CONNECT WITH US  

25 ರೂ.ಗೆ 8 ಇಡ್ಲಿ ಜತೆ ಬೆಣ್ಣೆ ಫ್ರೀ!

ಬೆಣ್ಣೆ ಇಡ್ಲಿ ಬೇಕಿದ್ರೆ ದರಸಗುಪ್ಪೆಗೆ ಬನ್ನಿ

ಮೈಸೂರಿಗೆ ಹೋದ್ರೆ ಮೈಲಾರಿ ದೋಸೆ, ದಾವಣಗೆರೆಗೆ ಹೋದ್ರೆ ಬೆಣ್ಣೆ ದೋಸೆ, ಮಂಡ್ಯಕ್ಕೆ ಹೋದ್ರೆ ಮದ್ದೂರು ವಡೆ, ತುಮಕೂರಿಗೆ ಹೋದ್ರೆ ತಟ್ಟೆ ಇಡ್ಲಿ... ಹೀಗೆ ಒಂದೊಂದು ಊರಲ್ಲೂ ಒಂದೊಂದು ವಿಶೇಷ ಉಪಾಹಾರ ಇರುತ್ತೆ. ಅಲ್ಲದೆ, ಒಂದೊಂದು ಊರಿನ ಖ್ಯಾತಿ ಹೆಚ್ಚಿಸುವಲ್ಲಿ ಕೆಲ ಹೋಟೆಲ್‌ಗ‌ಳ ಪಾತ್ರವೂ ಇರುತ್ತದೆ. ಅದೇ ರೀತಿಯಾಗಿ ಶ್ರೀರಂಗಪಟ್ಟಣದಲ್ಲೂ ಒಂದು ವಿಶೇಷವಾದ ತಿಂಡಿ ಸಿಗುತ್ತದೆ. ಅದೇ ಬೆಣ್ಣೆ ಇಡ್ಲಿ. ಹೌದು, ನೀವೇನಾದ್ರೂ ನಿಮಿಷಾಂಬ ದೇವಿ, ರಂಗನಾಥಸ್ವಾಮಿ ನೋಡಲು ಶ್ರೀರಂಗಪಟ್ಟಣಕ್ಕೆ ಹೋದ್ರೆ ಬೆಣ್ಣೆ ಇಡ್ಲಿ ತಿನ್ನದೇ ವಾಪಸ್‌ ಬರಬೇಡಿ.

ಗ್ರಾಮದಲ್ಲಿ ಯಾವುದೇ ಹೋಟೆಲ್‌ಗ‌ಳು ಇಲ್ಲದಂತಹ ಸಮಯದಲ್ಲಿ, ಹಸಿದು ಬಂದವರಿಗೆ ಕಡಿಮೆ ದರದಲ್ಲಿ ಉಪಾಹಾರ ಒದಗಿಸಬೇಕು ಎಂಬ ಉದ್ದೇಶದಿಂದ 30 ವರ್ಷಗಳ ಹಿಂದೆ ಶಿವರಾಮೇಗೌಡ ಎಂಬುವರು ಶ್ರೀರಂಗಪಟ್ಟಣ ಸಮೀಪದ ದರಸಗುಪ್ಪೆಯಲ್ಲಿ ಪುಟ್ಟ ಹೋಟೆಲ್‌ ಅನ್ನು ಪ್ರಾರಂಭಿಸಿದ್ದರು. ಅವರ ನಿಧನದ ನಂತರ ಪುತ್ರ ಶಿವಪ್ಪನವರು ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಪತ್ನಿ ರತ್ನಮ್ಮ ಸಾಥ್‌ ನೀಡುತ್ತಾರೆ. ಮಗ ಸುರೇಶ್‌ ಬೆಂಗಳೂರಿನಲ್ಲಿ ಫ್ಲವರ್‌ ಡೆಕೋರೇಟರ್‌ ಆಗಿದ್ದಾರೆ. 

ಹೋಟೆಲ್‌ ಪ್ರಾರಂಭದಲ್ಲಿ ಬರೀ ಇಡ್ಲಿ ಚಟ್ನಿ ಜೊತೆಗೆ ಟೀ, ಕಾಫಿಯನ್ನಷ್ಟೇ ಗ್ರಾಹಕರಿಗೆ ಕೊಡಲಾಗುತ್ತಿತ್ತಂತೆ. ನಂತರ ಹೋಟೆಲ್‌ ಹಾಗೂ ಮನೆ ಬಳಕೆಗೆ ತರುತ್ತಿದ್ದ ಎಮ್ಮೆ ಹಾಲಿನಲ್ಲಿ ಸ್ವಲ್ಪ ಉಳಿಸಿಕೊಂಡು ಅದರಲ್ಲಿ ಮೊಸರು ಮಾಡಿ, ಅದನ್ನು ಕಡೆದಾಗ ಬಂದಂತಹ ಬೆಣ್ಣೆಯನ್ನು ಗ್ರಾಹಕರಿಗೂ ನೀಡಲು ಶುರು ಮಾಡಿದ್ದರಂತೆ. ನಂತರ ಅದನ್ನು ಗ್ರಾಹಕರು ಒಪ್ಪಿಕೊಂಡಿದ್ದರಿಂದ ಇಡ್ಲಿ, ಚಟ್ನಿ ಜೊತೆಗೆ ಬೆಣ್ಣೆಯನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದರಂತೆ. ಆ ಬೆಣ್ಣೆಯೇ ಈಗ ಈ ಹೋಟೆಲ್‌ಗೆ ಹೆಸರು ತಂದುಕೊಟ್ಟಿದೆ. ಅಲ್ಲದೆ, ದರವೂ ಪ್ರವಾಸಿಗರು ಹಾಗೂ ಗ್ರಾಹಕರ ಸ್ನೇಹಿಯಾಗಿದೆ.

25 ರೂ.ಗೆ 8 ಇಡ್ಲಿ:
15 ವರ್ಷಗಳ ಹಿಂದೆ 10 ರೂ.ಗೆ 8 ಇಡ್ಲಿ ಕೊಡುತ್ತಿದ್ದ ಶಿವಪ್ಪ, ಅಕ್ಕಿ, ಬೇಳೆ ಮುಂತಾದವುಗಳ ದರ ಜಾಸ್ತಿ ಆಗಿದ್ದರಿಂದ ಕಳೆದ ಒಂದು ವರ್ಷದಿಂದ 25 ರೂ.ಗೆ 8 ಇಡ್ಲಿ ಜೊತೆ ಚಟ್ನಿ, ಬೆಣ್ಣೆಯನ್ನು ಕೊಡ್ತಾರೆ. ದರ ಬದಲಾಗಿರಬಹುದು ಆದರೆ, ರುಚಿ, ಶುಚಿ 30 ವರ್ಷಗಳ ಹಿಂದಿನಂತೆಯೇ ಇದೆ. ಸಣ್ಣಪುಟ್ಟ ಹೋಟೆಲ್‌ಗ‌ಳಲ್ಲೇ 2 ಇಡ್ಲಿಗೆ 25 ರೂ. ದರ ಇದೆ. ಅಂತಹದರಲ್ಲಿ ಶಿವಪ್ಪನವರು ಶುಚಿ, ರುಚಿಯಾದ ಬೆಣ್ಣೆ ಜತೆ 25 ರೂ.ಗೆ 8 ಇಡ್ಲಿ ಕೊಡುತ್ತಿರುವುದನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಗ್ರಾಹಕರು.

ಹೋಟೆಲ್‌ನಲ್ಲಿ ಶಿವಪ್ಪ ಒಬ್ಬರೇ:
ಹೋಟೆಲ್‌ನಲ್ಲಿ ಶಿವಪ್ಪನವರೇ ಎಲ್ಲವೂ. ಇಡ್ಲಿ ಬೇಯಿಸುವುದರಿಂದ ಹಿಡಿದು ಗ್ರಾಹಕರಿಗೆ ಬಡಿಸುವುದು, ಪಾರ್ಸಲ್‌ ಮಾಡುವುದು ಎಲ್ಲವನ್ನೂ ಶಿವಪ್ಪನೇ ಮಾಡುತ್ತಾರೆ. ಸಹಾಯಕ್ಕೆ ಯಾರನ್ನೂ ಇಟ್ಟುಕೊಂಡಿಲ್ಲ. ಹೋಟೆಲ್‌ ಮತ್ತು ಮನೆ ಒಂದೇ ಬಿಲ್ಡಿಂಗ್‌ನಲ್ಲಿ ಇರುವ ಕಾರಣ, ಪತ್ನಿ ರತ್ನಮ್ಮ ಮನೆ ಕೆಲಸದ ಜತೆ ಚಟ್ನಿ ಮಾಡುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಹೋಟೆಲ್‌ ಬಾಡಿಗೆ, ಕೆಲಸಗಾರರಿಗೆ ಸಂಬಳ ಕೊಡುವ ಅಗತ್ಯವಿಲ್ಲದ ಕಾರಣ, ಗ್ರಾಹಕರಿಗೆ ಕಡಿಮೆ ದರದಲ್ಲಿ ಇಡ್ಲಿ ಕೊಡುತ್ತಿದ್ದೇವೆ ಎನ್ನುತ್ತಾರೆ ಶಿವಪ್ಪ.

ರಾಜಕಾರಣಿಗಳಿಗೂ ಫೇವರೆಟ್‌:
ಶಿವಪ್ಪ ಅವರ ಹೋಟೆಲ್‌ ಕೇವಲ ಸ್ಥಳೀಯರು, ಪ್ರವಾಸಿಗರಿಗಷ್ಟೇ ಅಲ್ಲ, ರಾಜಕಾರಣಿಗಳೂ ಫೇವರೆಟ್‌, ಮಾಜಿ ಶಾಸಕರಾದ ದಿ.ಪುಟ್ಟಣ್ಣಯ್ಯ, ರಮೇಶ್‌ ಬಡ್ಡಿಸಿದ್ದೇಗೌಡ, ಚಲುವರಾಯಸ್ವಾಮಿ ಮುಂತಾದ ರಾಜಕೀಯ ನಾಯಕರು, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಈ ಹೋಟೆಲ್‌ಗೆ ಬಂದು ತಿಂಡಿ ತಿನ್ನಲು ಬರುತ್ತಾರೆ.

ಸ್ಥಳೀಯರಿಗಿಂತ ಹೊರಗಿನವರೇ ಜಾಸ್ತಿ: 
ಈ ಹೋಟೆಲ್‌ಗೆ ಹೊರಗಿನವರೇ ಜಾಸ್ತಿ ಬರುತ್ತಾರಂತೆ. ಈ ಹೋಟೆಲ್‌ನ ಬಗ್ಗೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿರುವ ಕಾರಣ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರು, ಇಲ್ಲಿ ಬಂದು ತಿಂಡಿ ತಿಂದು ಹೋಗುತ್ತಾರಂತೆ.

ಹೋಟೆಲ್‌ಗೆ ದಾರಿ:
ಶ್ರೀರಂಗಪಟ್ಟಣ - ಪಾಂಡವಪುರ ಮಾರ್ಗದಲ್ಲಿ ಬರುವ ದರಸಗುಪ್ಪೆ ಗ್ರಾಮದಲ್ಲಿ ಈ ಹೋಟೆಲ್‌ ಇದೆ. ಪಾಂಡವಪುರದ ಸಕ್ಕರೆ ಫಾಕ್ಟರಿ ಹಿಂಭಾಗಕ್ಕೆ ಬಂದ್ರೆ ಬೆಣ್ಣೆ ಇಡ್ಲಿ ಹೋಟೆಲ್‌ ಸಿಗುತ್ತದೆ. ಈ ಮಾರ್ಗ ನಾಗಮಂಗಲ, ಮೇಲುಕೋಟೆ, ಹಾಸನ, ಅರಸೀಕೆರೆ ಕಡೆಗೂ ಹೋಗುತ್ತದೆ.

ಹೋಟೆಲ್‌ನ ಸಮಯ:
ಬೆಳಗ್ಗೆ 7.30 ರಿಂದ 11 ಗಂಟೆವರೆಗೆ ಈ ಹೋಟೆಲ್‌ ತೆಗೆದಿರುತ್ತದೆ. ಕೆಲವರು ಬರುವುದು ಲೇಟಾದ್ರೆ ಫೋನ್‌ ಮಾಡಿ ಇಡ್ಲಿ ತೆಗೆದಿಡಲು ಹೇಳಿ ಪಾರ್ಸಲ್‌ ತೆಗೆದುಕೊಂಡು ಹೋಗ್ತಾರೆ. ಮತ್ತೆ ಸಂಜೆ ಸಂಜೆ 4.30 ಯಿಂದ 6.30 ರವರೆಗೆ ಕೇವಲ ಕಾಫಿ, ಟೀ ಮಾರಾಟ ಮಾಡ್ತಾರೆ.

ಭೋಗೇಶ ಎಂ.ಆರ್‌.
ಫೋಟೋ ಕೃಪೆ ಗಾಂಜಾಂ ಮಂಜುನಾಥ್‌

 


Trending videos

Back to Top