ಇನ್ಮುಂದೆ ಕಪ್ಪು ನನದಲ್ಲ

ಬಣ್ಣದಲ್ಲೇನಿದೆ ಬಿಡಿ...

Team Udayavani, Oct 23, 2019, 4:11 AM IST

ಮೊನ್ನೆ ಪರಿಚಯಸ್ಥರಲ್ಲಿಗೆ ಹೋಗಿ ಹೊರಡಲು ಅನುವಾದಾಗ, ಆ ಮನೆಯ ಬೆಳೆದ ಮಕ್ಕಳು ನಮಸ್ಕರಿಸಿದರು. ಅವರ ಸಂಸ್ಕಾರಕ್ಕೆ ಮೆಚ್ಚಿದೆ. ಆದರೆ ನಡು ಹರೆಯದ ಅವರ ಅಪ್ಪ-ಅಮ್ಮನೂ ಕಾಲಿಗೆ ಬೀಳಲು ಮುಂದಾದಾಗ ಮಾತ್ರ ಬೆಚ್ಚಿದೆ! ಅಯ್ಯೋ ಇದೇನಿದು? ಅಂತ ಗಾಬರಿಯಾಯ್ತು.

ಐದಾರು ವರ್ಷಗಳ ಹಿಂದಿರಬಹುದು. ಅದೇಕೋ ಒಂದು ಸಂಜೆ, ನನ್ನ ಕೇಶವಿನ್ಯಾಸವನ್ನು ಕೊಂಚ ಬದಲಾಯಿಸಿಕೊಳ್ಳೋಣ ಅಂತ ಕನ್ನಡಿಯ ಮುಂದೆ ನಿಂತು ವಿವಿಧ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದೆ. ವಿವಿಧ ಕೋನಗಳಿಂದ ನಿರುಕಿಸುತ್ತಿದ್ದೆ. ಅರೆ ಅದೇನು?! ಬೆಳ್ಳಿಯ ಎಳೆಯೊಂದು ಫ‌ಳ್ಳನೆ ಮಿಂಚಿದಂತಾಯಿತು! ಎದೆ ಧಸಕ್ಕೆಂದಿತು. ಕೂದಲು ನೆರೆಯುವಷ್ಟು ವಯಸ್ಸಾಯಿತೇ ನನಗೆ? ಎಂದು ಕನ್ನಡಿಯಲ್ಲಿ ಮತ್ತೆ ಮತ್ತೆ ಮುಖ ನೋಡಿಕೊಂಡೆ.

ಮುಖದಲ್ಲಿ ಎಲ್ಲೂ ಸುಕ್ಕುಗಳು ಕಾಣಿಸಲಿಲ್ಲ. ತುಸು ಸಮಾಧಾನವಾಯಿತು. ಆದರೂ, ಆ ಬಿಳಿ ಕೂದಲನ್ನು ಕಿತ್ತೂಗೆಯುವಷ್ಟು ರೋಷ ಉಕ್ಕಿ ಬಂತು. ಆದರೆ, ಕಿತ್ತರೆ ರಕ್ತಬೀಜಾಸುರನಂತೆ ಮತ್ತಷ್ಟು ಹುಟ್ಟಿಕೊಳ್ಳುತ್ತವೆಂದು ಎಲ್ಲೋ ಕೇಳಿದ ನೆನಪು. ಹಾಗಾಗಿ, ಅದನ್ನು ಹಾಗೆಯೇ ಇರಗೊಟ್ಟೆ. ಅದನ್ನು ಆದಷ್ಟು ಕರಿಕೂದಲಿನೊಳಗೆ ಕಾಣದಂತೆ ಬಂಧಿಸಿಟ್ಟೆ. ಬಳಿಕ ಕಾಣಿಸಿಕೊಂಡ ಒಂದೊಂದೇ ಬಿಳಿ ಎಳೆಗಳನ್ನು ಹಾಗೆಯೇ ಬಚ್ಚಿಡುವಲ್ಲಿ ಸಫ‌ಲಳಾಗಿದ್ದೆ.

ಅದರೀಗ ಬೆಳ್ಳಿ ಬಳಗ ಹೆಚ್ಚಾಗತೊಡಗಿದೆ. ಮರೆಮಾಚಿದಷ್ಟೂ ಜಿದ್ದಿಗೆ ಬಿದ್ದಂತೆ ಎಲ್ಲೆಂದರಲ್ಲಿ ಬಿಳಿಯೆಳೆಗಳು ಇಣುಕತೊಡಗಿವೆ. ಸಾಲದ್ದಕ್ಕೆ, “ಲೇ, ತಲೆಗೆ ಸ್ವಲ್ಪ ಕಪ್ಪು ಬಣ್ಣ ಹಾಕ್ಕೋಬಾರದಾ? ನಿನಗೇನಂಥಾ ವಯಸ್ಸಾಗಿದೆ?’ ಎಂಬ ಹಿತೈಷಿಗಳ ಆಗ್ರಹ. ಮೊನ್ನೆ ಪರಿಚಯಸ್ಥರಲ್ಲಿಗೆ ಹೋಗಿ ಹೊರಡಲನುವಾಗುವಾಗ, ಆ ಮನೆಯ ಬೆಳೆದ ಮಕ್ಕಳು ನಮಸ್ಕರಿಸಿದರು. ಸಂಸ್ಕಾರಕ್ಕೆ ಮೆಚ್ಚಿದೆ. ಆದರೆ ನಡು ಹರೆಯದ ಅವರ ಅಪ್ಪ-ಅಮ್ಮನೂ ಕಾಲಿಗೆ ಬೀಳಲು ಮುಂದಾದಾಗ ಮಾತ್ರ ಬೆಚ್ಚಿದೆ! ಅಯ್ಯೋ ಇದೇನಿದು?

ಒಂದು ಸಲಕ್ಕೆ ಕಕ್ಕಾಬಿಕ್ಕಿಯಾದರೂ, ಮರುಕ್ಷಣವೇ ಇದು ನನ್ನ ಬೆಳ್ಳಿ ಬೆಡಗಿನ ಮಹಿಮೆಯೆಂದು ಅರ್ಥವಾಯಿತು. ಬಹಳ ಪಿಚ್ಚೆನಿಸಿತು. ಇನ್ನು ಬಿಳಿಕೂದಲನ್ನು ಹೀಗೇ ಬಿಡಬಾರದೆಂದು ನಿರ್ಧರಿಸಿದೆ. ಮದ್ದರೆಯುವುದೇ ಪರಿಹಾರವೆಂದು ಮನಗಂಡೆ. ಸರಿ, ತಲೆಗೆ ಮಸಾಲೆ ಅರೆಯುವ ಕಾಯಕ, ಮದರಂಗಿ ಕಾರ್ಯಕ್ರಮದೊಂದಿಗೆ ಶುಭಾರಂಭವಾಯಿತು. ಚಹಾ ಪುಡಿಯ ಕಷಾಯದೊಂದಿಗೆ ಮದರಂಗಿ ಮಿಶ್ರ ಮಾಡಿ, ಕಬ್ಬಿಣದ ಬಾಣಲೆಯಲ್ಲಿ ಒಂದು ರಾತ್ರಿ ನೆನೆಸಿ ಇಟ್ಟೆ.

ದೋಸೆಯ ಹಿಟ್ಟನ್ನು ಹುದುಗಲಿಡುವಷ್ಟೇ ಶ್ರದ್ಧೆಯಿಂದ ಈ ಮಿಶ್ರಣವನ್ನು ಕಲಸಿಟ್ಟೆ. ಮರುದಿನ ತಲೆಗೆಲ್ಲ ಲೇಪಿಸಿ ತಾಸುಗಟ್ಟಲೆ ಇಡುವ ಕಷ್ಟವನ್ನು ಸಹಿಸಿಕೊಂಡು ಅಭ್ಯಂಜನ ಮಾಡಿದೆ. ನನ್ನ ಕೂದಲಿನ ಮೂಲ ಬಣ್ಣ ಮರಳಿ ಬಂದಿರಬಹುದೆಂಬ ಖುಷಿಯಿಂದ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ಬಿಳಿಕೂದಲೆಲ್ಲ ವಿಚಿತ್ರ ಹಳದಿಯಾಗಿ ಬದಲಾಗಿತ್ತು! ತಲೆಗೆ ಅಲ್ಲಲ್ಲಿ ಕಿಚ್ಚಿಟ್ಟಂತೆ ಕಂಡಿತು. ನಿರಾಸೆಯಾಯಿತು.

ನನ್ನ ಬಣ್ಣದ ಕೂದಲು ನಮ್ಮ ಬಳಗದ ಬಾಯಿಗೊಂದು ಆಹಾರವಾಯಿತು. ಪುಕ್ಕಟೆ ಸಲಹೆಗಳು ಹರಿದುಬರತೊಡಗಿದವು. ಚಹಾ ಬೇಡ, ಕಾಯಿ ನೀರಲ್ಲಿ ಕಲಸು; ಲೋಳೆಸರ ಹಾಕು; ಮೆಂತ್ಯ ಹಾಕು… ಕೂದಲು ಸೊಂಪಾಗಿ ಬೆಳೆಯುತ್ತದೆ…  ಹೀಗೇ ಸಲಹೆಗಳು. ಕೂದಲೇನೋ ಸೊಂಪಾಗಿಯೇ ಬೆಳೆಯಿತು, ಆದರೆ ಅದೇ ಕಪ್ಪು-ಕೆಂಪು. ಕರಿಬೇವಿನ ಸೊಪ್ಪನ್ನು ಹಾಕಬೇಕೆನ್ನುವ ಸಲಹೆಯೂ ಬಂತು. ಆದರೆ, ಇದನ್ನು ಜಾರಿಗೊಳಿಸಿದಾಗ ಮಾತ್ರ ನಮ್ಮ ಮನೆಯ ಅಡುಗೆ ಪರಿಮಳವಿಲ್ಲದೇ ಮಂಕಾಗತೊಡಗಿತು.

ಅಡುಗೆಗಾಗಿ ತಂದ ಕರಿಬೇವಿನ ಸೊಪ್ಪು, ನನ್ನ ಮೆಹಂದಿ ಮಸಾಲೆಯಲ್ಲಿ ಸೇರತೊಡಗಿತು. ಅವುಗಳ ಪರಿಣಾಮ ಮಾತ್ರ ನಾ ಕಾಣೆ. ನನ್ನ ತಲೆಗೆ ಕೆಂಪನೆಯ ಶಾಲು ಸುತ್ತಿದಂತಿತ್ತು. ಕರಿಬೇವಿನ ಸೊಪ್ಪನ್ನು ಕಪ್ಪಗೆ ಹುರಿದು ಹಾಕೆಂದರು. ಹಾಗೆ ಮಾಡಿದ ಮೇಲೂ ನನ್ನ ಕೂದಲು ಮೊದಲಿನ ಬಣ್ಣ ಪಡೆಯಲೇ ಇಲ್ಲ. ಫೇಸ್‌ ಬುಕ್‌ ಜಾಲಾಡಿಸುತ್ತಿರುವಾಗ ಈ ಬಗ್ಗೆ ಯಾರ್ಯಾರೋ ಹಂಚಿಕೊಂಡ ವಿವರಣೆಗಳು ಅಲ್ಲಲ್ಲಿ ಕಾಣಸಿಗುತ್ತಿರುತ್ತವೆ.

ಅವೇ ಮದರಂಗಿ ಸೊಪ್ಪು, ಚಹಾದ ಕಷಾಯ, ಬೀಟ್ರೂಟ್‌, ನೆಲ್ಲಿಕಾಯಿ ಹುಡಿ ಇತ್ಯಾದಿಗಳನ್ನು ಬಳಸಿ ಎಂಬುದೆಲ್ಲ ನಾನು ಈ ಮೊದಲೇ ಪ್ರಯೋಗಿಸಿದ ಪರಿಹಾರಗಳು. ಅದರಲ್ಲಿ ನಾನು ಬಳಸದೇ ಬಿಟ್ಟಿದ್ದ ಯಾವುದಾದರೊಂದು ಸಾಮಗ್ರಿ ಕಂಡಿತೆಂದರೆ, ಕೂಡಲೆ ಮಿಶ್ರಣ ತಯಾರು ಮಾಡಿ ಪ್ರಯೋಗಿಸುತ್ತಿದ್ದೆ, ಕೂದಲು ಕಪ್ಪಾಗುವ ಯುರೇಕಾ ಕ್ಷಣ ಬಂದರೂ ಬರಬಹುದೆನ್ನುವ ಭರವಸೆಯಿಂದ. ನನ್ನ ತಲೆ ದಿನದಿಂದ ದಿನಕ್ಕೆ ಕೆಂಪೇರತೊಡಗಿದಾಗ, ನನ್ನ ಬಳಗದವರು, ಅವರವರು ಉಪಯೋಗಿಸುವ ಹತ್ತಾರು ಬ್ರ್ಯಾಂಡ್‌ಗಳ ಹೇರ್‌ ಡೈ ಹೆಸರನ್ನು ಹೇಳತೊಡಗಿದರು.

“ಎಷ್ಟು ವರ್ಷಗಳಿಂದ ಉಪಯೋಗಿಸ್ತಾ ಇದ್ದೇನೆ, ನೋಡು,’ ಎಂದು ತಮ್ಮ ಕಾಡಿಗೆ ಕಪ್ಪಿನ ಕೇಶರಾಶಿಯ ಸಾಕ್ಷಿಯಾಗಿ ಹೇಳುತ್ತಿದ್ದರು. ಆದರೆ, ನನಗೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳೆಂದರೆ ಕೊಂಚ ಭಯ. ಅವುಗಳೊಳಗಿರುವ ರಾಸಾಯನಿಕಗಳು ನನಗೆ ಒಗ್ಗಿಲ್ಲವೆಂದರೆ, ಏನಾದರೂ ವ್ಯತಿರಿಕ್ತ ಪರಿಣಾಮವಾದರೆ ಎಂಬ ಆತಂಕ. ಕೆಲವೊಮ್ಮೆ ಉಪಯೋಗಿಸಿದ್ದೂ ಇದೆ. ಆದರೆ, ಅವುಗಳನ್ನು ದೀರ್ಘ‌ಕಾಲ ಬಳಸಲು ಮನಸ್ಸಾಗುತ್ತಿಲ್ಲ.

ಹುಂ… ಕೊನೆಗೂ, ಈ ಕಪ್ಪು-ಬಿಳುಪಿನ ಜಿದ್ದಾಜಿದ್ದಿಯಲ್ಲಿ ಸೋಲೊಪ್ಪಿಕೊಂಡಿದ್ದೇನೆ. ಆದರೆ ಒಂದಂತೂ ನಿಜ. ಬಿಳಿಕೂದಲಿರಲಿ ಅಥವಾ ಬಿಳಿಕೂದಲಿಲ್ಲದಿರಲಿ, ನನ್ನೊಳಗಿನ ಉತ್ಸಾಹ, ಚೈತನ್ಯ ಮಾತ್ರ ಅದೇ. ಒಂದಿನಿತೂ ಕುಂದಿಲ್ಲ. ಯಾಕೋ ನನ್ನ ಕೂದಲಿನಂತೆ ನನ್ನ ಅಲೋಚನೆಗಳೂ ಮಾಗತೊಡಗಿವೆ ಎಂದು ಈಗೀಗ ಅನಿಸತೊಡಗಿದೆ. Graceful ageing. ಏನಂತೀರ?

* ಸಾಣೂರು ಇಂದಿರಾ ಆಚಾರ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು...

  • ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ...

  • ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ....

  • ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು...  ಆಗೆಲ್ಲಾ...

  • ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ....

ಹೊಸ ಸೇರ್ಪಡೆ