ದೇಶದ ಭವಿಷ್ಯಕ್ಕಾಗಿ ಯುವಪೀಳಿಗೆ ಎಚ್ಐವಿ ಸೋಂಕಿನಿಂದ ದೂರವಿರಿ

ಹನೂರು: ದೇಶದ ಭವಿಷ್ಯ ಯುವ ಜನರ ಕೈಯಲ್ಲಿದೆ. ಹೀಗಾಗಿ ಯುವ ಪೀಳಿಗೆ ಎಚ್ಐವಿ ಸೋಂಕಿನಿಂದ ದೂರವಿರುವುದು ಅತ್ಯವಶ್ಯಕ ಎಂದು ಆಪ್ತ ಸಲಹೆಗಾರ ದೇವರಾಜು ತಿಳಿಸಿದರು. ಪಟ್ಟಣದ ಜಿ.ವಿ.ಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರೆಡ್ರಿಬ್ಬನ್ ಮತ್ತು ಎಚ್ಐವಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್ಐವಿ ಸೋಂಕಿತರಲ್ಲಿ ಶೇ.31ರಷ್ಟು ಜನ 15-29 ವರ್ಷದವರು. ಹದಿಹರೆಯದರಲ್ಲಿನ ದೈಹಿಕ ಬದಲಾವಣೆಗಳು ಉಂಟಾಗುತ್ತದೆ. ಅದನ್ನು ಯಾವುದೇ ಸಂಕೋಚವಿಲ್ಲದೆ ಪೋಷಕರು, ಶಿಕ್ಷಕರು ಅಥವಾ ಇತರೆ ವ್ಯಕ್ತಿಗಳೊಂದಿಹೆ ಹಂಚಿಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ಎಚ್ಐವಿ ಕೇವಲ 4 ವಿಧಾನಗಳಲ್ಲಿ ಮಾತ್ರ ಹರಡುತ್ತದೆ. ಅದರಲ್ಲೂ ಎಚ್ಐವಿ ಸೋಂಕು ಶೇ.87ಕ್ಕಿಂತಲೂ ಹೆಚ್ಚು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೇ ಹರಡುತ್ತಿದೆ. ಹೀಗಾಗಿ ಯುವ ಪೀಳಿಗೆ ಇಂತಹ ಸೋಂಕುಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಹೋಲಿಕ್ರಾಸ್ ಸಂಸ್ಥೆಯ ಆಪ್ತ ಸಲಹೆಗಾರ ನಟೇಶ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವ ಘಟಕಗಳೇ ರೆಡ್ ರಿಬ್ಬನ್ ಕ್ಲಬ್ಗಳಾಗಿವೆ. ಎಚ್ಐವಿ ತಡೆಯುವುದು ಮತ್ತು ಇದರ ಸೇವಾ ಸೌಲಭ್ಯಗಳ ಸರಿಯಾದ ಮಾಹಿತಿಯನ್ನು ಯುವಕರಿಗೆ ನೀಡುವುದು ಕ್ಲಬ್ನ ಗುರಿಯಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲ ಸತ್ಯನಾರಾಯಣ, ಪ್ರಾಧ್ಯಾಪಕ ಸುಂದರ್ಮೂರ್ತಿ ಇತರರಿದ್ದರು.