ನಿಜಕ್ಕೂ ನಿಮಗೆ ನಿಮ್ಮ ಧರ್ಮದ ಮಹತ್ವ ತಿಳಿದಿದೆಯಾ?

Team Udayavani, Feb 5, 2019, 12:30 AM IST

ನಿಮಗೆ ಮಾನವ ಧರ್ಮ ಎಂಬ ಪರಮೋಚ್ಚ ಧರ್ಮ ಇದೆ. ಅದಕ್ಕೆ ವಂಚನೆ ಮಾಡುವುದು ಅಂದರೆ ಜೀವಾತ್ಮಕ್ಕೆ ವಂಚನೆ ಮಾಡುವುದು ಎಂದರ್ಥ. ಧರ್ಮಗಳಲ್ಲಿರುವ ಒಳ್ಳೆಯ ಅಭ್ಯಾಸಗಳನ್ನು ಯಾವ ಧರ್ಮದಿಂದ ಕಲಿತರೇನಂತೆ, ಮನುಷ್ಯನಿಗೆ ಜ್ಞಾನೋದಯವಾಗುವುದು ಹಾಗೂ ಒಳ್ಳೆಯ ಬುದ್ಧಿ ಬರುವುದು ಮುಖ್ಯ. 

ಧರ್ಮದಿಂದ ಹೋರಾಟ, ಧರ್ಮದಿಂದ ಜಗಳ, ಧರ್ಮದಿಂದ ರಾಜಕೀಯ, ಧರ್ಮದಿಂದ ಕೊಲೆ, ಧರ್ಮದಿಂದ ದ್ವೇಷ… ಏಕೆ ಜನರು ಧರ್ಮವನ್ನು ಮುಂದಿಟ್ಟುಕೊಂಡು ಇಷ್ಟೊಂದು ಕಿತ್ತಾಡುತ್ತಾರೆ? ಹಿಂದೂ, ಜೈನ, ಬೌದ್ಧ, ಮುಸಲ್ಮಾನ, ಕ್ರೈಸ್ತ, ಸಿಖ್‌, ಯಹೂದಿ, ಪಾರ್ಸಿ ಹೀಗೇ ಹತ್ತು ಹಲವು ಧರ್ಮಗಳು ಜಗತ್ತಿನಲ್ಲಿ ಇವೆ. ಇವುಗಳ ಜೊತೆ ಉಪ ಧರ್ಮಗಳೂ ಇವೆ. ಬಹಳ ಮುಖ್ಯ ವಿಚಾರವೆಂದರೆ ಈ ಎಲ್ಲ ಧರ್ಮಗಳ ಮೂಲ ಗ್ರಂಥಗಳೂ ಶಾಂತಿ ಹಾಗೂ ಸಹಬಾಳ್ವೆಯನ್ನೇ ಉಪದೇಶ ಮಾಡುತ್ತವೆ. ಆದರೆ ಈ ಗ್ರಂಥಗಳನ್ನು ಓದಿದ ಅಥವಾ ಓದದ ಧರ್ಮೀಯರಲ್ಲಿ ಕೆಲವರು ಧರ್ಮದ ಹೆಸರಿನಲ್ಲೇ ಅಧರ್ಮಗಳನ್ನು ಆಚರಿಸುತ್ತಾರೆ. ಏಕೆ ಹೀಗೆ? ಈ ಪ್ರಶ್ನೆ ಹಾಕಿಕೊಂಡರೆ ಹಲವು ಸೂಕ್ಷ್ಮಗಳು ಗೋಚರಿಸುತ್ತವೆ.

ಧರ್ಮ ಎಂದರೇನು?
ನಾವು ಯಾವುದೇ ಧರ್ಮದಲ್ಲಿ ಹುಟ್ಟಿದ್ದರೂ ನೀತಿ (ಎಥಿಕ್ಸ್‌)ಯ ಮೂಲಕ ಸತ್ಯದ ದಾರಿಯಲ್ಲಿ ನಡೆದು ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು. ಇದು ಮಾನವ ಧರ್ಮ. ಇದಕ್ಕಿಂತ ದೊಡ್ಡ ಧರ್ಮ ಬೇರೆ ಇಲ್ಲ. ಇದನ್ನೇ ಹಿಂದೂಗಳು ಮುಕ್ತಿಮಾರ್ಗವೆಂದರೆ, ಜೈನರು ನಿರ್ವಾಣ ಸ್ಥಿತಿ ಎನ್ನುತ್ತಾರೆ (ಸಂಸ್ಕೃತದಲ್ಲಿ ಮೋಕ್ಷ), ಬುದ್ಧರಲ್ಲಿ-ಬಂಧ ವಿಮುಕ್ತಿಗಾಗಿ ಅನ್ವೇಷಣೆ ಮಾಡುವುದು (ಕ್ವೆಸ್ಟ್‌ ಫಾರ್‌ ಲಿಬರೇಷನ್‌), ಸಿಖರಲ್ಲಿ ಧ್ಯಾನ ಮೂಲಕ ದೇವರಲ್ಲಿ ಒಂದಾಗುವುದು ಹೀಗೆ ಎಲ್ಲಾ ಧರ್ಮಗಳೂ ತಮ್ಮ ತಮ್ಮ ಧರ್ಮ ಗ್ರಂಥಗಳನ್ನು ತಳಪಾಯ, ನಂಬಿಕೆಯನ್ನಿಟ್ಟುಕೊಂಡು, ಆ ಧರ್ಮಗ್ರಂಥಗಳನ್ನು ಪರಿಪಾಲಿಸುತ್ತಾ ಮುನ್ನಡೆಯುತ್ತಿವೆ. 

ಗ್ರಂಥಗಳಲ್ಲಿ ಹಿಂಸೆ ಹೇಳಿದ್ದಾರಾ?
ಯಾವ ಧರ್ಮವೂ ಜಗಳವಾಡಿ, ಕಿತ್ತಾಡಿ, ಕೊಲೆ ಮಾಡಿ, ಸ್ವಾರ್ಥಿಗಳಾಗಿರಿ, ಇನ್ನೊಬ್ಬರನ್ನು ಕೆಳಗೆ ತುಳಿದು ನೀವು ಬೆಳೆಯಿರಿ ಅಂತ ಹೇಳಿಲ್ಲ. ಎಲ್ಲಾ ಪೂಜ್ಯ ಗ್ರಂಥಗಳೂ ಭಕ್ತಿ, ಪ್ರೀತಿ, ಚೈತನ್ಯದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಪ್ರಕೃತಿಯಿಂದ ಬಂದ ನಾವು ಪ್ರಕೃತಿಯಲ್ಲೇ ಒಂದಾಗಬೇಕೆಂದು ಅದರದೇ ಆದ ಬೇರೆ ಬೇರೆ ವಿಧಾನಗಳಲ್ಲಿ ಅಧ್ಯಾತ್ಮ ವಿಚಾರಗಳನ್ನು ಸ್ಪಷ್ಟಪಡಿಸಿವೆ.
ಅಬ್ರಹಾಮಿಕ್‌ ಧರ್ಮಗಳಾದ ಇಸ್ಲಾಂ, ಕ್ರೆçಸ್ತ ಧರ್ಮಗಳೂ ಅಧರ್ಮವನ್ನು ಸಾರಿಲ್ಲ. ಇಸ್ಲಾಂನ ಇತಿಹಾಸದ ಪಾಲ್‌ಸಪಾ ಮತ್ತು ಕಲಂ ಪಂಗಡಗಳಾಗಲೀ, ಮಹಾನ್‌ ಗ್ರಂಥಗಳಾದ ಮುಟಕ್ಕಲ್ಲಮಿನ್‌ ಮತ್ತು ಕುರಾನ್‌ಗಳು ಬೇರೆ ಧರ್ಮಗಳನ್ನು ದ್ವೇಷಿಸುವ ಪ್ರಯತ್ನ ಮಾಡಿಲ್ಲ. ಬೇರೆ ಧರ್ಮಗಳೆಲ್ಲ ಕೆಟ್ಟದ್ದು, ನಾವು ಮಾತ್ರ ಒಳ್ಳೆಯವರು, ನೀನು ಅಧರ್ಮದಿಂದ ಜೀವನ ಸಾಗಿಸು ಅಂತ ಯಾವ ಅಧ್ಯಾಯದಲ್ಲೂ ಹೇಳಿಲ್ಲ. ಕ್ರೆçಸ್ತರ ಬೈಬಲ್‌ ಶಾಂತಿ ಮತ್ತು ಅಹಿಂಸಾ ತತ್ವವನ್ನೇ ಎತ್ತಿ ಹಿಡಿದಿದೆ.

ಮತಾಂತರದಿಂದ ಏನು ಲಾಭ?
ಎಲ್ಲಾ ಧರ್ಮದಲ್ಲೂ ಧರ್ಮದ ಮಹತ್ವವನ್ನು ಸಾರಿದ ಮಹಾನ್‌ ಗುರುಗಳಿದ್ದಾರೆ. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಗಟ್ಟಿ ತಳಪಾಯವಿದೆ, ಎಲ್ಲಾ ಧರ್ಮದಲ್ಲೂ ಶ್ರದ್ಧೆ-ವಿನಯ ಇದೆ. ಕೆಲವರು ಇವತ್ತಿಗೂ, ಆಧುನಿಕ ಯುಗದಲ್ಲೂ, ಅದನ್ನು ಪರಿಪಾಲಿಸುತ್ತಾರೆ. ಕ್ರೆçಸ್ತರು ಪ್ರತಿ ಭಾನುವಾರ ಚಾಚೂ ತಪ್ಪದೆ ಚರ್ಚ್‌ನಲ್ಲಿ ಧ್ಯಾನಿಸಲು ಹೋಗುತ್ತಾರೆ. ಚಿಕ್ಕ ವಯಸ್ಸಿನಿಂದಲೇ ತಮ್ಮ ಧರ್ಮದ ತತ್ವಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಾರೆ. ಮುಸಲ್ಮಾನರು ಪ್ರತಿ ಶುಕ್ರವಾರ ಎಲ್ಲಿದ್ದರೂ ಅಲ್ಲೇ ಕುಳಿತು ಧ್ಯಾನಿಸುತ್ತಾರೆ. ಅವರಲ್ಲೂ ಮಕ್ಕಳು ಕಡ್ಡಾಯವಾಗಿ ಕುರಾನ್‌ ಅರಬ್ಬಿ ಮತ್ತು ಮೂಲ ತತ್ವಗಳನ್ನು ಓದಿ ಕಲಿತು ಕಂಠಪಾಠ ಮಾಡಬೇಕು. ರಮ್ಜಾನ್‌ ರೋಜಾ ತಿಂಗಳು ಒಂದು ಗುಟುಕು ನೀರೂ ಸಹ ಕುಡಿಯದೆ ತಮ್ಮನ್ನು ತಾವು ಹಿಡಿತದಲ್ಲಿಟ್ಟುಕ್ಕೊಳ್ಳುವ ಶ್ರದ್ಧೆ ಮೆಚ್ಚಬೇಕಾದ್ದು. ಹಾಗೆ ನೋಡಿದರೆ ಹಿಂದೂಗಳು ಯಾವುದನ್ನೂ ಕಡ್ಡಾಯ ಮಾಡಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಭಗವದ್ಗೀತೆ ಕಲಿತು ಅರಿತು ನಡೆದುಕೊಳ್ಳಬೇಕೆಂಬ ಶ್ರದ್ಧೆಯನ್ನು ಇವತ್ತಿಗೂ ಯಾರ ಮನೆಯಲ್ಲೂ ರೂಢಿಸಿಕೊಂಡಿಲ್ಲ.

ಆಚರಣೆಗಳು, ಪದ್ಧತಿಗಳು, ನಂಬಿಕೆಗಳು, ಭಾವನೆಗಳು, ತಾತ್ಪರ್ಯಗಳು ಹೆಚ್ಚು ಕಮ್ಮಿಯಾದರೂ ಎಲ್ಲದರ ತಳಪಾಯ ಒಂದು ಅಗಾಧ ಶಕ್ತಿ, ಧರ್ಮಾಚರಣೆ ಮಾಡುವುದು. ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರೂ ಸಂತೋಷವಾಗಿ ನೂರು ವರ್ಷ ಬದುಕಿ ಸಾರ್ಥಕತೆಯನ್ನು ಕಾಣಲಿ ಎಂಬ ಉದ್ದೇಶದಿಂದಲೇ ಹೊರತು ಜಾತಿ ಭೇದ ಅಥವಾ ಧರ್ಮ ಭೇದ ಮಾಡಿಕೊಂಡು ಕಿತ್ತಾಡಿ ಸಾಯಲಿ ಅಂತ ಅಲ್ಲ. 

ಹುಟ್ಟುವಾಗ ಯಾವ ಧರ್ಮದಲ್ಲಿ ಹುಟ್ಟಬೇಕು ಅಂತ ಸೆಲೆಕ್ಟ್ ಮಾಡಿಕೊಂಡು ಹುಟ್ಟಲು ಆಗುವುದಿಲ್ಲ. ಬೆಳೆಯುತ್ತಾ ಬೆಳೆಯುತ್ತಾ ಧರ್ಮಗಳ ಭೇದ ಭಾವ ಬೆಳೆಸಿಕೊಳ್ಳುತ್ತೇವೆ. ಆದರೆ ಎಲ್ಲಾ ಧರ್ಮಗಳ ತಳಹದಿ ಒಂದೇ, ಜನರ ಮನಃಸ್ಥಿತಿಯಷ್ಟೇ ಬೇರೆ ಬೇರೆ. ಇದನ್ನು ಒಪ್ಪಿಕೊಳ್ಳಲು ನಾವು ಹಿಂಜರಿಯುವುದಕ್ಕೆ ನಮ್ಮ ಸಂಕುಚಿತ ಮನೋಭಾವವೇ ಕಾರಣ. ಯಾವುದನ್ನೂ ಪೂರ್ಣವಾಗಿ ಸಂಶೋಧಿಸದೆ ನಮ್ಮ ಧರ್ಮ ಹೀಗೆ-ನಿಮ್ಮ ಧರ್ಮ ಹಾಗೆ ಎಂದು ರಾಜಕೀಯ ಬೇರೆ ಮಾಡುತ್ತೇವೆ. ನಮ್ಮ ಧರ್ಮವನ್ನೇ ನಾವು ಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಅಂದಮೇಲೆ ಬೇರೆ ಧರ್ಮದ ಬಗ್ಗೆ ಮಾತನಾಡುವ ಯೋಗ್ಯತೆ-ಹಕ್ಕು ಎರಡೂ ನಮಗಿರುವುದಿಲ್ಲ. ಹಾಗೇ ನಮ್ಮ ಜನ್ಮ ಧರ್ಮದಲ್ಲಿ ಏನೂ ಸರಿಯಾಗಿಲ್ಲ ಯಾವುದೂ ಅರ್ಥವಾಗುವುದಿಲ್ಲ. ಬರೀ ಗೊಂದಲಮಯವಾಗಿದೆ ಎಂದು ಬೇರೆ ಧರ್ಮಕ್ಕೆ ಮತಾಂತರವಾಗುವುದರಲ್ಲೂ ಅರ್ಥವಿಲ್ಲ, ಜನರಿಗೆ ಇಂತಹದ್ದೊಂದು ಸ್ವಾತಂತ್ರ್ಯ ಇರಬಹುದು, ಆದರೆ ಅದರಿಂದ ಪ್ರಯೋಜನ ಏನೂ ಇಲ್ಲ. ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲುವುದಿಲ್ಲ. ಜನ್ಮ ಕೊಟ್ಟ ಅಪ್ಪ ಅಮ್ಮನನ್ನೇ ಅರ್ಥ ಮಾಡಿಕೊಳ್ಳದವನು ಪಕ್ಕದ ಮನೆ ಆಂಟಿ-ಅಂಕಲ್‌ಗ‌ಳನ್ನು ಅರ್ಥ ಮಾಡಿಕೊಳ್ಳುತ್ತಾನೆಯೇ? 

ಏನೇನು ಕಲಿಯಬಹುದು?
ನಮ್ಮ ತಲೆಯಲ್ಲಿ ಧರ್ಮದ ವಿಚಾರವಾಗಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಯಾವ ಗುರುಗಳು ಸರಿಯಾಗಿ ಉತ್ತರ ನೀಡಲಿಲ್ಲ ಎಂದ ಮಾತ್ರಕ್ಕೆ ಧರ್ಮವೇ ಸರಿಯಾಗಿಲ್ಲ ಅಂತ ಅರ್ಥವಲ್ಲ. ಗುರುಗಳೆನಿಸಿಕೊಂಡವರೆಲ್ಲರೂ ಪೂರ್ಣ ಜ್ಞಾನಿಗಳಾಗಿರಬೇಕು ಎಂದೇನಿಲ್ಲವಲ್ಲ. ನಾವು ಜೀವನದಲ್ಲಿ ಒಂದು ಸಾಮಾನ್ಯ ಡಿಗ್ರಿ ಪಡೆಯುವುದಕ್ಕೆ 20 ವರ್ಷ ಶ್ರದ್ಧೆಯಿಂದ ಓದುತ್ತೇವೆ. ಧರ್ಮಗಳ ಮೂಲವನ್ನು ಅರಿಯಲು ಕೆಲ ನಿಮಿಷಗಳು ಹೇಗೆ ಸಾಕಾಗುತ್ತವೆ? ಯಾರು ಯಾವ ಧರ್ಮದಲ್ಲಿದ್ದರೂ ಅ ಧರ್ಮಕ್ಕೆ ನ್ಯಾಯಬದ್ಧರಾಗಿರಬೇಕು. ಧರ್ಮಕ್ಕೆ ಕೆಟ್ಟ ಹೆಸರು ತರುವ, ಧರ್ಮವನ್ನು ಕೆಳಮಟ್ಟಕ್ಕೆ ತಳ್ಳುವ ಕೃತ್ಯಗಳನ್ನು ನಾವು ಮಾಡಬಾರದೆಂದು ನಮ್ಮ ವೈಯಕ್ತಿಕ ವ್ಯಕ್ತಿತ್ವದ ಮೂಲ ಧರ್ಮವಾಗಿರಬೇಕು. ಎಲ್ಲಾ ಧರ್ಮಗಳು ಇದನ್ನೇ ಹೇಳುತ್ತವೆ.

ಹಾಗೆಯೇ ಒಳ್ಳೆಯ ತತ್ವಗಳನ್ನು ನಾವು ಎಲ್ಲಾ ಧರ್ಮಗಳಿಂದಲೂ ಕಲಿಯಬಹುದು. ಜೈನ ಧರ್ಮದ ಆಗಮ, ಪ್ರತಿನಿತ್ಯ ಕರ್ಮಗಳ ಶಿಸ್ತು, ಅಹಿಂಸಾ ತತ್ವವನ್ನು ನಾವು ಬೇರೆ ಧರ್ಮದವರಾದರೂ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದು. ಹಾಗೆಯೇ ಸಿಖVರ ಕಿರತ್‌ ಕರನ್‌ ವಂದ ಚಕನಾ ಕೆಲಸ ಮಾಡಬೇಕು ಧ್ಯಾನ ಮಾಡಬೇಕು-ಎಂಬುದನ್ನು ಎಲ್ಲರೂ ಪಾಲಿಸಬಹುದು. ಧರ್ಮಕ್ಕೆ ವಂಚನೆ ಮಾಡುವುದು ಅಂದರೆ ನಮಗೆ ನಾವೇ ವಂಚನೆ ಮಾಡಿಕೊಂಡಂತೆ. ಯಾವ ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ ಎಂದು ನೀವು ಹೇಳುವಿರಾದರೆ ನಿಮಗೆ ಮಾನವ ಧರ್ಮ ಎಂಬ ಪರಮೋಚ್ಚ ಧರ್ಮ ಇದೆ. ಅದಕ್ಕೆ ವಂಚನೆ ಮಾಡುವುದು ಅಂದರೆ ಜೀವಾತ್ಮಕ್ಕೆ ವಂಚನೆ ಮಾಡುವುದು ಎಂದರ್ಥ. ಧರ್ಮಗಳಲ್ಲಿರುವ ಒಳ್ಳೆಯ ಅಭ್ಯಾಸಗಳನ್ನು ಯಾವ ಧರ್ಮದಿಂದ ಕಲಿತರೇನಂತೆ, ಮನುಷ್ಯನಿಗೆ ಜ್ಞಾನೋದಯವಾಗುವುದು ಹಾಗೂ ಒಳ್ಳೆಯ ಬುದ್ಧಿ ಬರುವುದು ಮುಖ್ಯ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಲೇಖಕರ ಪರಿಚಯ ಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲಾéವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ  ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ...

  • ನಾನೀಗ ನಿಮಗೆ ಮೂವರು ಕಳ್ಳರ ಕಥೆಯನ್ನು ಹೇಳುತ್ತೇನೆ. ಮೊದಲ ಕಳ್ಳನ ಹೆಸರು ಇಮ್ಯಾನುವೆಲ್ ನಿಂಜರ್‌. ಈತನನ್ನು 'ಜಿಮ್‌, ದಿ ಪೆನ್‌ ಮ್ಯಾನ್‌' ಎಂದೂ ಕರೆಯಲಾಗುತ್ತಿತ್ತು. ಅದು...

  • ನವರಸಗಳನ್ನು ವ್ಯಕ್ತಪಡಿಸುವ ಮಾಧ್ಯಮ ನಟನೆಯೇ ಆಗಿದ್ದರೂ ಅವು ವಾಸ್ತವದಲ್ಲಿ ನಮ್ಮೊಳಗೆ ಸಹಜವಾಗಿ ಅಡಗಿರುವ ಭಾವನೆಗಳು. ಆ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು....

  • ಅತಿಥಿ ದೇವೋಭವ ಎಂಬುದು ಭಾರತೀಯ ಪರಂಪರೆಯ ಘೋಷವಾಕ್ಯವಷ್ಟೇ ಅಲ್ಲ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ಕೂಡ. ಮನೆಗೆ ಬರುವ ಅತಿಥಿಗಳನ್ನು ದೇವರಂತೆ...

  • ಮಕ್ಕಳು ಹುಟ್ಟಿದಾಗ ಸಂಭ್ರಮಿಸಿ, ಮಗುವನ್ನು ಯಾವಾಗಲೂ ಕಂಕುಳಲ್ಲಿ ಎತ್ತಿಕೊಂಡು, ಮಡಿಲಲ್ಲಿ ಮಲಗಿಸಿಕೊಂಡು, ತಪ್ಪು ಮಾಡಿದರೂ ಮುತ್ತು ಕೊಡುತ್ತಾ ನಮ್ಮನ್ನು...

ಹೊಸ ಸೇರ್ಪಡೆ