ಸಹೃದಯಿ ಸಂಗೀತ ಗುರು ಸೂರಾಲು ಪರಮೇಶ್ವರ ಭಟ್ಟ

Team Udayavani, Aug 30, 2019, 5:05 AM IST

ಸೂರಾಲು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳ ವೈದಿಕ ಮನೆತನದ ಪರಮೇಶ್ವರ ಭಟ್ಟರು ಬಾಲ್ಯದಲ್ಲಿಯೇ ಸಂಸ್ಕೃತ, ಪೌರೋಹಿತ್ಯಾದಿ ವೈದಿಕ ವಿಧಿವಿಧಾನ ಪಾರಂಗತರಾದರು. ಸಾಕು ತಾಯಿ ಪದ್ಮಾವತಿ ಅಮ್ಮನರು ಹಾಡುತ್ತಿದ್ದ ದೇವರ ನಾಮಗಳನ್ನು ಕೇಳುತ್ತಿದ್ದು, ಹಾಗೆಯೇ ಆಗಾಗ್ಗೆ ಉಡುಪಿಯಲ್ಲಿದ್ದ ಚಿಕ್ಕಮ್ಮನ ಮನೆಯಲ್ಲಿ ಕೇಳಲು ಸಿಗುತ್ತಿದ್ದ ಸಂಗೀತ ಪಾಠದ ಪ್ರಭಾವದಿಂದಲೂ ಸಂಗೀತದತ್ತ ಆಕರ್ಷಿತರಾಗಿ ಪಿಟೀಲು ಮಂಜುನಾಥಯ್ಯನವರ ಬಳಿ ಸಂಗೀತದ ಪಾಠಕ್ಕೆ ಸೇರಿಕೊಂಡರು. ಹೀಗೆ ಬಿಡಾರಂ ಕೃಷ್ಣಪ್ಪನವರ ಶಿಷ್ಯ ಪರಂಪರೆಯ ಕೊಂಡಿಯಲ್ಲಿ ಶಿಷ್ಯ ವೃತ್ತಿಯನ್ನು ಮಾಡಿ ಸಂಗೀತದಲ್ಲಿಯೂ, ವೇದ ಪಾಠದಲ್ಲಿಯೂ ಪ್ರೌಢಿಮೆಯನ್ನು ಗಳಿಸಿಕೊಂಡರು.

ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಅಂತೆಯೇ ಭಂಡಾರಿಕೇರಿ ಹಾಗೂ ಪೇಜಾವರ ಮಠಗಳಲ್ಲಿಯೂ ಆಸಕ್ತರಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದರು. ಸಂಗೀತದ ಅಭ್ಯಾಸಕ್ಕೆ ಸಮಯದ ನಿಗದಿಯನ್ನು ಮಾಡದೆ ನಿರಂತರ ಅಭ್ಯಾಸ, ನಿದ್ದೆ ಬರುವವರೆಗೆ ಎಂದುಕೊಂಡವರು. ಸ್ವತಃ ಕೊಳಲು ವಾದಕರು, ಅತ್ಯುತ್ತಮ ಹಾರ್ಮೋನಿಯಂ ವಾದಕರು ಹಾಗೂ ರಾಗ ಸಂಯೋಜಕರು. ಹಾರ್ಮೋನಿಯಂನಲ್ಲಿ ಏಕೆ ಸಾಧ್ಯವಿಲ್ಲ ಎಂದು ಛಲದಿಂದ ಶಾಸ್ತ್ರೀಯತೆಯನ್ನು ತರಲು ಪ್ರಯತ್ನಿಸಿದವರು. ಇವರ ರಾಗ ಸಂಯೋಜಿತ ಗೀತೆಗಳು ಶಿಷ್ಯರಿಂದ ಶಿಷ್ಯರ ಬಾಯಲ್ಲಿ ಮುಂದೆ ಮುಂದೆ ಹೋಗುತ್ತಲೇ ಗುರುಗಳ ಹೆಸರನ್ನೂ ತಮ್ಮೊಂದಿಗೆ ಒಯ್ಯುತ್ತಲಿವೆ. ಪರೀಕ್ಷೆಗಳ, ಸ್ಪರ್ಧೆಗಳ ಹಾಗೂ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಅರ್ಹರಿಗೆ, ಆಸಕ್ತರಿಗೆ ಹೃದಯಪೂರ್ವಕವಾಗಿ ವಿದ್ಯೆ ನೀಡಿದವರು. ಪೇಜಾವರ ಶ್ರೀಗಳಿಂದ ಪರ್ಯಾಯದಲ್ಲಿ ನೀಡಲ್ಪಟ್ಟ ಪ್ರಶಸ್ತಿ, ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಎಷ್ಟು ಬೈದರೂ, ಸಿಟ್ಟುಗೊಂಡರೂ, ಹೃದಯ ಮಾತ್ರ ಬೆಣ್ಣೆಯಂತೆ ಮೃದು, ಶಿಷ್ಯರನ್ನು ಕಂಡರೆ ಅಪಾರ ಅಭಿಮಾನ, ಪ್ರೀತಿ ವಾತ್ಸಲ್ಯ. ತೊಂಭತ್ತಮೂರನೇ ವಯಸ್ಸಿನಲ್ಲಿ ಆ.22ರಂದು ಸೂರಾಲು ಪರಮೇಶ್ವರ ಭಟ್ಟರು ನಮ್ಮನ್ನು ಅಗಲಿದ್ದಾರೆ. ಇದರೊಂದಿಗೆ ಈ ಶತಮಾನದ ನಿಷ್ಠಾವಂತ ಸಹೃದಯಿ ಸಂಗೀತ ಗುರುವನ್ನು ಕಲಾಪ್ರಪಂಚ ಕಳೆದುಕೊಂಡಂತಾಗಿದೆ.

-ವಿದ್ಯಾಲಕ್ಷ್ಮೀ ಕಡಿಯಾಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ