ಔಷಧೀಯ ಗುಣದ ಸ್ವಾತಿ ಮಳೆ

ಸ್ವಾತಿ ಮುತ್ತಿನ ಮಳೆಹನಿಯೆ...

Team Udayavani, Oct 26, 2019, 3:42 AM IST

“ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||…’ ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ… ಅ. 24ರ ಸಂಜೆಯಿಂದ ಸ್ವಾತಿ ನಕ್ಷತ್ರದ ಮಳೆ ಆರಂಭವಾಗಿದೆ. ನ. 6ರ ವರೆಗೆ ಈ ಮಳೆಯ ಕಾಲಾವಧಿ. ಸ್ವಾತಿ ನಕ್ಷತ್ರದ ಮಳೆಗೆ ಭಾರೀ ಮಹತ್ವವಿದೆ. ಇದು ಮಳೆಗಾಲದ ಕೊನೆಯಲ್ಲಿ ಬರುವ ಮಳೆಯಾದ ಕಾರಣ ಮಳೆ ನೀರು ಕೊಯ್ಲು ಮಾಡುವವರಿಗೆ ಅಮೂಲ್ಯ. ಹೀಗಾಗಿಯೋ ಏನೋ ಸ್ವಾತಿ ಮಳೆ ಬಂದರೆ ಬೇಸಗೆಯಲ್ಲಿ ನೀರಿನ ಬರ ಬಾರದು ಎಂಬ ನಂಬಿಕೆ ಬೆಳೆದು ಬಂದಿದೆ. ಹಾಗೆಂದು ಈ ನಂಬಿಕೆಯನ್ನು ಆಧರಿಸಿ ನೀರನ್ನು ಪೋಲು ಮಾಡಿದರೆ ಬರ ಬಾರದಿರದು ಎಂಬ ಎಚ್ಚರಿಕೆಯೂ ಬೇಕಾಗುತ್ತದೆ.

ಸ್ವಾತಿ ಬಿಸಿಲೂ ಪರಿಣಾಮಕಾರಿ
ಸ್ವಾತಿ ನಕ್ಷತ್ರದ ಮಳೆಯಂತೆ ಬಿಸಿಲಿಗೂ ಔಷಧೀಯ ಗುಣವಿದೆ. ಹಳೆಯ ಪುಸ್ತಕಗಳನ್ನು, ಉತ್ತಮ ಬಟ್ಟೆಗಳನ್ನು ಈ ಬಿಸಿಲಿಗೆ ಹಾಕುತ್ತಿದ್ದರು. ಸ್ವಾತಿ ಬಿಸಿಲಿನಿಂದಾಗಿ ಹುಳಹುಪ್ಟಟೆ ಹಿಡಿದು ಹಾಳಾಗುವುದು ತಪ್ಪುತ್ತಿತ್ತು. ಈ ಬಾರಿ ಧಾರಾಳ ಸ್ವಾತಿ ನಕ್ಷತ್ರದ ಮಳೆಯಾಗುತ್ತಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಜನರು ಪಡೆಯಬೇಕಾಗಿದೆ. ಸಂಗ್ರಹ ಕ್ರಮ ಶರದೃತುವಿನ ಈ ಕಾಲಘಟ್ಟದಲ್ಲಿ ಪ್ರಕೃತಿಯೂ ಶಾಂತವಾಗಿರುತ್ತದೆ. ಹೀಗಾಗಿ ಈಗ ಬರುವ ಮಳೆಯಲ್ಲಿಯೂ ಶಾಂತಿ ಇರುತ್ತದೆ. ಇದರಲ್ಲಿ ರೋಗನಿರೋಧಕ ಗುಣವಿದೆ. ಚಿಪ್ಪಿನ ಮೇಲೆ ಈ ಮಳೆ ಬಿದ್ದಾಗಲೇ ಇದು ಮುತ್ತಾಗುತ್ತದೆ. ಈ ಮಳೆಯನ್ನು ಏಳು ಪದರಗಳ ವಸ್ತ್ರದಿಂದ ಸೋಸಿ ಸಂಗ್ರಹಿಸಿಟ್ಟು ಕುಡಿಯುವುದು ಉತ್ತಮ. ಇದರ ಬಗೆಗೆ ಗುಜರಾತಿನಲ್ಲಿ ವಿಶೇಷ ಅಧ್ಯಯನ ನಡೆದಿದೆ. ಆಯುರ್ವೇದ ಶಾಸ್ತ್ರದಲ್ಲಿ ಮುತ್ತಿನ ಬಳಕೆಯೂ ಇದೆ ಎನ್ನುತ್ತಾರೆ ಉಪ್ಪುಂದದ ವೈದ್ಯೆ ಡಾ|ಅನುರಾಧಾ ಕಾಮತ್‌ .

ಈ ಮಳೆಯನ್ನು ಮಣ್ಣಿನ, ಪಿಂಗಾಣಿ, ತಾಮ್ರದ ಅಥವಾ ಗಾಜಿನ ಪಾತ್ರೆಯಲ್ಲಿ ಹಿಡಿದಿಟ್ಟುಕೊಂಡು ಬಳಸಬೇಕು. ನೇರ ಆಕಾಶದಿಂದ ಬೀಳುವ ನೀರನ್ನು ಹಿಡಿಯಬೇಕು ಎಂದು ಮಂಗಳೂರು ಪಿಲಿಕುಳ ನಿಸರ್ಗಧಾಮದ ಔಷಧೀಯ ಸಸ್ಯಗಳ ಮೇಲ್ವಿಚಾರಕ ಉದಯಕುಮಾರ ಶೆಟ್ಟಿಯವರು ಸಲಹೆ ನೀಡುತ್ತಾರೆ.

ಮಖಾ ನಕ್ಷತ್ರದ ಮಳೆಗೂ ಮಹತ್ವ
ಹಿಂದೆ ಪೆರ್ಡೂರು ದೇವಸ್ಥಾನದಲ್ಲಿ ಸಿಂಹ ಸಂಕ್ರಮಣದ ಮಖಾ ನಕ್ಷತ್ರದ ನೀರಿನಿಂದ ಅಭಿಷೇಕ ಮಾಡಿದ ತೀರ್ಥವನ್ನು ಶಿವಮೊಗ್ಗ ಜಿಲ್ಲೆಯಿಂದ ಆಗಮಿಸಿದ ಕೃಷಿಕರು ಕೊಂಡೊಯ್ದು ತೋಟ, ಗದ್ದೆಗಳಿಗೆ ಚಿಮುಕಿಸುತ್ತಿದ್ದರು ಎಂಬ ಮಾತು ಇದೆ. ಇದನ್ನು ಯಾರೂ ನೋಡಿದವರಿಲ್ಲ ಎನ್ನುತ್ತಾರೆ ಪೆರ್ಡೂರು ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ರಾಮಚಂದ್ರ ಐತಾಳ್‌.

ಮಖಾ ನಕ್ಷತ್ರದ ಮಳೆಗೂ ಸ್ವಾತಿ ನಕ್ಷತ್ರದ ಮಳೆಯಷ್ಟೇ ಮಹತ್ವವಿದೆ. ಈ ಮಳೆ ಬಂದರೆ ಕೃಷಿ ಸಹಿತ ಲೋಕಕ್ಕೆ ಶುಭಫ‌ಲ ಕೊಡುತ್ತದೆ ಎಂಬ ನಂಬಿಕೆ ಇದೆ. ಇದನ್ನೂ ಸಂಗ್ರಹಿಸಿ ಔಷಧಿಯಾಗಿ ಬಳಸುವ ಕ್ರಮವಿದೆ. ಚಿಕ್ಕ ಮಕ್ಕಳಿಗೆ ಒಂದೆರಡು ಚಮಚ ಈ ನೀರನ್ನು ಕುಡಿಯಲು ಕೊಟ್ಟರೆ ಹೊಟ್ಟೆಹುಳದ ಬಾಧೆ ನಿವಾರಣೆಯಾಗುತ್ತದೆ. ಸ್ವಾತಿ ಮಳೆ ನೀರನ್ನು ಮೊಸರು, ಮಜ್ಜಿಗೆಗೆ ಬಳಸುವುದು ಔಷಧೀಯ ಗುಣವಿರುವುದರಿಂದಲೇ ಎಂದು ಡಾ|ಅನುರಾಧಾ ಕಾಮತ್‌ ಬೆಟ್ಟು ಮಾಡುತ್ತಾರೆ.

ಹೆಪ್ಪು ಹಾಕುವಾಗ, ಹಾಲು ಉಕ್ಕಿಸುವಾಗ…
ಸ್ವಾತಿ ನಕ್ಷತ್ರದ ಮಳೆಯ ನೀರನ್ನು ಉತ್ತರ ಕರ್ನಾಟಕದಲ್ಲಿ ಹೊಸದಾಗಿ ಹೆಪ್ಪು ಹಾಕಲು ಬಳಸುವ ಕ್ರಮವಿದೆ. ಸಾಮಾನ್ಯವಾಗಿ ಹಿಂದಿನ ದಿನದ ಹೆಪ್ಪು ಬಳಸುತ್ತಾ ಹಳತಾಗುತ್ತದೆ. ವರ್ಷಕ್ಕೊಮ್ಮೆ ಹೊಸ ಹೆಪ್ಪು ಮಾಡಲು ಈ ಮಳೆ ನೀರನ್ನು ಬಳಸುವ ಕ್ರಮವಿದೆ. ಔಷಧೀಯ ಗುಣ ವಿರುವುದರಿಂದಲೇ ಈ ಪ್ರಯೋಗ ಬಂದಿರಬಹುದು. ಈ ನೀರನ್ನು ಹಾಲು, ಮೊಸರಿನ ಜತೆ ಮಿಶ್ರ ಮಾಡುವುದಿದೆ.
ಬ್ಯಾಕ್ಟೀರಿಯ ನಾಶಕ ಗುಣ ಇರುವುದರಿಂದ ಹಾಲು ಕುದಿಯುವಾಗ (ಉಕ್ಕುವ ಸಂದರ್ಭ) ಸ್ವಾತಿ ನಕ್ಷತ್ರದ ಮಳೆ ನೀರನ್ನು ನಮ್ಮ ಹಿಂದಿನವರು ಬಳಸುತ್ತಿದ್ದರು ಎಂಬುದನ್ನು ಪೆರ್ಡೂರು ದೇವಸ್ಥಾನದ ಅರ್ಚಕ ರಾಮದಾಸ ಆಚಾರ್ಯ ನೆನಪಿಸುತ್ತಾರೆ.

ತಾತ್ಯಾಗೌಡರ ಅಬ್ಸರ್ವೇಶನ್‌ ಸೈನ್ಸ್‌
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಎಲಿಮನ್ನೋಳಿ ಗ್ರಾಮದ ತಾತ್ಯಾಗೌಡ ಮಲಗೌಡನವರ್‌ ಅವರು ಬಿಎಸ್ಸಿ ಪದವೀಧರ, ಕೃಷಿಕ. ಈಗ 63 ವರ್ಷ. ಇವರ ಅಬ್ಸರ್ವೇಶನ್‌ ಸೈನ್ಸ್‌ ಪ್ರಯೋಗ ಅದ್ಭುತವಾದುದು. ಇವರ ಹಿರಿಯರು ರೇಷ್ಮೆ ಬಟ್ಟೆಯನ್ನು ಸ್ವಾತಿ ನಕ್ಷತ್ರದ ವೇಳೆ ಮಳೆಯಾದರೂ, ಬಿಸಿಲಾದರೂ ಹೊರಗೆ ಹಾಕುತ್ತಿದ್ದರು. ಮಳೆಯಾದರೆ ಒದ್ದೆಯಾದ ಬಟ್ಟೆಯನ್ನು ಒಣಗಲು ಹಾಕುತ್ತಿದ್ದರು. ಬಟ್ಟೆಯ ಬಾಳಿಕೆ ಹೆಚ್ಚಿಗೆ ಬರುತ್ತಿತ್ತು. ಸ್ವಾತಿ ಮಳೆ ಬಂದ ಬಳಿಕ ಹೊಲದ ಬೆಳೆಯ ರೋಗಗಳು ನಿವಾರಣೆಯಾಗುತ್ತಿತ್ತು. ಸ್ವಾತಿ ನಕ್ಷತ್ರದ ಮಳೆಯಲ್ಲಿ ನೆನೆದ ಜಾನುವಾರುಗಳಲ್ಲಿ ಈ ಮೊದಲಿದ್ದ ಗಾಯಗಳು ವಾಸಿಯಾಗುತ್ತಿದ್ದವು. ಇದನ್ನು ಕಂಡ ತಾತ್ಯಾಗೌಡರಿಗೆ ಕುತೂಹಲ ಮೂಡಿತು. ಈ ನೀರನ್ನು ಸಂಗ್ರಹಿಸಿ ಗಾಯವಾದಾಗ ಜಾನುವಾರುಗಳಿಗೆ ಹಾಕಿದಾಗ ಬೇಗನೆ ಗುಣಮುಖವಾಗುತ್ತಿತ್ತು. ಜಾನುವಾರುಗಳಿಗೆ ಬರುವ ಒಣಗು (ಉಣ್ಣಿ) ಈ ನೀರನ್ನು ಹಾಕಿದಾಗ ಹೋಗುತ್ತಿತ್ತು. ಕ್ರಮೇಣ ಈ ಪ್ರಯೋಗವನ್ನು ಮನುಷ್ಯರ ಮೇಲೂ ಮಾಡಿ ಸಾವಿರಾರು ಜನರ ರೋಗಗಳನ್ನು ಗುಣಪಡಿಸಿದ ಹಿರಿಮೆ ಇವರಿಗೆ ಇದೆ.

ಗ್ಯಾಂಗ್ರಿನ್‌ ಗಾಯವಾದವರು ಸಹಜ ನೀರು ಹಾಕಿ ತೊಳೆದ ಬಳಿಕ ಈ ನೀರನ್ನು ಸ್ವಲ್ಪ ಹಾಕಿದರೆ ಒಂದು ವಾರದಲ್ಲಿ ಗುಣವಾಗುತ್ತದೆ. ಇದು ಕ್ಯಾನ್ಸರ್‌ ರೋಗಕ್ಕೂ ಅತ್ಯುಪಯುಕ್ತ ಎನ್ನುವುದನ್ನು ಗೌಡರು ಕಂಡುಕೊಂಡಿದ್ದಾರೆ. ಸ್ವಾತಿ ನಕ್ಷತ್ರದ ಮಳೆ ನೀರನ್ನು ಸಂಗ್ರಹಿಸಿ ಒಂದೋ ಕುಡಿಯಲು ಹೇಳುತ್ತಾರೆ, ಇಲ್ಲವೇ ನೋವಿದ್ದ/ಗಾಯದ ಮೇಲೆ ಸಿಂಪಡಿಸಲು ಹೇಳುತ್ತಾರೆ. ವೈದ್ಯಕೀಯ/ ಔಷಧ ಸಂಬಂಧಿತ ಕಾನೂನಿನವರಿಂದ ನಿಮಗೇನೂ ತೊಂದರೆ ಬರಲಿಲ್ಲವೆ ಎಂದು ಪ್ರಶ್ನಿಸಿದಾಗ “ಇದು ನೈಸರ್ಗಿಕ ವಸ್ತು. ಯಾರೋ ಕಷ್ಟದಲ್ಲಿದ್ದವರು ಬಂದು ಹೇಳಿದಾಗ ಅವರಿಗೆ ನಮ್ಮಲ್ಲಿ ಸಂಗ್ರಹಿಸಿದ ಮಳೆ ನೀರನ್ನು ಬಳಸಲು ಹೇಳುತ್ತೇನೆ. ನಾನೇನೂ ಹಣ ತೆಗೆದುಕೊಳ್ಳುವುದಿಲ್ಲ. ಜನರಿಗೆ ಪ್ರಯೋಜನವಾಗುವುದು ಮುಖ್ಯ. ಇದರಿಂದ ಕಾನೂನಿನ ಸಮಸ್ಯೆ ಹೇಗಾಗುತ್ತದೆ?’ ಎಂದು ಕೇಳುತ್ತಾರೆ.

ಸಂಸ್ಕೃತದ ಗ್ರಂಥದಲ್ಲಿ 280 ರೋಗಗಳಿಗೆ ಇದು ಪರಿಣಾಮಕಾರಿ ಎಂದು ಇದೆಯಂತೆ. ನಾನು 10-15 ಕಾಯಿಲೆ ಇದ್ದವರಿಗೆ ಪ್ರಯೋಗ ಮಾಡಿದ್ದೇನೆ. ಪ್ರಯೋಜನವಾಗಿದೆ. ಸಾಮಾನ್ಯ ಜನರೂ ದಿನಕ್ಕೆ ಒಂದು ಚಮಚ ಈ ನೀರನ್ನು ಬಳಸಿದರೆ ಆರೋಗ್ಯವೃದ್ಧಿ ಆಗುತ್ತದೆ. ನನ್ನಲ್ಲಿ ಹಲವು ಔಷಧೀಯ ಸಸ್ಯಗಳೂ ಇವೆ. ಇದರ ಪ್ರಯೋಜನವನ್ನೂ ಜನರಿಗೆ ಹೇಳುತ್ತೇನೆ ಎಂದು ತಾತ್ಯಾಗೌಡರು ಹೇಳುತ್ತಾರೆ.

ಮಟಪಾಡಿ ಕುಮಾರಸ್ವಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ....

  • ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ....

  • ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ...

  • ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

ಹೊಸ ಸೇರ್ಪಡೆ