ಕಾಣೆಯಾಗುವ ಮೀನು!


Team Udayavani, Nov 18, 2017, 11:32 AM IST

3-a.jpg

ಮತ್ಸ್ಯ ಕ್ಷಾಮ! ಭೂಮಿ ಮೇಲೆ ಚಿನ್ನ, ಪೆಟ್ರೋಲು, ಜೀವಜಲಕ್ಕೆ ಬರ ಬರುವ ಹಾಗೆ, ಸಮುದ್ರದೊಳಗಿನ ಮೀನನ್ನೂ ಕ್ಷಾಮ ಕಾಡುತ್ತದೆ. ಈಗಿನ ನವೆಂಬರ್‌ ತಿಂಗಳು ಅನೇಕ ಜಾತಿಯ ಮೀನುಗಳು ಸಂತತಿಯನ್ನು ಉತ್ಪಾದಿಸುತ್ತಿರುತ್ತವೆ. ಸೀಗಡಿ ಗರ್ಭ ಧರಿಸುವುದು ಸೆಪ್ಟೆಂಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ. ಜನಪ್ರಿಯ “ಕಾಣೆ ಮೀನು’ ಕೂಡ ಇದೇ ಅವಧಿಯಲ್ಲಿಯೇ ಪ್ರಗ್ನೆಂಟ್‌ ಆಗುತ್ತದೆ. ಆದರೂ ಈ ಮೀನುಗಳೆಲ್ಲ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಬಿಕರಿಗೊಳ್ಳುತ್ತಿವೆ…

ಇದನ್ನೆಲ್ಲ ನೋಡಬಾರದೆಂದೇ ಮುಡೇìಶ್ವರದ 123 ಅಡಿ ಎತ್ತರದ ಶಿವ, ಸಮುದ್ರಕ್ಕೆ ಬೆನ್ನು ಹಾಕಿಕುಳಿತಿದ್ದ. ಉಪ್ಪಿನ ನೀರಿನಲ್ಲಿ ಇಪ್ಪತ್ತು ಮೈಲು ಸಾಗಿ ಬಂದ ದೋಣಿ, ಹೈವೋಲ್ಟೆಜ್‌ ದೀಪಗಳನ್ನು ಆಳಕ್ಕೆ ಇಳಿಬಿಟ್ಟು, ಬಲೆ ಹಾಸಿತ್ತು. ಕೆಲ ಹೊತ್ತಿನಲ್ಲೇ ಸೀಗಡಿ (ಪ್ರಾನ್ಸ್‌) ಮೀನುಗಳು ಬಲೆಗೆ ಬಿದ್ದವು. ಒದ್ದಾಡುತ್ತಿದ್ದ ಒಂದು ಮೀನನ್ನು ಎತ್ತಿಕೊಂಡ ಒಬ್ಬ ಬೆಸ್ತ, ತನ್ನ ತೋರು ಬೆರಳಿಂದ ಅದರ ಹೊಟ್ಟೆ ಸವರಿದ. ಅದು ಉಬ್ಬಿದಂತಿತ್ತು. ಹೊಟ್ಟೆಯೊಳಗೆ ಅಸಂಖ್ಯ ಮೊಟ್ಟೆ ಇಟ್ಟುಕೊಂಡು, ತಮ್ಮ ಸಂತತಿ ಸಾವಿರವಾಗಿ, ಲಕ್ಷವಾಗಿ ಸಾಗರದ ತುಂಬಾ ಚದುರುವ ದಿನವನ್ನು ಆ ಒಂದೊಂದು ಸೀಗಡಿಗಳೂ ಕನಸು ಕಟ್ಟಿಕೊಂಡಿದ್ದವು. ಈ ಗರ್ಭಿಣಿ ಮೀನುಗಳನ್ನು ಮತ್ತೆ ನೀರಿಗೆ ಬಿಡೋಣವೆಂದರೆ, ಬೆಸ್ತನಿಗದುವೇ ಹೊಟ್ಟೆಪಾಡು. ಸಾವಿರಾರು ಕಿಲೋ ಸೀಗಡಿಗಳನ್ನು ತುಂಬಿಕೊಂಡ ದೋಣಿ ದಡದ ಕಡೆಗೆ ಹೊರಟಿತ್ತು.

ಬೆಂಗಳೂರಿನ ಸ್ಟಾರ್‌ ಹೋಟೆಲ್ಲಿನ ಸ್ಟಾರ್‌ ಬಾಣಸಿಗನ ಬಾಣಲೆಯ ಎದುರು ಅದೇ ಸೀಗಡಿ, ಫ್ರೈ ಆಗುತ್ತಿತ್ತು. ಒಂದು ದಿನದ ಹಿಂದೆ ಉಪ್ಪು ನೀರಿನಲ್ಲಿ ಈಜುತ್ತಿದ್ದ ಮೀನು, ಈಗ ಎಣ್ಣೆಯಲ್ಲಿ ತೇಲುತ್ತಾ, ಲೋಕ ಮರೆತಿತ್ತು. ಉಪ್ಪು- ಮಸಾಲೆ ಮೈಗೆ ಮೆತ್ತಿಕೊಂಡು ಅದರ ರೂಪವೇ ಬದಲಾಗಿತ್ತು. ಆರ್ಡರನ್ನು ಕಾದು ಕುಳಿತಿದ್ದ, ದಂಪತಿಯ ಟೇಬಲ್ಲಿನ ಮೇಲೆ ಬಿಸಿಬಿಸಿಯಾಗಿ ಸೀಗಡಿ ಫ್ರೈ ಬಂದಾಗ, ಗಂಡ ಹೇಳುತ್ತಿದ್ದ; “ಗರ್ಭಿಣಿ ಆಗಿದ್ದೀ… ಹೊಟ್ಟೆ ತುಂಬಾ ಪ್ರಾನ್ಸ್‌ ತಿನ್ಬೇಕು ಅಂತಿದ್ದೀಯಲ್ಲ, ಇವತ್ತು ನಿನ್ನ ಬಯಕೆಯನ್ನು ಈಡೇರಿಸಿಕೋ…’!

ಆ ಮಂಗಳೂರು, ಈ ಬೆಂಗಳೂರನ್ನು ದಾಟಿ, 1992ನೇ ಇಸವಿಯ ಕೆನಡಾಕ್ಕೆ ನಡೆಯೋಣ. ಅದು ಕೆನಡಾಕ್ಕೆ 125ನೇ ವರ್ಷಾಚರಣೆ. ಯಾವುದೇ ಸಂಭ್ರಮಚಾರಣೆ ವೇಳೆ ಪೆಸಿಫಿಕ್‌ ಸಾಗರದ “ಕಾಡ್‌’ ಮೀನಿನ ಖಾದ್ಯವಿಲ್ಲದಿದ್ದರೆ, ಅದು ಕೆನಡಿಯನ್ನರಿಗೆ ಪಾರ್ಟಿಯೇ ಆಗಿರುವುದಿಲ್ಲ. ಸಾಮಾನ್ಯ ಜನರಿಗಿರಲಿ, ಅಂದು ಸಚಿವ ಸಂಪುಟದ ಪಾರ್ಟಿಗೂ ಕಾಡ್‌ ಮೀನು ರವಾನೆ ಆಗಿರಲಿಲ್ಲ. ಆಗಿನ ಮೀನುಗಾರಿಕೆ ಸಚಿವ ಜಾನ್‌ ಕ್ರಾಸ್‌ ಬೀ ಅಂದು ತಲೆತಗ್ಗಿಸಿ ಹೇಳಿದ್ದರು; “ಇವತ್ತು ಮಾತ್ರವಲ್ಲ, ಇನ್ನೆರಡು ವರ್ಷ ಕೆನಡಿಯನ್ನರು ಕಾಡ್‌ ಮೀನಿನ ಆಸೆ ಬಿಡೋದು ಒಳ್ಳೇದು. ಪೆಸಿಫಿಕ್‌ನಲ್ಲಿ ಕಾಡ್‌ ಮೀನುಗಳೇ ಸಿಗುತ್ತಿಲ್ಲ’! ಬರೋಬ್ಬರಿ ಎರಡು ವರ್ಷ ಕಾಡ್‌ ಮೀನುಗಾರಿಕೆಯನ್ನು ನಿಷೇಧಿಸಿ, ಕೆನಡಾ ಆ ಸಂತತಿಯನ್ನು ಮರು ಉತ್ಪಾದಿಸಿತ್ತು! 

ಮತ್ಸ್ಯ ಕ್ಷಾಮ! ಭೂಮಿ ಮೇಲೆ ಚಿನ್ನ, ಪೆಟ್ರೋಲು, ಜೀವಜಲಕ್ಕೆ ಬರ ಬರುವ ಹಾಗೆ, ಸಮುದ್ರದೊಳಗಿನ ಮೀನನ್ನೂ  ಕ್ಷಾಮ ಕಾಡುತ್ತದೆ. ಮೀನುಗಳು ಗರ್ಭ ಧರಿಸಿದ ಕಾಲದಲ್ಲಿ, ಮರಿ ಮಾಡಿದ ಅವಧಿಯಲ್ಲಿ ಮೀನುಗಾರಿಕೆ ನಡೆಸಿದರೆ, ಈ ಸಮಸ್ಯೆ ತಲೆದೋರುತ್ತದೆ. ನಮ್ಮ ಕರಾವಳಿಯಲ್ಲಿ ಮತ್ಸ್ಯ ಸಂತತಿಯನ್ನು ರಕ್ಷಿಸಲೆಂದೇ ವರ್ಷದಲ್ಲಿ 60 ದಿನ, ಮೀನುಗಾರಿಕೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಮಾನ್ಸೂನ್‌ ವೈಪರಿತ್ಯಗಳನ್ನು ಆಧರಿಸಿ, ಜೂನ್‌- ಜುಲೈ- ಆಗಸ್ಟ್‌ನಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯುವುದಿಲ್ಲ. ಈ “ಸ್ಥಗಿತ ಕಾಲ’ದಲ್ಲಿ ಬಂಗುಡೆ, ಬೂತಾಯಿಯಂಥ ಜನಸಾಮಾನ್ಯರು ಇಷ್ಟಪಡುವ ಮೀನುಗಳು ಸಂತತಿಯನ್ನು ಉತ್ಪಾದಿಸುತ್ತಿರುತ್ತವೆ.

ಆದರೆ, ಸಮುದ್ರವೆಂದರೆ ಕೇವಲ ಬಂಗುಡೆ, ಬೂತಾಯಿ ಕಣಜವಷ್ಟೇ ಅಲ್ಲ. ಬೇರೆ ಮೀನುಗಳೂ ಅಲ್ಲಿ ವಾಸ ಇವೆ. ಈಗಿನ ನವೆಂಬರ್‌ ತಿಂಗಳು ಅನೇಕ ಜಾತಿಯ ಮೀನುಗಳು ಸಂತತಿಯನ್ನು ಉತ್ಪಾದಿಸುತ್ತಿರುತ್ತವೆ. ಸೀಗಡಿ ಗರ್ಭ ಧರಿಸುವುದು ಸೆಪ್ಟೆಂಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ. ಜನಪ್ರಿಯ “ಕಾಣೆ ಮೀನು’ ಕೂಡ ಇದೇ ಅವಧಿಯಲ್ಲಿಯೇ ಪ್ರಗ್ನೆಂಟ್‌ ಆಗುತ್ತದೆ. ಬರ್ರಾಮುಂಡಿ ಮೀನು ತನ್ನ ಲಕ್ಷಾಂತರ ಪುಟ್ಟಪುಟ್ಟ ಮರಿಗಳೊಂದಿಗೆ ಮೀನುಗಾರನ ಬಲೆಗೆ ಸೆರೆಯಾಗುತ್ತದೆ. ಈಗಷ್ಟೇ ಮೊಟ್ಟೆಯನ್ನು ಮರಿಯಾಗಿಸಿ, ಸುಧಾರಿಸಿಕೊಳ್ಳುತ್ತಿರುವ ಕೊಬಿಯಾ ಮೀನು, ಬಲೆಯಲ್ಲಿ ಕಣ್ಮುಚ್ಚಿ, ಸ್ಟಾರ್‌ ಹೋಟೆಲ್ಲುಗಳಲ್ಲಿ ಖಾದ್ಯವಾಗುತ್ತದೆ. ಅದರ ಮರಿಗಳೆಲ್ಲ ಬಿಸಿಲಿಗೆ ಒಣಗಿ, ತೆಂಗಿನ ಮರದ ಬುಡಕ್ಕೆ ಗೊಬ್ಬರವಾಗುತ್ತದೆ. ಕೋಳಿಗೆ ಆಹಾರವಾಗುತ್ತದೆ. ಈಗಾಗಲೇ ಅವಸಾನದ ಅಂಚಿನಲ್ಲಿರುವ “ಬಾಂಬೆ ಡಕ್‌’ ಮೀನು ಗರ್ಭ ಧರಿಸುವುದು ಕೂಡ ಚಳಿಗಾಲದಲ್ಲಿಯೇ. ಅಂಜಲ್‌ ಮೀನು ಕೂಡ ಇದೇ ಹೊತ್ತಿನಲ್ಲಿಯೇ ಮೊಟ್ಟೆಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುತ್ತದೆ. ಆದರೆ, ಮೀನು ಹಿಡಿಯುವವರು ಇದನ್ನೆಲ್ಲ ಪರೀಕ್ಷಿಸುತ್ತಾ ಕೂರುತ್ತಾರೆಯೇ? ಅವರಿಗೆ ಹೊಟ್ಟೆಪಾಡು!

ಟ್ರ್ಯಾಜಿಡಿ ಆಫ್ ಕಾಮನ್ಸ್‌!
ಎಲ್ಲರಿಗೂ ಸೇರಿದ ಸಂಪತ್ತು, ಎಲ್ಲರೂ ಯಥೇಚ್ಚ ಬಳಸುತ್ತಾರೆ, ಹಾಗೆ ಬಳಸಿ ಬಳಸಿ ಕೊನೆಗೆ ಯಾರಿಗೂ ಸಿಗದೇ ಹೋಗುವ ಸ್ಥಿತಿಯೇ “ಟ್ರ್ಯಾಜಿಡಿ ಆಫ್ ಕಾಮನ್ಸ್‌’. ಮೀನುಗಳೂ ಇದೇ ದುರಂತಕ್ಕೆ ಸಾಕ್ಷಿ ಆಗುತ್ತಿವೆ ಎಂಬ ಆತಂಕದ ವ್ಯಾಖ್ಯಾನ ಪರಿಸರ ತಜ್ಞ ಎನ್‌.ಎ. ಮಧ್ಯಸ್ಥ ಅವರದು. “ಮೀನಿನ ಸಂತಾನೋತ್ಪತ್ತಿ ಕಾಲದಲ್ಲಿ ಅವುಗಳನ್ನು ಹಿಡಿದರೂ ಪುನಃ ಸಮುದ್ರಕ್ಕೆ ಬಿಡಬೇಕು. ಆದರೆ, ಇಂದು ಯಾರೂ ಹಾಗೆ ಮಾಡುವುದಿಲ್ಲ. ಇದು ವರ್ತಮಾನ ಕೇಂದ್ರಿತ ಮನೋವೃತ್ತಿ. ದುಡ್ಡಿನ ಆಸೆಗೆ, ನಮ್ಮ ನಾಳೆಗಳನ್ನು ಮಾರಿಕೊಳ್ಳುತ್ತಿದ್ದೇವೆ’ ಎನ್ನುತ್ತಾರವರು.

ಇದಕ್ಕೆ ಪೂರಕವಾಗಿ ಅವರು ಒಂದು ಘಟನೆ ಉಲ್ಲೇಖೀಸುತ್ತಾರೆ. 80ರ ದಶಕದಲ್ಲಿ ಅಮೆರಿಕದಲ್ಲಿ ಮೀನುಗಳ ಸಂಖ್ಯೆ ಗಣನೀಯವಾಗಿ ತಗ್ಗಿತ್ತು. ಇದಕ್ಕೆಲ್ಲ ಜಲಮಾಲಿನ್ಯವೇ ಕಾರಣವೆಂದು ಸಮುದ್ರದ ದಡದಲ್ಲಿರುವ ಕಾರ್ಖಾನೆಗಳ ವಿರುದ್ಧ ಪರಿಸರವಾದಿಗಳೆಲ್ಲ ಪ್ರತಿಭಟಿಸಿದ್ದರು. ಫ್ಯಾಕ್ಟರಿಗಳನ್ನು ಮುಚ್ಚಿಸಬೇಕೆಂಬ ಒತ್ತಾಯವೂ ಆ ವೇಳೆ ಧ್ವನಿಸಿತು. ಆಗ ಅಮೆರಿಕ ಸರ್ಕಾರ ಒಂದು ಸಮಿತಿ ರಚಿಸಿತು. ಅದರಲ್ಲಿ ಮೀನುಗಾರರೂ ಇದ್ದರು. ವಾಸ್ತವ ಗೊತ್ತಾಗಿದ್ದು ಆಗಲೇ… ಮೀನುಗಳು ನಾಶವಾಗಿದ್ದು, ಫ್ಯಾಕ್ಟರಿಗಳಿಂದಲ್ಲ, ಮಿತಿಮೀರಿದ ಮೀನುಗಾರಿಕೆಯಿಂದ ಅಂತ. ಅದೇ ವರ್ಷವೇ ಅರ್ಧದಷ್ಟು ಬೋಟ್‌ಗಳ ಲೈಸೆನ್ಸ್‌ ಅನ್ನು ಸರ್ಕಾರ ಅನರ್ಹಗೊಳಿಸಿತು. 

ಆದರೆ, ಇಂದು ಅಮೆರಿಕ ಮಾತ್ರವಲ್ಲ ಬಹುತೇಕ ದೇಶಗಳನ್ನು ಮಿತಿಮೀರಿದ ಮೀನುಗಾರಿಕೆ ತಲೆನೋವಾಗಿ ಪರಿಣಮಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಇಂದು ಮೀನುಗಳೇ ಸಿಗುತ್ತಿಲ್ಲವೆಂಬ ಆತಂಕ ಕಾಡಿದೆ. ಚೀನಾ ಮಾಂಸಾಹಾರಿಗಳಿಗೆ ಇಂದು ಸಕಾಲದಲ್ಲಿ ಮೀನುಗಳೇ ಸಿಗುತ್ತಿಲ್ಲ. ಅದೇ ಸ್ಥಿತಿ, ನಮ್ಮ ಮಂಗಳೂರಿಗೆ, ನಮ್ಮ ಕಾರವಾರಕ್ಕೆ, ಈ ಮತ್ಸೋದ್ಯಮವನ್ನೇ ನಂಬಿರುವ ಇಡೀ ಕರ್ನಾಟಕಕ್ಕೆ ಮುಂದೊಂದು ಎದುರಾದರೂ ಅಚ್ಚರಿಯಿಲ್ಲ.

ಆತಂಕಕಾರಿ “ಬುಲ್‌ ಟ್ರಾಲ್ಸ್‌ ‘
ಕಡಲಲ್ಲಿ ಮೀನು ಹಿಡಿಯುವಾಗ ಕನಿಷ್ಠ 30 ಎಂ.ಎಂ. ಗಾತ್ರದ ಬಲೆಗಳನ್ನು ಬಳಸಬೇಕೆಂಬ ಕಾನೂನಿದೆ. ಆದರೆ, ಅನೇಕರು 16 ಎಂ.ಎಂ. ಬಲೆಗಳೊಂದಿಗೆ ಬುಲ್‌ ಟ್ರಾಲ… ಮೀನುಗಾರಿಕೆಯ ಮೊರೆ ಹೋಗುತ್ತಿ¨ªಾರೆ ಎಂಬ ಕೂಗು ಉಡುಪಿ ಜಿಲ್ಲೆಯ ಮಲ್ಪೆ ಭಾಗದಲ್ಲಿ ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಹಸಿರು ಬಣ್ಣದ ಹೈವೋಲ್ಟೆàಜ್‌ ದೀಪಗಳನ್ನು ಬಳಸಿಕೊಂಡು, ರಾತ್ರಿ ವೇಳೆ ನಡೆಯುವ “ಬುಲ್‌  ಟ್ರಾಲ್‌ ‘ ಮೀನುಗಾರಿಕೆ ಅತ್ಯಂತ ಅಪಾಯಕಾರಿ. ದೊಡ್ಡ ಗಾತ್ರದ ಮೀನುಗಳೊಂದಿಗೆ, ಮರಿಮೀನುಗಳನ್ನೂ ಇದು ಸೆರೆಹಿಡಿಯುತ್ತದೆ. ಹಾಗೆ ಸೆರೆಹಿಡಿದ ಮರಿಗಳನ್ನು ಒಣಗಿಸಿ, ಫಿಶ್‌ ಮೀಲ್ಸ…ಗೆ ಕೊಡುತ್ತಾರೆ. ಅದರ ಹುಡಿಯನ್ನೇ ಅಡಕೆ- ತೆಂಗಿನ ಮರದ ಬುಡಕ್ಕೆ ಗೊಬ್ಬರವನ್ನಾಗಿಸುತ್ತಾರೆ. ಮೊದಲೆಲ್ಲ ಶೇ.7ರ ಪ್ರಮಾಣದಲ್ಲಿ ಸಣ್ಣ ಮೀನುಗಳು ಬಲೆಗೆ ಬೀಳುತ್ತಿದ್ದವು. ಆದರೆ, ಈಗ ಈ ಪ್ರಮಾಣ ಶೇ.30 ದಾಟಿದೆ.

ಮರಿಗಳನ್ನು ಸಾಯಿಸಿದರೂ ನಷ್ಟವೇ…
ವಿದೇಶಕ್ಕೆ ರಫ್ತಾಗುವ ಪಾಪ್ಲೆಟ್‌, ಅಂಜಲ್‌, ಬಂಗುಡೆ ಮರಿಗಳು ಕೇವಲ 25 ಗ್ರಾಮ್‌ ತೂಗುತ್ತವೆ. ಇವು 1 ಕಿಲೋಗೆ ಕೇವಲ 10 ರೂ.ಗೆ ಬಿಕರಿಗೊಳ್ಳುತ್ತವೆ. ಅದೇ ಮೀನುಗಳನ್ನು ದೊಡ್ಡ ಆಗಲು ಬಿಟ್ಟರೆ, 300 ಗ್ರಾಂ.ನಿಂದ 10 ಕೆ.ಜಿ. ತನಕವೂ ಬೆಳೆಯುತ್ತವೆ. ಅದರಲ್ಲೂ ಪಾಪ್ಲೆಟ್‌, ಅಂಜಲ್‌ 1 ಕೆ.ಜಿ.ಗೆ 1000 ರೂ. ದಾಟುತ್ತದೆ. ಈ ಮೀನುಗಳೆಲ್ಲ ಸಮುದ್ರದ ತಳದ ಬಂಡೆಗಳ ಸಂದುಗಳಲ್ಲಿ ಆಶ್ರಯ ಪಡೆದಿರುತ್ತವೆ. ಬುಲ್‌ಟ್ರಾಲ್‌ ದೋಣಿಗಳು ರಾತ್ರಿ ಮೀನು ಹಿಡಿಯುವಾಗ, ಆಳಕ್ಕೆ ಹೈವೋಲ್ಟೆàಜ್‌ ದೀಪಗಳನ್ನು ಇಳಿಸಿದಾಗ, ದೊಡ್ಡ ಪ್ರಮಾಣದಲ್ಲಿ ಅವು ಬಲೆಗೆ ಸಿಕ್ಕಿಬೀಳುತ್ತವೆ. ಈ ಸಣ್ಣ ಮೀನುಗಳು ದಡದಲ್ಲಿ ಕೊಳೆತು ನಾರುವುದೂ ಇದೆ.

ಗರ್ಭಿಣಿ ಮೀನುಗಳ ಮಾರಣಹೋಮ!
ಸರ್ಕಾರ ನಾಮ್‌ ಕೇ ವಾಸ್ತೆಗೆ “60 ದಿನ ಮೀನುಗಾರಿಕೆ ಸ್ಥಗಿತ’ ಎಂದು ಘೋಷಿಸಿದರೂ, ಅದನ್ನು ಕೆಲವು ಸಾಂಪ್ರದಾಯಿಕ ದೋಣಿಗಳು ಪಾಲಿಸುವುದಿಲ್ಲ. ಹೀಗಾಗಿ, ನೀವು ಜುಲೈ- ಆಗಸ್ಟ್‌ನಂಥ ಮಳೆಗಾಲದಲ್ಲೂ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಂಥ ಮೀನಿನ ಮಾರುಕಟ್ಟೆಗಳಲ್ಲಿ ಹೊಟ್ಟೆಯಲ್ಲಿ ಮೊಟ್ಟೆ ತುಂಬಿಕೊಂಡ ಬಂಗುಡೆ, ಬೂತಾಯಿ ಮೀನುಗಳನ್ನು ಕಾಣಬಹುದು. ಒಂದು ಗರ್ಭಿಣಿ ಮೀನನ್ನು ಹಿಡಿಯದೇ ವಾಪಸು ನೀರಿಗೆ ಬಿಟ್ಟಿದ್ದೇ ಆದಲ್ಲಿ, ಒಂದೆರಡು ತಿಂಗಳ ಬಳಿಕ ಲಕ್ಷಾಂತರ ಮೀನುಗಳನ್ನು ಹಿಡಿಯಬಹುದು. ಆದರೆ, ಮಾನವನ ಹಣದ ದಾಹ, ಈ ಪ್ರಜ್ಞಾವಂತಿಕೆ ಕೆಲಸವನ್ನು ಮಾಡಿಸುವುದಿಲ್ಲ.

“ಮೊಟ್ಟೆ ತುಂಬಿಕೊಂಡ ಮೀನುಗಳನ್ನು, ಮೀನಿನ ಮರಿಗಳನ್ನು ರಕ್ಷಿಸಿ’ ಎಂದು ತಟ್ಟೆಯೆದುರು ಕುಳಿತು, ಪ್ರತಿಭಟಿಸಿದರೆ ಇದಕ್ಕೆ ಪರಿಹಾರ ಸಿಗುವುದಿಲ್ಲ. ಮೂಲದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಹೋದರೆ, ಮುಂದೆ ನಮ್ಮ ಕರಾವಳಿಯಲ್ಲೂ ಮೀನು ಸಿಗದೇ ಹೋಗಬಹುದು.

ಮತ್ಸ್ಯ ಕ್ಷಾಮ ತಡೆಯುವುದು ಹೇಗೆ?
ದಕ್ಷಿಣ ಕನ್ನಡದ ಕೃಷಿ ವಿಜ್ಞಾನ ಕೇಂದ್ರದ ಪ್ರೊ. ಶಿವಕುಮಾರ್‌ ಮಾಗದ ಇದಕ್ಕೆ ಹಲವು ಪರಿಹಾರಗಳನ್ನು ಮುಂದಿಡುತ್ತಾರೆ. 
– ಡೈಮಂಡ್‌ ಆಕಾರದ ಬಲೆಯನ್ನು ನಿಷೇಧಿಸುವುದು, 30 ಎಂ.ಎಂ. ಗಾತ್ರದಿಂದ 40 ಎಂ.ಎಂ. ಗಾತ್ರದ ಬಲೆಗಳನ್ನು ಬಳಸುವುದು.
– ಕೋಟಾ ಸಿಸ್ಟಂ ಜಾರಿ ತರುವುದು. ಅಂದರೆ, ದಿನ ಮೀನು ಹಿಡಿಯಲು ಅನುಮತಿ ನೀಡುವ ಬದಲು, ಒಂದು ದೋಣಿಗೆ ವಾರದಲ್ಲಿ 3 ದಿನ ಮಾತ್ರ ಮೀನು ಶಿಕಾರಿಗೆ ಅವಕಾಶ ನೀಡುವುದು.
– ಸೌರಶಕ್ತಿಯಿಂದ ಪ್ರಜ್ವಲಿಸುವ ರಿಂಗ್‌ಗಳನ್ನು ಬಲೆಯ ಅಲ್ಲಲ್ಲಿ ಹಾಕಿದರೆ, ಸಣ್ಣ ಮೀನುಗಳು ತಪ್ಪಿಸಿಕೊಳ್ಳುತ್ತವೆ.
– ಶಿಕಾರಿ ರಜೆಯನ್ನು 60 ದಿನಗಳಿಂದ 90 ದಿನಗಳಿಗೆ ವಿಸ್ತರಿಸುವುದು.
– ಈಗ ಶೇ.60ರಷ್ಟು ದೋಣಿಗಳು ನಷ್ಟದಲ್ಲಿವೆ. ಇಷ್ಟಾದರೂ ಹೊಸ ದೋಣಿಗಳಿಗೆ ಅನುಮತಿ ನೀಡಲಾಗುತ್ತಿದೆ. ಹಾಗಾಗಿ, ಬೋಟ್‌ಗಳ ಸಂಖ್ಯೆ ಕಡಿತಗೊಳಿಸುವುದು.
– 300 ಎಚ್‌ಪಿ ಮೋಟರ್‌ ಬೋಟ್‌ಗಳ ಸಾಮರ್ಥಯ ಕುಗ್ಗಿಸಿದರೆ, ಅವು ಬಹುದಿನಗಳ ವರೆಗೆ ಸಮುದ್ರದಲ್ಲಿ ನೆಲೆಯೂರಿ, ಮೀನು ಶಿಕಾರಿ ಮಾಡುವುದನ್ನು ತಪ್ಪಿಸಬಹುದು.
– ಬುಲ್‌ ಟ್ರಾಲ್‌ ಮೀನುಗಾರಿಕೆಗೆ ಅನುಮತಿ ನೀಡದೇ ಇರುವುದು.

ಮೀನುಗಾರಿಕೆಯ ಸುದೀರ್ಘ‌ ರಜೆ ಬೆಸ್ತರ ಹೊಟ್ಟೆಪಾಡಿನ ಪ್ರಶ್ನೆಯೂ ಆಗುತ್ತದೆ. ಹಾಗಾಗಿ, ಮಳೆ ಇದ್ದಾಗ ಔಟ್‌ಬೋರ್ಡ್‌ ಎಂಜಿನ್‌ ಹಾಕದೆ, ಕೆಲವರು ಮೀನು ಹಿಡಿಯಲು ಹೋಗುತ್ತಾರೆ.
– ಶ್ರೀಧರ ಮೊಗೇರ, ಮುಡೇìಶ್ವರ

ಗರ್ಭಿಣಿ ಮೀನುಗಳನ್ನು, ಮೀನಿನ ಮರಿಗಳನ್ನು ಹಿಡಿಯುವವರಿಗೆ ದಡದಲ್ಲಿಯೇ ದಂಡ ವಿಧಿಸಿದರೆ, ಮತ್ಸé ಸಂತತಿಯನ್ನು ಸಂರಕ್ಷಿಸಬಹುದು. ಇಲ್ಲದಿದ್ದರೆ ಇನ್ನೇನು 10- 20 ವರ್ಷಗಳಲ್ಲಿ ಮೀನಿನ ಬರ ಆವರಿಸುವ ಅಪಾಯವಿದೆ.
– ಎನ್‌.ಎ. ಮಧ್ಯಸ್ಥ, ಪರಿಸರ ತಜ್ಞ

ಕ್ಯಾಲೆಂಡರ್‌ ಕೃಪೆ: www.knowyourfish.org ಬೆಂಗಳೂರಿನ ಮಾರುಕಟ್ಟೆಯಲ್ಲಿರುವ ಗರ್ಭಿಣಿ ಕಾಣೆ, ಅಂಜಲ್‌, ಬರ್ರಾಮುಂಡಿ, ಸೀಗಡಿ ಮೀನುಗಳು

 ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.