ನನ್ಮೇಲೇ ಡೌಟಾ..?

Team Udayavani, Aug 15, 2018, 6:00 AM IST

ಮದುವೆಯಾದ ಆರಂಭದಲ್ಲಿ ಎಷ್ಟೇ ಪ್ರೀತಿಯಿಂದಿದ್ದರೂ, ತದನಂತರ ಒಂದಲ್ಲಾ ಒಂದು ಮನಃಸ್ತಾಪಗಳು ಬರುತ್ತವೆ. ಅದರಲ್ಲೂ ಸಂಶಯವೇನಾದರೂ ಸಂಸಾರದೊಳಗೆ ನುಗ್ಗಿಬಿಟ್ಟರೆ, ಅಲ್ಲಿ ಕಹಿ ಅನುಭವಗಳೇ ಟಿಸಿಲೊಡೆಯುತ್ತಿರುತ್ತವೆ. ಈ ಶಂಕೆಯನ್ನು ದೂರವಿಟ್ಟು, ಸುಮಧುರ ಸಂಸಾರ ಕಂಡುಕೊಳ್ಳುವುದು ಹೇಗೆ?

ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ ಆ ಕಡೆಯಿಂದ ಧ್ವನಿ ಕೇಳಿಸಿತು. “ಹೆಂಡತಿ ಜಗಳವಾಡಿ ಪತ್ರ ಬರೆದಿಟ್ಟು, ಮನೆಬಿಟ್ಟು ಹೋಗಿದ್ದಾಳೆ. ನಿಮ್ಮನೆಗೆ ಏನಾದ್ರೂ ಬಂದಿದ್ಲಾ?’ ಎಂದು. ನಾನು ಗಾಬರಿಯಲ್ಲಿ ಇಲ್ಲವೆಂದೆ. ಹತ್ತು ವರ್ಷದಲ್ಲಿ ಒಮ್ಮೆಯೂ ಅವಳು ಹೀಗೆ ಮಾಡಿರುವುದನ್ನು ಕೇಳಿರಲಿಲ್ಲ. ಇದ್ದಕ್ಕಿದ್ದ ಹಾಗೆ ಏನಾಯ್ತು ಇವಳಿಗೆ ಎಂದು ವಿಚಾರಿಸಲು ಅವರ ಮನೆಯತ್ತ ದೌಡಾಯಿಸಿದೆ, ಮನೆಗೆ ಬೀಗ ಹಾಕಿ ಎಲ್ಲರೂ ಅವಳ ಹುಡುಕಾಟದಲ್ಲಿದ್ದರು. ಸೂರ್ಯ ತನ್ನ ಮನೆ ಸೇರುವ ಹೊತ್ತಿಗೆ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು, ಅದೆಲ್ಲಿಗೆ ಹೋದಳು ಎಂದು ಆತಂಕವಾಗಿ ಎಲ್ಲರನ್ನೂ ವಿಚಾರಿಸಲೂ ಶುರುಮಾಡಿದೆ. ಎಲ್ಲರಿಂದ ಒಂದೇ ಉತ್ತರ: “ನಂಗೆ ಗೊತ್ತಿಲ್ಲ’!.

  ಬೆಳಗ್ಗೆ ಏಳುವಷ್ಟರಲ್ಲಿ ಮೊಬೈಲ್‌ ರಿಂಗಾದದ್ದು ನೋಡಿ, ಗಾಬರಿಯಿಂದಲೇ ಕಾಲ್‌ ರಿಸೀವ್‌ ಮಾಡಿದೆ. “ಅವಳು ಕ್ಷೇಮವಾಗಿದ್ದಾಳೆ ಏನೋ ಹೇಳಬೇಕಂತೆ ನೀನು ಬಾ’ ಎಂದು ಸ್ನೇಹಿತೆ ಹೇಳಿದಾಗ, ಅವಸರದಿಂದ ಅವಳನ್ನು ನೋಡಲು ಹೊರಟೆ.

  ಪುಟ್ಟ ಮಗುವಿನೊಂದಿಗೆ ಸೋತ ಹೆಜ್ಜೆಗಳನ್ನು ಹಾಕುತ್ತಾ, ಕಣ್ತುಂಬಿಕೊಂಡು ಬಂದು ತನ್ನ ನೋವನ್ನು ಹಂಚಿಕೊಂಡಳು. ಮದುವೆಯಾಗಿ ಮೂರು ಮಕ್ಕಳಾದರೂ ಅವಳ ಪತಿರಾಯ ಸಂಶಯಪಡುತ್ತಾನಂತೆ. ಹತ್ತು ವರ್ಷದಿಂದ ಕಿರುಕುಳ ಸಹಿಸಿ, ಸಾಕಾಗಿ, ಒಪ್ಪತ್ತಿನ ಊಟವಿಲ್ಲದಿದ್ದರೂ ಬದುಕಬಲ್ಲೆ, ಇಂಥ ಅನುಮಾನದ ಭೂತದ ಜೊತೆ ಬಾಳಲಾರೆ ಎಂದು ಆಕೆ ನಿರ್ಧರಿಸಿ ಮನೆ ಬಿಟ್ಟಿದ್ದಳಂತೆ. ಇದನ್ನು ಕೇಳಿ, ನನಗೆ ಏನು ಹೇಳಬೇಕೋ ತೋಚಲಿಲ್ಲ. ಕೊನೆಗೆ ಸಮಾಧಾನ ಮಾಡಿ, ಮನೆಗೆ ಕರೆದೊಯ್ದೆವು.

ವಯಸ್ಸಿಗೆ ಬರುತ್ತಿದ್ದಂತೆ ಕಣ್ಣಂಚಲ್ಲಿ ನೂರೆಂಟು ಆಸೆ ಹೊತ್ತು ತನ್ನ ಕೈ ಹಿಡಿಯುವ ಹುಡುಗ ಹೀಗೆಯೇ ಇರಬೇಕು ಎಂದು ಸಾವಿರಾರು ಕನಸು ಕಾಣುವ ಹೆಣ್ಣು, ಕೊನೆಗೆ ಮನೆಯವರ ಆಸೆಯಂತೆ ಅವರಿಷ್ಟ ಪಟ್ಟ ಹುಡುಗನನ್ನೇ ಸಂಭ್ರಮದಿಂದ ಮದುವೆ ಮಾಡಿಕೊಳ್ಳುತ್ತಾಳೆ. ಮದುವೆ ಎಂಬ ಪದ ಕೇಳುತ್ತಿದ್ದ ಹಾಗೆ ಅವಳ ಮುಖ ರಂಗೇರುತ್ತೆ. ಹೊಸ ಬದುಕಿನತ್ತ ಹೆಜ್ಜೆ ಹಾಕುತ್ತೇನೆಂಬ ಖುಷಿಯಲ್ಲಿ ನಾಚಿ ನೀರಾಗುವಳು, ಸಡಗರದಿಂದ ಹೊಸ ಬಟ್ಟೆ, ಒಡವೆಗಳನ್ನು ಎಲ್ಲರಿಗೂ ತೋರಿಸುವಳು. ಪಾಪ ಅವಳಿಗೆ ಅರಿವಿಲ್ಲ, “ಮದುವೆ’ಯ ನಂತರದ ಮಹಾಸಾಗರ ಎಂಥದ್ದು ಎಂದು! ಆ ಸಾಗರದಲ್ಲಿ ಸುಂದರ ಅಲೆಗಳಿವೆ. ಅಷ್ಟೇ ದೊಡ್ಡ ಸುನಾಮಿಗಳೂ ಇವೆ. ಅವುಗಳಿಗೆ ಎದೆಗೊಟ್ಟು ಮುನ್ನುಗ್ಗುವುದೇ ಸಂಸಾರದ ಗುಟ್ಟು.

  ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತಿಲ್ಲ. ಎಷ್ಟೇ ಪ್ರೀತಿಯಿಂದಿದ್ದರೂ ಸ್ವಲ್ಪ ಸಮಯದ ನಂತರ ಅವರವರ ನಡುವೆ ಮನಃಸ್ತಾಪಗಳು ಶುರುವಾಗಿ, ವಿಚ್ಛೇದನದ ತನಕ ಹೋಗುವುದೂ ಇದೆ. ಇದರಲ್ಲಿ ಕೇವಲ ಪುರುಷರದ್ದೇ ತಪ್ಪು ಇರುತ್ತದೆಂದು ಹೇಳಲಾಗುವುದಿಲ್ಲ. ಮಹಿಳೆಯರೂ ಈ ವೇಳೆ ಎಡವುತ್ತಾರೆ. ಆದರೆ, ಎಷ್ಟೋ ಸಲ ಪುರುಷರ ತಪ್ಪುಗಳು ಮುಚ್ಚಿಹೋಗುತ್ತವೆ. ಸ್ತ್ರೀಯರ ಪ್ರಮಾದಗಳು ಎದ್ದು ನಿಲ್ಲುತ್ತವೆ. ಅಂತಿಮವಾಗಿ ಜೀವನ ಹಾಳಾಗುವುದು ಮಾತ್ರ ಮಹಿಳೆಯರದ್ದೇ.

  “ಅರಿತು ಬಾಳುವುದೇ ಸ್ವರ್ಗ ಸುಖ’ ಎನ್ನುವ ತತ್ವವೇ ಸುಂದರ ದಾಂಪತ್ಯದ ಗುಟ್ಟು. ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೇ, ಅಲ್ಲಿಯೇ ತಟ್ಟಿ ಮಲಗಿಸಿಬಿಟ್ಟರೆ, ಸಂಸಾರ ಇನ್ನಷ್ಟು ಸಿಹಿ. ಕ್ಷಮೆಗಳ ವಿನಿಮಯ ಆಗುತ್ತಿದ್ದರೆ, ಸಂಸಾರವೂ ಸದಾ ಕ್ಷೇಮವಾಗಿರುತ್ತದೆ.

ಎಲ್ಲದಕ್ಕೂ ಪ್ರೀತಿಯೇ ಮದ್ದು…
– ಭವಿಷ್ಯದ ಹೊಂದಾಣಿಕೆಯ ಕುರಿತು ಏನೇ ಗೊಂದಲಗಳಿದ್ದರೂ, ಮದುವೆಗೆ ಮುಂಚೆಯೇ ಮಾತಾಡಿಕೊಳ್ಳಿ.
– ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿಯ ಆಂತರಿಕ ಸೌಂದರ್ಯವನ್ನು ಗೌರವಿಸಿ.
– ಕಲ್ಪನೆಯ ಜಗತ್ತಿನಿಂದ ಆಚೆ ಬಂದು, ಸತ್ಯ ಮತ್ತು ವಾಸ್ತವತೆಯನ್ನು ಕಣ್ತೆರೆದು ನೋಡಿ.
– ಇಬ್ಬರ ನಡುವೆ ಹೊಂದಾಣಿಕೆಯಾದರಷ್ಟೇ ಮುಂದಿನ ಹೆಜ್ಜೆ ಇಡಿ.
– ಅಪ್ಪ- ಅಮ್ಮ ತಮ್ಮ ಮಗಳನ್ನು ಕಷ್ಟಪಟ್ಟು ಬೆಳೆಸಿ, ಲಕ್ಷಗಟ್ಟಲೆ ಸಾಲ ಮಾಡಿ, ಮದುವೆ ಮಾಡಿರುತ್ತಾರೆ. ಆ ಪ್ರೀತಿಗೆ ಪುರುಷರು ಬೆಲೆ ಕೊಡಬೇಕು.
– ತನ್ನ ಕುಟುಂಬವನ್ನೇ ನಂಬಿ ಬಂದವಳಿಗೆ, ಮೋಸ ಮಾಡುವ ಯತ್ನ ಬೇಡ.
– ಕೈಹಿಡಿದಾಕೆಗೆ ಮನೆಯಲ್ಲಿ ಸೇವಕಿ ಸ್ಥಾನ ಕೊಡುವ ಬದಲು, ನಿಮ್ಮ ಹೃದಯದಲ್ಲಿ ಪುಟ್ಟ ಜಾಗ ಕೊಟ್ಟರೆ ಅದೇ ಸಾಕು.

 ಮಂಜುಳಾ ಬಡಿಗೇರ್‌, ಕೊಪ್ಪಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು...

  • ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ....

  • ಹೆತ್ತವರ ಕಷ್ಟಕ್ಕೆ ಹೆಣ್ಣುಮಕ್ಕಳು ಬೇಗ ಕರಗುತ್ತಾರೆ. ಅಪ್ಪ-ಅಮ್ಮನನ್ನು ಮಗನಿಗಿಂತ, ಮಗಳೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ....

ಹೊಸ ಸೇರ್ಪಡೆ