ಒಂದು ಕನ್ಯಾಪರೀಕ್ಷೆಯ ಕತೆ

Team Udayavani, Jun 14, 2019, 5:20 AM IST

ಶಿಬಿರಗಳು ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತವೆ. ಶಿಬಿರದ ದಿನಗಳಲ್ಲಿ ನಮ್ಮ ಸಹಪಾಠಿ ಹಾಗೂ ಶಿಕ್ಷಕರೊಂದಿಗೆ ಒಂದು ಹೊಸ ಪರಿಸರದಲ್ಲಿ ಹಗಲು-ರಾತ್ರಿ ಕಳೆಯುವುದೆಂದರೆ ಒಂದು ರೋಚಕ ಅನುಭವ. ಕಳೆದ ತಿಂಗಳಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವು ಇಂತಹದೇ ಒಂದು ಹೊಸ ಅನುಭೂತಿ ನೀಡಿತು.

ಸಮುದಾಯ ಜೀವನ, ಸಹಕಾರ ಮನೋಭಾವ, ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಇಂತಹ ಅತ್ಯುತ್ತಮ ಶಿಬಿರೋದ್ದೇಶಗಳನ್ನಿಟ್ಟುಕೊಂಡು ನಡೆದ ನಮ್ಮ ಶಿಬಿರವು ಒಬ್ಬ ಸದೃಢ ಶಿಕ್ಷಕನಾಗಿ ರೂಪುಗೊಳ್ಳಲು ಮಾನಸಿಕವಾಗಿ ನಮ್ಮನ್ನು ಅಣಿಮಾಡಿತು. ಈ ನಮ್ಮ ಶಿಬಿರವು ಕೇವಲ ಶ್ರಮದಾನ, ಉಪನ್ಯಾಸ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರದೆ ನಮ್ಮಲ್ಲಿ ಸೃಜನಶೀಲತೆಯನ್ನು ಪರೀಕ್ಷಿಸುವಂತಿತ್ತು. ಅದುವೇ ಶಿಬಿರದ ಒಂದು ಭಾಗವಾದ ಕೊಠಡಿ ವೀಕ್ಷಣೆ.

ಶಿಬಿರದಲ್ಲಿ ಮೆಂಟರ್‌ವೈಜ್‌ ಗುಂಪುಗಳ ಆಧಾರದ ಮೇಲೆ ನಮಗೆ ತಂಗಲು ನೀಡಿದ್ದ ಕೊಠಡಿಗಳನ್ನು ನಾವೆಷ್ಟು ಚೆನ್ನಾಗಿ ಸಜ್ಜುಗೊಳಿಸಿದ್ದೇವೆ. ಶಿಸ್ತು, ಸ್ವತ್ಛತೆ ಹಾಗೆಯೇ ಕ್ರಿಯೇಟಿವ್‌ ಪ್ರಸೆಂಟೇಷನ್‌ಗೆ ಗುಂಪುಗಳ ನಡುವೆ ಸಣ್ಣದೊಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಎರಡನೆಯ ದಿನದ ಬೆಳಗ್ಗೆ ತೀರ್ಪುಗಾರರು ಕೊಠಡಿ ವೀಕ್ಷಣೆಗೆ ಬರಲು ಸಜ್ಜಾದರು.

ನಮ್ಮ ಬೇರೆಲ್ಲ ತಂಡದವರು ರೆಸ್ಟೋರೆಂಟ್‌, ನೃತ್ಯಶಾಲೆ ಹೀಗೆ ಭಿನ್ನ ವಿಭಿನ್ನ ರೀತಿಯ ಕಾನ್ಸೆಪ್ಟ್ಗಳೊಂದಿಗೆ ತರಾತುರಿಯಲ್ಲಿ ತಮ್ಮ ಕೊಠಡಿಗಳನ್ನು ಸಿದ್ಧಗೊಳಿಸುತ್ತಿದ್ದರು. ನಾವು ಯಾವ ಕ್ಯಾನ್ಸೆಪ್ಟ್ ಮಾಡುವುದಪ್ಪಾ- ಎಂದು ಯೋಚಿಸಿದಾಗ ನಮ್ಮ ಸ್ಮಾರ್ಟ್‌ ಜೂನಿಯರ್ ಪ್ಲಾನ್‌ ಮಾಡಿದಂತೆ ಒಂದು ಭಾರತೀಯ ಸುಸಂಸ್ಕೃತವಾದ ಸಾಂಪ್ರದಾಯಿಕ ಕೂಡು ಕುಟುಂಬದ ವಾತಾವರಣವನ್ನು ಸೃಷ್ಟಿಸುವುದು ಎಂದು ನಿರ್ಧರಿಸಿದೆವು.

ಮನೆಯೆಂದ ಮೇಲೆ ಸ್ವಲ್ಪ ಅಲಂಕರಿಸಿದರೆ ಚೆಂದ ಎನ್ನುವ ನೆಪಹೇಳಿ ನಾನು, ಪದ್ಮಶ್ರೀ, ನಿಶ್ಚಿತಾ ಕಾಡಿಗೆ ನೆಗೆದೆವು. ಕಾಡುಮೇಡು ಅಲೆದು ವಿವಿಧ ಜಾತಿಯ ಹೂ, ಎಲೆಗಳನ್ನು ಸಂಗ್ರಹಿಸಿ ಹಾಗೂ ಮಾವಿನ ಮರಕ್ಕೆ ಕಲ್ಲೆಸೆದು ಹಣ್ಣು ಬೀಳಿಸಿ ಅತಿಥಿಗಳಿಗೆ ಕೊಡೋಣ ಎಂದು ತರುತ್ತಿದ್ದಾಗ ನಮ್ಮ ಆಸೆಯ ಕಟ್ಟೆಯೊಡೆದು ಆ ಮಾವಿನ ಹಣ್ಣು ಅತಿಥಿಗಳ ಕೈ ಸೇರುವುದಕ್ಕೂ ಮೊದಲೇ ನಮ್ಮ ಹೊಟ್ಟೆಗಿಳಿಯಿತು. ನಂತರ ಏನೂ ಗೊತ್ತಿಲ್ಲದವರ ಹಾಗೆ ಮರಳಿ ಬಂದು ಎಲ್ಲರೊಡನೆ ಗಡಿಬಿಡಿಯಲ್ಲಿ ಕೊಠಡಿಯನ್ನು ಚೊಕ್ಕ ಮಾಡಿ ಸಿಂಗರಿಸಿ ಮನೆಯನ್ನಾಗಿ ಮಾರ್ಪಾಡಿಸಿ ಅದಕ್ಕೊಂದು ಹೆಸರಿಟ್ಟೆವು. ಅದುವೇ “ಜೇನುಗೂಡು ನಿಲಯ’. ಮನೆ ಏನೋ ರೆಡಿಯಾಯಿತು. ಈಗ ಪಾತ್ರಗಳ ಹಂಚಿಕೆ. ಅಜ್ಜಿಯಾಗಿ ವೀಣಾ, ಅಮ್ಮನ ಪಾತ್ರದಲ್ಲಿ ಪದ್ಮಶ್ರೀ, ಅಪ್ಪನಾಗಿ ನಾನು, ಇಬ್ಬರು ಮಕ್ಕಳಾಗಿ ಸಹನಾ, ವೇದಾವತಿ. ವಿವಿಧ ಧರ್ಮದ ದೇವರುಗಳಾಗಿ ಪ್ರತೀಕ್ಷಾ , ವನಿತಾ, ದೀಕ್ಷಾ. ಸೊಸೆಯ ಪಾತ್ರದಲ್ಲಿ ಇಂದಿರಾ, ಮಗುವಾಗಿ ಉಮಾ, ಮುದ್ದಿನ ಸಾಕುನಾಯಿ ಟಾಮಿಯಾಗಿ ದೀಪಿಕಾ, ಬೆಕ್ಕಾಗಿ ಶೋಭಿತಾ, ಇತರರೆಲ್ಲರೂ ಟ್ಯೂಷನ್‌ಗೆ ಬರುವ ಮಕ್ಕಳಾಗಿ ಪಾತ್ರಕ್ಕೆ ತಕ್ಕಂತೆ ಸಜ್ಜಾದೆವು. ಇಷ್ಟೆಲ್ಲ ತಯಾರಿ ಆದ ಮೇಲೂ ಬೇರೆಲ್ಲಾ ತಂಡದವರಿಗೆ ಹೋಲಿಸಿಕೊಂಡರೆ ನಮ್ಮ ಐಡಿಯಾ ಸಪ್ಪೆ ಎನಿಸತೊಡಗಿತು. ಮೊದಲೇ ನಮ್ಮದು ಪ್ರಿನ್ಸಿಪಾಲ್‌ ಮೆಂಟರ್‌ ಗ್ರೂಪ್‌. ಇನ್ನೂ ಹೇಗಪ್ಪಾ ಕ್ರಿಯೇಟಿವ್‌ ಆಗಿ ಮಾಡಬಹುದೆಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ, ನನ್ನ ತಲೆೆಗೊಂದು ಐಡಿಯಾ. ಅದುವೇ ನಮ್ಮ ಮನೆಯ ಮಗಳನ್ನು ಅತಿಥಿಗಳಾಗಿ ಬರುವ ತೀರ್ಪುಗಾರರಿಗೆ ಹೆಣ್ಣು ತೋರಿಸುವ ಶಾಸ್ತ್ರ ಮಾಡುವುದು. ಹೇಗಿತ್ತು ನಮ್ಮ ಪ್ರಸೆಂಟೇಷನ್‌. ಮುಂದೆ ಓದಿ.

ತೀರ್ಪುಗಾರರು ನಮ್ಮ ಜೇನುಗೂಡು ನಿಲಯದ ಹತ್ತಿರ ಬರುತ್ತಿದ್ದಂತೆೆ ನಮ್ಮನೆ ನಾಯಿ ಬೊಗಳುತ್ತದೆ. ಹೊರಗೆ ಓಡಿದ ಮಗ “ಅಮ್ಮಾ ಯಾರೋ ಬಂದಿದ್ದಾರೆ’ ಎನ್ನುತ್ತಾನೆ. ಒಳಗಿನಿಂದ ಬರುವ ಅಮ್ಮ “ಹೋ! ಇವರಾ ನಿನ್ನ ತಂಗಿಯನ್ನು ನೋಡುವುದಕ್ಕೆ ಬಂದಿದ್ದಾರೆ. ಮನೆಯನ್ನು ಪರಿಚಯಿಸು’ ಎನ್ನುತ್ತಾಳೆ. ಆಗ ಮಗ ಅತಿಥಿಗಳಿಗೆ ಮೊದಲು ನಮ್ಮ ಸರ್ವಧರ್ಮ ಸಮನ್ವಯತೆ ಸಾರುವ ದೇವರ ಮನೆಯನ್ನು , ಪೂಜೆಯಲ್ಲಿ ಮಗ್ನರಾಗಿದ್ದ ಅಜ್ಜಿಯನ್ನು , ನಂತರ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಹಾಗೆಯೇ ಮಕ್ಕಳಿಗೆ ಪಾಠ ಮಾಡುವ ತನ್ನ ಹೆಂಡತಿಯನ್ನು, ಮನೆಯ ತುಂಬಾ ಅಂಬೆಗಾಲಲ್ಲಿ ಓಡಾಡುತ್ತಿದ್ದ ಮಗುವನ್ನು, ಇಲಿ ಹಿಡಿಯುತ್ತಿದ್ದ ಬೆಕ್ಕನ್ನು ಪರಿಚಯಿಸಿ ನಾವೇ ತಯಾರಿಸಿದ್ದ ಮೆತ್ತನೆಯ ಹಾಸಿನ ಮೇಲೆ ಕೂರಿಸುತ್ತಾನೆ. ನಂತರ ಒಂದು ಕೋಣೆಯಿಂದ ಮೆಲ್ಲನೆ ಬೆಲ್ಲ-ಪಾನಕದ ತಟ್ಟೆ ಹಿಡಿದು ನಾಚುತ್ತ ಬರುವ ಮನೆಮಗಳು ಅತಿಥಿಗಳಿಗೆ ಪಾನಕ ನೀಡುತ್ತಾಳೆ. ಆಗ ನಾವು “ನಮ್ಮ ಮಗಳು ಹೇಗಿದ್ದಾಳೆ. ನಿಮಗೆ ಒಪ್ಪಿಗೆ ಇದೆಯೆ?’ ಎಂಬೆಲ್ಲಾ ಪ್ರಸ್ತಾಪ ಶುರುವಾಗುತ್ತದೆ.

ನಂತರ ತೀರ್ಪುಗಾರರು ಇದು ಹೆಣ್ಣು ತೋರಿಸುವ ಶಾಸ್ತ್ರ ಎನ್ನುವುದನ್ನು ಮನಗಂಡು, ಅನೇಕ ಪ್ರಶ್ನೆಗಳನ್ನು ಕೇಳಿದರು. “ನಿಮ್ಮದು ಎಷ್ಟು ಎಕರೆ ಹೊಲವಿದೆ, ಏನು ಬೆಳೆಯುತ್ತಿದ್ದೀರಾ?’ ಎಂದು ಕೇಳಿದರೆ “ನನ್ನ ಮಗಳಿಗೆ ನೀನು ಏನು ಓದಿದ್ದೀಯಮ್ಮಾ? ನಿನ್ನ ಕನಸಿನ ಗಂಡ ಹೇಗಿರಬೇಕು?’ ಎಂದೆಲ್ಲ ಕೇಳಿ ನಮ್ಮ ಪ್ರೌಢಿಮೆಯನ್ನು ಪರೀಕ್ಷಿಸಿದರು. ಕೊನೆಯದಾಗಿ ನಾವು ಅತಿಥಿಗಳಿಗೆ ತಾಂಬೂಲ, ಹಾಗೆಯೇ ಮಹಿಳಾ ತೀರ್ಪುಗಾರರಿಗೆ ಮಡಿಲಕ್ಕಿ ತುಂಬುವ ಶಾಸ್ತ್ರ ನೆರವೇರಿಸಿದೆವು. ಕೊನೆಯದಾಗಿ ತೀರ್ಪುಗಾರರು ನಮ್ಮ ಅತಿಥಿ ಸತ್ಕಾರದ ಸಂಸ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, “ನಿಮ್ಮ ಮನೆಯ ನಾಯಿ ಮರಿ ಹಾಕಿದರೆ ನಮಗೊಂದು ಕೊಡಿ’ ಎಂದು ಹಾಸ್ಯ ಮಾಡಿ ಹೊರ ನಡೆದರು.

ಉಸ್ಸಪ್ಪಾ ! ಏನೋ ಒಂದು ಮಾಡಿ ಮುಗಿಸಿದೆವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮಗೆ ಸಪ್ರೈìಸ್‌ ಸುದ್ದಿಯೊಂದು ಕಾದಿತ್ತು. ಅದುವೇ ಕೊಠಡಿಯನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವು ದರಲ್ಲಿ ನಮ್ಮ ತಂಡಕ್ಕೆ ಪ್ರಥಮ ಬಹುಮಾನ. ನಮಗಂತೂ ಇದು ಅನಿರೀಕ್ಷಿತ ಗೆಲುವು. ನಗುವುದೋ ಸಂಭ್ರಮಿಸುವುದೋ ತಿಳಿಯದಾಗಿದ್ದೆವು. ಪ್ರಿನ್ಸಿಪಾಲರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆವು.

ಒಟ್ಟಾರೆಯಾಗಿ ಈ 3 ದಿನಗಳ ಶಿಬಿರ ನೂರಾರು ಇಂತಹ ಸವಿನೆನಪು ಗಳೊಂದಿಗೆ ನಮ್ಮ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿಯಾಗಿತ್ತು. ಸುಸಂಸ್ಕೃತ ಸಾಮರಸ್ಯ ಜೀವನ, ಸೃಜನಾತ್ಮಕ ನಿರ್ಧಾರ, ಹಕ್ಕು, ಹೊಣೆಗಾರಿಕೆಗಳಂತಹ ಪಾಠವನ್ನು ಧಾರೆ ಎರೆಯಿತು.

ಮಹೇಶ್‌ ಎಂ. ಸಿ.
ದ್ವಿತೀಯ ಬಿ.ಎಡ್‌
ಎಸ್‌.ಡಿ.ಎಂ. ಬಿಎಡ್‌ ಕಾಲೇಜು, ಉಜಿರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ...

  • ಇನ್ನೇನು ಸೆಮೆಸ್ಟರ್‌ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು....

  • ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ...

  • ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ...

  • ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ "ಮುಗಿಯಿತೇ ಬಿ.ಎಡ್‌ ಕೋರ್ಸ್‌?' ಎಂದು ಕೇಳಿದರು. "ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ' ಎಂದಾಗ,...

ಹೊಸ ಸೇರ್ಪಡೆ