ಜನರ ಕಣ್ಣಲ್ಲಿ ಹಾಸ್ಯದ ವಸ್ತುಗಳಾದವರು


ಅರಕೆರೆ ಜಯರಾಮ್‌, Jul 27, 2019, 5:35 AM IST

v-49

ವಿಶ್ವಾಸಮತ ಯಾಚನೆಯ ಸರ್ಕಸ್ಸಿನ ಫ‌ಲಾಫ‌ಲ ಏನೇ ಇರಲಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೆರಡೂ ಜನರ ಕಣ್ಣಲ್ಲಿ ಹಾಸ್ಯಾಸ್ಪದ ವಸ್ತುಗಳಾಗಿರುವುದಂತೂ ನಿಜ. ಎರಡೂ ಪಕ್ಷಗಳ ನಾಯಕರು ಬಂಡಾಯ ಘೋಷಿಸಿದ ಭಿನ್ನಮತೀಯರ ನಡವಳಿಕೆಗಳ ಆಳ ಅಗಲಗಳನ್ನು ತಪ್ಪಾಗಿ ಲೆಕ್ಕ ಹಾಕಿದರು. ರಾಜೀನಾಮೆ ಅಂಗೀಕಾರದಲ್ಲಿ ವಿಳಂಬವಾದರೆ, ಅದೇ ರೀತಿ ಪಕ್ಷಾಂತರ ಕಾಯ್ದೆಯಡಿ ಅನರ್ಹತೆ ಎಂಬ ಗುಮ್ಮನನ್ನು ತೋರಿಸಿದರೆ, ಹೋದವರೆಲ್ಲ ಮರಳಿ ಬಂದು ತಮ್ಮೆದುರು ಶಿಸ್ತಾಗಿ ನಿಂತಾರೆಂದು ಉಭಯ ಪಕ್ಷಗಳ ನಾಯಕರೂ ಲೆಕ್ಕಹಾಕಿದರು.

ವಿಶ್ವಾಸಮತ ಯಾಚಿಸಲು ಅನುಸರಿಸಲಾದ ವಿಧಾನಗಳನ್ನು ಗಮನಿಸಿದರೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ತೀರ್ಪಿಗೆ ಕಾಯುವುದು; ತೀರ್ಪಿನ ಬಳಿಕ ಕೋರ್ಟಿನ ಸ್ಪಷ್ಟೀಕರಣ ಕೇಳಿ, ಅದಕ್ಕಾಗಿ ಕಾಯುವುದು, ಇತ್ತ ರಾಜ್ಯಪಾಲರ ಆದೇಶಕ್ಕೆ ಸೊಪ್ಪು ಹಾಕದೆ ತಮಗಿಷ್ಟ ಬಂದಂತಿರುವುದು – ಮುಂತಾದ ತಂತ್ರಗಳ ಲಾಭ ಪಡೆಯುವುದೇ ಉಭಯ ಪಕ್ಷಗಳ ಆಕಾಂಕ್ಷೆಯಾಗಿತ್ತು ಎನ್ನಬೇಕಾಗುತ್ತದೆ. ಸದನದಲ್ಲಿ ವಿಶ್ವಾಸಮತ ಪ್ರಕ್ರಿಯೆಯನ್ನು ಹೀಗೆ ವಿಳಂಬಿಸುವ ಮೂಲಕ ಅವು ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡವು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳಿಗೂ ತಪರಾಕಿ ನೀಡುವ ಮೂಲಕ ಜನರು ಈಗಾಗಲೇ ತಮ್ಮ ಅವಿಶ್ವಾಸವನ್ನು ಪ್ರಕಟಿಸಿದ್ದನ್ನು ನೋಡಿಯೇ ಇದ್ದೇವೆ.

ಸದನದಲ್ಲಿ ಮಿತ್ರ ಪಕ್ಷಗಳ ನಡವಳಿಕೆ ನೋಡಿದವರು ಹೀಗೂ ಅಂದುಕೊಳ್ಳಲು ಸಾಧ್ಯವಿದೆ. ವಿಧಾನಸಭೆಯಲ್ಲಿ ಬಹುಮತದ ಬೆಂಬಲದ ಕೊರತೆಯಿರುವ ಹೊರತಾಗಿಯೂ ಮೈತ್ರಿ ಸರಕಾರ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದೆಂಬ ಭ್ರಮೆಯಲ್ಲೇ ಇದ್ದ ಹಾಗಿತ್ತು. ಹಾಗೆ ನೋಡಿದರೆ ಈ ಹಿಂದೆ ಕೇಂದ್ರದಲ್ಲಿ ವಿವಿಧ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಅಲ್ಪಮತದ ಸರಕಾರಗಳು ಆಡಳಿತ ನಡೆಸಿದ್ದಿತು. ಈ ಮಾತಿಗೆ ಅತ್ಯುತ್ತಮ ಹಾಗೂ ಅತ್ಯಂತ ಕಳಪೆ ಉದಾಹರಣೆಯೆಂದರೆ ಚಂದ್ರಶೇಖರ್‌ ಸರಕಾರ. ಬಹುಶಃ ಬ್ರಿಟನ್‌ನಲ್ಲೂ ಈ ಹಿಂದೆ ಅಲ್ಪಮತದ ಸರಕಾರಗಳು (1929ರಲ್ಲಿ ಆಡಳಿತ ನಡೆಸಿದ ರಾಮ್ಸೇ ಮೆಕ್‌ಡೊನಾಲ್ಡ್ ಸರಕಾರ ಹಾಗೂ 1974ರಲ್ಲಿ ಹೆರಾಲ್ಡ್ ವಿಲ್ಸನ್‌ ಅವರ ಸರಕಾರ) ಆಳಿದ್ದುಂಟು ಎಂಬುದಾಗಿ ಯಾರೋ ರಾಜಕೀಯ ಪಂಡಿತರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿರಬೇಕು. ಅವೆರಡೂ ಲೇಬರ್‌ ಪಕ್ಷದ ಸರಕಾರಗಳಾಗಿದ್ದವು. ಒಂದು ಮಾತನ್ನಂತೂ ನಾವು ಒಪ್ಪಿಕೊಳ್ಳಲೇಬೇಕು – ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ನಾವು ಹೇಳಿಕೊಳ್ಳುತ್ತಿರುವುದು ಹೌದಾದರೂ, ಇಂಥ ಸರಕಾರಗಳನ್ನು ನಡೆಸುವ ರಾಜಕೀಯ ಶಿಸ್ತು ನಮ್ಮಲ್ಲಿಲ್ಲ. ಭಾರೀ ಬಹುಮತದಿಂದ ವಿಜೃಂಭಿಸುತ್ತಿದ್ದ ಸರಕಾರಗಳು ಕೂಡ ಕರ್ನಾಟಕದಲ್ಲಿ ಉರುಳಿಹೋಗಿವೆ. 1989-94ರಲ್ಲಿ ಆದುದು ಇದೇ. ಹಾಗಿದ್ದರೂ ಬಹುಮತವಿದ್ದೇ ಉಳಿದುಕೊಂಡ ಸರಕಾರಗಳು ರಾಜ್ಯಮಟ್ಟದಲ್ಲಿ ಆಗಿಹೋಗಿರುವುದು ನಿಜ. ಇದಕ್ಕೆ ಅತ್ಯುತ್ತಮ ಉದಾಹರಣೆ ಕೇರಳ. ಅಲ್ಲಿ ವಾಮರಂಗ ಹಾಗೂ ಸಂಯುಕ್ತರಂಗ ಎರಡೂ ಗಟ್ಟಿಮುಟ್ಟಾಗಿವೆ.

ಕರ್ನಾಟಕದ ವಿಶ್ವಾಸಮತ ಯಾಚನೆಯ ಪ್ರಸಂಗದತ್ತ ಮತ್ತೆ ಹೊರಳಿ ನೋಡಿದರೆ, ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿಶ್ವಾಸಮತ ಯಾಚನೆಗೆ ಮುಂದಾದುದಕ್ಕೆ ಕಾರಣ ನಿಶ್ಚಿತವಾಗಿಯೂ ಅವುಗಳ ತಪ್ಪೆಣಿಕೆಯೇ ಆಗಿತ್ತು. ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ ಎಂದು ಗೂಬೆ ಕೂರಿಸುವುದೇನೋ ಸುಲಭ. ಆದರೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳೆರಡೂ ತಮ್ಮ ತಮ್ಮ ಬಣಗಳನ್ನು ಸರಿಯಾದ ರೀತಿಯಲ್ಲಿ ‘ಕಾಪಾಡಿಕೊಳ್ಳುವಲ್ಲಿ’ ವಿಫ‌ಲವಾದವು ಎನ್ನುವುದು ಸ್ಪಷ್ಟ. ಜೆಡಿಎಸ್‌ ಪಾಲಿಗೆ ತೀರಾ ನಾಚಿಕೆಗೇಡಿನ ಸಂಗತಿಯೆಂದರೆ, ಬಂಡಾಯ ಶಾಸಕರಲ್ಲಿ ಒಬ್ಬರು, ಅದರ ಅಧ್ಯಕ್ಷರೇ ಆಗಿದ್ದದ್ದು. ಜೆಡಿಎಸ್‌ನ ಪರಮೋಚ್ಚ ನಾಯಕ ಎಚ್.ಡಿ. ದೇವೇಗೌಡ ಅವರ ತಥಾಕಥಿತ ಕುಶಾಗ್ರಮತಿ ಮೈತ್ರಿಕೂಟಕ್ಕೆ ನೆರವಾಗಲಿಲ್ಲವೆನ್ನುವುದು ಈಚಿನ ಲೋಕಸಭಾ ಚುನಾವಣೆಯ ಫ‌ಲಿತಾಂಶದಿಂದಲೇ ಸ್ಪಷ್ಟವಾಗಿದೆ. ಮೈತ್ರಿ ನಾಯಕರು ತಮ್ಮ ಅತಿ ಜಾಣ್ಮೆಗೆ ತಕ್ಕ ಬೆಲೆಯನ್ನು ತೆತ್ತಂತಾಗಿದೆ.

ಇದೇ ವೇಳೆ ಚತುರಮತಿಯೂ ವೃತ್ತಿ ಪರಿಣತರೂ ಆಗಿರುವ ರಮೇಶ್‌ಕುಮಾರರ ಅವರ ನಡವಳಿಕೆಯೂ ಗಮನಾರ್ಹ. 15 ಶಾಸಕರು ಖುದ್ದಾಗಿ ತಮ್ಮ ಕೈಬರಹದಲ್ಲಿ ನೀಡಿದ ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವಲ್ಲಿ ಅವರು ವಿಳಂಬ ನೀತಿ ಅನುಸರಿಸಿದರು. ವಿಶ್ವಾಸಮತ ಯಾಚನೆಗೆ ಮುನ್ನವೇ ಅವರು ಈ ಕೆಲಸ ಮಾಡಬೇಕಿತ್ತು. ವಿಧಾನಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಚರ್ಚೆ ಚಾಲ್ತಿಯಲ್ಲಿರುವಾಗ ರಾಜೀನಾಮೆ ವಿಲೇವಾರಿಗೆ ದಿನ ನಿಗದಿಪಡಿಸಿದ ಕ್ರಮ, ಮೈತ್ರಿ ಸರಕಾರವನ್ನು ಉಳಿಸಲು ಮಾಡಿದ ಯತ್ನದಂತೆ ಕಂಡು ಬಂದಿತು.

ವಿನೋದದ ಧಾಟಿಯಲ್ಲಿ ಹೇಳುವುದಾದರೆ ಸ್ವತಃ ಚಲನಚಿತ್ರ ನಿರ್ಮಾಪಕರಾಗಿರುವ ಕುಮಾರಸ್ವಾಮಿ, ವಿಧಾನಸಭಾ ಕಲಾಪವನ್ನು ಒಂದು ರಂಜನೆಯ ಕಥನವನ್ನಾಗಿ ಮಾರ್ಪಡಿಸಿದರು. ಟೆಲಿವಿಜನ್‌ನಲ್ಲಿ ಪ್ರಸಾರವಾಗುವ, ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಧಾನಸಭೆ/ಪರಿಷತ್ತುಗಳ ಕಲಾಪ ಕುರಿತ ವರದಿಗಳಲ್ಲಿ ಆಸಕ್ತಿಯೇ ಇಲ್ಲವೆಂಬಂತಿದ್ದ ಜನರು ಕೂಡ ಈಗ ವಿಧಾನಸಭೆಯಲ್ಲಿನ ಪ್ರಸಂಗಗಳಿಂದ ಸಾಕಷ್ಟು ಖುಷಿ ಪಡಲಾರಂಭಿಸಿದ್ದಾರೆ. ಎರಡೂ ಮೈತ್ರಿ ಪಕ್ಷಗಳಲ್ಲಿ ‘ಸದನ ಮುಂದೂಡಿಕೆ ಶಾಸಕರು’ ಬಹುಸಂಖ್ಯೆಯಲ್ಲಿದ್ದಾರೆ; ಅವರಲ್ಲಿ ಹಲವರು ತಮ್ಮದೇ ನಾಯಕ ಮಂಡಿಸಿದ ವಿಶ್ವಾಸಮತ ಗೊತ್ತುವಳಿ ಕುರಿತ ಕಲಾಪವನ್ನು ಮುಂದಕ್ಕೆ ಹಾಕುವಂತೆ ಆಗ್ರಹಿಸುತ್ತಿದ್ದುದನ್ನು ಕಂಡಿದ್ದೇವೆ. ಸಿದ್ಧರಾಮಯ್ಯನವರ ಪುತ್ರ ಡಾ| ಯತೀಂದ್ರ ಇಂಥವರಲ್ಲೊಬ್ಬರು. ಇನ್ನು ಒಬ್ಬ ಶಾಸಕಿಯಂತೂ ‘ಗಂಟೆ ಒಂಬತ್ತಾಯ್ತು, ನಮಗೆ ಹಸಿವಾಗುತ್ತಿದೆ’ ಎಂದು ಹಾರಾಟ ಚೀರಾಟ ನಡೆಸಿದ್ದು ತುಂಬಾ ತಮಾಷೆಯಾಗಿತ್ತು. ಹೀಗೆ ಸುದೀರ್ಘ‌ ಬೈಠಕ್‌ಗಳ ಕಷ್ಟಗಳನ್ನು ಶಾಸಕರಾದವರು ಸಹಿಸಿಕೊಳ್ಳಬೇಕಾಗುತ್ತದೆ; ಏಕೆಂದರೆ ಸದನದ ಸದಸ್ಯತ್ವ ಅವರಿಗೆ ಸಾಕಷ್ಟು ಹಕ್ಕು, ಅಧಿಕಾರ, ಪ್ರಭಾವ, ರಾಜಕೀಯ ಆಶ್ರಯ ಹಾಗೂ ಹಣವನ್ನು ತಂದುಕೊಡುತ್ತದೆಂದು ಯಾರಾದರೂ ಆಕೆಗೆ ನೆನಪಿಸಿಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲದೆ, ಇಂಥ ಸುದೀರ್ಘ‌ ಬೈಠಕುಗಳು ನಡೆಯುವುದೇ ಅಪರೂಪ. ನಮ್ಮ ಶಾಸನ ಸಭೆಗಳು ನಡೆಯುವುದು ಸಾಮಾನ್ಯವಾಗಿ ಸಾಂವಿಧಾನಿಕ ಅಗತ್ಯವನ್ನು ಪೂರೈಸಲಿಕ್ಕಾಗಿ ಮಾತ್ರ.

ಇನ್ನು, ಸದನದಲ್ಲಿ ಬಿಜೆಪಿ ಅದ್ಭುತ ಸಂಯಮವನ್ನು ಪ್ರದರ್ಶಿಸಿತು. ಆಡಳಿತ ಪಕ್ಷದ ಯಾವುದೇ ಹೇಳಿಕೆಯಿಂದ ಉದ್ರೇಕಕ್ಕೆ ಒಳಗಾಗದಷ್ಟು ತಾಳ್ಮೆಯನ್ನು ಕಾಪಾಡಿಕೊಂಡಿತು. ಒಂದು ವೇಳೆ ತನ್ನ ಸದಸ್ಯರು ಆಳುವ ಪಕ್ಷಗಳ ಸದಸ್ಯರೊಂದಿಗೆ ಸಂಘರ್ಷಕ್ಕೆ ಮುಂದಾದರೆ, ಧ್ವನಿಮತದ ಕ್ರಮಮನ್ನೇ ಅನುಸರಿಸುವಂತೆ ಆಗ್ರಹಿಸಲು ಆಳುವ ಪಕ್ಷೀಯರಿಗೊಂದು ಪ್ರಬಲ ಅಸ್ತ್ರ ದೊರೆತಂತಾದೀತೆನ್ನುವುದು ಬಿಜೆಪಿಯ ನಿಲುವಾಗಿದ್ದಿರಬಹುದು. ಚರ್ಚೆಯ ಉದ್ದಕ್ಕೂ ಕೇವಲ ಚಿಕ್ಕ ನಾಯಕನ ಹಳ್ಳಿಯ ಬಿಜೆಪಿ ಶಾಸಕ ಜೆ.ಪಿ. ಮಧುಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇವರಿಬ್ಬರಷ್ಟೇ ಮುಖ್ಯಮಂತ್ರಿ ಮತ್ತಿತರರ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು; ಪಕ್ಷದ ತಾರಾ ವಕ್ತಾರರಾದ ಎಸ್‌. ಸುರೇಶ್‌ ಕುಮಾರ್‌, ಎ. ರಾಮದಾಸ್‌ ಹಾಗೂ ಸಿ.ಟಿ. ರವಿಯಂಥವರು ಮೌನದಿಂದ ಇದ್ದರು.

ಗಮನಿಸಬೇಕಾದ ಅಂಶವೆಂದರೆ, ಸುಪ್ರಿಂಕೋರ್ಟಿಗೆ ದೂರು ಸಲ್ಲಿಸುವುದಕ್ಕೆ ಅಗತ್ಯವಿದ್ದ ಸಕಾರಣಗಳು ಬಂಡಾಯ ಶಾಸಕರಲ್ಲಿದ್ದವು ಎನ್ನುವುದು ನಿಜವೇ ಆದರೂ, ಈ ವಿಷಯವನ್ನು ನಿಭಾಯಿಸುವಲ್ಲಿ ಕುಮಾರಸ್ವಾಮಿ ಸರಕಾರದ ಕಡೆಯಿಂದ ಕೆಲವರು ತೋರಿದ ನಡವಳಿಕೆಗಳಿಂದಾಗಿ ಸುಪ್ರೀಂಕೋರ್ಟಿನ ಬಹಳಷ್ಟು ಸಮಯ ಹಾಳಾಗುವಂತಾಯಿತು. 1985ರಲ್ಲಿ ಪಕ್ಷಾಂತರ ವಿರೋಧಿ ಕಾಯ್ದೆ (ಸಂವಿಧಾನದ 10ನೆಯ ಪರಿಚ್ಛೇದ) ಜಾರಿಗೆ ಬಂದ ಬಳಿಕ ಇತ್ಯರ್ಥವಾದ ವಿವಾದಗಳ ಸಂಬಂಧದಲ್ಲಿ ಸ್ಪಷ್ಟನೆ ಕೇಳುವ ಕೆಲಸವೇ ನಡೆಯಿತು. ಸಚೇತಕಾಜ್ಞೆ ಹೊರಡಿಸುವುದಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಪಕ್ಷದ ನಾಯಕನಿಗೆ ಅಧಿಕಾರವಿದೆಯೇ, ಇಲ್ಲವೆ ಮುಂತಾದ ವಿಷಯಗಳ ಬಗ್ಗೆ ಹೇಳುವುದಾದರೆ, ಇಂಥವುಗಳಲ್ಲಿ ‘ಹೊಸತು’ ಎನ್ನಬಹುದಾದಂಥ ಅಂಶಗಳೇನೂ ಇಲ್ಲ. ಈಗಾಗಲೇ ರಾಜೀನಾಮೆ ನೀಡಿರುವ, ಆದರೆ ಆ ರಾಜೀನಾಮೆಗಳ ಸ್ವೀಕೃತಿ ಪ್ರಕ್ರಿಯೆ ‘ಬಾಕಿಯಿರುವ ವಿಚಾರ’ದಲ್ಲಿ ಸಲ್ಲಿಸಿರುವ ದೂರಿನಲ್ಲಿ ಮಾತ್ರ ಅರ್ಥವಿತ್ತೆನ್ನಬಹುದು. ಸರಕಾರ ಉಳಿಯಬೇಕೆಂಬ ದೃಷ್ಟಿಯಿಂದ ಕೋರ್ಟಿನಿಂದ ತಮ್ಮ ಪರವಾದ ಆದೇಶ ಹೊರಬೀಳುವುದೆಂಬ ನಿರೀಕ್ಷೆ ಮಿತ್ರ ಪಕ್ಷಗಳದ್ದಾಗಿತ್ತು.

ನಮ್ಮ ದೇಶದಲ್ಲಿ ಶಾಸನ ಸಭೆಯೇ ಪರಮೋಚ್ಚ; ಅಥವಾ ಸಭಾಧ್ಯಕ್ಷರೇ ಎಲ್ಲಕ್ಕಿಂತ ಹೆಚ್ಚಿನವರು ಎಂಬ ಭಾವನೆ ನಮ್ಮ ಮೈತ್ರಿ ಪಕ್ಷಗಳ ಶಾಸಕರ ಪೈಕಿ ಕೆಲವರಲ್ಲಿದೆ ಎಂಬ ಸಂಗತಿ ಯಾರ ಗಮನಕ್ಕೂ ಬಿದ್ದಿಲ್ಲ ಎನ್ನುವಂತಿಲ್ಲ! ಶಾಸನ ಸಭೆಗಳ ಅಧ್ಯಕ್ಷರುಗಳ ನಡವಳಿಕೆಗೆ ಸಂಬಂಧಿಸಿದ ಹಲವಾರು ಕೇಸುಗಳು ನ್ಯಾಯಾಲಯಗಳಲ್ಲಿವೆ. ಆದರೂ ನ್ಯಾಯಾಲಯಗಳಲ್ಲಾದ ಇಂಥ ಪ್ರಕರಣಗಳನ್ನು ಕೇವಲ ‘ಮನಸ್ಸಿಲ್ಲದೆ’ ನಿರ್ವಹಿಸುತ್ತಿವೆಯಷ್ಟೆ ಎಂಬ ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಅವರ ಹೇಳಿಕೆಯನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ರಾಜ್ಯಪಾಲರ ಹುದ್ದೆಯನ್ನೂ ತೀರಾ ಅಸಡ್ಡೆಯಿಂದ ಕಂಡವು; ವಿಶೇಷವಾಗಿ ರಾಜ್ಯಪಾಲ ಹುದ್ದೆಯಲ್ಲಿ ಈಗ ಇರುವ ವಜೂಭಾಯ್‌ ವಾಲಾ ಅವರಿಗೆ ಅಗೌರವ ತೋರಿಸಿದವು. ಇಲ್ಲವಾದರೆ, ಕೆಲವರು ಮೊಳಗಿಸಿದ ‘ಗೋ ಬ್ಯಾಕ್‌ ರಾಜ್ಯಪಾಲ’ ಎಂಬ ಘೋಷಣೆಗೆ ಏನರ್ಥ? ಬಂಡಾಯ ಶಾಸಕರು ವಿಧಾನ ಸೌಧಕ್ಕೆ ಧಾವಿಸಿ ಬರಲು ಅನುಕೂಲವಾಗುವಂತೆ ‘ಶೂನ್ಯ ಟ್ರಾಫಿಕ್‌’ ವ್ಯವಸ್ಥೆ ಮಾಡುವಂತೆ ಬೆಂಗಳೂರು ಪೊಲೀಸರಿಗೆ ಆದೇಶಿಸಿದವರು ರಾಜ್ಯಪಾಲರೇ ಎಂಬ ಆರೋಪ ಸ್ಪೀಕರ್‌ ಅವರ ತನಿಖೆಯಿಂದ ಸುಳ್ಳೆಂದು ಸಾಬೀತಾಗಿದೆ.

ಇನ್ನು , ವಿಶ್ವಾಸಮತ ಸಾಬೀತಿಗೆ ಗಡುವು ವಿಧಿಸಿ ರಾಜ್ಯಪಾಲರು ಕಳಿಸಿದ ಸಂದೇಶಗಳಿಗೂ ಪ್ರತಿಭಟನೆ ವ್ಯಕ್ತವಾಯಿತು. ರಾಜ್ಯಪಾಲರು ಕಳಿಸುವ ಸಂದೇಶ/ಆದೇಶಗಳು ಸದನದಲ್ಲಿ ಬಾಕಿಯಾಗಿರುವ ಮಸೂದೆಗಳಿಗಷ್ಟೆ ಸಂಬಂಧಿಸಿರಬೇಕು ಎಂಬ ಕಾರಣ ಮುಂದೊಡ್ಡಿ ಕೆಲ ಸದಸ್ಯರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಮ್ಮ ಲೋಕಸಭೆಯ ಮಾಜಿ ಸ್ಪೀಕರ್‌ ಎ. ಅನಂತ ಶಯನಂ ಅಯ್ಯಂಗಾರ್‌ ಅವರು ರಾಷ್ಟ್ರಪತಿಗಳ ಸಂದೇಶಕ್ಕೆ ತೋರಿದ ಗೌರವವನ್ನು ಉಲ್ಲೇಖೀಸಬೇಕು. 1960ರ ವಿದ್ಯಮಾನ ಇದು. ಈ ವಿಷಯದಲ್ಲಿ ಅಯ್ಯಂಗಾರ್‌ ಒಂದು ಹೊಸ ಪರಂಪರೆಯನ್ನೇ ಆರಂಭಿಸಿದರು. ರಾಷ್ಟ್ರಪತಿಗಳು ಕಳಿಸಿದ ಸಂದೇಶವನ್ನು ಸಭಾಧ್ಯಕ್ಷನಾದ ತಾನು ಓದುವಾಗ ಸದಸ್ಯರೆಲ್ಲ ಎದ್ದು ನಿಲ್ಲಬೇಕು ಎಂಬುದೇ ಈ ಕ್ರಮ. ರಾಜ್ಯಪಾಲರಾಗಿ ನೇಮಕಗೊಳ್ಳುವ ಮುನ್ನ ವಜೂಭಾಯ್‌ ವಾಲಾ ಅವರು ಓರ್ವ ರಾಜಕಾರಣಿಯಾಗಿದ್ದಿರಬಹುದು; ಆದರೆ ಗೌರವ ತೋರಲೇಬೇಕಿರುವ ಹುದ್ದೆಯಲ್ಲಿ ಅವರೀಗ ಇದ್ದಾರೆ. ಅವರನ್ನು ಅಸಡ್ಡೆ ಮಾಡುವ ಹಾಗಿಲ್ಲ.

ಇನ್ನೂ ಒಂದು ಮಾತು – ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ದೀರ್ಘ‌ ಭಾಷಣಗಳಿಗೆ ಅವಕಾಶ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ವಿರೋಧಪಕ್ಷ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಂದರ್ಭದಲ್ಲಿ ಸರಕಾರದ ವಿರುದ್ಧ ಸುದೀರ್ಘ‌ವಾಗಿ ಮಾತನಾಡುವ ಅವಕಾಶ ವಿರೋಧಪಕ್ಷದ ಸದಸ್ಯರಿಗೆ ಇರುತ್ತದೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೆಯ ಸರಕಾರ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ 9 ದಿನಗಳ ಚರ್ಚೆ ನಡೆದಿತ್ತು ಎಂದು ಕೆಲ ಸಚಿವರುಗಳು ಆಗಾಗ ಹೇಳುತ್ತಲೇ ಹೋದರು. ಆದರೆ, ವಾಜಪೇಯಿ ಎದುರಿಸಿದ್ದು ಅವಿಶ್ವಾಸಮತ ಗೊತ್ತುವಳಿಯನ್ನು. ವಿಶ್ವಾಸ ಮತ ಗೊತ್ತುವಳಿ ಕುರಿತ ಚರ್ಚೆಯನ್ನು ಒಂಬತ್ತು ದಿನಕ್ಕೋ ಒಂಬತ್ತು ತಿಂಗಳಿಗೋ ವಿಸ್ತರಿಸಕೂಡದು. ಈ ಪ್ರಕ್ರಿಯೆಯನ್ನು ಒಂದು ಪ್ರಹಸನವಾಗಿ ಪರಿವರ್ತಿಸುವಂತಿಲ್ಲ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.