ಅಮೆರಿಕ‌ ಅರ್ಚಕನ ಡೈರಿ

ಸಪ್ತಸಾಗರಾಚೆ, ಸುಪ್ತ ಭಕ್ತಿಯು ಕಾದಿದೆ...

Team Udayavani, Oct 12, 2019, 4:11 AM IST

ಹುಟ್ಟೂರು ಬಿಟ್ಟು, ಅನ್ನ ಕೊಡುವ, ಬದುಕು ಕಟ್ಟಿಕೊಡುವ ಊರು ಸೇರುವುದು ಈಗಿನ ತಲೆಮಾರಿನ ಹಾಡು. ಅಮೆರಿಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಲೇಖಕರು, ಭಕ್ತಿ ಪ್ರಸಾರದ ಆಧುನಿಕ ಮಾರ್ಗ ಕಂಡುಕೊಳ್ಳುತ್ತಲೇ, ಬದುಕು ರೂಪಿಸಿಕೊಂಡವರು…

ಬೆಂಗಳೂರಿನಿಂದ ಹೊರಟು, ಅಮೆರಿಕದ ಷಿಕಾಗೋ ವಿಮಾನ ನಿಲ್ದಾಣದಲ್ಲಿ ಇಳಿದು, ನಾನು ಸೀದಾ ಬಂದು ನಿಂತಿದ್ದು ಬ್ಲೂಮಿಂಗಡೇಲ್‌ ಎಂಬ ಊರಿನಲ್ಲಿ. ಕಾರನ್ನು ಪಾರ್ಕ್‌ ಮಾಡುವಾಗ, ‘ಇದೇ ದೇವಸ್ಥಾನ ನೋಡಿ’ ಎಂದು ತೋರಿಸಿದಾಗ ತಲೆ ಎತ್ತಿ ನೋಡಿದ್ದೆ. ದೊಡ್ಡದಾದ ಮನೆಯಂತೆ ಇದ್ದ ಬಿಲ್ಡಿಂಗ್‌ ನನ್ನೆದುರಿಗೆ ಇತ್ತು. ಅದಕ್ಕೆ ಗೋಪುರವಿಲ್ಲ, ಧ್ವಜ ಕಂಭವಿಲ್ಲ, ಶಿಲ್ಪ ಕೆತ್ತನೆಗಳಿಲ್ಲ, ದೊಡ್ಡದಾದ ಹೆಬ್ಟಾಗಿಲಂತೂ ಇಲ್ಲವೇ ಇಲ್ಲ.

ಹೊರಗಿನಿಂದ ಇದು ದೇವಸ್ಥಾನ ಎನ್ನುವ ಯಾವ ಕುರುಹೂ ಇಲ್ಲದ ಜಾಗ ನೋಡಿ, ಸ್ವಲ್ಪ ಕಸಿವಿಸಿಯಾಗಿದ್ದಂತೂ ನಿಜ! “ಒಳಗೆ ಬನ್ನಿ’ ಅಂತ ಬಾಗಿಲು ತೆರೆದು, ಕರೆದೊಯ್ದಾಗ ಕಂಡಿದ್ದು, ಹಾಲಿನ ಬಣ್ಣದ ದೇವರ ಮೂರ್ತಿಗಳು. ಕೃಷ್ಣ, ರಾಧೆ, ದುರ್ಗೆ, ಶಿವನನ್ನು ನೋಡಿ ನಿಟ್ಟುಸಿರು ಬಿಟ್ಟೆ. ಮೇಲ್ನೋಟಕ್ಕೆ, ಆ ದೇವಸ್ಥಾನ ಒಂದು ಚರ್ಚಿನಂತೆ ಕಂಡಿತ್ತು. ಹಾಗೆಯೇ, ಅದರ ಇತಿಹಾಸವನ್ನು ಕೆದಕಿದಾಗ, ಆ ಬಿಲ್ಡಿಂಗ್‌ ಒಂದು ಚರ್ಚೇ ಆಗಿತ್ತು ಎನ್ನುವುದನ್ನು ಕೇಳಿ ಅಚ್ಚರಿಗೊಂಡೆ.

ಹೌದು! ಅಮೆರಿಕದ ಬಹುತೇಕ ಮಂದಿರಗಳು ಮೊದಲು ಚರ್ಚೇ ಆಗಿದ್ದವು. ಈಗ ದೇವಸ್ಥಾನವಾಗಿ ಕನ್ವರ್ಟ್‌ ಆಗಿವೆ. ಹಾಗಂತ ನಮ್ಮ ದೇವಸ್ಥಾನದಂತೆ ಗುಡಿ, ಗೋಪುರಗಳೇ ಇಲ್ಲವೆಂದಲ್ಲ. ಇಲ್ಲಿಯ ಸರಕಾರದಿಂದ ವಿಶೇಷವಾದ ಪರವಾನಗಿ ಪಡೆದು ಬಿಲಿಯನ್‌ ಡಾಲರ್‌ ಖರ್ಚು ಮಾಡಿ, ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಇಲ್ಲಿನ ಕಾನೂನು ತುಂಬಾ ಕಟ್ಟುನಿಟ್ಟು ಇರುವುದರಿಂದ ಪ್ರತಿ ಕಟ್ಟಡವನ್ನೂ ಪಕ್ಕಾ ಪ್ಲಾನಿಂಗ್‌ನಿಂದ ಕಟ್ಟಿಸಿರಲೇಬೇಕು. ಅದಕ್ಕೆ ಬೇಕಾಗುವ ಖರ್ಚು ವೆಚ್ಚಗಳೂ ಹೆಚ್ಚು.

ಹಾಯ್‌, ಹೆಲೋ ಇಲ್ಲ…: “ಜೈ ಶ್ರೀ ಕೃಷ್ಣ’ ಎಂದು ಸಂಬೋಧಿಸಿ ನನ್ನನ್ನು ಸ್ವಾಗತ ಮಾಡಿದ್ದನ್ನು ಕೇಳಿ, ಇದು ಕೃಷ್ಣನ ದೇವಸ್ಥಾನ, ಆದ್ದರಿಂದ ಹೀಗೆ ಕರೆದಿದ್ದಾರೆ ಅಂತಂದುಕೊಂಡಿದ್ದೆ. ಆದರೆ, ಎಲ್ರೂ ಜೈ ಶ್ರೀ ಕೃಷ್ಣ ಅಂತನೇ ಕರೆದಿದ್ದನ್ನು ಕೇಳಿ ಕೇಳಿ ಆಮೇಲೆ ಅರ್ಥಮಾಡಿಕೊಂಡೆ… ಇವರು ಹಾಯ್‌, ಹೆಲೋ ಎನ್ನುವವರೇ ಅಲ್ಲ! ಉತ್ತರ ಭಾರತದಲ್ಲಿ, ವಿಶೇಷವಾಗಿ ಗುಜರಾತಿಗಳು ಒಬ್ಬರನ್ನೊಬ್ಬರು ಸಂಬೋಧಿಸುವುದೇ ಹೀಗೆ! ದಕ್ಷಿಣ ಭಾರತದ ಸಂಸ್ಕೃತಿಯ ಸೊಗಡಿನಲ್ಲಿ ಬೆಳೆದ ನನಗೆ ಎಲ್ಲವೂ ಕುತೂಹಲದ ವಿಚಾರಗಳೇ.

ನಾನು ಉಳಿದಿರುವ ದೇವಸ್ಥಾನ, ಪಕ್ಕಾ ಉತ್ತರ ಭಾರತದ ಶೈಲಿಯದ್ದು. ಟೆಂಪಲ್‌ ಹೇಗಿದೆ? ಒಳಗೆ ಏನಿದೆ?- ಈ ಕುತೂಹಲದಿಂದಲೇ, ಸ್ಥಳೀಯ ಅಮೆರಿಕನ್ನರು ಇಲ್ಲಿಗೆ ಬರುತ್ತಾರೆ. “ಅರ್ಚಕರೇ, ನೀವು ಇನ್ನು ಕೆಲವೇ ತಿಂಗಳು… ಹಿಂದಿ, ಗುಜರಾತಿ, ಪಂಜಾಬಿ, ನೇಪಾಳಿ ಭಾಷೆಗಳನ್ನೆಲ್ಲಾ ಕಲೀತೀರಾ’ ಅಂತ ಹೇಳಿದಾಗ, ನಾನು ತಮಾಷೆ ಮಾಡಿದ್ದೆ: “ಸ್ವಾಮಿ, ಈ ಎಲ್ಲಾ ಭಾಷೆಗಳನ್ನು ಕಲೀತೀನೋ ಇಲ್ವೋ… ಈ ಎಲ್ಲಾ ಜನರ ಊಟದ ಸವಿಯನ್ನು ಮಾತ್ರ ಖಂಡಿತಾ ನೋಡ್ತೇನೆ’ ಎಂದು! ಅಂದಹಾಗೆ, ಈ ಭಾಷಿಗರೇ ಇಲ್ಲಿ ನಮ್ಮ ದೇಗುಲದ ಭಕ್ತರು.

ಪೂಜೆಗೆ ಕೂರಿಸುವುದೇ ಸಾಹಸ: ಸರಳತೆ ಹಾಗೂ ಸ್ವತ್ಛತೆ ಇಲ್ಲಿಯ ಪೂಜೆಯ ವಿಶೇಷ. ಭಾರತದಲ್ಲಿ ಎರಡು ಮೂರು ತಾಸು ಆರಾಮಾಗಿ ಯಜಮಾನನನ್ನು ಕುಳ್ಳಿರಿಸಿಕೊಳ್ಳುತ್ತಿದ್ದ ನನಗೆ, ಇಲ್ಲಿ ಒಂದು ತಾಸು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದೇ ಒಂದು ತಪಸ್ಸು. ಪೂಜೆ ಆರಂಭ ಆಗುವ ಮೊದಲೇ ಸಮಯ ಎಲ್ಲಾ ನಿರ್ಧರಿಸಿಕೊಂಡೇ ಪೂಜೆಗೆ ಕುಳಿತುಕೊಳ್ಳುತ್ತಾರೆ. ಆದ್ದರಿಂದ, ಪೂಜೆಯನ್ನು ಸರಳವಾಗಿ ಮುಗಿಸುವುದು ನಮ್ಮ ಕರ್ತವ್ಯವಲ್ಲದೇ, ಇಲ್ಲಿಯ ಭಕ್ತರಿಗೆ ಖುಷಿಕೊಡುವ ದಾರಿಯೂ ಆಗಿದೆ.

ಅಗ್ನಿ ಇಲ್ಲದೆ ಪೂಜೆಯುಂಟೆ?: ಪೂಜೆ, ಹೋಮದ ವಿಧಿ- ವಿಧಾನಗಳೇ ನನಗೆ ಮೊದಮೊದಲು ವಿಚಿತ್ರವೆನಿಸಿತ್ತು. ಪೂಜೆಗೆ ಬೇಕಾದ ಸಾಮಗ್ರಿಗಳ ದೊಡ್ಡ ಪಟ್ಟಿಯೇ ಇಲ್ಲ. ಹೋಮಗಳನ್ನೆಲ್ಲ ಲಗುಬಗೆಯಲ್ಲಿ ಮುಗಿಸುವ ಅನಿವಾರ್ಯತೆ. ಏಕೆಂದರೆ, ಇಲ್ಲಿ ಹೆಚ್ಚು ಹೊಗೆ ಆಗುವ ಹಾಗೇ ಇಲ್ಲ. ಮನೆಯಲ್ಲಿ ಹೋಮ ಮಾಡುವಾಗ ಸ್ವಲ್ಪ ಹೊಗೆಯಾದರೂ ಸಾಕು, ಫೈಯರ್‌ ಅಲರಾಂ “ಕುಂಯೋ..’ ಅಂತ ಹೊಡೆದುಕೊಳ್ಳುತ್ತೆ.

ಹಾಗೆ ಹೊಡೆದುಕೊಂಡರೆ ಸಾಕು, ಅಗ್ನಿಶಾಮಕ ದಳದವರು ಯುದ್ಧದೋಪಾದಿಯಲ್ಲಿ ಬಂದು ಇಡೀ ಬಿಲ್ಡಿಂಗ್‌ ಚೆಕ್‌ ಮಾಡಿ ಹೋಗುತ್ತಾರೆ. ನಮ್ಮ ದೇವಸ್ಥಾನಕ್ಕೆ ತಿಂಗಳಿಗೊಮ್ಮೆ ಅವರ ಭೇಟಿ ಇದ್ದಿದ್ದೇ! ಅಗ್ನಿ ಇಲ್ಲದೇ ನಮಗೆ ಪೂಜೆಯಾದರೂ ಎಲ್ಲಿ? ಯಾವುದೋ ದೂರದ ಊರಿನ ದೇವರನ್ನು ಕಾಣಲು ಬರುವ ಭಕ್ತಾದಿಗಳು ಸರತಿ ಸಾಲಿನಲಿ ನಿಂತು, ಎಳೆದಾಡಿ, ಹೊಯ್ದಾಡಿ, ಬಯ್ದಾಡಿ ಒಂದು ಕ್ಷಣ ದೇವರ ಮೂರ್ತಿಯ ಎದುರಾಗಿ ನಿಂತರೆ, ಅವರಿಗೆ ಅದೇ ಜೀವಮಾನದ ಸಂತೃಪ್ತಿಯಾಗಬಹುದು.

ಆದರೆ, ಇಲ್ಲಿಯ ರೀತಿಯೇ ಬೇರೆ. ವಾರದ ದಿನಗಳಲ್ಲಿ ತಾಸಿಗೆ ಒಬ್ಬರೋ ಇಬ್ಬರೋ ಬರುತ್ತಾರೆ. ಕೆಲವೊಮ್ಮೆ ದೇವರೇ ನನ್ನ ಭಕ್ತ ಯಾವ ಸಮಯದಲ್ಲಿ ಬರುತ್ತಾನೆ ಎಂದು ಕಾಯುವ ಸರದಿ ಇಲ್ಲಿಯ ಪರಿಸ್ಥಿತಿ! ವೀಕೆಂಡ್‌, ಹಬ್ಬ ಹರಿದಿನಗಳಲ್ಲಿ ಮಾತ್ರ ತಪ್ಪದೇ ಜನರು ಬಂದು ವಿಶೇಷವಾದ ಪೂಜೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಹಾಗೇ ಒಟ್ಟುಗೂಡುವ ಜನರು ವಿವಿಧ ರಾಜ್ಯಗಳಾಗಿದ್ದರೂ ಒಂದೇ ಕುಟುಂಬದವರಂತೆ ಕಾಣುತ್ತಾರೆ.

ಅವರ ಭಾಷೆ, ವೇಷಗಳನ್ನು ಬದಿಗಿಟ್ಟು ಒಂದಾಗುತ್ತಾರೆ. ಸ್ವದೇಶದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಪ್ರಾದೇಶಿಕ ಬಣ್ಣಕಟ್ಟಿ ಎರಚಾಡುವ ಜನರು, ಒಮ್ಮೆ ಹೊರದೇಶದ ಜನರನ್ನು, ಅವರ ಜೀವನವನ್ನು ಕಾಣಬೇಕು. ನಮ್ಮ ಭಾಷೆ, ಸಂಸ್ಕೃತಿ ಎಲ್ಲವನ್ನೂ ತಮ್ಮ ಮನೆಗಳಲ್ಲಿ ತಮ್ಮದೇ ಸಂಘದಲ್ಲಿ ಇಟ್ಟುಕೊಂಡು, ಉಳಿದವರ ಸಂಗಡ ಅವರಂತೆಯೇ ಇರುತ್ತಾರೆ. ದೇಶ ಬಿಟ್ಟು ಹೊರ ಬೀಳುವ ಪ್ರತಿಯೊಬ್ಬನೂ ತನ್ನತನವ, ಉಳಿದವರನ್ನು ಗೌರವಿಸುವ ಮನಸ್ಥಿತಿಯನ್ನು ಇಟ್ಟುಕೊಂಡೇ ಇರುತ್ತಾನೆ ಎನ್ನುವುದು ವಿಶೇಷ.

ಹೆಸರುಗಳೇ ವಿಚಿತ್ರ…: ವಿಚಿತ್ರ ಗೋತ್ರಗಳಲ್ಲದೆ, ವಿಚಿತ್ರ ಹೆಸರುಗಳನ್ನೂ ಇಲ್ಲಿ ಕಂಡೆ. ಒಂದು ಘಟನೆ ಈಗಲೂ ನೆನಪಿದೆ. ಯಜಮಾನ, ಅವರ ಹೆಂಡತಿ ಮಕ್ಕಳು ಹೀಗೆ ಎಲ್ಲರ ಹೆಸರುಗಳನ್ನು ಹೇಳಿ ಸಂಕಲ್ಪ ಮಾಡುವಾಗ, ಕುಟುಂಬದಲ್ಲಿರುವ ಉಳಿದವರ ಹೆಸರು ಹೇಳಿ ಎಂದೆ. ಯಜಮಾನನ ಹೆಂಡತಿ “ಮ್ಯಾನೇಜರ್‌’ ಎಂದರು. “ಅಲ್ಲಮ್ಮಾ… ಅವರ ಹೆಸರು ಹೇಳಿ’ ಎಂದೆ. ಮತ್ತೆ, “ಮ್ಯಾನೇಜರ್‌’ ಅಂದ್ರು. ನನಗೆ ಇವರು ಏನು ಹೇಳುತ್ತಿದ್ದಾರೆ ಎನ್ನುವುದೇ ಅರ್ಥವಾಗಲಿಲ್ಲ! ಆಮೇಲೆ, ಆ ಅಮ್ಮ ನಿಧಾನವಾಗಿ, ನಮ್ಮ ತಂದೆಯ ಹೆಸರು, ಮ್ಯಾನೇಜರ್‌ ಅಂದ್ರು. ನಗು ಎಲ್ಲಿತ್ತೋ! ಐದು ನಿಮಿಷ ಪೂಜೆ ನಿಲ್ಲಿಸಿ, ನಗುವನ್ನು ಹತೋಟಿಗೆ ತಂದುಕೊಂಡೆ.

* ಗೋಪಾಲಕೃಷ್ಣ ನೇಗಾರು, ಅಮೆರಿಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಈ ಸೈಕಲ್‌ವಾಲಾನ ಹೆಸರು, ಮನೋಹರ್‌ ಸಖಾರಾಮ್‌ ಕದಮ್‌. ವಯಸ್ಸು 70 ವರ್ಷ. ಮೂಲ ಮುಂಬೈ. ಕಳೆದ 10 ವರ್ಷಗಳಿಂದ ಸೈಕಲ್ಲಿನಲ್ಲಿ ಬರೋಬ್ಬರಿ 50 ಸಾವಿರ ಕಿ.ಮೀ. ಕ್ರಮಿಸಿದ್ದಾರೆ....

  • ಇತ್ತೀಚೆಗೆ ಯೂಟ್ಯೂಬ್‌ನ ಬುಟ್ಟಿಯಲ್ಲಿ ಬೇಂದ್ರೆಯ ಹಾಡೊಂದು, ಹೊಸ ಗತ್ತು ತಳೆದು, ಸದ್ದು ಮಾಡುತಿದೆ. "ಬಾರೋ ಸಾಧನ ಕೇರಿಗೆ...' ಎನ್ನುತ್ತಾ ರಘು ದೀಕ್ಷಿತ್‌ ಹಾಡುತ್ತಿದ್ದರೆ,...

  • ರಾಮಾಯಣದಲ್ಲಿ ರಾಮನ ಸೈನ್ಯ ಸಾಗರ ದಾಟುವುದು ಒಮ್ಮೆ ಮಾತ್ರ. ಆದರೆ, ಈ ನಮ್ಮ ರಾಮಾಯಣದ ಕಥಾನಕ ಹಲವಾರು ಸಮುದ್ರಗಳನ್ನು ದಾಟಿ ಸಾವಿರಾರು ಮೈಲು ದೂರ ಪಯಣಿಸಿ, ಆಯಾ ದೇಶ...

  • ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಕೋಟೆಯನ್ನು ಕಂಡಾಗ, ತಾಳೆಯಾಗಿ ನಿಲ್ಲುವುದು ಮಧ್ಯಪ್ರದೇಶದ ಗ್ವಾಲಿಯರ್‌ನ ಕೋಟೆ. ಎರಡೂ ಕೋಟೆಗಳ ಆಂತರಿಕ ಕೆಲವು ವಿನ್ಯಾಸ,...

  • ಕೂಡಲಿಯ ಶಾರದಮ್ಮನನ್ನು ನೋಡಲು ಎರಡು ಕಣ್ಣು ಸಾಲದು. ಅಷ್ಟು ಸುಂದರ. ಹಾಗೆಯೇ ಇಲ್ಲಿನ ಭೋಜನದ ತಂಪು ವರ್ಣಿಸಲು ಪದಗಳೂ ಸಾಲವು... ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು...

ಹೊಸ ಸೇರ್ಪಡೆ