ಸೀಮೋಲ್ಲಂಘನೆಗೆ ಸಾಕ್ಷಿಯಾದ ಅಮೆರಿಕದ ಯಕ್ಷಗಾನ ಸಮ್ಮೇಳನ

Team Udayavani, Oct 4, 2019, 5:46 AM IST

ಅಮೆರಿಕದ ಕ್ಯಾಲಿಫೋರ್ನಿಯಾದ ಸನಾತನ ಯಕ್ಷರಂಗ ಕಲ್ಚರಲ್‌ ಸೆಂಟರ್‌ ಮತ್ತು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದ ವತಿಯಿಂದ ಸನ್‌ಜೋಸೆಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನ ಯಕ್ಷಗಾನದ ಸೀಮೋಲ್ಲಂಘನಕ್ಕೆ ಸಾಕ್ಷಿಯಾಯಿತು.

ಎರಡು ದಿನಗಳ ಸಮ್ಮೇಳನದ ಮೊದಲ ದಿನ ಯಕ್ಷ-ಗಾನ-ಲಹರಿಯನ್ನು ಬಡಗಿನ ಕೆ.ಜೆ.ಗಣೇಶ್‌, ತೆಂಕುತಿಟ್ಟಿನ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಕರ್ನಾಟಕ ಸಂಗೀತ ಗಮಕದಲ್ಲಿ ರಾಮ ಪ್ರಸಾದ್‌ ಕೆ.ವಿ.ಯವರು ನಡೆಸಿಕೊಟ್ಟರು. ಮದ್ದಲೆಯ ಸಾಥ್‌ ನೀಡಿದವರು ಬಡಗಿನಲ್ಲಿ ಪದ್ಮನಾಭ್‌ ಉಪಾಧ್ಯ ಹಾಗೂ ತೆಂಕಿನಲ್ಲಿ ಪದ್ಯಾಣ ಜಯರಾಮ್‌ ಭಟ್‌. ಮೃದಂಗವಾದಕರಾಗಿ ಗೋಪಾಲ ಲಕ್ಷ್ಮೀನಾರಾಯಣರವರು ಭಾಗವತರುಗಳ ಮನೋಧರ್ಮಕ್ಕನುಗುಣವಾಗಿ ಸಹಕರಿಸಿದರು. ಕೆ.ಜಿ.ಗಣೇಶ ನಾಟಿ ರಾಗದಲ್ಲಿ ವಾರಣ ವದನ ಗಣಪತಿ ಸ್ತುತಿಗೈದರೆ ರಾಮ ಪ್ರಸಾದರು ನಾಟಿ ರಾಗದಲ್ಲಿ ಮಹಾಗಣಪತಿ ಮನಸಾ ಸ್ಮರಾಮಿ ಯನ್ನೂ, ಪಟ್ಲರು ಹಿಂದೋಳದಲ್ಲಿ ನಿತ್ಯ ನಿರಾಮಯಿ ಪ್ರಣವ ಸ್ವರೂಪಿ ಯನ್ನು, ಪ್ರಸಾದರು ಮಾಮವತೋ ಶ್ರೀ ಸರಸ್ವತಿ ಪದವನ್ನು ಪ್ರಸ್ತುತ ಪಡಿಸಿದರು. ನಂತರ ಕೆ.ಜಿ.ಗಣೇಶ ಅಭೇರಿ ರಾಗದಲ್ಲಿ ಕುಂದ ಕುಟ¾ಲ ರದನ ಎಂಬ ಶೃಂಗಾರ ಪದವನ್ನು , ಪ್ರಸಾದರು ಅಭೇರಿಯಲ್ಲಿ ನಗುವೋ ಎಂಬ ಹಾಡನ್ನು ಪಟ್ಲರು ವೃಂದಾವನ‌ ಸಾರಂಗ ರಾಗದಲ್ಲಿ ಇಳೆ ವಸಂತ ಕಾಲ ಸೋದರಿ ಎಂಬ ಹಾಡನ್ನು ಹಾಡಿದರು. ಅನಂತರ ಕೆ.ಜಿ.ಯವರು ಮತ್ತು ಪಟ್ಲರು ರೇವತಿ ರಾಗದಲ್ಲಿ ಹಾಡಿದ ಸ್ಮರಿಸಯ್ಯ ರಾಮ ಮಂತ್ರವ ಎಂಬ ದ್ವಂದ್ವ ಗಾಯನ ಭಕ್ತಿಗಡಲಲ್ಲಿ ತೇಲಿಸಿತು. ಕೊನೆಯಲ್ಲಿ ಮೂವರೂ ಸೇರಿ ಹಾಡಿದ ನೋಡಿದನು ಕಲಿ ರಕ್ತ ಬೀಜನು ಮೋಹನ ರಾಗದ ಪದ್ಯದೊದಿಗೆ ಗಾನ ಲಹರಿ ಸಮಾಪನಗೊಂಡಿತು. ಬಳಿಕ ಪಟ್ಲ ನಿರ್ದೇಶನದ ನರಕಾಸುರ ವಧೆ ಎಂಬ ಪ್ರಸಂಗ ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮೋಹನ್‌ ಬೆಳ್ಳಪ್ಪಾಡಿ, ಎಂ.ಎಲ್‌ ಸಾಮಗ ಮತ್ತು ಮಹೇಶ್‌ ಮಣಿಯಾಣಿಯವರ ಮುಮ್ಮೇಳದೊಂದಿಗೆ ಸಂಪನ್ನಗೊಂಡಿತು.

ಎರಡನೇ ದಿನ ಪಟ್ಲ ಬಳಗದವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಅನಂತರ ಕೆ.ಜಿಯವರ ನೇತೃತ್ವದಲ್ಲಿ ನಡೆದ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮನಾಗಿ ಶಶಿಧರ ಸೋಮಯಾಜಿ, ಪರಶುರಾಮನಾಗಿ ಎಂ.ಎಲ್‌ ಸಾಮಗ, ಸಾಲ್ವನಾಗಿ ನವೀನ್‌ ಹೆಗಡೆ, ಅಂಬೆಯಾಗಿ ಡಾ|ರಾಜೇಂದ್ರ ಕೆದ್ಲಾಯ, ವೃದ್ಧ ಬ್ರಾಹ್ಮಣನಾಗಿ ಶ್ರೀಪಾದ ಹೆಗಡೆ, ಪ್ರತಾಪಸೇನನಾಗಿ ಮೇಘಾ, ರಾಜಕುಮಾರರಾಗಿ ಅಪೂರ್ವಾ ಮತ್ತು ಅಜಯ್‌ ರಾಜ್‌, ಅಂಬಿಕೆ ಅಂಬಾಲಿಕೆಯರಾಗಿ ಉಷಾ ಹೆಬ್ಟಾರ್‌ ಮತ್ತು ಕಾವ್ಯಾ ಭಟ್‌ ಅಭಿನಯಿಸಿದರು.

ಕೆ.ಜೆ. ಗಣೇಶರ ನಿರ್ದೇಶನದಲ್ಲಿ ಅಮೆರಿಕ ಕನ್ನಡ ಕೂಟದ ಶಿಬಿರದಲ್ಲಿ ಕವಿರತ್ನ ಕಾಳಿದಾಸ ಎಂಬ ಪ್ರಸಂಗ ಸಾದರಗೊಂಡಿತು. ವಿಜಯವರ್ಮನಾಗಿ ಸಮರ್ಥ ಭೂಷಣ್‌, ಕಲಾಧರನಾಗಿ ಶಶಿಧರ ಸೋಮಯಾಜಿ, ವಿದ್ಯಾಧರೆಯಾಗಿ ಉಷಾ ಹೆಬ್ಟಾರ್‌, ಕುಮುದಪ್ರಿಯನಾಗಿ ಅಶ್ವಿ‌ನಿ, ಕಾಳಿಯಾಗಿ ಕಾವ್ಯಾ ಭಟ್‌ ಮತ್ತು ಕಾಳನಾಗಿ ಶ್ರೀಪಾದ ಹೆಗಡೆಯವರು ಮನ ಗೆಲ್ಲುವಲ್ಲಿ ಸಫ‌ಲರಾದರು.

ಕ್ಯಾಲಿಫೋರ್ನಿಯಾದ ಸನಾತನ ಧರ್ಮ ಕೇಂದ್ರದಲ್ಲಿ ನಡೆದ ಸುದರ್ಶನ ವಿಜಯ ಪ್ರಸಂಗದಲ್ಲಿ ಶತ್ರುಪ್ರಸೂದನಾಗಿ ಅಶ್ವಿ‌ನಿಯವರ ಅಭಿನಯ ಮನೋಜ್ಞವಾಗಿ ಮೂಡಿ ಬಂತು. ಶತ್ರುಪ್ರಸೂದನನ ಪಡೆಯವರಾಗಿ ಭಾರತಿ, ಭರತೇಶ್‌ ಮಯ್ಯ ಮತ್ತು ನಾಗರಾಜ್‌ ಅಭಿನಯಿಸಿದರೆ ಸುದರ್ಶನನಾಗಿ ಶ್ರೀಪಾದ ಹೆಗಡೆ ವಾಕ್‌ಚಾತುರ್ಯದಿಂದ ರಂಜಿಸಿದರು. ವಿಷ್ಣುವಾಗಿ ಶಶಿಧರ್‌ ಸೋಮಯಾಜಿಯವರು ಉತ್ತಮವಾಗಿ ಅಭಿನಯಿಸಿದರು. ಲಕ್ಷ್ಮೀಯಾಗಿ ಚೇತನಾ ಶೆಟ್ಟಿಯವರು ಭಾವಾಭಿವ್ಯಕ್ತಿಯಲ್ಲಿ ಸೈ ಎನಿಸಿಕೊಂಡರು. ದೇವೇಂದ್ರನ ಪಾತ್ರವನ್ನು ವೀಣಾರವರು ನಿರ್ವಹಿಸಿದರೆ ದೇವೇಂದ್ರನ ಬಲಗಳಾಗಿ ನಿಧಿ, ವರುಣ ಮತ್ತು ಸ್ಪೂರ್ತಿ,ದೂತನಾಗಿ ಅಜಯ್‌ ರಾಜ್‌ಅಭಿನಯಿಸಿದರು.

ಶಾಂತಿಕಾ ಹೆಗಡೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ