ದ ಆ ಕಾಲದಲ್ಲಿ ತಮ್ಮ ಪ್ರೇಮ ತಂದ ಸಂಕಟವನ್ನು ಯಾರ ಬಳಿಯೂ ಹೇಳಲಾಗದೆ ಚಡಪಡಿಸಿದವರನ್ನು ಈಗ ನೆನೆದಾಗೆಲ್ಲ-ಅವರು ಎಲ್ಲೇ ಇರಲಿ, ಹೇಗೆಯೇ ಇರಲಿ, ಚೆನ್ನಾಗಿರಲಿ-ಅಂತ ಅನಿಸುತ್ತದೆ. ಮೌಲ್ಯ ಶಿಕ್ಷಣ ತರಗತಿಯಲ್ಲಿ ಆಗ ನಮಗೆಲ್ಲ ಹದಿಹರೆಯದ ಪ್ರಣಯದ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು.

ಅವರಿಗೆ ಬೇಕಾಗಿರೋದು ನೀವಲ್ಲ- ನಿಮ್ಮ ದೇಹ ಅಂತ ರಾತ್ರಿ ನಿದ್ದೆಯಲ್ಲಿಯೂ ಭಯಪಡುವ ಹಾಗೆ ಮಾಡುತ್ತಿದ್ದರು. ನಿಮ್ಮ ಕಣ್ಣೆದುರಿಗೇ ಯಾರಾದರೂ ದಾರಿ ತಪ್ಪುತ್ತಿರುವುದನ್ನು ನೋಡಿಯೂ ನೀವು ನಮಗೆ ಬಂದು ಹೇಳದಿದ್ದರೆ ಅವರ ಪಾಪದಲ್ಲಿ ನಿಮಗೂ ಪಾಲು ಸಿಗುತ್ತದೆ. ನೆನಪಿರಲಿ-ಇಂಥ ಮಾತುಗಳಿಗೆಲ್ಲ ಹೆದರುವ ಪಾಪಭೀರುಗಳು ಶಿಕ್ಷಕರ ಕಡೆಯ ಗೂಢ ಚಾರರಾಗುತ್ತಿದ್ದರು. ಯಾರು ಕಾಯಿನ್‌ ಬಾಕ್ಸ್‌ನಲ್ಲಿ ಹೆಚ್ಚು ಹೊತ್ತು ಮಾತಾಡ್ತಾರೆ, ವ್ಯಾಲೆಂಟೈನ್ಸ್‌ ದಿನದಂದು ಹುಚ್ಚು ಹುಚ್ಚಾಗಿ ಆಡ್ತಾರೆ ಅಂತೆಲ್ಲ ಶಿಕ್ಷಕರಿಗೆ ವರದಿ ಒಪ್ಪಿಸುತ್ತಿದ್ದರು. ಹೈಸ್ಕೂಲ್‌ನಲ್ಲಿ ಕಂಡ ಆ ಪ್ರಣಯ ಪ್ರಸಂಗಗಳನ್ನು ನೆನೆದರೆ ಒಂದು ಮಾತಂತೂ ಸತ್ಯ ಅಂತ ಅನಿಸುವುದು- ಯಾವ ನೀತಿ ನಿಯಮಗಳೂ ಪ್ರೇಮವನ್ನು ಕಟ್ಟಿ ಹಾಕಲಾರವು. ಪ್ರೇಮಿಸಬೇಡಿ ಅಂತ ಯಾರೂ ಯಾರಿಗೂ ಹೇಳುವ ಹಾಗಿಲ್ಲ. ಎಷ್ಟೇ ಬಂಧನಗಳಿದ್ದರೂ, ಉಪದೇಶಗಳಿದ್ದರೂ ಹೂ ಅರಳಿದಷ್ಟು ಕಾಲ ಪ್ರೇಮ ಕೂಡ ಅರಳುತ್ತಲೇ ಇರುತ್ತದೇನೋ!

ಪಿಯುಸಿಗೆ ಬಂದಾಗ ಪ್ರೇಮ ಅಪ್‌ಡೇಟ್‌ ಆಗಿತ್ತು. ಚೇತನ್‌ ಭಗತ್‌, ರವೀಂದರ್‌ ಸಿಂಗ್‌ ಮುಂತಾದವರು ಪುಸ್ತಕ ಬರೆದು, ಪ್ರೇಮ ಅದರಿಂದ ಪ್ರಭಾವಿತವಾಗಿ ಪ್ರವಹಿಸಲು ಫೇಸ್‌ಬುಕ್‌ನ್ನು ಆರಿಸಿತ್ತು.

ಯಶಸ್ವಿನಿ ಕದ್ರಿ


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ