ರಂಜನಿ ಸ್ಮರಣೆಯ ಸಂಗೀತ ಸಾಂಗತ್ಯ


Team Udayavani, Oct 6, 2017, 2:26 PM IST

06-SAP-23.jpg

…ಕಳೆದ ವಾರದಿಂದ
ಸೆಪ್ಟೆಂಬರ್‌ 9ರಂದು ಯುಗಳ ಗಾಯನವನ್ನು ನಡೆಸಿಕೊಟ್ಟವರು ಚೆನ್ನೈನ ಕು| ಅನಾಹಿತಾ ಮತ್ತು 
ಕು| ಅಪೂರ್ವಾ.ಅವರದು ಏಕರೂಪವಾಗಿ ಧ್ವನಿಸುವ ಕಂಠಸಿರಿಯ ಹೊಂದಾಣಿಕೆ, ಒಳ್ಳೆಯ ಮನೋಧರ್ಮ! ಸಾಂಪ್ರದಾಯಿಕತೆಗೆ ಹೆಚ್ಚಿನ ಆದ್ಯತೆ ನೀಡುವ ಈ ಯುವತಿಯರು ವಸಂತ ರಾಗದ ವರ್ಣವನ್ನು ತಾಳದ ಗತಿಭೇದದೊಂದಿಗೆ ಹಾಡಿ ತಮ್ಮ ಕಛೇರಿಗೆ ಲವಲವಿಕೆಯ ನಾಂದಿ ಹಾಡಿದರು. ತುಸುವೇ ಸ್ವರ ಪ್ರಸ್ತಾರಗಳೊಂದಿಗೆ ಹಾಡಲಾರ ರೀತಿಗೌಳ (ಬಾಲೇ) ಮತ್ತು ರಾಗಮಾಲಿಕೆ (ನಿಖೀಲಲೋಕ ನಾಯಕಿ) ಹೃದ್ಯವಾಗಿದ್ದವು. ಕಲ್ಯಾಣಿ (ಸರಸಿಜಭವ) ಮತ್ತು ಕೀರವಾಣಿ (ಕಲಿಕಿಯುಂಡೇ ಕದಾ) ಪ್ರಧಾನ ರಾಗಗಳಾಗಿದ್ದವು. ಕು| ಅಪೂರ್ವಾ ಕಲ್ಯಾಣಿಯನ್ನು ಮತ್ತು ಕು| ಅನಾಹಿತಾ ಕೀರವಾಣಿಯನ್ನು  ಆಯಾ ರಾಗ ಭಾವಕ್ಕನುಗುಣವಾಗಿ, ಅನೇಕ ಸುಂದರ ಸಂಚಾರಗಳೊಂದಿಗೆ, ಅಲ್ಲಲ್ಲಿ ಜೀವಸ್ವರಗಳಲ್ಲಿ ಸುದೀರ್ಘ‌ವಾಗಿ ನಿಂತು ಹಿತವಾಗಿ ವಿಸ್ತರಿಸಿದರು. ವಯಲಾ ರಾಜೇಂದ್ರನ್‌ ಅವರ ನಾದಯುಕ್ತವಾದ ನುಡಿಸಾಣಿಕೆಯಲ್ಲಿ ಈ ಎರಡೂ ರಾಗಗಳು ಜೀವ ತುಂಬಿಕೊಂಡವು. ಮುಂದೆ ಕೃತಿ ನಿರೂಪಣೆ, ಸ್ವರ ವಿನಿಕೆಗಳು, “ಪೊರುತ್ತಂ’ಗಳು ದೋಷರಹಿತವಾಗಿದ್ದರೂ ಅದೇಕೋ ಹೊಸತನದ ಮಿಂಚು ಕಾಣಿಸಲಿಲ್ಲ.

ಗಾಯಕಿಯರ ಶೈಲಿಯನ್ನೇ ಅನುಸರಿಸಿದ ಮೃದಂಗ ವಿದ್ವಾನ್‌ ಸುನಾದಕೃಷ್ಣ ತನಿಯಲ್ಲಿ ತನ್ನ ವ್ಯಕ್ತಿತ್ವವನ್ನು ಸ್ಥಿರಪಡಿಸಿದರು. ಕಮಾಚ್‌(ನಾರೀಮಣಿ), ಕಾನಡಾ (ನಾ ನಿನ್ನ ಧ್ಯಾನ) ರಾಗಗಳಲ್ಲಿ ದೇವರನಾಮಗಳು ಮತ್ತು ಅಷ್ಟಪದಿಯ (ಲಲಿತ ಲವಂಗ) ಅನಂತರ ಬಿಂದುಮಾಲಿನಿಯ ಚುರುಕಾದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸೆಪ್ಟೆಂಬರ್‌ 10ರ ಇಳಿ ಹಗಲಿನಲ್ಲಿ ಶ್ರೀಮತಿದೇವಿ ಮೈಸೂರು ಇವರಿಂದ ಈ ಸರಣಿಯ ಏಕೈಕ ಹಿಂದುಸ್ತಾನಿ ಕಛೇರಿ ನಡೆಯಿತು. ಅನುಕೂಲಕರವಾದ ಕಂಠಸಿರಿ, ಸತತ ಪರಿಶ್ರಮ ಮತ್ತು ಅನುಭವದ ಪಕ್ವತೆ ಈ ಗಾಯಕಿಯದು! ಕರಾವಿದೆ ಮಾರು ಬಿಹಾಗ್‌ ಮತ್ತು ಕಲಾವತಿ ರಾಗಗಳನ್ನು ಮುಖ್ಯವಾಗಿ ಎತ್ತಿಕೊಂಡರು. ಇವುಗಳಲ್ಲಿ ದೀರ್ಘ‌ವಾದ ಆಲಾಪ್‌ಗ್ಳು ಇರಲಿಲ್ಲ. ಈ ಬಂದಿಶ್‌ಗಳನ್ನು ವಿಲಂಬಿತ್‌ ಮತ್ತು ಮಧ್ಯಕಾಲಗಳಲ್ಲಿ ತುಸುವೇ ಬೋಲ್‌ತಾನ್‌ ಮತ್ತು ತಾನ್‌ಗಳೊಂದಿಗೆ ಭಾವಪೂರ್ಣವಾಗಿ ಬೆಳೆಸಲಾಗಿ, ಈ ರಾಗಗಳ ಗುಂಗು ಕೇಳುಗರ ಕಿವಿಗಳಲ್ಲಿ, ಗುನುಗುವಿಕೆಯಲ್ಲಿ ಕೆಲಕಾಲ ಉಳಿಯುವಂತಾದದ್ದು ಕಲಾವಿದೆಯ ಸಾಧನೆಗೆ ಸಾಕ್ಷಿಯೆನಿಸಿತು. ಬೃಂದಾವನಿಯಲ್ಲಿ ಒಂದು ಮಾಧುರ್ಯಪೂರ್ಣವಾದ ಲಘು ಪ್ರಸ್ತುತಿ ಮತ್ತು ಮಿಶ್ರ ಪಹಾಡಿಯಲ್ಲಿ ಕರ್ಣರಂಜಕವಾದ ಭಜನ್‌ನೊಂದಿಗೆ ಈ ಕಛೇರಿ ಅಚ್ಚುಕಟ್ಟಾಗಿ ಸಮಾಪನಗೊಂಡಿತು. ಇವರಿಗೆ ಪ್ರಸಾದ್‌ ಕಾಮತ್‌ ಹಾರ್ಮೋನಿಯಂ, ಭಾರವಿ ದೇರಾಜೆ ತಬಲಾ ಸಾಥ್‌ ನೀಡಿದರು.

ಸೆ.7ರಂದು ಗಾತ್ರ ಸಂಗೀತವನ್ನು ಶ್ರುತಪಡಿಸಿದವರು ಎರ್ನಾಕುಳಂ ಹರಿಕೃಷ್ಣನ್‌; ದೈವದತ್ತವಾದ – ತ್ವರಿತಗತಿಯ ಸಂಚಾರಗಳಿಗೂ ಅನುಕೂಲಕರವಾಗಿ ಸ್ಪಂದಿಸಬಲ್ಲ ಉತ್ತಮವಾದ ಶಾರೀರ, ಮುಖದಲ್ಲಿ ಸದಾ ಹುರುಪು ಅವರದು!

ನಾಟಕುರಂಜಿ ವರ್ಣದೊಂದಿಗೆ ಗತ್ತಿನ ಆರಂಭ. ಗೌಳ (ತ್ಯಾಗರಾಜ ಪಾಲಯ) ಮತ್ತು ನೀಲಾಂಬರಿ (ನೀಕೇ ದಯರಾದು) ಕೃತಿಗಳು ನಿಧಾನಗತಿಯಲ್ಲಿದ್ದು, ಆಯಾ ರಾಗಗಳ ಸೊಗಸನ್ನು ಆಸ್ವಾದಿಸಲು ಸಮಯಾವಕಾಶ ಕಲ್ಪಿಸಿದವು. ದೇವಮನೋಹರಿ (ಕನ್ನ ತಲ್ಲಿ) ಕೃತಿಯ ಅನಂತರ ಗಾಯಕರು, ಬಹುಶ್ರುತವಲ್ಲದ ರಾಮಪ್ರಿಯ (ಮಾತಂಗಿ) ಕೃತಿಯನ್ನು ಲೋಪದೋಷಗಳಿಲ್ಲದ ಆಲಾಪನೆ, ನೆರವಲ್‌ ಮತ್ತು ಸ್ವರ ಚಮತ್ಕಾರಗಳಿಂದ ಸಿಂಗರಿಸಿದರು. ಪ್ರಧಾನ ರಾಗ ತೋಡಿ (ದಾಚುಕೋವಾಲ) ಸುದೀರ್ಘ‌ವಾದ ರಾಗ, ನೆರವಲ್‌, ಸ್ವರ ವಿಸ್ತಾರಗಳ ಸಹಿತ ಮೂಡಿಬಂತು. ಮೃದಂಗ ಸಹವಾದಕ ಸಜಿನ್‌ಲಾಲ್‌ ಝಂಪೆ ತಾಳದ ತನಿ ಆವರ್ತನದಲ್ಲಿ ಒಳ್ಳೆಯ ಲಯಗಾರಿಕೆಯನ್ನು ಪ್ರದರ್ಶಿಸಿದರು.

ವಯಲಿನ್‌ ಸಹವಾದಕ ಗೋಕುಲ್‌ ಪ್ರಧಾನ ಕೃತಿಗಳ ಆರೈಕೆಯ ಎಲ್ಲ ಹಂತಗಳಲ್ಲೂ ತಮ್ಮ ನುಡಿಸಾಕಣಿಕೆಯಲ್ಲಿ ತಮ್ಮದೇ ಆದ ಸ್ವಂತಿಕೆಯನ್ನು ನಿರೂಪಿಸಿದರು.

ಸೆ.5ರಂದು ಬೆಂಗಳೂರಿನ ರಮಣ ಬಾಲಚಂದ್ರನ್‌ ಅವರಿಂದ ವೀಣಾವಾದನ. ಸಾಂಪ್ರದಾಯಿಕತೆಯಲ್ಲಿ ಅಚಲವಾಗಿರುವ ಈ ಕಿಶೋರ ನಾಟಿ ರಾಗದ ಪ್ರಸ್ತುತಿಯ ಅನಂತರ ಸಾಮ (ಶಾಂತಮುಲೇಕ) ರಾಗವನ್ನು ಎತ್ತಿಕೊಂಡು, ಕರುಣಾರಸ ಪ್ರಧಾನವಾದ ಭಾವಕ್ಕನುಗುಣವಾಗಿ ಅರಳಿಸಿದರು. ಮಾಧುರ್ಯಪೂರ್ಣ ಸುರಟಿ (ವೇಗನೀವು), ಮನೋರಂಜನಿ (ಅಟುಕಾರ) ಕೃತಿಗಳ ಅನಂತರ ಪ್ರಧಾನವಾಗಿ ಭೈರವಿ (ಬಾಲಗೋಪಾಲ) ಕೃತಿಯನ್ನು ಅನಗತ್ಯ ಕಸರತ್ತುಗಳಿಲ್ಲದೆ ಶುದ್ಧವಾದ ರಾಗಪೋಷಣೆ, ಸ್ವರಕಲ್ಪನೆಗಳೊಂದಿಗೆ ನುಡಿಸಿದರು.

ಗೋರಖ ಕಲ್ಯಾಣ್‌ (ನುಡಿದರೆ) ವಚನ ಮತ್ತು ಮಣಿರಂಗು (ಜಯಜಯ) ಉತ್ಸವ ಸಂಪ್ರದಾಯದ ಕೀರ್ತನೆಯೊಂದಿಗೆ ಕಛೇರಿ ಸಂಪನ್ನಗೊಂಡಿತು. ಮೃದಂಗದಲ್ಲಿ ನಿಕ್ಷಿತ್‌ ಪುತ್ತೂರು ಮತ್ತು ಖಂಜಿರದಲ್ಲಿ ಸುಮುಖ ಕಾರಂತ ಒಳ್ಳೆಯ ಸಹವಾದನವನ್ನು ನೀಡಿದ್ದಾರೆ.

ಸೆ.10ರಂದು ವೇಣುವಾದನವು ಚೆನ್ನೈಯ ಕು| ಶಾಂತಲಾ ಸುಬ್ರಹ್ಮಣ್ಯ ಅವರಿಂದ ನಡೆಯಿತು. ನುಡಿಸುವಿಕೆಯಲ್ಲಿ ಚೂರೂ ಪಿಸಿರಿಲ್ಲದ ಶುದ್ಧತೆ, ಅಖಂಡತೆ, ರಾಗ, ಲಯಗಳ ಮೇಲಿನ ಹಿಡಿತ ಅವರದು! ತಿರುವನಂತಪುರಂ ಸಂಪತ್‌ ಅವರ ವಯಲಿನ್‌ ಸಹವಾದನವೂ ಧನಾತ್ಮಕವಾಗಿದ್ದು ಈ ಕಛೇರಿ ಒಳ್ಳೆ ಗತ್ತಿನಿಂದ ವಿಜೃಂಭಿಸಿತು.

ದರ್ಬಾರ್‌ ವರ್ಣದ ಅನಂತರ ಮೋಹನ (ಎವಿಕುರಾ) ಮತ್ತು ಚಂದ್ರಜೋತಿ (ಬಾಗಾಯನಯ್ಯ) ಅಚ್ಚುಕಟ್ಟಾದ ರಾಗ, ಸ್ವರ ಹಂದರಗಳೊಂದಿಗೆ ಪ್ರಸ್ತುತಗೊಂಡವು. ದೇವಾಮೃತವರ್ಷಿಣಿ (ಎವರನಿ) ತ್ವರಿತಗತಿಯ ಕೃತಿಯ ಬಳಿಕ ನುಡಿಸ ಲಾದ ಪ್ರಧಾನ ರಾಗ ಕೀರವಾಣಿ (ಕಲಿಗಿಯುಂಡೇ) ರಾಗದ ಗರಿಷ್ಠ ಸಾಧ್ಯತೆಗಳನ್ನು ಅನ್ವೇಷಿಸುತ್ತ ಸಾಗಿತು. ಕೊಳಲಿಗೆ ಸರಿಸಮಾನ ವಾಗಿ ಸಂಪತ್‌ ಉತ್ಕೃಷ್ಟವಾಗಿ ರಾಗವನ್ನು ಬೆಳೆಸಿದ್ದಾರೆ. ಈ ಇಡೀ ಪ್ರಸ್ತುತಿ ತೂಕದ್ದಾಗಿದ್ದು ರಸಿಕರ ಮೆಚ್ಚುಗೆಯನ್ನು ಪಡೆಯಿತು.

ರಾಗಗಳ ಲಕ್ಷಣ ಮತ್ತು ಸ್ವರೂಪಗಳಿಗೆ ಅನುಗುಣವಾಗಿ ಮೃದುವಾಗಿ ಮೃದಂಗ ನುಡಿಸಿದ ಪಾಲಾ^ಟ್‌ ಮಹೇಶ್‌ಕುಮಾರ್‌ ತನಿ ಆವರ್ತನದಲ್ಲಿ ನಡೆವೈವಿಧ್ಯಗಳಿಂದ ಮಿಂಚಿದ್ದಾರೆ.

ಸೆಪ್ಟೆಂಬರ್‌ 12ರಂದು ಪರ್ಕಳದ “ಸರಿಗಮ ಭಾರತಿ’ ಸಭಾಂಗಣದಲ್ಲಿ, ಉಡುಪಿಯ “ರಾಗಧನ’ ಸಂಸ್ಥೆಯ ವತಿಯಿಂದ “ರಂಜನಿ ಸಂಸ್ಮರಣೆ’ಯಲ್ಲಿ ಒಂದು ಉತ್ತಮವಾದ ಕಛೇರಿ ನಡೆಯಿತು. ಇದನ್ನು ನಡೆಸಿಕೊಟ್ಟವರು ಚೆನ್ನೈನ ಕು| ಸಹನಾ ಸಾಮ್ರಾಜ್‌. ಹಸನ್ಮುಖೀಯಾದ ಈ ಗಾಯಕಿಯ ಶಾರೀರದಲ್ಲಿ ಎಳೆತನದ ಮಾರ್ದವತೆ ಮತ್ತು ಅನುರಣನೆಯ ಸಖ್ಯವಿತ್ತು. ಸುಟವಾಗಿ ಧ್ವನಿಸುವ “ಅ’ಕಾರಗಳು ಇವರ ಪ್ರಸ್ತುತಿಗಳಿಗೆ ಹೆಚ್ಚಿನ ಅಂದವನ್ನು ನೀಡಿದವು.

ರಂಜನಿ ವರ್ಣದ ಅನಂತರ ಚುಟುಕಾದ ಸ್ವರವಿನಿಕೆಗಳಿದ್ದ ನಾಟ ರಾಗದ ಕೃತಿ (ಜಯ ಜಾನಕೀಕಾಂತ) ಮುಂದಿನ ಕಛೇರಿಗೆ ಗಟ್ಟಿಯಾದ ಬುನಾದಿಯನ್ನು ಒದಗಿಸಿತು. ಕೇದಾರ (ರಂಗನಾಥನ) ಮತ್ತು ಪರಜ್‌ (ತ್ರಿಲೋಕಮಾತೆ) ರಚನೆಗಳು ಉತ್ತಮವಾಗಿ ಕೇಳಿಸಿಕೊಂಡವು.

ಪಂತುವರಾಳಿಯ ಲಕ್ಷಣಯುತವಾದ ರಾಗವಿಸ್ತಾರ, ಕೃತಿ ನಿರೂಪಣೆ, (ಅಪರಾಮಭಕ್ತಿ) ನೆರವಲ್‌, ಸ್ವರ ಜೋಡಣೆಗಳು ಮತ್ತು ಮುಕ್ತಾಯಗಳು ಈ ಘನವಾದ ರಾಗಕ್ಕೆ ಮತ್ತು ಪ್ರಸ್ತುತಿಗೆ ನ್ಯಾಯ ಒದಗಿಸಿದವು. ಶಂಕರಾಭರಣದಲ್ಲಿ ಸುಂದರವಾದ ರಾಗ ಹಂದರಗಳನ್ನು ನಿರ್ಮಿಸಿದ ಗಾಯಕಿ, ಹೃದ್ಯವೆನಿಸುವ ಹತ್ತಾರು ಸಂಗತಿಗಳಿಂದ ಅಲಂಕೃತವಾದ ಕೃತಿ ಯನ್ನು (ಪೋಗದಿರೆಲೋ) ನಿರೂಪಿಸಿದರು. “ಪ್ರಧಾನ ರಾಗ’ ಎನ್ನುವ ನೆಲೆ ಯಲ್ಲಿ ಈ ಕೃತಿಗೆ ಒದಗಿಸಲಾದ ನೆರವಲ್‌ ಮತ್ತು ಸ್ವರಕಲ್ಪನೆಗಳು ತುಸುವೇ ಕಡಿಮೆಯಾಯಿತೇನೋ ಎನ್ನುವ ಭಾವನೆ ಶ್ರೋತೃಗಳ ಮನದಲ್ಲಿ ಮೂಡಿತ್ತು.

ವಿಜಯಗಣೇಶ್‌ ಅವರು ನುಡಿಸಿದ ಪಂತುವರಾಳಿ ಮತ್ತು ಶಂಕರಾಭರಣ ರಾಗಗಳು ಉನ್ನತಮಟ್ಟದ್ದಾಗಿದ್ದು, ಬಿಲ್ಲುಗಾರಿಕೆಯಲ್ಲಿ ಅವರ ನೈಪುಣ್ಯಕ್ಕೆ ಸಾಕ್ಷಿ ನೀಡಿದವು. ಸುನಾದಕೃಷ್ಣ ಮೃದುವಾಗಿ ಮೃದಂಗ ಸಹಕಾರ ನೀಡಿದ್ದಾರೆ.
ಕೆಲವು ದೇವರನಾಮಗಳೊಂದಿಗೆ ಕಛೇರಿ ಕೊನೆಗೊಂಡಿತು.

ಸರೋಜಾ ಆಚಾರ್ಯ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.