CONNECT WITH US  

27 ರಂದು ಚಂದ್ರಗ್ರಹಣದೊಂದಿಗೆ ಮಂಗಳನ ದರ್ಶನ!

ಚಿತ್ರದುರ್ಗ: ಸಂಪೂರ್ಣ ಚಂದ್ರಗ್ರಹಣ ಜು. 27 ರಂದು ವಿಶ್ವದ ಬಹುತೇಕ ದೇಶಗಳಲ್ಲಿ ಗೋಚರಿಸಲಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಚ್‌.ಎಸ್‌.ಟಿ. ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 100 ವರ್ಷಗಳಲ್ಲಿ ಸಂಭವಿಸಿರುವ ಅನೇಕ ಗ್ರಹಣಗಳಲ್ಲಿ ಇದು ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ.

ಚಂದ್ರನು ಭೂಮಿಯನ್ನು ಭ್ರಮಿಸುವ ಪಥಅಂಡಾಕಾರದಲ್ಲಿದ್ದು, ಭೂಮಿಗೆ ಒಮ್ಮೊಮ್ಮೆ 3 ಲಕ್ಷದ 56 ಸಾವಿರದ 400 ಕಿಮೀ ಸಮೀಪಕ್ಕೆ ಬರುತ್ತಾನೆ. ಒಮ್ಮೊಮ್ಮೆ ಭೂಮಿಯಿಂದ ಬಹು ದೂರದಲ್ಲಿ ಇರುತ್ತಾನೆ. ಈ ಬಾರಿ ಚಂದ್ರ ಭೂಮಿಯಿಂದ ಬಹು ದೂರ ಇರುವುದರಿಂದ ಚಿಕ್ಕಗಾತ್ರದಲ್ಲಿ ಗೋಚರಿಸುತ್ತಾನೆ. ಭೂಮಿಯ ನೆರಳಿನಿಂದ ಆಚೆ ಬರಲು ಚಂದ್ರ ಹೆಚ್ಚು ವೇಳೆ ತೆಗೆದುಕೊಳ್ಳುತ್ತಾನೆ. ಚಂದ್ರಗ್ರಹಣದ ಜೊತೆಯಲ್ಲಿ ಆಕಾಶ ವೀಕ್ಷಕರಿಗೆ ಇನ್ನೊಂದು ಖಗೋಳ ವಿಸ್ಮಯ ಗೋಚರಿಸಲಿದೆ. ಚಂದ್ರನ ವಿರುದ್ಧ ದಿಕ್ಕಿನಲ್ಲಿ ಅತ್ಯಂತ ಕಡು ಕೆಂಬಣ್ಣದ ಕೆಂಪು ಗ್ರಹ ಎಂದೇ ಕರೆಯಲ್ಪಡುವ ಮಂಗಳ ಗ್ರಹವನ್ನೂ ವೀಕ್ಷಕರು ನೋಡಿ ಕಣ್ತುಂಬಿಕೊಳ್ಳಬಹುದು. ವಾತಾವರಣದಲ್ಲಿ ಧೂಳಿನ ಕಣಗಳು, ನೀರಾವಿ ಮತ್ತಿತರ ಕಣಗಳು ಸೂರ್ಯನ ಬೆಳಕನ್ನು ಚದುರಿಸುವುದರಿಂದ ಚಂದ್ರ ಅತ್ಯಂತ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಮಂಗಳನಲ್ಲಿ ಲಿಮೋನೈಟ್‌ ಎಂಬ ಕಬ್ಬಿಣಾಂಶ ಹೆಚ್ಚು ಇರುವುದರಿಂದ ಅಂದು ಕೆಂಬಣ್ಣದಲ್ಲಿ
ಗೋಚರಿಸಲಿದೆ ಎಂದಿದ್ದಾರೆ.

ಈ ಬಾರಿಯ ಚಂದ್ರಗ್ರಹಣ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಜು. 27 ರಂದು ರಾತ್ರಿ 10:45ಕ್ಕೆ ಭೂಮಿಯ ಅರೆನೆರಳು ಪ್ರದೇಶದಲ್ಲಿ ಚಂದ್ರನ ಪ್ರವೇಶವಾಗಿ, 11:55ಕ್ಕೆ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭವಾಗುತ್ತದೆ. 

ಮಧ್ಯರಾತ್ರಿ 1ಕ್ಕೆ ಗ್ರಹಣ ಆರಂಭವಾಗಿ 1:52ಕ್ಕೆ ಸಂಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದಾಗಿದೆ. ನಂತರ 2:45ಕ್ಕೆ
ಸಂಪೂರ್ಣ ಚಂದ್ರಗ್ರಹಣ ಕೊನೆಯಾಗಿ ಬೆಳಗಿನ ಜಾವ 3:50ಕ್ಕೆ ಭೂಮಿಯ ಪೂರ್ಣ ನೆರಳಿನಿಂದ ಹೊರಬರುತ್ತದೆ. ಬೆಳಿಗ್ಗೆ 5 ಗಂಟೆಗೆ ಗ್ರಹಣ ಕೊನೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಗ್ರಹಣವನ್ನು ದಕ್ಷಿಣ ಅಮೇರಿಕಾ, ಪೂರ್ವ ಆಫ್ರೀಕ, ಏಷ್ಯಾ ಖಂಡಗಳನ್ನು ಒಳಗೊಂಡಂತೆ ಭಾರತದಲ್ಲಿಯೂ ನೋಡಬಹುದಾಗಿದೆ. ರಾತ್ರಿ ಜರುಗುವ ಚಂದ್ರಗ್ರಹಣದ ಆರಂಭದಿಂದಲೇ ಗ್ರಹಣದ ವಿರುದ್ಧ ದಿಕ್ಕಿನಲ್ಲಿ ಮಂಗಳಗ್ರಹವನ್ನು ತುಂಬಾ ಸಮೀಪದಿಂದ ನೋಡಬಹುದಾಗಿದೆ. ಈ ಎಲ್ಲಾ ಘಟನೆಗಳನ್ನು ಬರಿಗಣ್ಣಿನಿಂದಲೇ ನೋಡಬಹುದು. ಇನ್ನೂ ಸ್ಪಷ್ಟವಾಗಿ ನೋಡಬೇಕೆನ್ನುವವರು ಬೈನಾಕ್ಯುಲರ್‌ ಅಥವಾ ದೂರದರ್ಶಕ ಬಳಸಬಹುದು.

ಈ ರೀತಿಯ ಘಟನೆಗಳು ನಡೆಯುವುದೇ  ಅಪರೂಪ. ಏಕೆಂದರೆ ಇಂತಹ ಅವಕಾಶ 15 ರಿಂದ 18 ವರ್ಷಗಳ ಅವಧಿಯಲ್ಲಿ ಎರಡು ಬಾರಿ ಮಾತ್ರ ಘಟಿಸುತ್ತದೆ. ಮುಂದಿನ ಅವಕಾಶಕ್ಕಾಗಿ 2020 ಅಕ್ಟೋಬರ್‌ 6 ರವರೆಗೂ ಕಾಯಬೇಕಾಗುತ್ತದೆ. ಆದರೆ ಇಷ್ಟೊಂದು ದೊಡ್ಡ ಗಾತ್ರ ಮತ್ತು ಪ್ರಕಾಶಮಾನವಾದ ಚಂದ್ರ ಮತ್ತು ಕೆಂಪಾದ ಮಂಗಳನನ್ನು ನೋಡಲು ಸಾಧ್ಯವಾಗುವುದಿಲ್ಲ. ಈಗೀಗ ಮಾಧ್ಯಮಗಳು ರಕ್ತಸಿಕ್ತ ಚಂದ್ರಗ್ರಹಣ ಪ್ರಕೃತಿಯಲ್ಲಿ ಅನೇಕ ಅವಘಡಗಳಿಗೆ ಕಾರಣವಾಗಬಹುದು ಎಂದು ಬೊಬ್ಬೆ ಹಾಕುತ್ತಿವೆ. ಶತಮಾನಗಳಿಂದಲೂ ಈ ರೀತಿಯ ಗ್ರಹಣಗಳು ನಡೆದಿವೆಯಾದರೂ ಭೂಮಿಗೆ ತೊಂದರೆ ಉಂಟಾಗುವುದಿಲ್ಲ.

ಸಣ್ಣ ಪುಟ್ಟ ಪ್ರಕೃತಿ ವಿಕೋಪಗಳನ್ನು ಬಿಟ್ಟರೆ ಬೇರೇನೂ ಆಗದು. ಊಟ ಮಾಡುವುದನ್ನು ಬಿಡುವುದು, ಗ್ರಹಣದ ನಂತರ ಮನೆಯಲ್ಲಿನ ಹಳೆ ನೀರನ್ನು ಚೆಲ್ಲುವುದು ಮಾಡುವುದರಲ್ಲಿ ಅರ್ಥವಿಲ್ಲ. ಗ್ರಹಣಕ್ಕೂ ನಂಬಿಕೆಗಳಿಗೆ ಸಂಬಂಧವಿಲ್ಲ. ಈ ಎಲ್ಲಾ ವಿಸ್ಮಯಗಳನ್ನು ಮುಂಗಾರು ಮಳೆ ಬಿಡುವು ಮಾಡಿಕೊಂಡು ಮೋಡಗಳು ಸರಿದು ನೀಲಿ ಆಕಾಶವಿದ್ದಲ್ಲಿ ಮಾತ್ರ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

Trending videos

Back to Top