ಗರ್ಭದ ಒಳಗೆ ಅಭಿಮನ್ಯು


Team Udayavani, May 17, 2017, 4:00 AM IST

Avalu-Samskara.jpg

ನಿಮಗೆಂಥಾ ಮಗು ಬೇಕು? ಉದ್ದ, ಗಿಡ್ಡ, ಬುದ್ಧಿವಂತ, ಚುರುಕು, ತೀಕ್ಷ್ಣಮತಿ? ನಿಮ್ಮ ಯಾವುದೇ ಡಿಮ್ಯಾಂಡುಗಳನ್ನು ಮನ್ನಿಸಿ ನಿಮ್ಮ ಇಚ್ಛೆಯಾನುಸಾರವಾಗಿ ಮಕ್ಕಳನ್ನು ಪಡೆಯಬಹುದಂತೆ. ‘ಗರ್ಭ ಸಂಸ್ಕಾರ’ ಎಂದು ಕರೆಯಲ್ಪಡುವ ಈ ವಿಧಾನದ ಕುರಿತು ಈಗ ಚರ್ಚೆಗಳಾಗುತ್ತಿವೆ. ಈ ಕುರಿತು ಪ್ರಾಚೀನ ಕಾಲದಲ್ಲೇ ನಮ್ಮ ವೇದ, ಉಪನಿಷದ್‌ಗಳಲ್ಲಿ ಉಲ್ಲೇಖವಿದೆ. ಇದುವರೆಗೆ ಮಕ್ಕಳಿಗೆ 4-5 ವರ್ಷವಾದಾಗ ಸ್ಕೂಲ್‌ಗೆ ಕಳಿಸುತ್ತಿದ್ದೆವು, ವಿದ್ಯೆ- ಬುದ್ಧಿ ಕಲಿಸುತ್ತಿದ್ದೆವು. ಇನ್ನು ಮುಂದೆ ಮಹಾಭಾರತದ ಅಭಿಮನ್ಯು ಥರ ಗರ್ಭದಲ್ಲಿದ್ದಾಗಲೇ ಮಕ್ಕಳಿಗೆ ಶಾಲೆ ಶುರು!

ಯಾವ ದಂಪತಿಗೆ ತಾನೇ, ತಮಗೆ ಹುಟ್ಟುವ ಮಗು ಹೀಗಿರಬೇಕು, ಹಾಗಿರಬೇಕು ಎಂಬ ಆಸೆ ಇರುವುದಿಲ್ಲ ಹೇಳಿ? ಬೆಟ್ಟದಷ್ಟು ಕನಸುಗಳನ್ನು ಅವರು ಕಂಡಿರುತ್ತಾರೆ. ಮಗು ಹುಟ್ಟುವುದಕ್ಕೆ ಮುಂಚೆಯೇ ಮುಂದಿನ 20- 30 ವರ್ಷಗಳವರೆಗಿನ ಆ ಮಗುವಿನ ಬದುಕಿನ ನೀಲನಕ್ಷೆಯನ್ನು ಸಿದ್ಧಪಡಿಸಿರುತ್ತಾರೆ. ಮಗು ಹುಟ್ಟಿದ ಮೇಲೆ ಆ ನೀಲ ನಕ್ಷೆಯ ಪ್ರಕಾರವಾಗಿಯೇ ಸಕಲ ಕಾರ್ಯಗಳು ನಡೆಯತ್ತವೆ. ಹಾಗಿದ್ದೂ ಮಕ್ಕಳು ಬೆಳೆಯುತ್ತಾ ಹೆತ್ತವರು ಅಂದುಕೊಂಡಂತೆಯೇ ಬೆಳೆಯುತ್ತಾರೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಸುತ್ತಲಿನ ಪರಿಸರ ಮಕ್ಕಳ ಬೆಳವಣಿಗೆಯ ಮೇಲೆ ಗಾಢ ಪರಿಣಾಮವನ್ನು ಬೀರುವುದರಿಂದ ಹೆತ್ತವರ ಪ್ಲಾನುಗಳೆಲ್ಲ ಉಲ್ಟಾ ಕೂಡ ಆಗಬಹುದು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೂ ಕಳ್ಳನ ಬಳಿ ಬೆಳೆದ ಗಿಣಿಮರಿ ಕಳ್ಳತನವನ್ನೂ, ಸದಾಚಾರಿಯ ಬಳಿ ಬೆಳೆದ ಗಿಣಿಮರಿ ಸದ್ಗುಣವನ್ನೂ ಕಲಿತ ಕಥೆ ನೆನಪಿದೆ ತಾನೇ? ಅಂದರೆ, ಮನೆಗಳಲ್ಲಿ ನಾವು ಯಾವ ಸವಲತ್ತುಗಳನ್ನು ಒದಗಿಸಿದರೂ ಹೊರಗಿನ ಪ್ರಪಂಚವನ್ನು ನಿಯಂತ್ರಿಸಲಾಗುವುದಿಲ್ಲ ಎನ್ನುವುದು ವಿದಿತ! ಈ ಸಮಯದಲ್ಲೇ ನೆರವಿಗೆ ಬರುವ ಚಿಕಿತ್ಸೆ ಗರ್ಭ ಸಂಸ್ಕಾರ!

ಇದೇನು ಗೊತ್ತಾ?
ಗರ್ಭ ಸಂಸ್ಕಾರವೆಂದರೆ ಬೇರೇನೂ ಅಲ್ಲ. ಗರ್ಭಿಣಿಯರು ಆರೋಗ್ಯಪೂರ್ಣ ಕಾಂತಿಯನ್ನು ಹೊಂದುವುದು. ಒಟ್ಟಿನಲ್ಲಿ ಹೇಳಬೇಕೆಂದರೆ ತಾಯಿಯಾಗುವವಳು ಎಲ್ಲಾ ವಿಧಗಳಲ್ಲಿಯೂ, ಅಂದರೆ, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದು ಎಂದರ್ಥ. ತಾಯಿ ಒಳ್ಳೆಯ ಆಚರಣೆಗಳಲ್ಲಿ ತೊಡಗುವುದರಿಂದ ಮಗು ಸಂಸ್ಕಾರವಂತಿಕೆಯನ್ನು ರೂಢಿಸಿಕೊಳ್ಳುತ್ತದೆ. ನಿರ್ದಿಷ್ಟ ಆಹಾರವನ್ನು ಸೇವಿಸುವುದು, ಪ್ರಾರ್ಥನೆ- ಧ್ಯಾನ ಮಾಡುವುದು, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗುವುದು, ಹೊಟ್ಟೆಯಲ್ಲಿರುವ ಮಗುವಿನೊಂದಿಗೆ ತಾಯಿ ಸಂಭಾಷಿಸುವುದು, ಇವೇ ಮುಂತಾದ ಚಟುವಟಿಕೆಗಳು ಗರ್ಭಸಂಸ್ಕಾರದ ಭಾಗವಾಗಿದೆ. ಈ ಕುರಿತು ತರಬೇತಿ ನೀಡುವ ಅನೇಕ ವೈದ್ಯಶಾಲೆಗಳಿವೆ. ಕೆಲವು ಆಯುರ್‌ ತಜ್ಞರು ಜನರಿಗೆ ಈ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ನಿರತರಾಗಿದ್ದಾರೆ.

ಗರ್ಭಾವಸ್ಥೆಯಲ್ಲೇ ಯಾಕೆ?
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎಂಬ ಗಾದೆಯನ್ನು ನೀವೆಲ್ಲರೂ ಕೇಳಿರುತ್ತೀರಿ. ಚಿಕ್ಕಂದಿನಲ್ಲಿ ಕಲಿತ ಪಾಠ ಯಾವ ಕಾಲಕ್ಕೂ ಮನಸ್ಸಿನಾಳದಲ್ಲಿಯೇ ಉಳಿದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂಬುದು ಅದರ ಭಾವಾರ್ಥ. ಅದರಲ್ಲಿ ಎರಡು ಮಾತಿಲ್ಲ. ಮಕ್ಕಳು ಚಿಕ್ಕವರಾಗಿದ್ದಾಗ ಅವರಿಗೆ ಉತ್ತಮ ಸಂಸ್ಕಾರವನ್ನು ಕಲಿಸುವುದಕ್ಕೆ ಬದಲಾಗಿ ಗರ್ಭ ಸಂಸ್ಕಾರದಲ್ಲಿ ಇನ್ನೂ ಒಂದು ಹೆಜ್ಜೆ ‘ಹಿಂದಕ್ಕೆ’ ಹೋಗಿ ಮಕ್ಕಳು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿದ್ದಾಗಲೇ ಶಿಕ್ಷಣ ನೀಡಲಾಗುತ್ತದೆ. ‘ಅಯ್ಯೋ, ಭ್ರೂಣಕ್ಕೆ ಪಾಠ ಹೇಳುವುದೇ?’ ಎಂದು ಮೂಗು ಮುರಿಯುವಂತಿಲ್ಲ. ಏಕೆಂದರೆ, ಗರ್ಭಿಣಿಯರು ಒಳ್ಳೆಯ ವಿಚಾರಗಳ ಪುಸ್ತಕ, ಒಂದೊಳ್ಳೆಯ, ಹಿತಕರವಾದ ಸಂಗೀತ ಕೇಳುವುದನ್ನು ವೈದ್ಯಕೀಯ ವಿಜ್ಞಾನವೂ ಪ್ರೋತ್ಸಾಹಿಸುತ್ತದೆ. ಇದೂ ಹಾಗೆಯೇ. ಆದರೆ, ಹಳೆಯ ಪಾರಂಪರಿಕ ವಿಧಾನಗಳನ್ನು ಬಳಸಿ ಶಿಕ್ಷಣ ನೀಡಲಾಗುತ್ತದೆ. ಗರ್ಭದಲ್ಲಿದ್ದಾಗಲೇ ಮಗು ಹೊರಗಿನ ದನಿಗಳಿಗೆ ಪ್ರತಿಸ್ಪಂದಿಸತೊಡಗುತ್ತದೆ. ಮಗುವಿನ ಮೆದುಳಿನ ಶೇ.60ರಷ್ಟು ಬೆಳವಣಿಗೆ ಗರ್ಭದಲ್ಲಿದ್ದಾಗಲೇ ಆಗುತ್ತದೆ ಎನ್ನುವುದನ್ನು ನೂತನ ಸಂಶೋಧನೆಯೊಂದು ದೃಢಪಡಿಸಿದೆ. ಹೀಗಾಗಿ, ಈ ಸಮಯದಲ್ಲಿ ಕಲಿತದ್ದನ್ನು ಮೆದುಳು ಭದ್ರವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ ಎನ್ನುವುದು ಗರ್ಭ ಸಂಸ್ಕಾರದ ಹಿಂದಿರುವ ತಿರುಳು.

ಪುರಾಣದಲ್ಲಿ…
ತಾಯಿ ಸುಭದ್ರೆ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹ ಭೇದಿಸುವ ವಿದ್ಯೆಯನ್ನು ಕಲಿತ ಅಭಿಮನ್ಯುವಿನ ಕತೆ ಗೊತ್ತೇ ಇರುತ್ತದೆ. ಭೇದಿಸುವುದನ್ನು ಹೇಳಿಕೊಟ್ಟ ಅರ್ಜುನ ಇನ್ನೇನು ಚಕ್ರವ್ಯೂಹದಿಂದ ಹೊರಬರುವ ವಿದ್ಯೆಯನ್ನು ಹೇಳಿಕೊಡಬೇಕು, ಅಷ್ಟರಲ್ಲಿ ಕೃಷ್ಣ ಅರ್ಜುನನನ್ನು ದೂರಕ್ಕೆ ಕರೆದಿದ್ದ. ಆ ವಿದ್ಯೆಯನ್ನು ಅಭಿಮನ್ಯು ಪೂರ್ತಿ ಕಲಿಯದೇ ಇರಲು ಅದೇ ಕಾರಣ. ಪುರಾಣದಲ್ಲಿ ಅಭಿಮನ್ಯುವನ್ನು ಹೊರತುಪಡಿಸಿ ಸಿಗುವ ಮತ್ತೂಂದು ಉದಾಹರಣೆಯನ್ನು ಹೇಳಬಹುದಾದರೆ ಪ್ರಹ್ಲಾದನದು. ರಾಕ್ಷಸ ತಂದೆ ಹಿರಣ್ಯಕಶಿಪುವಿನ ಮಗನಾಗಿ ಹುಟ್ಟಿದರೂ ಪ್ರಹ್ಲಾದ, ದೇವರಾದ ವಿಷ್ಣುವನ್ನು ಪೂಜಿಸಲು ಕಾರಣವೇನು? ಇದೇ ಗರ್ಭ ಸಂಸ್ಕಾರ! ಪ್ರಹ್ಲಾದ ಗರ್ಭದಲ್ಲಿದ್ದಾಗ ನಾರದ ಕಲಿಸಿದ ವಿಷ್ಣು ನಾಮ ಜಪ ಅವನ ವ್ಯಕ್ತಿತ್ವವನ್ನು ರೂಪಿಸಿತ್ತು.  

ವಿದೇಶಗಳಲ್ಲೂ ಇದೆ…
‘ಗರ್ಭ ಸಂಸ್ಕಾರ’ ಭಾರತದಲ್ಲಿ ಮಾತ್ರವೇ ಅಲ್ಲ, ವಿದೇಶಿ ಸಂಸ್ಕೃತಿಗಳಲ್ಲೂ ಕಾಣಬಹುದು. ಚೀನಾದಲ್ಲಿ 9ನೇ ಶತಮಾನದಲ್ಲಿ ಗರ್ಭ ಸಂಸ್ಕಾರಕ್ಕೆ ಹತ್ತಿರದ ಆಚರಣೆಯನ್ನು ಅಲ್ಲಿನ ಮಂದಿ ಅನುಸರಿಸುತ್ತಿದ್ದುದಕ್ಕೆ ಪುರಾವೆಗಳಿವೆ. ಅಲ್ಲಿಂದ ಕೊರಿಯಾಗೆ ಗರ್ಭ ಸಂಸ್ಕಾರ ಹರಡಿತು. ಕೊರಿಯನ್ನರು ಗರ್ಭ ಸಂಸ್ಕಾರದಲ್ಲಿ ಬಹಳವೇ ನಂಬಿಕೆಯನ್ನು ಹೊಂದಿದ್ದಾರೆ. ಅಲ್ಲಿ ಗರ್ಭ ಸಂಸ್ಕಾರವನ್ನು ಟೇಗ್ಯೊ (Taegyo) ಎಂದು ಕರೆಯುತ್ತಾರೆ. ‘ಟೇಗ್ಯೊ’ಗೆ ಸುಮಾರು 600 ವರ್ಷಗಳ ಇತಿಹಾಸವಿದೆ ಎಂದು ಅಲ್ಲಿನ ಸಂಶೋಧಕರು ಅಭಿಪ್ರಾಯಪಡುತ್ತಾರೆ. ಆದ್ದರಿಂದ, ನಮ್ಮಲ್ಲಿ ಇವೆಲ್ಲಕ್ಕೂ ಹಿಂದೆಯೇ ಗರ್ಭಸಂಸ್ಕಾರ ಚಾಲ್ತಿಯಲ್ಲಿತ್ತು ಎಂದು ಹೆಮ್ಮೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಅಲ್ಲವೇ? ಈಗೀಗ ಅಮೆರಿಕ, ಇಂಗ್ಲೆಂಡುಗಳಂಥ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಜನರು ಗರ್ಭ ಸಂಸ್ಕಾರವನ್ನು ಆಚರಿಸುತ್ತಿದ್ದಾರೆ. ಇವುಗಳನ್ನು ಅಲ್ಲಿನ ಜನರಿಗೆ ಪರಿಚಯಿಸಲು ಪ್ರತ್ಯೇಕ ಇನ್ಸ್‌ಟಿಟ್ಯೂಟ್‌, ಕ್ಲಿನಿಕ್ಕುಗಳೇ ಇವೆ.

ಆದರೆ…
ಗರ್ಭ ಸಂಸ್ಕಾರದ ಕುರಿತು ಒಳ್ಳೆಯ ಮಾತುಗಳು ಕೇಳಿಬರುವಂತೆಯೇ, ಕೆಲವರಲ್ಲಿ ಭಿನ್ನಾಭಿಪ್ರಾಯಗಳೂ ಇವೆ. ಆಧುನಿಕತೆ, ಪಾಶ್ಚಾತ್ಯೀಕರಣಗಳಿಗೆ ನಾವು ಒಡ್ಡಿಕೊಳ್ಳುತ್ತಿರುವುದರಿಂದ ನಮ್ಮದೇ ಸಂಸ್ಕೃತಿ, ಆಚಾರಗಳ ಮೇಲೆ ಅನುಮಾನದ ದೃಷ್ಟಿಯನ್ನು ಬೀರುವ ಪ್ರವೃತ್ತಿ ಇದಕ್ಕೆ ಕಾರಣವಾಗಿರಲೂಬಹುದು. ಎಲ್ಲಕ್ಕೂ ಮಿಗಿಲಾದದ್ದು ನಮ್ಮ ನಂಬಿಕೆಯೇ. ಹಗ್ಗವನ್ನೂ ಹಾವಾಗಿಸುವ ಶಕ್ತಿಯಿರುವುದು ನಂಬಿಕೆಗೇ. ನಂಬಿಕೆಯಿಲ್ಲದಿದ್ದರೆ ಔಷಧ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಇಲ್ಲದೇ ಇದ್ದರೆ, ಒಂದೇ ವಾರದಲ್ಲಿ ಸಾಯಬೇಕಿದ್ದ ಕ್ಯಾನ್ಸರ್‌ ಪೀಡಿತ ವರ್ಷವಾದರೂ ಏಕೆ ಬದುಕಿರುತ್ತಿದ್ದ!? ವೈದ್ಯ ವಿಜ್ಞಾನ ಇಷ್ಟು ಮುಂದುವರಿದಿದ್ದರೂ ವಿವರಣೆಗಳಿಗೆ ನಿಲುಕದ ಪ್ರಕರಣಗಳೇಕೆ ವರದಿಯಾಗುತ್ತವೆ? ಇರಲಿ, ಈ ವಿಚಾರಗಳೇನೇ ಇದ್ದರೂ ಯಾವುದೇ ಆಚರಣೆಯಾಗಲಿ, ಪದ್ಧತಿಯಾಗಲಿ, ಸಂಸ್ಕಾರವಾಗಲಿ, ಅದನ್ನು ಪರಿಶೀಲಿಸಿ ಆಯ್ಕೆ ಮಾಡುವ ಸ್ವಾತಂತ್ರ್ಯವಂತೂ ನಮಗಿದ್ದೇ ಇದೆ. 

ಗರ್ಭ ಸಂಸ್ಕಾರ ಅನ್ನೋದು ಹಿಂದಿನಿಂದಲೂ ನಮ್ಮ ಪರಂಪರೆಯಲ್ಲಿ ಕಂಡು ಬಂದಿರುವಂಥದ್ದು. ಕೆಲವು ಕಡೆಗಳಲ್ಲಿ ವೈದ್ಯರು ಈ ವಿಚಾರವನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಆದರೆ ನನಗೆ ಗರ್ಭ ಸಂಸ್ಕಾರದ ಕುರಿತು ಯಾವುದೇ ತಕರಾರಿಲ್ಲ. ನಿಜ ಹೇಳಬೇಕೆಂದರೆ ಒಳ್ಳೆಯ ಅಭಿಪ್ರಾಯವೇ ಇದೆ. ನಮ್ಮ ಆಸ್ಪತ್ರೆಯಲ್ಲಿ ಗರ್ಭಿಣಿಯರನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಅದರ ವರದಿಯ ಆಧಾರದ ಮೇಲೆ ಗರ್ಭ ಸಂಸ್ಕಾರದ ರೀತಿ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ನಮ್ಮಲ್ಲಿ ಅದಕ್ಕಾಗಿ ತಜ್ಞರಿದ್ದಾರೆ. ತಾಯಿ- ಮಗುವಿನ ಮಾನಸಿಕ, ದೈಹಿಕ ಆರೋಗ್ಯ ಚೆನ್ನಾಗಿರುವುದು ನಮಗೆ ಬಹಳ ಮುಖ್ಯ. ಒಂದೊಳ್ಳೆಯ ಉದ್ದೇಶಕ್ಕಾಗಿ ಯಾವ ಮಾರ್ಗವನ್ನು ಅನುಸರಿಸಿದರೇನು!? ತಾಯಿಯಾಗುವುದು ಅಥವಾ ಮಗುವಿಗೆ ಜನ್ಮ ನೀಡುವುದು ಎಂದರೆ ಅದೊಂದು ಸಂತಸದ ಕ್ಷಣ. ಗರ್ಭಿಣಿ, ರೋಗಿಯಲ್ಲ. ಅದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಗರ್ಭ ಸಂಸ್ಕಾರದ ಮೂಲಕ ಮಗು ಹೆರುವ ಕ್ಷಣವನ್ನು ಸುಮಧುರ ಘಳಿಗೆಯನ್ನಾಗಿಸಬಹುದು.
– ಡಾ. ದೇವಿಕಾ ಗುಣಶೀಲ, ಪ್ರಸೂತಿ ತಜ್ಞೆ, ಬೆಂಗಳೂರು

ನೋಡಿ ನಮ್ಮ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲೇ ಗರ್ಭ ಸಂಸ್ಕಾರದ ಕುರಿತು ಉಲ್ಲೇಖವಿದೆ. ಚಿನ್ನವನ್ನು ಹೇಗೆ ಅದಿರಿನ ರೂಪದಲ್ಲಿ ಭೂಮಿಯಿಂದ ಹೊರತೆಗೆದು, ಸಂಸ್ಕರಣಕ್ಕೊಳಪಡಿಸಿ, ಹೊಳಪನ್ನು ನೀಡಿ ಆಭರಣವನ್ನಾಗಿಸುತ್ತೇವೆಯೋ ಅದೇ ರೀತಿ ಮಗುವನ್ನು ಹೊಟ್ಟೆಯಲ್ಲಿದ್ದಾಗಲೇ ಗರ್ಭ ಸಂಸ್ಕಾರದ ಮೂಲಕ ತರಬೇತುಗೊಳಿಸಬಹುದು.  
– ಡಾ. ಜಯಶ್ರೀ, ಆಯುರ್ವೇದ ವೈದ್ಯೆ, ಮೈಸೂರು

ಮಗಳು ಕೇಳಿದ ಬೆಲೆಬಾಳುವ ಪ್ರಶ್ನೆ
ಅದು ಮುಸ್ಸಂಜೆ. ಕಾಲಿಂಗ್‌ ಬೆಲ್‌ ಆಗುವುದನ್ನೇ ಕಾಯುತಿತ್ತು ಆ ಪುಟಾಣಿ. ಅಂದುಕೊಂಡಂತೆ ಬೆಲ್‌ ಆಯಿತು. ಬಂದಿದ್ದು ಮತ್ಯಾರೂ ಅಲ್ಲ, ಅಮ್ಮನೇ… ಆಫೀಸು ಕೆಲ್ಸಕ್ಕೆ ಹೋಗುವ ಅಮ್ಮ ವ್ಯಾನಿಟಿ ಬ್ಯಾಗ್‌ ಅನ್ನು ಸೋಫಾದ ಮೇಲಿಟ್ಟು, ಪುಟಾಣಿ ಮಗಳನ್ನು ಎತ್ತಿಕೊಂಡು ಒಂದು ಪಪ್ಪಿ ಕೊಟ್ಟಳು. ಮೂರು ವರ್ಷದ ಪುಟಾಣಿಯ ಕಣ್ಣಲ್ಲಿ ಬಳ ಬಳ ನೀರು. ತಾಯಿಗೆ ಆತಂಕ. ‘ಏಕೆ? ಏನಾಯ್ತು ಪುಟ್ಟಾ..?’ ಅಮ್ಮನ ಪ್ರಶ್ನೆಗೆ ಪುಟಾಣಿ ಬಾಯಿ ಬಿಡಲಿಲ್ಲ. ಅಮ್ಮ ಚಾಕ್ಲೆಟ್‌ ಕೊಟ್ಟಳು. ಊಹ್ಞೂ… ತುಟಿ ಬಿಚ್ಚಲಿಲ್ಲ! ಇನ್ನಷ್ಟು ಪೂಸಿ ಹೊಡೆದ ಮೇಲೆ, ಪುಟಾಣಿ ಮೆಲ್ಲನೆ ಮಾತಾಡತೊಡಗಿದಳು.
‘ ಅಮ್ಮಾ…’ 
‘ಹೇಳು, ಕಂದಾ..?’
‘ನೀನೇಕೆ ಅಲ್ಮೇರಾದಲ್ಲಿರುವ ಚಿನ್ನವನ್ನು ಕೆಲಸದಾಕೆಯ ಕೈಗೆ ಕೊಡುವುದಿಲ್ಲ? ಅದರ ಕೆಳಗಿನ ಗೂಡಿನಲ್ಲಿರುವ ಹಣದ ಕಂತೆಗಳನ್ನು ಕೆಲಸದಾಕೆಗೆ ನೀಡುವುದಿಲ್ಲ?’
‘ಪುಟ್ಟಾ… ಏಕೆ ಹೀಗೆ ಕೇಳ್ತಿದ್ದೀಯಾ?’
‘ಅಲ್ಲಾ, ನೀನು ನನ್ನನ್ನು ಕೆಲಸದಾಕೆಯ ಬಳಿ ಬಿಟ್ಟು ಆಫೀಸಿನ ಕೆಲ್ಸಕ್ಕೆ ಹೋಗುತ್ತೀಯಲ್ಲ. ಅದಕ್ಕೆ ಕೇಳಿದೆ, ಅಷ್ಟೇ…’!
ಈಗ ತಾಯಿ ಕಣ್ಣಲ್ಲಿ ನೀರು..!

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.