CONNECT WITH US  

ಪರಿಸರ ಮಾಲಿನ್ಯ ಮತ್ತು ನಿಯಂತ್ರಕ ಅಂಶಗಳು

ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ ಸರಿಪಡಿಸಲಾಗದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸರಮಾಲಿನ್ಯದಲ್ಲಿ ಮುಖ್ಯವಾಗಿ ಐದು ವಿಧಗಳು, ಅವೆಂದರೆ-

ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ವಿಕಿರಣ ಸಂಬಂಧಿತ ಮಾಲಿನ್ಯ. ಪ್ರತೀ ವರ್ಷವೂ ಜಗತ್ತಿನಲ್ಲಿ ಸುಮಾರು 2.4 ಮಿಲಿಯನ್‌ ಜನರು, ಕೇವಲ ವಾಯುಮಾಲಿನ್ಯದ ನೇರ ಪರಿಣಾಮಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜು ಮಾಡಿದೆ. 

ಒಂದು ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ ವಿವಿಧ ಹಾನಿಕಾರಕ ಅಂಶಗಳನ್ನು ಅಥವಾ ಅನಾರೋಗ್ಯಕರ ಅಂಶಗಳನ್ನು ಆ ಪರಿಸರದ ಒಳಕ್ಕೆ ಸೇರಿಸುವುದು- ಇದು ಪರಿಸರಮಾಲಿನ್ಯಕ್ಕೆ ನಾವು ಕೊಡಬಹುದಾದ ಅತ್ಯಂತ ಸೂಕ್ತ ವಿವರಣೆ. ಬಹಳ ಸಾಮಾನ್ಯ ರೀತಿಯ ಮಾಲಿನ್ಯ ಕಾರಕಗಳು ಅಂದರೆ, ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಕಲುಷಿತ ನೀರು.  ರಾಜಧಾನಿ ಬೀಜಿಂಗ್‌ ಸೇರಿದಂತೆ ಚೀನಾದ ನಗರಗಳು ವಾಯುಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆ.  ಅತ್ಯಧಿಕ ಮಟ್ಟದಲ್ಲಿ ಕಲುಷಿತವಾಗಿರುವ ಭಾರತದ ಗಂಗಾನದಿ ಜಲಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆಗಳಲ್ಲಿ ಒಂದು.  
 
ನೈರ್ಮಲ್ಯವು ಸ್ವಾತಂತ್ರÂಕ್ಕಿಂತಲೂ ಹೆಚ್ಚಿನದು ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ. ಆದರೆ ದುರದೃಷ್ಟದ ವಿಚಾರ ಅಂದರೆ, ನಾವು ಸ್ವಾತಂತ್ರÂವನ್ನು ಗಳಿಸಿ 67 ವರ್ಷಗಳನ್ನು ಕ್ರಮಿಸಿದ್ದರೂ ಸಹ, ಇಲ್ಲಿ ಶೌಚಾಲಯದ ಸೌಕರ್ಯ ದೊರೆತಿರುವುದು ಗ್ರಾಮೀಣ ನಾಗರಿಕರಲ್ಲಿ ಸುಮಾರು 30% ರ‌ಷ್ಟು ಜನರಿಗೆ ಮಾತ್ರ. 
 
ಮನುಷ್ಯ ತನ್ನ ಜೀವನ ಸೌಕರ್ಯದ ಅತಿಲಾಲಸೆಗಾಗಿ ಪರಿಸರವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಧಾವಂತದಲ್ಲಿ, ಸ್ವಾರ್ಥಪರನಾಗಿ ಮಾಲಿನ್ಯದ ಪರಿಣಾಮಗಳನ್ನೇ ಮರೆತುಬಿಟ್ಟಿದಾನೆ.  ಕೈಗಾರಿಕಾ ಅಭಿವೃದ್ಧಿಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿವೆ.  ಇಡೀ ಜೀವಜಗತ್ತಿನ ಜೀವನಾಧಾರ ವ್ಯವಸ್ಥೆಯನ್ನು ಮನುಷ್ಯ ತನ್ನದೇ ಸ್ವಂತ ಸ್ವತ್ತು ಎಂಬಂತೆ ಬದಲಾಯಿಸಿ ಬಿಟ್ಟಿದ್ದಾನೆ. ಇದರಿಂದಾಗಿ ಪರಿಸರದ ನೈಸರ್ಗಿಕ ಸಮತೋಲನವೇ ಅಸ್ತವ್ಯಸ್ತವಾಗಿದೆ.  ಅತಿಬಳಕೆ, ದುರ್ಬಳಕೆ ಮತ್ತು ಸಂಪನ್ಮೂಲಗಳನ್ನು ಸ್ವಾರ್ಥ ಸಾಧನೆಗಾಗಿ ಬಳಸುತ್ತಿರುವ ಕಾರಣದಿಂದಾಗಿ ಭೂಸವಕಳಿ ಮತ್ತು ಬರಗಾಲದಂತಹ ಗಂಭೀರ ಸಮಸ್ಯೆಗಳು ತಲೆ ಎತ್ತಿವೆ. 

ಇಷ್ಟು ಮಾತ್ರ ಅಲ್ಲ, ಈಗ ಹವಾಮಾನ ಬದಲಾವಣೆ ಎನ್ನುವ ಇನ್ನೊಂಂದು ಅಪಾಯ ಎದ್ದು ನಿಂತಿದೆ. ಮಾಲಿನ್ಯವು ಜಾಗತಿಕ ತಾಪಮಾನದ ರೂಪದಲ್ಲಿ ಎದುರಾಗಿದ್ದು, ಇದು ಜಾಗತಿಕ ಹವಾಮಾನದ ಕಾರ್ಯ ವಿಧಾನಕ್ಕೆ ಅಡಚಣೆ ಉಂಟುಮಾಡುವ ಮೂಲಕ ಅಡ್ಡಿಪಡಿಸುತ್ತದೆ. ಚಳಿಗಾಲದಲ್ಲಿ ಬಿಸಿಯೇರುತ್ತಿದೆ, ಬರಗಾಲ ಮತ್ತು ಆಹಾರದ ಹಾಹಾಕಾರವು ಹೆಚ್ಚುತ್ತಿದೆ, ಮಳೆಯು ಮಳೆಗಾಲದಲ್ಲಿ ಮಾತ್ರ ಬೀಳುತ್ತದೆ ಎಂದು ಹೇಳುವುದು ಅಸಾಧ್ಯ.
 
ಆದರೆ ಕಾಲ ಇನ್ನೂ  ಮಿಂಚಿಲ್ಲ, ನಾವು ಇನ್ನೂ  ಕಾರ್ಯೋನ್ಮುಖರಾಗಬಹುದು ಎನ್ನುವುದು ಜಾnನಿಗಳ ಅಭಿಪ್ರಾಯ, ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ತಡೆಯುವ ಮೂಲಕ, ಶುದ್ಧ ಇಂಧನಗಳನ್ನು ಉಪಯೊಗಿಸುವ ಮೂಲಕ, ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ವ್ಯಾಪಕ ರೀತಿಯಲ್ಲಿ ಮರಗಿಡಗಳನ್ನು ನೆಡುವ ಮೂಲಕ, ಆಗಿರುವ ಮಾಲಿನ್ಯವನ್ನು ಇನ್ನೂ ಸರಿಪಡಿಸಬಹುದು ಎನ್ನುವುದು ವಿಜಾnನಿಗಳ ಅನಿಸಿಕೆ. 

ವಾಯು ಮಾಲಿನ್ಯ
ವಾಯುಮಾಲಿನ್ಯ ಅನ್ನುವುದು ಅತ್ಯಂತ ಭಯಾನಕ ರೀತಿಯ ಮಾಲಿನ್ಯ. ವಾಹನಗಳು, ಕಾರ್ಖಾನೆಗಳು, ಉಷ್ಣ  ವಿದ್ಯುತ್‌ ಸ್ಥಾವರಗಳು ಉಗುಳುವ ತ್ಯಾಜ್ಯ ಅನಿಲಗಳು, ಸ್ಥಳೀಯ ದಹಿಸುವಿಕೆಗಳು, ಲೋಹದ ಧೂಳು... ಇತ್ಯಾದಿಗಳು ವಾಯುಮಾಲಿನ್ಯದ ಪ್ರಮುಖ ಕಾರಣಗಳು. 

ವಾಯು ಮಾಲಿನ್ಯದ ಕಾರಣದಿಂದಾಗಿ, ಜಗತ್ತಿನಾದ್ಯಂತ ಪರಿಸರದ ಗಾಳಿಯ ಸಂತುಲನೆಯಲ್ಲಿ ವ್ಯತ್ಯಾಸವಾಗುತ್ತದೆ.  ಹೆಚ್ಚಿನ ದಹನಕಾರಿ ಇಂಧನಗಳು - ಅಂದರೆ ಬರ್ನಿಂಗ್‌ ಫ‌ುÂಯೆಲ್‌ಗ‌ಳಿಂದ ವಾಯುಮಾಲಿನ್ಯ ಕಾರಕಗಳು ಬಿಡುಗಡೆಯಾಗುತ್ತವೆ. ಇದ್ದಿಲನ್ನು ಸುಡುವಾಗ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಸಲ#ರ್‌ ಡೈ ಆಕ್ಸೆ„ಡ್‌ ಉತ್ಪತ್ತಿಯಾಗುತ್ತದೆ. ಆಮ್ಲ ಮಳೆಗೆ ಕಾರಣ ಈ ಇಂಗಾಲದ ಡೈಆಕ್ಸೆ„ಡ್‌. ವಿಮಾನ ಮತ್ತು ರಾಕೆಟ್‌ಗಳಲ್ಲಿ ಕ್ಲೋರೋಫ್ಲೋರೋಕಾರ್ಬನ್‌ಗಳನ್ನು ಪ್ರೊಪೆಲ್ಲೇಂಟ್‌ಗಳಾಗಿ ಮತ್ತು ಶೈತ್ಯಕಾರಕಗಳಾಗಿ ಬಳಸುತ್ತಾರೆ, ಇದರಿಂದ ಓಝೊàನ್‌ ಪದರಕ್ಕೆ  ಹಾನಿ ಉಂಟಾಗುತ್ತದೆ. 
 
ವಾಯು ಮಾಲಿನ್ಯವು, ಅನೇಕ ರೀತಿಯ ಕಾಯಿಲೆಗಳಿಗೆ ಮತ್ತು ದೃಷ್ಟಿ ಮಾಂದ್ಯತೆಗೆ ಕಾರಣವಾಗುವುದಷ್ಟೇ ಅಲ್ಲ, ಇದು ಇಡಿಯ ಪರಿಸರ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುತ್ತದೆ. ವಾಯುಮಾಲಿನ್ಯದ ಕಾರಣದಿಂದಾಗಿ  ಸುರಿಯುವ ಆಮ್ಲಮಳೆಯು ಮಣ್ಣು, ಸಸ್ಯ ಸಂಕುಲ ಮತ್ತು ಆ ಪ್ರದೇಶದ ಜಲಚರಗಳ ಜೀವನ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತದೆ. ಪರಮಾಣು ಸ್ಫೋಟ ಮತ್ತು ಪರಮಾಣು ಪರೀಕ್ಷೆಗಳು ಗಾಳಿಯನ್ನು ಮಲಿನಗೊಳಿಸುತ್ತಿವೆ. 1952ರ ಲಂಡನ್ನಿನ ದಟ್ಟ ಧೂಮವು ಸುಮಾರು 4,000 ಜನರ ಸಾವಿಗೆ ಕಾರಣವಾಗಿತ್ತು. ಇದು ವಾಯುಮಾಲಿನ್ಯದ ಭೀಕರತೆಗೆ ಒಂದು ಉದಾಹರಣೆ. 
  
ಆಗ್ರಾದಲ್ಲಿನ ತಾಜ್‌ ಮಹಲ್‌, ಮಥುರಾ ರಿಫೈನರಿಯ ಹೊಗೆಯ ಅಪಾಯದಲ್ಲಿದೆ. ಈ ಇಪ್ಪತ್ತು ವರ್ಷಗಳಲ್ಲಿ  ಕೈಗಾರಿಕಾ ಸ್ಥಾವರಗಳಿಂದ ಮತ್ತು ರಿಫೈನರಿಗಳಿಂದ ಹೊರಸೂಸಿದ ತ್ಯಾಜ್ಯಗಳು ಮತ್ತು ಹೊಗೆಯಿಂದ ನಮ್ಮ ಪ್ರಾಚೀನ ಸ್ಮಾರಕಗಳು ಬಹುಮಟ್ಟಿಗೆ  ಕಳೆ ಗುಂದುತ್ತಾ ಸಾಗಿವೆ ಎಂದು ವರದಿಗಳು ಹೇಳುತ್ತಿವೆ. 

ಜಲಮಾಲಿನ್ಯ
ಇಡೀ ಭೂಮಿಯ ನಾಲ್ಕನೇ ಮೂರರಷ್ಟು ಭಾಗವು ನೀರಿನಿಂದ ಆವೃತವಾಗಿದ್ದರೂ ಸಹ, ನಮ್ಮಲ್ಲಿ ಕುಡಿಯುವ ಶುದ್ಧ ನೀರಿಗೆ ಕೊರತೆ ಇದೆ.  ಯಾವುದೇ ಬಾಹ್ಯ ಮೂಲದಿಂದ ನೀರು ಕಲುಷಿತಗೊಳ್ಳುವುದನ್ನು ಮತ್ತು ಅದರಿಂದ ಜೀವನಕ್ಕೆ ಅಪಾಯಕಾರಿಯಾಗುವುದನ್ನು ಜಲಮಾಲಿನ್ಯ ಎಂದು ಕರೆಯುತ್ತೇವೆ.  ಕ್ಷಿಪ್ರ ಕೈಗಾರಿಕಾ ಬೆಳವಣಿಗೆಗಳು ಮತ್ತು ಆಧುನಿಕ ಅಭಿವೃದ್ಧಿಗಳ ಕಾರಣದಿಂದಾಗಿ ಜಲಮಾಲಿನ್ಯದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಾ ಸಾಗಿದೆ. ಜಲಮಾಲಿನ್ಯದ ಪ್ರಮುಖ ಕಾರಣಗಳು ಅಂದರೆ, ದಿನನಿತ್ಯ ಬಳಸುವ ನೀರಿನ ಮೂಲಗಳು,  ಕೃಷಿಗಾಗಿ ಬಳಸುವ ನೀರಿನ ಮೂಲಗಳು, ತ್ಯಾಜ್ಯ ಅಂಶಗಳು, ಕಾರ್ಖಾನೆಯ ತ್ಯಾಜ್ಯಗಳು, ವಿಕಿರಣಶೀಲ ತ್ಯಾಜ್ಯಗಳು, ಎಣ್ಣೆಯ ಸೋರುವಿಕೆ, ಸಾವಯವ, ನಿರವಯವ, ಜೈವಿಕ ಅಂಶಗಳ ಇರುವಿಕೆ ಮತ್ತು ಜಲ ಮೂಲಗಳಿಗೆ ಸೇರಿಸುವಿಕೆ.
 
ಭಾರತದಲ್ಲಿ ನದಿಗಳು, ಜಲಾಶಯಗಳು, ಕೊಳಗಳು ಮತ್ತು ಬಾವಿಗಳು ಸೇರಿದಂತೆ ನೀರಿನ ಬಹುತೇಕ ಎಲ್ಲಾ ಮೂಲಗಳು ಕಲುಷಿತಗೊಂಡಿವೆ ಮತ್ತು ಅವು ಕುಡಿಯಲು ಯೋಗ್ಯವಾಗಿಲ್ಲ. ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆ, ನದಿಗಳು, ಸಮುದ್ರಗಳು ಮತ್ತು ಸಾಗರಗಳು, ಅಪಾಯಕಾರಿ ಮಲಿನಕಾರಕಗಳಿಂದ ಕಲುಷಿತಗೊಳುತ್ತಾ ಸಾಗಿವೆ.  ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ 500 ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಪಾದರಸ ಸಾಗರವನ್ನು ಸೇರುತ್ತಿದೆ. ಇಂದು ಭಾರತದ ಗಂಗಾ ನದಿಯೂ ಸೇರಿದಂತೆ ಎಲ್ಲಾ ನದಿಗಳು ವಿಶೇಷವಾಗಿ ಮಲಿನಗೊಂಡಿವೆ.  ಇದರಿಂದಾಗಿ ಜಲಜನ್ಯ ಕಾಯಿಲೆಗಳಾದ ಅತಿಸಾರ, ಟ್ರಾಕೋಮಾ, ಕರುಳಿನ ಹುಳಗಳು, ಹೆಪಾಟೈಟಿಸ್‌, ಕಾಮಾಲೆ... ಇತ್ಯಾದಿ ಅನೇಕ ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಹೇಳುವ ಪ್ರಕಾರ, ಭಾರತದಲ್ಲಿರುವ ಎಲ್ಲಾ ಸಾಂಕ್ರಾಮಿಕ ರೋಗಗಳಲ್ಲಿ ಶೇಕಡಾ 20ರಷ್ಟು ಕಾಯಿಲೆಗಳು ನೀರಿನ ಮೂಲದ ಕಾಯಿಲೆಗಳು. ಎಣ್ಣೆಯು ಸಮುದ್ರ ನೀರನ್ನು ವಿಶೇಷವಾಗಿ ಕಲುಷಿತಗೊಳಿಸುತ್ತಿದೆ.  ಬೃಹತ್‌ ಗಾತ್ರದ ಟ್ಯಾಂಕರ್‌ಗಳಿಂದ ನಿರಂತರವಾಗಿ ಸಮುದ್ರದ ನೀರಿಗೆ ಎಣ್ಣೆ ಸೋರಿಕೆಯಾಗುತ್ತಿದೆ. ವಿಷ-ಮಾಲಿನ್ಯಗಳನ್ನು ನೀರಿಗೆ ಸೇರಿಸುವ ಈ ಪ್ರಕ್ರಿಯೆಗಳಿಂದಾಗಿ  ಜಲಸಸ್ಯಗಳು ಮತ್ತು ಜಲಚರಗಳ ಪ್ರಾಣಕ್ಕೆ ಕುತ್ತು ಉಂಟಾಗಿದೆ.   

ಮಣ್ಣಿನ ಮಾಲಿನ್ಯ
ಮನುಷ್ಯನ ಹಸ್ತಕ್ಷೇಪ ಅಥವಾ ದುರ್ಬಳಕೆಯ ಕಾರಣದಿಂದಾಗಿ ನೆಲ ಅಥವಾ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸ್ಥಿತಿ ಮತ್ತು ಸಂರಚನೆಯಲ್ಲಿ ಆಗುವ ಬದಲಾವಣೆಗೆ ಮಣ್ಣು ಅಥವಾ ನೆಲದ ಮಾಲಿನ್ಯ ಎಂದು ಹೇಳಬಹುದು. ಮಣ್ಣಿನ ಮಾಲಿನ್ಯಕ್ಕೆ ಇರುವ ಪ್ರಮುಖ ಕಾರಣ ಅಂದರೆ ಅರಣ್ಯನಾಶ, ನೈಸರ್ಗಿಕ ಪ್ರಕೋಪಗಳಾದ ಅತಿವೃಷ್ಟಿ, ಪ್ರಾದೇಶಿಕ ವೈಪರೀತ್ಯ, ಬಿರುಗಾಳಿಗಳು ಮತ್ತು ಮನುಷ್ಯನ ಅತಿಚಟುವಟಿಕೆಯ ಕಾರಣಗಳಿಂದಾಗಿ ಹೆಚ್ಚಾಗುತ್ತಿರುವ ಮಣ್ಣು ಸವಕಳಿಯ ಪ್ರಮಾಣ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಮಣ್ಣು ಸವಕಳಿಯ ಪ್ರಮಾಣ ಮತ್ತು ತಪ್ಪು ವ್ಯವಸಾಯ ಕ್ರಮಗಳಿಂದಾಗಿ, ಫ‌ಲವತ್ತಾದ ಮೇಲ್ಮಣ್ಣು ಕೊಚ್ಚಿಹೋಗಿ ವ್ಯಾಪಕ ಭೂಪ್ರದೇಶವನ್ನು ಬಂಜರಾಗಿಸಿವೆ.

ಕೃಷಿಯ ಘನ ತ್ಯಾಜ್ಯಗಳು ಮತ್ತು ಹದ-ಘನ ತ್ಯಾಜ್ಯಗಳು ಹಾಗೂ ಅಶೌಚ ಅಭ್ಯಾಸಗಳ ಕಾರಣದಿಂದಾಗಿ ಮಣ್ಣು ಮಲಿನಗೊಳ್ಳುತ್ತದೆ.  ಮಾತ್ರವಲ್ಲದೆ ಅಪಾಯಕಾರಿ ಅಂಶಗಳು ಮತ್ತು ಸೂûಾ¾ಣು ಜೀವಿಗಳಿಂದ ಮಣ್ಣು ದಿನೇ ದಿನೇ ಅತಿಯಾಗಿ ಮಲಿನಗೊಳ್ಳುತ್ತಿದೆ, ಮಣ್ಣಿನ ಈ ಮಾಲಿನ್ಯವು ಆಹಾರ ಸರಪಣೆಯನ್ನು ಅಥವಾ ನೀರನ್ನು ಸೇರಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜೈವಿಕ ವಾಹಕಗಳ ಮೂಲಕ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರ ವಿಸರ್ಜನೆಗಳು ಮಣ್ಣಿನ ಮಾಲಿನ್ಯದ ಪ್ರಮುಖ ಅಂಶಗಳು. ಗೊಬ್ಬರಗಳಾಗಿ ಬಳಕೆಯಾಗುವ ತ್ಯಾಜ್ಯಗಳು ಮಾಲಿನ್ಯ ಉಂಟು ಮಾಡುವ ಪ್ರಮುಖ ಅಂಶಗಳು. ಆಮ್ಲಮಳೆಯಿಂದಾಗಿ ಮಣ್ಣಿನ ಆಮ್ಲಿàಯತೆಯು ಹೆಚ್ಚಾಗುತ್ತದೆ, ಇದು ಗಿಡಮರಗಳ ಬೆಳವಣಿಗೆಗೆ ಹಾನಿಕಾರಕ. 

ಶಬ್ದ ಮಾಲಿನ್ಯ
ಶಬ್ದವೂ ಸಹ ಒಂದು ರೀತಿಯ ಪ್ರಮುಖ ಮಾಲಿನ್ಯಕಾರಕ. ನಗರ ಪ್ರದೇಶಗಳಲ್ಲಿ ಶಬ್ದಗಳ ಮಟ್ಟವು ಎಚ್ಚರಿಕೆ ನೀಡುವ ರೀತಿಯಲ್ಲಿ ಹೆಚ್ಚುತ್ತಾ ಸಾಗಿದೆ.  ಶಬ್ದ ಮಾಲಿನ್ಯ ಅಂದರೆ 80 ಡೆಸಿಬಲ್‌ ಮಿತಿಯನ್ನು ಮೀರಿದ ಅನಾವಶ್ಯಕ ಶಬ್ದ ಎಂದು ಹೇಳಬಹುದು.  ಗುಡುಗು ಮತ್ತು ಮಿಂಚುಗಳ ಕರ್ಕಶ ಸದ್ದು, ಯಂತ್ರಗಳು, ವಾಹನಗಳು, ರೈಲ್ವೆ, ಮಾನಗಳು ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಲೌಡ್‌ ಸ್ಪೀಕರ್‌ಗಳು, ಸಿಡಿಮದ್ದುಗಳು ಹೊರಡಿಸುವ ಕರ್ಕಶ ಸದ್ದು ಮತ್ತು ಕರ್ಕಶ ಸದ್ದನ್ನು ಹೊರಡಿಸುವ ಕೆಲವು ಸಂಗಿತ ವಾದ್ಯಗಳು ಶಬ್ದಮಾಲಿನ್ಯದ ವರ್ಗದಲ್ಲಿ ಬರುತ್ತವೆ.

ಹೆಚ್ಚು ಹೆಚ್ಚು ಶಬ್ದಗಳು ಆಧುನಿಕ ಜಗತ್ತಿನ ನಿರ್ಮಾಣಗಳು ಈಗ ನಗರ ಪ್ರದೇಶಗಳ ಬಹುಮುಖ್ಯ ಪರಿಸರ ಮಾಲಿನ್ಯಕಾರಕ ಎನಿಸಿವೆ.  ಶಬ್ದ ಮಾಲಿನ್ಯದ ಬಹಳ ಪ್ರಮುಖ ಪರಿಣಾಮ ಅಂದರೆ ಕಿವುಡುತನ. ಇದರಿಂದಾಗಿ ಭಾಗಶಃ ಅಥವಾ ಸಂಪೂರ್ಣ ಕಿವುಡುತನ ಉಂಟಾಗಬಹುದು.  ಈ ಕಾರಣದಿಂದಾಗಿ ಕೆಲಸಗಾರರಲ್ಲಿ ದಕ್ಷತೆಯ ಕೊರತೆ ಕಾಣಿಸಿಕೊಳ್ಳಬಹುದು. 

ಶಬ್ದಮಾಲಿನ್ಯದ ಮಟ್ಟವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಇದರಿಂದಾಗಿ ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು.  ಒತ್ತಡ ಮತ್ತು ಆತಂಕವು ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣ ಶಬ್ದ ಎನ್ನುವುದಕ್ಕೆ ಪುರಾವೆಗಳಿವೆ. ಇದರಿಂದಾಗಿ ತಲೆನೋವು, ಕಿರಿಕಿರಿ ಮಾತ್ರವಲ್ಲ ರಕ್ತದೊತ್ತಡದ ಮೇಲೆಯೂ ಇದು ಪರಿಣಾಮ ಉಂಟು ಮಾಡುತ್ತದೆ.

ಇತರ ಪರಿಣಾಮಗಳು
ಹಸುರು ಮನೆ ಅನಿಲಗಳಾದ ಇಂಗಾಲದ ಡೈ ಆಕ್ಸೆ„ಡ್‌, ನೈಟ್ರೋಜನ್‌ ಆಕ್ಸೆ„ಡ್‌, ಮೀಥೇನ್‌, ಹೈಡ್ರೋಫ್ಲೋರೋಕಾರ್ಬನ್‌ ಅನಿಲಗಳು, ಪರ್‌ಫ್ಲೋರೋ ಕಾರ್ಬನ್‌ಗಳು, ಸಲ#ರ್‌ ಹೆಕ್ಸಾಫ್ಲೋರೈಡ್‌ಗಳು ಲಕ್ಷಣ ಬದಲಾವಣೆಗಳನ್ನು ನಿರ್ಮಿಸಿವೆ. ಹಸುರು ಮನೆ ಅನಿಲಗಳ ಕಾರಣದಿಂದಾಗಿ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನವು ಹೆಚ್ಚಳವಾಗುತ್ತಿದೆ. ಜಾಗತಿಕ ತಾಪಮಾನ ಅಂದರೆ ಸರಾಸರಿ ಭೂಮಿಯ ಉಷ್ಣತೆಯು ಹೆಚ್ಚುವುದು, ಇದು ನೈಸರ್ಗಿಕ ಮತ್ತು ಮನುಷ್ಯರ ಚಟುವಟಿಕೆ ಇವೆರಡರ ಕಾರಣದಿಂದ ಉದ್ಭºವಿಸಿರುವ ಹಸುರು ಮನೆ ಪರಿಣಾಮದ ಫ‌ಲ.  ಧ್ರುವ ಪ್ರದೇಶದಲ್ಲಿನ ಮಂಜುಗಡ್ಡೆಗಳು ಬಹಳ ಕ್ಷಿಪ್ರವಾಗಿ ಕರಗುತ್ತಿವೆ.  ಇದರಿಂದಾಗಿ ಸಾಗರ ಸಮುದ್ರಗಳ ನೀರಿನ ಮಟ್ಟವು ಏರಿಕೆಯಾಗುತ್ತಿದೆ.  ಅಂಟಾರ್ಟಿಕಾದಲ್ಲಿ ಹುಲ್ಲಿನ ಬೆಳವಣಿಗೆ ಮತ್ತು ಮರುಭೂಮಿ ಪ್ರದೇಶಗಳಲ್ಲಿ ಮಂಜು ಬೀಳುವುದು ಜಾಗತಿಕ ತಾಪಮಾನದ ಎಚ್ಚರಿಕೆಯ ಸೂಚನೆಗಳು.  ಕಾಡಿನ ನಾಶವು ಮಹತ್ತರ ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಮಾತ್ರವಲ್ಲ ಬಹಳ ಅಪರೂಪದ ಅನೇಕ ಜೀವಿಗಳು ನಮ್ಮ ಕಾಡು ಮತ್ತು ನಮ್ಮ ನಡುವಿನಿಂದ ಕಣ್ಮರೆಯಾಗುತ್ತಿವೆ.  

ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನವು ಮನುಷ್ಯ ಸಮುದಾಯಕ್ಕೆ ಬಹಳ ಪ್ರಮುಖ ಸವಾಲು ಎಂದು ಅನೇಕ ಜಾnನಿಗಳ ಅಭಿಪ್ರಾಯವಾಗಿದೆ.  ಜಾಗತಿಕ ತಾಪಮಾನದ ಪರಿಣಾಮವು ಆರೊಗ್ಯದ ಮೇಲೆ ಉಂಟು ಮಾಡುವ ಪರಿಣಾಮವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂಡಿಯನ್‌ ಅಸೋಸಿಯೇಷನ್‌  ಆಫ್ ಪ್ರಿವೆಂಟಿವ್‌ ಆ್ಯಂಡ್‌ ಸೋಶಿಯಲ್‌ ಮೆಡಿಸಿನ್‌ ಮತ್ತು ಇಂಡಿಯನ್‌ ಪಬ್ಲಿಕ್‌ ಹೆಲ್ತ್‌ ಅಸೋಸಿಯೇಷನ್‌ಗಳು ಭಾರತ ಸರಕಾರವನ್ನು ಒತ್ತಾಯಿಸಿವೆ.
 
ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇರುವಂತಹ ಪ್ರಮುಖ ಅಂಶಗಳು ಅಂದರೆ, ಹವಾಮಾನ ಬದಲಾವಣೆ ಮತ್ತು ಮನುಷ್ಯರ ಆರೋಗ್ಯಗಳ ನಡುವಿನ ಸಂಬಂಧಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವುದು.  ನಮ್ಮ ಗ್ರಹವನ್ನು ಅವನತಿಯಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯ ಜಾಗೃತಿ ಅತ್ಯಂತ ಆವಶ್ಯಕ.  ಪರಿಸರವನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ  ಜಗತ್ತಿನ ಎಲ್ಲಾ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. 

ತಡೆಗಟ್ಟುವಿಕೆ ಮತ್ತು 
ಮಾಲಿನ್ಯ ನಿಯಂತ್ರಣ

ಮಾಲಿನ್ಯ ನಿಯಂತ್ರಣ ಅನ್ನುವುದು, ಮಾಲಿನ್ಯಕಾರಕಗಳನ್ನು ಪರಿಸರದಿಂದ ಹೋಗಲಾಡಿಸಲು ಇರುವಂತಹ ಒಂದು ಉಪಾಯ. ಪರಿಸರಕ್ಕೆ ಸಂಬಂಧಿಸಿದ ವಿವಿಧ ಮಂಡಳಿ, ಇಲಾಖೆಗಳು-ಗಾಳಿ, ನೀರು ಮತ್ತು ಮಣ್ಣಿಗೆ ಸಂಬಂಧಿಸಿದಂತೆ ವಿವಿಧ ಕಟ್ಟಳೆಗಳನ್ನು  ವಿಧಿಸುವ ಮೂಲಕ ಇದನ್ನು ಸಾಧಿಸಬಹುದು. ಗಾಳಿ ಮತ್ತು ನೀರಿನ ಮಾಲಿನ್ಯ, ಘನತ್ಯಾಜ್ಯಗಳ ನಿಯಂತ್ರಣಕ್ಕಾಗಿ ವೈವಿಧ್ಯಮಯ ಸಾಧನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬಹುದು. ಕೆಳಗೆ ತಿಳಿಸಿದ ಕಾರ್ಯವಿಧಾನಗಳ ಮೂಲಕ ಮಾಲಿನ್ಯವನ್ನು ತಡೆಗಟ್ಟಬಹುದು. 

1.ರಿಸೈಕ್ಲಿಂಗ್‌
2.ಮರು ಬಳಕೆ
3.ತಗ್ಗಿಸುವುದು
4.ಸಹನೀಯಗೊಳಿಸುವುದು

ವಾಯು ಮಾಲಿನ್ಯವನ್ನು 
ತಡೆಯುವುದು ಹೇಗೆ?

1.ಕೈಗಾರಿಕಾ ವಲಯ ಮತ್ತು ಜನವಸತಿ ಪ್ರದೇಶಗಳ ನಡುವೆ ಆರೋಗ್ಯಕರ ಅಂತರವನ್ನು ಕಾಪಾಡಿಕೊಳ್ಳುವುದು.

2.ಹೊಗೆಯು ವಾತಾವರಣದಿಂದ ಅತ್ಯಂತ ಎತ್ತರದಲ್ಲಿ ಬಿಡುಗಡೆ ಹೊಂದುವಂತೆ ಎತ್ತರವಾದ ಹೊಗೆ ಕೊಳವೆಗಳನ್ನು  ಕಟ್ಟುವುದು.

3.ರೈಲ್ವೇ ಟ್ರ್ಯಾಕ್‌ಗಳನ್ನು  ವಿದ್ಯುತ್‌ ಚಾಲಿತಗೊಳಿಸುವುದು.

4.ಗಣಿಗಾರಿಕೆಯ ವಲಯಗಳಲ್ಲಿ ಮರಗಿಡಗಳನ್ನು ಬೆಳೆಸುವುದು.

5.ಕಲ್ಲಿದ್ದಲಿನ ಇಂಧನಕ್ಕೆ ಬದಲಾಗಿ ಗ್ಯಾಸ್‌ ಇಂಧನವನ್ನು ಬಳಸುವುದು. 

6.ಹೊಗೆ ನಿಯಂತ್ರಣಾ ವ್ಯವಸ್ಥೆ ಇರುವಂತೆ ವಾಹನಗಳನ್ನು  ವಿನ್ಯಾಸಗೊಳಿಸುವುದು.

7.ಕಾರ್ಖಾನೆಗಳು, ಸ್ಥಾವರಗಳು ಮತ್ತು ರಿಫೈನರಿಗಳ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಅಥವಾ ಮರುಬಳಕೆ ಮಾಡುವುದು. 

8.ವಾಹನಗಳನ್ನು ಕಾಲಕಾಲಕ್ಕೆ ಸರಿಯಾಗಿ ಸರ್ವಿಸಿಂಗ್‌ ಮಾಡಿಸಿಕೊಳ್ಳುವುದರಿಂದ ಅವುಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳ ಬಹುದು ಮಾತ್ರವಲ್ಲ, ಇಂಧನದ ಬಳಕೆಯನ್ನೂ ತಗ್ಗಿಸಿಕೊಳ್ಳಬಹುದು. 

9.ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು.

10.ಬದಲಿ ಇಂಧನ ಮೂಲಗಳಾದ ಸೌರ ಶಕ್ತಿ, ಜಲವಿದ್ಯುತ್‌ ಶಕ್ತಿ ಮತ್ತು ಪವನಶಕ್ತಿಯನ್ನು ಉಪಯೋಗಿಸುವುದು. 

ಜಲಮಾಲಿನ್ಯವನ್ನು 
ನಿಯಂತ್ರಿಸುವುದು ಹೇಗೆ?

1.ವಿಷಕಾರಕವಲ್ಲದ ಸಾಬೂನುಗಳು, ಡಿಟರ್ಜಂಟ್‌ಗಳು ಮತ್ತು ಶುದ್ಧೀಕಾರಕಗಳನ್ನು ಬಳಸುವ ಮೂಲಕ ಜಲಮಾಲಿನ್ಯವನ್ನು ತಡೆಯಬಹುದು.

2. ಹೂದೋಟ ಮತ್ತು ಹುಲ್ಲುಹಾಸುಗಳ ಮೇಲೆ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಉಪಯೋಗಿಸದಿರುವುದು.
 
3.ಪೈಂಟ್ಸ್‌, ಮೋಟಾರ್‌ ಆಯಿಲ್‌, ಗ್ಯಾಸೋಲಿನ್‌, ಹಾನಿಕಾರಕ ರಾಸಾಯನಿಕಗಳನ್ನು ಸ್ಥಳೀಯ ಕಾನೂನುಗಳು ಮತ್ತು ಸುರಕ್ಷತಾ ಕ್ರಮಗಳಿಗೆ ಅನುಸಾರವಾಗಿ ವಿಲೇವಾರಿ ಮಾಡುವುದು. 

4.ಅಂತರ್ಜಲವನ್ನು ರಕ್ಷಿಸಿ, ಅದು ನಮ್ಮ ನಿತ್ಯ ಉಪಯೋಗಕ್ಕೆ, ನೀರಾವರಿ ವಿಧಾನಕ್ಕೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗೆ ಬೇಕೆ ಬೇಕು. 

5. ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಮತ್ತು ಬಳಸಿ. 

6.ಪರಿಸರಸ್ನೇಹಿ ವಾಶಿಂಗ್‌ ಪೌಡರ್‌, ಶುದ್ಧೀಕಾರಕಗಳನ್ನು ಬಳಸಿ, ರಾಸಾಯನಿಕಗಳನ್ನು ಸಂಗ್ರಹಿಸುವಾಗ ಅಂತರ್ಜಲ ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸುವುದು.
  
7.ಹುಲ್ಲುಹಾಸುಗಳು  ಮತ್ತು ಅಧಿಕ ವೆಚ್ಚದಾಯಕ ಗಿಡಗಳನ್ನು ಬೆಳೆಸುವುದಕ್ಕೆ ಬದಲಾಗಿ ಸ್ಥಳೀಯ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸುವುದು. 

8. ಸಾಕು ಪ್ರಾಣಿಗಳ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು.

9.ಮನೆಯ ಸ್ವತ್ಛತೆಯನ್ನು ಸುಸೂತ್ರ ರೀತಿಯಲ್ಲಿ ನಿರ್ವಹಿಸುವುದು.

ಮಣ್ಣಿನ ಮಾಲಿನ್ಯವನ್ನು ಹೇಗೆ 
ತಡೆಯಬಹುದು?

ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು  ಮಿತಗೊಳಿಸುವುದು.

ಜೈವಿಕ ನಿಯಂತ್ರಣ ವಿಧಾನಗಳು ಮತ್ತು ಅದರ ಬಳಕೆಯ ಬಗ್ಗೆ ಅರಿವನ್ನು ಹೊಂದಿರುವುದು.

ಪಶುಗಳು ಅತಿಯಾಗಿ ಮೇಯುವುದನ್ನು ನಿಯಂತ್ರಿ ಸುವುದು ಮತ್ತು ಸರಿಯಾದ ರೀತಿಯಲ್ಲಿ ಕಾಡುಗಳ ನಿರ್ವಹಣೆ.

ಕಾಡು ಬೆಳೆಸುವಿಕೆ ಮತ್ತು ಕಾಡುಗಳ ಮರುಅಭಿವೃದ್ಧಿಯನ್ನು ಉತ್ತೇಜಿಸುವುದು.

ಮರುಬಳಕೆಯ ಚೀಲಗಳನ್ನು ಹೆಚ್ಚು ಬಳಸುವುದು ಮತ್ತು ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ತಗ್ಗಿಸುವುದು.

ಮಣ್ಣನ್ನು ಆವರಿಸುವ ಹುಲ್ಲನ್ನು ಬೆಳೆಸುವುದು ಮತ್ತು ನದೀ ಪಾತ್ರದ ಉದ್ದಕ್ಕೂ ದೊಡª ದೊಡ್ಡ ಮರಗಳನ್ನು ಬೆಳೆಸುವುದು. 

ಕಾರ್ಖಾನೆಯ ತ್ಯಾಜ್ಯಗಳನ್ನು ತಗ್ಗು ಪ್ರದೇಶಗಳಿಗೆ ಬಹಳ ಜಾಗರೂಕತೆಯಿಂದ ವಿಲೇವಾರಿ ಮಾಡುವುದು.

ಕಳೆಗಳು ಗದ್ದೆಗಳಲ್ಲಿ ತಳವೂರದ ರೀತಿಯಲ್ಲಿ ವ್ಯವಸಾಯದಲ್ಲಿ ಸೂಕ್ತ ತಂತ್ರಜಾnನವನ್ನು ಬಳಸುವುದು. 

ಗಣಿಗಾರಿಕೆ ಮತ್ತು ಅದರ ಸಾಗಾಟದಲ್ಲಿ ಸೂಕ್ತ ಮತ್ತು ಸುಧಾರಿತ ಕ್ರಮಗಳನ್ನು ಕೈಗೊಳ್ಳುವುದು.
 
ಭೂಪ್ರದೇಶವನ್ನು ಬಂಜರಾಗಲು ಅಥವಾ ಒಣಗಲು ಬಿಡದಿರುವುದು. 

ಶಬ್ದಮಾಲಿನ್ಯವನ್ನು 
ತಡೆಗಟ್ಟುವುದು ಹೇಗೆ? 

ಶಬ್ದವನ್ನು ಉತ್ಪತ್ತಿ ಮಾಡುವ ಯಂತ್ರಗಳನ್ನು ಪ್ರತ್ಯೇಕವಾಗಿ ಇರಿಸುವ ಮೂಲಕ ಮತ್ತು ಕಿವಿಯ ಬಿರಡೆ, ಇಯರ್‌ ಪ್ಲಗ್‌ ಅಥವಾ ಮಫ್ಲರ್‌ನಂತಹ ಶಬ್ದನಿರೋಧಕಗಳನ್ನು ಉಪಯೋಗಿಸುವ ಮೂಲಕ. 
 
ಕಟ್ಟಡಗಳ ವಲಯ ಅಥವಾ ಅವನ್ನು ಆವರಿಸಿರುವ ಗೋಡೆಗಳ ಮೂಲಕ ಶಬ್ದವು ಹಾದು ಹೋಗದಂತೆ ನಿಯಂತ್ರಣ ಸಾಧಿಸುವ ಮೂಲಕ. 

ಲೌಡ್‌ ಸ್ಪೀಕರ್‌ ಇತ್ಯಾದಿಗಳನ್ನು ಬಳಸುವ ಬಗ್ಗೆ ಕಾನೂನಿನಲ್ಲಿ ನಿರ್ಬಂಧಗಳನ್ನು ಹೇರುವುದು.

ಶಬ್ದ ಮಾಲಿನ್ಯದ ಅಪಾಯಗಳ ಕುರಿತು ಸಿನೆಮಾಗಳು ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ಮಾಡುವುದು.

ಶಬ್ದ ಪ್ರತಿಬಂಧಕಗಳನ್ನು ಬಳಸುವುದು. 

ವಾಹನಗಳ ವೇಗವನ್ನು ಮಿತಗೊಳಿಸುವುದು. 

ಮಾರ್ಗಗಳ ಮೇಲ್ಮೆ„ ರಚನೆಯನ್ನು ಉತ್ತಮಪಡಿಸುವುದು.

ಘನ ವಾಹನ ಸಂಚಾರವನ್ನು ಮಿತಗೊಳಿಸುವುದು.

ಬ್ರೇಕಿಂಗ್‌ಗಳು, ಆಕ್ಸಲರೇಷನ್‌ ಮತ್ತು ಚಕ್ರದ ವಿನ್ಯಾಸವನ್ನು ವ್ಯತ್ಯಾಸಗೊಳಿಸುವ ವಿರುದ್ಧ ಸಾರಿಗೆ ನಿಯಂತ್ರಣ ಕಾನೂನುಗಳನ್ನು ಬಳಸುವುದು. 

ನಿಶ್ಯಬ್ದ ಜೆಟ್‌ ಇಂಜಿನ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವೈಮಾನಿಕ ಶಬ್ದಗಳನ್ನು ತಗ್ಗಿಸಬಹುದು 

ಹಗಲು ಹೊತ್ತಿನಲ್ಲಿ ಹಾರುವ ವಿಮಾನದ ಸಮಯ ಮತ್ತು ರನ್‌ ವೇಗಳ ಬಳಕೆಯಲ್ಲಿ ಮಾರ್ಪಾಡು ಮಾಡುವಂತಹ ಕಾರ್ಯಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಿಮಾನ ನಿಲ್ದಾಣದ ಹತ್ತಿರ ವಸತಿ ಇರುವ ಜನಸಮುದಾಯಕ್ಕೆ ಸಹಾಯ ಮಾಡಬಹುದು.     
ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಜನರು ಹೇಗೆ ಸಹಾಯ ಮಾಡಬಹುದುನಿಮ್ಮ ನಿತ್ಯ ಜೀವನದಲ್ಲಿ ಈ ಅಭ್ಯಾಸಗಳನ್ನು ಅನುಸರಿಸಿ:

ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ಕಸಕಡ್ಡಿಗಳನ್ನು ಹಾಕಬೇಡಿ. ತ್ಯಾಜ್ಯ-ನಿರೋಧಕ ಶಿಬಿರಗಳನ್ನು ಆಯೋಜಿಸಿ, ಈ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಬಹುದು.
 
ಧೂಮಪಾನವನ್ನು ನಿಲ್ಲಿಸಿ, ನೋ ಸ್ಮೋಕಿಂಗ್‌ ಸೂಚನೆಯನ್ನು ಅನುಸರಿಸಿ.

ಮರುಬಳಕೆ ಮಾಡುವ ಕೈಚೀಲಗಳನ್ನು ಉಪಯೋಗಿಸಿ.

ಉತ್ಪನ್ನಗಳಿಗೆ ಅನಗತ್ಯವಾಗಿ ಅಥವಾ ವ್ಯರ್ಥವಾಗಿ ಪ್ಯಾಕೆಜ್‌ ಮಾಡಬೇಡಿ.

ಘನತ್ಯಾಜ್ಯಗಳ ನಿರ್ವಹಣೆಯಲ್ಲಿ 3ಆರ್‌ ಸೂತ್ರವನ್ನು ಅನುಸರಿಸಿ: ಅಂದರೆ ರೆಡ್ನೂಸ್‌, ರಿಯೂಸ್‌ ಮತ್ತು ರಿಸೈಕಲ್‌.

ವಾಹನಗಳನ್ನು ರಭಸವಾಗಿ ಸ್ಟಾರ್ಟ್‌ ಮಾಡುವುದು ಮತ್ತು ಒಮ್ಮೆಲೆ ನಿಲ್ಲಿಸುವ ಕ್ರಮವನ್ನು ಬಿಟ್ಟುಬಿಡಿ.

ತ್ಯಾಜ್ಯಗಳನ್ನು ಸುಡಬೇಡಿ, ಅದರಲ್ಲು  ವಿಶೇಷವಾಗಿ ಪ್ಲಾಸ್ಟಿಕ್‌ ಅನ್ನು ಸುಡುವಾಗ ಹೆಚ್ಚು ಹಾನಿಕಾರಕ ಅನಿಲಗಳು ಪರಿಸರಕ್ಕೆ ಬಿಡುಗಡೆ ಆಗುತ್ತವೆ. 
 
ಸೀಸರಹಿತ ಪೆಟ್ರೋಲ್‌ ಮತ್ತು ಶಕ್ತಿಯ ಬದಲೀ ಮೂಲಗಳನ್ನು ಉಪಯೋಗಿಸಿ ಮತ್ತು ಎಂಜಿನ್‌ಗಳನ್ನು ಸಕಾಲದಲ್ಲಿ ಸರ್ವಿಸಿಂಗ್‌ ಮಾಡಿಸಿ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಿ. ಟೈರ್‌ಗಳಲ್ಲಿ ಗಾಳಿಯ ಒತ್ತಡ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಹೀಗಿದ್ದರೆ ವಾಹನಗಳು ಸಮರ್ಥವಾಗಿ ಓಡುತ್ತವೆ.
  
ನಿಮ್ಮ ನಿತ್ಯ ಪ್ರಯಾಣಕ್ಕಾಗಿ ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಿ ಅಥವಾ ಕಾರ್‌ಪೂಲ್‌ ವಿಧಾನವನ್ನು ಅನುಸರಿಸಿ. 

ಸುರಕ್ಷಿತವಾಗಿ ಬಳಸಬಹುದಾದಲ್ಲಿ ಸೈಕಲ್‌ ಅನ್ನು ಉಪಯೋಗಿಸಿ - ನಡಿಗೆ ಎನ್ನುವುದು ಉಚಿತ ಸಾಧನ. ಸೈಕ್ಲಿಂಗ್‌ ನಿಮ್ಮ ದೇಹಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ.

ಅನಗತ್ಯ ಶಬ್ದವಾಗುವಿಕೆಯನ್ನು ತಪ್ಪಿಸಿಕೊಂಡು ಶಬ್ದಮಾಲಿನ್ಯವನ್ನು ತಗ್ಗಿಸಿಕೊಳ್ಳಿ.
 
ಉಳಿಕೆ ರಾಸಾಯನಿಕಗಳನ್ನು, ಬಳಸಿದ ಎಣ್ಣೆ ಇತ್ಯಾದಿಯನ್ನು ಯಾವತ್ತೂ ಚರಂಡಿಯಲ್ಲಿ, ಶೌಚಾಲಯದಲ್ಲಿ ಅಥವಾ ನೆಲದಲ್ಲಿ ಅಥವಾ ನೀರಿನಲ್ಲಿ ಚೆಲ್ಲಿ ಬಿಡಬಾರದು ಅಥವಾ ತೋಟದಲ್ಲಿ ಸುಟ್ಟು ಹಾಕಬಾರದು, ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. 
 
ಬಳಸಿ ಉಳಿದ ಎಣ್ಣೆ, ಹಳೆಯ ಬ್ಯಾಟರಿಗಳು ಮತ್ತು ಬಳಸಿದ ಟೈಯರ್‌ಗಳನ್ನು ಮರುಬಳಕೆಗಾಗಿ ಅಥವಾ ಸುರಕ್ಷಿತ ವಿಲೇವಾರಿಗಾಗಿ ಗ್ಯಾರೆಜ್‌ಗೆ ಕಳುಹಿಸಿ; ಇವೆಲ್ಲವೂ ಗಂಭೀರ ಮಾಲಿನ್ಯವನ್ನು ಉಂಟು ಮಾಡುತ್ತವೆ.
 
ಸ್ಥಳೀಯ ಆಹಾರಗಳು ಮತ್ತು ಸಾಮಗ್ರಿಗಳಿಗೆ ಪ್ರೋತ್ಸಾಹ ನೀಡಿ. ಹೀಗೆ ಮಾಡುವುದರಿಂದಾಗಿ ಆಹಾರಗಳನ್ನು ಬಹಳ ಕಾಲ ಕೆಡದಂತೆ ಇರಿಸಲು ಬಳಸುವ ಸಂರಕ್ಷಕಗಳ ಬಳಕೆ ಮತ್ತು ಆಹಾರ ಮತ್ತು ಸರಕುಗಳ ಸಾರಿಗೆ ವೆಚ್ಚ ಕಡಿಮೆಯಾಗಬಹುದು. 

ನಿಸರ್ಗದ ಜತೆಗೆ ಮರುಸಂಪರ್ಕ ಬೆಳೆಸಿಕೊಳ್ಳಿ. ಗಾಳಿ ಮತ್ತು ಸೂರ್ಯನಿಂದ ಹೇರಳವಾಗಿ ದೊರಕುವ ಹಸಿರು ಶಕ್ತಿಯನ್ನು ಬಳಸಿಕೊಳ್ಳಿ ಮತ್ತು ಹಸುರಿನ ಜತೆಗಿನ ಜೀವನವನ್ನು ಜೀವಿಸಿ. ನಿಮ್ಮ ಬಟ್ಟೆಬರೆಗಳನ್ನು ಡ್ರೆ„ಯರ್‌ನಲ್ಲಿ ಒಣಗಿಸುವುದಕ್ಕೆ ಬದಲಾಗಿ ಬಿಸಿಲಿಗೆ ಒಣಗಲು ಹಾಕಿ. ಏರ್‌ಕಂಡಿಷನ್‌ ವ್ಯವಸ್ಥೆಗೆ ಒಡ್ಡಿಕೊಳ್ಳುವುದಕ್ಕೆ ಬದಲಾಗಿ ತೆರೆದ ಕಿಟಿಕಿಗಳಿಂದ ಬೀಸುವ ತಾಜಾ ಗಾಳಿಯನ್ನು ಆನಂದಿಸಿ.
 
ನಿಮ್ಮದೇ ಆದ ಹಸುರು ವಾತಾವರಣವನ್ನು ನಿರ್ಮಿಸಿಕೊಳ್ಳಿ. ನಿಮ್ಮ ಕೈತೋಟ-ಹೂದೋಟಗಳನ್ನು ಗೌರವಿಸಿ, ಹೆಚ್ಚು ಹೆಚ್ಚು ಗಿಡಗಳನ್ನು ನೆಡಿ ಮತ್ತು ನಿಮ್ಮ ಮನೆಯ ಒಳಾಂಗಣದಲ್ಲಿ ಹೆಚ್ಚು ಗಿಡಗಳನ್ನು ಹಾಕಿ. ಅವು ಗಾಳಿಯನ್ನು ಶುದ್ಧಗೊಳಿಸುತ್ತವೆ, ಆಮ್ಲಜನಕವನ್ನು ಒದಗಿಸುತ್ತವೆ ಮತ್ತು ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಆಹ್ಲಾದಗೊಳಿಸುತ್ತವೆ.  

ತ್ಯಾಜ್ಯಗಳು ನದಿ ಮತ್ತು ಇತರ ಜಲ ಮೂಲಗಳನ್ನು ಮಲಿನಗೊಳಿಸದ ರೀತಿಯಲ್ಲಿ ಅವನ್ನು ಸರಿಯಾಗಿ ವಿಲೇವಾರಿ ಮಾಡಿ.
  
ನಿಮ್ಮ ಸಾಕುಪ್ರಾಣಿಗಳನ್ನು ಚೆನ್ನಾಗಿ ಆರೈಕೆ ಮಾಡಿ ಮತ್ತು ಅವುಗಳ ತ್ಯಾಜ್ಯಗಳನ್ನು ಸರಿಯಾಗಿ ಲೇವಾರಿ ಮಾಡಿ.

ಮಳೆ ನೀರನ್ನು ಸಂಗ್ರಹಿಸಿ.

ಪರ್ಯಾಯ ವ್ಯವಸಾಯ ಪದ್ಧತಿಯನ್ನು ಅನುಸರಿಸಿ.

ಕೀಟನಾಶಕಗಳ ಮಿತ ಬಳಕೆ, ಸರಿಯಾದ ಬೇಸಾಯ ಕ್ರಮ, ಸರಿಯಾದ ಒಳಚರಂಡಿ ಮತ್ತು ನೀರಾವರಿ ಕ್ರಮಗಳನ್ನು ಅಳವಡಿಸಿಕೊಳ್ಳಿ.

ಸಾವಯವ ಘನ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿ

ವಿವಿಧ ಕಾರಣಗಳಿಗಾಗಿ ಮರಗಳನ್ನು ಕಡಿದಿರುವಲ್ಲೆಲ್ಲ ಗಿಡಗಳನ್ನು ನೆಡುವುದರಿಂದ ಪರಿಸರದಲ್ಲಿನ ಹೆಚ್ಚುವರಿ ಇಂಗಾಲದ ಡೈ ಆಕ್ಸಿಡ್‌ ಅನ್ನು ಹೀರಿಕೊಳ್ಳಲು ಸಹಾಯ ಆಗುತ್ತದೆ.
 
ತ್ಯಾಜ್ಯಗಳನ್ನು ಜೈವಿಕ ತ್ಯಾಜ್ಯ ಮತ್ತು ಅಜೈವಿಕ ತ್ಯಾಜ್ಯಗಳೆಂದು ವಿಂಗಡಿಸಿದ ಅನಂತರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ. 

ಕಾಂಪೋಸ್ಟ್‌ ಬಿನ್‌ ಅನ್ನು ಉಪಯೋಗಿಸಿ. ಇದನ್ನು ಉಳಿಕೆ ಆಹಾರ ಮತ್ತು ಇತರ ಜೈವಿಕ ಅಂಶಗಳನ್ನು ರಿ-ಸೈಕಲ್‌ ಮಾಡಲು ಉಪಯೋಗಿಸಬಹುದು. 

ಏಳು ಶತಕೋಟಿ ಕನಸುಗಳು, ಒಂದೇ ಪರಿಸರ, ಎಚ್ಚರಿಕೆಯಿಂದ ಖರ್ಚು ಮಾಡೋಣ ಇದು ಈ ಬಾರಿಯ ವಿಶ್ವ ಪರಿಸರ ದಿನದ ಘೋಷವಾಕ್ಯ. ಇದು ನೈಸರ್ಗಿಕ ಸಂಪನ್ಮೂಲಗಳ ಅವನತಿ, ಅದನ್ನು ತಡೆಗಟ್ಟುವುದು ಮತ್ತು ಭವಿಷ್ಯ ಕ್ಕಾಗಿ ಕಾಪಾಡಿಕೊಳ್ಳಲು ನಾವು ಏನು ಮಾಡಬಹುದು ಎಂಬ ಬಗ್ಗೆ ಹೇಳುತ್ತದೆ.  ಮನುಷ್ಯಕುಲದ ಮತ್ತು ವಾತಾವರಣದ ಹಿತ, ಮತ್ತು ಆರ್ಥಿಕ ಸುಸ್ಥಿತಿಗಳು ಖಂಡಿತವಾಗಿಯೂ ಪೃಥ್ವಿಯ ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ವಹಣೆಯನ್ನು ಅವಲಂಬಿಸಿವೆ.

ಮುಂದಿನ ವಾರಕ್ಕೆ  

ಡಾ| ಚೈತ್ರಾ ಆರ್‌ ರಾವ್‌, 
ಅಸೊಸಿಯೇಟ್‌ ಪ್ರೊಫೆಸರ್‌,
ಅಶೋಕ್‌ ಕೆ., 
ಆರೋಗ್ಯ ಶಿಕ್ಷಕರು,
ಸಮುದಾಯ ವೈದ್ಯಕೀಯ ವಿಭಾಗ, 
ಕೆ.ಎಂ.ಸಿ., ಮಣಿಪಾಲ

Trending videos

Back to Top