CONNECT WITH US  

ಥ್ರಿಲ್ಲರ್ ಕಥೆಗಳು

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

1. ಮದುವೆಯಾಗಿ ಹೊಸಮನೆಗೆ ಹೋದ ಅವನಿಗೆ ಮನೆಗೆಲಸದ ಅಜ್ಜಿಯ ಮೇಲೇನೋ ಗುಮಾನಿ.ಆಕೆ ಕೆಲಸಕ್ಕೆ ಸೇರಿದ ದಿನದಿಂದಲೂ ತನ್ನ ವ್ಯಾಪಾರ ಕುಸಿದಿದೆ,ಆರೋಗ್ಯ ಹದಗೆಟ್ಟಿದೆ.ಆಕೆ ಮಾಟಗಾತಿಯಿರಬೇಕು ಎನ್ನುವ ಅವನ ಗುಮಾನಿಯನ್ನು ಪುಷ್ಟೀಕರಿಸಿದ ಗುರುಗಳು, "ನಿನ್ನ ಮನೆಯಲ್ಲೊಂದು ದುಷ್ಟಶಕ್ತಿ ಸೇರಿಕೊಂಡಿದೆ. ಈ ಲಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ನಡುರಾತ್ರಿಯಲ್ಲಿ ಆಕೆಯ ಮುಖ ನೋಡು. ಆಕೆ ಮಾಟಗಾತಿಯಾಗಿದ್ದರೆ ಅಸಲಿ ರೂಪ ಕಾಣುತ್ತದೆ' ಎಂದು ಮಂತ್ರಿಸಿದ ಲಿಂಬೆಹಣ್ಣನ್ನು ಕೊಟ್ಟರು. ಗುರುಗಳ ಮಾತಿನಂತೆ ನಡುರಾತ್ರಿ ಕೈಯಲ್ಲಿ ಲಿಂಬೆಯನ್ನು ಹಿಡಿದು ಅವನು ಕಳ್ಳನಂತೆ ಅಜ್ಜಿ ಮಲಗಿದ್ದ ಹಾಸಿಗೆಯತ್ತ ನೋಡಿದ. ಎಚ್ಚರವೇ ಇಲ್ಲದೇ ಮಲಗಿದ್ದ ಆಕೆಯ ಮುಖದಲ್ಲಿ ಏನೂ ಬದಲಾವಣೆಯಾಗಲಿಲ್ಲ. ಅದನ್ನು ಕಂಡು ನಿರಾಸೆಯಿಂದ "ಛೇ' ಎಂದ ಜೋರಾಗಿ. "ರೀ, ಏನಾಯ್ತು?' ಎನ್ನುತ್ತ ಹಿಂದಿನಿಂದ ಕೇಳಿದ ಮಡದಿಯ ಧ್ವನಿಯತ್ತ ತಿರುಗಿದರೆ, ಕೋರೆಹಲ್ಲುಗಳ, ಕೆಂಪು ಕಣYಳ, ಕಪ್ಪು ಮಾಟಗಾತಿಯೊಬ್ಬಳು ಕಾಣಿಸಿದಳು!

2. "ಇಲ್ಲೇ ಕುಳಿತಿರು. ಚಹಕ್ಕಾಗಿ ಹಾಲು ತರುತ್ತೇನೆ' ಎನ್ನುತ್ತ ಗೆಳತಿಯನ್ನು ಕೂರಿಸಿ ಮೆಟ್ಟಲಿಳಿದು ಹೋದವನಲ್ಲೊಂದು ವಿಲಕ್ಷಣ ಅನ್ಯಮನಸ್ಕತೆ. ಮನೆಯ ಎದುರಿಗಿನ ಅಂಗಡಿಯಲ್ಲಿ ಹಾಲು ಖರೀದಿಸಿ, ಮಹಡಿಯ ಮೆಟ್ಟಿಲೇರಿ ವಾಪಸಾಗುವಷ್ಟರಲ್ಲಿ ಕೋಣೆಯಿಂದ "ಮ್ಯಾವ್‌' ಎಂದು ಬೆಕ್ಕು ಅರಚಿದ ಸದ್ದು. ಜಿಗಿಜಿಗಿದು ಮೆಟ್ಟಿಲೇರಿ ಕೋಣೆಗೆ ತೆರಳಿದರೆ ನಗುತ್ತ ಕುಳಿತಿದ್ದ ಗೆಳತಿ, "ಎಷ್ಟು ಚಂದದ ಕಪ್ಪು ಬೆಕ್ಕು. ಮುಟ್ಟೋಕೆ ಹೋದರೆ ಕೈ ಪರಚಿ ಓಡಿ ಹೋಯ್ತು' ಎನ್ನುತ್ತ ಕೆಂಪಗಾಗಿದ್ದ ಕೈಗಳನ್ನು ಸವರಿಕೊಂಡಳು. ಆಕೆಯ ಮಾತು ಕೇಳಿ ಅವನ ಕೈಗಳಲ್ಲಿದ್ದ ಹಾಲಿನ ಪೊಟ್ಟಣ ಬಿದ್ದುಹೋಗಿತ್ತು. ಕುಸಿದು ಕುಳಿತವ, ಸಣ್ಣಗೆ ನಡಗುತ್ತ, "ಅಯ್ಯೋ, ವರ್ಷದ ಹಿಂದೆ  ಕಣ್ತಪ್ಪಿನಿಂದಾಗಿ ನನ್ನ ಕಾರಿನ ಚಕ್ರಕ್ಕೆ ಸಿಲುಕಿ ಸತ್ತು ಹೋದ ಬೆಕ್ಕು ಅದು. ಸತ್ತ ನಂತರ ನನ್ನ ಮೂವರು ಆತ್ಮೀಯರಿಗೆ ಅದು ಕಾಣಿಸಿಕೊಂಡಿದೆ. ಅದು ಕಾಣಿಸಿದ ದಿನವೇ ಅವರೆಲ್ಲ ಸತ್ತು ಹೋಗಿದ್ದಾರೆ..' ಎಂದು ಹೇಳಿ ಮುಗಿಸುವಷ್ಟರಲ್ಲಿ ಕೋಣೆಯಲ್ಲಿದ್ದ ಸೀಲಿಂಗ್‌ ಫ್ಯಾನ್‌ ಆಕೆಯ ತಲೆಯ ಮೇಲೆ ಬಿತ್ತು! 

ಗುರುರಾಜ ಕೊಡ್ಕಣಿ,ಯಲ್ಲಾಪುರ

Trending videos

Back to Top