ಎತ್ತಿಡುವುದು ಪಾಪವಲ್ಲ !

Team Udayavani, Aug 16, 2019, 5:00 AM IST

ಸಾಂದರ್ಭಿಕ ಚಿತ್ರ

ಕೆಲವು ಶಬ್ದಗಳು, ವಿಶೇಷವಾಗಿ ಕೆಲವು ಅಪರಾಧಗಳು ಇಂಗ್ಲಿಷ್‌ನಲ್ಲಿ ಹೇಳಿದಾಗ ಅಂದುಕೊಂಡ ಪರಿಣಾಮ ಕೊಡುವುದೇ ಇಲ್ಲ. ಅಂತಹ ಒಂದು ಶಬ್ದ “ಶಾಪ್‌ ಲಿಫ್ಟಿಂಗ್‌’. ಅಂಗಡಿಗೆ ಹೋದಾಗ ಕೆಲವು ಸಣ್ಣ ಸಣ್ಣ ವಸ್ತುಗಳನ್ನು ಎತ್ತಿಡುವ ಚಪಲ ಯಾರಿಗಿಲ್ಲ ಹೇಳಿ? ನಮ್ಮ ಅಮ್ಮನೋ ಅಜ್ಜಿಯೋ ದಿನಸಿ ಅಂಗಡಿಗೆ ಹೋದಾಗ ಮೆಲ್ಲನೆ ಒಂದರೆಡು ಬಟಾಟೆ-ಟೊಮೇಟೋ- ನೀರುಳ್ಳಿಗಳನ್ನು ಚೀಲಕ್ಕೆ ಹಾಕುವುದಿಲ್ಲವೆ? ವಿದ್ಯಾವಂತ ಸತ್ಪ್ರಜೆಗಳಾದ ನಾವು (ನಮ್ಮೊಳಗೆ ಜಾಗ್ರತವಾಗಿರುವ ನೈತಿಕ ಪ್ರಜ್ಞೆಯಿಂದಲ್ಲ, ಸಿಕ್ಕಿ ಬೀಳುವ ಭಯದಿಂದ) “ಹಾಗೆ ಮಾಡುವುದು ತಪ್ಪು’ ಎಂದೇನಾದರೂ ಹೇಳಿದರೆ, “ತಪ್ಪು ಏನು ಬಂತು? ನಾವು ಅವನಿಗೆ ವ್ಯಾಪಾರ ಮಾಡಿಲ್ಲವೆ?’ ಅಂತ ಪ್ರತಿ ಸವಾಲು ಹಾಕುತ್ತಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೊ ಒಂದನ್ನು ನೀವು ನೋಡಿರಬಹುದು. ಇಂಡೋನೇಷ್ಯಾಕ್ಕೆ ಪ್ರವಾಸ ಹೋಗಿದ್ದ ಕುಟುಂಬವೊಂದು ಹೊಟೇಲಿನಲ್ಲಿದ್ದ ಕೆಲವು ವಸ್ತುಗಳನ್ನು ಚೀಲದೊಳಗೆ ಎತ್ತಿಟ್ಟು ಸಿಕ್ಕಿ ಬಿದ್ದದ್ದು, ನಂತರ “”ಕ್ಷಮಿಸಿ… ಕ್ಷಮಿಸಿ…ಕ್ಷಮಿಸಿ… ಕ್ಷಮಿಸಿ…” ಅಂತ ಆ ವೀಡಿಯೊ ಮುಗಿಯುವವರೆಗೂ ಗೋಳಾಡಿದ್ದು- ಭಾರತದ ಹಲವು ನಟ-ನಟಿಯರು ಈ ಬಗ್ಗೆ ಪ್ರತಿಕ್ರಿಯಿಸಿ ರೇಜಿಗೆ ವ್ಯಕ್ತಪಡಿಸಿದ್ದರು. ಹಣ ಕೊಡದೆ ಎತ್ತಿಡುವುದು ಕಾನೂನಿನ ಪ್ರಕಾರ ಅಪರಾಧ.

“ಶಾಪ್‌ ಲಿಫ್ಟಿಂಗ್‌’ ಅನ್ನು ಕನ್ನಡದಲ್ಲಿ ಹೇಗೆ ಕರೆಯಬೇಕು ಅನ್ನುವುದೇ ತಿಳಿಯುತ್ತಿಲ್ಲ- ಎತ್ತಂಗಡಿ ಶಬ್ದಕ್ಕೆ ಈಗಾಗಲೇ ಬೇರೆ ಅರ್ಥವಿದೆ. ಅಂಗಡಿಯಿಂದೆತ್ತಿಡುವುದು ನೇರವಾದ ಅರ್ಥವಾದರೂ ಅದನ್ನ ಉಚ್ಚರಿಸುವಷ್ಟರಲ್ಲಿ ನಾಲ್ಕೈದು ವಸ್ತುಗಳನ್ನು ಎತ್ತಿಟ್ಟುಕೊಳ್ಳಬಹುದು. ಎತ್ತಿಡುವುದು ಅಂತ ಕರೆಯುವುದೇ ಸದ್ಯಕ್ಕೆ ಸೂಕ್ತ. ಎತ್ತಿಡುವುದು ಮನುಷ್ಯ ಸಹಜ ಸ್ವಭಾವವೇನೋ?! ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಚಂದದ ಚಿತ್ತಾರದ ಕಲ್ಲು ಕಂಡರೆ, ಅಂಥ ನೂರು ಕಲ್ಲನ್ನು ಈಗಾಗಲೇ ಕೊಂಡಿದ್ದರೂ ಎತ್ತಿ ಪರ್ಸಿಗಿಳಿಸುತ್ತೇವೆ, ಅರಳಿ ನಿಂತ ಮುದ್ದಾದ ಹೂ ಕಂಡರೆ, ಅಂತಹ ಹೂ ನಮ್ಮ ಮನೆಯಂಗಳದಲ್ಲಿದ್ದರೂ ಕೀಳುವ ಅಂತಾಗುತ್ತದೆ. ಬಳೆಗಳ ರಾಶಿ ಯಾರಧ್ದೋ ಅಲಂಕಾರದ ಡಬ್ಬದಲ್ಲಿ ಕಂಡಾಗ ಅದರಿಂದೊಂದನ್ನ ಎತ್ತಿಡದೇ ಇರುವುದು ಹೇಗೆ? ಯಾರ್ಯಾರದೋ ಅಂಗಳದಿಂದ ಹೂಹಣ್ಣಿನ ಗಿಡಗಳನ್ನು ಎತ್ತಿ ತಂದವರೆಲ್ಲ ಕಳ್ಳರೆಂದಾದರೆ ಇಡೀ ಭೂಮಿಯನ್ನೇ ಜೈಲು ಮಾಡಬೇಕಾದೀತು. ಎತ್ತಿಡದಿದ್ದರೆ ಜೀವನ ನಡೆಸೋದೇ ಕಷ್ಟ ಅನ್ನುವಂತಾಗಿದೆ.

ನಾವೆಲ್ಲ ಬಹಳ ಸಲ ಕೇಳಿರುವ ನಗೆಹನಿ ಎತ್ತಿಡುವ ಕುರಿತಾಗಿ ಎಷ್ಟು ಸೊಗಸಾಗಿ ಹೇಳುತ್ತದೆ! “”ನಮ್ಮ ಕಾಲದಲ್ಲಿ ನೂರು ರೂಪಾಯಿ ತೆಗೆದುಕೊಂಡು ಹೋದರೆ ಚೀಲ ತುಂಬಾ ಸಾಮಾನು ಬರುತ್ತಿತ್ತು” ಅಂತ ಅಪ್ಪ ಹೇಳಿದರೆ, “”ಈಗ ಆಗಲ್ಲ… ಎಲ್ಲಾ ಕಡೆ ಸಿಸಿ ಕ್ಯಾಮೆರಾ ಇಟ್ಟಿರ್ತಾರೆ” ಅಂದನಂತೆ ಮಗ. ಇಂಥ ಶಾಪ್‌ ಲಿಫ್ಟರ್‌ಗಳ ದೆಸೆಯಿಂದಲೇ ದಿನಸಿ ಅಂಗಡಿಯವರೆಲ್ಲ ವೈಟ್‌ಲಿಫ್ಟರ್‌ಗಳಂತೆ ದಢೂತಿ ದೇಹ, ಸಿಡುಕು ಮೊರೆ ಇಟ್ಟುಕೊಂಡಿರುವುದು! ಶಾಪ್‌ ಲಿಫ್ಟರ್‌ಗಳ ಪರಂಪರೆ ಬಹಳ ಶ್ರೀಮಂತವಾದ್ದು. ಭಿಕ್ಷುಕರು, ಬಡವರು, ಮಧ್ಯಮವರ್ಗದ ನಮ್ಮ ನಿಮ್ಮಂತವರು ಮಾತ್ರಾ ಎತ್ತಿಡುವುದಿಲ್ಲ. ದೊಡ್ಡ ದೊಡ್ಡ ಸಿನೆಮಾ ತಾರೆಯರಿಗೆ, ಗಣ್ಯ ವ್ಯಕ್ತಿಗಳಿಗೆ ಈ ಅಭ್ಯಾಸ ಇದೆ. ಗೂಗಲ್‌ನಲ್ಲಿ ಈ ಕುರಿತು ಜಾಲಾಡಿದರೆ ಅಂಗಡಿಗಳಲ್ಲಿ ಟೋಪಿ, ಬಟ್ಟೆ, ಮೇಕಪ್‌ ಸಾಮಾಗ್ರಿಗಳನ್ನ ಕದ್ದು ಜೈಲು ಸೇರಿದ ಸೌಂದರ್ಯವತಿಯರ, ಸಿನೆಮಾ ನಟಿಯರ ದೊಡ್ಡ ಪಟ್ಟಿಯೇ ಸಿಗುತ್ತದೆ. ಹಾಗಾಗಿ ಸೌಂದರ್ಯಕ್ಕಾಗಿ ಹಪಹಪಿಸುವ ಸಾಧಾರಣ ರೂಪದವರಷ್ಟೇ ಎತ್ತಿಡುತ್ತಾರೆ ಅನ್ನೋದು ಸುಳ್ಳು. ಪುಸ್ತಕಗಳನ್ನು ಕಂಡಾಗ ಓದುವ ಚಪಲ ಇರುವವರಿಗೆ ಎತ್ತಿಡುವ ಅಂತ ಅನಿಸಬಹುದು. ಡಿಗ್ರಿಯಲ್ಲಿರುವಾಗ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಹೋಗುವ ಅವಕಾಶ ಲಭಿಸಿತ್ತು. ಅಲ್ಲಿ ನನಗೆ ಮತ್ತು ನನ್ನ ಗೆಳತಿಯರಿಗೆ ಉಳಿದುಕೊಳ್ಳಲು ಸಿಕ್ಕಿದ ಹಾಸ್ಟೆಲ್‌ ರೂಮ್‌ನ ಒಡತಿ ಪುಸ್ತಕ ಪ್ರೇಮಿಯಾಗಿರಬೇಕು. ಮಂಚದ ಪಕ್ಕದ ಕಪಾಟಿನಲ್ಲಿ ಹಲವು ಪುಸ್ತಕಗಳನ್ನು ಜೋಡಿಸಿಟ್ಟಿದ್ದಳು. ನನಗೆ ಒಂದು ಪುಸ್ತಕವನ್ನು ಬ್ಯಾಗಿಗಿಳಿಸುವ ಅಂತ ಅನಿಸಿತು. ಆದರೆ, ನನ್ನನ್ನು ಎತ್ತಿಡುವ ಪಾಪದಿಂದ ಪಾರುಮಾಡುವ ಪಣ ತೊಟ್ಟಿದ್ದ ನನ್ನ ಗೆಳತಿ, “”ಓದುವುದಕ್ಕೆ ಪುಸ್ತಕ ಕದಿಯುವುದು ತಪ್ಪು” ಎಂದು ಉಪದೇಶಿಸಿದಳು. ನನಗೋ “”ಓದಲು ಕದಿಯಬಾರದು, ಕಡಲೆ ಕಟ್ಟಲು ಕದಿಯಬಹುದೊ?” ಎಂದು ಕೇಳುವಷ್ಟು ಸಿಟ್ಟು ಬಂತು. ಅವಳು ನಾಟಕಗಳಲ್ಲಿರುವಂತೆ, ಮನುಷ್ಯ ರೂಪ ತಾಳಿದ ಪಾಪಪ್ರಜ್ಞೆಯಂತೆ ನನ್ನನ್ನು ಅಲ್ಲಿರುವಷ್ಟು ಸಮಯ ನನ್ನನ್ನು ಕಾಡಿದ್ದರಿಂದ ಎತ್ತಿಡುವ ಪಾಪದಿಂದ ನನ್ನ ಆತ್ಮ ಕಲುಷಿತವಾಗುವುದು ತಪ್ಪಿತು!

ಕಾಲೇಜಿನಲ್ಲಿ ಹಬ್ಬಹರಿದಿನ (fest) ಗಳಿಗೆಂದು ಆಡಳಿತ ಮಂಡಳಿಯೋ ಅಥವಾ ಸಂಬಂಧಪಟ್ಟ ಸಂಘ ಅಥವಾ ಫೋರಮ್‌ನವರು ಕೊಡುವ ಹಣ ಎಷ್ಟಿರುತ್ತದೆ ಎಂದರೆ ಅದರಿಂದ ಹಬ್ಬ ಬಿಡಿ, ಒಂದು ಸಣ್ಣ ಗಣಹೋಮವನ್ನೂ ಮಾಡಲಾಗದು. ಇಂಥ ಸಮಯದಲ್ಲಿ ಎತ್ತಿಡಬಲ್ಲ ಚತುರ ಶಾಪ್‌ಲಿಫ್ಟರ್‌ಗಳೇ ನಮ್ಮನ್ನು ಕಾಯುವ ದೇವರು. ಸಿಸಿ ಕ್ಯಾಮೆರಾ ಇಲ್ಲದ ಹೋಲ್‌ಸೇಲ್‌ ಅಂಗಡಿಗಳಿಗೆ ಇಂತಹ ಚತುರ ಶಾಪ್‌ಲಿಫ್ಟರ್‌ಗಳನ್ನು ಕರೆದುಕೊಂಡು ಹೋದರಂತೂ ಒಟ್ಟು ಖರ್ಚಿನಲ್ಲಿ ಹತ್ತು-ಹದಿನೈದು ಶೇ. ಉಳಿತಾಯ ಗ್ಯಾರಂಟಿ, ಪ್ರತಿ ತರಗತಿಯಲ್ಲಿ ಇಂಥ ಒಂದಿಬ್ಬರು ಶಾಪ್‌ಲಿಫ್ಟರ್‌ಗಳು ಇರುತ್ತಾರೆ, ದುರಂತ ಅಂದರೆ ಅವರು ತಮ್ಮ ಪ್ರಾಣಕ್ಕಿಂತಲೂ ಮಿಗಿಲಾದ ಮಾನವನ್ನು ಅಡವಿಟ್ಟು ಮಾಡಿದ ಈ ಕಾರ್ಯವನ್ನು ಯಾರೂ ಗುರುತಿಸಿ ಗೌರವಿಸುವುದಿಲ್ಲ!

ದರೋಡೆ, ಕೊಲೆ ಮತ್ತಿತರ ಘಾತಕ ಕೃತ್ಯಗಳನ್ನ ಮಾಡಿ ಪಶ್ಚಾತ್ತಾಪದ ಉರಿಯಲ್ಲಿ ಸುಟ್ಟು ಹೋದವರನ್ನು ನಿಜಜೀವನದಲ್ಲಿ ಅಲ್ಲವಾದರೂ ಸಿನೆಮಾದಲ್ಲಿಯಾದರೂ ಕಂಡಿರುತ್ತೇವೆ, ಆದರೆ “”ನಾನು ಅಂಗಡಿಯಿಂದ ಎರಡು ಬಟಾಡೆ ಎತ್ತಿಟ್ಟುಕೊಂಡೆ”, “”ಮಂಚ್‌ನ ಡಬ್ಬದಿಂದ ಒಂದು ಜಾಸ್ತಿ ತೆಗೆದೆ”, “”ಆಚೆ ಮನೆಯ ಡಬ್ಬಲ್‌ ದಾಸವಾಳದ ರೆಂಬೆ ಮುರಿದು ತಂದೆ”, “”ಕಂಡಕ್ಟರ್‌ಗೆ ಹಣ ಕೊಡಲೇ ಇಲ್ಲ”, “”ಗಣೇಶದಲ್ಲಿ ತಿಂದದ್ದು ಎರಡು ಕಬಾಬ್‌, ಬಿಲ್‌ ಮಾಡಿಸಿದ್ದು ಒಂದಕ್ಕೆ ಮಾತ್ರ” ಎಂದೆಲ್ಲ ಆರ್ತನಾದ ಹೊರಡಿಸುತ್ತ ದುಃಖ ಪಟ್ಟವರನ್ನು ಎಂದಾದರೂ ಕಂಡಿದ್ದೇವೆಯೆ?

ಎತ್ತಿಡುವ ಕ್ರಿಯೆ ಪಾಪವಲ್ಲ ಯಾಕೆ ಗೊತ್ತೆ? ಅದು ಎಂದಿಗೂ ನಮ್ಮಲ್ಲಿ ಪಾಪಪ್ರಜ್ಞೆ ಹುಟ್ಟಿಸುವುದಿಲ್ಲ. ಅಶ್ವತ್ಥಾಮನ ಹಣೆಯ ಹುಣ್ಣಿನಂತೆ ಇದ್ದಷ್ಟೂ ಕಾಲವೂ ನಮ್ಮನ್ನ ಬಾಧಿಸುವುದಿಲ್ಲ. ದುಂಬಿ ಬಂದು ಹೂವಿನ ಜೇನನ್ನು ತನ್ನೊಳಗಿಳಿಸಿ ಮರಳಿ ಹೋದಷ್ಟೇ ಸಹಜವಾಗಿ ಎತ್ತಿಡುವ ಕಾರ್ಯ ಯುಗಯುಗಗಳಿಂದಲೂ ನಡೆದು ಬಂದಿದೆ. ಹಾಗಂತ ಎತ್ತಿಡುವುದೇ ಒಂದು ಚಾಳಿ ಆದರೆ ಅದೊಂದು ಗಂಭೀರ ಕಾಯಿಲೆ ಆಗುವ ಅಪಾಯ ಇದೆ. ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಳ್ಳುವ ತಾಕತ್ತಿರುವ ಕುಟುಂಬ ಹೊಟೇಲ್‌ ಕೊಠಡಿಯ ಕೆಲವು ಸಣ್ಣವಸ್ತುಗಳನ್ನು ಕದ್ದದ್ದೇಕೆ? ಎತ್ತಿಡುವ ಈ ಕ್ರಿಯೆಗೆ ಲಾಭ ಗಳಿಸುವ ಮನಸ್ಥಿತಿ ಬಿಟ್ಟು ಬೇರೆ ಆಯಾಮಗಳೂ ಇರಬಹುದು-ಮನಃಶಾಸ್ತ್ರವೇ ಅದಕ್ಕೆ ಉತ್ತರ ಹೇಳಬೇಕು!

ಯಶಸ್ವಿನಿ ಕದ್ರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

  • ಹೂವು ಅರಳುವ ಕ್ಷಣವನ್ನು ಪತ್ತೆ ಹಚ್ಚಿಯೇ ತೀರುತ್ತೇನೆ ಎಂದುಕೊಂಡು, ಕುತೂಹಲಿಯೊಬ್ಬ ರಾತ್ರಿಯಿಡೀ ಎಚ್ಚರವಿದ್ದನಂತೆ. ಆದರೆ, ಹೂವಾದರೂ ಸ್ವಿಚ್‌ ಅದುಮಿದಾಗ...

  • ಅಂಗೈಗೆ ಮೊಬೈಲ್‌ ಎಂಬ ಸಂಗಾತಿ ಬಂದ ಬಳಿಕ, ಪ್ರೀತಿ ಪ್ರೇಮ ಪ್ರಣಯದ ವರಸೆಯೇ ಬದಲಾಗಿದೆಯೆ? ಅದರಲ್ಲೇನು ವಿಶೇಷ ಎಂದು ಪ್ರಶ್ನಿಸುತ್ತಾರೆ, ಹೊಸತಲೆಮಾರಿನ ಪ್ರೇಮಿಗಳು....

  • ಖಾಲಿ ಜೀವನದಲ್ಲಿ ಕವಿತೆಗಳು ಬೇಗನೇ ಹುಟ್ಟಿಕೊಳ್ಳುತ್ತವೆ ಎನ್ನುವ ಮಾತುಂಟು. ಇದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದು ಇನ್ನೂ ಹಸಿಯಾದ ತಿಳಿ...

  • ಮಗುವೊಂದು ಓಡಾಡುತ್ತಿದ್ದರೆ ಮನೆಯಲ್ಲಿ ಸಂತಸದ ಹೊನಲೇ ಹರಿಯುತ್ತಿರುತ್ತದೆ. ಇನ್ನು ಅವಳಿ ಮಕ್ಕಳು ಹುಟ್ಟಿದರೆ ಪ್ರತಿದಿನವೂ ಹಬ್ಬದಂತೆ. ಇಬ್ಬರು ಮಕ್ಕಳನ್ನು...

ಹೊಸ ಸೇರ್ಪಡೆ