CONNECT WITH US  

ಪ್ರೊ. ಭಗವಾನ್‌ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಹಿಂದೂಗಳ ಆರಾಧ್ಯದೈವ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹಾಗೂ ಕೀಳುಮಟ್ಟವಾಗಿ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರೊ. ಭಗವಾನ್‌ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನಾ ಹಾಗೂ ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳವಾರ ಪತ್ರಿಭಟನೆ ನಡೆಸಲಾಯಿತು.

ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಕಿತ್ತೂರ ಚನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಶ್ರೀರಾಮ ಸೇನಾ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಭಾರತೀಯರು ಶ್ರೀರಾಮನ ಬಗ್ಗೆ ಅಪಾರ ನಂಬಿಕೆ, ವಿಶ್ವಾಸವಿಟ್ಟು ಶ್ರದ್ಧೆ-ಭಕ್ತಿಯೊಂದಿಗೆ ಪೂಜಿಸುತ್ತಿದ್ದಾರೆ. ಆದರೆ ವಿಚಾರವಾದಿಗಳೆಂಬ ಹೆಸರಿನಲ್ಲಿ ಪ್ರೊ. ಭಗವಾನ್‌ರಂತಹ ಕೆಲವು ವಿಕಾರವಾದಿಗಳು ಹಿಂದೂ ದೇವತೆಗಳ ಬಗ್ಗೆ ಕೀಳಾಗಿ ಹೇಳಿಕೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಹಿಂದೂ ಧರ್ಮದ ಗ್ರಂಥ, ಸಂಪ್ರದಾಯದ ಬಗ್ಗೆ ಜ್ಞಾನವಿಲ್ಲ ಎಂದು ಆರೋಪಿಸಿದರು.

ಪ್ರೊ. ಭಗವಾನ್‌ ಈ ಹಿಂದೆ ಭಗವದ್ಗೀತೆ ಬಗ್ಗೆ ಧ್ವನಿ ಎತ್ತಿದ್ದರು. ಈಗ ಶ್ರೀರಾಮನ ಬಗ್ಗೆ ತುಚ್ಯವಾಗಿ ಮಾತನಾಡುವ ಮೂಲಕ ಹಿಂದೂಗಳ ಭಾವನೆಗೆ ನೋವುಂಟು ಮಾಡಿದ್ದಾರೆ. ರಾಮಾಯಣ ಬರೆದಂತಹ ವಾಲ್ಮೀಕಿಗೆ ಅವಮಾನ ಮಾಡಿದ್ದಾರೆ. ಬಾಬರ್‌ ವಂಶಜರಂತೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ಗಲಭೆ ಸೃಷ್ಟಿಸಲು ಹೊರಟಿರುವ ಪ್ರೊ. ಭಗವಾನ್‌ರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಗೀತಾಂಜಲಿ ಕಡಿವಾಲ, ಸುಧಾ ಅವಾರಿ, ಸಂತೋಷ ಭಟ್ಕಳಕರ, ಅರವಿಂದ ಕಾಮತ, ವೆಂಕರಮಣ ನಾಯಕ, ಅಶೋಕ ಭೋಜ, ಗುರುಪ್ರಸಾದ, ರಾಘವೇಂದ್ರ ಕುಲಕರ್ಣಿ, ರಾಘವೇಂದ್ರ ಕಠಾರಿ, ಮನೋಜ ಹಾನಗಲ್ಲ ಮೊದಲಾದವರು ಇದ್ದರು.
 

Trending videos

Back to Top