ನದಿ ಪುನರುಜ್ಜೀವನ ತಜ್ಞತೆಯ ಸವಾಲು


Team Udayavani, Jul 30, 2018, 12:19 PM IST

nadi.png

ನದಿಗಳಿಗೆ ಮರುಜೀವ ನೀಡಲು ಹೊಸ ಹೊಸ ಪ್ರಯೋಗಗಳು ನಡೆದಿವೆ. ಜನರ ಸಹಭಾಗಿತ್ವದಲ್ಲಿ ಜಲ ಸಂರಕ್ಷಣೆಯ ಯತ್ನ  ಸಾಗಿದೆ. ಹಳ್ಳಿಗಾಡು ಸುತ್ತಾಡಿ ಜಲಾನಯನದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ತಜ್ಞರ ಕೊರತೆ ಇದೆ.  ಅರಣ್ಯ ಇಲಾಖೆಗೂ ಕೃಷಿ ಇಲಾಖೆಗೂ ಸಂಬಂಧವಿಲ್ಲ. ತೋಟಗಾರಿಕೆ ಇಲಾಖೆಗೂ ಜಲಾನಯನ ಇಲಾಖೆಗೂ ಪರಿಚಯವಿಲ್ಲ.  ಹೀಗೆ, ಸರಕಾರಿ ಇಲಾಖೆಗಳಲ್ಲಿ ಯೋಜನೆಗಳ ಪರಸ್ಪರ ಸಮನ್ವಯತೆ ಇಲ್ಲದೇ ನದಿ, ಕಣಿವೆಯ ಸಂರಕ್ಷಣೆ ಯಾವತ್ತಾದರೂ ಸಾಧ್ಯವೇ? 

ಮಳೆ ಶುರುವಾದ ತಕ್ಷಣ ಅಣೆಕಟ್ಟೆಗಳು ಭರ್ತಿಯಾಗಿವೆ. ಹಲವರಿಗೆ ಇದು ಖುಷಿಯ ಸಂಗತಿಯಾಗಿರಬಹುದು. ಆದರೆ ಮಳೆ ನೀರಿನ ಹರಿವಿಗೆ ವೇಗ ಬಂದ ಅಪಾಯದ ಸೂಚನೆ ಇದು. ಯÞವುದೇ ಜಲಾಶಯವಾಗಿರಲಿ, ಅದರಲ್ಲಿ ಬೇಗ ನೀರು ತುಂಬಿದಷ್ಟೂ ಆ ವರ್ಷ ಹೆಚ್ಚು ಹೂಳು ಜಮೆಯಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಮಳೆ, ನದಿ ಗಾತ್ರದ ಜಾಗದಲ್ಲಿ ಸುರಿದು ಹರಿದು ಬಂದಿಲ್ಲ. ಲಕ್ಷಾಂತರ ಹೆಕ್ಟೇರ್‌ ಪ್ರದೇಶದ ಗುಡ್ಡ, ಬೆಟ್ಟ, ಕೃಷಿ ನೆಲದಲ್ಲಿ ಬಿದ್ದು ಬಂದಿದೆ. ರಾಜ್ಯದ ಅಣೆಕಟ್ಟುಗಳು ಬೇಗ ತುಂಬುತ್ತಿರುವುದರ ಹಿಂದೆ ಮಳೆ ಅಬ್ಬರದ ಜೊತೆಗೆ ಅರಣ್ಯನಾಶದ ಕಾರಣಗಳಿವೆ.

ನಿಂತು, ಕುಳಿತು, ಹರಿಯುತ್ತ, ನಿಧಾನಕ್ಕೆ ಬೆಟ್ಟದಿಂದ ಬರಬೇಕಾದ ನೀರು ಅಡೆತಡೆ ಇಲ್ಲದೇ ಮಿತಿ ಮರೆತು ಅತಿವೇಗದಲ್ಲಿ ಓಡಿ ಬಂದಿದೆ. ನದಿಯಲ್ಲಿ, ಮಳೆಯ ದಿನಗಳಲ್ಲಿ ಹರಿಯುವ ನೀರಿನ ಪ್ರಮಾಣಕ್ಕೂ ಬೇಸಿಗೆಗೂ ವ್ಯತ್ಯಾಸ ಸಹಜ. ಆದರೆ ಅದು ಹರಿವು ನಿಲ್ಲಿಸಿ ಬೇಸಿಗೆಯಲ್ಲಿ ಯಾವತ್ತೂ ಪೂರ್ತಿ ಒಣಗಬಾರದು. ಇತ್ತೀಚಿನ ವರ್ಷಗಳಲ್ಲಿ ಹೊಳೆ ಹಳ್ಳಗಳಲ್ಲಿ ಮಳೆಗಾಲದಲ್ಲಿ ಮಾತ್ರವೇ ವೇಗವಾಗಿ ಹರಿಯುತ್ತದೆ. ಹಲವು ಹೊಳೆಗಳು, ಮಳೆ ಮುಗಿದು ಎರಡು ತಿಂಗಳಿಗೆ ಒಣಗುತ್ತಿವೆ.  ದಾಖಲೆ ಪ್ರಕಾರ ಕಾವೇರಿ ನದಿಯಲ್ಲಿ ಕನ್ನಂಬಾಡಿ ಅಣೆಕಟ್ಟೆ ಸನಿಹ ಕಡು ಬೇಸಿಗೆಯ ಕ್ರಿ.ಶ.1900ರ ಮಾರ್ಚ್‌ 5 ರಂದು 95 ಕ್ಯೂಸೆಕ್ಸ್‌ ನೀರು ಹರಿಯುತ್ತಿತ್ತು. ಈಗ ಮಾರ್ಚ್‌ದಲ್ಲಿ ಹರಿವು ನಿಲ್ಲಿಸುವಂತಾಗಿದೆ.  ಭೂಮಿಗೆ ಇಂಗಿ ಹರಿಯಬೇಕಾದ ನೀರು ಅರಣ್ಯನಾಶದಿಂದ ಒಮ್ಮೆಗೆ ಮೇಲ್ಮಣ್ಣಿನ ಕೆಂಪು ಪ್ರವಾಹವಾಗಿ ನದಿ ಸಾವಿಗೆ ಹತ್ತಿರವಾಗಿವೆ.  

ನದಿ ಹುಟ್ಟುವ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡು ಸುತ್ತಾಡಿದರೆ ಬನಾಟೆ, ಹೊಳೆಗೇರು, ಗುಳಮಾವು, ರಾಮಪತ್ರೆ, ಹೈಗ, ಹುಲಿಬೆಂಡು, ಜರ್ಬಂದಿ, ಹಾಲೆ, ಅತ್ತಿ, ಧೂಪ, ದಾಲಿcನ್ನಿ, ಚಂದಕಲ, ಸಳ್ಳೆ, ಕರಿಕುಂಚ ಮುಂತಾದ ನೂರಾರು ಸಸ್ಯ ಸಿಗಬಹುದು. ಇವುಗಳಲ್ಲಿ  ಅತ್ಯಂತ ವಯಸ್ಸಾದ ಮರಗಳನ್ನು ಹುಡುಕಬೇಕು. ಮೇಲ್ನೋಟಕ್ಕೆ ದೈತ್ಯವಾಗಿ ಕಾಣುವ ಜರ್ಬಂದಿ, ಬನಾಟೆ ವೃಕ್ಷಗಳ ವಯಸ್ಸು ಹೆಚ್ಚೆಂದರೆ ನೂರು, ನೂರೈವತ್ತು ವರ್ಷ ಮೀರುವುದಿಲ್ಲ. ಬಹುತೇಕ 80-100 ವರ್ಷದೊಳಗೆ  ಬೆಳೆದು ಸತ್ತು ಮಣ್ಣಾಗುತ್ತವೆ. ಎಂಥ ದಟ್ಟ ಕಾಡಾದರೂ ಎಕರೆಯಲ್ಲಿ ಶತಾಯು ವೃಕ್ಷಗಳು ಒಂದೆರಡು ಸಿಗುವುದು ಕಷ್ಟ. ಮನುಷ್ಯ ಕಡಿಯದಿದ್ದರೂ ಅಬ್ಬರದ ಮಳೆ, ಬಿಸಿಲು ತಾಗದ ನೆಲೆಯಲ್ಲಿ ಹೆಚ್ಚು ಕಾಲ ಬದುಕುವುದು ಸಸ್ಯಗಳಿಗೂ ಕಷ್ಟವೇ.   ಪೀಠೊಪಕರಣಗಳಿಗೆ ಪ್ರಯೋಜನವಲ್ಲದ ಇವುಗಳ ಚೌಬೀನೆ ಗುಣಮಟ್ಟ ಕಡಿಮೆ. ಬ್ರಿಟಿಷ್‌ ಸಸ್ಯಶಾಸ್ತ್ರಜ್ಞರಂತೂ ಮಾಮೂಲಿಯಾಗಿ ಇವಕ್ಕೆ “ಜಂಗ್ಲಿ’ ಸಸಿಯೆಂದು ಕರೆದು ಬೆಂಕಿ ಕಡ್ಡಿ ತಯಾರಿಕೆಗೆ ಬಳಸಬಹುದೆಂದವರು. ಮನೆ ಜಗುಲಿಯಲ್ಲಿ ಮಿಂಚುವ ಬೀಟೆ, ಹೊನ್ನೆ, ಮತ್ತಿಗಳು 200-300 ವರ್ಷ ಬಾಳುತ್ತವೆ. ಇವು ಅಂಟೆ  (ನದಿ ಕಣಿವೆ) ಕಾಡುಗಳಲ್ಲಿ ನೋಡಲು ಸಿಗುವುದಿಲ್ಲ. ಬೆಲೆಬಾಳುವ ಮರಗಳಿಲ್ಲವೆಂದ ಮಾತ್ರಕ್ಕೆ ಕಾಡಿನ ಬೆಲೆ ಕಡಿಮೆಯಲ್ಲ. ನದಿಗಳ ಮೂಲ ಬೇರು ಇಲ್ಲಿದೆ. ಬಹುಬೇಗ ಎತ್ತರಕ್ಕೆ ಬೆಳೆದು ಸತ್ತು ಮಣ್ಣಾಗುವ ಮೃದು ಕುಲದ ಸಸ್ಯಗಳು ನೆಲದ ನೀರಿನ ಕೈ ಹಿಡಿಯುತ್ತವೆ. ಇಲ್ಲಿನ ಸಸ್ಯ ಜಾತಿಗಳಿಂದ ನೀರಿನ ನೀತಿ ಆಲಿಸಬಹುದು. ಭೂ ದೇವಿಯ ಹಸಿರು ಬೆಟ್ಟಕ್ಕೆ ನೀರುಣಿಸುವ ಬಾಯಿಯಂತೆ ಕಾರ್ಯನಿರ್ವಸುತ್ತವೆ. ಹುಟ್ಟುವ, ಸಾಯುವ, ಕರಗುವ, ಇಂಗಿಸುವ ಕ್ರಿಯೆ ನಿರಂತರವಾಗಿ, ಜೌಗು ನೆಲೆಯಲ್ಲಿ ನೀರು ನಕ್ಕಿದೆ.    

ಕಾಡಿನ ಮರ ಸಾವನ್ನಪ್ಪಿದ ಬಳಿಕ ಬುಡ, ಬೇರುಗಳು ಗೆದ್ದಲುಗಳ ಆಹಾರವಾಗುತ್ತವೆ. ಮಳೆ ನೀರಲ್ಲಿ ಕೊಳೆತು ಬಹುಬೇಗ ಮಣ್ಣಾಗುತ್ತವೆ.  ಮರದ ಬುಡದ ಅವಶೇಷದ ನೆಲೆಗಳು ಟೊಳ್ಳಾಗಿ, ನೀರು ಇಂಗಿಸುವ ರಚನೆಗಳಾಗುತ್ತವೆ. ಬೇಗ ಬೆಳೆಯುವುದು, ಬೇಗ ಮಣ್ಣಾಗುವ ಸೂತ್ರ ಕಾಡು ಸಸ್ಯಗಳಲ್ಲಿದೆ. ಒಂದೊಂದು ಎಕರೆಯಲ್ಲಿ 90 ಲಕ್ಷದಿಂದ ಒಂದೂವರೆ ಕೋಟಿ ಲೀಟರ್‌ ಮಳೆ ನೀರು ಸುರಿಯುವ ಇಲ್ಲಿ, ನೀರು ಹಿಡಿಯುವ ಅದ್ಬುತ ನೈಸರ್ಗಿಕ ವ್ಯವಸ್ಥೆಯನ್ನು ಸಸ್ಯಾವರಣ ರೂಪಿಸಿದೆ. ಘಟ್ಟದ ಬಿರುಗಾಳಿ ಮಳೆಯಲ್ಲಿ ಮರಗಳ ತೊನೆದಾಟ ಬೇರಿನಾಳಕ್ಕೆ ನೀರಿಂಗಿಸಲು ಅನುಕೂಲವಾಗುತ್ತದೆ. ತರಗೆಲೆಗಳ ದಪ್ಪ ಹಾಸು, ಹ್ಯೂಮಸ್‌ಗಳು ಭೂ ಸವಕಳಿ ತಡೆದು ಮಣ್ಣಿಗೆ ನೀರು ಹಿಡಿಯಲು ಶಕ್ತಿ ನೀಡುತ್ತವೆ.  ಹತ್ತಾರು ವರ್ಷ ಬದುಕಿ ಸಾಯುವ  ಗುರಿಗೆ ಸಸ್ಯಗಳಂತೂ ಹೂವರಳಿಸಿ ಜೇನಿಗೆ ಸಂಭ್ರಮ ನೀಡುತ್ತವೆ, ಸತ್ತು ಒಣಗಿ ಮಣ್ಣು ಸಡಿಲಿಸಿ ಎರೆಹುಳು ಬದುಕಿಸಿ, ಮಳೆ ಹಿಡಿಯಲು ಕೊಡುಗೆ ನೀಡುತ್ತವೆ. 

ಚಿಕ್ಕ ಹುಲ್ಲುಗಳು ಅಬ್ಬರದ ಹನಿ ತಡೆಯುತ್ತವೆ. ನಾಲ್ಕು ತಿಂಗಳಲ್ಲಿ ಸುರಿಯುವ ಮಳೆ ನೀರನ್ನು ಜತನದಿಂದ ಹಿಡಿದು ವರ್ಷವಿಡೀ ತೊರೆಯಾಗಿ ಬೆಟ್ಟದಿಂದ ಹರಿಯಲು ನೆರವಾಗುವ ಕಣ್ಣಿಗೆ ಕಾಣದ ಹಲವು ಸೂಕ್ಷ್ಮಗಳಿವೆ.  ನದಿಗಳಿಗೆ ಮರುಜೀವ ನೀಡುವುದೆಂದರೆ, ಯಂತ್ರಗಳಿಂದ ಮಣ್ಣು ಅಗೆದು, ಕೆರೆ ಮಾಡುವುದು, ಕಿಂಡಿತಡೆ ಅಣೆಕಟ್ಟು ನಿರ್ಮಿಸುವಷ್ಟು ಸರಳ ಕೆಲಸವಲ್ಲ. 

ಅಪ್ಪ ಹಗೇವಿನಲ್ಲಿ ಕಾಳು ಕೂಡಿಟ್ಟರೆ ಬರಗಾಲದಲ್ಲಿ ಮಗ ಊಟ ಮಾಡಬಹುದು. ಬ್ಯಾಂಕಿನಲ್ಲಿ ಠೇವಣಿ ಇದ್ದರೆ ವಾರ್ಷಿಕ ಬಡ್ಡಿ ಹಣದಲ್ಲಿ ಆರಾಮ ಆಗಿ ಬದುಕಬಹುದು. ಕೂಡಿಡುವ ಎಚ್ಚರ ಮರೆತು ಕಣದ ಕಾಳನ್ನು, ಕೈಯ ಕಾಸನ್ನು ಖರ್ಚು ಮಾಡಿದರೆ ಬದುಕು ಕಷ್ಟ. ನದಿಗಳ ವಿಚಾರದಲ್ಲಿ ಇಂದು ಇದೇ ಆಗಿದೆ. ಮಳೆ ನೀರು ಭೂಮಿಗೆ ಇಂಗಿಸುವ ಕಾಡು, ಒರತೆ ಜಲದ ಮೂಲಕ ಇಡೀ ವರ್ಷ ನೀರು ಜಿನುಗಿಸುವ ಬೆಟ್ಟಗಳನ್ನು ನಾವು ದೋಚಿದ್ದರಿಂದ ನದಿಗಳ ಸಾವು ಸಂಭವಿಸಿದೆ. ಬೆಂಕಿ ಉರಿಸಿದ್ದೇವೆ. ಗಣಿಗಾರಿಕೆಯಿಂದ ಒಡಲು ಬಗೆದಿದ್ದೇವೆ. ಉದ್ಯಮ, ಕೃಷಿ, ನಿವೇಶನ, ರಸ್ತೆಗಳಿಗೆಂದು ಖಾಲಿಯಾಗಿಸಿದ್ದೇವೆ. ನದಿ ಬದುಕನ್ನು ಕಾಡಿನ ಒಟ್ಟೂ ಆವರಣದ ಮೂಲಕ ಸಮಗ್ರವಾಗಿ ಅರಿಯುವುದು ನದಿ ಸಂರಕ್ಷಣೆಯ ಮೊದಲ ಕೆಲಸವಾಗುತ್ತದೆ. ಮಳೆ ನೀರು ಹಿಡಿಯಲು ಕೆರೆ ಮಾಡುವುದು, ಇಂಗುಗುಂಡಿ ರಚಿಸುವುದು  ಇವೆಲ್ಲಾ ಅಪಘಾತವಾದವರನ್ನು ಆಸ್ಪತ್ರೆಗೆ ಸೇರಿಸುವಂಥ ತುರ್ತು ಕೆಲಸ ಮಾತ್ರವಾಗಿದೆ. ಅರಣ್ಯ ಸಂರಕ್ಷಣೆಯಾದರೆ ನದಿ ಸುಸ್ಥಿರವಾಗಿ ಉಳಿಯುತ್ತದೆ.  

ಪಶ್ಚಿಮ ಘಟ್ಟದಲ್ಲಿ ಅರಣ್ಯ ಸಂರಕ್ಷಣೆ ಹೆಸರಿನಲ್ಲಿ 80 ರ ದಶಕದೀಚೆಗೆ ಯೋಜನೆಗಳು ಜಾರಿಯಾಗಿವೆ. ಅಕೇಶಿಯಾ, ತೇಗ, ಕ್ಯಾಸುರಿನಾ, ನೀಲಗಿರಿ ಬೆಳೆಸಲು ಲಕ್ಷ ಲಕ್ಷ ಹಣ ಖರ್ಚಾಗಿದೆ. ಅರಣ್ಯದಲ್ಲಿ ಮುಂಚೆ ಯಾವ ಸಸ್ಯಗಳಿದ್ದವೆಂದು ಅರಿಯದವರು ಆಸ್ಟ್ರೇಲಿಯನ್‌ ಮೂಲದ ಅಕೇಶಿಯಾ ನೆಟ್ಟಿದ್ದಾರೆ. ಮನುಷ್ಯ, ಅರಣ್ಯೀಕರಣಕ್ಕೆ ಹೊರಟಾಗ ಇಂಥ ಎಡವಟ್ಟುಗಳಾಗುತ್ತವೆ. ಯಾವ ಬೀಜ ಸಂಗ್ರಹಿಸಿ ಸಸಿಗಳನ್ನು ಸುಲಭದಲ್ಲಿ ಬೆಳೆಸಿ ನಾಟಿ ಮಾಡಿ ರಕ್ಷಿಸಬಹುದೆಂಬುದನ್ನು ತಿಳಿಯಲು ಮಾತ್ರ ಮನುಷ್ಯ ಹೆಚ್ಚು ಲಕ್ಷ್ಯ ನೀಡುತ್ತಾನೆ. ಪರಿಣಾಮ, ಹುಲ್ಲುಗಾವಲು, ನಿತ್ಯಹರಿದ್ವರ್ಣ ಕಾಡಿನ ನೆಲೆಗಳು ನೆಡುತೋಪಿನ ಬೀಡಾಗಿವೆ. ಅಕೇಶಿಯಾ ಎಲೆಗಳು ಹ್ಯೂಮಸ್‌ ಆಗಿ  ಮೂರು ವರ್ಷವಾದರೂ ಪರಿವರ್ತನೆಯಾಗುವುದಿಲ್ಲ, ಕಟಾವಾದ ಅಕೇಶಿಯಾ ಮರದ ಬೊಡ್ಡೆಗಳು 20 ವರ್ಷವಾದರೂ ಮಣ್ಣೊಳಗೆ ಕರಗುವುದಿಲ್ಲ. ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣೆ ಎಂಬುದು  ನೆಡುತೋಪಿನ ಪ್ರಹಸನವಾಗಿ, ಯಂತ್ರಗಳಿಂದ ಗುಡ್ಡ ಅಗೆತಕ್ಕೆ ಮೂಲವಾಗಿದೆ. ಭೂ ಸವಕಳಿಯಿಂದ ನೀರು ಒಣಗಲು ಕಾರಣವಾಗಿದೆ. ಬೇಗ ಕರಗಿ ಮಣ್ಣಿಗೆ ಶಕ್ತಿಯಾಗುವ ಸೂತ್ರವನ್ನೇ ನಾವೀಗ ಮರೆತಿದ್ದೇವೆ.  

15 ವರ್ಷಗಳ ಹಿಂದೆ ರಾಜ್ಯದಲ್ಲಿ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆ ಜಾರಿಯಾಗಿತ್ತು. 500 ಹೆಕ್ಟೇರ್‌ ಕೃಷಿ ಭೂಮಿ ಗುರುತಿಸಿ, ಕಿರು ಜಲಾನಯನ ಸಂರಕ್ಷಣೆಗಳು ನಡೆದವು. ಮಲೆನಾಡಿನಲ್ಲಿ ಸುಮಾರು 5000 ಹೆಕ್ಟೇರ್‌ ಅರಣ್ಯ ಭೂಮಿಯ ತಗ್ಗಿನಲ್ಲಿ ಈ ಪ್ರಮಾಣದ ಕೃಷಿ ಭೂಮಿ ದೊರೆಯಬಹುದು. ಅರಣ್ಯದಲ್ಲಿ ಯಾವ ಸಂರಕ್ಷಣಾ ಚಟುವಟಿಕೆ ಕೈಗೊಳ್ಳದೇ ನಾಲಾ ಬದು, ಕಿಂಡಿತಡೆ ಅಣೆಕಟ್ಟೆ, ತೋಟಗಾರಿಕಾ ಸಸ್ಯ ವಿತರಣೆ ನಡೆಯಿತು. ಗುಡ್ಡದಲ್ಲಿ ನೀರು ಉಳಿಸುವುದು ಜಲಾನಯನದ ಮೊದಲ ಕೆಲಸವಾಗಬೇಕು. ಆದರೆ ಹಳ್ಳಗಳಿಗೆ ಕಾಂಕ್ರೀಟ್‌ ತಡೆ ಹಾಕುವ ಕೆಲಸ ನಡೆಯಿತು.

ಫೆಬ್ರವರಿಯಲ್ಲಿ ಒಣಗುವ ಹಳ್ಳಗಳಿಗೆ ಒಡ್ಡು ನಿರ್ಮಿಸಿದ್ದರಿಂದ ಹಣ ಖರ್ಚಾಯಿತೇ ಹೊರತು ಫ‌ಲ ಸಿಗಲಿಲ್ಲ. ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ನೀರಾವರಿ, ಸಾರಿಗೆ ಸಂಪರ್ಕ, ಪಂಚಾಯತ್‌, ಸಮುದಾಯಗಳೆಲ್ಲ ಸೇರಿ ಯೋಜನೆಗಳು ರೂಪುಗೊಳ್ಳಬೇಕು. ಆದರೆ ನಮ್ಮ ಸರಕಾರಿ ಇಲಾಖೆಗಳಲ್ಲಿ ಪರಸ್ಪರ ಸಮನ್ವಯವಿಲ್ಲ. ಅರಣ್ಯ ಇಲಾಖೆಯ ನಿಯಮ ಸಾರಿಗೆ ಸಂಪರ್ಕಕ್ಕೆ ಹೊಂದುವುದಿಲ್ಲ, ಕೃಷಿ  ಇಲಾಖೆಯ ಕಾರ್ಯ ತೋಟಗಾರಿಕೆಗೆ ಮುಖ್ಯವಲ್ಲ. ಒಂದೆಡೆ ಅಂತರ್ಜಲ ಕುಸಿತವೆಂದು ಜಿಲ್ಲಾಡಳಿತ ಬೊಬ್ಬೆ ಹೊಡೆಯುತ್ತಿದ್ದರೆ ಕಬ್ಬು, ಬಾಳೆ, ಅಡಿಕೆ ಬೆಳೆ ವಿಸ್ತೀರ್ಣಕ್ಕೆ ಇನ್ನೊಂದು ಇಲಾಖೆ ಕಾರ್ಯಕ್ರಮ ರೂಪಿಸುತ್ತದೆ. ಸಮಸ್ಯೆಯನ್ನು ಒಟ್ಟಾಗಿ ಚರ್ಚಿಸಿ, ಎದುರಿಸುವುದು ಆಡಳಿತ ಯಂತ್ರಕ್ಕೆ ಗೊತ್ತಿಲ್ಲ. ಸರಕಾರಕ್ಕೆ ಮಾದರಿಯ ಪಾಠ ಕಲಿಯುವ ಉತ್ಸಾಹವಿಲ್ಲ. ಇಲಾಖೆಗಳಿಗೆ ಸಂರಕ್ಷಣೆ, ಪುನಶ್ಚೇತನಗಳು ಹಣ ಖಾಲಿಯಾಗಿಸುವ ಕೆಲಸಗಳಾಗಿವೆಯೇ ವಿನಃ ಕಾಳಜಿಯಾಗಿಲ್ಲ.

ಅಚ್ಚರಿಯೆಂದರೆ, ಸಾರಾರು ಕೋಟಿ ಖರ್ಚು ಮಾಡುವ ಇಲಾಖೆಗಳಲ್ಲಿ ಇಂದಿಗೂ ಅಧಿಕಾರಿಗಳಿದ್ದಾರೆಯೇ ವಿನಃ ವಿಷಯ ತಜ್ಞರಿಲ್ಲ!  

ನದಿ ಸಂರಕ್ಷಣೆಯ ಕಹಳೆ ಮೊಳಗಲಿ
ರಾಜಸ್ಥಾನದ ಜೈಪುರ ಜಿಲ್ಲೆಯ ನಾಂಡುವಲಿ, ಸಕಟ್‌ವಾಲಿಯಾ ನದಿಗಳು ಕೇವಲ 500 ಮಿಲಿ ಮೀಟರ್‌ ಮಳೆ ಸುರಿಯುವಲ್ಲಿ ಪುನರುಜ್ಜೀವನಗೊಂಡ ಮಾತು ಕೇಳುತ್ತೇವೆ. 4000 ಮಿಲಿ ಮೀಟರ್‌ ಸುರಿಯುವ ಕರಾವಳಿ ನೆಲೆಯಲ್ಲಿ ನದಿ ಒಣಗುವ ಪರಿಸ್ಥಿತಿ ನಮ್ಮದಾಗಿದೆ. ಅಲ್ಲಿ ಸಾಧ್ಯವಾಗಿದ್ದು ಇಲ್ಲಿ ಏಕೆ ಆಗುತ್ತಿಲ್ಲ? ಪ್ರಶ್ನೆ ಮುಖ್ಯವಿದೆ. ಜನಮನಕ್ಕೆ, ಆಳುವ ಸರಕಾರಕ್ಕೆ ನದಿ ಕಣಿವೆಯನ್ನು ಸರಿಯಾಗಿ ನೋಡಲು ಕಲಿಸುವುದು ಸಂರಕ್ಷಣಾ ಆಂದೋಲನದ ಪ್ರಥಮ ಕೆಲಸವಾಗಬೇಕು. ನದಿ ಕಣಿವೆಗಳಲ್ಲಿ ಎಂಥ ಅರಣ್ಯ ಸಸ್ಯ ಬೆಳೆಸಬೇಕೆಂದು ಗೊತ್ತಿರಬೇಕು. ಕೋಲಾರದ ನದಿಗಳು 40 ವರ್ಷಗಳಲ್ಲಿ ಹೇಗೆ ಸಾವನ್ನಪ್ಪಿದವೆಂದು ನೆನಪಿಸಿಕೊಳ್ಳಬೇಕು. ನಂದಿ ಬೆಟ್ಟದಿಂದ ಹರಿಯುವ ಅರ್ಕಾವತಿ, ಪಾಲಾರ್‌, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ಕಾಡು, ಕಲ್ಲು, ಮರಳು ಕಳೆದುಕೊಳ್ಳುತ್ತ ಜೀವತ್ಯಾಗದ ಮಾಡಿದ ಕರುಣಕತೆ ಎಲ್ಲರಿಗೂ ಪಾಠವಾಗಬೇಕು. ಅವುಗಳ ಧಾರುಣ ಚಿತ್ರ ವಿಧಾನಸೌಧ , ಪಂಚತಾರಾ ಹೋಟೆಲ್‌, ರೆಸಾರ್ಟ್‌ ಗೋಡೆಯಲ್ಲಿ ಕಾಣಿಸಬೇಕು. ಸತ್ತ ನದಿಗಳ ಪಾಠ ನದಿ ಸಂರಕ್ಷಣೆಯ ಕಹಳೆಯಾಗಬೇಕು. 

ಮುಂದಿನ ಭಾಗ: ನದಿ ಸಂರಕ್ಷಣೆಗೆ ನಾವೇನು ಮಾಡೋಣ?

– ಶಿವಾನಂದ ಕಳವೆ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.