CONNECT WITH US  

88 ಸಿನಿಮಾ, 300 ಧಾರಾವಾಹಿ, 26 ವರ್ಷಗಳು

ರೂಪತಾರಾ

ಇದು ಎರಡುವರೆ ದಶಕದ ಹಿಂದಿನ ಮಾತು. ಯಾವುದೇ ಕನ್ನಡ ಚಿತ್ರವಿರಲಿ, ಒಂದು ತಂಗಿ ಪಾತ್ರ ಇತ್ತು ಅಂದರೆ, ಆ ಪಾತ್ರಕ್ಕೆ ನೆನಪಾಗುತ್ತಿದ್ದದ್ದೇ ಅವರು. ಕನ್ನಡದ ಬಹುತೇಕ ಹೀರೋಗಳಿಗೆ ತಂಗಿಯಾದವರು. ಅದೆಷ್ಟೋ ಹೀರೋಗಳ ಸಾಲು ಸಾಲು ಚಿತ್ರಗಳಲ್ಲಿ ಅವರನ್ನು ಹೊರತುಪಡಿಸಿದರೆ ಆ ತಂಗಿ ಪಾತ್ರದಲ್ಲಿ ಬೇರೆ ಯಾರೂ ಕಾಣಿಸಿಕೊಳ್ಳುತ್ತಿರಲಿಲ್ಲ.

ಅಷ್ಟರಮಟ್ಟಿಗೆ ಇಂಡಸ್ಟ್ರಿಯ ಪಾಲಿಗೆ ತಂಗಿಯಾಗಿದ್ದ ಅವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ, ಕಿರುತೆರೆಯಲ್ಲೂ ಸೈ ಎನಿಸಿಕೊಂಡವರು. ತಂಗಿಯಾಗಿ, ನಾದಿನಿಯಾಗಿ, ಗೆಳತಿಯಾಗಿ, ಅತ್ತಿಗೆಯಾಗಿ, ಅಮ್ಮನಾಗಿ ಹೀಗೇ ಹಲವು ಬಗೆಯ ಪಾತ್ರಗಳಲ್ಲಿ ಮಿಂಚಿದವರು. ಇಲ್ಲಿವರೆಗೆ 300 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಭಿನಯಿಸಿದ ಚಿತ್ರಗಳ ಸಂಖ್ಯೆ 90.

ಬಹುಶಃ ಇನ್ನೆರೆಡು ವರ್ಷದಲ್ಲಿ ಸೆಂಚುರಿ ನಟಿಯೆಂಬ ಪಟ್ಟ ಪಡೆಯುತ್ತಾರೆ. ಇಷ್ಟಕ್ಕೂ ಯಾರಿವರು? ಅದು ಬೇರಾರೂ ಅಲ್ಲ, ಅಪ್ಪಟ ಕನ್ನಡತಿ ವಾಣಿಶ್ರೀ. ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ ಇವರು. ಕಳೆದ 27 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದುಕೊಂಡು ಸಿಕ್ಕ ಪಾತ್ರಕ್ಕೆ ಜೀವ ತುಂಬುತ್ತ ಮನೆಮಾತಾದ ವಾಣಿಶ್ರೀ, ತಮ್ಮ ಕಿರುತೆರೆ, ಬೆಳ್ಳಿತೆರೆ ಪಯಣದ ಕುರಿತು ಮಾತನಾಡಿದ್ದಾರೆ.

* ನಿಮ್ಮ ಬಾಲ್ಯ, ಹಿನ್ನೆಲೆ ಇತ್ಯಾದಿ?
ಮೂಲತಃ ಮಂಗಳೂರಿನವಳು. ಆದರೆ, ಓದಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರು. ಶೇಷಾದ್ರಿಪುರಂ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಬಿಎಸ್ಸಿ, ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ ಮುಗಿಸಿ, ಆರಂಭದಲ್ಲಿ ಒಂದು ಕೆಲಸವನ್ನೂ ಮಾಡಿದ್ದುಂಟು. ಕಾಲೇಜು ದಿನಗಳಲ್ಲಿ ನಾನು ಕ್ರೀಡಾಪಟುವೂ ಹೌದು. ಶಾಟ್‌ಪುಟ್‌, ಡಿಸ್ಕಸ್‌ ಥ್ರೋ ಆಟದಲ್ಲಿ ಜಿಲ್ಲೆ ಪ್ರತಿನಿಧಿಸಿದ್ದೇನೆ.

* ನಟನೆ ಬಗ್ಗೆ ಆಸಕ್ತಿ ಬಂದಿದ್ದೇಗೆ?
ನನಗೆ ನಟನೆ ಆಸಕ್ತಿಯೇ ಇರಲಿಲ್ಲ. ಅದರಲ್ಲೂ ಯಾರ ಸ್ಫೂರ್ತಿಯೂ ಇಲ್ಲ. ನನ್ನ ಗೆಳೆತಿಯರೆಲ್ಲ ಸಿನಿಮಾ ಮಾಡುತ್ತಿದ್ದರು. ನನಗೂ ಎಲ್ಲೋ ಒಂದು ಕಡೆ ಅವಕಾಶ ಸಿಕ್ಕರೆ ಪ್ರಯತ್ನ ಮಾಡೋಣ ಅನ್ನಿಸಿತ್ತು. ಇದ್ದಕ್ಕಿದ್ದಂತೆ ಒಂದು ಅವಕಾಶ ಬಂತು. ಹಿರಿಯ ನಿರ್ದೇಶಕ ರೇಣುಕಾಶರ್ಮ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ಜರ್ನಿ ಶುರುವಾಯ್ತು. ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ. ನಾನೇ ನಿರ್ಧಾರ ತೆಗೆದುಕೊಂಡೆ. ನಂತರ ಸಿನಿ ಜರ್ನಿಯಲ್ಲಿ ಒಳ್ಳೆಯ ಅವಕಾಶ ಬರುತ್ತಾ ಹೋದವು. ನನ್ನ ತಾಯಿ ಕೂಡ ನನ್ನೆಲ್ಲಾ ಆಸೆಗಳಿಗೆ ಒತ್ತಾಸೆಯಾದರು. ನಾನು ಮದುವೆ ಆಗುವವರೆಗೂ ಅಮ್ಮ ಜೊತೆಗಿದ್ದು, ಪ್ರೋತ್ಸಾಹಿಸುತ್ತ ಬಂದರು.

* ನಿಮ್ಮ ಮೊದಲ ಚಿತ್ರ?
ಅದು ರಾಘವೇಂದ್ರ ರಾಜಕುಮಾರ್‌ ಅಭಿನಯದ "ಭರ್ಜರಿ ಗಂಡು'. ಆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ "ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ', "ಕಲಿಯುಗ ಸೀತ', "ರಂಜಿತಾ' ಚಿತ್ರಗಳಲ್ಲಿ ಸಾಲಾಗಿ ನಟಿಸುವ ಅವಕಾಶ ಬಂದಿತು.

* ನಟಿಸಿದ ಮೊದಲ ಧಾರಾವಾಹಿ?
"ಸ್ವರ ಸಂಪದ' ನನ್ನ ಮೊದಲ ನಟನೆಯ ಧಾರಾವಾಹಿ. ಮೊದಲ ಧಾರಾವಾಹಿಯಲ್ಲೇ ಯಶಸ್ಸು ಕಂಡೆ. ಅಲ್ಲಿಂದ ಇಲ್ಲಿಯವರೆಗೆ 300 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಕನ್ನಡ ಮಾತ್ರವಲ್ಲ, ತೆಲುಗು, ಮಲಯಾಳಂ, ಹಿಂದಿ ಹಾಗು ಇಂಗ್ಲೀಷ್‌ ಧಾರಾವಾಹಿಗಳಲ್ಲೂ ನಟಿಸಿದ್ದೇನೆ.

* ಸಿನಿಮಾ, ಧಾರಾವಾಹಿ ಯಾವುದರಲ್ಲಿ ಜನಪ್ರಿಯತೆ ಸಿಕ್ಕಿತು?
ಬ್ರೇಕ್‌ ಅಂತೇನೂ ಇಲ್ಲ. ಆಗ ನಾನು ತಂಗಿ ಪಾತ್ರ ಮಾಡಿದ್ದೇ ಹೆಚ್ಚು. ಚಿತ್ರದಲ್ಲಿ ತಂಗಿ ಪಾತ್ರ ಇದೆ ಅಂದಾಕ್ಷಣ ಮೊದಲು ನೆನಪಾಗುತ್ತಿದ್ದದ್ದೇ ನನ್ನ ಹೆಸರು. ಹಾಗಾಗಿ, ಪ್ರತಿಯೊಬ್ಬ ನಿರ್ದೇಶಕರು ತಂಗಿ ಪಾತ್ರಕ್ಕೆ ನನ್ನನ್ನೇ ಕರೆಯುತ್ತಿದ್ದರು. ಸಿನಿಮಾ, ಧಾರಾವಾಹಿಗಳಲ್ಲಿ ಜನಪ್ರಿಯತೆಗಿಂತ, ತಂಗಿ ಪಾತ್ರದಲ್ಲಿ ಜನಪ್ರಿಯತೆ ಸಿಕ್ಕಿದ್ದೇ ಹೆಚ್ಚು.

* ಯಾರೊಂದಿಗೆಲ್ಲಾ ತಂಗಿಯಾಗಿದ್ದೀರಿ? 
ರಮೇಶ್‌ ಅರವಿಂದ್‌ ಜೊತೆಗೆ ಎಂಟು ಚಿತ್ರ ಮಾಡಿದ್ದೇನೆ. ಜಗ್ಗೇಶ್‌ ಅವರೊಂದಿಗೆ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ತಂಗಿಯಾಗಿಯೂ ನಟಿಸಿದ್ದೇನೆ, ಸೆಕೆಂಡ್‌ ಲೀಡ್‌ ಆಗಿಯೂ ಮಾಡಿದ್ದೇನೆ. ಶಿವಣ್ಣ ಅವರ ಜೊತೆಗೆ "ಓಂ', "ಗಡಿಬಿಡಿ ಕೃಷ್ಣ', "ಮದುವೆ ಆಗೋಣ ಬಾ' ಸೇರಿದಂತೆ ಸುಮಾರು 9 ಚಿತ್ರಗಳಲ್ಲಿ ನಟಿಸಿದ್ದೇನೆ. ಸಾಯಿಕುಮಾರ್‌, ರಾಮ್‌ಕುಮಾರ್‌ ಹೀಗೇ ಇನ್ನೂ ಅನೇಕ ಹೀರೋಗಳ ಜೊತೆಗೆ ನಟಿಸಿದ್ದೇನೆ. 

* ಆಗ ತಂಗಿ ಪಾತ್ರ, ಈಗ ಯಾವ ಪಾತ್ರ ಹುಡುಕಿ ಬರುತ್ತಿವೆ?
ಕ್ರಮೇಣ ಎಲ್ಲಾ ಪಾತ್ರಗಳನ್ನೂ ಮಾಡುತ್ತ ಬಂದೆ. ನಾದಿನಿ, ಗೆಳತಿ, ಅತ್ತಿಗೆ, ಚಿಕ್ಕಮ್ಮ, ಅಮ್ಮ ಸೇರಿದಂತೆ ಪೋಷಕ ನಟಿಯಾಗಿಯೂ ನಟಿಸುತ್ತಿದ್ದೇನೆ. ಈಗ ಹೆಚ್ಚು ಸಪೋರ್ಟಿಂಗ್‌ ಪಾತ್ರಗಳು ಬರುತ್ತಿವೆ. ಮಧ್ಯೆ ನಾಲ್ಲು ವರ್ಷಗಳ ಕಾಲ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. 2002ರಿಂದ 2006ರವರೆಗೆ ಮನೆಯಲ್ಲಿದ್ದೆ. ಕಾರಣ, ನನ್ನ ಮಗು ಚಿಕ್ಕದ್ದಿತ್ತು. ಅದನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದುದರಿಂದ ಯಾವ ಅವಕಾಶ ಬಂದರೂ ಮಾಡಲಿಲ್ಲ. 

* ಕಿರುತೆರೆ ಕೈ ಹಿಡಿಯಲಿಲ್ಲವೇ?
ನಟಿಸಿದ ಮೊದಲ ಧಾರಾವಾಹಿ "ಸ್ವರ ಸಂಪದ' ಹೆಸರು ತಂದು ಕೊಟ್ಟಿತು. ಆ ಬಳಿಕ "ದ್ವಿತೀಯ', "ಪ್ರತಿಬಿಂಬ' ಸೇರಿದಂತೆ ಇನ್ನಷ್ಟು ಧಾರಾವಾಹಿಗಳು ಗುರುತಿಸಿಕೊಳ್ಳುವಂತೆ ಮಾಡಿದವು. ಇವೆಲ್ಲಾ ಆಗಿನ ಧಾರಾವಾಹಿಗಳು. ಇತ್ತೀಚಿನ ಧಾರಾವಾಹಿಗಳಲ್ಲೂ ಗುರುತಿಸಿಕೊಂಡ ಪಾತ್ರಗಳಿವೆ. "ಅಮ್ಮ ನಿನಗಾಗಿ', "ಚುಕ್ಕಿ', "ಮನೆಯೊಂದು ಮೂರು ಬಾಗಿಲು', "ಮುದ್ದುಲಕ್ಷ್ಮೀ', "ರಾಧಾ' ಇನ್ನು ಹಲವು ಧಾರಾವಾಹಿಗಳು ಜನಪ್ರಿಯತೆ ತಂದುಕೊಟ್ಟಿವೆ.

* ಸಿನಿಮಾ, ಕಿರುತೆರೆ ಯಾವುದು ಕಂಫ‌ರ್ಟ್‌?
ಧಾರಾವಾಹಿಗಳೆಂದರೆ, ತಿಂಗಳು, ವರ್ಷಗಟ್ಟಲೆ ಕೆಲಸ ಇರುತ್ತೆ. ಹಾಗಾಗಿ, ಅಲ್ಲಿನವರ ಜೊತೆಗೊಂದು ಒಳ್ಳೆಯ ಬಾಂಧವ್ಯ ಇರುತ್ತೆ. ಅದೊಂಥರಾ ಕುಟುಂಬದ ವಾತಾವರಣ ನಿರ್ಮಾಣ ಮಾಡಿ ಬಿಡುತ್ತೆ. ಅದೇ ಸಿನಿಮಾ ಅಂದರೆ, ಅಂತಹ ವಾತಾವರಣ ಇರಲ್ಲ. ಯಾಕೆಂದರೆ, ನಾಲ್ಕೈದು ದಿನ ಮಾತ್ರ ಚಿತ್ರೀಕರಣ ಇರುತ್ತೆ. ಸಿನಿಮಾಗೆ ಹೋದಾಗಷ್ಟೇ ಮಾತಾಡೋದು, ಬರೋದು. ಮುಗಿದ ಬಳಿಕ ಆ ಚಿತ್ರದ ನಂಟು ಅಷ್ಟೇ. ಸಿನಿಮಾಗಿಂತ, ಕಿರುತೆರೆ ಒಂದು ಮಟ್ಟಿಗೆ ಕಂಫ‌ರ್ಟ್‌ ಹೆಚ್ಚು.

* ಸಿನಿಮಾ ಅವಕಾಶ ಕಡಿಮೆ ಆಯ್ತು ಅನಿಸುತ್ತಿದೆಯಾ?
ಹಾಗೇನೂ ಇಲ್ಲ. ಹೇಳ್ಳೋದಾದರೆ, ಈಗ ಸಿನಿಮಾ ಅವಕಾಶಗಳೇ ಜಾಸ್ತಿ ಆಗ್ತಾ ಇದೆ. ಕಳೆದ ವರ್ಷ 8 ಸಿನಿಮಾಗಳು ರಿಲೀಸ್‌ ಆಗಿದ್ದವು. ಈ ವರ್ಷ ನಾಲ್ಕೈದು ಚಿತ್ರಗಳು ರಿಲೀಸ್‌ ಆಗುತ್ತವೆ. ಸದ್ಯಕ್ಕೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇನ್ನೂ ಒಂದಷ್ಟು ಚಿತ್ರಗಳಲ್ಲಿ ನಟಿಸಬೇಕಿದೆ. ಅವಕಾಶ ಕಡಿಮೆ ಆಯ್ತು ಅಂತ ಅನಿಸಿಲ್ಲ.

* ಅವಕಾಶ ಹುಡುಕಿ ಬರುತ್ತಿರೋದು ಸಿನಿಮಾನಾ, ಧಾರಾವಾಹಿನಾ?
ತುಂಬಾನೇ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬರುತ್ತಿವೆ. ಆದರೆ, ಹೆಚ್ಚು ಧಾರಾವಾಹಿಗಳಲ್ಲಿ ನಟಿಸುವುದು ಕಷ್ಟ. ಯಾಕೆಂದರೆ, ಸದ್ಯಕ್ಕೆ ಕೆಲ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. ನನಗೆ ಹೆಚ್ಚೆಚ್ಚು ಸಿನಿಮಾಗಳಲ್ಲೇ ನಟಿಸುವ ಆಸೆ.

* ಇಷ್ಟು ವರ್ಷಗಳಲ್ಲಿ ನಿಮಗಾದ ಒಳ್ಳೇ ಘಟನೆಗಳು?
ಸಿನಿಮಾ ರಂಗ, ಕಿರುತೆರೆಯಲ್ಲಿ ಒಳ್ಳೆಯದ್ದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯ ಅನುಭವದ ಬಗ್ಗೆ ಹೇಳುವುದಾದರೆ, ಸಿನಿಮಾ, ಕಿರುತೆರೆಯಲ್ಲಿ ನಾನು ಗುರುತಿಸಿಕೊಂಡೆ. ಎಲ್ಲೇ ಹೋದರು ಜನರು, ಮುಗಿಬಿದ್ದು ಮಾತಾಡಿಸುತ್ತಿದ್ದರು, ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆ ಕ್ಷಣಗಳನ್ನು ನೆನಪಿಸಿಕೊಂಡಾಗ, ಇನ್ನಷ್ಟು ಜವಾಬ್ದಾರಿ ಹೆಚ್ಚುತ್ತಿತ್ತು. ನಾನಿನ್ನೂ ಚೆನ್ನಾಗಿ ನಟಿಸಬೇಕೆಂಬ ಯೋಚನೆ ಬರುತ್ತಿತ್ತು. ಒಳ್ಳೆಯ ಪಾತ್ರ ಆಯ್ಕೆ ಮಾಡಿಕೊಳ್ಳಬೇಕೆನಿಸುತ್ತಿತ್ತು.

ಕೆಲ ಧಾರಾವಾಹಿಗಳಲ್ಲಿ ನಾನು ನೆಗೆಟಿವ್‌ ಪಾತ್ರ ಮಾಡಿದಾಗ, ಎಷ್ಟೋ ಜನ, "ಮೇಡಮ್‌ ನೀವು ನೋಡೋಕೆ ತುಂಬಾ ಸಾಫ್ಟ್ ಆಗಿ ಕಾಣಿಸ್ತೀರಿ. ಆದರೆ, ಸೀರಿಯಲ್‌ನಲ್ಲಿ ನಿಮ್ಮ ಪಾತ್ರ ನೋಡಿದಾಗ, ಟಿವಿ ಜಜ್ಜಬೇಕೆನಿಸುತ್ತೆ, ನಿಮಗೆ ಬೈಯಬೇಕೆನಿಸುತ್ತೆ' ಅಂತ ಹೇಳುತ್ತಿದ್ದರು. ಆಗ ಜನರಿಗೆ ಆ ಪಾತ್ರ ಅಷ್ಟೊಂದು ಪ್ರಭಾವ ಬೀರಿದೆ ಅಂತ ಖುಷಿಯಾಗುತ್ತಿತ್ತು. ಆದರೂ ಎಲ್ಲೋ ಒಂದು ಕಡೆ ಭಯ ಆಗುತ್ತಿತ್ತು. ಜನರು ನನ್ನನ್ನು ಕೆಟ್ಟ ಪಾತ್ರಗಳಲ್ಲಿ ನೋಡಲು ಇಷ್ಟಪಡಲ್ಲ ಅಂತ ಗೊತ್ತಾಯ್ತು. ಆಗಿನಿಂದ ಒಳ್ಳೆಯ ಪಾತ್ರ ಆಯ್ಕೆ ಮಾಡುವಲ್ಲಿ ನಿರತಳಾದೆ. 

* ಕಹಿ ಘಟನೆಗಳೇನಾದರೂ ಇದೆಯಾ?
ಅದು "ಮಾಂಗಲ್ಯ' ಎಂಬ ಧಾರಾವಾಹಿ. ಒಂದು ದೃಶ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಅದು ನೇಣು ಹಾಕಿಕೊಳ್ಳುವ ದೃಶ್ಯ. ಮುಂಜಾಗ್ರತೆಯಾಗಿ ಎಲ್ಲಾ ಕ್ರಮವೂ ಅಲ್ಲಿತ್ತು. ರೋಪ್‌ ಕೂಡ ಇತ್ತು. ಕ್ಯಾಮೆರಾ ಲೋ ಆ್ಯಂಗಲ್‌ನಲ್ಲಿತ್ತು. ಕತ್ತಿಗೆ ಒಂದು ಬಟ್ಟೆ ಕಟ್ಟಲಾಗಿತ್ತು. ಆದರೆ, ಹಾರುವಾಗ, ಅಲ್ಲಿ ವೈಯರ್‌ ಕಾಣಬಾರದು ಅಂತ ಆ ವೈಯರ್‌ಗೆ ಬಟ್ಟೆ ಸುತ್ತಲಾಗಿತ್ತು. ಆದರೆ, ನಾನು ಟೇಬಲ್‌ನಿಂದ ಕೆಳಗೆ ಹಾರಿದರೆ, ಅದು ಉರುಳಾಗುತ್ತೆ ಅಂತ ಗೊತ್ತಿರಲಿಲ್ಲ. ಟೇಬಲ್‌ನಿಂದ ಹಾರಿಬಿಟ್ಟೆ. ಅಲ್ಲಿದ್ದ ತಮಿಳು ನಿರ್ದೇಶಕರು, ಸಖತ್‌ ಆಗಿ ಮಾಡಿದ್ಯಮ್ಮ ಅಂತ ಕ್ಲಾಪ್‌ ಮಾಡ್ತಾ ಇದ್ದಾರೆ.

ನನಗೆ ಅದೊಂದೇ ನೆನಪಾಗಿದ್ದು, ಕಣ್ಣುಗುಡ್ಡೆ ಹೊರಗಡೆ ಬಂದು, ಬಾಯಲ್ಲಿ ನೊರೆ ಕೂಡ ಬರ್ತಾ ಇತ್ತು. ಅದು ಎಲ್ಲರೂ ನಟನೆ ಅಂದುಕೊಂಡಿದ್ದರು. ಆದರೆ, ಅಲ್ಲೇ ಇದ್ದ ಅಸಿಸ್ಟಂಟ್‌ ಗಮನಿಸಿ, ಸಮಸ್ಯೆಯಾಗಿದೆ ಅಂತ ಕೆಳಗಿಳಿಸಿದಾಗ ಬಾಡಿ ಕೋಲ್ಡ್‌ ಆಗಿತ್ತು. ಎಲ್ಲರೂ ಗಾಬರಿಯಾಗಿದ್ದರು. ನನಗೋ ಪ್ರಜ್ಞೆ ಇರಲಿಲ್ಲ. ಸೆಟ್‌ನಲ್ಲಿದ್ದವರೆಲ್ಲರೂ ಪಾದ ಉಜ್ಜಿ, ಗಾಳಿ ಬೀಸಿ ಉಸಿರಾಡುವಂತೆ ಮಾಡಿದ್ದರು. ಆ ದೃಶ್ಯ ಈಗಲೂ ಭಯ ಹುಟ್ಟಿಸುತ್ತೆ. ಸತ್ತು ಬದುಕಿದ ಅನುಭವ ಆಗಿತ್ತು. ಈಗಲೂ ಡಿಸೆಂಬರ್‌ 31 ಬಂದರೆ, ಎಲ್ಲರೂ ಹ್ಯಾಪಿ ಬರ್ತ್‌ಡೇ ಅಂತಾರೆ. ಯಾಕೆಂದರೆ ಆ ದಿನ ನಾನು ಸತ್ತು, ಬದುಕಿದ ದಿನ. 

* ಅಣ್ಣಾವ್ರ ಚಿತ್ರದಲ್ಲೂ ನಟಿಸಿದ್ದರಂತೆ?
ಹೌದು, ನಾನು ಕನ್ನಡದ ಟಾಪ್‌ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ದೊರೆ-ಭಗವಾನ್‌, ಭಾರ್ಗವ, ರೇಣುಕ ಶರ್ಮ, ನಾಗಾಭರಣ, ಉಪೇಂದ್ರ ಹೀಗೆ ಒಂದಷ್ಟು ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ ಖುಷಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಡಾ.ರಾಜಕುಮಾರ್‌ ಅವರ "ಆಕಸ್ಮಿಕ' ಚಿತ್ರದಲ್ಲಿ ತೂಗುದೀಪ ಶ್ರೀನಿವಾಸ ಅವರ ಮಗಳಾಗಿ ನಟಿಸಿದ್ದೇನೆ. ಅದರಲ್ಲಿ ನನ್ನ ತಂಗಿಯೂ ಇದ್ದಾಳೆ. ನಾಲ್ಕೈದು ದೃಶ್ಯಗಳ ಚಿತ್ರೀಕರಣವಾಗಿತ್ತು.

ಕೊನೆಗೆ "ಹುಟ್ಟಿದರೆ...' ಹಾಡು ಬಂದ ಹಿನ್ನೆಲೆಯಲ್ಲಿ ಎರಡು ಸೀನ್‌ ಕಟ್‌ ಮಾಡಿ, ಎರಡು ಸೀನ್‌ ಮಾತ್ರ ಉಳಿಯಿತು. ಬ್ರೇಕ್‌ ಟೈಮ್‌ನಲ್ಲಿ ಅಣ್ಣಾವ್ರು ಕರೆದು ಮಾತಾಡಿಸಿ, ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋ ಈಗಲೂ ಮನೆಯಲ್ಲಿದೆ. ಆಗ ನಮಗೆ ಅಷ್ಟೇನೂ ಗೊತ್ತಿರಲಿಲ್ಲ. ಅದೊಂದು ಮರೆಯದ ಅನುಭವ. ವಿಷ್ಣುವರ್ಧನ್‌, ಅಂಬರೀಷ್‌ ಜೊತೆಯಲ್ಲೂ ನಟಿಸಿದ್ದೇನೆ.

ಆದರೆ, ರವಿಚಂದ್ರನ್‌ ಅವರ ಜತೆ ನಟಿಸಬೇಕೆಂದುಕೊಂಡಾಗೆಲ್ಲ ಹಲವು ಸಮಸ್ಯೆಗಳು ಎದುರಾಗಿದ್ದವು. ನಟಿಸಲು ಆಗಲೇ ಇಲ್ಲ. ಎಷ್ಟೋ ಸಲ ತಂಗಿ ಪಾತ್ರಕ್ಕೆ ಅವಕಾಶ ಬಂದಾಗ ಮಾಡಲಿಲ್ಲ. ಕಾರಣ, ಡೇಟ್‌ ಸಮಸ್ಯೆ. ಒಂದು ರಿಯಾಲಿಟಿ ಶೋ ವೇಳೆ, ಅವರು ಜಡ್ಜ್ ಆಗಿದ್ದರು. ನನ್ನನ್ನು ಒಂದೇ ವರ್ಡ್‌ನಲ್ಲಿ ವರ್ಣಿಸಿ ಅಂದಾಗ, "ಸಿನಿಮಾ ಅಂದರೆ ರವಿಚಂದ್ರನ್‌, ರವಿಚಂದ್ರನ್‌ ಅಂದರೆ ಸಿನಿಮಾ' ಅಂದೆ. ಅದರೊಂದಿಗೆ ನಿಮ್ಮ ಜೊತೆ ನಟಿಸಲು ಸಾಧ್ಯವಾಗಿಲ್ಲ ಅಂದಿದ್ದೆ. "ಕ್ರೇಜಿ ಸ್ಟಾರ್‌' ಚಿತ್ರದಲ್ಲಿ ಅವಕಾಶ ಸಿಕು¤. 

* ನಾಯಕಿಯಾಗಿಯೂ ನಟಿಸಿದ್ದೀರಂತೆ?
ಹೌದು, "ಸಿಂಧು' ಎಂಬ ಚಿತ್ರದಲ್ಲಿ ನಾಯಕಿಯಾಗಿದ್ದೆ. ಆ ಚಿತ್ರಕ್ಕೆ ಸಂಜಯ್‌, ಶ್ರೀಧರ್‌ ಹೀರೋ ಆಗಿದ್ದರು. ಆ ಚಿತ್ರದ ಬಳಿಕ ಸಾಕಷ್ಟು ಚಿತ್ರದಲ್ಲಿ ಎರಡನೇ ನಾಯಕಿಯಾಗಿಯೂ ನಟಿಸಿದ್ದೇನೆ.

* ನಿಮ್ಮ ಆ ದಿನಗಳ ಚಿತ್ರರಂಗ ಹೇಗಿತ್ತು, ಈಗ ಹೇಗಿದೆ?
ಈಗಂತೂ ಎಲ್ಲರೂ ತುಂಬಾನೇ ಪ್ರೊಫೆಷನಲ್‌ ಆಗಿದ್ದಾರೆ. ಆಗಲೂ ಇದ್ದರು. ಆಗ ಎಲ್ಲರೂ ಒಂದೇ ಫ್ಯಾಮಿಲಿ ಎಂಬ ಫೀಲ್‌ ಇತ್ತು. ಈಗ ಅದ್ಯಾವುದೂ ಇಲ್ಲ. ಬಾ ಕೆಲಸ ಮಾಡು, ಹೋಗು ಅಷ್ಟೇ ಆಗಿದೆ. ಆಗೆಲ್ಲಾ ಒಟ್ಟಿಗೆ ಕುಳಿತು ಊಟ. ಮಾಡುತ್ತಿದ್ದೆವು. ಈಗ ಆ ವಾತಾವರಣವಿಲ್ಲ. ನಾಯಕಿಗೊಂದು, ನಾಯಕನಿಗೊಂದು ಕ್ಯಾರವಾನ್‌ ಇರುತ್ತೆ. ಅದರಲ್ಲೇ ಅವರ ಊಟ, ಮಾತುಕತೆ, ಬೇರೆ ಕಲಾವಿದರು ಇನ್ನೊಂದು ಕಡೆ ಅಷ್ಟೇ. ಸೀನ್‌ ಬಂದಾಗಲಷ್ಟೇ ಮಾತುಕತೆ. ಆಮೇಲೆ ಇರಲ್ಲ. ಹಿಂದೆಲ್ಲಾ, ಸೀನ್‌ ಮುಗಿದರೂ, ಒಟ್ಟಿಗೆ ಕೂತು ಚರ್ಚಿಸುತ್ತಿದ್ದೆವು. ಈಗ ಅಂಥದ್ದೇನೂ ಇಲ್ಲ.

* ಮಾಡಬೇಕು ಅಂದುಕೊಂಡಿರುವ ಪಾತ್ರ?
ಈಗಾಗಲೇ ಮೂಗಿ, ಕಿವುಡಿ, ಕುಂಟಿ, ಕುರುಡಿ ಸೇರಿದಂತೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಿದ್ದೇನೆ. ಕಲಾವಿದರಿಗೆ ಪ್ರತಿ ಪಾತ್ರವೂ ಚಾಲೆಂಜಿಂಗ್‌ ಆಗಿರುತ್ತೆ. ಪ್ರತಿ ದಿನವೂ ಕಲಿಕೆ ಇದ್ದೇ ಇರುತ್ತೆ. ಹಾಗಾಗಿ ಬಂದ ಪಾತ್ರ ಅಪ್ಪಿಕೊಂಡು ಮಾಡುತ್ತೇನಷ್ಟೇ.

* ಎಲ್ಲಾ ಸರಿ, ನಿಮ್ಮ ಮಗಳಿಗೂ ನಟನೆ ಆಸಕ್ತಿ ಇದೆಯಾ?
ಗೊತ್ತಿಲ್ಲ. ಅವಳ ಆಸಕ್ತಿ ಓದಿನ ಕಡೆ ಇದೆ. ನಮಗೂ ಆಕೆ ಚೆನ್ನಾಗಿ ಓದಬೇಕೆಂಬ ಆಸೆ. ನಾನು ಎಂಜಿನಿಯರ್‌ ಆಗಬೇಕು ಅಂದುಕೊಂಡೆ ಆಗಲಿಲ್ಲ. ಆಕೆಗೂ ಆಸೆಗಳಿವೆ. ಸದ್ಯಕ್ಕೆ ಓದಿದರೆ ಸಾಕು.  

* ನಟನೆ ಹೊರತಾಗಿ ಬೇರೆ ಏನಾದರೂ ಮಾಡ್ತಾ ಇದೀರಾ?
ನಟನೆ ಬಿಟ್ಟರೆ, ಸೆಲೆಬ್ರೆಟಿ ಬ್ಯಾಟ್‌ಮಿಟನ್‌ ಲೀಗ್‌ನಲ್ಲಿ ಭಾಗವಹಿಸುತ್ತಿರುತ್ತೇನೆ. ರಿಯಾಲಿಟಿ ಶೋನಲ್ಲಿ ಕಬ್ಬಡಿ ಗೇಮ್‌ ಆಡಿದ್ದೆ. ಬಿಟ್ಟರೆ, ಬೇರೇನೂ ಇಲ್ಲ.

* ಹಾಗಾದರೆ, ಸಿನಿಮಾ ರಂಗ ತೃಪ್ತಿ ಇದೆ?
ತೃಪ್ತಿ ಅನ್ನೋದು ಬಂದರೆ, ಮುಂದಕ್ಕೆ ಬೆಳೆಯಲು ಸಾಧ್ಯವಿಲ್ಲ. ಇನ್ನೂ ಒಳ್ಳೆಯ ಪಾತ್ರ ಮಾಡುವ ಆಸೆ. ಸಾಯೋವರೆಗೆ ಇದೇ ಇಂಡಸ್ಟ್ರಿಯಲ್ಲಿರುವಾಸೆ.


Trending videos

Back to Top