CONNECT WITH US  

ಮಾಸ್ತಿ ಓದಿದ ಶಾಲೆಯೂ ಆಸ್ತಿಯೇ ಅಲ್ವೇ?

ಇಲ್ಲಿ ಪಾಠ ಕೇಳುವ ಧೈರ್ಯವನ್ನು ಯಾರು ಮಾಡುವಿರಿ?

ಇದು "ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ಓದಿದ ಶಾಲೆ. ಮಾಲೂರು ತಾಲೂಕಿನ ಶಿವಾರಪಟ್ಟಣದ ಈ ಸರ್ಕಾರಿ ಶಾಲೆಯ ಪಾಡು ಕೇಳುವುದೇ ಬೇಡ. ಯಾವಾಗ ಹೆಂಚುಗಳು ತಲೆ ಮೇಲೆ ಬೀಳುತ್ತವೋ ಎಂಬ ಭಯದಲ್ಲೇ ಮಕ್ಕಳು ಪಾಠ ಕೇಳುತ್ತವೆ. ಆದರೂ, ಈ ಶಾಲೆಗೆ ನಾನೇಕೆ ಬರುತ್ತೇನೆ ಎನ್ನುವುದನ್ನು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾಳೆ. ಇದು "ನನ್ನ ಶಾಲೆ ನನ್ನ ಹೆಮ್ಮೆ' ಅಭಿಯಾನದ ಸರ್ಕಾರಿ ಶಾಲೆಯ ನಾಲ್ಕನೇ ಚಿತ್ರಣ...   

ನನ್ನ ಹೆಸರು ಐಮಾನ್‌ ಕೌಸರ್‌. ಹೀಗಂತ ದಿಢೀರನೆ ಹೆಸರು ಬಿಟ್ಟರೆ, ನಿಮ್ಗೆ ನಾನ್ಯಾರಂತ ಗೊತ್ತಾಗೋದಾದ್ರೂ ಹೇಗೆ ಅಲ್ವಾ? ಹೇಳ್ತೀನಿ ಕೇಳಿ, ನಾನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದ ಸರ್ಕಾರಿ ಶಾಲೆಯ ಬಾಲೆ. ಈಗ ಏಳನೇ ತರಗತಿ ಓದುತ್ತಿದ್ದೇನೆ. ಸರ್ಕಾರಿ ಶಾಲೆ ಅಂತ ನೀವು ನನ್ನ ಸ್ಕೂಲನ್ನು ಕಡೆಗಣಿಸೋ ಹಾಗಿಲ್ಲ. ಯಾಕೆ ಗೊತ್ತಾ? ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ನಮ್ಮ ಶಾಲೆಯಲ್ಲಿಯೇ ಓದಿದ್ದು. ನಮ್ಮ ಟೀಚರ್‌ಗಳು ಇದನ್ನು ಆಗಾಗ ಹೇಳುತ್ತಲೇ ಇರ್ತಾರೆ. "ಮಾಸ್ತಿ ಕನ್ನಡದ ಆಸ್ತಿ' ಅಂತಾನೂ ಅವರೇ ನಮಗೆ ಹೇಳಿದ್ದು. ಅವರು ಕನ್ನಡಕ್ಕೆ ಆಸ್ತಿಯಾದ ಮೇಲೆ, ಅವರು ಓದಿದ ಈ ಶಾಲೆಯೂ ನಮಗೆಲ್ಲ ಆಸ್ತಿಯೇ ಅಲ್ವಾ?

  ಆದರೂ ಅದೇಕೋ ನೋಡಿ, ಮಾಸ್ತಿಯಜ್ಜ ಓದಿದ ಈ ಶಾಲೆ, ನಾಡಿಗೆ ಆಸ್ತಿ ಆಗಲೇ ಇಲ್ಲ. 1853 -54ರಲ್ಲಿ ಶುರುವಾದ ಈ ಶಾಲೆ, ಶತಮಾನೋತ್ಸವ ಆಚರಿಸಿಕೊಂಡಿದೆ. ಹಿಂದೆ ಈ ಶಾಲೆ ಶುರುವಾದಾಗ ಕೇವಲ 9 ಮಕ್ಕಳಿದ್ದರಂತೆ. ಆಗ ಒಳ್ಳೆಯ ಕಟ್ಟಡವೂ ಇತ್ತು ಅಂತ ಅರಳೀಕಟ್ಟೆ ಮೇಲೆ ಹರಟೆ ಹೊಡೆಯುತ್ತಾ ಕುಳಿತ ತಾತಂದಿರು ಹೇಳ್ತಿರ್ತಾರೆ. ಈಗ 1-7ನೇ ತರಗತಿಯವರೆಗೆ ಸುಮಾರು 107 ಮಕ್ಕಳಿದ್ದೇವೆ. ಆದರೆ, ನಮಗೆ ಕುಳಿತು ಪಾಠ ಕೇಳ್ಳೋಕೆ ಗಟ್ಟಿಮುಟ್ಟಾದ ಕಟ್ಟಡವೇ ಇಲ್ಲ. ಬ್ರಿಟಿಷರ ಕಾಲದಲ್ಲಿ ಕಟ್ಟಿಸಿದ ಹಳೆಯ ಮಣ್ಣಿನ ಗೋಡೆಯ ಕಟ್ಟಡದಲ್ಲಿ ಕುಳಿತು ಪಾಠ ಕೇಳ್ತೀವಿ. ಮಳೆ ಬಂದಾಗ ನಮ್ಮ ಪಾಡು ಕೇಳ್ಳೋದೇ ಬೇಡ. ಹೆಂಚಿನ ಸೂರು ಆದ ಕಾರಣ, ಮಳೆನೀರು ದಬದಬ ಅಂತ ಹೆಂಚಿನ ಸಂದಿಗಳಿಂದ ಮೈಮೇಲೆ ಸುರಿಯುತ್ತೆ. ಆಗ ಮೈಯೆಲ್ಲ ಒದ್ದೆ. ಪಾಟೀಚೀಲ ಎತ್ತಿಕೊಂಡು, ಎದೊÌà ಬಿದೊÌà ಅಂತ ಪಕ್ಕದ ಕೊಠಡಿಗೆ ಓಡ್ತೀವಿ. ಟೀಚರುಗಳು ಅರ್ಧಕ್ಕೆ ಪಾಠ ನಿಲ್ಲಿಸಿ, ನಮ್ಮ ಹಿಂದೆಯೇ ಬರ್ತಾರೆ. ಪಕ್ಕದ ಕ್ಲಾಸೂ ಸೋರುತ್ತಿದ್ದರೆ, ಅಲ್ಲಿಂದ ಇನ್ನೊಂದು ಕ್ಲಾಸಿಗೆ ದೌಡಾಯಿಸುತ್ತೇವೆ. ಹೀಗೆ ಮಳೆಯಾದಾಗಲೆಲ್ಲ, ಪಾಠದ ಸಮಯ ವ್ಯರ್ಥವಾಗುತ್ತದೆ. ಇನ್ನೂ ಕೆಲವು ಸಲ ಪಾಠ ಕೇಳುವಾಗ, ಹೆಂಚಿನ ಮೇಲೆ ದಡದಡ ಸಪ್ಪಳ ಕೇಳುತ್ತದೆ. ನಾವೆಲ್ಲಾ ಏನಪ್ಪಾ ಅಂತ ತಲೆಎತ್ತಿ ನೋಡಿದರೆ, ಮಂಗಗಳು! ಅವುಗಳ ಓಡಾಟದಿಂದ ಕೆಲವು ಹೆಂಚುಗಳು ಒಡೆಯುತ್ತವೆ. ಆಗ ಪಾಪ, ನಮ್ಮ ಹೆಡ್‌ಮೇಷ್ಟ್ರು ರಾಜಶೇಖರ್‌ ಸರ್‌, ಎಲ್ಲೆಲ್ಲಿಂದಲೋ ಹೆಂಚು ತಂದು ಮತ್ತೆ ಸೂರು ಸರಿಮಾಡ್ತಾರೆ. ಕೊಠಡಿಯೊಳಗೆ ಕುಳಿತಿದ್ದರೂ, ಕೆಲವೊಮ್ಮೆ ಬಯಲಿನಲ್ಲಿ ಇದ್ದಂಥ ಅನುಭವ. ಏಳು ತರಗತಿಗಳಿರುವ ನಮ್ಮ ಶಾಲೆಯಲ್ಲಿರೋದು ಐದೇ ಕೊಠಡಿಗಳು. ನಮಗೆ ಈ ಶಾಲೆಯಲ್ಲಿ ಕೂರಲು ಬೆಂಚುಗಳೇ ಇಲ್ಲ. ನೆಲವೇ ಗತಿ. ಕಿಟಿಕಿಗಳೂ ನೆಟ್ಟಗಿಲ್ಲ. ರೋಟರಿಯವರು ಒಂದು ಕಟ್ಟಡ ಕಟ್ಟಿಸಿದ್ದರೂ ಅಲ್ಲಿ ಕುಳಿತುಕೊಳ್ಳಲು ನಮಗೆ ಜಾಗ ಸಾಲುವುದೇ ಇಲ್ಲ.

  ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ನಾವು ಓದುವುದರಲ್ಲಿ ಹಿಂದೆ ಉಳಿದಿಲ್ಲ. ಮಳೆ ಬಂದು ಪಾಠ ಮಾಡಲು ತೊಂದರೆಯಾದಾಗ, ಶಿಕ್ಷಕರು ಬೆಳಗ್ಗೆ 9.30ಕ್ಕೆ ಸ್ಪೆಷಲ್‌ ಕ್ಲಾಸ್‌ ತೆಗೆದುಕೊಂಡು ಪಾಠ ಮುಗಿಸುತ್ತಾರೆ. ಪಾಠದಲ್ಲಿ ಏನೇ ಸಮಸ್ಯೆಯಿದ್ದರೂ ತಾಳ್ಮೆಯಿಂದ ವಿವರಿಸಿ ಹೇಳುತ್ತಾರೆ. ಆದರೆ, ನಮಗೆ ಟ್ಯೂಷನ್‌ನ ಅಗತ್ಯವೇ ಇಲ್ಲ. ನಮ್ಮಲ್ಲಿ ಹೆಚ್ಚಿನವರ ಮನೆಯಲ್ಲಿ ಹೋಂವರ್ಕ್‌ ಮಾಡಿಸಬಲ್ಲ ವಿದ್ಯಾವಂತ ಅಪ್ಪ- ಅಮ್ಮಂದಿರೂ ಇಲ್ಲ. ಯಾಕಂದ್ರೆ, ಹೆಚ್ಚಿನವರ ತಂದೆ- ತಾಯಿಗಳಿಗೆ ಓದು ಬರಹ ಗೊತ್ತಿಲ್ಲ. ಹೋಂವರ್ಕ್‌ನಲ್ಲಿ ಏನಾದರೂ ಅರ್ಥವಾಗದಿದ್ದರೆ ಮಾರನೇ ದಿನ ಶಿಕ್ಷಕರ ಬಳಿ ಅದನ್ನು ಮುಕ್ತವಾಗಿ ಹೇಳಿಕೊಂಡು, ಉತ್ತರ ಪಡೆಯಬಹುದು. ಯಾಕೆ ಹೋಂ ವರ್ಕ್‌ ಮಾಡಿಲ್ಲ ಅಂತ ಅವರು ನಮ್ಮನ್ನು ಹೊಡೆಯುವುದಿಲ್ಲ. ನಮ್ಮ ಶಾಲೆಯಲ್ಲಿ ಓದಿದ ಇಬ್ಬರು ವಿದ್ಯಾರ್ಥಿಗಳು ಎನ್‌ಟಿಎಸ್‌ ಪರೀಕ್ಷೆ ಪಾಸು ಮಾಡಿ, ಸ್ಕಾಲರ್‌ಶಿಪ್‌ ಪಡೆಯುತ್ತಿದ್ದಾರೆ ಅಂತ ಶಿಕ್ಷಕರು ಹೆಮ್ಮೆಯಿಂದ ಹೇಳ್ಳೋದನ್ನು ಕೇಳಿದ್ದೇನೆ. ಆಗೆಲ್ಲಾ ನನ್ನ ಶಾಲೆಯ ಬಗ್ಗೆ ನನಗೆ ತುಂಬಾ ಖುಷಿಯಾಗುತ್ತದೆ.

   ಬರೀ ಪಾಠದಲ್ಲಷ್ಟೇ ಅಲ್ಲ, ಆಟದಲ್ಲೂ ನಾವು ಮುಂದೆ. ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ, ಕಾನ್ವೆಂಟ್‌ ಮಕ್ಕಳನ್ನೆಲ್ಲ ಹಿಂದಿಕ್ಕಿ ಟ್ರೋಫಿ ಗೆದ್ದಿದ್ದೇವೆ. ಶಾಲೆಯ ಬಳಿಯೇ ಮೈದಾನವಿದ್ದು, ಅಲ್ಲಿಯೇ ಪ್ರ್ಯಾಕ್ಟೀಸ್‌ ಮಾಡುತ್ತೇವೆ. ಆ ಮೈದಾನದಲ್ಲಿ ಸಂಜೆ ಹೊತ್ತು ಊರಿನವರೆಲ್ಲ ಸೇರಿ ಕ್ರಿಕೆಟ್‌ ಆಡ್ತಾರೆ. ಅದರಲ್ಲಿ ಯಾರೋ ತುಂಟರು ನಮ್ಮ ಶಾಲೆಯ ಸ್ವತ್ತುಗಳನ್ನು ಹಾಳು ಮಾಡಿದ್ದಾರಂತೆ. ಹಾಗಂತ ಶಿಕ್ಷಕರು ಹೇಳ್ತಾ ಇದ್ರು. ಯಾಕಂದ್ರೆ, ನಮ್ಮ ಹೆಡ್‌ಮೇಷ್ಟ್ರು ದೇಣಿಗೆ ದುಡ್ಡಲ್ಲಿ ಹಾಕಿಸಿದ್ದ ನಲ್ಲಿಯನ್ನು ಯಾರೋ ಮುರಿದುಬಿಟ್ಟಿದ್ದಾರೆ. ಬೀಗ ಒಡೆಯುವ, ನಲ್ಲಿ ಮುರಿಯುವಂಥ ಕಿತಾಪತಿ ಆಗಾಗ ನಡೆಯುತ್ತಲೇ ಇರುತ್ತವೆ. ಶಾಲೆಯ ಸುತ್ತ ಕಾಂಪೌಂಡ್‌ ಇದ್ದರೂ, ಅದೂ ಅಲ್ಲಲ್ಲಿ ಹಾಳಾಗಿದೆ. ಸುಲಭವಾಗಿ ಅದನ್ನು ಹಾರಿ ಯಾರು ಬೇಕಾದರೂ ಒಳ ನುಸುಳಬಹುದು. ಹಾಗಾಗಿ ನಮ್ಮ ಶಾಲೆಯಲ್ಲೀಗ ನಲ್ಲಿಯಿಲ್ಲ. ಶೌಚಾಲಯಕ್ಕೆ ಬಕೆಟ್‌ನಲ್ಲಿ ನೀರು ಹೊತ್ತೂಯ್ಯಬೇಕು. ಊಟದ ನಂತರ ಕೈ ತೊಳೆಯುವ ಜಾಗದಲ್ಲಿಯೂ ನಲ್ಲಿ ಇಲ್ಲ.

  ನಮ್ಮ ಶಾಲೆಯಲ್ಲಿ ದಾನಿಗಳು ಕೊಟ್ಟ 6 ಕಂಪ್ಯೂಟರ್‌ಗಳಿವೆ. ಆದರೆ, ಅದನ್ನು ಕಲಿಯುವ ಭಾಗ್ಯ ನಮಗಿಲ್ಲ. ಯಾಕೆ ಅಂತೀರಾ? ನಮ್ಮ ಶಾಲೆಗೆ ವಿದ್ಯುತ್‌ ಸಂಪರ್ಕವೇ ಸರಿಯಾಗಿಲ್ಲ. ಮೂಲೆಯಲ್ಲಿ ಕುಳಿತ ಕಂಪ್ಯೂಟರ್‌ಗಳನ್ನು ನೋಡಿದಾಗೆಲ್ಲ, ಅದನ್ನು ಕಲಿಯುವ ಆಸೆಯಾಗುತ್ತೆ. ನಮ್ಮ ಶಾಲೆಗೂ ಕರೆಂಟ್‌ ಬಂದಂತೆ, ಕಂಪ್ಯೂಟರ್‌ ಕಲಿಸೋಕೆ ಒಬ್ಬರು ಶಿಕ್ಷಕರು ಬಂದಹಾಗೆ ಕನಸು ಕಾಣುತ್ತೇನೆ. ಈಗ ರಾಜಶೇಖರ್‌ ಸರ್‌, ವಸಂತ ಲಕ್ಷ್ಮಿ ಮಿಸ್‌, ವಿನೋದಾ ಮಿಸ್‌, ನಾಗಮಣಿ ಮಿಸ್‌, ಚಂದ್ರಕಲಾ ಮಿಸ್‌, ವೆಂಕಟಮುನಿ ಸರ್‌ ಇದ್ದಾರೆ. ಅವರೆಲ್ಲರೂ ಈ ಶಾಲೆಯ, ಮಕ್ಕಳ ಏಳಿಗೆಗಾಗಿ ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಾಸ್ತಿ ಅವರ ಸ್ಮಾರಕ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ.

  ಇದು ಕೇವಲ ನನ್ನೊಬ್ಬಳ ಹೆಮ್ಮೆಯ ಶಾಲೆಯಲ್ಲ. ನನ್ನ ಅಕ್ಕ, ಅಣ್ಣನೂ ಇದೇ ಶಾಲೆಯಲ್ಲಿ ಓದು ಮುಗಿಸಿ, ಈಗ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಅಪ್ಪ ಕೂಲಿ ಕೆಲಸಕ್ಕೆ, ಅಮ್ಮ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಅನ್ನೋದು ಅವರ ಆಸೆ. ಈ ಶಾಲೆಯಲ್ಲಿ ನನಗೆ ಬೇಕಾಗಿದ್ದೆಲ್ಲವೂ ಸಿಗುತ್ತಿದೆ. ಒಳ್ಳೆಯ ಪಾಠ, ಬಿಸಿಬಿಸಿ ಊಟ, ಪುಸ್ತಕ, ಹಾಲು, ಸಮವಸ್ತ್ರ, ಶೂ, ಸಾಕ್ಸ್‌... ಎಲ್ಲವನ್ನೂ ಕೊಡುತ್ತಾರೆ. ಶ್ವೇತಾ, ಯಶುಮತಿಯಂಥ ಕೆಲ ಗೆಳತಿಯರೂ ಕಾನ್ವೆಂಟ್‌ ಬಿಟ್ಟು ನಮ್ಮ ಶಾಲೆ ಸೇರಿದ್ದಾರೆ. ಕಾನ್ವೆಂಟ್‌ಗಿಂತ ಈ ಶಾಲೆಯೇ ಚೆನ್ನಾಗಿದೆ ಅಂತ ಅವರು ಹೇಳುವಾಗ, ಸೋರುವ ಹೆಂಚು, ನಲ್ಲಿಯಿರದ ಶೌಚಾಲಯ, ಕೆಲಸಕ್ಕೆ ಬಾರದ ಕಂಪ್ಯೂಟರ್‌ಗಳ ವಿಷಯ ಮರೆತೇಹೋಗುತ್ತದೆ.

  ನಮ್ಮ ನೋವು ಅದೇನೇ ಇರಲಿ, ಮಾಸ್ತಿಯಜ್ಜನ ಮೇಲಿನ ಪ್ರೀತಿ, ಸರ್ಕಾರಿ ಶಾಲೆಗಳ ಮೇಲಿನ ಅಭಿಮಾನವೇ ನಮ್ಮನ್ನು ಈ ಶಾಲೆಯಲ್ಲಿ ಇರುವಂತೆ ಮಾಡಿದೆ. ಈ ಕಡೆಗೆ ಬಂದಾಗ ನೀವೂ ನಮ್‌ ಶಾಲೆಗೆ ಬನ್ನಿ, ಪ್ಲೀಸ್‌...

 - ನಿರೂಪಣೆ: ಪ್ರಿಯಾಂಕಾ ಎನ್‌.
 -ಚಿತ್ರಗಳು- ಸಮನ್ವಯ: ಎಂ. ರವಿಕುಮಾರ್‌

Trending videos

Back to Top