ಪಾರ್ವತಮ್ಮ ಮಗಳ ಸಾಹಸಗಾಥೆ

ಚಿತ್ರ ವಿಮರ್ಶೆ

Team Udayavani, May 25, 2019, 3:00 AM IST

“ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತಪ್ಪು ಮಾಡಿ, ಮನುಷ್ಯತ್ವವನ್ನೇ ಮರೆಯುತ್ತಾನೆ…’ ಸಿಐಡಿ ಅಧಿಕಾರಿ ವೈದೇಹಿ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆಯಾಗಿ, ಆ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ, ಕೊಲೆಗಾರನ ಮುಂದೆ ಕುಳಿತಿರುತ್ತಾಳೆ. ಅಸಲಿಗೆ ಅದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನ ದಟ್ಟವಾದ ಬೆನ್ನಲ್ಲೇ ತನಿಖಾಧಿಕಾರಿ ವೈದೇಹಿ, ಕೊಲೆಯ ಸುತ್ತ ತನಿಖೆಗಿಳಿಯುತ್ತಾಳೆ.

ಆ ಕೊಲೆಯ ರಹಸ್ಯ ಎಂಥದ್ದು, ಅದರ ಹಿಂದೆ ಯಾರಿದ್ದಾರೆ ಅನ್ನೋದೇ ಚಿತ್ರದ ಹೈಲೈಟ್‌. ಇಡೀ ಚಿತ್ರ ಒಂದು ಕೊಲೆಯಿಂದ ಆರಂಭಗೊಂಡು, ಕೊಲೆಗಾರನ ಹಿಡಿಯುವಲ್ಲಿಗೆ ಅಂತ್ಯವಾಗುತ್ತೆ. ಆ ನಡುವೆ ನಡೆಯುವ ತನಿಖೆ ಚಿತ್ರದ ಸಣ್ಣ ಕುತೂಹಲಕ್ಕೆ ಕಾರಣವಾಗುತ್ತೆ. ಹಾಗೆ ನೋಡಿದರೆ, ಕನ್ನಡದಲ್ಲಿ ಈ ರೀತಿಯ ಸಾಕಷ್ಟು ಕಥೆಗಳು ಬಂದು ಹೋಗಿವೆಯಾದರೂ, ಇಲ್ಲಿರುವ ನಿರೂಪಣೆ ಮತ್ತು ಚಿತ್ರಕಥೆಯ ಬಿಗಿಹಿಡಿತ ಎಲ್ಲೂ ಗೊಂದಲ ಸೃಷ್ಟಿಸದೆ, ಚಿತ್ರ ಸಾಂಗೋಪವಾಗಿ ಸಾಗುತ್ತದೆ.

ಇಂತಹ ಚಿತ್ರಗಳಿಗೆ ಗಂಭೀರ ಮಾತುಗಳು, ಹಿನ್ನೆಲೆ ಸಂಗೀತ ತೂಕವಾಗಿರಬೇಕು. ಆ ಬಗ್ಗೆ ಇಲ್ಲಿ ಮಾತಾಡುವಂತಿಲ್ಲ. ಮೊದಲರ್ಧ ಅಲ್ಲಲ್ಲಿ ನೋಡುಗರ ತಾಳ್ಮೆ ಪರೀಕ್ಷಿಸಿದರೂ, ದ್ವಿತಿಯಾರ್ಧದಲ್ಲಿ ಪಾರ್ವತಮ್ಮ ಮಗಳ ಸಾಹಸವನ್ನು ಮೆಚ್ಚಿಸುತ್ತಾ ಹೋಗುತ್ತದೆ. ಒಂದು ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರದಲ್ಲಿ ಏನೆಲ್ಲಾ ಏರಿಳಿತಗಳು, ತಿರುವುಗಳು, ನಿರೀಕ್ಷೆಗಳನ್ನು ಕಾಣಬಹುದೋ, ಅವೆಲ್ಲವನ್ನೂ ಇಲ್ಲಿ ಕಾಣಬಹುದು. ನೋಡುಗರ ಮತ್ತೂಂದು ಸಮಾಧಾನಕ್ಕೆ ಕಾರಣ, ಅತೀವೇಗದಲ್ಲಿ ಸಾಗುವ ಚಿತ್ರ, ಅಷ್ಟೇ ಕಡಿಮೆ ಅವಧಿಯಲ್ಲಿ ಮುಗಿದು, ತೃಪ್ತ ಭಾವ ಎನಿಸುವುದು.

ಸಾಮಾನ್ಯವಾಗಿ ಕ್ರೈಮ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಗಳಲ್ಲಿ ಅಬ್ಬರ ಹೆಚ್ಚಾಗಿರುತ್ತೆ. ಆದರೆ, ಇಲ್ಲಿ ಅಂತಹ ಯಾವುದೇ ಅಬ್ಬರಗಳಿಲ್ಲದೆ, ಅಷ್ಟೇ ತಿಳಿಯಾಗಿ, ತನಿಖೆ ಸಾಗುತ್ತದೆ. ಹಾಗಂತ, ತನಿಖೆಯಲ್ಲಿ ಮಜ ಇಲ್ಲವೆಂದಲ್ಲ. ಆದರೆ, ತನಿಖೆಯಲ್ಲಿ ಇನ್ನಷ್ಟು “ಧಮ್‌’ ಇರಬೇಕಿತ್ತು. ತನಿಖಾಧಿಕಾರಿ ಪಾತ್ರಕ್ಕೆ ಮಗದಷ್ಟು ಜೋಶ್‌ ತುಂಬಬಹುದಾಗಿತ್ತು. ಆದರೂ, ಚಿತ್ರದುದ್ದಕ್ಕೂ ಅಲ್ಲಲ್ಲಿ ಕಾಣಸಿಗುವ ತಿರುವುಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ.

ಆ ವೇಗಕ್ಕೆ ಸಾಥಿ ಎಂಬಂತೆ ಛಾಯಾಗ್ರಹಣದ ಕೆಲಸವೂ ಆಗಾಗ ಥ್ರಿಲ್‌ ಕೊಡುತ್ತದೆ. ಕೆಲವು ದೃಶ್ಯಗಳಲ್ಲಿ ಸಣ್ಣ ಪುಟ್ಟ ತಪ್ಪುಗಳು ಕಾಣಸಿಗುತ್ತವೆ. ನಿರ್ದೇಶಕರ ಮೊದಲ ಪ್ರಯತ್ನ ಆಗಿರುವುದರಿಂದ ಅದನ್ನು ಪಕ್ಕಕ್ಕಿಟ್ಟು ಪಾರ್ವತಮ್ಮನ ಮಗಳ ತನಿಖೆ ನೋಡಲು ಅಡ್ಡಿಯಿಲ್ಲ. ಒಂದು ಕೊಲೆ ಕಥೆ ಹಿಂದಿನ ತನಿಖೆ ಅಂದಾಗ, ಅಲ್ಲಿ ಹಿಂಸೆ, ಹೊಡೆದಾಟ, ಬಡಿದಾಟ, ಆಕ್ರಂದನ, ಕಣ್ಣೀರು ಇತ್ಯಾದಿ ಅಬ್ಬರ ಸಹಜ. ಆದರೆ, ಇಲ್ಲಿ ನಿರ್ದೇಶಕರು ಅದ್ಯಾವುದಕ್ಕೂ ಜಾಗ ಕಲ್ಪಿಸದೆ, ಎಲ್ಲವನ್ನೂ “ಕೂಲ್‌’ ಆಗಿಯೇ ತನಿಖೆಗೊಳಪಡಿಸಿದ್ದಾರೆ.

ಶೀರ್ಷಿಕೆಗೆ ತಕ್ಕಂತೆ ಇಲ್ಲಿ ಮಗಳ ಮೇಲೆ ಅತ್ಯಂತ ಕಾಳಜಿ ತೋರುವ ಅಮ್ಮ ಇದ್ದಾಳೆ, ಅಮ್ಮನ ಮೇಲೂ ಅಷ್ಟೇ ಪ್ರೀತಿ ತೋರುವ ಮಗಳಿದ್ದಾಳೆ. ಇಬ್ಬರ ನಡುವೆ ಮುನಿಸು, ಜಗಳ, ಅಕ್ಕರೆ, ಮಮತೆ ಎಲ್ಲವೂ ಇದೆ. ಸಿನಿಮಾದಲ್ಲಿ ಪಾರ್ವತಮ್ಮನ ಮಗಳು ಬರೀ ತನಿಖೆ ನಡೆಸಲ್ಲ. ಅವಳಲ್ಲೂ ಅನುಕಂಪ, ಭಾವುಕತೆ, ಗೆಳೆತನ, ಆಕ್ರೋಶ, ನೈಜ ಹೊಡೆದಾಟ ಮತ್ತು ಚಿಗುರೊಡೆಯುವ ಪ್ರೀತಿ, ಹಾಡು-ಗೀಡು ಇತ್ಯಾದಿ ವಿಷಯಗಳೂ ಸುಳಿದಾಡುತ್ತವೆ.

ಅವೆಲ್ಲವೂ ನೋಡುಗರನ್ನು ಕೊಂಚ ರಿಲ್ಯಾಕ್ಸ್‌ ಮೂಡ್‌ಗೆ ತಳ್ಳುತ್ತವೆ. ಅಲ್ಲಲ್ಲಿ ಬೆರಳೆಣಿಕೆ ತಪ್ಪುಗಳಿವೆಯಾದರೂ, ಪಾರ್ವತಮ್ಮನ ಮಗಳ ತನಿಖೆ ಅವೆಲ್ಲವನ್ನೂ ಮರೆಮಾಚಿಸುತ್ತದೆ. ಆ ತನಿಖೆ ಹೇಗಿರುತ್ತೆ ಎಂಬ ಕುತೂಹಲವಿದ್ದರೆ, ಪಾರ್ವತಮ್ಮ ಮಗಳ ಸಾಹಸಗಾಥೆ ನೋಡಬಹುದು. ಕಥೆ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ ಡಾಕ್ಟರ್‌ ಅಹಲ್ಯಾಳ ಶವ ರಿಂಗ್‌ ರಸ್ತೆಯಲ್ಲಿ ಕಾಣಸಿಗುತ್ತೆ. ಅದು ಆತ್ಮಹತ್ಯೆಯೂ ಹೌದು, ಕೊಲೆಯೂ ಹೌದು ಎಂಬ ವರದಿಯೂ ಸಿಗುತ್ತೆ.

ತನಿಖೆ ಚುರುಕಿಲ್ಲದ ಕಾರಣ, ಆ ಕೇಸಿನ ಒತ್ತಡ ಹೆಚ್ಚಾಗಿ ಗೃಹಮಂತ್ರಿ, ಸಿಐಡಿಗೆ ಆ ಕೇಸನ್ನು ತನಿಖೆ ನಡೆಸುವಂತೆ ಆದೇಶಿಸುತ್ತಾರೆ. ಆ ಕೇಸು ತನಿಖಾಧಿಕಾರಿ ವೈದೇಹಿ (ಹರಿಪ್ರಿಯಾ) ಕೈ ಸೇರುತ್ತೆ, ಅದು ಸಹಜ ಸಾವೋ, ಕೊಲೆಯೋ, ಆತ್ಮಹತ್ಯೆಯೋ ಎಂಬ ಗೊಂದಲದಲ್ಲೇ, ಆಕೆ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸುತ್ತಾಳೆ. ಕೊನೆಗೆ ಅದು ಕೊಲೆ ಎಂಬ ಸುಳಿವು ಸಿಗುತ್ತೆ. ಆ ಸುಳಿವು ಹಿಡಿದು ಹೊರಟ ಆ ತನಿಖಾಧಿಕಾರಿಗಷ್ಟೇ ಅಲ್ಲ, ನೋಡುಗರಿಗೂ ಒಂದು ಅಚ್ಚರಿ ವಿಷಯ ಗೊತ್ತಾಗುತ್ತೆ.

ಅಷ್ಟಕ್ಕೂ ಆ ಕೊಲೆ ಮಾಡಿದ್ದು ಯಾರು ಅನ್ನೋದೇ ಚಿತ್ರದ ಹೈಲೈಟ್‌. ಹರಿಪ್ರಿಯಾ ಅವರ 25 ನೇ ಚಿತ್ರವಾದ್ದರಿಂದ ವಿಶೇಷ ಪಾತ್ರವೇ ಸಿಕ್ಕಿದೆ. ಆದರೆ, ನಟನೆಯಲ್ಲಿ ಇನ್ನಷ್ಟು ಫೋರ್ಸ್‌ ಬೇಕಿತ್ತು. ಗ್ಲಾಮರ್‌ಗಷ್ಟೇ ಸೀಮಿತವಾಗಿದ್ದ ಹರಿಪ್ರಿಯಾ ಅವರನ್ನು ಇಲ್ಲಿ ಟಾಮ್‌ಬಾಯ್‌ ಆಗಿ ಕಾಣಬಹುದು. ಕಿಡಿಗೇಡಿಗಳನ್ನು ಚಚ್ಚುವ ದೃಶ್ಯದಲ್ಲಿನ್ನೂ ಖದರ್‌ ತೋರಿಸಬಹುದಿತ್ತು. ಆದರೂ, ಸಿಕ್ಕ ಪಾತ್ರವನ್ನು ತೂಗಿಸಿದ್ದಾರೆ.

ಸುಮಲತಾ ಅಂಬರೀಶ್‌ ಇಲ್ಲಿ ಎಲ್ಲರಿಗೂ ಇಷ್ಟ ಆಗುವ ಅಮ್ಮನಾಗಿ ಗಮನಸೆಳೆಯುತ್ತಾರೆ. ಸೂರಜ್‌, ಪ್ರಭು, “ತರಂಗ’ ವಿಶ್ವ, ರಾಘವೇಂದ್ರ, ಶ್ರೀಧರ್‌ ಇತರರು ಪಾತ್ರಗಳಿಗೆ ಮೋಸ ಮಾಡಿಲ್ಲ. ಮಿಧುನ್‌ ಮುಕುಂದನ್‌ ಸಂಗೀತದ “ಜೀವಕ್ಕಿಲ್ಲಿ ಜೀವ ಬೇಟೆ..’ ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತವೂ ಮಾತಾಡುತ್ತದೆ. ಅರೂಲ್‌ ಕೆ.ಸೋಮಸುಂದರಂ ಕ್ಯಾಮೆರಾ ಕೈಚಳಕ ಪಾರ್ವತಮ್ಮ ಮಗಳ ಸೌಂದರ್ಯವನ್ನು ಹೆಚ್ಚಿಸಿದೆ.

ಚಿತ್ರ: ಡಾಟರ್‌ ಆಫ್ ಪಾರ್ವತಮ್ಮ
ನಿರ್ಮಾಣ: ದಿಶ ಎಂಟರ್‌ಟೈನ್‌ಮೆಂಟ್ಸ್‌
ನಿರ್ದೇಶನ: ಶಂಕರ್‌ .ಜೆ
ತಾರಾಗಣ: ಹರಿಪ್ರಿಯಾ, ಸುಮಲತಾ ಅಂಬರೀಶ್‌, ಸೂರಜ್‌, ಪ್ರಭು, ವಿಶ್ವ, ರಾಘವೇಂದ್ರ, ಸುಧಿ, ಶ್ರೀಧರ್‌ ಇತರರು.

* ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ •ನಿರ್ಮಾಣ: ಟಿ.ಆರ್‌.ಚಂದ್ರಶೇಖರ್‌ •ನಿರ್ದೇಶನ: ಸುಜಯ್‌ ಶಾಸ್ತ್ರಿ •ತಾರಾಗಣ: ರಾಜ್‌ ಬಿ ಶೆಟ್ಟಿ, ಕವಿತಾ, ಗಿರಿ,...

  • ಅದು ಆದಿಕಾಳೇಶ್ವರಿ ಗಿರಿ. ಆ ಗಿರಿಯ ತುದಿಯಲ್ಲೊಂದು ಭವ್ಯವಾದ ಬಂಗಲೆ. ಆ ಬಂಗಲೆಯೊಳಗೆ ಬೇತಾಳಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಆತ್ಮವೊಂದು ಇದೆ. ಏನೂ ಅರಿಯದ...

  • ಅವನ ಹೆಸರು ಕೆಂಪೇಗೌಡ. ಪೊಲೀಸ್‌ ಸರ್ಕಲ್ ಇನ್ಸ್‌ಪೆಕ್ಟರ್‌. ಇಲಾಖೆಗೆ ಸೇರಿದ 7-8 ವರ್ಷಗಳಲ್ಲಿ 15-16 ಕಡೆ ಟ್ರಾನ್ಸ್‌ಫ‌ರ್‌. ಅದಕ್ಕೆ ಕಾರಣ 'ಕೆಂಪೇಗೌಡ'ನ ಯಾರಿಗೂ...

  • ಚಿತ್ರ: ಕುರುಕ್ಷೇತ್ರ •ನಿರ್ಮಾಣ: ಮುನಿರತ್ನ •ನಿರ್ದೇಶನ: ನಾಗಣ್ಣ •ತಾರಾಗಣ: ದರ್ಶನ್‌, ಅಂಬರೀಶ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ರವಿಚಂದ್ರನ್‌, ನಿಖೀಲ್...

  • ಚಿತ್ರದ ಹೆಸರು "ಭಾನು ವೆಡ್ಸ್‌ ಭೂಮಿ'. ಇಷ್ಟು ಹೇಳಿದ ಮೇಲೆ ಚಿತ್ರದ ನಾಯಕನ ಹೆಸರು "ಭಾನು', ನಾಯಕಿಯ ಹೆಸರು "ಭೂಮಿ'. ಇದೊಂದು ಲವ್‌ ಸ್ಟೋರಿ ಎನ್ನುವ ಯಾವ ಅಂಶಗಳನ್ನೂ...

ಹೊಸ ಸೇರ್ಪಡೆ