CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುರಾರಿಯ ಮಿಲಿಟರಿ ಕೃಷಿ

ಧಾರವಾಡದಿಂದ ಸವದತ್ತಿ ಮಾರ್ಗವಾಗಿ ಪಯಣಿಸಿದರೆ ನಗರದ ಹೊರವಲಯದಲ್ಲಿ ಅಚ್ಚರಿಗೊಳಿಸುವ ಕೃಷಿ ತಾಕೊಂದು ಗಮನ ಸೆಳೆಯುತ್ತದೆ. ಕೃಷಿ ವೈವಿಧ್ಯತೆ ಹೊಂದಿರುವ ವಿಶಾಲವಾದ ಜಮೀನು ಬರದ ಸಂಕಟದ ನಡುವೆಯೂ ಆಶಾದಾಯಕ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಮುರುಘಾ ಮಠಕ್ಕೆ ಸೇರಿರುವ ಈ ಫ‌ಲವತ್ತಾದ ಭೂಮಿಯನ್ನು ಮಡಿವಾಳಪ್ಪ ಸುಬ್ಬಪ್ಪ ಮುರಾರಿ ಇವರು ಸಾಗುವಳಿ ಮಾಡುತ್ತಿದ್ದಾರೆ.

    ಮಾದನಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಟ್ಟಿಗ್ರಾಮದ ಮಡಿವಾಳಪ್ಪ ಮುರಾರಿ  ಭಾರತೀಯ ಸೇನೆಯಲ್ಲಿದ್ದರು. ನಿವೃತ್ತರಾದ ತಕ್ಷಣ ಊರಿಗೆ ಮರಳಿ ಗ್ಯಾಸ್‌ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿಕೊಂಡರು. ಒಳ ಬರುವ, ಹೊರಹೋಗುವ ಸಿಲಿಂಡರ್‌ಗಳು, ಅವುಗಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸುವ ಕೆಲಸ ಇವರದು. ಏಕೋ ಖಾಸಗಿ ಸಂಸ್ಥೆಯ ಗೋಡೌನ್‌ ಕಾಯುವುದು ಸಹ್ಯವೆನಿಸಲಿಲ್ಲ. ಕೆಲಸ ತ್ಯಜಿಸಿಊರಿಗೆ ಬಂದರು. ಆಗ ಕೈ ಬೀಸಿ ಕರೆದದ್ದು ಕೃಷಿ.  

ಲೀಸ್‌ ಆಧಾರದ ಭೂಮಿ
    "ಮುರುಘಾಮಠದ ಹದಿನಾರು ಎಕರೆ ಜಮೀನನ್ನು ಹಣತುಂಬಿ ಲೀಸ್‌ ಪಡೆದುಕೊಂಡರು. ಅದೇ ಭೂಮಿಯಲ್ಲಿ ಐದು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನುರಿತ ಕೃಷಿಕರಿಗೇನು ಕಡಿವೆ ಇಲ್ಲದಂತೆ ತಂತ್ರಜಾnನವನ್ನು ಚಾಚುತಪ್ಪದೇ ಅಳವಡಿಸಿಕೊಂಡು ತುಂಡು ಭೂಮಿಯನ್ನೂ ಸಹ ವ್ಯರ್ಥವಾಗಿ ಬಿಡದೆ, ಕಾಲ ಕಾಲಕ್ಕೆ ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ಅನುಭವಿ ಕೃಷಿಕರೇ ಇವರ ಹೊಲದತ್ತತಿರುಗಿ ನೋಡುವಂತೆ ಮಾಡಿದ್ದಾರೆ.

 ವೈವಿಧ್ಯ ಕೃಷಿ
ಬೆಳೆ ವೈಧ್ಯತೆ ಇವರ ಕೃಷಿ ವಿಧಾನದ ವಿಶೇಷತೆ. ವರ್ಷದ ಹನ್ನೆರಡು ತಿಂಗಳೂ ಬೆಳೆ ಇರುವಂತೆ ನೋಡಿಕೊಳ್ಳುತ್ತಾರೆ. ಫ‌ಸಲುಕಟಾವಿಗೆ ಬರುವ ಹೊತ್ತಿಗೆ ಇನ್ನೊಂದು ಬೆಳೆಗೆ ಅಣಿಯಾಗುತ್ತಾರೆ. ಸಮಯ ವ್ಯರ್ಥಗೊಳಿಸದೇ ಹೆಚ್ಚು ದಿನ ಭೂಮಿಯನ್ನು ಕಾಲಿ ಬಿಡದೇ  ಮುಂದಿನ ಬೆಳೆಯ ಬೀಜಗಳನ್ನು ಭೂಮಿಗೆ ಬಿತ್ತಿರುತ್ತಾರೆ.

    ಕಳೆದ ವರ್ಷದಮುಂಗಾರಿನಲ್ಲಿ ಹತ್ತು ಎಕರೆ ಶೇಂಗಾ ಬಿತ್ತಿದ್ದರು. ಆರು ಎಕರೆಯಲ್ಲಿ  ಸೋಯಾ ಅವರೆ ಬೆಳೆದಿದ್ದರು. ಮಳೆಯ ಕೊರತೆಯಿಂದ ನಿರೀಕ್ಷಿತ ಇಳುವರಿ ಗಿಟ್ಟಿಸಲು ಸಾಧ್ಯವಾಗಿರಲಿಲ್ಲ. ಬಂದಷ್ಟು ಕೊಯ್ಲು ಮಾಡಿ ಮಾರಿದ್ದರು. ಶ್ರಮಕ್ಕೆ ತಕ್ಕಷ್ಟು ಆದಾಯ ಕೈ ಸೇರಿರಲಿಲ್ಲ. ಬೇಸರಿಸದೇ ಹಿಂಗಾರು ಬೆಳೆಗೆ ಸಿದ್ಧಗೊಂಡಿದ್ದರು. ಸೆಪ್ಟೆಂಬರ್‌ ವೇಳೆಗೆ ಸೌತೆ, ಚವಳಿ, ಮೆಣಸು, ಸೋಯಾಬಿನ್‌ ಕೃಷಿ ಮಾಡಿಗೆದ್ದರು. ಕಟಾವು ಮುಗಿಸಿ ಖಾಲಿಯಾದ ಭೂಮಿಯಲ್ಲಿ ಜನವರಿ ತಿಂಗಳ ವೇಳೆಗೆ ಐದು ಎಕರೆಯಲ್ಲಿ ಮೆಕ್ಕೆ ಜೋಳ, ಐದು ಎಕರೆ ಬಿಜಾಪುರ ಬಿಳಿ ಜೋಳ, ಒಂದು ಎಕರೆಯಲ್ಲಿ ಚಂಡು ಹೂವು, ಎರಡು ಎಕರೆ ಸೌತೆ ಕೃಷಿ, ಒಂದು ಎಕರೆ ಚವಳಿ, ಎರಡುಎಕರೆಯಲ್ಲಿ ಮೆಣಸಿನ ಕೃಷಿಮಾಡಿದ್ದಾರೆ.

    ಚವಳಿ, ಸೌತೆ, ಮೆಣಸಿನಿಂದ ಫ‌ಸಲು ಪಡೆಯುತ್ತಿದ್ದಾರೆ. ಚವಳಿಯಿಂದ 25,000 ರೂ. ಆದಾಯ ಗಳಿಸಿದ್ದಾರೆ. ಸೌತೆ ಕೃಷಿಯಿಂದ 75,000 ರೂ. ಗಳಿಕೆಯ ಅಂದಾಜಿನಲ್ಲಿದ್ದಾರೆ.

ಹತ್ತು ಎಕರೆಯಲ್ಲಿನ ಜೋಳ ಕಟಾವಿಗೆ ಸಿದ್ದಗೊಂಡಿದೆ. ಮೆಕ್ಕೆ ಜೋಳ 150 ಕ್ವಿಂಟಾಲ್‌, ಬಿಳಿ ಜೋಳದಿಂದ 40 ಕ್ವಿಂಟಾಲ್‌ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.ಬರುವ ಮುಂಗಾರಿನ ಹಂಗಾಮಿನಲ್ಲಿ 16 ಎಕರೆಗೂ ಸೋಯಾ ಅವರೆ ಬಿತ್ತುವಆಲೋಚನೆಯಲ್ಲಿದ್ದಾರೆ.

ತರಕಾರಿ ಬೆಳೆಗಳೆಂದರೆ ಇವರಿಗೆ ವಿಶೇಷ ಆಸಕ್ತಿ. ಟೊಮೆಟೊ, ಬದನೆ, ಸೌತೆ, ಚವಳಿ, ಬೀನ್ಸ, ಮೂಲಂಗಿ ಹೀಗೆತರಹೇವಾರಿ ತರಕಾರಿಗಳನ್ನು ಗುಂಟೆ ಲೆಕ್ಕದ ಸ್ಥಳದಲ್ಲಿ ಬೆಳೆಯುತ್ತಾರೆ. ಮನೆ ಬಳಕೆಯ ಪೂರೈಕೆಯೊಂದಿಗೆ ವ್ಯಾಪಾರಕ್ಕೂ ಅನುಕೂಲವಾಗುತ್ತಿದೆ.

ಕಟ್ಟು ನಿಟ್ಟಿನ ಸಮಯ ಪಾಲನೆ
ಸೈನಿಕನ ಶಿಸ್ತು ಕೃಷಿಯಲ್ಲೂ ಅಳವಡಿಕೆಯಾಗಿದೆ. ಗೊಬ್ಬರ ಉಣಿಕೆ, ಔಷಧ ಸಿಂಪರಣೆ, ನೀರು ಹಾಯಿಸುವುದು, ಕಳೆ ತೆಗೆಯುವುದು ಇವುಗಳೆಲ್ಲಾ ನಿಗದಿತ ಸಮಯದಲ್ಲಿ ಆಗಲೇ ಬೇಕು. ಇವರ ಹೊಲದಲ್ಲಿದುಡಿಯುವ ಕೃಷಿ ಕೂಲಿಗಳಿಗೂ ಸಮಯ ನಿರ್ವಹಣೆಯ ಮಹತ್ವ ಕಲಿಸಿದ್ದಾರೆ. ಹೊಲದಲ್ಲಿಯೇ ಸಣ್ಣಗುಡಿಸಲು ನಿರ್ಮಿಸಿಕೊಂಡಿದ್ದು,
ಹೊರ ಭಾಗದಲ್ಲಿಯೇ ಗಡಿಯಾರ ನೇತು ಹಾಕಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆ ಅನುಸರಿಸುತ್ತಿದ್ದಾರೆ. ಎರಡು ಆಕಳು, ಒಂದು ಎಮ್ಮೆ ಹೊಂದಿದ್ದು ದಿನಕ್ಕೆ 4-6 ಲೀಟರ್‌ ಹಾಲು ಪಡೆಯುತ್ತಿದ್ದಾರೆ. ಯತೇಚ್ಚಗೊಬ್ಬರ ಸಿಗುತ್ತಿದ್ದು ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಾರೆ. ದನಗಳಿಗೆ ಮೇವು, ನೀರುಕುಡಿಸುವುದು, ಚಿಕಿತ್ಸಾ ಕ್ರಮಗಳು ಸಮಯಕ್ಕೆ ಅನುಗುಣವಾಗಿ ಆಗಲೇಬೇಕು ಎನ್ನುವುದು ಇವರ ನಿರ್ಣಯ. ಇದಕ್ಕಾಗಿ ಬೆಳಗಿನ ಜಾಮ 4 ಗಂಟೆಯಿಂದಲೇ ಕೃಷಿ ಚಟುವಟಿಕೆ ಶುರುವಾಗುತ್ತದೆ. 

ಕೃಷಿಯಲ್ಲಿ ಕಳ್ಳ ಬುದ್ದಿಯನ್ನು ಬಿಡಬೇಕು.ಭೂಮಿತಾಯಿ ಎಂದಿಗೂ ಮೋಸ ಮಾಡುವುದಿಲ್ಲ. ಒಂದು ಬೆಳೆ ನಷ್ಟವಾದಲ್ಲಿಇನ್ನೊಂದು ಬೆಳೆಯಲ್ಲಾದರೂ ಆದಾಯ ಸಿಕ್ಕೇ ಸಿಗುತ್ತದೆ. ಹೆಚ್ಚಿನವರು ತಾವು ಕೆಲಸ ಮಾಡಲಾಗದೇ ಪ್ರಕೃತಿಯನ್ನು ಹೊಣೆ ಮಾಡಿ ಜಮೀನನ್ನೇ ಮಾರುತ್ತಾರೆ. ಇಂತಹ ದುಸ್ಥಿತಿಯನ್ನು ರೈತರು ತಂದುಕೊಳ್ಳಬಾರದು ಎಂದು ನೋನಿಂದ ಹೇಳುತ್ತಾರೆ ಮಡಿವಾಳಪ್ಪ ಮುರಾರಿ.
ಸಂಪರ್ಕಿಸಲು: 9686294025.

- ಕೋಡಕಣಿ ಜೈವಂತ ಪಟಗಾರ

Back to Top