ತೆಕ್ಕ್ ದ್‌ ಪೋಂಡು ಉಡಲ್ದ ತುಡರ್‌…

Team Udayavani, Aug 9, 2019, 5:05 AM IST

ವೃತ್ತಿಯಲ್ಲಿ ಇನ್ಶೂರೆನ್ಸ್‌ ಕಂಪೆನಿಯಲ್ಲಿ ಅಧಿಕಾರಿ. ಮಿತ ಮಾತು- ಹಿತವೆನಿಸುವ ನಡೆ ನುಡಿ. ಬಹುಶಃ ಅಷ್ಟೇ ಆಗಿದ್ದರೆ ಇಂದು ಎಂ.ಕೆ. ಸೀತಾರಾಮ ಕುಲಾಲ್‌ ಎಂಬವರ ಪರಿಚಯ ಅವರ ಬಳಗ ಬಿಟ್ಟು ಬೇರೆ ಎಲ್ಲೂ ಇರುತ್ತಿರಲಿಲ್ಲವೇನು. ಆದರೆ “ದಾಸಿ ಪುತ್ರ’ ಎಂಬ ನಾಟಕದಿಂದ ತನ್ನ ಕಲಾಯಾತ್ರೆ ಆರಂಭಿಸಿದ ಕುಲಾಲ್‌ ಮುಂದೆ ಸಾಹಿತ್ಯ ಕೃಷಿಯಿಂದ ಕನ್ನಡ, ತುಳು ರಂಗಭೂಮಿಯಲ್ಲಿ ಮೋಕೆದ ಸಿಂಗಾರಿಯ ಸೀತಾರಾಮಣ್ಣನಾದ ಕಥೆ ಬಲು ರೋಮಾಂಚಕ.

ಮೋಕೆದ ಸಿಂಗಾರಿ ಉಂತುದೇ ವಯ್ನಾರಿ ಎಂದು ಪ್ರೀತಿಯಿಂದ ಬರೆಯುವ ಇವರು, ಪಗೆತ ಪುಗೆನಾ, ವಿಧಿತ ಧಗೆನಾ… ಎಂದು ದುಃಖದ ಸಾಲನ್ನೂ ಬರೆಯುತ್ತಾರೆ. ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದಲ್ಲಗೆ… ಎಂದು ಕೌಟುಂಬಿಕ ಜೀವನವನ್ನು ವರ್ಣಿಸುತ್ತಾ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೋಡಿದ್‌ ಪಾರಡ… ಎಂದು ತಮಾಷೆಯಾಗಿಯೇ ಬರೆಯುತ್ತಾರೆ. ಹೀಗೆ ಅರ್ಥಪೂರ್ಣ ಚಿತ್ರ ಗೀತೆಗಳು, ನಾಟಕಗಳಿಂದ ತುಳು ಸಾಹಿತ್ಯ ಕ್ಷೇತ್ರದ ಮೇರು ನಕ್ಷತ್ರವಾಗಿ ಮೆರೆದ ಸೀತಾರಾಮ ಕುಲಾಲ್‌ ಈಗ ನೆನಪು ಮಾತ್ರ.

ಎಪ್ಪತ್ತರ ದಶಕದಲ್ಲಿ ತುಳು ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಖ್ಯಾತಿ ಸೀತಾರಾಮ ಕುಲಾಲರಿಗೆ ಸೇರುತ್ತದೆ. ಕೆ.ಎನ್‌. ಟೇಲರ್‌, ಸಂಜೀವ ದಂಡಕೇರಿ, ರಾಮ ಕಿರೋಡಿಯನ್‌ ರಂತಹ ದಿಗ್ಗಜರ ಒಡನಾಡಿಯಾಗಿದ್ದ ಸೀತಾರಾಮ ಕುಲಾಲರು ಬರೆದ ಹಾಡುಗಳು ಇಂದಿಗೂ ಜನರ ಬಾಯಲ್ಲಿ ನಲಿದಾಡುತ್ತಿದೆ.

ಕುಲಾಲರು 12 ತುಳು ನಾಟಕ, 44ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ಬರೆದಿದ್ದಾರೆ. ಅವರು ಬರೆದ ರೂಪಕಗಳು, ಬ್ಯಾಲೆಗಳು, ರೇಡಿಯೋ ನಾಟಕಗಳು, ರಂಗಗೀತೆಗಳ ಸಂಖ್ಯೆ 375ನ್ನು ದಾಟುತ್ತದೆ. ದಾಸಿ ಪುತ್ರ, ಮಾತೆಯ ಮಡಿಲಲ್ಲಿ, ಮಣ್ಣಿನ ಮಗಳು ಅಬ್ಬಕ್ಕ, ತ್ಯಾಗಜ್ಯೋತಿ ಕರ್ಣ, ಗುರು ದಕ್ಷಿಣೆ ಇವು ಕುಲಾಲರ ಪ್ರಸಿದ್ಧ ಕನ್ನಡ ನಾಟಕಗಳು. ಉಡಲ್ದ ತುಡರ್‌, ತಗೆನಾ ತಂಗಡಿಯಾ, ಕರ್ಲ್ದ ಉರ್ಲ್, ಧರ್ಮೊಗು ಧರ್ಮದ ಸವಾಲ್‌ ಮುಂತಾದ ತುಳು ನಾಟಕಗಳನ್ನು ಬರೆದ ಕುಲಾಲರು ಎಪ್ಪತ್ತು ಎಂಬತ್ತರ ದಶಕದಲ್ಲಿ ತುಳು ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕಾರಣರಾದವರಲ್ಲಿ ಒಬ್ಬರು.

ಕಡಲನಾಡ ಕಲಾವಿದೆರ್‌ ಎಂಬ ನಾಟಕ ತಂಡ ಕಟ್ಟಿ ಅವಿಭಜಿತ ಜಿಲ್ಲೆಯಾದ್ಯಂತ ನಾಟಕ ಪ್ರದರ್ಶಿಸಿದರು. ತಮ್ಮ ಗರಡಿಯಲ್ಲಿ ಹಲವಾರು ಕಲಾವಿದರನ್ನು ತಯಾರು ಮಾಡಿದ ಕುಲಾಲರು ತಮ್ಮ ಕಲಾ ಸೇವೆಗೆ ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ.

1972ರಲ್ಲಿ ತೆರೆಕಂಡ ಆರೂರು ಪಟ್ಟಾಬಿ ನಿರ್ದೇಶನದ ಪಗೆತ ಪುಗೆ ಚಿತ್ರಕ್ಕಾಗಿ ಇವರು ಬರೆದ ಮೋಕೆದ ಸಿಂಗಾರಿ, ಪಕ್ಕಿಲು ಮೂಜಿ, ಪಗೆತ ಪುಗೆನಾ ಹಾಡುಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಎಪ್ಪತ್ತರ ದಶಕದ ತುಳು ಚಿತ್ರ ರಂಗವನ್ನು ಮರೆತಿರುವ ಯುವ ಜನಾಂಗ ಇಂದು ಕೂಡಾ ಸೀತರಾಮ ಕುಲಾಲರನ್ನು ನೆನೆಯುವುದು ಮೋಕೆದ ಸಿಂಗಾರಿ ಉಂತುದೆ ವಯ್ನಾರಿ ಹಾಡಿನಿಂದಲೇ. ಆ ಕಾಲದಲ್ಲಿ ಯುವ ಗಾಯಕರಾಗಿ ಪ್ರಸಿದ್ದರಾಗಿದ್ದ ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರು ಮೊದಲ ಬಾರಿಗೆ ತುಳು ಚಿತ್ರರಂಗದಲ್ಲಿ ಹಾಡಿದ್ದು ಇದೇ ಮೋಕೆದ ಸಿಂಗಾರಿ ಹಾಡನ್ನೇ.

ಬಯ್ಯ ಮಲ್ಲಿಗೆ ಚಿತ್ರಕ್ಕೆ ಬರೆದ ಬ್ರಹ್ಮನ ಬರುವು ಮಾಜಂದೆ ಪೋಂಡಾ, ಡಿಂಗಿರಿ ಮಾಮ, ಅಪ್ಪೆ ಮನಸ್‌ ಬಂಗಾರ ಹಾಡುಗಳು, ಬೆಳ್ಳಿದೋಟ ಚಿತ್ರದ ಪರಶುರಾಮನ ಕುಡರಿಗ್‌ ಹಾಡು ಹೀಗೆ ಕುಲಾಲರು ಬರೆದ ಒಂದೊಂದು ಹಾಡುಗಳೂ ಸಹ ತುಳುವರು ಸದಾ ನೆನಪಿಸಿಕೊಳ್ಳುವಂತಹದ್ದು. ಉಡಲ್ದ ತುಡರ್‌ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಕುಲಾಲರು, ಅದಕ್ಕಾಗಿ ನವಭಾರತ ತುಳು ಕೂಟ ಪ್ರಶಸ್ತಿ ಪಡೆದಿದ್ದರು.

ಕನ್ನಡ, ತುಳು ಸಾಹಿತ್ಯ, ರಂಗಭೂಮಿಗೆ ವಿಶಿಷ್ಟ ಸೇವೆ ಸಲ್ಲಿಸಿದ ಅಪ್ರತಿಮ ಸಾಹಿತಿ ಇಂದು ಇಹದಿಂದ ಮರೆಯಾದರೂ, ಅವರು ರಚಿಸಿದ ಎವರ್‌ ಗ್ರೀನ್‌ ಹಾಡುಗಳು ಮತ್ತು ರಂಗ ಕೃತಿಗಳು ಮುಂದಿನ ತಲೆ ತಲೆಮಾರಿಗೆ ಅತ್ಯಮೂಲ್ಯ ಕಲಾ ಆಸ್ತಿ.

ಕೀರ್ತನ್‌ ಶೆಟ್ಟಿ ಬೋಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ