ಅಸ್ಸಾಂನ ಆನೆ ‘ಬಿನ್‌ ಲಾದನ್‌’ ಇನ್ನಿಲ್ಲ

Team Udayavani, Nov 18, 2019, 1:15 AM IST

ಗುವಾಹಾಟಿ: ಮದವೇರಿ ದಾಂಧಲೆ ಎಬ್ಬಿಸಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿ, ಕೊನೆಗೂ ಸೆರೆಸಿಕ್ಕಿದ್ದ ಅಸ್ಸಾಂನ ಆನೆ ‘ಬಿನ್‌ ಲಾದನ್‌’ ರವಿವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ನ.11ರಂದು ಗೋಲ್‌ಪಾರಾ ಜಿಲ್ಲೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ, ಬಿನ್‌ ಲಾದನ್‌ ಹೆಸರಿನ 35 ವರ್ಷದ ಸಲಗವನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಅನಂತರ ಅದನ್ನು ಒರಾಂಗ್‌ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಗಿತ್ತು.

ಸೆರೆಸಿಕ್ಕ ಅನಂತರ ಸ್ಥಳೀಯರು ಈ ಆನೆಗೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದರು. ಆರಂಭದಲ್ಲಿ ಆನೆಯನ್ನು ದಟ್ಟಾರಣ್ಯದಲ್ಲಿ ಬಿಡಲು ಯೋಚಿಸಲಾಗಿತ್ತು. ಆದರೆ, ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಅದನ್ನು ವಶದಲ್ಲಿರಿಸಿಕೊಳ್ಳಲು ನಿರ್ಧರಿಸಲಾಯಿತು. 6-7 ವರ್ಷದ ಆನೆಗಳನ್ನಷ್ಟೇ ಸಾಮಾನ್ಯವಾಗಿ ವಶದಲ್ಲಿ ಇರಿಸಲಾಗುತ್ತದೆ. ಇದಕ್ಕೆ 35 ವರ್ಷಗಳಾಗಿರುವ ಕಾರಣ ಸೆರೆಯಲ್ಲಿಡುವ ನಿರ್ಧಾರದ ಕುರಿತು ವನ್ಯಜೀವಿ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದೀಗ ರವಿವಾರ ಬೆಳಗ್ಗೆ 5.30ರ ಸುಮಾರಿಗೆ ಆನೆ ಅಸುನೀಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ