ಈ ಬದುಕು ಕ್ಷಣಿಕವೆಂದು ಮರೆತುಬಿಟ್ಟಿರಾ?

Team Udayavani, Oct 13, 2019, 5:30 AM IST

ನಾವು ಈ ಜಗತ್ತಿನಲ್ಲಿ ಕೆಲವೇ ಸಮಯ ತಂಗಲು ಬಂದವರು. ಆದರೆ ನಮ್ಮ ಗೊಂದಲಮಯ ಬುದ್ಧಿ ಇದೆಯಲ್ಲ, ಇದು ಈ ಸತ್ಯವನ್ನು ಗಟ್ಟಿಯಾಗಿ ಮನನ ಮಾಡಿಕೊಳ್ಳುವುದೇ ಇಲ್ಲ. ಇಂದು ನಮ್ಮ ಬಳಿ ಏನಿದೆಯೋ ಅದೆಲ್ಲ ಮುಂದೆಯೂ ಇರುತ್ತದೆ ಎಂಬ ಭ್ರಮೆಯ ಪರದೆಯನ್ನು ಅದು ನಮ್ಮ ಕಣ್ಣೆದುರು ಎಳೆಯುತ್ತದೆ. ಜೀವನ ಕ್ಷಣಿಕವಾದದ್ದು ಎನ್ನುವುದು ಅರಿತಿದ್ದರೂ, ಶಾಶ್ವತವಾಗಿ ಇಲ್ಲಿಯೇ ಇರುತ್ತೇವೇನೋ ಎಂಬಂತೆ ನಾವು ಬದುಕುತ್ತಿರುತ್ತೇವೆ.

ಅಲೆಗ್ಸಾಂಡರ್‌ನ ಕಥೆ ನಿಮಗೆಲ್ಲ ಗೊತ್ತೇ ಇದೆ. ಇಡೀ ವಿಶ್ವವನ್ನೇ ಕೈವಶ ಮಾಡಿಕೊಳ್ಳುತ್ತೇನೆಂಬ ಅಪ್ರತಿಮ ಉತ್ಸಾಹದೊಂದಿಗೆ ಮುನ್ನುಗ್ಗುವ ಮುನ್ನ ಆತ ಅಥೆನ್ಸ್‌ನ ಸಂತನೊಬ್ಬನ ಬಳಿ ಆಶೀರ್ವಾದ ಪಡೆಯಲು ತೆರಳುತ್ತಾನೆ. ಆ ಸಂತನ ಹೆಸರು ಡಯೋಜಿನೀಸ್‌. ಡಯೋಜಿನೀಸ್‌, ಚಿಕ್ಕದೊಂದು ಬ್ಯಾರೆಲ್‌ನಲ್ಲಿ ಬದುಕುತ್ತಿದ್ದ! ಅಲೆಕ್ಸಾಂಡರ್‌ ತನ್ನೆದುರು ಬಂದು ನಿಂತಾಗ, ಡಯೋಜಿನೀಸ್‌ ಕೇಳಿದ, “ಯಾರಪ್ಪ ನೀನು?’

ಸ್ವಲ್ಪ ಅಚ್ಚರಿಯಾದರೂ ಸಾವರಿಸಿಕೊಂಡ ಅಲೆಕ್ಸಾಂಡರ್‌ ಹೇಳಿದ-“ನಾನು ಯಾರು ಅಂತ ಗೊತ್ತಾಗಲಿಲ್ಲವೇ ಹಿರಿಯರೇ? ನಾನು ಅಲೆಕ್ಸಾಂಡರ್‌ ದ ಗ್ರೇಟ್‌!’
ಡಯೋಜಿನೀಸ್‌ ಅಂದ: “ನೀನು ನಿಜಕ್ಕೂ ಗ್ರೇಟ್‌ ವ್ಯಕ್ತಿ ಆಗಿದ್ದರೆ, ನಿನ್ನನ್ನು ನೀನು ಗ್ರೇಟ್‌ ಎಂದು ಕರೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ನೀನು ಗ್ರೇಟ್‌ ಅಲ್ಲ! ಅದಿರಲಿ, ನನ್ನ ಬಳಿ ಏಕೆ ಬಂದಿರುವೆ? ಏನು ಬೇಕು ನಿನಗೆ?’ ಅಲೆಕ್ಸಾಂಡರ್‌ ಹೇಳಿದ: “ನಾನು ಪ್ರಪಂಚವನ್ನು ಗೆಲ್ಲಲು ಮುಂದಾಗುತ್ತಿದ್ದೇನೆ’

ಡಯೋಜಿನೀಸ್‌ ಸಿಡುಕುತ್ತಾ ಅಂದ: “ಪ್ರಪಂಚವನ್ನು ಗೆಲ್ಲಲು ಯಾರಿಗೂ ಸಾಧ್ಯವಿಲ್ಲ, ಮೊದಲು ನಿನ್ನನ್ನು ನೀನು ಗೆಲ್ಲು. ಬದುಕಿನೆಡೆಗೆ ನಿನ್ನ ಧೋರಣೆಯೇ ಸರಿಯಿಲ್ಲ. ನಿನ್ನ ಮೌಲ್ಯಗಳು ಸರಿಯಾಗಿಲ್ಲ. ಹೀಗಾಗಿ, ನನ್ನ ಮಾತು ಬರೆದಿಟ್ಟುಕೋ, ನೀನು ಹಿಂದಿರುಗಿ ಅಥೆನ್ಸ್‌ಗೆ ಬರಲಾರೆ!’

ಅಲೆಕ್ಸಾಂಡರ್‌ ತನ್ನ ಛಲ ಬಿಡಲಿಲ್ಲ. ಒಂದೊಂದೇ ಪ್ರಾಂತ್ಯವನ್ನು ಗೆಲ್ಲುತ್ತಾ ಸಾಗಿದ. ಕೊನೆಗೆ ಆತ ಭಾರತವನ್ನು ತಲುಪಿದ. ಅಲ್ಲಿಂದ ವಾಪಸ್‌ ಹೋಗುವ ಮುನ್ನ ಆತ ತನ್ನೊಡನೆ ಭಾರತದ ಒಬ್ಬ ಯೋಗಿಯನ್ನು ಅಥೆನ್ಸ್‌ಗೆ ಕರೆದೊಯ್ಯಲು ಬಯಸಿದ್ದ. (“ಭಾರತದ ಯೋಗಿಗಳು ಅಪ್ರತಿಮ ಜ್ಞಾನಿಗಳೆಂದು ಕೇಳಿದ್ದರಿಂದ ಆತ ಈ ನಿರ್ಧಾರಕ್ಕೆ ಬಂದ’ ಎಂದು ಅಲೆಕ್ಸಾಂಡರ್‌ನ ಸಂಗಡಿಗ ಪ್ಲೊಟಾರ್ಚ್‌ ಬರೆದಿದ್ದಾನೆ.)

ಒಬ್ಬ ಯೋಗಿಯನ್ನು ಕರೆತನ್ನಿ ಎಂದು ಅಲೆಕ್ಸಾಂಡರ್‌ ತನ್ನ ಸೈನಿಕರಿಗೆ ಆಜ್ಞಾಪಿಸಿದ. ಈ ಸೈನಿಕರು ಹೋಗಿ ಚಿಕ್ಕ ಗುಹೆಯಲ್ಲಿ ವಾಸವಾಗಿದ್ದ ಯೋಗಿಯೊಬ್ಬರನ್ನು ಭೇಟಿಯಾದರು. ಈ ಯೋಗಿಯ ಹೆಸರು ದಂಡಾಮಿಸ್‌(ಎಂದು ಪ್ಲೊಟಾರ್ಚ್‌ ಬರೆಯುತ್ತಾನೆ.)
“ನಮ್ಮ ರಾಜ ಅಲೆಕ್ಸಾಂಡರ್‌ ನಿಮ್ಮನ್ನು ತನ್ನೊಂದಿಗೆ ಕರೆದೊಯ್ಯಲು ಬಯಸಿದ್ದಾನೆ, ಬೇಗ ಸಿದ್ಧರಾಗಿ’ ಎಂದು ಸೈನಿಕರು ಯೋಗಿಗೆ ಹೇಳುತ್ತಾರೆ.

ಯೋಗಿ ಕಣ್ಣುತೆರೆಯದೇ ಉತ್ತರಿಸುತ್ತಾರೆ-“ಆಗಲ್ಲ. ನಾನು ಬರುವುದಿಲ್ಲ!
“ನಿಮಗೇನು ಬೇಕೋ ಕೇಳಿ. ವಜ್ರ, ವೈಢೂರ್ಯ, ಬಂಗಾರ, ಬೆಳ್ಳಿ..ಏನು ಕೇಳಿದರೂ ಅಲೆಕ್ಸಾಂಡರ್‌ ನಿಮಗೆ ಕೊಡುತ್ತಾನೆ’ ಎನ್ನುತ್ತಾರೆ ಸೈನಿಕರು.
“ನಿಮ್ಮ ಬಂಗಾರ ಬೆಳ್ಳಿ ಮಣ್ಣಿಗೆ ಸಮ…ನನಗೆ ಬೇಕಿಲ್ಲ’ ಎನ್ನುತ್ತಾರೆ ಯೋಗಿ.
ವಾಪಾಸ್‌ ತೆರಳಿದ ಸೈನಿಕರು ಏನೇನು ನಡೆಯಿತೆಂದು ಅಲೆಕ್ಸಾಂಡರ್‌ಗೆ ಮಾಹಿತಿ ನೀಡುತ್ತಾರೆ. ಯೋಗಿಯನ್ನು ಕರೆತರುತ್ತೇನೆ ಎಂದು ಅಲೆಕ್ಸಾಂಡರ್‌ ಸಿದ್ಧನಾಗುತ್ತಾನೆ. ನೇರವಾಗಿ ಯೋಗಿಯ ಬಳಿ ಬರುತ್ತಾನೆ. “ಬೇಗನೇ ಸಿದ್ಧರಾಗಿ, ನೀವು ನನ್ನ ಜತೆ ಬರಬೇಕು’ ಎಂದು ಆಜ್ಞಾಪಿಸುವ ಧ್ವನಿಯಲ್ಲಿ ಹೇಳುತ್ತಾನೆ.

“ನನಗೆ ಆಸಕ್ತಿಯಿಲ್ಲ’ ಎಂದು ಅಷ್ಟೇ ಶಾಂತವಾಗಿ ಹೇಳುತ್ತಾರೆ ಯೋಗಿ. ಅಲೆಕ್ಸಾಂಡರ್‌ನ ಪಿತ್ತ ನೆತ್ತಿಗೇರುತ್ತದೆ- “ನಾನು ಯಾರು ಅಂತ ಗೊತ್ತಿದೆಯೇನು ನಿಮಗೆ?’ ಎಂದು ಅಬ್ಬರಿಸುತ್ತಾನೆ.
ಆಗ ಯೋಗಿ ನಗುತ್ತಾ ಅನ್ನುತ್ತಾರೆ, ನೀನು ಯಾರು ಅಂತ ನನಗೆ ಚೆನ್ನಾಗಿ ಗೊತ್ತಿದೆ- “ನೀನು ನನ್ನ ಗುಲಾಮರ ಗುಲಾಮ!’

ಅಲೆಗ್ಸಾಂಡರ್‌ಗೆ ವಿಪರೀತ ಅವಮಾನವಾಗುತ್ತದೆ. “ನನ್ನನ್ನೇ ಗುಲಾಮರ ಗುಲಾಮ ಅಂತೀಯ?’ ಎಂದು ಗರ್ಜಿಸುತ್ತಾನೆ.
ಯೋಗಿ ಹೇಳುತ್ತಾರೆ: “ನಾನು ಸಿಟ್ಟು ಮತ್ತು ಅಹಂಕಾರದ ಮೇಲೆ ಗೆಲುವು ಸಾಧಿಸಿದ್ದೇನೆ. ಹೀಗಾಗಿ ಅವುಗಳು ನನ್ನ ಗುಲಾಮರಾಗಿವೆ. ಆದರೆ ನೀನು ಇನ್ನೂ ಸಿಟ್ಟು ಮತ್ತು ಅಹಂಕಾರದ ವಿರುದ್ಧ ಗೆದ್ದಿಲ್ಲ. ಹಾಗಾಗಿ ನೀನು ಅವುಗಳ ಗುಲಾಮ. ಹಾಗಿದ್ದಾಗ, ನೀನು ನನ್ನ ಗುಲಾಮರ ಗುಲಾಮ ಎಂದರ್ಥವಲ್ಲವೇ?’

ಅಲೆಕ್ಸಾಂಡರ್‌ಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ತಿಳಿಯಲೇ ಇಲ್ಲ. ಸುಮ್ಮನೇ ಎದ್ದು ಹೊರಡುತ್ತಾನೆ. ನೀವೊಂದು ಸಂಗತಿಯನ್ನು ಗಮನಿಸಿದಿರಾ? ಅಥೆನ್ಸ್‌ನಲ್ಲಿ ಡಯೋಜಿನೀಸ್‌ ಅಲೆಕ್ಸಾಂಡರ್‌ನ ಅಹಂಕಾರವನ್ನು ಪ್ರಶ್ನಿಸಿದ, ಭಾರತದಲ್ಲಿ ದಂಡಾಮೀಸ ಯೋಗಿಯೂ ಅಲೆಕ್ಸಾಂಡರ್‌ಗೆ ಬುದ್ಧಿವಾದ ಹೇಳಿದರು.

ಈ ಎಲ್ಲಾ ಸಂಗತಿಗಳೂ ಅಲೆಕ್ಸಾಂಡರ್‌ನ ಆಂತರ್ಯದಲ್ಲಿ ಆಳವಾದ ಬದಲಾವಣೆ ತಂದವು ಎನಿಸುತ್ತದೆ. ಈ ಕಾರಣಕ್ಕಾಗಿಯೇ ಅಲೆಕ್ಸಾಂಡರ್‌ ತನ್ನ ವಿಲ್‌ಪತ್ರದಲ್ಲಿ ಬರೆದ ಸಾಲುಗಳು, ಆತನಿಗೆ ಕೊನೆಗಾಲದಲ್ಲಿ ಆದ ಜ್ಞಾನೋದಯವನ್ನು ಸೂಚಿಸುವಂತಿವೆ. ಅಲೆಕ್ಸಾಂಡರ್‌ ಬರೆಯುತ್ತಾನೆ, “”ನಾನು ಸತ್ತ ಮೇಲೆ ನನ್ನೆರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗೆ ಕಾಣಿಸುವಂತೆ ಇಡಿ. ಯಾವ ಕೈಗಳು ಜಗತ್ತನ್ನು ವಶಮಾಡಿಕೊಳ್ಳಬೇಕೆಂದು ಹಾತೊರೆದಿದ್ದವೋ, ಯಾವ ಕೈಗಳು 70ಕ್ಕೂ ಹೆಚ್ಚು ಮಹಾನಗರಗಳನ್ನು ಸೃಷ್ಟಿಸಿದವೋ, ಯಾವ ಕೈಗಳು 11,000 ಮೈಲಿಗೂ ಹೆಚ್ಚು ಭೂ ಪ್ರದೇಶದಲ್ಲಿ ವಿಜಯದ ಪತಾಕೆ ಹಾರಿಸಿದ್ದವೋ, ಯಾವ ಕೈಗಳು ಅಷ್ಟೆ „ಶ್ವರ್ಯಗಳನ್ನು ಸಂಪಾದಿಸಿದ್ದವೋ, ಅಂಥ ಕೈಗಳೂ ಕೊನೆಯಲ್ಲಿ ಏನನ್ನೂ ತೆಗೆದುಕೊಂಡು ಹೋಗಲಿಲ್ಲ. ಈ ಅಲೆಕ್ಸಾಂಡರ್‌ ಬರಿಗೈಯಲ್ಲೇ ಸತ್ತ ಎನ್ನುವುದು ಜಗತ್ತಿಗೆ ತಿಳಿಯಲಿ”

ಆಗಲೇ ಹೇಳಿದೆನಲ್ಲ, ನಮ್ಮ ಗೊಂದಲಮಯ ಬುದ್ಧಿಯು ಈ ಜೀವನ ಕ್ಷಣಿಕವಾದದ್ದು ಎನ್ನುವ ಸತ್ಯವನ್ನು ಮರೆಸಿಬಿಡುತ್ತದೆ. ಇಂದು ನಮ್ಮ ಬಳಿ ಏನಿದೆಯೋ ಅದೆಲ್ಲ ಮುಂದೆಯೂ ಇರುತ್ತದೆ ಎಂಬ ಭ್ರಮೆಯಲ್ಲಿ ಅದು ನಮ್ಮನ್ನು ಮುಳುಗಿಸಿರುತ್ತದೆ.

ಸ್ವಾಮಿ ಮುಕುಂದಾನಂದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ