CONNECT WITH US  

ಸಂಸ್ಕೃತಿ ಸಂಪನ್ನ ಆಭರಣಗಳು

ಹೆಣ್ಣು ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ಭಾರತಾಂಬೆ. ಆ ಲಕ್ಷಣವಾದಂತಹ ಮೊಗವನ್ನು ನೋಡುತ್ತ ಇದ್ದರೆ ಮನಸ್ಸಿಗೆ ನೆಮ್ಮದಿ. ಪುರಾಣಕಾಲದ ಲಕ್ಷ್ಮೀ, ಸರಸ್ವತೀ, ಪಾರ್ವತೀ ಮುಂತಾದ ಹೆಣ್ಣುದೇವರನ್ನು ನೋಡಿದಾಗ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಆಭರಣಗಳು ಯಾವುವು ಎಂದು ತಿಳಿಯುತ್ತದೆ. 

 ಸಿಂಧೂರವೆಂದರೆ ಕುಂಕುಮ, ಬೊಟ್ಟು ಎಂದರ್ಥ.ಹಣೆಗೆ ಇಡುವ ಈ ಸಿಂಧೂರವು ಹೆಣ್ಣಿನ ಮುಖದ ಅಂದವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಏಕಾಗ್ರತೆಯ ಮೂಲವು ಹಣೆಯ ಮಧ್ಯೆ ಇರುವುದರಿಂದ ಈ ಕುಂಕುಮ ಹಚ್ಚುವಾಗ ಆಗುವ ಸ್ಪರ್ಶದಿಂದ ಏಕಾಗ್ರತೆಗೆ ಮೂಲವಾಗುತ್ತದೆ ಎಂದು ಪ್ರತೀಕವಿದೆ. ಕನ್ನಡ ಬಾವುಟದ ಬಣ್ಣವೂ ಹಳದಿ, ಕೆಂಪಾಗಿ ಮಾರ್ಪಾಡಾಗಿದೆ. ಇದು ಭಾರತೀಯ ಅರಿಶಿಣ ಮತ್ತು ಕುಂಕುಮ ಎಂಬುದು ಸೂಚಿಸಲ್ಪಡುತ್ತದೆ. 

ಕುಂಕುಮವನ್ನು ಮದುವೆಯ ನಂತರದಲ್ಲಿ ಸಾಮಾನ್ಯವಾಗಿ ಹೆಂಗಸರು ತನ್ನ ತಾಳಿಗೂ ಹಚ್ಚಿಕೊಳ್ಳುತ್ತಾರೆ. ತಾಳಿ ಭಾಗ್ಯ ಸ್ಥಿರವಾಗಿ ಉಳಿಯಲಿ ಎಂಬುದು ಆಶಯ. ಸಿಂಧೂರ ಎಂದರೆ ಮುತ್ತೈದೆಯ ಸಂಕೇತ.
ಕೆಲವೊಂದು ಕೆಮಿಕಲ್‌ಗ‌ಳನ್ನು ಮಿಶ್ರ ಮಾಡಿ ಕುಂಕುಮವನ್ನು ತಯಾರಿಸುತ್ತಾರೆ. ಇದು ನಮ್ಮ ಚರ್ಮಕ್ಕೆ ಅಲರ್ಜಿ ತರುವ ಸಾಧ್ಯತೆ ಇರುತ್ತವೆ. ಹಾಗಾಗಿ, ಇತ್ತೀಚೆಗಿನ ದಿನಗಳಲ್ಲಿ ಸಿಂಧೂರವನ್ನು ಹಚ್ಚಲು ಕೆಲವು ಹೆಣ್ಣುಮಕ್ಕಳು ಹಿಂಜರಿಯುತ್ತಾರೆ.

ಮೂಗುತಿ ಹೆಣ್ಣಿನ ಮೂಗಿನ ಅಂದವನ್ನು ಹೆಚ್ಚಿಸುತ್ತದೆ. ಬೊಟ್ಟು, ರಿಂಗ್‌ ಮುಂತಾದ ನಾನಾ ರೀತಿಯ ಗಾತ್ರಗಳಲ್ಲಿ ಸಿಗುವ ಈ ಮೂಗುತಿಯು ಇದೀಗ ಫ್ಯಾಶನ್‌ ಲೋಕವನ್ನು ಪ್ರವೇಶಿಸಿದೆ. ಯಾವ ದಿರಿಸಿಗೆ ಯಾವ ಬಣ್ಣ ಮೂಗುತಿಗಳು ಬೇಕಾದರೂ ದೊರೆಯುತ್ತವೆ.ಮರಾಠಿ ಸಂಸ್ಕೃತಿಯ ಜನರು ದೊಡ್ಡದಾದ ರಿಂಗ್‌ ಅನ್ನು ಧರಿಸುತ್ತಾರೆ. ಹೆಣ್ಣಿನ ಋತುಸ್ರಾವದ ದಿನಗಳಲ್ಲಿ ಆಗುವ ನೋವನ್ನು ಈ ಮೂಗುತಿಯು ಮೂಗಿನ ನರದ ಮಿಡಿತದಿಂದ ನಿಯಂತ್ರಿಸುತ್ತದಂತೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹನ್ನೊಂದು ಅಥವಾ ಹನ್ನೆರಡನೆಯ ವರ್ಷದಲ್ಲಿ ಈ ಮೂಗುತಿಯನ್ನು ಚುಚ್ಚಿಸಿದರೆ ಇನ್ನೂ ಎಳೆ ಚರ್ಮ ಇರುವುದರಿಂದ ಅಷ್ಟು ನೋವಾಗುವುದಿಲ್ಲ, ಮದುವೆಯ ನಂತರ ಚುಚ್ಚಿಸುವುದೆಂದರೆ, ಗಂಡನ ಕಾಲಮೇಲೆ ಕುಳಿತುಕೊಂಡು ಹೆಂಡತಿಯಾದವಳು ಚುಚ್ಚಿಸಿಕೊಳ್ಳಬೇಕು ಎಂಬುದು ಒಂದು ಸಂಪ್ರದಾಯ.

ಕಿವಿಯನ್ನು ಮಗುವಿರುವಾಗಲೇ ಚುಚ್ಚಿಸುತ್ತಾರೆ. ಈ ಕಿವಿಯೋಲೆಗಳಲ್ಲೂ ತುಂಬಾ ವಿಧಗಳಿವೆ. ಜುಮುಕಿ, ಹ್ಯಾಂಗಿಂಗ್‌, ಟಿಕ್ಕಿ- ಹೀಗೆ. ಬಂಗಾರ, ಬೆಳ್ಳಿ, ವಜ್ರ, ಮುತ್ತು, ಪಚ್ಚೆ ಹೀಗೆ ನೂರಾರು ರೀತಿಯಲ್ಲಿ  ಮಾರುಕಟ್ಟೆಗಳಲ್ಲಿ ಲಭಿಸುತ್ತವೆ. 

ಕಿವಿಯಿಂದ ತಲೆಯ ಕೂದಲಿಗೆ ನೆಂಟನ್ನು ಬೆಳೆಸುವ ಆಭರಣವನ್ನು "ಮಾಟಿ' ಎನ್ನುತ್ತೇವೆ. ವಿವಿಧ ಸಮಾರಂಭಗಳಲ್ಲಿ ಧರಿಸುವ ಮಾಟಿಯು ಸೀರೆ, ಲೆಹಂಗಾ, ಗಾಗ್ರಾಗಳಿಗೆ ತುಂಬಾ ಒಪ್ಪುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ  ಕ್ವಿಲ್ಲಿಂಗ್‌ ಪೇಪರ್‌ಗಳೆಂಬ ಬಣ್ಣದ ಪೇಪರ್‌ಗಳಿಂದ ಎಲ್ಲರೂ ಸ್ವತಃ ಕಿವಿಯೋಲೆಗಳನ್ನು ತಯಾರಿಸುತ್ತಿದ್ದಾರೆ. ಇದೊಂದು ಹವ್ಯಾಸ. ಅಲ್ಲದೆ ಹೀಗೆ ತಯಾರಿಸಿದ ಕಿವಿಯೋಲೆಗಳನ್ನು ಮಾರಾಟ ಕೂಡ ಮಾಡಿ ಪಾಕೆಟ್‌ ಮನಿಯನ್ನು ಗಳಿಸಿಕೊಳ್ಳುವವರೂ ಇದ್ದಾರೆ.

ಕಿವಿಯೋಲೆ ಧರಿಸುವುದರಿಂದ ಬುದ್ಧಿಶಕ್ತಿ ಜಾಸ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಇದರಿಂದ ಮಾತಿನ ಮೇಲೆ  ಹಿಡಿತವೂ ಇರುತ್ತದಂತೆ. 
"ಝಣ ಝಣ' ಎಂದು ಶಬ್ದ ಮಾಡುವ ಬಳೆಗಳು ಮನಸ್ಸಿಗೆ ಸಂತೋಷವನ್ನು ತರುತ್ತವೆೆ. ಬಳೆಗಳು ಕೈಯಲ್ಲಿದ್ದರೆೆ ಅವುಗಳು ಚರ್ಮಕ್ಕೆ ಸ್ಪರ್ಶಿಸುವುದರಿಂದ ನರಗಳ ಆರೋಗ್ಯಕ್ಕೂ ಅದು ಉತ್ತಮ. ಬಳೆಗಳಲ್ಲೂ ನಾನಾ ರೀತಿಯ ಬಳೆಗಳಿವೆ. ಮೆಟಲ… ಬಳೆಗಳು, ಗಾಜಿನ ಬಳೆಗಳು, ಚಿನ್ನ ಹಾಗೂ ಬೆಳ್ಳಿಯ ಬಳೆಗಳು- ಹೀಗೆ ಹಲವಾರು ರೀತಿಯ ಬಳೆಗಳಿವೆ. ಅಲ್ಲದೆ ಈಗಿನ ಫ್ಯಾಶನ್‌ ಯುಗದಲ್ಲಿ ತರಹೇವಾರಿ ಫ್ಯಾಶನೇಬಲ್‌ ಬಳೆಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಕಾಲಿನಲ್ಲಿ ಕಿಣಿಕಿಣಿ ಶಬ್ದ ಮಾಡುವ ಗೆಜ್ಜೆಗಳಂದರೆ ಹೆಂಗಳೆಯರಿಗೆ ಬಲು ಪ್ರೀತಿ. ಗೆಜ್ಜೆಗಳು ಕಾಲಿಗೆ ಸ್ಪರ್ಶಿಸುವುದರಿಂದ ಕಾಲಿನ ಮೂಳೆಗಳು ದೃಢವಾಗುತ್ತದೆ. ಅವುಗಳ ಧ್ವನಿಯಿಂದ ಬರುವ ಶಬ್ದದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ದೇಹ ಮತ್ತು ಮನಸ್ಸುಗಳು ಉಲ್ಲಾಸದಿಂದಿರಲು ಗೆಜ್ಜೆಗಳು ಕಾರಣವಾಗಿದೆ. ಯಾವ ರೀತಿ ವಿನ್ಯಾಸಗಳು ಬೇಕೋ ಆ ರೀತಿಯಲ್ಲಿ ಸಿಗುವ ಗೆಜ್ಜೆಯು ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಲ್ಲಿಯೂ ಇರುತ್ತದೆ. ಮದುಮಗಳ ಕಾಲಿನಲ್ಲಿ ಈ ಗೆಜ್ಜೆಯು ಮೆಹೆಂದಿಯ ಜೊತೆಗೆ ಕಾಲಿನ ಅಂದವನ್ನೂ ಹೆಚ್ಚಿಸುತ್ತದೆ.

ಹರ್ಷಿತಾ. ಎ. ಬಿ. 
ದ್ವಿತೀಯ ಪತ್ರಿಕೋದ್ಯಮ, ಎಸ್‌ಡಿಎಂ ಕಾಲೇಜು, ಉಜಿರೆ

Trending videos

Back to Top