Updated at Tue,25th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿತ್ತಲ ಗಿಡವೇ ಮದ್ದು!

ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಭಿಕ್ಷುಕನಂತೆ ಊಟ ಮಾಡಬೇಕೆಂಬ ಗಾದೆ ಮಾತಿದೆ. ಈಗ ಈ ಜೀವನಕ್ರಮ ಉಲ್ಟಾ ಆಗಿದೆ, ರಾತ್ರಿ ಎಂದರೆ ಮಧ್ಯರಾತ್ರಿ ಎಂದಾಗಿದೆ, ಆರೋಗ್ಯವೂ ಉಲ್ಟಾ ಆಗಿದೆ. ಈಗ ಬೇಸಗೆ ಕಾಲ. ನೀರು ಆಳಕ್ಕೆ ಇಳಿದಿರುತ್ತದೆ. ಆರೋಗ್ಯ ಕೆಡುವ ಕಾಲವೂ ಹೌದು. ನೈಸರ್ಗಿಕವಾಗಿ ಬದುಕಲು ಕಲಿಯಲೂ ಇದು ಸಕಾಲ. 

ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಮಾತಿದೆ. ಇದು ಜನರ ಭಾವನೆಯನ್ನು ವ್ಯಂಗ್ಯವಾಗಿ ತೋರಿಸುವ ಗಾದೆಯಷ್ಟೆ. ನಿಜವಾಗಿಯೂ ಹಿತ್ತಲ ಗಿಡವೇ ಮದ್ದು. 

ಪ್ರಕೃತಿಯಲ್ಲಿ ಅಧಿಕ ಆಹಾರ ಮತ್ತು ಅಧಿಕ ಔಷಧ ಇರುವ ಸಸ್ಯ ಸಂಪತ್ತಿದೆ. ಎರಡೂ ಸಮ ಪ್ರಮಾಣದಲ್ಲಿರುವುದೂ ಇದೆ. ನಾಚಿಕೆಮುಳ್ಳು , ತುಂಬೆ ಗಿಡ, ನಾಗಾರ್ಜುನಿ, ಸಹದೇವಿ, ಭದ್ರಮುಷ್ಟಿ , ಗರಿಕೆಹುಲ್ಲು, ನೆಲನೆಲ್ಲಿ ಇವುಗಳನ್ನು ಬೇರು ಸಹಿತ, ಉರಗ (ಒಂದೆಲಗ, ತಿಮರೆ), ಗರಗ (ಭೃಂಗರಾಜ), ವಿಟಮಿನ್‌ ಸೊಪ್ಪು , ಪೊನ್ನಂಗಣಿ, ಗರ್ಚನಕಾಯಿ (ಕರಂಡೆ), ಸೂರಿಮುಳ್ಳು ಗಿಡದ ಚಿಗುರು- ಕಾಯಿ-ಹಣ್ಣು, ಕಿರಾತಕಡ್ಡಿ, ಕಾಕೆಸೊಪ್ಪು, ಅಮೃತಬಳ್ಳಿ ಎಲೆಗಳನ್ನು, ಕೇಪಳ ಪುಷ್ಪ , ಹಣ್ಣು ಮತ್ತು ಚಿಗುರು, ದಾಸವಾಳದ ಪುಷ್ಪ ಮತ್ತು ಚಿಗುರು, ಶಮಿಪತ್ರದ ಕುಡಿ, ಬಿಲ್ವದ ಕುಡಿ, ಮಜ್ಜಿಗೆ ಮರದ ಕುಡಿ, ಪಚ್ಚೆಕದುರು, ಕೊಮ್ಮೆಬೇರು (ಪುನರ್ನವ), ಶ್ರೀಗಂಧದ ಕುಡಿ, ಗೃಹಿ ಬೀಳು, ಸಂಬಾರುಬಳ್ಳಿ ಬಳಸಬಹುದು. ಕರಿಬೇವು, ಕೊತ್ತಂಬರಿ ಸೊಪ್ಪು ಎಲ್ಲರಿಗೂ ಗೊತ್ತಿದ್ದದ್ದೇ. ಪುಷ್ಪಗಳನ್ನು ಬಳಸುವಾಗ ಮಧ್ಯದ ನಾಳ (ಕೇಸರ) ತೆಗೆದು ಕೇವಲ ದಳಗಳನ್ನು ಮಾತ್ರ ಉಪಯೋಗಿಸಬೇಕು. ಇವುಗಳೆಲ್ಲವನ್ನೂ ಒಂದೆರಡು ಎಲೆ, ಕುಡಿಗಳನ್ನು ಅನ್ನ, ಸಾಂಬಾರು, ಸಾರಿನ ಜೊತೆ ಬೇಯಿಸುವಾಗ ಹಾಕಿದರೆ ಅದ್ಭುತ ನೈಸರ್ಗಿಕ ಔಷಧಿಯಾಗುತ್ತದೆ. 

ನಾಶದಂಚಿನ ತಳಿಗಳು
ಜಲಬ್ರಾಹ್ಮಿ , ಮೈತಾಳಬಳ್ಳಿ , ಎಲಸುರಿ (ಎಲಗರ್ಗ), ಗೃಹಿಣೀ ಬೀಳಿನಂತಹ ತಳಿಗಳು ನಾಶದಂಚಿಗೆ ತಲುಪುತ್ತಿವೆ. ಅಷ್ಟೇ ಏಕೆ ಹಿಂದೆ ಎಲ್ಲರ ಮನೆ ಬಳಿ ಇದ್ದ ಬಿಳಿ ದಾಸವಾಳದ ಗಿಡ ಈಗ ನಾಪತ್ತೆ. ಇದರ ಎಲೆಯಿಂದ ಕಡುಬು ಮಾಡುತ್ತಿದ್ದರು, ಎಲೆಗಳನ್ನು ಕಡೆದು ದೀಪಾವಳಿಯ ಸ್ನಾನದ ದಿನ ಸಾಬೂನಿಗೆ ಪರ್ಯಾಯವಾಗಿ ಬಳಸುತ್ತಿದ್ದರು. ಇದರ ಹೂವಿನ ತಂಬುಳಿ ಬಾಯಿ ಹುಣ್ಣಿಗೆ ರಾಮಬಾಣ. ಈಗ ಇದೆಲ್ಲ ಅಂತೆಕಂತೆಗಳ ಕತೆ! ಸಸ್ಯೋತ್ಪಾದಕ ಕರ್ಜೆಯ ಮಂಜುನಾಥ ಗೋಳಿಯವರ ಪ್ರಕಾರ ವಿಟಮಿನ್‌ ಸೊಪ್ಪು, ಗೃಹಿಣೀಬೀಳು, ಜಲಬ್ರಾಹ್ಮಿ, ಎಲಸುರಿಯಂತಹ ಸಸ್ಯಗಳ ಪ್ರಯೋಜನ ಗೊತ್ತಿಲ್ಲದೆ ಅವಗಣಿಸಲ್ಪಟ್ಟು ವಿನಾಶದಂಚಿನಲ್ಲಿವೆ ಮತ್ತು ಕ್ರೀಮ್‌ ಬಣ್ಣದ ತಿನ್ನುವ ದಾಸವಾಳ ಬಹಳ ಉತ್ತಮ. 

ಜೆಸಿಬಿ ಅಪಾಯ
ಕೆಲವು ವರ್ಷಗಳ ಹಿಂದೆ ಗಿಡಮರಗಳನ್ನು ಕಡಿದು ಹಾಕುತ್ತಿದ್ದೆವು. ಕಡಿದು ಹಾಕಿದರೆ ಮಳೆಗಾಲದಲ್ಲಿಯಾದರೂ ಅವು ಜೀವ ಆಗುತ್ತಿದ್ದವು. ಈಗ ಇದಕ್ಕಿಂತ ಮುಂದೆ ಹೋಗಿ ಜೆಸಿಬಿ ಕಾರ್ಯಾಚರಣೆ ನಡೆಸಿ ಬೇರನ್ನೂ ಬಿಡುತ್ತಿಲ್ಲ. ಇಂತಹ ಪ್ರವೃತ್ತಿಯಿಂದ ನಾಶದಂಚಿಗೆ ತಲುಪುತ್ತಿರುವ ತಳಿಗಳೂ ಸೇರಿದಂತೆ ಸುಮಾರು 125 ಜಾತಿ ಅಮೂಲ್ಯ ಸಸ್ಯಗಳನ್ನು ಮತ್ತೆ ಚಾಲ್ತಿಗೆ ತರುವ ಕಾಯಕದಲ್ಲಿ ಮಂಜುನಾಥ ಗೋಳಿಯವರು ತೊಡಗಿಕೊಂಡಿದ್ದಾರೆ. 

ಅಂಗಳದ ಜೊತೆ ಸಸ್ಯಗಳೂ ನಾಪತ್ತೆ
ಕೆಲವು ಔಷಧೀಯ ಸಸ್ಯಗಳನ್ನು ಮನೆಯಂಗಳದಲ್ಲಿ ಧಾರಾಳವಾಗಿ ಬೆಳೆಯಬಹುದು. ಕೆಲವಂತೂ ತಾನಾಗಿ ಬೆಳೆಯುತ್ತವೆ. ಆದರೆ ಭದ್ರಮುಷ್ಟಿಯಂತಹ ಸಸ್ಯಗಳು ಅಂಗಳದಲ್ಲಿ ಹುಲ್ಲಿನಂತೆ ಬೆಳೆಯುತ್ತಿದ್ದರೆ ಈಗ ಮಣ್ಣಿನ ಅಂಗಳವನ್ನೇ ನಾಪತ್ತೆ ಮಾಡಿ ಕಾಂಕ್ರಿಟ್‌ ಅಂಗಳ ಮಾಡಿದ್ದರಿಂದ ಅಮೂಲ್ಯ ಸಸ್ಯಗಳನ್ನು ಕಣ್ಮರೆ ಮಾಡಿದ್ದೇವೆ. 

ಆಡುಸೋಗೆ, ಕಹಿಬೇವಿನ ಒಂದೆರಡು ಎಲೆಗಳನ್ನು ಹತ್ತು ದಿನಗಳಿಗೊಮ್ಮೆ ಬಳಸಬಹುದು ಎಂದರೆ ನಿಮಗೆ ಕೇಳಿದರೆ ಅಚ್ಚರಿಯಾಗಬಹುದು. ಇದರಲ್ಲಿ ಔಷಧೀಯ ಗುಣ ಅಧಿಕವಿದೆ. ಕಹಿಬೇವಿನ ಎಲೆಗಳನ್ನು ಹಾಕಿ ನೀರು ಕುದಿಸಿ ಸ್ನಾನ ಮಾಡಿದರೆ ತುರಿಕೆ, ಕಜ್ಜಿ ನಿಯಂತ್ರಣವಾಗುತ್ತದೆ. ಒಂದೆರಡು ಎಲೆಗಳನ್ನು ಆಹಾರ ಬೇಯಿಸುವಾಗ ಹಾಕಿದರೆ ಕಹಿಯೂ ಆಗುವುದಿಲ್ಲ. ಪಾಲಾಶದ ಚಿಗುರನ್ನು ಅಡುಗೆ ತಯಾರಿಸುವಾಗ ಹಾಕಬಹುದು. ಅತ್ತಿ ಮರದ ಚಿಗುರನ್ನು ತಂಬುಳಿ ಮಾಡುವುದಿದೆ. ಹಲಸಿನ ಒಂದೆರಡು ಎಲೆಗಳನ್ನು ಆಹಾರ ತಯಾರಿಸುವಾಗ ಹಾಕಿ ಬೇಯಿಸಿ ಅನಂತರ ಬಿಸಾಡಬಹುದು. ಇದು ಮಧುಮೇಹಕ್ಕೆ ಉತ್ತಮ. ಕಡುಬು ತಯಾರಿಸುವಾಗ ಹಲಸಿನ ಎಲೆಗಳ ಕೊಟ್ಟೆಯಿಂದ ತಯಾರಿಸುವುದು ಈಗಲೂ ಚಾಲ್ತಿಯಲ್ಲಿದೆ. ಆದರೆ ಬೇಯಿಸುವುದು ಮಾತ್ರ ಅತೀ ಕೆಟ್ಟ ಪಾತ್ರೆಗಳಲ್ಲಿ. 

ಗೆರಟೆಯೂ ಮದ್ದು
ತಿಮರೆಯನ್ನು ಸಾಧ್ಯವಾದಷ್ಟು ಬೇಯಿಸದೆ ಚಟ್ನಿ, ತಂಬುಳಿ ಮೂಲಕ ಸ್ವೀಕರಿಸಿದರೆ ಉತ್ತಮ, ಒಂದೆರಡು ಕುಡಿಗಳನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಇನ್ನೂ ಉತ್ತಮ. ಕೆಲವು ಜಾತಿ ಸಸ್ಯಗಳನ್ನು ಬೇಯಿಸಿದರೆ ಕೆಲವಂಶ ಲುಪ್ತವಾಗುವುದೇ ಹಸಿಯಾಗಿ ತಿನ್ನಲು ಕಾರಣ. ತಂಬುಳಿ ಮಾಡುವ ಕ್ರಮ ಬಂದದ್ದೇ ಇದಕ್ಕಾಗಿ. ಔಷಧೀಯ ಗುಣವಿರುವ ತೆಂಗಿನಕಾಯಿ ಚಿಪ್ಪನ್ನು (ಗೆರೆಟೆ) ನಿತ್ಯವೂ ಸಾರು/ಸಾಂಬಾರು/ ಅನ್ನದ ಜೊತೆ ಬೇಯಿಸಿ ಅದರ ಅಂಶವನ್ನು ಉಪಯೋಗಿಸಬಹುದು. ಹಿಂದೆ ಗೆರೆಟೆಯ ಸೌಟನ್ನು ಬಳಸುತ್ತಿದ್ದುದು, ದೊಡ್ಡ ಅಡುಗೆ ನಡೆಯುವಾಗ ಸಾರಿನ ಪಾತ್ರೆಗೆ ಹತ್ತಾರು ಗೆರೆಟೆಗಳನ್ನು ಹಾಕುತ್ತಿದ್ದುದು ಇದೇ ಹಿನ್ನೆಲೆಯಲ್ಲಿ.

ಮೇಲೆ ಸುಮಾರು 30 ಜಾತಿಗಳನ್ನು ಹೆಸರಿಸಲಾಗಿದೆ. ಇನ್ನೂ ನೂರು ಹೆಸರು ಕೊಡಬಹುದು. ಹಿಂದಿನ ಕಾಲದಲ್ಲಿ ನಾನಾ ಬಗೆಯ ಕೆತ್ತೆಗಳನ್ನು ಗಂಜಿ ಜೊತೆ ಬೇಯಿಸಿ ತಿನ್ನುತ್ತಿದ್ದರು. ಆಟಿ ತಿಂಗಳಲ್ಲಿ ದಿನಕ್ಕೊಂದರಂತೆ ಕೆತ್ತೆಯ ಗಂಜಿ ಮಾಡಿ ಉಣ್ಣುವ ಕ್ರಮವಿತ್ತು. ಪಟ್ಟಿಯಲ್ಲಿರುವ 30 ಬಗೆಯ ಜಾತಿಗಳನ್ನು ನಾಲ್ಕು ವಾರಗಳಲ್ಲಿ ಪಾಲುಮಾಡಿ ಪ್ರತಿ ಜಾತಿಯನ್ನು ಒಂದು ವಾರ ಬಳಸಬಹುದು ಅಥವಾ ವಾತ, ಪಿತ್ತ, ಕಫ‌ದ ಸ್ವಭಾವವನ್ನು ಪರಿಗಣಿಸಿ ವೈದ್ಯರ ಸಲಹೆಯಂತೆ ವರ್ಗೀಕರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ದ್ರವ್ಯಗುಣ ವಿಭಾಗದ ಸಂಶೋಧಕ, ಉಡುಪಿ ನಿಟ್ಟೂರಿನಲ್ಲಿ ಕೇವಲ ಹತ್ತು ಸೆಂಟ್ಸ್‌ ಜಾಗದಲ್ಲಿ (ಮನೆ ಸೇರಿ) ಹತ್ತಾರು ಗಿಡಮೂಲಿಕೆ, ತರಕಾರಿಗಳನ್ನು ಬೆಳೆಸಿರುವ ಡಾ| ಶ್ರೀಧರ ಬಾಯರಿ ಅವರು. ಸಾರ್ವಜನಿಕರಿಗೆ ಸಸ್ಯಗಳ ಪ್ರಯೋಜನದ ಬಗೆಗೆ ಒಂದು ಗಂಟೆ ಪ್ರಾಯೋಗಿಕ ತರಗತಿಯನ್ನು ಮನೆಯಲ್ಲೇ ನಡೆಸಿ ಕೊಡುವ ಇರಾದೆಯೂ ಅವರಿಗೆ ಇದೆ. 

ಶೇ.100 ಪೌಷ್ಟಿಕಾಂಶ ಸಿಗಬೇಕೆ?
ಕೆಲವು ಸಸ್ಯಗಳನ್ನು ಅನ್ನ/ಸಾಂಬಾರು/ಸಾರಿನ ಜೊತೆ ಬೇಯಿಸುವಾಗ ಹಾಕಿ ಕೊನೆಗೆ ಅದನ್ನು ಬಿಸಾಡಬಹುದು. ಸಹದೇವಿ, ನಾಗಾರ್ಜುನಿ, ತಿಮರೆ, ತುಂಬೆ, ನೆಲನೆಲ್ಲಿ, ಭದ್ರಮುಷ್ಟಿಗಳಂತಹ ಸಸ್ಯಗಳು ಬೇಸಗೆಯಲ್ಲಿ ಸಿಗುವುದಿಲ್ಲ. ಭೂಮಿಯಲ್ಲಿ ನೀರಿನ ಅಂಶವಿರುವಾಗ ತನ್ನಷ್ಟಕ್ಕೆ ಅವು ಬೆಳೆಯುತ್ತವೆ. ಇವುಗಳಿಗೆ ಹಣದ ಖರ್ಚು ಇಲ್ಲ. ಇವುಗಳ ಬಳಕೆಯಿಂದ ರುಚಿಯಲ್ಲೂ ವ್ಯತ್ಯಾಸವಾಗುವುದಿಲ್ಲ. ಯಾವುದನ್ನಾದರೂ ಮಣ್ಣಿನ ಮಡಕೆಯಲ್ಲಿ ಬೇಯಿಸಿ ತಿಂದರೆ ಶೇ. 100 ಪೌಷ್ಟಿಕಾಂಶಗಳು ದೇಹಕ್ಕೆ ಸೇರಿಕೊಳ್ಳುತ್ತವೆ. ಬೇರಾವುದೇ ಪಾತ್ರೆಗಳಲ್ಲಿ ಅಡುಗೆ ಮಾಡಿದರೂ ಶೇ.100 ಪೌಷ್ಟಿಕಾಂಶ ದೇಹಕ್ಕೆ ಸಿಗುವುದಿಲ್ಲ.

- ಮಟಪಾಡಿ ಕುಮಾರಸ್ವಾಮಿ


More News of your Interest

Trending videos

Back to Top