CONNECT WITH US  

ನನ್ನಿಂದ ಈ ದೇಶಕ್ಕೆ, ರಾಜ್ಯಕ್ಕೆ ಏನೋ ಆಗಬೇಕಾಗಿದೆ

ರೂಪತಾರಾ

"ಎಲ್ಲವೂ ಅಪ್ಪಾಜಿ ಆಶೀರ್ವಾದ. ಇಲ್ಲವಾದರೆ ಇವೆಲ್ಲಾ ಸಾಧ್ಯನಾ?' ರಾಘವೇಂದ್ರ ರಾಜಕುಮಾರ್‌ ಹೀಗೆ ಹೇಳಿ ಒಂದು ಕ್ಷಣ ಮೌನವಾದರು. ಇವೆಲ್ಲವೂ ತನ್ನಿಂದ ಸಾಧ್ಯವಾಯಿತೇ ಎಂಬ ಆಶ್ಚರ್ಯ ಸ್ವತಃ ಅವರನ್ನು ಕಾಡುತ್ತಿತ್ತು. ಅದಕ್ಕೆ ಕಾರಣ ಸುಮಾರು 14 ವರ್ಷಗಳ ನಂತರ ರಾಘವೇಂದ್ರ ರಾಜಕುಮಾರ್‌ ಸಿನಿಮಾವೊಂದಕ್ಕೆ ಹಾಡಿದ್ದಾರೆ. ಅಷ್ಟೇ ಅಲ್ಲದೇ, ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಕೂಡಾ.

ಇದೇ ಕಾರಣದಿಂದ ಅವರು ಇದಕ್ಕೆಲ್ಲಾ ಕಾರಣ ಅಪ್ಪಾಜಿ ಎಂದಿದ್ದು. ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದ ರಾಘಣ್ಣ, ಅದರಿಂದ ಸಾಕಷ್ಟು ನೋವು ಅನುಭವಿಸಿದ್ದರು. "ನಾಲ್ಕು ವರ್ಷಗಳ ಹಿಂದೆ ನನಗೆ ಹುಷಾರಿಲ್ಲದೇ ಆಗಿದ್ದಾಗ, 48 ಗಂಟೆ ಸಮಯ ಕೊಟ್ಟಿದ್ರು. ಆಗ ಅಮ್ಮ ನನ್ನ ತಲೆ ಮೇಲೆ ಕೈ ಇಟ್ಟು, "ಕಂದ ನಿನಗೆ ಏನೂ ಆಗಲ್ಲ. ನಿಮ್ಮಪ್ಪನ ಆಶೀರ್ವಾದ ನಿನಗಿದೆ. ನೀನು ವಾಪಾಸ್‌ ಬರ್ತಿಯಾ ಅಂದಿದ್ರು. ಅದರಂತೆ ಬಂದಿದ್ದೇನೆ.

ಆದರೆ ಈಗ ಮತ್ತೆ ಕೆರಿಯರ್‌ ಶುರು ಮಾಡಿದ್ದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ' ಎನ್ನುವುದು ರಾಘವೇಂದ್ರ ರಾಜಕುಮಾರ್‌ ಮಾತು. ರಾಘವೇಂದ್ರ ರಾಜಕುಮಾರ್‌ ಸದ್ಯ ಖುಷಿಯಾಗಿದ್ದಾರೆ. ಸಾಕಷ್ಟು ವಿಷಯಗಳ ಬಗ್ಗೆ ಯೋಚಿಸುತ್ತಿದ್ದಾರೆ. "ನನ್ನಿಂದ ಈ ದೇಶಕ್ಕೆ, ರಾಜ್ಯಕ್ಕೆ ಏನೋ ಕೆಲಸ ಆಗಬೇಕಾಗಿದೆ. ಅದೇ ಕಾರಣದಿಂದ ದೇವರು ನನ್ನನ್ನು ಹೀಗೆ ಕೂರಿಸಿದ್ದಾನೆ. ತುಂಬಾ ಓಡಾಡಿಕೊಂಡಿದ್ದರೆ ಯಾವ ವಿಚಾರವನ್ನು ಆಲೋಚಿಸಲು ಸಮಯವಿರುವುದಿಲ್ಲ.

ಆದರೆ ಈಗ ಸಾಕಷ್ಟು ವಿಚಾರಗಳ ಬಗ್ಗೆ ಯೋಚಿಸುತ್ತಿದ್ದೇನೆ. ಹೊಸ ಹೊಸ ಆಲೋಚನೆಗಳು ಹುಟ್ಟುತ್ತಿವೆ' ಎನ್ನುತ್ತಾರೆ ರಾಘಣ್ಣ. ಇನ್ನು, ರಾಘಣ್ಣ ಈಗಾಗಲೇ ಹಿರಿಯ ನಿರ್ದೇಶಕ ಭಗವಾನ್‌ ನಿರ್ದೇಶನದ "ಆಡುವ ಗೊಂಬೆ' ಚಿತ್ರಕ್ಕೆ ಒಂದು ಹಾಡು ಹಾಡಿದ್ದಾರೆ. ಈ ಮೂಲಕ ಮತ್ತೆ ಗಾಯನಕ್ಕೆ ಬಂದಂತಾಗಿದೆ. ಇಷ್ಟೇ ಅಲ್ಲದೇ, ರಾಘವೇಂದ್ರ ರಾಜಕುಮಾರ್‌ "ಚೀಲಂ' ಎಂಬ ಸಿನಿಮಾದಲ್ಲಿ ವಿಲನ್‌ ಆಗಿ ನಟಿಸಲು ಒಪ್ಪಿಕೊಂಡಿದ್ದಾರೆ.

ಇದರ ಜೊತೆಗೆ ಇನ್ನೆರಡು ಸಿನಿಮಾಗಳೂ ಅವರನ್ನು ಹುಡುಕಿಕೊಂಡು ಬಂದಿವೆ. ಒಂದು ಹಾರರ್‌ ಸಿನಿಮಾವಾದರೆ ಮತ್ತೂಂದು ನಿಖೀಲ್‌ ಮಂಜು ನಿರ್ದೇಶನದ ಸಿನಿಮಾ. "ಯಾವುದೇ ಪಾತ್ರವಾದರೂ ಬಣ್ಣ ಹಚ್ಚುತ್ತಿರಬೇಕೆಂದು ಅಪ್ಪಾಜಿ ಹೇಳುತ್ತಿದ್ದರು. ಅದರಂತೆ ಈಗ ಮತ್ತೆ ನಟನೆಗೆ ವಾಪಾಸ್ಸಾಗಿದ್ದೇನೆ. "ಚೀಲಂ'ನಲ್ಲಿ ನೀವು ವಿಲನ್‌ ಮಾಡಬೇಕೆಂದು ಆ ಚಿತ್ರದ ನಿರ್ದೇಶಕಿ ಕೇಳಿಕೊಂಡರು.

"ನಿಮಗೆ ಆ ಪಾತ್ರದಲ್ಲಿ ನಾನು ಕಂಡರೆ ನಟಿಸಲು ರೆಡಿ' ಅಂದೆ. ಆ ನಂತರ ಪ್ರತಾಪ್‌ ಎಂಬ ನಿರ್ದೇಶಕರ ಹಾರರ್‌ ಸಿನಿಮಾವೊಂದನ್ನು ಒಪ್ಪಿದ್ದೇನೆ. ಅಲ್ಲಿ ನನ್ನ ವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಇನ್ನು, ನಿಖೀಲ್‌ ಮಂಜು ಅವರ "ಅಮ್ಮನ ಮನೆ'ಯಲ್ಲೂ ನಟಿಸಲಿದ್ದೇನೆ. ಇಲ್ಲಿ ಅಪ್ಪ-ಅಮ್ಮನ ಮೌಲ್ಯದ ಕುರಿತು ಅವರು ಹೇಳಲಿದ್ದಾರಂತೆ. ಬಹುತೇಕ ಕಾರ್ಯಕ್ರಮಗಳಲ್ಲಿ ಅಪ್ಪ-ಅಮ್ಮನ ಜೊತೆಗೇ ಇದ್ದ ನನ್ನನ್ನು ನೋಡಿ, ನನ್ನ ಮೂಲಕ ಅಪ್ಪ-ಅಮ್ಮನ ಕುರಿತಾದ ಸಂದೇಶ ಹೇಳಿಸಬೇಕೆಂಬುದು ನಿರ್ದೇಶಕರ ಆಸೆಯಂತೆ. ಹಾಗಾಗಿ, ಒಪ್ಪಿಕೊಂಡೆ' ಎಂದು ಮತ್ತೆ ಬಣ್ಣ ಹಚ್ಚುತ್ತಿರುವ ಬಗ್ಗೆ ಹೇಳುತ್ತಾರೆ ರಾಘಣ್ಣ. 

ಮಗನ ಕನಸು ಅಪ್ಪನಿಂದ ನನಸು: ಡಾ.ರಾಜ್‌ ಕುಟುಂಬ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜದಿಂದ ಪಡೆದಿದ್ದನ್ನು ಮತ್ತೆ ಸಮಾಜಕ್ಕೆ ನೀಡುತ್ತಲೇ ಇದೆ. ಆ ನಿಟ್ಟಿನಲ್ಲಿ ಆರಂಭವಾಗಿದ್ದು ಡಾ.ರಾಜ್‌ಕುಮಾರ್‌ ಅಕಾಡೆಮಿ ಆಫ್ ಸಿವಿಲ್‌ ಸರ್ವಿಸ್‌. ಒಂದು ವರ್ಷದ ಹಿಂದೆ ಆರಂಭವಾದ ಅಕಾಡೆಮಿ ಈ ವರ್ಷ ಉತ್ತಮ ಸಾಧನೆ ಮಾಡಿದೆ.

ಇತ್ತೀಚೆಗೆ ಪ್ರಕಟವಾದ ಯುಪಿಎಸ್‌ಇ ಪರೀಕ್ಷೆಯಲ್ಲಿ ಡಾ.ರಾಜ್‌ಕುಮಾರ್‌ ಅಕಾಡೆಮಿ ಆಫ್ ಸಿವಿಲ್‌ ಸರ್ವೀಸ್‌ನ 16 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದು ವರ್ಷದ ಹಿಂದೆ ಆರಂಭವಾದ ಸಂಸ್ಥೆ ಒಳ್ಳೆಯ ಸಾಧನೆ ಮಾಡಿದ ಖುಷಿ ರಾಘಣ್ಣ ಅವರಿಗಿದೆ. ಡಾ.ರಾಜ್‌ಕುಮಾರ್‌ ಅಕಾಡೆಮಿ ಆಫ್ ಸಿವಿಲ್‌ ಸರ್ವೀಸ್‌ ಅಕಾಡೆಮಿ ಆರಂಭವಾಗಿದ್ದು ಅವರ ಎರಡನೇ ಮಗ ಗುರು ರಾಜಕುಮಾರ್‌ ಅವರಿಂದವಂತೆ.

"ಇದು ನನ್ನ ಮಗನ ಕನಸು. ಅದೊಂದು ದಿನ ಬಂದು, "ಅಪ್ಪ ನಾನು ಐಎಎಸ್‌ ಅಕಾಡೆಮಿ ಆರಂಭಿಸುತ್ತೇನೆ. ನೀನು ನನಗೆ ಬೆಂಬಲವಾಗಿದ್ದರೆ ಸಾಕು' ಎಂದ. ಅವನ ಉದ್ದೇಶ ಚೆನ್ನಾಗಿತ್ತು. ಐಎಎಸ್‌ ತರಬೇತಿ ಪಡೆಯಬೇಕಾದರೆ ಇಲ್ಲಿಂದ ದೆಹಲಿಗೆ ಹೋಗಬೇಕು. ತುಂಬಾ ಖರ್ಚಾಗುತ್ತದೆ. ಸಾಮಾನ್ಯ ರೈತನ ಮಗನಿಗೆ ಅದು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಐಎಎಸ್‌ ಅಧಿಕಾರಿಗಳ ಸಂಖ್ಯೆ ಕಡಿಮೆ ಇದೆ.

ಇದೇ ಕಾರಣದಿಂದ ನಾವೇ ಅಕಾಡೆಮಿ ಆರಂಭಿಸಿ, ತರಬೇತಿಗೆ ಅವಕಾಶ ಕೊಟ್ಟರೆ ಸಾಕಷ್ಟು ಮಂದಿ ಅಧಿಕಾರಿಗಳು ಬರಬಹುದು ಎಂಬುದು ಆತನ ಕನಸಾಗಿತ್ತು. ಆತನ ಸ್ನೇಹಿತೆ ಕೂಡಾ ಬೆಂಬಲವಾಗಿದ್ದಳು. ನಾನು ಕೂಡಾ ದೆಹಲಿಯ ತರಬೇತಿ ಕೇಂದ್ರಕ್ಕೆ ಭೇಟಿಕೊಟ್ಟಾಗ ಅಲ್ಲಿನವರು, "ರಾಜ್‌ ಮಕ್ಕಳಾದ ನೀವು ಸೇರಿ ಐಎಎಸ್‌ ಅಕಾಡೆಮಿ ಮಾಡಬೇಕು' ಎಂಬ ಮನವಿ ಬಂತು. ಅದರಂತೆ ಗುರು ಮಾಡಿದ್ದಾನೆ.

ಅದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪಾಜಿಗೆ, ಅಮ್ಮನಿಗೆ, ಶಿವಣ್ಣನಿಗೆ ಡಾಕ್ಟರೇಟ್‌ ಕೊಟ್ಟಿದ್ದಾರೆ. ಅವೆಲ್ಲವೂ ಅಭಿಮಾನಿಗಳಿಂದ ಸಮಾಜಕ್ಕೆ ನಾವೂ ಏನಾದರೂ ಕೊಡಬೇಕು. ಒಂದಷ್ಟು ಮಂದಿ ಐಎಎಸ್‌ ಅಧಿಕಾರಿಗಳು ಹೊರಬಂದರೆ ಅವರಿಂದ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತವೆ. ಆ ಆಶಯದೊಂದಿಗೆ ಈ ಅಕಾಡೆಮಿ ಆರಂಭವಾಗಿದ್ದು. ಅಕಾಡೆಮಿಯಿಂದ ಒಳ್ಳೆಯ ಅಧಿಕಾರಿಗಳು ಬರಬೇಕೆಂಬುದು ನಮ್ಮ ಆಸೆ' ಎಂದು ಅಕಾಡೆಮಿ ಬಗ್ಗೆ ಮಾತನಾಡುತ್ತಾರೆ.

ಮುಂದೆಯೂ ಈ ಸಂಸ್ಥೆಯಿಂದ ಸಾಕಷ್ಟು ಕೆಲಸಗಳನ್ನು ಮಾಡುವ ಉದ್ದೇಶವಿದೆ ಎನ್ನಲು ರಾಘವೇಂದ್ರ ರಾಜಕುಮಾರ್‌ ಮರೆಯುವುದಿಲ್ಲ. ಇನ್ನು, ತಮ್ಮ ಸಂಸ್ಥೆಯ ಸಿನಿಮಾ ನಿರ್ಮಾಣದ ಬಗ್ಗೆಯೂ ರಾಘಣ್ಣ ಮಾತನಾಡುತ್ತಾರೆ. "ಅಮ್ಮ 90 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಒಂದು ನಿರ್ಮಾಣ ಸಂಸ್ಥೆ ಇಷ್ಟೊಂದು ಸಿನಿಮಾಗಳನ್ನು ನಿರ್ಮಿಸಿದ ಉದಾಹರಣೆಯಿಲ್ಲ.

ಈಗ ಆ ಸಂಖ್ಯೆಯನ್ನು 100 ದಾಟಿಸಬೇಕೆಂಬುದು ನಮ್ಮ ಉದ್ದೇಶ. ಈಗ ಅಪ್ಪು ಕೂಡಾ ಹೊಸ ಹೊಸ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾನೆ. ಆತನಿಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಡುವ ಆಸೆ ಇದೆ. ನಮ್ಮಲ್ಲಿ ಯಾರೇ ನಿರ್ಮಿಸಿದರೂ ಅದು ನಮ್ಮದೇ ಸಂಸ್ಥೆ. ಮುಂದೆ ಶಿವಣ್ಣನಿಗೆ, ಅಪ್ಪುವಿಗೆ ಸಿನಿಮಾ ಮಾಡುವ ಆಸೆ ಇದೆ' ಎಂದು ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ ರಾಘಣ್ಣ.

ಮಗನ ಸಿನಿಮಾ ಮೇಲೆ ನಿರೀಕ್ಷೆ: ರಾಘವೇಂದ್ರ ರಾಜಕುಮಾರ್‌ ಅವರ ಪುತ್ರ ವಿನಯ್‌ ರಾಜಕುಮಾರ್‌ ಈಗ ಚಿತ್ರರಂಗದಲ್ಲಿ ನಾಯಕರಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಸದ್ಯ ವಿನಯ್‌ "ಅನಂತು ವರ್ಸಸ್‌ ನುಸ್ರತ್‌' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಮೇಲೆ ರಾಘವೇಂದ್ರ ರಾಜಕುಮಾರ್‌ ಅವರಿಗೂ ನಿರೀಕ್ಷೆ ಇದೆ. ಚಿತ್ರದ ಕಥೆ, ಪಾತ್ರ ಎಲ್ಲವೂ ಭಿನ್ನವಾಗಿದೆ. ಜೊತೆಗೆ ಈ ಚಿತ್ರದಲ್ಲಿ ಡಾ.ರಾಜಕುಮಾರ್‌ ಅವರ ಜನಪ್ರಿಯ ಹಾಡೊಂದನ್ನು ಮರುಬಳಕೆ ಮಾಡಲಾಗಿದೆ.

"ಚಲಿಸುವ ಮೋಡಗಳು' ಚಿತ್ರದ "ಮೈ ಲಾರ್ಡ್‌ ನನ್ನ ವಾದ ಕೇಳಿ ...ಕೇಳಿ... ಕೇಳಿ' ಹಾಡನ್ನು "ಅನಂತು ವರ್ಸಸ್‌ ನುಸ್ರತ್‌'ನಲ್ಲಿ ಬಳಸಲಾಗಿದೆ. "ಅನಂತು ವರ್ಸಸ್‌ ನುಸ್ರತ್‌' ಸಿನಿಮಾದಲ್ಲಿ ವಿನಯ್‌, ಲಾಯರ್‌ ಆಗಿ ನಟಿಸಿದ್ದಾರೆ. ಅದೇ ಕಾರಣದಿಂದ ಈ ಹಾಡನ್ನು ಮರುಬಳಕೆ ಮಾಡಲಾಗಿದೆ. ಈ ಬಗ್ಗೆ ರಾಘಣ್ಣ ಖುಷಿಯಾಗಿದ್ದಾರೆ. "36 ವರ್ಷಗಳ ನಂತರ ಅಪ್ಪಾಜಿಯ "ಮೈ ಲಾರ್ಡ್‌ ....' ಹಾಡು ವಿನಯ್‌ನ ಚಿತ್ರದಲ್ಲಿ ರೀಕ್ರಿಯೇಟ್‌ ಆಗುತ್ತಿದೆ. ಸೇಮ್‌ ಸ್ಟೆಪ್‌ ಇಟ್ಟುಕೊಂಡು ಆ ಹಾಡನ್ನು ಮಾಡಲಾಗುತ್ತಿದೆ' ಎನ್ನುತ್ತಾರೆ ಅವರು.

ಮೂರು ವರ್ಷಗಳ ಪ್ರಶಸ್ತಿ ಒಟ್ಟಿಗೆ: ಚಿತ್ರರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ಸಲುವಾಗಿ ಆರಂಭವಾದ ಡಾ.ರಾಜಕುಮಾರ್‌ ಸೌಹಾರ್ದ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡಿರಲಿಲ್ಲ. ಈಗ ಈ ವರ್ಷ ಸೇರಿ ಒಟ್ಟು ಮೂರು ವರ್ಷಗಳ ಪ್ರಶಸ್ತಿಯನ್ನು ನೀಡಲು ಸಮಿತಿ ನಿರ್ಧರಿಸಿದೆಯಂತೆ. "ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ಮಾಡುತ್ತೇವೆ.

ಈ ವರ್ಷ ಮೂರು ಪ್ರಶಸ್ತಿಯಲ್ಲಿ ಒಂದು ಪ್ರಶಸ್ತಿಯನ್ನು ಅಮ್ಮನ ಹೆಸರಿನಲ್ಲಿ ನೀಡುವ ಉದ್ದೇಶವಿದೆ' ಎನ್ನುವ ರಾಘಣ್ಣ, "ಪ್ರಶಸ್ತಿ ಅರ್ಹ ವ್ಯಕ್ತಿಗಳಿಗೆ ಸಲ್ಲಬೇಕು. ಅದಕ್ಕಾಗಿ ಸಮಿತಿಯೊಂದನ್ನು ರಚಿಸುತ್ತಿದ್ದೇವೆ' ಎನ್ನುತ್ತಾರೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರ ಸ್ಮಾರಕಗಳನ್ನು ಸೇರಿಸಿ ಯೋಗ ಕೇಂದ್ರ ಮಾಡುವ ಉದ್ದೇಶವಿದೆ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್‌.

"ಅಪ್ಪ-ಅಮ್ಮ ಇಬ್ಬರ ಸ್ಮಾರಕಗಳನ್ನು ಸೇರಿಸಿ ಯೋಗ ಕೇಂದ್ರ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರದಿಂದಲೂ ಅನುಮತಿ ಸಿಕ್ಕಿದೆ. ಇಲ್ಲಿಗೆ ಬಂದವರು ಹೊಸ ಎನರ್ಜಿಯೊಂದಿಗೆ ಹೊರಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಯೋಗ ಕೇಂದ್ರದ ನಿರ್ಮಾಣ ಹೇಗಿರಬೇಕೆಂಬುದನ್ನು ರಾಕ್‌ಲೈನ್‌ ವೆಂಕಟೇಶ್‌ ನೋಡಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ ಅವರು. 

ಬರಹ: ರವಿಪ್ರಕಾಶ್‌ ರೈ


Trending videos

Back to Top