CONNECT WITH US  

ಕ್ರೀಡಾ ಸಂಸ್ಕೃತಿಯೇ ಇಲ್ಲದಿದ್ದರೆ ಕ್ರೀಡೆ ಇದ್ದರೇನು?ಇಲ್ಲದಿದ್ದರೇನು?

ನೂರಾರು ವರ್ಷಗಳ ಪರಿಶ್ರಮದಿಂದ ಬೆಳೆದು ನಿಲ್ಲುವ ಸಂಸ್ಕೃತಿಯ ಕೊರತೆಗೆ ಭಾರತೀಯ ಕ್ರೀಡೆ ಬಲಿ

ಸಂಸ್ಕೃತಿಯ ಬಗ್ಗೆ ಭಾರತದಲ್ಲಿ ಯಾರಿಗೆ ಗೊತ್ತಿಲ್ಲ? ಬಹುತೇಕರು ಸಂಸ್ಕೃತಿಯ ಕುರಿತು ಗೊಣಗುತ್ತಲೋ, ಹೊಗಳುತ್ತಲೋ ಇರುತ್ತಾರೆ. ಸಂಸ್ಕೃತಿ ಎನ್ನುವ ಪದ ಈ ದೇಶದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಸಂಸ್ಕೃತಿ ನೂರಾರು, ಸಾವಿರಾರು ವರ್ಷಗಳ ಸಂಸ್ಕಾರದಿಂದ ರೂಪುಗೊಳ್ಳುತ್ತದೆ. ಅದು ದಿಢೀರ್‌ ಕಟ್ಟಿಕೊಂಡು ನಿಲ್ಲುವ ಪವಾಡವಲ್ಲ. ಅದಕ್ಕಾಗಿ ಸಾಮೂಹಿಕ, ಸಂಘಟಿತ, ಸಂಸ್ಕರಿತ ಯತ್ನ ಬೇಕು.
ಭಾರತದ ಕ್ರೀಡಾ ಜಗತ್ತಿನಲ್ಲಿ ಕ್ರೀಡಾ ಸಂಸ್ಕೃತಿಯೊಂದು ರೂಪುಗೊಂಡಿದೆಯೇ? ಈ ದೇಶದ ಜನಜೀವನದಲ್ಲಿ ಕ್ರೀಡಾ ಸಂಸ್ಕಾರ ಹಾಸು ಹೊಕ್ಕಾಗಿದೆಯೇ ಎಂದರೆ ಇಂದಿಗೂ ಇಲ್ಲವೆಂದು ಹೇಳಬೇಕಾಗುತ್ತದೆ. ಭಾರತದಲ್ಲಿ ಕ್ರಿಕೆಟ್‌ ಸಂಸ್ಕೃತಿಯಿದೆ, ಕ್ರಿಕೆಟ್‌ಗಾಗಿ ಎಲ್ಲವನ್ನೂ ತ್ಯಾಗ ಮಾಡಬಲ್ಲ ವ್ಯಕ್ತಿಗಳಿದ್ದಾರೆ. ಇಡೀ ದೇಶದಲ್ಲೇ ಇಂತಹದೊಂದು ಪರಂಪರೆ ಕ್ರಿಕೆಟ್‌ ಜನಪ್ರಿಯವಾದ ನಂತರ ಬೆಳೆಯುತ್ತಲೇ ಬಂದಿದೆ. 

ಬಾಲ್ಯದಲ್ಲೇ ಬೇರೆಲ್ಲ ಕ್ರೀಡೆಗಳನ್ನೂ ಬಿಟ್ಟು ಅಷ್ಟೂ ಮಕ್ಕಳು ಕ್ರಿಕೆಟ್‌ ಮಾತ್ರ ಆಡಿಕೊಂಡು ಕಾಲ ಕಳೆಯುವ, ತಮ್ಮಷ್ಟಕ್ಕೆ ತಾವೇ ನೂರಾರು ಕ್ರಿಕೆಟ್‌ ಕೂಟಗಳನ್ನು ಹಳ್ಳಿಗಳ ಮಟ್ಟದಲ್ಲಿ ನಡೆಸುತ್ತಲೇ ಇರುವ ಪರಂಪರೆ ಎದ್ದು ನಿಂತಿದೆ. ಇದು ಭಾರತದಲ್ಲಿ ಜಗದ್ವಿಖ್ಯಾತ ಕ್ರಿಕೆಟ್‌ ತಾರೆಗಳನ್ನು ರೂಪಿಸಿದೆ. ಅಂದು ಸುನೀಲ್‌ ಗಾವಸ್ಕರ್‌, ಕಪಿಲ್‌ದೇವ್‌, ಆಮೇಲೆ ಸಚಿನ್‌ ತೆಂಡುಲ್ಕರ್‌, ಈಗ ವಿರಾಟ್‌ ಕೊಹ್ಲಿ...ಇದು ಅವ್ಯಾಹತವಾಗಿ ಸಾಗಿದೆ. ಕ್ರಿಕೆಟ್‌ನಲ್ಲಿ ದೇವರ ಪಟ್ಟಕ್ಕೆ ಭಾರತದಲ್ಲಿ ಎಂದೂ ಕೊರತೆಯಾಗಿಲ್ಲ. ಇದೇ ವಿಚಾರ ಉಳಿದ ಕ್ರೀಡೆಗಳ ಕುರಿತು ಹೇಳಲು ಸಾಧ್ಯವೇ ಇಲ್ಲ. 

ಕ್ರಿಕೆಟ್‌ಗಿಂತ ಮುನ್ನ ಜನಪ್ರಿಯವಾಗಿದ್ದ, ಧ್ಯಾನ್‌ಚಂದ್‌ರಂತಹ ದೇವರನ್ನು ಹುಟ್ಟು ಹಾಕಿದ್ದ ಹಾಕಿ ಕ್ರೀಡೆ ಭಾರತದಲ್ಲಿ 1970ರ ನಂತರ ಅಧ ಃಪತನದತ್ತ ಸಾಗಿದೆ. ಈಗ ಸರ್ವಶಕ್ತಿ ವಿನಿಯೋಗಿಸಿ ಅದನ್ನು ಮೇಲೆತ್ತಲು ಯತ್ನಿಸುತ್ತಿದ್ದರೂ ಆ ಕ್ರೀಡೆಗೆ 6ನೇ ಶ್ರೇಯಾಂಕ ಬಿಟ್ಟು ಮೇಲೇರಲು ಸಾಧ್ಯವಾಗಿಲ್ಲ. ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಎಲ್ಲೆಂದರಲ್ಲಿ ಸೋಲುತ್ತಲೇ ಇದೆ. ಇದಕ್ಕೆ ಕಾರಣ ಹಾಕಿ ಸಂಸ್ಕೃತಿ ನಾಶವಾಗಿದ್ದು. ಅಂದರೆ ದೇಶದಲ್ಲೆಲ್ಲ ಇದ್ದ ಹಾಕಿ ಕಾಲಕ್ರಮೇಣ ಪಂಜಾಬ್‌, ಹರ್ಯಾಣ ಮತ್ತು ಕೊಡಗುಗೆ ಮಾತ್ರ ಸೀಮಿತವಾಯಿತು. ಈಗಲೂ ಭಾರತೀಯ ಹಾಕಿ ತಂಡದಲ್ಲಿ ಹುಡುಕಿದರೆ ಪಂಜಾಬ್‌ನವರೇ ಶೇ.90ರಷ್ಟು ಇರುತ್ತಾರೆ. ಇನ್ನು ಕರ್ನಾಟಕದ ಕೊಡಗುವಿನಿಂದ ಎಲ್ಲೋ ಒಂದಿಬ್ಬರು ಇದ್ದೇ ಇರುತ್ತಾರೆ. ಉಳಿದಂತೆ ಈಶಾನ್ಯ ರಾಜ್ಯದಿಂದ ಅಚಾನಕ್‌ ಒಬ್ಬರು ಕಾಣುತ್ತಾರೆ. ಉಳಿದ ರಾಜ್ಯಗಳಿಂದ ಪ್ರತಿಭೆಗಳು ಬರದಿದ್ದರೆ, ಅದು ಸರ್ವವ್ಯಾಪಿಯಾಗಿದ್ದರೆ ಆ ಕ್ರೀಡೆಯಲ್ಲಿ ಅದ್ಭುತ ಸಾಧನೆ ದಾಖಲಾಗುವುದಾದರೂ ಹೇಗೆ? 

ಒಂದು ಕಾಲದಲ್ಲಿ ದೇವರನ್ನು ಹುಟ್ಟು ಹಾಕಿದ್ದ ಹಾಕಿಯದ್ದೇ ಇಂತಹ ಸ್ಥಿತಿಯಾಗಿದ್ದರೆ ಅಥ್ಲೆಟಿಕ್ಸ್‌, ಫ‌ುಟ್‌ಬಾಲ್‌, ಟೆನಿಸ್‌, ಕುಸ್ತಿ, ಬಾಕ್ಸಿಂಗ್‌, ಸ್ಕೇಟಿಂಗ್‌, ಬ್ಯಾಡ್ಮಿಂಟನ್‌ ಇವುಗಳ ಕಥೆಯೇನು? ಇತ್ತೀಚೆಗಿನ ವರ್ಷಗಳಲ್ಲಿ ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ಟೆನಿಸ್‌ ಸ್ವಲ್ಪ ಚಿಗಿತುಕೊಂಡಿದ್ದವು.
 
ಬಾಕ್ಸಿಂಗ್‌ ಜನಪ್ರಿಯವಾಗಿ ಅಲ್ಲಿಂದ ಅತ್ಯುತ್ತಮ ತಾರೆಯರು ಹೊರಬರುತ್ತಿದ್ದಾರೆ ಎಂಬ ಭರವಸೆ ಹುಟ್ಟಿದ್ದಾಗಲೇ, ವಿಜೇಂದರ್‌ ಸಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದಾಗಲೇ, ಮೇರಿಕೋಮ್‌ 5, ಸರಿತಾ ದೇವಿ 2 ವಿಶ್ವಚಾಂಪಿಯನ್‌ಶಿಪ್‌ ಗೆದ್ದು ಸಂಭ್ರಮದಲ್ಲಿದ್ದಾಗಲೇ ಅಲ್ಲೊಂದು ನಿರಾಶೆಯ ಟಿಸಿಲು ಪತ್ತೆ. ಮುಂದೆ ವಿಜೇಂದರ್‌ ವೃತ್ತಿಪರ ಬಾಕ್ಸಿಂಗ್‌ಗೆ ಹೊರಳಿಕೊಂಡರು. ಮೇರಿ, ಸರಿತಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಶಿವಥಾಪಾ, ಗೌರವ್‌ ಸೋಲಂಕಿಯಿಂದ ಮಹತ್ವದ ಸಾಧನೆಯಾಗಿಲ್ಲ. ಸದ್ಯದ ಭರವಸೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚು ಗೆದ್ದಿರುವ  ವಿಕಾಸ್‌ ಕೃಷ್ಣನ್‌ ಮಾತ್ರ. ಬಾಕ್ಸಿಂಗ್‌ ಸಂಸ್ಥೆಯಲ್ಲಿನ ಒಳಜಗಳ ಅದರ ಬೆಳವಣಿಗೆಯನ್ನು ನಾಶ ಮಾಡಿತು.

ಕುಸ್ತಿಯಲ್ಲಿ ಆಟಗಾರರ ನಡುವೆಯೇ ಅಸೂಯೆ ಮೂಡಿ ಅದು ಹಾಳಾಗಿ ನಿಂತಿದೆ. ಇದನ್ನು ಸರಿಪಡಿಸಬೇಕಾದ ಕುಸ್ತಿ ಸಂಸ್ಕೃತಿ ಇಲ್ಲದಿರುವುದರಿಂದ ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ. ವಿನೇಶ್‌ ಫೊಗಾಟ್‌, ಭಜರಂಗ್‌ ಚಿನ್ನ ಗೆದ್ದಿದ್ದಾರೆ. ಬಂಗಾರವನ್ನೇ ಗೆಲ್ಲಬಹುದೆಂದು ನಿರೀಕ್ಷಿಸಲಾಗಿದ್ದ ಸಾಕ್ಷಿ ಮಲಿಕ್‌ ಕಾಮನ್‌ವೆಲ್ತ್‌, ಏಷ್ಯಾಡ್‌ ಎರಡರಲ್ಲೂ ವಿಫ‌ಲವಾಗಿದ್ದಾರೆ. 

ಟೆನಿಸ್‌ನಲ್ಲಿ ಭಾರತಕ್ಕೆ ಭವಿಷ್ಯವೇನೆಂದು ಗೊತ್ತಿಲ್ಲ. ಪೇಸ್‌ಗೆ ನಿವೃತ್ತಿ ಅನಿವಾರ್ಯವಾಗಿದೆ. ಮಹೇಶ್‌ ಭೂಪತಿ ನಿವೃತ್ತಿಯಾಗಿ ವರ್ಷಗಳೇ ಕಳೆದಿವೆ. 8 ತಿಂಗಳ ಗರ್ಭಿಣಿ ಸಾನಿಯಾ ಮಿರ್ಜಾ ಮತ್ತೆ ಟೆನಿಸ್‌ ಆಡಿದರೂ ಮಹತ್ವದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಜಾಗದಲ್ಲಿ ಕಾಣಿಸಿಕೊಂಡಿರುವ ಸಾಕೇತ್‌ ಮೈನೇನಿ, ರಾಮಕುಮಾರ್‌ ರಾಮನಾಥನ್‌, ರೋಹನ್‌ ಬೋಪಣ್ಣ, ದಿವಿಜ್‌ ಶರಣ್‌, ಅಂಕಿತಾ ರೈನಾ ಇವರಲ್ಲಿ ರೋಹನ್‌ ಬೋಪಣ್ಣ ಮಾತ್ರ ಪರವಾಗಿಲ್ಲ ಎನ್ನಿಸಿಕೊಂಡಿದ್ದಾರೆ. ಅದೂ ಡಬಲ್ಸ್‌ನಲ್ಲಿ. ಸಿಂಗಲ್ಸ್‌ನಲ್ಲಿ ಇವರು ಯಾರೂ ನಿರೀಕ್ಷೆಯ ಹತ್ತಿರವೂ ಸುಳಿದಿಲ್ಲ. 

ಬ್ಯಾಡ್ಮಿಂಟನ್‌ನಲ್ಲಿ ವಿಶ್ವಶ್ರೇಷ್ಠ ಆಟಗಾರರು ತಯಾರಾಗಿದ್ದಾರೆ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌ ಇವರೆಲ್ಲ ವಿಶ್ವದ ಎಲ್ಲ ತಾರೆಯರಿಗೆ ಸವಾಲಾಗಿ ನಿಂತಿದ್ದಾರೆ. ಇಲ್ಲಿರುವ ದೊಡ್ಡ ತೊಡಕೆಂದರೆ ಈ ಆಟಗಾರರೆಲ್ಲ ತಯಾರಾಗಿರುವುದು ಹೈದ್ರಾಬಾದ್‌ನ ಗೋಪಿಚಂದ್‌ ಅಕಾಡೆಮಿಯಲ್ಲಿ. ಅಂದರೆ ಬರೀ ಹೈದ್ರಾಬಾದ್‌ ಮಾತ್ರ ದೇಶದ ತಾರೆಯರನ್ನು ರೂಪಿಸುತ್ತಿದೆ. ಒಂದು ಕ್ರೀಡೆ ಹೀಗೆ ಒಂದು ಪ್ರಾಂತ್ಯಕ್ಕೆ ಸೀಮಿತವಾದರೆ ಅದರಿಂದ ಶಾಶ್ವತವಾದ ಸಾಧನೆ ಸಾಧ್ಯವೇ ಇಲ್ಲ. 

ವೇಟ್‌ಲಿಫ್ಟಿಂಗ್‌ ಭಾರತಕ್ಕೆ ಒಲಿಂಪಿಕ್ಸ್‌ನಲ್ಲೂ ಪದಕ ತಂದುಕೊಟ್ಟ ಕ್ರೀಡೆ. ಅದರ ಪ್ರಭಾವ ಈ ಬಾರಿಯ ಏಷ್ಯಾಡ್‌ನ‌ಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇವುಗಳೆಲ್ಲ ಹೇಳುವುದೇನೆಂದರೆ ಸತತವಾಗಿ ಉತ್ತಮ ಫ‌ಲಿತಾಂಶ ಕೊಡುವಂತಹ ಒಂದು ಸಂಸ್ಕೃತಿ, ಒಂದು ಮನೋಭಾವ ಇಲ್ಲಿ ಇಲ್ಲ ಎನ್ನುವುದು. ಕ್ರೀಡೆಯನ್ನೇ ಉಸಿರಾಡುವ, ಕ್ರೀಡೆಗಾಗಿ ಬಾಳುವ ಸಂಸ್ಕೃತಿಯೊಂದು ಇಲ್ಲದಿದ್ದರೆ ಹೀಗಾಗುತ್ತದೆ. ಈ ಸಂಸ್ಕೃತಿ ದೇಶದ ಉನ್ನತ ಶಕ್ತಿಕೇಂದ್ರಗಳಿಂದ ಹಿಡಿದು ತಳಮಟ್ಟದವರೆಗೂ ಕಾಣಿಸಿಕೊಳ್ಳಬೇಕು. ಹಲವು ವರ್ಷಗಳು ಅದು ನಮ್ಮ ಮನೋಭೂಮಿಕೆಯಲ್ಲಿ ಬೇರುಬಿಟ್ಟರೆ ಅದು ಮಾಗುತ್ತದೆ, ಫ‌ಲವಾಗುತ್ತದೆ, ದೇಶದ ಸವಿಯಾಗುತ್ತದೆ. ಅಂತಹದೊಂದು ಸವಿ ಈ ದೇಶಕ್ಕೆ ಬೇಡವೇ?

ನಿರೂಪ


Trending videos

Back to Top