ಸೌಭಾಗ್ಯದಾಯಿನಿ ಕೊಳಗ ಮಹಾಲಕ್ಷ್ಮಿ

Team Udayavani, Jun 15, 2019, 10:03 AM IST

ರಾಜ್ಯದಲ್ಲಿ ಪುರಾತನವಾದ ಅನೇಕ ಶ್ರೀಮಹಾಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ತುಮಕೂರಿನ ಮಧುಗಿರಿ ರಸ್ತೆಯ ಲಿಂಗಾಪುರದಲ್ಲಿರುವ ಶ್ರೀಕೊಳಗ ಮಹಾಲಕ್ಷ್ಮಿದೇವಾಲಯವೂ ಅವುಗಳಲ್ಲೊಂದು. ಈ ದೇವಾಲಯಕ್ಕೆ ಸುಮಾರು 850 ವರ್ಷಗಳ ಇತಿಹಾಸವಿದೆ.

ಹಿಂದೆ ವಿಜಯನಗರ ಅರಸರ ಕಾಲದಲ್ಲಿ ಈ ಪ್ರಾಂತ್ಯದಲ್ಲಿ ವೀರಬಲ್ಲಾಳ ಎಂಬ ಪಾಳೆಗಾರ ಆಳ್ವಿಕೆ ನಡೆಸುತ್ತಿದ್ದನಂತೆ. ಆಗ ಹೊಲದಲ್ಲಿ ಉಳುಮೆ ಮಾಡುವಾಗ ಒಂದು ಹಿತ್ತಾಳೆಯ ಕೊಳಗ ಸಿಗುತ್ತದೆ. ಅದರ ಮೇಲೆ ಲಕ್ಷ್ಮಿ ಹಾಗೂ ಸೂರ್ಯ- ಚಂದ್ರರ ಚಿತ್ರವಿರುತ್ತದೆ. ಪಾಳೆಗಾರನಿಗೆ ರಾತ್ರಿ ಕನಸಿನಲ್ಲಿ ಲಕ್ಷ್ಮೀ ದೇವಿ ಕಾಣಿಸಿಕೊಂಡು, ಕೊಳಗದಲ್ಲಿ ತನ್ನ ಸಾನಿಧ್ಯವಿರುವುದಾಗಿಯೂ, ಅದನ್ನು ದಿನವೂ ಪೂಜಿಸಬೇಕೆಂದೂ ಆಜ್ಞಾಪಿಸುತ್ತಾಳೆ.

ಪಾಳೆಗಾರ ನಡೆದ ವಿಷಯವನ್ನು ತನ್ನವರಿಗೆ ತಿಳಿಸುತ್ತಾನೆ. ‘ನಿನ್ನ ಸಾನಿಧ್ಯವಿರುವುದಾದರೆ ನನಗೆ ದರ್ಶನ ಕೊಡು’ ಎಂದು ದೇವಿಯನ್ನು ಪ್ರಾರ್ಥಿಸಿದಾಗ, ಶ್ರಾವಣ ಶುದ್ಧ ಪಂಚಮಿಯ ದಿನ ಅಮ್ಮ ಶ್ರೀಮಹಾಲಕ್ಷ್ಮಿ ಮುತ್ತೈದೆಯ ರೂಪದಲ್ಲಿ ಪಾಳೆಗಾರನಿಗೆ ದರ್ಶನವಿತ್ತಳೆಂದು, ‘ನನ್ನನ್ನು ಪೂಜಿಸಿಕೊಂಡು ಹೋಗು. ಕಾಲಾನಂತರ ನಾನು ಪ್ರವರ್ಧಮಾನಕ್ಕೆ ಬರುತ್ತೇನೆ’ ಎಂದು ಅಭಯ ವಿತ್ತಳೆಂದೂ ಪ್ರತೀತಿ.

ಕೊಳಗ ಮಹಾಲಕ್ಷ್ಮಿ
ಅಂದಿನಿಂದ ಪಾಳೆಗಾರ ಹಾಗೂ ಆತನ ಕುಟುಂಬ ಶ್ರೀಮಹಾಲಕ್ಷ್ಮಿಯ ಪೂಜೆ ಮಾಡಿಕೊಂಡು ಬರುತ್ತಿದೆ. ಕೊಳಗದಲ್ಲಿ ತನ್ನ ಕುರುಹನ್ನು ತೋರಿಸಿದ್ದಕ್ಕಾಗಿ ಈ ದೇಗುಲಕ್ಕೆ ಕೊಳಗ ಮಹಾಲಕ್ಷ್ಮೀ ದೇವಾಲಯ ಎಂಬ ಹೆಸರು ಬಂದಿದೆ. ಸ್ವಲ್ಪ ದಿನಗಳ ತರುವಾಯ ವೀರಬಲ್ಲಾಳರು ಬೇರೆ ಪ್ರಾಂತ್ಯಕ್ಕೆ ಹೋಗಬೇಕಾಗುತ್ತದೆ. ಆಗ ಮಹಾಲಕ್ಷ್ಮಿಯು ತಾನು ಇಲ್ಲೇ ನೆಲೆಸುತ್ತೇನೆ ಎಂದಾಗ, ದೇವಿಯನ್ನು ಬೇರೊಬ್ಬರಿಗೆ ಒಪ್ಪಿಸಿ ಪಾಳೆಗಾರರು ಹೋಗುತ್ತಾರೆ. ಆದರೆ ಅವರಿಂದ ಲಕ್ಷ್ಮಿಯ ಪೂಜೆ ಸಾಂಗವಾಗಿ ನಡೆಯದ ಕಾರಣ, ದೇವಿ ಮತ್ತೆ ವೀರಬಲ್ಲಾಳನ ಕನಸಿನಲ್ಲಿ ಬಂದು- ‘ನನಗೆ ಇಲ್ಲಿ ಸ್ಥಾನಮಾನ ಇಲ್ಲ. ನೀನು ಬಂದು ನನಗೆ ಮತ್ತೆ ಸ್ಥಾನಮಾನ ಸಿಗುವಂತೆ ಮಾಡಬೇಕು’ ಎನ್ನುತ್ತಾಳೆ.

ಆಗ ಮತ್ತೆ ಪ್ರಾಂತ್ಯಕ್ಕೆ ವಾಪಸ್‌ ಬಂದ ವೀರಬಲ್ಲಾಳರು ತಮಗಾದ ಕನಸನ್ನು ಊರ ಜನರಿಗೆ ಹೇಳಲು, ಊರಿನ ಕೆಲವರು ಕೊಳಗದಲ್ಲಿ ಲಕ್ಷ್ಮೀ ದೇವಿ ಇರುವುದನ್ನು ನಿರೂಪಿಸ ಬೇಕೆಂದು ಕೋರುತ್ತಾರೆ. ಆಗ ವೀರಬಲ್ಲಾಳರು ದವಸ ಧಾನ್ಯವನ್ನು ರಾಶಿ ಹಾಕಿಸಿ, ಕೊಳಗದಲ್ಲಿ ಅಳೆದು ಇದನ್ನು ಸಮಭಾಗ ಮಾಡಿ ಎನ್ನುತ್ತಾರೆ. ಊರಿನ ಒಕ್ಕಲಿಗ ಸಮುದಾಯ­ದವರೊಬ್ಬರು ಧಾನ್ಯ ಅಳೆಯಲು ಮುಂದಾಗು ತ್ತಾರೆ, ಆದರೆ ಎಷ್ಟು ಅಳೆದರೂ ಧಾನ್ಯ ಅಕ್ಷಯವಾಗುತ್ತಿದ್ದ ಕಾರಣ ದವಸದ ರಾಶಿಯನ್ನು ಎರಡು ಭಾಗ ಮಾಡಲು ಆಗುವುದೇ ಇಲ್ಲ. ನಂತರ ಊರವರು ಕೊಳಗದಲ್ಲಿ ದೇವಿ ಇರುವ ಕುರುಹನ್ನು ಒಪ್ಪಿಕೊಳ್ಳುತ್ತಾರೆ. ನಂತರ ಊರಿನ ಗೌಡರೊಬ್ಬರು ಈ ಕೊಳಗದ ಪೂಜೆಯ ಉಸ್ತುವಾರಿ ವಹಿಸಿ ಕೊಳ್ಳುತ್ತಾರೆ. ಕೊಳಗದಲ್ಲಿರುವ ಮಹಾಲಕ್ಷ್ಮೀ ಸೌಭಾಗ್ಯದಾಯಿನಿ ಯಾಗಿದ್ದು ಕೊಳಗದ ಮುಂದೆ ತಮ್ಮ ಇಚ್ಛೆಯನ್ನು ಭಕ್ತಿಯಿಂದ ಅರಿಕೆ ಮಾಡಿಕೊಂಡರೆ, ಮಹಾಲಕ್ಷ್ಮಿಯು ಅದನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಇಲ್ಲಿಗೆ ಸಾವಿರಾರು ಭಕ್ತರು ಬರುತ್ತಾರೆ.

ನವೀಕರಣ ಕಾರ್ಯ

ಕಲ್ಲು ಮಂಟಪದಲ್ಲಿದ್ದ ಕೊಳಗದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆನ್ನುವ ಸಂಕಲ್ಪದಿಂದ ಟ್ರಸ್ಟ್‌ ಸ್ಥಾಪಿಸಿದ ದೇವಸ್ಥಾನದ ಈಗಿನ ಧರ್ಮದರ್ಶಿಗಳಾಗಿರುವ ಮುದ್ದುರಂಗಯ್ಯನವರ ನೇತೃತ್ವದಲ್ಲಿ 2005ರಲ್ಲಿ ದೇವಸ್ಥಾನದ ನವೀಕರಣ ಮಾಡಲಾಗಿದ್ದು, ಸುಂದರವಾದ ಶ್ರೀ ಮಹಾಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ವಿಗ್ರಹದ ಹಿಂದೆ ಕೊಳಗವನ್ನು ಇಟ್ಟು ಪೂಜಿಸಲಾಗುತ್ತದೆ. ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಬಲಗಡೆಯಲ್ಲಿ ಆಳೆತ್ತರದ ಸುಂದರ ಮೂರ್ತಿ ಗಳು ಭಕ್ತಾದಿಗಳನ್ನು ಸ್ವಾಗತಿಸುತ್ತವೆ. ನಾಗಲಾಂಬಿಕೆ ಹಾಗೂ ಅದರ ಅಕ್ಕಪಕ್ಕದಲ್ಲಿ ನಾಗಲಿಂಗೇಶ್ವರ ಹಾಗೂ ಸುಬ್ರಹ್ಮಣ್ಯ ವಿಗ್ರಹಗಳಿವೆ. ಈ ನಾಗಲಾಂಬಿಕೆ ಮೂರ್ತಿಯನ್ನು ಮಾಡಿಸಿದ ಕರ್ತೃಗಳಿಗೆ ಕನಸಿನಲ್ಲಿ ಬಂದ ನಾಗಲಾಂಬಿಕೆ, ತೋಟದಲ್ಲಿರುವ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿಯೇ ತನ್ನನ್ನು ಪ್ರತಿಷ್ಠಾಪಿಸಬೇಕೆಂದು ಹೇಳಿದ್ದಕ್ಕಾಗಿ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿಯೇ ಈ ವಿಗ್ರಹ ಪ್ರತಿಷ್ಠಾಪಿಸಲಾಗಿದೆ ಎಂಬ ಕತೆಯೂ ಇದೆ. ವಿವಾಹವಾಗದವರು, ಸಂತಾನ ಭಾಗ್ಯವಿಲ್ಲದವರು ಇಲ್ಲಿ ಬಂದು ನಾಗಲಾಂಬಿಕೆಗೆ ಹರಕೆ ಹೊತ್ತರೆ ಫ‌ಲ ಸಿಗುತ್ತದೆ ಎಂಬುದು ಪ್ರತೀತಿ.

•ಪ್ರಕಾಶ್‌ ಕೆ ನಾಡಿಗ್‌, ತುಮಕೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಾಮರಾಜ ನಗರದ ಯಾವುದೇ ರಸ್ತೆಗಾದರೂ ಹೋಗಿ, ಅಲ್ಲಿ ವೆಂಕಟೇಶ್‌ ನೆಟ್ಟ ಸಾಲು ಸಾಲು ಗಿಡ-ಮರಗಳೇ ಕಾಣಿಸುತ್ತವೆ.ಸ್ವಂತ ಖರ್ಚಿ ನಿಂದ, ಬ್ಯಾಂಕಿನಿಂದ ಸಾಲವನ್ನೂ ಪಡೆದು,3ಸಾವಿರಕ್ಕೂ...

  • ಮಿಲನ ಕ್ರಿಯೆ ವೇಳೆ ಕೀಟಗಳು ತೀರಾ ನಿಶ್ಶಬ್ದತೆ ಬಯಸುತ್ತವೆ. ಇದರ ಫೋಟೋಗ್ರಫಿ ಅಷ್ಟು ಸುಲಭವೂ ಅಲ್ಲ. ನಮ್ಮ ಹೆಜ್ಜೆಯ ಸಪ್ಪಳ, ಅವುಗಳ ಗಮನಕ್ಕೆ ಬಂದರೂ, ಪರಸ್ಪರ ಬೇರ್ಪಡುತ್ತವೆ... ಪ್ರಕೃತಿಯ...

  • ಚಿತ್ರದುರ್ಗದ ತ.ರಾ.ಸು.ರಂಗಮಂದಿರದಲ್ಲಿ ಇತ್ತೀ ಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪಲ್ಲಿ ಸಾಹಿತಿ, ಚಿಂತಕ ಡಾ. ರಂಜಾನ್‌ ದರ್ಗಾ ಅವರು ಮಾಡಿದ...

  • ಬಳ್ಳಾರಿಯ ಈ ತಾಲೂಕು ಕೇಂದ್ರವು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಕಾಲಿಟ್ಟ ನಂತರ ಪವಾ ಡ ಗಳು ಘಟಿಸಿದವು ಎನ್ನು ವುದು...

  • ಕರುನಾಡಿನ ವಾಸ್ತುಶಿಲ್ಪದ ಪರಂಪರೆಯಲ್ಲಿ ಹಲವು ಮಾದರಿಯ ಶಿಖರ  ದೇಗುಲಗಳಿವೆ. ಇದರಲ್ಲಿ ಭೂಮಿಜ ಶೈಲಿಯ ಶಿಖರಗಳದ್ದೂ ಒಂದು ಬಗೆ. ಪಿರಾಮಿಡ್ಡಿನಂತೆ ಮೇಲೆ ಏರುತ್ತಾ,...

ಹೊಸ ಸೇರ್ಪಡೆ