ಪುರುಷರ ಸೀರೆ ನಮಸ್ಕಾರ

ಸೇಲ್ಸ್‌ಬಾಯ್‌ಗಳು ಕಂಡ ಸ್ಯಾರಿಲೋಕ...

Team Udayavani, Jul 31, 2019, 5:00 AM IST

ಶ್ರಾವಣಮಾಸ ಬಂದೇ ಬಿಟ್ಟಿದೆ. ಇನ್ನು ಮುಂದೆ ಹಬ್ಬಗಳ ದರ್ಬಾರು ಶುರು. ಹಬ್ಬ ಅಂದಮೇಲೆ ಕೇಳಬೇಕೆ? ಹೆಂಗಸರು ಹೊಸಬಟ್ಟೆಯ, ಅದರಲ್ಲೂ ಹೊಸ ಸೀರೆಯ ಖರೀದಿಯಲ್ಲಿ ಬ್ಯುಸಿ ಆಗಿಬಿಡುತ್ತಾರೆ. ಸ್ತ್ರೀಯರ ಸೀರೆ ವ್ಯಾಪಾರ ಹೇಗಿರುತ್ತೆ, ಅವರು ಹೇಗೆಲ್ಲಾ ಚೌಕಾಸಿ ಮಾಡುತ್ತಾರೆ, ಸೀರೆ ವಿಷಯದಲ್ಲಿ ಹೆಣ್ಮಕ್ಕಳ ಮನಸ್ಸು ಎಷ್ಟು ಚಂಚಲ ಅನ್ನೋ ವಿಷಯವನ್ನು ಬೆಂಗಳೂರಿನ ಸೀರೆ ವ್ಯಾಪಾರದ ಮುಖ್ಯಕೇಂದ್ರವಾದ ಚಿಕ್ಕಪೇಟೆಯ ಸೀರೆ ಸೇಲ್ಸ್‌ಬಾಯ್‌ಗಳು ಇಲ್ಲಿ ಹಂಚಿಕೊಂಡಿದ್ದಾರೆ.

“ಸೀರೆ ಬಗ್ಗೆ ಗಂಡಸರಿಗೇನು ಗೊತ್ತು’ ಅನ್ನೋದು ಹೆಣ್ಮಕ್ಕಳ ಮಾತು. ಗಂಡಸರಿಗೆ ಸೀರೆ ಆರಿಸೋಕೆ ಬರೋದಿಲ್ಲ, ಅದರ ರೇಟೂ ತಿಳಿಯೋದಿಲ್ಲ. ಸೀರೆ ವ್ಯಾಪಾರದಲ್ಲಿ ನಾವೇ ಎತ್ತಿದ ಕೈ ಅಂತ ಬೀಗುವ ಸ್ತ್ರೀಯರಿದ್ದಾರೆ. ಆದರೆ, ಸ್ವಲ್ಪ ತಾಳಿ. ನಮಗೂ ಸೀರೆಯ ಬೆಲೆ ಗೊತ್ತು, ಉಡಿಸುವ ಕಲೆಯೂ ಗೊತ್ತು. ಅಷ್ಟೇ ಅಲ್ಲ, ನಿಮಗೆ ಯಾವ ಸೀರೆ ಒಪ್ಪುತ್ತದೆ ಅಂತ ಹೇಳುವ ಜಾಣ್ಮೆಯೂ ಉಂಟು ಅಂತಿದ್ದಾರೆ ಸೀರೆ ಮಳಿಗೆಯ ಈ ಕೆಲಸಗಾರರು. ಅವರ ಮಾತುಗಳನ್ನು ಕೇಳುತ್ತಿದ್ದರೆ, ಉಳಿದೆಲ್ಲ ಸಂದರ್ಭದಲ್ಲಿ ಪೆದ್ದಿಯಂತೆ, ಅಮಾಯಕಿಯಂತೆ ಕಾಣುವ ಹೆಂಗಸು, ಸೀರೆ ಖರೀದಿಯ ಸಂದರ್ಭದಲ್ಲಿ ಮಾತ್ರ ಮಹಾನ್‌ ಜಾಣೆಯರಂತೆ ವರ್ತಿಸುವ ಬೆರಗಿನ ಕ್ಷಣವೊಂದು ಸೀರೆ ಅಂಗಡಿಯಲ್ಲಿ ತೆರೆದುಕೊಳ್ಳುತ್ತದೆ. ಸ್ತ್ರೀಯರ ಸೀರೆ ವ್ಯಾಪಾರದ ವೈಖರಿ ಹೇಗಿರುತ್ತೆ, ಅವರು ಹೇಗೆಲ್ಲಾ ಚೌಕಾಸಿ ಮಾಡ್ತಾರೆ, ಸೀರೆ ಆಯ್ಕೆಯ ವಿಷಯದಲ್ಲಿ ಹೆಣ್ಣುಮಕ್ಕಳ ಮನಸ್ಸು ಎಷ್ಟು ಚಂಚಲ ಎಂಬ ಸಂಗತಿಗಳು ಮಾತ್ರವಲ್ಲ; ಸೀರೆ ಅಂಗಡಿಯಲ್ಲಿರುವ ಸೇಲ್ಸ್‌ಬಾಯ್ಸಗಳ ಸುಖ-ದುಃಖವೂ ಇಲ್ಲಿ ಅನಾವರಣಗೊಂಡಿದೆ.

ಗೆಳೆಯನಿಗೆ ಸೀರೆ ಉಡಿಸುತ್ತಾ ಕೆಲಸ ಕಲಿತೆ
“ನಾನು ಬೆಂಗಳೂರಿಗೆ ಬರುವಾಗ ಅಮ್ಮನ ಒಂದು ಹಳೇ ಸೀರೆಯನ್ನು ತಂದಿದ್ದೆ. ರೂಮ್‌ನಲ್ಲಿ ಸ್ನೇಹಿತನಿಗೆ ಉಡಿಸಿ, ಕಲಿಯೋಕೆ ಶುರು ಮಾಡಿದೆ. ಒಂದೆರಡು ವಾರ ಪ್ರಯತ್ನ ಪಟ್ಟ ನಂತರ ಚೆನ್ನಾಗಿಯೇ ಸೀರೆ ಉಡಿಸೋದನ್ನು ಕಲಿತೆ. ಆದರೆ, ಅವನ ಸೊಂಟಕ್ಕೆ ನೆರಿಗೆ ನಿಲ್ಲುತ್ತಿರಲಿಲ್ಲ. ಬೆಲ್ಟ್ ಹಾಕಿ ಉಡಿಸೋಕೆ ಟ್ರೈ ಮಾಡಿದರೂ, ನೆರಿಗೆ ನಿಲ್ಲುತ್ತಿರಲಿಲ್ಲ. ಆತ, ನನ್ನ ಪಾಡನ್ನು ಇತರ ಗೆಳೆಯರೊಡನೆ ಹೇಳಿಕೊಂಡು ನಗುತ್ತಿದ್ದ. ಅವನು ಎಷ್ಟೇ ಗೇಲಿ ಮಾಡಿದರೂ, ನನಗೆ ಕೆಲಸ ಬೇಕೆಂದರೆ ಸೀರೆ ಉಡಿಸುವುದನ್ನು ಕಲಿಯಲೇಬೇಕಿತ್ತು. ಈಗ ಚಕಚಕ ಅಂತ ವೆರೈಟಿಯಾಗಿ ಗೊಂಬೆಗಳಿಗೆ ಸೀರೆ ಉಡಿಸೋಕೆ ಬರುತ್ತೆ.

ನಾನು ನೋಡಿರುವ ಹಾಗೆ, ಆಂಟಿಯರ ಸೀರೆ ಖರೀದಿಗೆ ಹೆಚ್ಚು ಸಮಯ ಬೇಕು. ಅಜ್ಜಿಯಂದಿರು ಬಂದರಂತೂ ನಮ್ಮ ಕಥೆ ಮುಗೀತು. ತಲೆಗೆ ಹಚ್ಚಿಕೊಳ್ಳಲು ಮೆಂಥಾಪ್ಲೆಸ್‌ ಇರಲೇಬೇಕು. ಅವರು 50, 100 ರೂಪಾಯಿಗೂ ತಾಸುಗಟ್ಟಲೆ ಚೌಕಾಸಿ ಮಾಡ್ತಾರೆ. ಅತ್ತ ಬೇರೆ ಗಿರಾಕಿಗಳನ್ನು ವಿಚಾರಿಸಲೂ ಆಗೋದಿಲ್ಲ, ಇತ್ತ ಇವರು ಹೇಳುವ ರೇಟ್‌ಗೆ ಒಪ್ಪಿಕೊಳ್ಳಲೂ ಸಾಧ್ಯವಿಲ್ಲ. ಪೀಕಲಾಟಕ್ಕೆ ಸಿಕ್ಕಿಕೊಳ್ಳೋ ಸರದಿ ನಮ್ಮದು. ಸೀರೆಯ ಬೆಲೆಯಲ್ಲಿ ಅವರೆಷ್ಟೇ ಚೌಕಾಸಿಗಿಳಿದರೂ, ನಾವು ಏನೂ ಮಾಡುವಂತಿಲ್ಲ. ಯಾಕಂದ್ರೆ, ಸೀರೆಯ ನಿಖರವಾದ ಬೆಲೆಯನ್ನು ಅವರಿಗೆ ಮೊದಲೇ ಹೇಳಿರುತ್ತೇವೆ.
-ಇಂದ್ರಕುಮಾರ್‌

ಸೀರೆ ಬಗ್ಗೆ ಡೌಟ್ಸ್‌ ಉಳಿಸಿಕೊಳ್ಳಲ್ಲ
ಮದುವೆ ಸೀಸನ್‌ನಲ್ಲಿ ನಮಗೆ ಬಿಡುವೇ ಇರೋದಿಲ್ಲ. ಆಗ ಸೀರೆ ವ್ಯಾಪಾರ ತುಂಬಾ ಜೋರು. ಉಳಿದಂತೆ ಎಲ್ಲಾ ಹಿಂದೂ ಹಬ್ಬಗಳಲ್ಲೂ ಸೀರೆ ಅಂಗಡಿಗಳು ಕಿಕ್ಕಿರಿದು ತುಂಬಿರುತ್ತವೆ. ಒಬ್ಬ ಮಹಿಳೆಗೆ ಒಂದು ಸೀರೆ ಆರಿಸಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಸೀರೆ ಬಗ್ಗೆ ಏನೇ ಪ್ರಶ್ನೆಗಳಿದ್ದರೂ, ಅದನ್ನೆಲ್ಲಾ ಕೇಳಿ, ಸಮಜಾಯಿಷಿ ಪಡೆದ ನಂತರವೇ ಸೀರೇನ ಓಕೆ ಮಾಡೋದು. ಆಮೇಲೆ ಬೆಲೆಯ ವಿಚಾರದಲ್ಲಿ ಮತ್ತೂಂದು ಸುತ್ತಿನ ಪ್ರಶ್ನಾವಳಿ ನಡೆಯುತ್ತೆ. ಲೇಟೆಸ್ಟ್‌ ಸೀರೆಗಳು ಹಾಗೂ ಈಗಿನ ಟ್ರೆಂಡ್‌ಗೆ ತಕ್ಕಂಥ ಸೀರೆಗಳೇ ಹೆಚ್ಚು ವ್ಯಾಪಾರವಾಗೋದು.

ಒಂದು ಸೀರೆಯ ಟ್ರಯಲ್‌ ನೋಡಿ, ಬಿಲ್‌ ಮಾಡಿಸಬೇಕು ಅನ್ನೋಷ್ಟರಲ್ಲಿ ಹೆಂಗಸರ ಕಣ್ಣು ಇನ್ನೊಂದು ಸೀರೆಯ ಮೇಲೆ ಬೀಳುತ್ತೆ. ಕೈಯಲ್ಲಿರೋ ಸೀರೇನ ಬಿಟ್ಟು, ಆ ಕಡೆ ಹೋಗಿ ಬಿಡ್ತಾರೆ. ಆಮೇಲೆ ಗೊಂದಲ, ಇದೋ, ಅದೋ ಅಂತ. ಒಂಟಿಯಾಗಂತೂ ಯಾರೂ ಸೀರೆ ಖರೀದಿಗೆ ಬರುವುದಿಲ್ಲ. ಬಹುತೇಕ ಹೆಂಗಸರು, ಸ್ನೇಹಿತೆಯರ ಜೊತೆಗೆ ಬರುವುದೇ ಹೆಚ್ಚು.
-ಉಮೇಶ್‌ ಕನಕಪುರ

ಮಾತು ಬಲ್ಲವ ಸೀರೆ ಮಾರಬಲ್ಲ
“ನಾವು, ಗ್ರಾಹಕರು ಮೋಸ ಹೋಗುವಂತೆ ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳುವುದಿಲ್ಲ. ಆದರೆ, ಕೆಲವೊಮ್ಮೆ ಸತ್ಯವನ್ನೂ ಹೇಳ್ಳೋದಿಲ್ಲ! ಒಮ್ಮೆ ಮಹಿಳೆಯೊಬ್ಬರು ತಮ್ಮ ಬಣ್ಣಕ್ಕೆ ಹೊಂದಿಕೆಯಾಗದ ಸೀರೆ ಸೆಲೆಕ್ಟ್ ಮಾಡಿದ್ದರು. ಸೀರೆಗೂ, ಅವರ ಮುಖದ ಬಣ್ಣಕ್ಕೂ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ನಾನು, “ನಿಮಗಿದು ಸೂಟ್‌ ಆಗ್ತಿಲ್ಲ’ ಅಂತ ಹೇಗೆ ಹೇಳ್ಳೋದು? ಹಾಗೆ ಹೇಳಿಬಿಟ್ಟರೆ ಅವರಿಗೂ ಬೇಜಾರಾಗುತ್ತೆ ಅಲ್ವಾ? ಕೊನೆಗೆ ನಾನು, “ಮೇಡಂ, ನೀವು ನೋಡೋಕೆ ಇಷ್ಟ್ ಚೆನ್ನಾಗಿದೀರ. ಆದ್ರೆ, ಈ ಸೀರೆ ಬಣ್ಣ ನಿಮಗೆ ಒಪ್ಪಲ್ಲ. ಆ ಕಲರ್‌ನಲ್ಲಿ ನೋಡಿ’ ಅಂತ ಅವರಿಗೆ ಒಪ್ಪುವ ಬಣ್ಣವೊಂದನ್ನು ಸೂಚಿಸಿದೆ. ಯಾಕಂದ್ರೆ, ನಮ್ಮ ಅಂಗಡಿಯಿಂದ ಕೊಂಡ ಸೀರೆಯನ್ನು ನಾಲ್ಕಾರು ಜನ ಮೆಚ್ಚಬೇಕಲ್ಲವಾ? ಸೊಗಸಾಗಿ ಮಾತಾಡುವ ವೈಖರಿ ಬಲ್ಲವನಿಗೆ ಸೀರೆ ಮಾರುವುದು ನೀರು ಕುಡಿದಷ್ಟು ಸುಲಭ.
– ಬಸವರಾಜು

ಮಹಿಳೆಯನ್ನು ಮೆಚ್ಚಿಸೋ ಸೀರೆ ಇಲ್ಲ
“ಆಗಿನ್ನೂ ಕೆಲಸಕ್ಕೆ ಸೇರಿದ ಹೊಸತು. ಮೊದಲ ದಿನ ಇಬ್ಬರು ಹೆಂಗಸರು ಮಳಿಗೆಗೆ ಬಂದಿದ್ದರು. ಅಕ್ಕ-ತಂಗಿಯರು ಅನ್ಸುತ್ತೆ. ಕಂಡ ಕಂಡ ಸೀರೆಗಳನ್ನೆಲ್ಲಾ ಒಂದೊಂದಾಗಿ ಕೌಂಟರ್‌ನಿಂದ ತೆಗೆಸಿಕೊಂಡು ನೋಡುತ್ತಾ ಹೋದರು. ಒಂದೂವರೆ-ಎರಡು ಗಂಟೆ ನಂತರ ಒಂದು ರೇಷ್ಮೆ ಸೀರೆ ಇಬ್ಬರಿಗೂ ಹಿಡಿಸಿತು. ಸೀರೆಯನ್ನು ಕೈಯಲ್ಲಿ ಹಿಡಿದು, ಮತ್ತೂಮ್ಮೆ 360 ಡಿಗ್ರಿ ಪರಿಶೀಲನೆ ನಡೆಸಿ, ಬಿಲ್‌ ಮಾಡಿ ಅಂದರು. ಆಮೇಲೆ, ಬ್ಯಾಗ್‌ನಲ್ಲಿ ಹುಡುಕಿದಂತೆ ಮಾಡಿ, ಹಣವಿಲ್ಲ ಅನ್ನಬೇಕೆ! ಕ್ಯಾಶ್‌ ಇಲ್ಲದಿದ್ದರೆ ಪರವಾಗಿಲ್ಲ, ಕಾಡೇì ಕೊಡಿ ಅಂದೆ. ಆದ್ರೆ, ಅವರಿಬ್ಬರು, ರೇಟು ಜಾಸ್ತಿ ಆಯ್ತು ಕಣಪ್ಪಾ, ಈ ಸೀರೆಗೆ ಅಷ್ಟು ಬೆಲೆ ಅಂತ ಗೊತ್ತಿರಲಿಲ್ಲ. ನಮಗಿದು ಬೇಡ’ ಅಂತ ಹೊರಟು ಹೋದರು. ಅಯ್ಯೋ, ಮೊದಲ ಗಿರಾಕಿಯೇ ತಲೆನೋವು ತಂದರಲ್ಲಾ ಅನ್ನಿಸಿತು. ದಿನಕಳೆದಂತೆ ಇಂಥ ಘಟನೆಗಳೆಲ್ಲಾ ಮಾಮೂಲಾಗಿಬಿಟ್ಟಿದೆ.

ಇನ್ನೂ ಕೆಲವು ಮಹಿಳೆಯರು, ಒಂದಷ್ಟು ಸೀರೆಗಳನ್ನು ನೋಡಿ, ನಿಮ್ಮಲ್ಲಿ ಇರೋ ಬೇರೆ ಸೀರೆಗಳನ್ನು ಎತ್ತಿಟ್ಟಿರಿ, ಮೇಲಿನ ಮಳಿಗೆಯಲ್ಲಿ ಸೀರೆ ನೋಡಿಕೊಂಡು ಬರಿ¤àವಿ ಅಂತ ಹೋದರೆ ವಾಪಸ್‌ ಬರುವುದೇ ಇಲ್ಲ. ಅಂಗಡಿಯಲ್ಲಿ ಗಂಟೆಗಟ್ಟಲೆ ಪರಿಶೀಲನೆ ನಡೆಸಿ, ಮನಸ್ಸಿಗೆ ಒಪ್ಪಿಗೆಯಾದ ಸೀರೆಯನ್ನೇ ಖರೀದಿಸಿದರೂ, ಮಾರನೆ ದಿನ ಯಾಕೋ ಇದು ಚೆನ್ನಾಗಿಲ್ಲ ಅಂತ ವಾಪಸ್‌ ತರುತ್ತಾರೆ. ಸೀರೆ ಎಕ್ಸ್‌ಚೇಂಜ್‌ ಮಾಡುವ ಹೆಂಗಸರು ನೀಡುವ ಮೂರು ಮುಖ್ಯ ಕಾರಣ- ಬಣ್ಣ, ಡಿಸೈನ್‌, ಬಾರ್ಡರ್‌. ಒಂದೇ ಸೀರೆಯಲ್ಲಿ ಈ ಮೂರೂ ಅಂಶಗಳು ಮೆಚ್ಚುಗೆಯಾಗೋದು ತುಂಬಾ ಅಪರೂಪ. ಹಬ್ಬದ ದಿನಗಳಲ್ಲಿ ಸೀರೆ ಬೆಲೆಯಲ್ಲಿ ಎಷ್ಟು ಡಿಸ್ಕೌಂಟ್‌ ಕೊಟ್ಟರೂ ಸಾಲದು. ಇನ್ನೂ ಕಡಿಮೆ ಮಾಡೋಕಾಗಲ್ವಾ ಅಂತ ಕೇಳುವವರು ಇದ್ದೇ ಇದ್ದಾರೆ.
– ಮೋಹನ್‌ರಾವ್‌ ಎಸ್‌.ಎನ್‌.

-ಯೋಗೇಶ್‌ ಮಲ್ಲೂರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ