ಎಂ.ಟಿ.ರಚಿಸಿದ ಮರಾಠಿ ಯಕ್ಷಗಾನ ಪ್ರಸಂಗಗಳು

Team Udayavani, Jun 14, 2019, 5:00 AM IST

ಯಕ್ಷಗಾನಕ್ಕೆ ಭಾಷಾಬಂಧನವಿಲ್ಲ. ಕನ್ನಡ ಭಾಷೆಗಷ್ಟೇ ಸೀಮಿತವಾಗಿದ್ದ ಯಕ್ಷಗಾನ ಪ್ರಸಂಗ ಪ್ರದರ್ಶನಗಳು ಇಂದು ತುಳು, ಮಲಯಾಳಂ, ಹಿಂದಿ, ಕೊಂಕಣಿ, ಹವ್ಯಕ,ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಿಗೂ ವಿಸ್ತರಿಸಿದೆ. ಈ ದಿಸೆಯಲ್ಲಿ ಇನ್ನೊಂದು ಪ್ರಯತ್ನ ಮರಾಠಿ ಭಾಷೆಯ ಯಕ್ಷಗಾನ.

ಮರಾಠಿ ಭಾಷೆಯ ಮೊದಲ ಯಕ್ಷಕವಿ ಮುಂಬಯಿಯ ಎಂ.ಟಿ.ಪೂಜಾರಿ. ಮೂಲತಃ ಉಡುಪಿ ಜಿಲ್ಲೆಯ ಬೈಲೂರಿನವರಾದ ಎಂ.ಟಿ.ಪೂಜಾರಿಯವರು ಬದುಕು ಕಟ್ಟಿಕೊಳ್ಳಲು ಮುಂಬಯಿಗೆ ತೆರಳಿದರು. ಮುಂಬಯಿಗೆ ಪ್ರಯಾಣಿಸುವಾಗ ಕಡಲತೀರದ ಯಕ್ಷಗಾನದ ಗಾಳಿಯನ್ನೇ ಉಸಿರಾಡುತ್ತಾ ಹೋದ ಪೂಜಾರಿಯವರು ಅಲ್ಲಿಯೂ ಯಕ್ಷಮಾತೆಯ ಪೂಜೆ ಕೈಗೊಂಡರು. ಅದರ ಪರಿಣಾಮ ತುಳು-ಕನ್ನಡ ಭಾಷೆಗಳಲ್ಲಿ ಪ್ರಸಂಗ ರಚನೆ. ಎಂ.ಟಿ.ಪೂಜಾರಿ ಅವರು ಬರೆದ ಇಪ್ಪತ್ತನಾಲ್ಕು ಪ್ರಸಂಗಗಳಲ್ಲಿ ಸುಮಾರು ಹನ್ನೆರಡು ಪ್ರಸಂಗಗಳು ಬೆಳಕು ಕಂಡಿವೆ. ಅದರಲ್ಲೊಂದು “ಪಂಡರ್‌ ಪುರ್‌ ಮಹಿಮ್‌. ಶ್ರೀ ಕ್ಷೇತ್ರ ಪಂಡರಾಪುರದ ಸ್ಥಳಪುರಾಣವನ್ನು “ಶ್ರೀ ಪಂಡರಪುರ ಮಹಾತ್ಮೆ’ ಎಂಬ ಪ್ರಸಂಗವಾಗಿಸಿ ಕನ್ನಡದಲ್ಲಿ ಬರೆದ ಪೂಜಾರಿಯವರು ಅದನ್ನು ಮರಾಠಿಗೆ ಭಾಷಾಂತರಿಸಿದರು. ಯಕ್ಷಗಾನದ ಅಂಶಗಣ, ಮಾತ್ರಾಗಣ ಛಂದಸ್ಸುಗಳಲ್ಲಿ ಮರಾಠೀ ಹಾಡುಗಳನ್ನು ಹೃದ್ಯವಾಗಿ ಹೊಸೆದಿದ್ದಾರೆ. ಮುಂಬಯಿಯ ಯಕ್ಷಗಾನ ಮಂಡಳಿಗಳಿಂದ ಈ ಪ್ರಸಂಗದ 10-18 ಪ್ರದರ್ಶನಗಳು ಈಗಾಗಲೇ ಬೆಳಕು ಕಂಡಿವೆ. ತುಳು-ಮರಾಠಿ ಎರಡೂ ಪಠ್ಯಗಳನ್ನು 2016ರಲ್ಲಿ ಪುಸ್ತಕ ರೂಪದಲ್ಲಿ ಹೊರತಂದ ಎಂ.ಟಿ.ಪೂಜಾರಿಯವರು ತನ್ನ ಪದ್ಯಗಳಿಗೆ ಅರ್ಥ ವಿವರಣೆಯನ್ನೂ ಜೊತೆಗೆ ನೀಡಿದ್ದಾರೆ. ಸುಭಗ ಸುಂದರ ಶೈಲಿಯ ಹಾಡು ಮತ್ತು ಅರ್ಥ ವಿವರಣೆ ಹೃದಯಕ್ಕೆ ಹತ್ತಿರವಾಗಿದೆ.

ಇವರು ಬರೆದು ಪ್ರಕಟಿಸಿದ ಇನ್ನೊಂದು ಮರಾಠಿ ಯಕ್ಷಗಾನ ಪ್ರಸಂಗ “ಶ್ರೀ ದೇವೀ ಮಹಾತೆ¾’. ಈ ಪ್ರಸಂಗದಲ್ಲಿ ಎರಡು ರಾಕ್ಷಸ ವಧಾ ಪ್ರಸಂಗಗಳಿವೆ. ಮಹಿಷಾಸುರ ವಧೆ ಮತ್ತು ಮಹಾಮಾಯೆ ಕೌಶಿಕಿ. ಈ ಪ್ರಸಂಗ ಕೂಡಾ ಹಲವು ಪ್ರಯೋಗಗಳನ್ನು ಕಂಡಿದೆ, ಮುದ್ರಣಗೊಂಡಿದೆ.

ತೆಂಕುತಿಟ್ಟಿನ ರಂಗಸ್ಥಳದಲ್ಲಿ ಮೊದಲ ಪ್ರದರ್ಶನ ಕಂಡ ಮರಾಠಿ ಯಕ್ಷಗಾನ “ಪಂಡರ್‌ ಪುರ್‌ ಮಹಿಮ್‌’ ಪ್ರಸಂಗವನ್ನು ಮತ್ತು ಶ್ರೀ ದೇವೀ ಮಹಾತ್ಮೆ ಪ್ರಸಂಗವನ್ನು ಮಹಾರಾಷ್ಟ್ರದ ಕಲಾಭಿಮಾನಿಗಳು ಮೆಚ್ಚಿಕೊಂಡಾಡಿದ್ದಾರೆ. ಇದು ಕಲಾ ವಿಸ್ತರಣೆಯ ಭರವಸೆಯ ಹೆಜ್ಜೆ. ಯಕ್ಷಗಾನ ಭಾಷಾ ಸರಸ್ವತಿಗೆ “ಮರಾಠಿ’ ಭಾಷಾ ಕೃತಿ ರತ್ನದಿಂದ ಮೌಲಿಕ ಉಡುಗೊರೆಯನ್ನು ನೀಡಿದ ಮುಂಬಯಿಯ ಪ್ರಸಂಗಕರ್ತ ಎಂ.ಟಿ.ಪೂಜಾರಿ ಅವರ ಹೆಸರು ಮರಾಠಿ ಯಕ್ಷಗಾನದ ಇತಿಹಾಸದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

– ತಾರಾನಾಥ ವರ್ಕಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ