ತಾರಕ್ಕ ಬಿಂದಿಗೆ

Team Udayavani, Jul 5, 2019, 5:00 AM IST

ಸೊಂಟದಿಂದ ಕಾಲತುದಿಯವರೆಗೆ ಬಣ್ಣಬಣ್ಣದ ವಿನ್ಯಾಸಗಳು ವೈಯಾರವಾಗಿ ಹರಡಿರುವ ಉಡುಪಿನ ಆ ನೀರೆ ಹರಿವ ಹೊಳೆಯ ತಿಳಿ ಅಲೆಗೆ ಅಡ್ಡವಾಗಿ ಹಿಡಿದ ಬಿಂದಿಗೆಯಲ್ಲಿ ಅರ್ಧ ನೀರು ತುಂಬಿತ್ತು.

ಇನ್ನೊಂದರಲ್ಲಿ ಕಡುಹಸಿರು ಕೆಂಪಿನ ಕುಂದಣದ ರಂಗೋಲಿಯಲ್ಲಿ ನಾಚಿ ನಸುಬಾಗಿ ನೂರು ಕನಸು ಹೊತ್ತ ವಧುವಿನ ಡೋಲಿಯ ಹಿಂದೆ ಮುಂದೆ ಕುಣಿವ ಉಲ್ಲಾಸದ ಮನಸುಗಳು, ಲಂಗದಂಚಿನ ಗೆರೆಯಲ್ಲಿ ಇರುವೆ ಶಿಸ್ತಲ್ಲಿ ಸಾಗುವ ಲಯವಿನ್ಯಾಸದ ಮೊಹರು. ತೆರೆದ ತುರುಬಿಗೆ ಸಿಕ್ಕಿಸಿದ ಸೆರಗು ಸರಿಸಿ, ತಲೆಯ ಮೇಲಿನ ಬಿಂದಿಗೆಯನ್ನು ಬಲವಾಗಿ ತಬ್ಬಿದ ವೈಯಾರಿಯ ಬಿಂದಿಗೆ ನಡಿಗೆ ಜೀವ ತುಂಬಿಕೊಂಡು, “ಏನು ನೋಡುವೆ, ಸಾಗು ಮುಂದೆ ನನ್ನಂತೆ, ಬಿಂದಿಗೆಯ ನೀರು ತುಳುಕದಂತೆ’ ಎಂದಂತಾಯಿತು. ಕಣ್ಣುಜ್ಜಿ ನೋಡಿದೆ. ಈ ಪರಿಯಲ್ಲಿ ನನ್ನನ್ನು ಲೋಕಾಂತರ ಮಾಡಿದ ಪರ್ಯಟನಗಾರ್ತಿ ಯಾರು? ನಾನು ನೋಡುತ್ತಿರುವ ಕ್ಯಾನ್ವಾಸ್‌ನೊಳಗಿನ ಚಿತ್ರಿಕೆಯೆ!

ಪುರಾಣ ಕತೆಗಳ ಕೊಳ, ಹೊಳೆಗಳಲ್ಲಿ ಗುಳುಗುಳು ಸದ್ದು ಮಾಡಿದ ಈ ಬಿಂದಿಗೆ ನೀರಲ್ಲಿ ಕಾಣುವ ಪ್ರತಿಬಿಂಬದಂತೆ ಮನವ ಮುತ್ತುತ್ತದೆ. ಮಣ್ಣಲ್ಲಿ ಹುಟ್ಟಿ, ಹೆಣ್ಣಲ್ಲಿ ಚಿಗಿತು, ಹೆಣ್ಣಾಗಿ ಬದುಕಿ, ಮಣ್ಣಾಗಿ ಹೋಗುವ ಮಣ್ಣ ಮನುಜನಂತೆ ಈ ಮಣ್ಣ ಬಿಂದಿಗೆಯ ಗಾಥೆ.

ಬಿದ್ದರೆ ಒಡೆಯುವ ಬಿಂದಿಗೆ ಕ್ಷಣ ಕ್ಷಣ ಬೇಡುತ್ತದೆ ಎಚ್ಚರವನ್ನು, ಜಾಗ್ರತೆಯ ಸ್ಪರ್ಶವನ್ನು, ಏಕಾಗ್ರತೆಯನ್ನು, ಸಂಯಮವನ್ನು.

ಬಿಂದಿಗೆಗೂ, ನೀರಿಗೂ, ಹೆಣ್ಣಿಗೂ ಅದೆಂಥ ಬಂಧವೊ! ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೆ ಬಿಂದಿಗೆಯಾ ಎಂಬ ಗೃಹಿಣಿಯ ನಿತ್ಯದ ಹಾಡು ಆಕೆಯನ್ನು ಪ್ರತಿಕ್ಷಣವೂ ಸೃಷ್ಟಿಕರ್ತನ ಅಣಕು ರೂಪಿಣಿಯನ್ನಾಗಿಸಿದೆ. ಆಕೆ ಬಿಂದಿಗೆಯೊಂದಿಗೆ ನೀರಿಗೆ ಹೋಗುವುದು. ಬಿಂದಿಗೆ ಎಂಬ ಜಡ ದೇಹದಲ್ಲಿ ನೀರೆಂಬ ಜೀವಾತ್ಮವನ್ನು ತುಂಬಿಸುವುದು… ಇವೆಲ್ಲ ಸಾಮಾನ್ಯ ಪ್ರಕ್ರಿಯೆಯಲ್ಲ. ನೀರಿಲ್ಲದ ಬಿಂದಿಗೆಯ ಅಂದ ನಿರ್ಜೀವ ದೇಹದ ಶೃಂಗಾರದಂತೆ. ಬಿಂದಿಗೆಯಲ್ಲಿ ನೀರು ತುಂಬಿರಬೇಕು. ನೀರು ತುಂಬಿಸುವ ನೀರೆಯರ ತೋಳುಗಳು ಬಿಂದಿಗೆಯ ಬಳಸಿರಬೇಕು. ಇದು ಬಿಂದಿಗೆ, ನೀರು, ನಾರಿಯರ ಸಂಬಂಧ ಸೇತುವೆ. ಗೃಹಿಣಿಯ ಹಣೆಯಲ್ಲಿ ಸಿಂಧೂರವಿರುವಂತೆ ಕರದಲ್ಲಿ ಬಿಂದಿಗೆ ಶೋಭಿಸಬೇಕು. ಸೊಂಟದಲ್ಲಿರಲಿ, ಕರದಲ್ಲಿರಲಿ ಬಿಂದಿಗೆ ಮಾನಿನಿಯ ಬಂಧು.

ಇವೆಲ್ಲ ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ಕಥಾಲೋಕದ ದೃಶ್ಯವಾದರೂ ಗೃಹಿಣಿಯ ಗೃಹಲೋಕವೆಂಬ ಕಾರ್ಯಾಗಾರದಲ್ಲಿ ಬಿಂದಿಗೆ ಮಾತ್ರವಲ್ಲ, ಮಣ್ಣ ಮಡಕೆಗಳು, ಸಣ್ಣ ಸಣ್ಣ ಕುಡಿಕೆಗಳು, ಮಣ್ಣಿನ ದೊಡ್ಡ ಡಬರಿಗಳು, ಕಣಜಗಳು ಇವುಗಳೆಲ್ಲ ಇತ್ತೀಚಿನವರೆಗೆ ಎಂಥ ಪಾತ್ರ ವಹಿಸಿದ್ದವು ಎಂಬುದು ಮನೆಯ ಹಳೆ ನೆನಪಿನ ಕೋಶದಲ್ಲಿ ಗೋಚರವಾಗುತ್ತದೆ. ಈ ಬಿಂದಿಗೆ ಮಡಕೆಗಳೆಲ್ಲ ಉಗ್ರಾಣ, ಚಾವಡಿ, ಅಟ್ಟದ ಕತ್ತಲೆಯಲ್ಲೂ ಮಿಣುಕು ಹುಳದಂತೆ ಕಣ್ಣು ಸೆಳೆಯುವ ಪಾರಂಪರಿಕ ಸೊತ್ತುಗಳಾಗಿ ಇಂದಿಗೂ ನಮ್ಮ ಮುಂದಿವೆ.

“ಮಸಿ ಹಿಡಿದಷ್ಟೂ ಮಡಕೆ ಗಟ್ಟಿ, ಕಷ್ಟಪಟ್ಟಷ್ಟೂ ಕಾಯ ಗಟ್ಟಿ’ ಎಂಬ ಮಾತಿದೆ. ನಮ್ಮತ್ತೆಯ ಕಾಲದಲ್ಲಿ ಅನ್ನ, ಮೇಲೋಗರ, ಚಟ್ನಿಯಿಂದ ಹಿಡಿದು ಹಾಲು, ಮೊಸರು, ಬೆಣ್ಣೆಯ ತನಕವೂ ಎಲ್ಲವನ್ನೂ ಇಡುವುದು ಮಡಕೆಯಲ್ಲಿಯೇ. ಮಣ್ಣಿನ ಮಡಕೆಯಲ್ಲಿ ಮಾಡಿದ ಸಾಂಬಾರು, ಸೌದೆ ಒಲೆಯ ನಿಗಿನಿಗಿ ಕೆಂಡದಲ್ಲಿ ಕುದಿದಷ್ಟೂ ರುಚಿ. ಪ್ರತಿದಿನ ಕುದ್ದು, ಕ್ರಮೇಣ ಮುದ್ದೆಯಾದಾಗ ಇಮ್ಮಡಿ ರುಚಿ, ಪರಿಮಳ. ಅದನ್ನು ಸವಿದವರಿಗೇ ಗೊತ್ತು ಆ ರುಚಿಯ ಸುಖ.

ತುಳುನಾಡಿನ ಗೃಹಿಣಿಯರು ತಯಾರಿಸುವ “ವೋಡುಪಾಳೆ’ ನಡುವಲ್ಲಿ ಸ್ವಲ್ಪ ತಗ್ಗಿರುವ ಮಣ್ಣಿನ ಕಾವಲಿಯಲ್ಲಿ ಮಾಡುವ ಅಕ್ಕಿಹಿಟ್ಟಿನ ಒಂದು ಬಗೆಯ ರೊಟ್ಟಿ. ಕಾದ ಮಣ್ಣಿನ ಪರಿಮಳದೊಂದಿಗೆ ಅಕ್ಕಿಯ ಸಹಜ ಸುವಾಸನೆ ಸೇರಿ ಮೂಗಿಗೆ ಬಡಿದರೆ ಎಂಥವರಿಗೂ ಬಾಯಲ್ಲಿ ನೀರೂರುತ್ತದೆ. ಈ ತಿಂಡಿಯ ರುಚಿ ಹಿಡಿದವರು ಈಗಲೂ ಮಾರ್ಕೆಟಿನ ಮೂಲೆಮೂಲೆಯಲ್ಲೆಲ್ಲ ಹುಡುಕಿ ಈ ಮಣ್ಣಿನ ಕಾವಲಿಯನ್ನು ಖರೀದಿಸಿ ತರುತ್ತಾರೆ. ಚಿಕ್ಕ ಚಿಕ್ಕ ಕುಡಿಕೆಯಲ್ಲಿ ತಯಾರಿಸುವ ಗಟ್ಟಿ ಮೊಸರಂತೂ ಉತ್ತರಭಾರತದಲ್ಲಿ “ಮಟ್ಕಾ ದಹಿ’ ಎಂದು ಪ್ರಖ್ಯಾತ.

ಮಡಕೆಯಲ್ಲಿ ತಯಾರಿಸುವ ಆಹಾರ ವಿಶೇಷ ರುಚಿ ಹೊಂದಿರುವುದರೊಂದಿಗೆ ಇದು ಮನುಷ್ಯನ ದೇಹ ಸಂಸ್ಕೃತಿಗೆ ಒಗ್ಗುವ ಆರೋಗ್ಯ ಸಂಜೀವಿನಿ. ಆದರೆ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಎಲ್ಲೋ ಒಂದೆಡೆ ಮಡಕೆ ಎಂದರೆ ಭಿಕಾರಿಗಳ ಸರಕು ಎಂಬ ತಾತ್ಸಾರ ಮನೋಭಾವವಿದೆ. ಇಂದಿನ ಗೃಹಿಣಿಯ ಅಡುಗೆ ಕೋಣೆಯ ಉಪಕರಣಗಳು ಮಡಕೆಯೊಂದಿಗೆ ಹೊಂದಿಕೊಳ್ಳುವುದಿಲ್ಲ. ಕರೆಂಟ್‌ ಕುಕ್ಕರ್‌, ಗ್ಯಾಸ್‌ ಒಲೆ, ಗರಂಮಸಾಲೆಗಳಿಗೆಲ್ಲ ಮಡಕೆ ಹೇಳಿಸಿದ್ದಲ್ಲ.

ಕೆಲವೊಂದಕ್ಕೆ ಮಾತ್ರ ಇಂದಿಗೂ ಮಡಕೆಯೇ ಬೇಕು. ಎಳೆಬಿದಿರು (ಕಣಿಲೆ)ನ ಮೇಲೋಗರ ಮಾಡುವ ಮುಂಚೆ ಅದನ್ನು ಕತ್ತರಿಸಿ ನೀರಲ್ಲಿ ಹಾಕಿಡಬೇಕು. ಅದಕ್ಕೆ ಮಣ್ಣಿನ ಪಾತ್ರೆಯೇ ಬೇಕು. ತೀರಾ ಇತ್ತೀಚಿನವರೆಗೂ ಕಣಿಲೆ ನೀರಿಗೆ ಹಾಕುವುದಕ್ಕಾಗಿಯೇ ಒಂದು ಮಣ್ಣಿನ ಪಾತ್ರೆಯನ್ನು ಅತ್ತೆ ತೆಗೆದಿರಿಸುತ್ತಿದ್ದರು.

ಮೃತ್ತಿಕೆಯ ಪಾತ್ರೆಗೂ ಸಂಸ್ಕೃತಿಗೂ ಸಂಬಂಧ ಅವಿನಾಭಾವ. ಬಾಗಿನ ಕೊಡುವಾಗ ಅರಿಶಿನ-ಕುಂಕುಮ ಹಾಕುವುದು ಮಣ್ಣಿನ ಪಾತ್ರೆಯಲ್ಲಿ. ಮಾನವ ಬದುಕಿನ ಅಂತಿಮ ಯಾತ್ರೆಯಲ್ಲಿ ಅಗ್ನಿವಾಹಕನಾಗಿಯೂ ಮಣ್ಣಿನ ಪಾತ್ರೆಯ ಪಾತ್ರ ಹಿರಿದು.

ಬೇಸಿಗೆಯಲ್ಲಿ ರೆಫ್ರಿಜರೇಟರಿನ ಅತಿ ತಂಪಿನ ನೀರು ಗಂಟಲು ಕೆರೆತಕ್ಕೆ ಕಾರಣವಾದರೆ, ಮಣ್ಣಿನ ಹೂಜಿಯಲ್ಲಿಟ್ಟ ತಣ್ಣೀರು ಒಡಲಿಗೆ ತಂಪಾಗಿ ಹಿತಾನುಭವವನ್ನು ನೀಡುತ್ತದೆ.

ತಿಗರಿಯಲ್ಲಿ ಮಣ್ಣನ್ನು ಬೇಕಾದ ಆಕಾರಕ್ಕೆ ರೂಪಾಂತರಿಸಿ ಬಿಂದಿಗೆ, ಮಡಕೆ ತಯಾರಿಸುತ್ತಿದ್ದ ಕುಂಬಾರನಿಗೀಗ ಬೇಡಿಕೆಯಿಲ್ಲ, ಕೆಲಸವಿಲ್ಲ. ಆದರೆ, ಇತ್ತೀಚೆಗೆ ಹಳೆಯ ಆರೋಗ್ಯ ಪರಿಕರಗಳೆಲ್ಲ ಹೊಸಜೀವ ಪಡೆಯುತ್ತಿರುವುದನ್ನು ನೋಡಿದರೆ ಒಂದಲ್ಲ ಒಂದು ದಿನ ಇಂದಿನ ಗೃಹಿಣಿಯ ಮನದಲ್ಲೂ ಮಡಕೆ ಮರುಜೀವ ಪಡೆಯಬಹುದೇನೋ ಎನಿಸುತ್ತದೆ. ದೀಪಾವಳಿಯಲ್ಲಿ ಮಣ್ಣಿನ ಹಣತೆಯ ದೀಪಾಲಂಕಾರ ಇದಕ್ಕೆ ಸಾಕ್ಷಿ.

ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಧ್ಯಪ್ರದೇಶ-ಭಾರತದ ಹೃದಯ ಎಂದೇ ಖ್ಯಾತಿ ಹೊಂದಿದೆ. ಭಾರತದ ಭೂಪಟದ ಮಧ್ಯ ಭಾಗದಲ್ಲಿ ಇರುವ ಮಧ್ಯಪ್ರದೇಶದ ಮಹಿಳೆಯರ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೃದಯಕ್ಕೆ...

  • ವಾರ, ತಿಥಿ ಇಲ್ಲದೆ ಬರುವವರು ಅತಿಥಿಗಳು. ದಾರಿಯಲ್ಲಿ ಸಿಕ್ಕಾಗಲೆಲ್ಲ "ಮನೆಗೆ ಬನ್ನಿ ಮನೆಗೆ ಬನ್ನಿ' ಎನ್ನುತ್ತಿದ್ದ ನನ್ನ ಅತ್ತೆಯ ದೂರದ ಸಂಬಂಧಿಯೊಬ್ಬರ ಮನೆಯ...

  • ಕ್ಯಾಪ್ಸೂಲ್‌ ಗೊತ್ತಲ್ವಾ? ಈ ಮಳೆಗಾಲದಲ್ಲಿ ನೀವೆಲ್ಲರೂ ಮರೆಯದೇ ಒಂದೊಂದು ಕ್ಯಾಪ್ಸೂಲ್‌ ಖರೀದಿಸಿ. ಹಾಂ, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ತೆಗೆದುಕೊಳ್ಳುವ...

  • ಮಳೆಗಾಲ ಬಂತೆಂದರೆ ಕಲ್ಲಣಬೆ, ಕೊಡೆ ಅಣಬೆ ಅಲ್ಲಲ್ಲಿ ಸಿಗುತ್ತದೆ. ಮಶ್ರೂಮ್‌ನಿಂದ (ಅಣಬೆ) ವಿವಿಧ ರೀತಿಯ ಅಡುಗೆ ತಯಾರಿಸಬಹುದು. ಇದು ವಿಟಾಮಿನ್‌ "ಡಿ' ಹೊಂದಿರುವುದಲ್ಲದೆ...

  • ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡುವ ಕಾಲವೂ ಒಂದಿತ್ತು. ಆ ದಿನಗಳಲ್ಲೆಲ್ಲ ಟೂರಿಂಗ್‌ ಟಾಕೀಸ್‌ಗೆ ಹೋಗಿ ಸಿನೆಮಾ ನೋಡುವುದೇ ಒಂದು ಸಂಭ್ರಮ. ಅಂಥ ಟೂರಿಂಗ್‌...

ಹೊಸ ಸೇರ್ಪಡೆ