CONNECT WITH US  

ಗಡಿ ದಾಟಿದವರು: ಇಲ್ಲಿದೆ ನಮ್ಮನೆ; ಅಲ್ಲಿರುವೆ ಸುಮ್ಮನೆ

ರೂಪತಾರಾ

ಕನ್ನಡ ಚಿತ್ರರಂಗದ ಮೂಲಕ ಸಿನಿಪಯಣ ಆರಂಭಿಸಿ, ಆ ನಂತರ ಬೇರೆ ಬೇರೆ ಭಾಷೆಯಲ್ಲಿ ಸಾಕಷ್ಟು ನಟಿಯರು ಬಿಝಿಯಾಗಿದ್ದಾರೆ. ಹಿರಿಯ ನಟಿ ಪಂಡರಿಬಾಯಿ ಅವರಿಂದ ಪ್ರಾರಂಭಿಸಿ, ಬಿ. ಸರೋಜಾದೇವಿ, ಭಾರತಿ, ಜಯಂತಿ, ತಾರಾ, ಶ್ರುತಿ, ಪ್ರೇಮ, ಸೌಂದರ್ಯ ಸೇರಿದಂತೆ ಕನ್ನಡದ ಹಲವಾರು ನಟಿಯರು ಕನ್ನಡವಲ್ಲದೆ ಬೇರೆ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ನಟಿಸಿ ಗೆದ್ದಿದ್ದಾರೆ. ಆ ನಂತರದ ವರ್ಷಗಳಲ್ಲಿ ಒಂದು ಗ್ಯಾಪ್‌ ಆಗಿತ್ತು ಎಂದರೆ ತಪ್ಪಿಲ್ಲ. ಈಗ ಕನ್ನಡದ ಇನ್ನೊಂದಿಷ್ಟು ನಟಿಯರು ಕನ್ನಡವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಸತತವಾಗಿ ನಟಿಸುತ್ತಿದ್ದಾರೆ ಮತ್ತು ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ಕೆಲವು ನಟಿಯರ ಕುರಿತಾಗಿದ್ದೇ ಈ ಲೇಖನ ...

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಗಮನ ಸೆಳೆದಿದ್ದಾರೆ. ಆ ಪೈಕಿ ಒಂದಿಷ್ಟು ನಟಿಯರು ಬೇರೆ ಬೇರೆ ಭಾಷೆಗಳಲ್ಲಿ ಸಹ ತಮ್ಮ ಛಾಪನ್ನು ಒತ್ತಿ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ನೋಡಿದರೆ, ಮೇಘನಾ ರಾಜ್‌ ರಾಗಿಣಿ, ಸಂಜನಾ, ಹರಿಪ್ರಿಯಾ, ಸಂಚಿತಾ ಶೆಟ್ಟಿ, ಶ್ವೇತಾ, ದೀಪಾ ಸನ್ನಿಧಿ, ಶರ್ಮಿಳಾ ಮಾಂಡ್ರೆ, ನಿಧಿ ಸುಬ್ಬಯ್ಯ, ಪ್ರಣೀತಾ, ನಿತ್ಯ ಮೆನನ್‌ ಸೇರಿದಂತೆ ಹಲವು ನಟಿಯರು ಬೇರೆಬೇರೆ ಭಾಷೆಗಳಲ್ಲಿ, ಅದರಲ್ಲೂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರು.

ಒಂದು ಕಡೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತಲೇ, ಬೇರೆ ಭಾಷೆಯ ಚಿತ್ರಗಳಲ್ಲೂ ಅವರು ಗಮನಸೆಳೆದಿದ್ದರು. ಈಗ ಕನ್ನಡದ ಇನ್ನಷ್ಟು ನಟಿಯರು ಆ ಸಾಲಿಗೆ ಸೇರಿದ್ದಾರೆ. ಪ್ರಮುಖವಾಗಿ, ರಶ್ಮಿಕಾ ಮಂದಣ್ಣ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್‌ ತಮಿಳು, ಮಲಯಾಳಂ ನಂತರ ಇದೀಗ ಹಿಂದಿಗೆ ಹಾರಿದ್ದಾರೆ. ಶ್ರುತಿ ಹರಿಹರನ್‌ ಸಹ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಕೃತಿ ಖರಬಂದ ಅಂತೂ ಹಿಂದಿಯಲ್ಲೇ ಸೆಟ್ಲ ಆಗುವ ಹಾಗೆ ಕಾಣುತ್ತಿದ್ದಾರೆ. ಸಂಯುಕ್ತ ಹೆಗ್ಡೆ, ಸಂಯುಕ್ತ ಹೊರನಾಡು, ನಿಕ್ಕಿ ಗಾಲರಾಣಿ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.

ತೆಲುಗಿಗೆ ರಶ್ಮಿಕಾ ಚಲೋ: ಪ್ರಮುಖವಾಗಿ ರಶ್ಮಿಕಾ ಮಂದಣ್ಣ ಕುರಿತು ಇಲ್ಲಿ ಹೇಳಲೇ ಬೇಕು. "ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ರಶ್ಮಿಕಾ. ಆ ಚಿತ್ರ ಹಿಟ್‌ ಆದ ನಂತರ ಅವರಿಗೆ ಕನ್ನಡದಲ್ಲಿ ಹಲವು ಚಿತ್ರಗಳು ಹುಡುಕಿಕೊಂಡು ಬಂದವು. ಪುನೀತ್‌ ಜೊತೆಗೆ "ಅಂಜನಿ ಪುತ್ರ' ಮತ್ತು ಗಣೇಶ್‌ ಜೊತೆಗೆ "ಚಮಕ್‌' ಚಿತ್ರಗಳಲ್ಲಿ ನಟಿಸಿದ ರಶ್ಮಿಕಾ, ಈ ಎರಡೂ ಚಿತ್ರಗಳಲ್ಲಿ ಯಶಸ್ಸು ಕಂಡರು. ಆದರೆ, ಆಕೆ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬಿಝಿ ಎಂದರೆ ತಪ್ಪಿಲ್ಲ.

ಏಕೆಂದರೆ, ಕನ್ನಡದಲ್ಲಿ ಆಕೆ ನಟಿಸುತ್ತಿರುವುದು "ಯಜಮಾನ' ಚಿತ್ರದಲ್ಲಿ ಮಾತ್ರ. ತೆಲುಗಿನಲ್ಲಿ ಬಹುಬೇಡಿಕೆಯ ನಟಿ. ಹಾಗಂತ ಅವರು ಅಲ್ಲಿ ಹಲವು ಚಿತ್ರಗಳಲ್ಲಿ ನಟಿಸಿಲ್ಲ. ಆಕೆ ನಟಿಸಿರುವುದು ಒಂದು ಚಿತ್ರದಲ್ಲಿ ಮಾತ್ರ. ಈಗಾಗಲೇ ರಶ್ಮಿಕಾ ನಟಿಸಿರುವ ತೆಲುಗಿನ "ಚಲೋ' ಚಿತ್ರ ಬಿಡುಗಡೆಯಾಗಿದ್ದು, ಈ ಮೂಲಕ ರಶ್ಮಿಕಾಗೆ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳು ಸಿಗುತ್ತಿವೆ. ಸದ್ಯ ರಶ್ಮಿಕಾ ಕೈಯಲ್ಲಿ ಎರಡು ತೆಲುಗು ಸಿನಿಮಾಗಳಿವೆ.

ನಾಗಾರ್ಜುನ ಹಾಗೂ ನಾನಿ ಅಭಿನಯದ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಇಲ್ಲಿ ನಾನಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ "ಅರ್ಜುನ್‌ ರೆಡ್ಡಿ' ಖ್ಯಾತಿಯ ವಿಜಯ್‌ ದೇವರಕೊಂಡ ಅಭಿನಯದ "ಡಿಯರ್‌ ಕಾಮ್ರೆಡ್‌' ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಕ್ರಿಕೆಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

ತೆಲಂಗಾಣ ಪರ ಆಡುವ ಕ್ರಿಕೆಟ್‌ ಆಟಗಾರ್ತಿಯಾಗಿ ಕಾಣಿಸಿಕೊಳ್ಳಲಿರುವ ರಶ್ಮಿಕಾ, ಇದಕ್ಕಾಗಿ ಈಗಾಗಲೇ ಕ್ರಿಕೆಟ್‌ ತರಬೇತಿಯನ್ನೂ ಪಡೆಯುತ್ತಿದ್ದಾರಂತೆ. ಇದಲ್ಲದೆ ರಾಜಮೌಳಿ ನಿರ್ದೇಶಿಸುತ್ತಿರುವ ರಾಮ್‌ಚರಣ್‌ ತೇಜಾ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಚಿತ್ರದಲ್ಲೂ ರಶ್ಮಿಕಾಗೆ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲೀ, ಚಿತ್ರತಂಡವಾಗಲೀ ಯಾವುದೇ ಹೇಳಿಕೆ ನೀಡಿಲ್ಲ. 

ತೆಲುಗಿನಲ್ಲಿ ಹೆಚ್ಚು ಬಿಝಿಯಾಗುತ್ತಾ ಹೋಗುತ್ತಿರುವ ರಶ್ಮಿಕಾ ಕನ್ನಡದಿಂದ ದೂರವಾಗುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಕಾಡಬಹುದು. ದೂರವಾಗುತ್ತಿದ್ದಾರೆ ಎನ್ನುವುದು ಕಷ್ಟವಾದರೂ, ಸದ್ಯ ರಶ್ಮಿಕಾ ಕನ್ನಡದಲ್ಲಿ ದರ್ಶನ್‌ ಜೊತೆ "ಯಜಮಾನ' ಸಿನಿಮಾ ಬಿಟ್ಟರೆ ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಸಾಕಷ್ಟು ಅವಕಾಶಗಳು ಬಂದರೂ ರಶ್ಮಿಕಾ ಮಾತ್ರ ತೆಲುಗಿನಲ್ಲಿ ಬಿಝಿ ಇರುವುದರಿಂದ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಹೆಚ್ಚು ಸರಿ.

ಹಿಂದಿಯ ಬಗ್ಗೆ ಶ್ರದ್ಧೆ: ಕನ್ನಡ ಚಿತ್ರರಂಗಕ್ಕೆ "ಯೂ ಟರ್ನ್' ಚಿತ್ರದ ಮೂಲಕ ಎಂಟ್ರಿ ಕೊಟ್ಟ ಶ್ರದ್ಧಾ ಶ್ರೀನಾಥ್‌, ಇದೀಗ ಬಾಲಿವುಡ್‌ ಅಂಗಳಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. "ಸಾಹಿಬ್‌ ಬೀವಿ ಔರ್‌ ಗ್ಯಾಂಗ್‌ಸ್ಟರ್‌', "ಪಾನ್‌ ಸಿಂಗ್‌ ತೋಮರ್‌' ಮುಂತಾದ ಚಿತ್ರಗಳ ನಿರ್ದೇಶಕ ತಿಗ್ಮಾಂಶು ಧುಲಿಯಾ ನಿರ್ದೇಶನದ ಹೊಸ ಚಿತ್ರ "ಮಿಲನ್‌ ಟಾಕೀಸ್‌'ನಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಹಾರಿದ್ದಾರೆ.

ಇದಕ್ಕೂ ಮುನ್ನ ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರದ್ಧಾ, ಈಗ ಮೊದಲ ಬಾರಿಗೆ ಬಾಲಿವುಡ್‌ಗೆ ಹೊರಟು ನಿಂತಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಕ್ನೋ, ಮಥುರಾ ಮತ್ತು ಇತರೆಡೆ ಚಿತ್ರೀಕರಣ ನಡೆಯಲಿದೆ. ಉತ್ತರ ಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ಅಲಿ ಫ‌ಜಲ್‌ ಮತ್ತು ಶ್ರದ್ಧಾ ಶ್ರೀನಾಥ್‌ ಅಭಿನಯಿಸುತ್ತಿದ್ದಾರೆ. ಹಾಗೆ ನೋಡಿದರೆ, ಶ್ರದ್ಧಾ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ.

ಈಗಾಗಲೇ ಅವರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ನಿಜ ಹೇಳಬೇಕೆಂದರೆ, "ಯೂ ಟರ್ನ್' ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಅವರು "ಕೋಹಿನೂರ್‌' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ್ದರು. ಆ ನಂತರ "ಯೂ ಟರ್ನ್' ಬಂತು. ಮೊದಲಿಗೆ ಮಲಯಾಳಂನಲ್ಲಿ ನಟಿಸಿದ್ದ ಶ್ರದ್ಧಾ, ನಂತರ ತಮಿಳಿನ "ಕಾಟ್ರಾ ವಿಳೆಯಾಡೈ' ಎಂಬ ಚಿತ್ರದಲ್ಲಿ ನಟಿಸಿದರು. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ನಟಿಸುವಾಗಲೇ, ಶ್ರದ್ಧಾ ತಮಿಳಿನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸತೊಡಗಿದರು.

ಗೌತಮ್‌ ಕಾರ್ತಿಕ್‌ ಅಭಿನಯದ "ಇವನ್‌ ತಂತಿರನ್‌', ವಿಜಯ್‌ ಸೇತುಪತಿ ಮತ್ತು ಮಾಧವನ್‌ ಅಭಿನಯದ "ವಿಕ್ರಮ್‌ ವೇದ', ನಿವಿನ್‌ ಪಾಲಿ ಅಭಿನಯದ "ರಿಚ್ಚಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಪೈಕಿ "ವಿಕ್ರಮ್‌ ವೇದ' ದೊಡ್ಡ ಹಿಟ್‌ ಆದರೂ, ಅದ್ಯಾಕೋ ಶ್ರದ್ಧಾ ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ಬಿಝಿಯಾಗಲಿಲ್ಲ. ಹೀಗಿರುವಾಗಲೇ ಅವರನ್ನು ಬಾಲಿವುಡ್‌ ಕರೆದಿದ್ದು, ಶ್ರದ್ಧಾ ಸದ್ಯಕ್ಕೆ "ಮಿಲನ್‌ ಟಾಕೀಸ್‌' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹಿಂದಿಯ ಕೃತಿ: ಬಹುಶಃ "ರಾಝ್ - ರೀಬೂಟ್‌' ಎಂಬ ಹಿಂದಿ ಚಿತ್ರದಲ್ಲಿ ಕನ್ನಡದ ಕೃತಿ ಖರಬಂದ ಕಾಣಿಸಿಕೊಂಡಾಗ, ಬಾಲಿವುಡ್‌ನ‌ಲ್ಲಿ ಅವರು ಅಷ್ಟು ದೂರ ಸಾಗಿ ಬರಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಅದಾಗಿ ಎರಡು ವರ್ಷಗಳಲ್ಲಿ ಅವರು ಐದು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, "ಯಮ್ಲಾ ಪಗ್ಲಾ ದಿವಾನಾ - ಫಿರ್‌ ಸೇ' ಚಿತ್ರದಲ್ಲಿ ಧಮೇಂದ್ರ, ಸನ್ನಿ ಡಿಯೋಲ್‌, ಬಾಬ್ಬಿ ಡಿಯೋಲ್‌ರಂತಹ ಸ್ಟಾರ್‌ ನಟರೊಂದಿಗೂ ಕಾಣಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ, ಕೃತಿಗೆ ಬೇರೆ ಭಾಷೆಯ ಚಿತ್ರಗಳು ಹೊಸದೇನಲ್ಲ. ಕನ್ನಡದಲ್ಲಿ ಚಿರಂಜೀವಿ ಸರ್ಜಾ ಜೊತೆಗೆ "ಚಿರು' ಎಂಬ ಚಿತ್ರದಲ್ಲಿ ನಟಿಸುವುದಕ್ಕಿಂತ ಮುನ್ನವೇ ಅವರು "ಬೋನಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಆ ನಂತರ "ಅಲಾ ಮೊದಲಾಯಿಂದಿ', "ತೀನ್‌ ಮಾರ್‌', "ಮಿಸ್ಟರ್‌ ನೂಕಯ್ಯ', "ಬ್ರೂಸ್‌ ಲೀ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಮಧ್ಯೆ ಕನ್ನಡದಲ್ಲೂ ಹಲವು ಚಿತ್ರಗಳಲ್ಲೂ ನಟಿಸಿದ ಅವರು, "ರಾಜ್‌ - ರೀಬೂಟ್‌' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಹಾರಿದರು.

ಆ ಚಿತ್ರದ ದೊಡ್ಡ ಹಿಟ್‌ ಏನಲ್ಲ. ಆದರೆ, ಕೃತಿಗೆ ಒಂದೊರ ಹಿಂದೊಂದು ಚಿತ್ರಗಳು ಸಿಗುತ್ತಲೇ ಇದೆ. ಪ್ರಮುಖವಾಗಿ ಕಾರ್ತಿಕ್‌ ಆರ್ಯನ್‌ ಜೊತೆಗೆ "ಗೆಸ್ಟ್‌ ಇನ್‌ ಲಂಡನ್‌', ರಾಜಕುಮಾರ್‌ ರಾವ್‌ ಜೊತೆಗೆ "ಶಾದಿ ಮೇ ಜರೂರ್‌ ಆನಾ', ಪುಲ್ಕಿತ್‌ ಸಾಮ್ರಾಟ್‌ ಜೊತೆಗೆ "ವೀರೇ ಕಿ ವೆಡ್ಡಿಂಗ್‌' ಮುಂತಾದ ಚಿತ್ರಗಳಲ್ಲಿ ಕೃತಿ ನಟಿಸಿದ್ದಾರೆ. ಇದಲ್ಲದೆ ಧರ್ಮೇಂದ್ರ, ಸನ್ನಿ ಡಿಯೋಲ್‌ ಮತ್ತು ಬಾಬ್ಬಿ ಡಿಯೋಲ್‌ ಅಭಿನಯದ "ಯಮ್ಲಾ ಪಗ್ಲಾ ದಿವಾನ: ಫಿರ್‌ ಸೇ' ಮತ್ತು ದುಲ್ಕರ್‌ ಸಲ್ಮಾನ್‌ ಮತ್ತು ಇರ್ಫಾನ್‌ ಖಾನ್‌ ಅಭಿನಯದ "ಕಾರ್ವಾನ್‌' ಚಿತ್ರಗಳಲ್ಲಿ ಕೃತಿ ನಟಿಸುತ್ತಿದ್ದಾರೆ.

ಇನ್ನು ಶಾರೂಖ್‌ ಖಾನ್‌ ಜೊತೆಗೆ "ಆಪರೇಷನ್‌ ಖುಕ್ರಿ' ಎಂಬ ಹೊಸ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇನ್ನು ಕನ್ನಡದಲ್ಲಿ "ಮಾಸ್ತಿಗುಡಿ' ಚಿತ್ರದ ನಂತರ ಕೃತಿ ಖರಬಂದ ಅಭಿನಯದ ಯಾವೊಂದು ಕನ್ನಡ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಒಂದು ವರ್ಷದ ನಂತರ ಆಕೆಯ "ದಳಪತಿ' ಚಿತ್ರ ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಕೃತಿ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸುತ್ತಿಲ್ಲ.

ಪರಭಾಷೆಗಳಲ್ಲಿ ನಿಕ್ಕಿ: ಇತ್ತೀಚೆಗೆ "ಓ ಪ್ರೇಮವೇ' ಎಂಬ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಸಂಜನಾ ತಂಗಿ ನಿಕ್ಕಿ. ಆದರೆ, ಚಿತ್ರದ ಬಿಡುಗಡೆಯ ಹೊತ್ತಿಗೆ ನಡೆದ ಪ್ರಮೋಷನ್‌ನಲ್ಲಿ ನಿಕ್ಕಿ ಮಾತ್ರ ಕಾಣಿಸಿಕೊಳ್ಳಲಿಲ್ಲ. ಈ ಕುರಿತು ನಾಯಕ ಮನೋಜ್‌ ಪತ್ರಿಕಾಗೋಷ್ಠಿಯಲ್ಲಿ ಬೇಸರಿಸಿಕೊಂಡಿದ್ದೂ ಇದೆ.

ಯಾಕೆ ಚಿತ್ರದ ಪ್ರಮೋಷನ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದರೆ, ನಿಕ್ಕಿ ತಾವು ಪರಭಾಷೆಗಳಲ್ಲಿ ಬಿಝಿ ಎಂದು ಹೇಳಿಕೊಂಡಿದ್ದರಂತೆ. ಅದೇನೋ ಸರಿ, ಪರಭಾಷೆಯ ಚಿತ್ರಗಳಲ್ಲಿ ನಟಿಸುವ ವಿಷಯ ಬಂದರೆ, ನಿಕ್ಕಿ ಗಲ್ರಾನಿ ತಮ್ಮ ಅಕ್ಕ ಸಂಜನಾ ಗಲ್ರಾನಿ ಅವರನ್ನು ಸಹ ಮೀರಿಸುತ್ತಾರೆ. ಸಂಜನಾ ಈ ಹಿಂದೆ ಹಲವು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಿಕ್ಕಿ ಫಿಲ್ಮೋಗ್ರಫಿಯಲ್ಲಿ ತೆಲುಗು ಚಿತ್ರಗಳು ಕಾಣುವುದು ಕಡಿಮೆಯೇ.

ಆದರೆ, ತಮಿಳು ಮತ್ತು ಮಲಯಾಳಂ ಚಿತ್ರಗಳು ಹೇರಳವಾಗಿ ಕಾಣುತ್ತವೆ. ಚಿರಂಜೀವಿ ಸರ್ಜಾ ಅಭಿನಯದ "ಅಜಿತ್‌' ಚಿತ್ರದಲ್ಲಿ ನಟಿಸುವುದಕ್ಕಿಂತ ಮುನ್ನವೇ ನಿಕ್ಕಿ, ಮಲಯಾಳಂನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದರು. "1983' ಮತ್ತು "ಓಂ ಶಾಮತಿ ಆಶಾನಾ' ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದ ಅವರು, ನಂತರದ ದಿನಗಳಲ್ಲಿ "ಇವನ್‌ ಮರ್ಯಾದರಾಮನ್‌', "ಒರು ಸೆಕೆಂಡ್‌ ಕ್ಲಾಸ್‌ ಯಾತ್ರಾ",

"ರುದ್ರ ಸಿಂಹಾಸನಂ', "ಟೀಮ್‌ 5' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಇದಲ್ಲದೆ "ಕೋ 2', "ಕಡವುಲ್‌ ಇರುಕ್ಕಾನ್‌ ಕುಮಾರು', "ಮೊಟ್ಟ ಶಿವ ಕೆಟ್ಟ ಶಿವ', "ನೆರುಪ್ಪು ಡಾ', "ಹರಹರ ಮಹದೇವಕಿ' ಮುಂತಾದ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಮಧ್ಯೆ ಅವರು ಯಾವ ಕನ್ನಡ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದೇನು ಕನ್ನಡದಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲವೋ ಅಥವಾ ಪರಭಾಷೆಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿರುವುದರಿಂದ, ಅವರೇ ಇಲ್ಲಿ ಒಪ್ಪಿಕೊಳ್ಳುತ್ತಿಲ್ಲವೋ ಎಂಬುದು ಗೊತ್ತಿಲ್ಲ.

ಮೆಹಬೂಬ ನೇಹಾ: "ಮುಂಗಾರು ಮಳೆ 2' ಚಿತ್ರ ಬಿಡುಗಡೆಯಾದ ಆ ಸಂದರ್ಭದಲ್ಲಿ ಆ ಚಿತ್ರದ ನಾಯಕಿ ನೇಹಾ ಶೆಟ್ಟಿ ಕನ್ನಡದಲ್ಲಿ ದೊಡ್ಡ ಸೆನ್ಸೇಶನ್‌ ಆಗಬಹುದು ಎಂದು ಭಾವಿಸಿದ್ದರು. ಆದರೆ, ಅದ್ಯಾಕೋ ನೇಹಾ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹವಾ ಏನೂ ಸೃಷ್ಟಿಸಲಿಲ್ಲ ಎಂದರೆ ತಪ್ಪಿಲ್ಲ. "ಮುಂಗಾರು ಮಳೆ 2' ಚಿತ್ರದ ನಂತರ ನೇಹಾ, ಒಂದು ವೀಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಯಾವೊಂದು ಚಿತ್ರದಲ್ಲೂ ನಟಿಸಲಿಲ್ಲ.

ಚಂದನ್‌ ಶೆಟ್ಟಿ ಅವರ "ಚಾಕೋಲೇಟ್‌ ಗರ್ಲ್' ಎಂಬ ವೀಡಿಯೋ ಆಲ್ಬಂನಲ್ಲಿ ನೇಹಾ ಕಾಣಿಸಿಕೊಂಡರು. ಮಿಕ್ಕಂತೆ ಒಂದೆರೆಡು ಚಿತ್ರಗಳಲ್ಲಿ ಅವರು ನಟಿಸುವ ಸುದ್ದಿಯಾದರೂ, ಆ ಚಿತ್ರಗಳು ಸೆಟ್ಟೇರಲಿಲ್ಲ. ಹೀಗಿರುವಾಗಲೇ, ತೆಲುಗು ನಿರ್ದೇಶಕ ಪುರಿ ಜಗನ್ನಾಥ್‌ ತಮ್ಮ ಮಗ ಆಕಾಶ್‌ನನ್ನು ಹೀರೋ ಮಾಡಿ "ಮೆಹಬೂಬ' ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದಕ್ಕೆ ಸಿದ್ಧತೆ ನಡೆಸಿದ್ದರು.

ಆಗ ಅವರ ಕಣ್ಣಿಗೆ ಬಿದ್ದವರು ನೇಹಾ ಶೆಟ್ಟಿ. ನೇಹಾ ಅವರನ್ನು ನೋಡಿ ಖುಷಿಯಾದ ಪುರಿ ಜಗನ್ನಾಥ್‌, ನೇಹಾ ಅವರನ್ನು ತಮ್ಮ ಮಗನ ಎದುರು ನಾಯಕಿಯನ್ನಾಗಿ ಮಾಡಿದರು. ಈ ಚಿತ್ರದಲ್ಲಿ ಪಾಕಿಸ್ಥಾನದ ಹುಡುಗಿಯಾಗಿ ನೇಹಾ ಕಾಣಿಸಿಕೊಂಡಿದ್ದು, ಈಗ ಚಿತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ನೇಹಾ ಅವರಿಗೆ ಇನ್ನಷ್ಟು ಚಿತ್ರಗಳು ಹುಡುಕಿಕೊಂಡು ಬರುತ್ತವಾ ಎಂದು ಕಾದು ನೋಡಬೇಕಿದೆ.


Trending videos

Back to Top