CONNECT WITH US  

ಕುಂಕುಮಾಂಕಿತೆ

ಯುವಪೀಳಿಗೆಯಲ್ಲಿ ಹಣೆಗೆ ತಿಲಕವಿಡುವುದೆಂದರೆ ಫ್ಯಾಶನ್‌ ಗೊತ್ತಿಲ್ಲದ ಹಳ್ಳಿಗುಗ್ಗುಗಳ ಹಾಗೆ ಎಂಬ ಭಾವ. ಖಾಲಿ ಹಣೆ ಇಂದಿನ ಹುಡುಗಿಯರಿಗೆ ಫ್ಯಾಶನ್‌. ಸ್ಟೈಲು, ಫ್ಯಾಶನ್ನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಇಂದಿನ ಹುಡುಗಿಯರ ಮುಂದೆ ಹಿರಿಯರು ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಮಾತನಾಡಿದರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಹಾಗಾಗಿ, ಕೂದಲು ಬಿಚ್ಚಿ , ಗಾಳಿಗೆ ಹಾರಿಸುತ್ತ, ಖಾಲಿ ಹಣೆಯಲ್ಲಿ ಸ್ಟೈಲಾಗಿ ಹೋಗುವ ಮಗಳನ್ನು ನೋಡಿ ಅಮ್ಮಂದಿರು ಅಸಹನೆ, ಅಸಹಾಯಕ ನೋಟ ಬೀರುವುದು ಬಿಟ್ಟು ಇನ್ನೇನು ಮಾಡಲು ಸಾಧ್ಯ.

ರಕ್ಷಾ , ರೆಡಿಯಾ? ಹೊತ್ತಾಗ್ತಾ ಇದೆ''
""ನಾನು ರೆಡಿ ಮಮ್ಮಿ...''
ಮದುವೆಯ ಸಮಾರಂಭಕ್ಕೆ ಹೊರಟ ಶಶಿ, ಮಗಳ ಅಲಂಕಾರ ವೀಕ್ಷಿಸುತ್ತ, ""ಎಲ್ಲಾ ಸರಿ ರಕ್ಷಾ , ಹಣೆಯಲ್ಲಿ ಒಂದು ಚಿಕ್ಕದಾದ್ರೂ ಬೊಟ್ಟು ಹಾಕಿದ್ರೆ ಚೆನ್ನಾಗಿ ಕಾಣೋದು''.
""ಅಯ್ಯೋ ಹೋಗು ಮಮ್ಮಿ. ಅದೇನೂ ಬೇಡ. ನಿನ್ನ ಹಾಗೆ ಬೊಟ್ಟು ಹಾಕಿದ್ರೆ ನಾನು ಆಂಟಿ ಥರಾ ಕಾಣಿನಿ ಅಷ್ಟೆ''.
ಮಗಳ ಮಾತಿಗೆ ನಿರುತ್ತರಳಾದರು ಶಶಿ.

ಹಣೆಯಲ್ಲಿ ತಿಲಕ ಧರಿಸುವುದು ಪರಂಪರಾಗತವಾಗಿ ಬಂದ ನಮ್ಮ ಸನಾತನ ಸಂಸ್ಕೃತಿ. ಭ್ರೂಮಧ್ಯೆ ಇಡುವ ಕುಂಕುಮ ಹೆಣ್ಣು ಮಕ್ಕಳಿಗೆ ಭೂಷಣ. ಗಂಡಸರಿಗೂ ಹಣೆಯಲ್ಲಿ ತಿಲಕ ಲಕ್ಷಣದ ಚಿಹ್ನೆ. ಹುಬ್ಬುಗಳ ಮಧ್ಯ ಭಾಗವನ್ನು ಆತ್ಮಕೇಂದ್ರಿತ ಪ್ರದೇಶವೆಂದು ಗುರುತಿಸಲಾಗುತ್ತದೆ. ಹಾಗಾಗಿ ಹಣೆಯಲ್ಲಿ ತಿಲಕವಿಡುವುದರಿಂದ ಆತ್ಮೋದ್ದೀಪನವಾಗಿ ಆತ್ಮೋನ್ನತಿಯಾಗುತ್ತದೆ ಎಂದು ಶಾಸ್ತ್ರ , ಪುರಾಣಗಳು ಹೇಳುತ್ತವೆ. ಆ ಕಾರಣಕ್ಕೇ ಜ್ಯೋತಿಷಿಗಳು, ಸಂಗೀತ, ನೃತ್ಯ ವಿದ್ವಾಂಸರುಗಳ ಹಣೆಯಲ್ಲಿ ತಿಲಕ ಶೋಭಿಸುತ್ತಿರುತ್ತದೆ.

ನಮ್ಮ ದೇವಾನುದೇವತೆಗಳೂ ಕುಂಕುಮ ತಿಲಕ ಶೋಭಿತರಾದವರೆ. ದೇವಿಯ ಸ್ತೋತ್ರದಲ್ಲೂ ಕುಂಕುಮ ರಾಗ ಶೋಣೆ... ಎನ್ನಲಾಗುತ್ತದೆ. ಕುಂಕುಮಾಂಕಿತೆ ಪಂಕಜಲೋಚನೆ... ಎಂದು ಮಹಾಲಕ್ಷ್ಮಿಯನ್ನು  ವರ್ಣಿಸುವ ಕೀರ್ತನೆಗಳೆಲ್ಲ ನಮ್ಮ ಕಿವಿಯಲ್ಲಿ ಗುನುಗುಡುತ್ತವೆ. ಜಾಗತೀಕರಣದ ಪ್ರಭಾವವೊ ಏನೋ ಇದು ಇತ್ತೀಚೆಗೆ ಮಹತ್ವ ಕಳೆದುಕೊಳ್ಳುತ್ತಿದೆ.

ಈಗ ಹಣೆಗೆ ಕುಂಕುಮದ ಜಾಗದಲ್ಲಿ ಲಾಲಗಂಧ, ಸ್ಟಿಕ್ಕರುಗಳು ಬಂದಿವೆ. ಈ ಸ್ಟಿಕ್ಕರುಗಳಿಗೆ ಬೇಕೊ ಬೇಡವೊ ಎಂದು ಅಂಟು ಹಿಡಿಸಲಾಗಿರುತ್ತದೆ. ಮನೆಯಿಂದ ಹೊರಡುವಾಗ ಹಣೆಗೆ ಸ್ಟಿಕ್ಕರ್‌ ಅಂಟಿಸಿಕೊಂಡು ಹೊರಟರೆ ಸಮಾರಂಭದ ತುರ್ತು ಸಮಯದಲ್ಲೇ ಅಂಟು ಆರಿ ಅದೆಲ್ಲೊ ಮಾಯವಾಗಿರುತ್ತದೆ. ಆ ಸಂದರ್ಭದಲ್ಲಿ ಗೆಳತಿಯರೊ ಅಥವಾ ಎದುರು ಸಿಕ್ಕವರು ಯಾರಾದರೂ ""ನಿನ್ನ ಹಣೆಯಲ್ಲಿ ಬೊಟ್ಟಿಲ್ಲ'' ಎಂದಾಗ, ""ಅಯ್ಯೋ ಮನೆಯಿಂದ ಬರುವಾಗ ಹಾಕಿ ಬಂದಿದ್ದೆ, ಯಾವಾಗ ಬಿದ್ದು ಹೋಯಿತೊ ಏನೊ'' ಎಂಬ ಉತ್ತರ ಮಾಮೂಲು. ಜೊತೆಗೆ ""ಬ್ಯಾಗಲ್ಲಿ ಸ್ಟಿಕ್ಕರ್‌ ಹಾಕಿಕೊಂಡು ಬರಬೇಕು ಅಂತಿದ್ದೆ. ಮರೆತು ಹೋಯ್ತು'' ಎಂದೋ ಅಥವಾ ""ನಾನು ಇವತ್ತು ಹೊಸ ಬ್ಯಾಗ್‌ ತಂದಿದೀನಲ್ಲ. ಸ್ಟಿಕ್ಕರ್‌ ಹಾಕಿಟ್ಟ ಬ್ಯಾಗ್‌ ಮನೆಯಲ್ಲೇ ಬಾಕಿ'' ಎಂದು ಪೆಚ್ಚು ಮೋರೆಯಲ್ಲಿ ನಗುವುದೂ ಮಾಮೂಲು.

ಈ ಸ್ಟಿಕ್ಕರ್‌ ಅವಾಂತರ ಒಂದೆರಡಲ್ಲ. ಎಲ್ಲೆಂದರಲ್ಲಿ ಬಿದ್ದು ಯಾವುದಕ್ಕಾದರೂ ಅಂಟಿಕೊಂಡು ಅನಿರೀಕ್ಷಿತವಾಗಿ ಪ್ರತ್ಯಕ್ಷವಾಗುತ್ತದೆ. ಆಫೀಸಿನಲ್ಲಿ ಉದ್ಯೋಗಿಯಾಗಿರುವ ಮಹಿಳೆಯರ ತರಹೇವಾರಿ ಸ್ಟಿಕ್ಕರ್‌ಗಳು, ಮೇಜಿನ ಮೇಲೊ, ಫೈಲಲ್ಲೋ ಬಿದ್ದು ಇನ್ನು ಯಾರದೊ ಗಂಡನ ಶರ್ಟಲ್ಲೋ, ಕೈಯ್ಯಲ್ಲೋ ಕೆನ್ನೆಯಲ್ಲೋ ಅಂಟಿಕೊಂಡು ಬಿಟ್ಟರೆ, ಆತ ಅರಿವಿಲ್ಲದೆ ಅಕಸ್ಮಾತ್‌ ಈ ಅವಸ್ಥೆಯಲ್ಲಿ ಮನೆಗೆ ಹೋದರೆ, ಈ ಅನಪೇಕ್ಷಿತ ತುಂಡು ಆತನ ಪತ್ನಿಯನ್ನು ರಣಕಾಳಿಯನ್ನಾಗಿಸುವುದಂತೂ ಸತ್ಯ ಎನ್ನದೆ ವಿಧಿಯಿಲ್ಲ.
ಹಣೆಯಲ್ಲಿ ಕುಂಕುಮವಿಟ್ಟರೆ ಈ ಅವಾಂತರವಿಲ್ಲ. ಇಲ್ಲವಾದರೆ ಅದಕ್ಕೆ ಹತ್ತಿರವಾದ ಲಾಲಗಂಧವಾದರೂ ಸರಿ, ಸ್ಟಿಕ್ಕರಿನಂತೆ ಪೇಚಿಗೆ ಬೀಳುವ ಸಂಭವವಿಲ್ಲ.

ಸಂಪ್ರದಾಯಸ್ಥರ ಪ್ರಕಾರ ಹೆಣ್ಣಿಗೆ ಹಣೆಯಲ್ಲಿ ಕುಂಕುಮ ಎಂದರೆ ಸೌಭಾಗ್ಯದ, ಸೌಂದರ್ಯದ, ಸ್ತ್ರೀತ್ವದ ಸಂಕೇತ. ಮನೆಯ ಮುಂದೆ, ಹೊಸ್ತಿಲಲ್ಲಿ ಸುಂದರವಾದ ರಂಗೋಲಿ ಬರೆದು ಅದರ ಮಧ್ಯೆ ಅರಸಿನ ಕುಂಕುಮ ಹಾಕಿದರೆ ಅದು ಪರಿಪೂರ್ಣವಾದ ಕೃತಿ ಎಂದು ಪರಿಗಣಿಸಲಾಗುತ್ತಿತ್ತು.
ಕುಂಕುಮವಿಲ್ಲದ ಹೆಣ್ಣಿನ ಹಣೆ ಅಶುಭದ ಗುರುತು ಎಂದು ನಂಬಲಾಗಿತ್ತು. ಹಾಗಾಗಿಯೇ ಮೊದಲೆಲ್ಲ ವಿಧವೆಯರನ್ನು ಕುಂಕುಮ ವಂಚಿತರನ್ನಾಗಿಸುವ ಪದ್ಧತಿಯಿತ್ತು. ಇದಕ್ಕೆ ಕಾರಣ, ಕುಂಕುಮ ಮುತ್ತೈದೆಯ ಸೌಭಾಗ್ಯ ಎಂಬ ನಂಬಿಕೆ. ಈ ಹೆಸರುಗಳಲ್ಲಿ ಸಾಕಷ್ಟು ಸಿನೆಮಾಗಳೂ ಬಂದಿವೆ. ಹಾಗಾಗಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮುತ್ತೈದೆ ಹೆಣ್ಣು ಮಕ್ಕಳಿಗೆ ಅರಸಿನ-ಕುಂಕುಮದ ಸಂಭ್ರಮದ ಓಡಾಟ. ಮುತ್ತೈದೆ ಹೆಣ್ಣು ಮಕ್ಕಳು ಸದಾ ಕುಂಕುಮ ತಿಲಕ ಶೋಭಿತರಾಗಿ ಕರಿಮಣಿ ಧಾರಿಣಿಯರಾಗಿಯೇ ಇರಬೇಕು. ಇವೆಲ್ಲ ಲಕ್ಷಣಗಳು ಅವರ ಪತಿಯ ಆಯಸ್ಸನ್ನು ವೃದ್ಧಿಸುವುದೆಂದು ನಮ್ಮ ಅಮ್ಮಂದಿರು ಹೇಳುತ್ತಿರುವ ನಿತ್ಯದ ಉಪದೇಶ. ಒಂದು ಕ್ಷಣ ಮುತ್ತೈದೆ ಮಗಳ ಹಣೆಯಲ್ಲಿ ಕುಂಕುಮದ ತಿಲಕವಿಲ್ಲದಿದ್ದರೂ ""ಬೇಗ ಹೋಗಿ ಕುಂಕುಮ ಹಚ್ಚಿಕೊಂಡು ಬಾ, ಬೋಳು ಹಣೆಯಲ್ಲಿ ಇರಬಾರದು ಹೆಣ್ಣುಮಕ್ಕಳು'' ಎಂದು ಆತಂಕದಲ್ಲಿ ಅವಸರಿಸುವ ನಮ್ಮ ಅಮ್ಮಂದಿರ ನಡೆಯನ್ನು ನಾವು ನಮ್ಮ ಮಕ್ಕಳಿಗೆ ಅನುಸರಿಸುವಂತಿಲ್ಲ.

ಯಾಕೆಂದರೆ, ಇಂದಿನ ಯುವ ಪೀಳಿಗೆಯಲ್ಲಿ ಹಣೆಗೆ ತಿಲಕವಿಡುವುದೆಂದರೆ ಫ್ಯಾಶನ್‌ ಗೊತ್ತಿಲ್ಲದ ಹಳ್ಳಿಗುಗ್ಗುಗಳ ಹಾಗೆ ಎಂಬ ಭಾವ. ಖಾಲಿ ಹಣೆ ಇಂದಿನ ಹುಡುಗಿಯರಿಗೆ ಫ್ಯಾಶನ್‌. ಸ್ಟೈಲು, ಫ್ಯಾಶನ್ನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಇಂದಿನ ಹುಡುಗಿಯರ ಮುಂದೆ ನಾವು ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಮಾತನಾಡಿದರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಹಾಗಾಗಿ, ಕೂದಲು ಬಿಚ್ಚಿ , ಗಾಳಿಗೆ ಹಾರಿಸುತ್ತ, ಖಾಲಿ ಹಣೆಯಲ್ಲಿ ಸ್ಟೈಲಾಗಿ ಹೋಗುವ ಮಗಳನ್ನು ನೋಡಿ ಶಶಿಯಂತಹ ಅಮ್ಮಂದಿರು ಅಸಹನೆ, ಅಸಹಾಯಕ ನೋಟ ಬೀರುವುದು ಬಿಟ್ಟು ಇನ್ನೇನು ಮಾಡಲು ಸಾಧ್ಯ.

ವಿಜಯಲಕ್ಷ್ಮೀ ಶಾನ್‌ಭೋಗ್‌


Trending videos

Back to Top