CONNECT WITH US  

ಡಾ.ವಿಷ್ಣು ಸ್ಮಾರಕ‌ ಪರ ಸುದೀಪ್‌ ಬ್ಯಾಟಿಂಗ್‌

ಅಭಿಮಾನ್‌ ಸ್ಟುಡಿಯೋದಿಂದ ಪಕ್ಕದ ಎರಡೆಕರೆ ಜಾಗಕ್ಕೆ ಡಾ. ವಿಷ್ಣುವರ್ಧನ್‌ ಅವರ ಸಮಾಧಿ ಸ್ಥಳ ಶಿಫ್ಟ್ ಆಗಬಹುದು ಎಂದು ಸುದ್ದಿಯಾದಾಗ ನಿಟ್ಟುಸಿರು ಬಿಟ್ಟಿದ್ದ ಡಾ. ವಿಷ್ಣುವರ್ಧನ್‌ ಅವರ ಅಭಿಮಾನಿಗಳು, ಹೊಸ ಜಾಗದ ಬಗ್ಗೆಯೂ ವಿವಾದ ಎದ್ದಾಗ ಬೇಸರಗೊಂಡಿದ್ದರು. ಈಗ ಅವರೆಲ್ಲರ ಬೆಂಬಲವಾಗಿ "ಕಿಚ್ಚ' ಸುದೀಪ್‌ ನಿಂತಿದ್ದಾರೆ. ಇದುವರೆಗೂ ಡಾ. ವಿಷ್ಣುವರ್ಧನ್‌ ಸ್ಮಾರಕದ ಕುರಿತಾಗಿ ಮೌನ ವಹಿಸಿದ್ದ ಸುದೀಪ್‌, ಈಗ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಬೇಗ ಗೊಂದಲವನ್ನು ನಿವಾರಿಸಿ, ಸ್ಮಾರಕ ನಿರ್ಮಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸುದೀಪ್‌ ಸೋಮವಾರ ಟ್ವೀಟ್‌ ಮಾಡಿಕೊಂಡಿದ್ದಾರೆ. ಟ್ವೀಟ್‌ ಮೂಲಕವೇ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ."ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ವಿಷ್ಣು ಸಾರ್‌ ಅವರ ಸಾಧನೆ ಬಹಳ ದೊಡ್ಡದು. ಅವರ ಹೆಸರಲ್ಲೊಂದು ಸ್ಮಾರಕ ಅವಶ್ಯಕವಾಗಿ ಆಗಬೇಕಾಗಿದ್ದು, ನಾನು ಅದರ ಪರ ಇದ್ದೇನೆ. ಸರ್ಕಾರಕ್ಕೆ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ, ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದಲ್ಲ. ಸ್ಮಾರಕ ನಿರ್ಮಾಣವಾಗುತ್ತಿರುವುದು ವಿಷ್ಣವರ್ಧನ್‌ ಅವರಂಥ ಲೆಜೆಂಡ್‌ ಹೆಸರಲ್ಲಿ. ಹಾಗಾಗಿ ಮೊದಲು ಪರಿಹಾರ ಹುಡುಕುವ ಕೆಲಸವಾಗಬೇಕು. ಹಾಗಂತ ನಿಯಮಗಳನ್ನು ಮುರಿಯಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ, ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಹುಡುಕಬೇಕು ಎಂಬುದಷ್ಟೇ ನನ್ನ ಮನವಿ. ನಮ್ಮೆಲ್ಲರ ಹೆಮ್ಮೆ ವಿಷ್ಣು ಅವರಿಗೆ ನಾವು ಅಷ್ಟಾದರೂ ಗೌರವ ಸಲ್ಲಿಸದಿದ್ದರೆ ಹೇಗೆ? ಇಲ್ಲಿ ಹಣ ಮುಖ್ಯ ಅಲ್ಲ, ಉದ್ದೇಶ ಮುಖ್ಯ. ದೇಶದಾದ್ಯಂತ ಕೋಟ್ಯಂತರ ಜನರನ್ನು ರಂಜಿಸಿದ ಒಬ್ಬ ದೊಡ್ಡ ಐಕಾನ್‌ನನ್ನು ಗೌರವಿಸುವ ಉದ್ದೇಶ' ಎಂದು ಸುದೀಪ್‌ ಟ್ವೀಟ್‌ ಮಾಡಿಕೊಂಡಿದ್ದಾರೆ.

ಸುದೀಪ್‌ ಹೀಗೆ ಬಹಿರಂಗವಾಗಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕದ ಬಗ್ಗೆ ಮಾತಾಡಿರುವುದರಿಂದ ಸ್ಮಾರಕದ ಪ್ರಗತಿಗೆ ಮತ್ತು ಸ್ಮಾರಕವನ್ನು ನನಸಾಗಿಸುವುದಕ್ಕೆ ಹೊರಟಿರುವ ಡಾ. ವಿಷ್ಣುವರ್ಧನ್‌ ಕುಟುಂಬ ಮತ್ತು ಅಭಿಮಾನಿಗಳ ಆಶಯಕ್ಕೆ ಆನೆಬಲ ಬಂದಂತಾಗಿದೆ. ಸುದೀಪ್‌ ಅವರ ಎಂಟ್ರಿಯಿಂದಾದರೂ, ಡಾ. ವಿಷ್ಣುವರ್ಧನ್‌ ಅವರ ಸ್ಮಾರಕದ ವಿವಾದ ಬಗೆಹರಿಯಲಿದೆಯೇ ಎಂದು ನೋಡಬೇಕು.

Trending videos

Back to Top