CONNECT WITH US  

ಗಾಂಧಿ ಕ್ಲಾಸ್‌!

ಕ್ಲಾಸಲ್ಲೊಂದು ರೋಲು, ಅವರಿಗಿಲ್ಲ ಸೋಲು...

ಇಂದು ಗಾಂಧೀಜಿ ಹುತಾತ್ಮರಾದ ದಿನ. ಶಾಲಾ- ಕಾಲೇಜುಗಳಲ್ಲಿ ಗಾಂಧೀಜಿಯ ನೆರಳು ಯಾವ ರೂಪದಲ್ಲಿ ಕಾಣುತ್ತಿದೆ ಎಂಬುದನ್ನು ನೆನೆದರೆ, ಒಮ್ಮೆ ಆತಂಕವಾಗುತ್ತದೆ...

ಆಗ ನಾನಿನ್ನೂ ನಾಲ್ಕನೇ ತರಗತಿ ಇರಬಹುದು. ಒಂದೆಡೆ ಮೇಷ್ಟ್ರು ಕೊಡುವ ಬೆತ್ತದೇಟು, ಮತ್ತೂಂದೆಡೆ ಮನೆಯಲ್ಲಿ ಅಮ್ಮ ಕರುಣಿಸುತ್ತಿದ್ದ ಕೆಂಪನೆಯ ಬರೆ, ಫ‌ಟ್‌ ಎಂದು ಒಂದೇಟು ಕೊಟ್ಟರೆ ಐದು ಕೈಬೆರಳುಗಳ ಅಚ್ಚಾ ತೊಡೆಯ ಮೇಲೆ ಹಾಜರ್‌! ಇಂಥ ಪರಿಸ್ಥಿತಿಯಲ್ಲಿ ವಿಧೇಯ ವಿದ್ಯಾರ್ಥಿ ಆಗದೆ ಉಳಿಗಾಲವಿರಲಿಲ್ಲ. ನಾಲ್ಕು ದಿನ ರಜೆಯಿದ್ದರೆ, ರಜೆಯ ಮೊದಲ ದಿನವೇ ಹೋಂ ವರ್ಕ್‌ ಮುಗಿಸುವುದೇನು? ತರಗತಿಯಲ್ಲಿ ಕೇಳಿದ ಪ್ರಶ್ನೆಗೆಲ್ಲಾ ಥಟ್ಟನೆ ಎದ್ದು ಉತ್ತರಿಸುವುದೇನು? ಸಹಪಾಠಿಗಳೆಲ್ಲ ಒಂಬತ್ತರ ಮಗ್ಗಿಗೇ ತಡವರಿಸುತ್ತಿದ್ದರೆ, ನಾನು ಮಾತ್ರ "ಇಪ್ಪತ್ನಾಲ್ಕೊಂದ್ಲಿ ಇಪ್ಪತ್ನಾಲ್ಕು' ಎಂದು ದಿಟ್ಟನಂತೆ ಮೇಷ್ಟ್ರ ಮುಂದೆ ನಿಲ್ಲುವುದೇನು? ಆಹಾ!! ಮೆರೆದಿದ್ದೇ ಮೆರೆದಿದ್ದು. ನಾನು ಪಟಪಟನೆ ಉತ್ತರಿಸುತ್ತಿದ್ದರೆ ಮೇಷ್ಟ್ರಿಗೆ ಖುಷಿಯೋ ಖುಷಿ, ಅದೇ ಖುಷಿಯಲ್ಲಿ ಪಕ್ಕದಲ್ಲಿ ಉತ್ತರಿಸಲು ತಡವರಿಸಿ ಗೊಣ್ಣೆ ಸುರಿಸುತ್ತಿದ್ದ ಗೋಪಾಲನ ಮೂಗು ಹಿಡಿದು ಕೆನ್ನೆಗೆ ಬಾರಿಸು ಎಂದು ಆರ್ಡರ್‌ ಮಾಡುವ ತನಕ ನಾನೆಂಥಾ ತಪ್ಪು ಮಾಡಿದೆ ಎಂದು ಅರಿವಾಗಿರಲಿಲ್ಲ... ಹೀಗೆ ಗೊತ್ತೋ ಗೊತ್ತಿಲ್ಲದೆಯೋ ಒಳ್ಳೆಯ ವಿದ್ಯಾರ್ಥಿ ಎಂದು ಶಿಕ್ಷಕರಿಂದ ಬಿರುದು ಪಡೆದಿದ್ದರೆ, ಗೊಣ್ಣೆ ಗೋಪಾಲ ಮಾತ್ರ ನನಗೆ "ಗಾಂಧಿ' ಎಂದು ಹೆಸರಿಟ್ಟು ಇಡೀ ಸ್ಕೂಲಿಗೇ ಫೇಮಸ್‌ ಮಾಡಿದ್ದ, ಏಳನೇ ಕ್ಲಾಸು ಮುಗಿಸಿ ಶಾಲೆಯಿಂದ ಆಚೆ ಬರುವ ತನಕ ನನ್ನ ಪಾಲಿಗೆ ದಿನವೂ ಗಾಂಧೀ ಜಯಂತಿ!

ಹೈಸ್ಕೂಲಿಗೆ ನಾನು ಬೇರೆ ಶಾಲೆಗೆ ಸೇರಿದ ಕಾರಣ ಗೊಣ್ಣೆ ಗೋಪಾಲ ಹಾಗೂ "ಗಾಂಧಿ' ಎಂದು ಕೂಗುವವರಿಂದ ಮುಕ್ತಿ ಸಿಕ್ಕಿತ್ತು. ಹೊಸ ಸ್ಕೂಲು, ಹೊಸ ಫ್ರೆಂಡ್ಸ್ ಒಂದು ವರ್ಷ ಸರಾಗವಾಗಿ ಕಳೆದಿತ್ತು. ಓದುವುದರಲ್ಲಿ ಮುಂದಿದ್ದ ಕಾರಣ ಇಲ್ಲಿಯೂ ಶಿಕ್ಷಕರೊಂದಿಗೆ ತುಸು ಸಲುಗೆಯಿಂದಲೇ ಇದ್ದೆ. ಇಂಥ ಹೈಸ್ಕೂಲಿನ ವಾತಾವರಣ ಮಾತ್ರ ವಿಚಿತ್ರವಾಗಿತ್ತು. ಹುಡುಗ- ಹುಡುಗಿ ಪರಸ್ಪರ ಮಾತಾಡಿದರೆ ದೊಡ್ಡ ಸುದ್ದಿಯಾಗುತ್ತಿದ್ದ ಕಾರಣ ಅಪ್ಪಿತಪ್ಪಿಯೂ ಹುಡುಗಿಯರತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹೀಗಿರುವಾಗಲೇ ವೆಂಕಟರಮಣ ಮೇಷ್ಟ್ರು ನನ್ನನ್ನು ಕ್ಲಾಸ್‌ ಲೀಡರ್‌ ಎಂದೂ, ಹೊಸದಾಗಿ ಬಂದಿದ್ದ ಸಹಪಾಠಿ ಸಂಗೀತಳನ್ನು ಸೆಕೆಂಡ್‌ ಲೀಡರ್‌ ಎಂದೂ ನೇಮಿಸಿದರು. ಸಂಗೀತಾಳ ಅಂದಕ್ಕೆ ಅದಾಗಲೇ ನನ್ನನ್ನೂ ಸೇರಿಸಿ ಸುಮಾರು ಹುಡುಗರು ಮಾರುಹೋಗಿದ್ದೆವಾದರೂ, ಸ್ಕೂಲಿನ ಅಲಿಖೀತ ನಿಯಮಕ್ಕೆ ಹೆದರಿ ಮಾತಾಡಿಸುವ ಸಾಹಸ ಮಾಡಿರಲಿಲ್ಲ. ಆದರೆ, ಲೀಡರ್‌ ಆದಾಗ ಮಾತಾಡಿಸುವುದು ಅನಿವಾರ್ಯವಾಗಿದ್ದರೂ ನಾನು ಅಗತ್ಯಕ್ಕಿಂತ ಕಡಿಮೆಯೇ ಮಾತನಾಡುತ್ತಿದ್ದೆ. "ಛೇ, ಹೆಚ್ಚು ಮಾತಾಡೋಕೆ ಆಗುತ್ತಿಲ್ಲವಲ್ಲಾ' ಎಂದು ನಾನು ಹೊಟ್ಟೆ ಉರಿಸಿಕೊಳ್ಳುತ್ತಿದ್ದರೆ, ಮಾತಾಡುವ ಅವಕಾಶ ವಂಚಿತರು, ನನ್ನನ್ನು ಕಂಡು ಹೊಟ್ಟೆ ಉರಿಸಿಕೊಂಡು, ಸಂಗೀತಾಳ ಜೊತೆ ನನ್ನ ಹೆಸರನ್ನು ತಳುಕು ಹಾಕಿದರು. ಈ ವಿಷಯ ಪಕ್ಕದ ತರಗತಿಗೂ ಹರಡಿದಾಗ ನನಗೆ ಪುಕ್ಕಲು ಶುರುವಾಗಿ, ಎಲ್ಲಿ ವೆಂಕಟರಮಣ ಮೇಷ್ಟ್ರಿಗೆ ವಿಷಯ ತಲುಪುತ್ತದೋ ಎಂದು ಬೆದರಿ ಸಂಗೀತಾಳನ್ನು ಕಂಡರೆ ಮಾರು ದೂರ ಓಡುತ್ತಿದ್ದೆ. ರೇಗಿಸಿದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸಂಗೀತ, ಪುಕ್ಕಲನಂತೆ ಹೆದರಿ ಮಾತುಬಿಟ್ಟ ನನ್ನೆಡೆಗೆ ಉರಿದುಬಿದ್ದಿದ್ದಳು. ಅದೇ ಸಿಟ್ಟಿನಲ್ಲಿ ಪುಣ್ಯಾತಿತ್ತಿ ನಾನು ಕಳಚಿಕೊಂಡಿದ್ದ  "ಗಾಂಧಿ' ಪಟ್ಟವನ್ನು ಮತ್ತೆ ಹೆಗಲಿಗೇರಿಸಿದ್ದಳು. ಹೀಗೆ ಹೈಸ್ಕೂಲಿನಲ್ಲೂ ದಿನವೂ ಗಾಂಧೀ ಜಯಂತಿ!

ತೀರಾ ಮೊನ್ನೆ ಹುಡುಗಿಯ ಜೊತೆ ಕಬ್ಬನ್‌ ಪಾರ್ಕ್‌ ಸುತ್ತಾಡಲು ಹೋದಾಗ ಅv ಹತ್ತಿರದಲ್ಲಿದ್ದ ಗಾಂಧೀ ಪ್ರತಿಮೆ ಕಣ್‌ ಸೆಳೆಯಿತು, "ಮುದ್ದೂ... ಗಾಂಧೀ ಸ್ಟಾಚೂ ಹತ್ರ ಒಂದ್‌ ಸೆಲ್ಫಿ ತಗೋಳಣ' ಅಂದಾಗ "ನೀನೇ ದೊಡ್‌ ಗಾಂಧೀ... ನಿನ್‌ ಜೊತೆ ಸೆಲ್ಫಿ ತಗೊಂಡ್ರೆ ಸಾಕು' ಅಂತ ಹುಡುಗಿ ತಲೆ ಮೊಟಕಿದಾಗ ಸಂಗೀತ, ಗೊಣ್ಣೆ ಗೋಪಾಲ ಎಲ್ಲಾ ಒಟ್ಟಾಗಿ ನಿಂತು "ಗಾಂಧೀ' ಎಂದು ಕೂಗಿದಂತಾಯ್ತು.

ಈಗಂತೂ ಗಾಂಧಿ ಪಟ್ಟ ಕೇವಲ ಹುಡುಗರಿಗೆ ಮಾತ್ರ ಸೀಮಿತವಾಗದೆ ಹುಡುಗಿಯರಿಗೂ ಸಿಗುತ್ತಿದೆ. ರಸ್ತೆಯಲ್ಲಿ ತಲೆತಗ್ಗಿಸಿ ನಡೆಯುವ ಹುಡುಗಿ, ಹಣೆಗೆ ಬಿಂದಿಯಿಟ್ಟು ಹೂ ಮುಡಿದಾಕೆ, ಹುಡುಗರೊಂದಿಗೆ ಮಾತಾಡದವಳು ಗಾಂಧಿ ಅನಿಸಿಕೊಳ್ಳುತ್ತಾರೆ.ಹೀಗೆ ಯುವಜನತೆ ಮಹಾತ್ಮ ಗಾಂಧೀಜಿಯವರ ತತ್ವ, ಸಂದೇಶಗಳನ್ನು ಪಾಲಿಸದಿದ್ದರೂ ಅವರ ಹೆಸರನ್ನು ಮಾತ್ರ ಸದಾ ಜಪಿಸುತ್ತಿರುತ್ತಾರೆ. ಥಿಯೇಟರ್‌ನಲ್ಲಿ ಮುಂದಿನ ಸಾಲು ಹೇಗೆ ಗಾಂಧೀಕ್ಲಾಸೋ, ತರಗತಿಯ ಮೊದಲ ಬೆಂಚು ಸಹ ಗಾಂಧೀ ಕ್ಲಾಸೇ!

ಗಾಂಧೀ ಸರ್ವಾಂತರ್ಯಾಮಿ, ಪ್ರತಿ ತರಗತಿಯಲ್ಲೂ, ಸ್ನೇಹಿತರ ಗುಂಪಿನಲ್ಲೂ, ಕೊನೆಗೆ ನಮ್ಮೊಳಗೂ ಒಬ್ಬ ಗಾಂಧೀ ಚಿರಸ್ಥಾಯಿ. 
ಆದರೆ, ನಾವು ಮತ್ತೂಬ್ಬರಿಗೆ ಗಾಂಧೀ ಎಂದು ಕೂಗುವಾಗ ಅದರೊಳಗೊಂದಷ್ಟು ಅಸಹನೆ, ವ್ಯಂಗ್ಯವನ್ನು ತುಂಬುತ್ತೇವೆ. ತಪ್ಪನ್ನು ತಪ್ಪು ಎಂದವ, ಸತ್ಯಕ್ಕೆ ತಲೆ ಬಾಗಿದವ, ಸಂಸ್ಕಾರಕ್ಕೆ ಅಂಟಿಕೊಂಡವ, ರ್‍ಯಾಂಕ್‌ ಪಡೆದವ, ಗಲಾಟೆಗಳಿಂದ ದೂರ ಇರುವವ, ಕಡೆಗೆ ಫೇಸ್‌ಬುಕ್‌, ವಾಟ್ಸಾéಪ್‌ ಬಳಸದವನೂ ಗಾಂಧಿಯಾಗುತ್ತಾನೆ!            

ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತೆ, ಎಷ್ಟೋ ಜನ ಗಾಂಧೀ ಎಂಬ ಹೆಸರಿನಿಂದ ಹೊರಬರಲು ಹೋರಾಡುತ್ತಿದ್ದಾರೆ. ತಾನು ಗಾಂಧಿಯಲ್ಲ ಎಂದು ನಿರೂಪಿಸಿಕೊಳ್ಳಲು ಅನುಕ್ಷಣವೂ ಗಾಂಧೀತನಕ್ಕೆ ಹೊಂದಿಕೆಯಾಗದ ಕೆಲಸ ಮಾಡಲು ಪ್ರಯತ್ನಿಸಿರುತ್ತಾರೆ. ಗಾಂಧೀ ಈಗ ಕೇವಲ ಮಹಾತ್ಮ, ರಾಷ್ಟ್ರಪಿತ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ ಉಳಿದಿಲ್ಲ. ತನ್ನ ತತ್ವ, ಸಂದೇಶಗಳ ಮೂಲಕ ಎಷ್ಟೋ ಜನರ ಬದುಕನ್ನು ಸರಿದಾರಿಗೆ ತಂದ ಗಾಂಧೀ ಎಂಬ ಹೆಸರು ಇಂದು ಎಷ್ಟೋ ಜನರಿಗೆ ಕಿರಿಕಿರಿ, ಸಿಟ್ಟು, ಹತಾಶೆಯನ್ನು ತಂದಿಡುತ್ತಿದೆ. 

ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ಇವೆಲ್ಲಾ ನೆನಪಾಯಿತು, ಗಾಂಧೀ ಎಂಬ ದೇಹ ಮಣ್ಣಾಗಿ ಎಪ್ಪತ್ತು ವರ್ಷಗಳಾದರೂ, ಅವರ ಹೆಸರು ಮಾತ್ರ ಇಂದಿಗೂ ಉಸಿರಾಡುತ್ತಿದೆ, ತುಸು ಕಷ್ಟದಲ್ಲಿ!

 ಸ್ಕಂದ ಆಗುಂಬೆ

Trending videos

Back to Top