ಗರ್ಭಾಶಯ ಜಾರುವಿಕೆ ಕಾರಣಗಳು, ಲಕ್ಷಣಗಳು ಮತ್ತು ಪರಿಹಾರೋಪಾಯ


Team Udayavani, Mar 1, 2020, 1:36 AM IST

aroghya-1

ಗರ್ಭಾಶಯ ಜಾರುವಿಕೆ (ಪ್ರೊಲ್ಯಾಪ್ಸ್‌) ಅಥವಾ ಯುಟೆರೊ-ವೆಜೈನಲ್‌ ಪ್ರೊಲ್ಯಾಪ್ಸ್‌ ಅಥವಾ ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌ ಎಂಬುದು ಋತುಚಕ್ರ ಬಂಧವನ್ನು ಹೊಂದಿರುವ ಅಥವಾ ಆ ವಯಸ್ಸಿಗೆ ಸನಿಹದಲ್ಲಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಜಾಗತಿಕ ಅಂಕಿಅಂಶಗಳ ಪ್ರಕಾರ, 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅರ್ಧಾಂಶ ಮಂದಿ ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌ನ ಯಾವುದಾದರೊಂದು ಲಕ್ಷಣವನ್ನು ಹೊಂದಿರುತ್ತಾರೆ ಮತ್ತು 80 ವರ್ಷ ವಯಸ್ಸಿನ ಹೊತ್ತಿಗೆ ಪ್ರತೀ 10 ಮಂದಿಯಲ್ಲಿ ಒಬ್ಬರಿಗೆ ಗರ್ಭಾಶಯ ಹೊರ ಜಾರಿರುವುದಕ್ಕಾಗಿ ಶಸ್ತ್ರಕ್ರಿಯೆ ನಡೆಸುವುದು ಅಗತ್ಯವಾಗಿ ಬಿಡುತ್ತದೆ.

ಸುನಿಧಿ ಈಗಷ್ಟೇ ಎಂಬಿಬಿಎಸ್‌ ವಿದ್ಯಾಭ್ಯಾಸದ ಮೊದಲ ವರ್ಷವನ್ನು ಪೂರೈಸಿ ದ್ವಿತೀಯ ವರ್ಷಕ್ಕೆ ಕಾಲಿರಿಸಿದ್ದಳು. ವೈದ್ಯಕೀಯ ವಿದ್ಯಾಭ್ಯಾಸದ ಮೊದಲ ವರ್ಷದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಾನವ ದೇಹದ ಮೂಲಾಂಶಗಳನ್ನು ಅಂದರೆ, ಅದರ ಸಂರಚನೆ ಮತ್ತು ಸಾಮಾನ್ಯ ಕಾರ್ಯಚಟುವಟಿಕೆಗಳ ಬಗ್ಗೆ ಕಲಿಯುತ್ತಾರೆ. ದ್ವಿತೀಯ ವರ್ಷದಲ್ಲಿ ರೋಗಿಗಳ ಜತೆಗೆ ನೇರ ಸಂಪರ್ಕ ಹೊಂದುವ ಅವಕಾಶ ಇರುವುದರಿಂದ ಸುನಿಧಿಗೆ ಆ ಬಗ್ಗೆ ಬಹಳ ಕಾತರವಿತ್ತು.

ಸುನಿಧಿ ಬುದ್ಧಿವಂತ ವಿದ್ಯಾರ್ಥಿನಿ. ಪ್ರಾಥಮಿಕ ವೈದ್ಯಕೀಯ ಪದವಿ ಪೂರೈಸಿದ ಬಳಿಕ ತಾನು ಪ್ರಸೂತಿ ಶಾಸ್ತ್ರಜ್ಞೆಯಾಗಬೇಕು ಎಂಬ ಆಕಾಂಕ್ಷೆ ಬಹಳ ಹಿಂದಿನಿಂದಲೂ ಆಕೆಗಿತ್ತು. ಆ ದಿನ ಆಕೆಗೆ ಬಹಳ ವಿಶೇಷವಾದುದಾಗಿತ್ತು, ಏಕೆಂದರೆ ಗೈನಕಾಲಜಿ ವಿಭಾಗದಲ್ಲಿ ಆಕೆಯ ಒಂದು ತಿಂಗಳು ಕಾಲದ ಕ್ಲಿನಿಕಲ್‌ ಪೋಸ್ಟಿಂಗ್‌ ಅಂದು ಆರಂಭವಾಗಲಿಕ್ಕಿತ್ತು. ಎದೆ ತುಂಬುವಷ್ಟು ಕಾತರ ಮತ್ತು ಕುತೂಹಲಗಳ ಜತೆಗೆ ಸುನಿಧಿ ಗೈನಕಾಲಜಿ ಹೊರರೋಗಿ ವಿಭಾಗಕ್ಕೆ ಕಾಲಿರಿಸಿದ್ದಳು. ಆಕೆಯ ಜತೆಗಿದ್ದ ಇನ್ನೂ ಐವರು ವಿದ್ಯಾರ್ಥಿಗಳು ಗರ್ಭಿಣಿಯೊಬ್ಬರ ತಪಾಸಣೆ ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತಿರುವಾಗಲೇ ಹಿರಿಯ ವೈದ್ಯರೊಬ್ಬರು ಒಳಬಂದು ಹೇಳಿದರು: “ನಾನು ಆಸಕ್ತಿದಾಯಕವಾದ ಸ್ತ್ರೀರೋಗ ಶಾಸ್ತ್ರ ಪ್ರಕರಣವೊಂದರ ತಪಾಸಣೆ ನಡೆಸಲಿದ್ದೇನೆ, ಯಾರಿಗೆ ಆಸಕ್ತಿ ಇದೆಯೋ ಅವರು ನನ್ನ ಜತೆಗೆ ಬರಬಹುದು.’ ಸುನಿಧಿ ಮತ್ತು ಆಕೆಯ ಇನ್ನಿಬ್ಬರು ಸ್ನೇಹಿತರು ಥಟ್ಟನೆ ಹಿರಿಯ ವೈದ್ಯರನ್ನು ಹಿಂಬಾಲಿಸಿದರು. ಅವರು ರೋಗಿಗಳ ತಪಾಸಣೆ ನಡೆಸುವ ಕ್ಯೂಬಿಕಲ್‌ ನಂಬರ್‌ 4 ಒಳಗೆ ಕಾಲಿರಿಸಿದಾಗ ಅಲ್ಲಿ ಮೇಜಿನ ಮೇಲೆ ಹಿರಿ ವಯಸ್ಸಿನ ಮಹಿಳೆಯೊಬ್ಬರು ಮಲಗಿದ್ದುದು ಕಾಣಿಸಿತು. ಆಕೆಯ ಕಾಲುಗಳು ಮಡಚಿದ್ದವು ಮತ್ತು ದೇಹದ ಕೆಳಭಾಗವನ್ನು ಹಸುರು ಬಟ್ಟೆ ಮುಚ್ಚಿಕೊಂಡಿತ್ತು.

“ವಿದ್ಯಾರ್ಥಿನಿಯರೇ, ನೀವು ಎಂದಾದರೂ ಗರ್ಭಾಶಯ ಜಾರುವಿಕೆಯ ಪ್ರಕರಣವನ್ನು ಕಂಡಿದ್ದೀರಾ? ಇತ್ತ ಬನ್ನಿ, ನಾನು ತೋರಿಸುತ್ತೇನೆ’ ಎಂಬುದಾಗಿ ಡಾ| ರೇಣುಕಾ ಕರೆದರು. ಬಳಿಕ ಮಲಗಿದ್ದ ಮಹಿಳೆಯ ಕಾಲಿನ ಭಾಗವನ್ನು ಮುಚ್ಚಿಕೊಂಡಿದ್ದ ಹಸುರು ಬಟ್ಟೆಯನ್ನು ಡಾ| ರೇಣುಕಾ ಮೇಲೆತ್ತಿದರು. ಆ ಮಹಿಳೆಯ ಕೆಳಭಾಗದಿಂದ ಹೊರಗೆ ಜಾರಿದ, ದೊಡ್ಡ ಬಟಾಟೆ ಗಾತ್ರದ ಮಾಂಸಲ ಮುದ್ದೆಯೊಂದು ಸುನಿಧಿ ಮತ್ತು ಆಕೆಯ ಸಂಗಡಿಗರಿಗೆ ಕಾಣಿಸಿತು. ಈ ಯುವ ವಿದ್ಯಾರ್ಥಿಗಳು ತಾವು ನೋಡುತ್ತಿರುವುದು ಏನನ್ನು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುನ್ನವೇ ಡಾ| ರೇಣುಕಾ ಅವರು ಆ ಮಾಂಸಲ ಮುದ್ದೆಯನ್ನು ಕೈಗವಸು ಹಾಕಿದ್ದ ತನ್ನ ಬಲಗೈಯಿಂದ ಸ್ವಲ್ಪ ಮೇಲೆತ್ತಿ, ಎಡಗೈಯನ್ನು ಉಪಯೋಗಿಸಿಕೊಂಡು ವಿವರಿಸಲಾರಂಭಿಸಿದರು.

“ಗರ್ಭಾಶಯವು ಸಂಪೂರ್ಣ ಹೊರಜಾರಿದ ಒಂದು ಪ್ರಕರಣವಿದು. ಎದುರು ಭಾಗದಲ್ಲಿ ನಾನು ನಿಮಗೆ ತೋರಿಸುತ್ತಿರುವುದು ಮೂತ್ರಕೋಶ. ಇದರ ಹಿಂದಿರುವುದು ಗುದನಾಳ.’ ಇಷ್ಟು ಹೇಳಿ ಅಲ್ಪ ವಿರಾಮ ನೀಡಿದ ಡಾ| ರೇಣುಕಾ, ಮಾಂಸಲ ಮುದ್ದೆಯನ್ನು ಇನ್ನಷ್ಟು ಮೇಲಕ್ಕೆತ್ತಿ ವಿವರಣೆಯನ್ನು ಮುಂದುವರಿಸಿ, “ಇದು ಸಣ್ಣ ಕರುಳು, ಇದು ಗರ್ಭಕೋಶ ಮತ್ತು ಗರ್ಭಕಂಠ’ ಎಂದರು. ವಸ್ತಿ ಕುಹರ (ಪೆಲ್ವಿಸ್‌)ನೊಳಗೆ ಸುತ್ತಮುತ್ತಲ ಬಲಿಷ್ಠ ಎಲುಬು ಗೂಡಿನ ನಡುವೆ ಸುರಕ್ಷಿತವಾಗಿರುತ್ತವೆ ಎಂಬುದಾಗಿ ಸುನಿಧಿ ತನ್ನ ದೇಹರಚನಾ ಶಾಸ್ತ್ರ ತರಗತಿಯಲ್ಲಿ ಪಠ್ಯದಲ್ಲಿ ಓದಿದ್ದ ಪ್ರತಿಯೊಂದು ಅಂಗಾಂಗಗಳೂ ಅಕ್ಷರಶಃ ದೇಹದಿಂದ ಹೊರಕ್ಕೆ ಬಂದು ಚೀಲದಂತಹ ರಚನೆಯೊಂದರೊಳಗೆ ಕಣ್ಣಿಗೆ ಕಾಣಿಸುವಂತಿದ್ದವು. ಆಗ ಸುನಿಧಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎನಿಸಿತ್ತು.

ಕಾಲ ನಿಧಾನವಾಗಿ ಸರಿದು ಹೋಗಿದೆ. ಈಗ ಡಾ| ಸುನಿಧಿ ಮೆಹ್ತಾ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದರಲ್ಲಿ ಪ್ರಖ್ಯಾತ ಯುರೊಗೈನಕಾಲಜಿಸ್ಟ್‌ ಆಗಿದ್ದಾರೆ. ಎಂಬಿಬಿಎಸ್‌ ಪಾಸ್‌ ಮಾಡಿಕೊಂಡ ಬಳಿಕ ಆಕೆ ಗೈನಕಾಲಜಿಯಲ್ಲಿ ಮಾಸ್ಟರ್ಸ್‌ ಡಿಗ್ರಿ ಪೂರೈಸಿದಳು. ಬಳಿಕ ಯುರೊಗೈನಕಾಲಜಿಯಲ್ಲಿ ಉನ್ನತ ತರಬೇತಿಯನ್ನು ಪಡೆದಳು. ಯುರೋಗೈನಕಾಲಜಿಯು ಗೈನಕಾಲಜಿ ವಿಭಾಗದ ಉಪಾಂಗವಾಗಿದ್ದು, ಮಹಿಳೆಯರ ಪೆಲ್ವಿಕ್‌ ಫ್ಲೋರ್‌ನಲ್ಲಿನ ಅನಾರೋಗ್ಯ, ಸಮಸ್ಯೆಗಳನ್ನು ನಿಭಾಯಿಸುತ್ತದೆ. ಪೆಲ್ವಿಕ್‌ ಫ್ಲೋರ್‌ ಸಮಸ್ಯೆಗಳನ್ನು ಸರಳವಾಗಿ ವಿವರಿಸುವುದಾದರೆ, ಗರ್ಭಾಶಯ ಮತ್ತು ಯೋನಿ ಮೂಲಕ ಹೊರಜಾರುವಿಕೆ ಹಾಗೂ ಮಲ ಮತ್ತು ಜಠರ ವಾಯುಗಳ ಅನಿಯಂತ್ರಣಗಳು.

ಗರ್ಭಾಶಯ ಜಾರುವಿಕೆ ಹೇಗೆ ಉಂಟಾಗುತ್ತದೆ ಮತ್ತು ಅದು ಉಂಟಾಗಿರುವುದನ್ನು ತನಗೆ ಅರ್ಥ ಮಾಡಿಕೊಳ್ಳುವುದಕ್ಕೆ ಎಷ್ಟು ಕಷ್ಟವಾಗಿತ್ತು ಎನ್ನುವುದು ಸುನಿಧಿಗೆ ಈಗಲೂ ನೆನಪಿದೆ. ತಮ್ಮಲ್ಲಿ ಏನು ಸಮಸ್ಯೆಯಾಗಿದೆ ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸ್ವತಃ ರೋಗಿಗಳಿಗೆ ಇನ್ನಷ್ಟು ಕಷ್ಟವಾಗಬಹುದು ಎಂಬುದರ ಅರಿವು ಆಕೆಗಿದೆ. ಹಾಗಾಗಿ ಗರ್ಭಾಶಯ ಹೊರಜಾರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದು, ತನ್ನ ಹೊರರೋಗಿ ವಿಭಾಗಕ್ಕೆ ಬರುವ ಪ್ರತಿ ರೋಗಿಯ ಬಗೆಗೂ ಆಕೆ ಹೆಚ್ಚುವರಿ ಕಾಳಜಿ ವಹಿಸಿ ಈ ಸಮಸ್ಯೆಯ ಒಳಹೊರಗನ್ನು – ಹಾಗೆಂದರೇನು, ಯಾಕೆ ಉಂಟಾಗುತ್ತದೆ, ಸಾಮಾನ್ಯ ಲಕ್ಷಣಗಳೇನು ಮತ್ತು ಚಿಕಿತ್ಸೆಯ ಆಯ್ಕೆಗಳೇನು ಎಂಬುದನ್ನು ವಿಸ್ತಾರವಾಗಿ ತಿಳಿಸುತ್ತಾರೆ. ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಒದಗಿಸದೆ ಇದ್ದರೆ ಉಂಟಾಗಬಹುದಾದ ಸಂಕೀರ್ಣ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯವೇ.

ಸಹಜ ಯೋನಿ ಮೂಲಕ ಹೆರಿಗೆಯ ಸಂದರ್ಭದಲ್ಲಿ ಉಂಟಾದ ಹಾನಿಯೇ ಪೆಲ್ವಿಕ್‌ ಅಂಗಾಂಗಗಳ ಜಾರುವಿಕೆಗೆ ಸಾಮಾನ್ಯವಾದ ಕಾರಣವಾಗಿರುತ್ತದೆ. ಜನನದ ಸಮಯದಲ್ಲಿ ಶಿಶುವಿನ ತಲೆಯು ಯೋನಿಯ ದ್ವಾರವನ್ನು ಹಿಗ್ಗಿಸುವಾಗ ಅಲ್ಲಿನ ಸ್ನಾಯು ಫೈಬರ್‌ಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗುವುದಿಲ್ಲ. ಸಾಮಾನ್ಯವಾಗಿ ಇದು ನಗಣ್ಯವಾಗಿರುತ್ತದೆ. ಆದರೆ ಮಹಿಳೆಯು ಅನೇಕ ಬಾರಿ ಶಿಶುಗಳಿಗೆ ಜನನ ನೀಡಿದಾಗ ಈ ಹಾನಿಯು ದೊಡ್ಡ ಪ್ರಮಾಣದ್ದಾಗುತ್ತದೆ. ದೊಡ್ಡ ಗಾತ್ರದ ಶಿಶುವಿನ ಜನನ ಅಥವಾ ಕಷ್ಟಕರ ಪ್ರಸೂತಿಯಿಂದಲೂ ಪೆಲ್ವಿಕ್‌ ಫ್ಲೋರ್‌ನ ಸ್ನಾಯುಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗುತ್ತದೆ. ತುರ್ತು ಸಂದರ್ಭದಲ್ಲಿ ಹೆರಿಗೆ ನಡೆಸಲು ಉಪಯೋಗಿಸಲಾಗುವ ಸಲಕರಣೆಗಳು (ವ್ಯಾಕ್ಯೂಮ್‌ ಮತ್ತು ಫೋರ್ಸೆಪ್ಸ್‌)ಗಳು ಕೂಡ ಪೆಲ್ವಿಕ್‌ ಫ್ಲೋರ್‌ಗೆ ಭಾರೀ ಹಾನಿಯನ್ನು ಉಂಟು ಮಾಡುವ ಅಪಾಯ ಸಾಧ್ಯತೆಯನ್ನು ಹೊಂದಿರುತ್ತವೆ. ಶಿಶು ಜನನದ ಸಂದರ್ಭದಲ್ಲಿ ಉಂಟಾಗುವ ಈ ಭಾರೀ ಹಾನಿಯೇ ಪೆಲ್ವಿಕ್‌ ಅಂಗಾಂಗಗಳ ಜಾರುವಿಕೆಗೆ ಪ್ರಧಾನ ಕಾರಣವಾಗಿರುತ್ತದೆ. ಆದರೆ ಮಹಿಳೆಯು ಸಣ್ಣ ವಯಸ್ಸಿನವಳಾಗಿದ್ದಾಗ ಆಕೆಯ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈಸ್ಟ್ರೋಜೆನ್‌ ಹಾರ್ಮೋನ್‌ ಇರುತ್ತದೆ. ಈ ಹಾರ್ಮೋನ್‌ ಅಂಗಾಂಶಗಳನ್ನು ಬಲಿಷ್ಠವಾಗಿರಿಸುತ್ತದೆ. ಆದರೆ ಮಹಿಳೆಯು ಋತುಚಕ್ರ ಬಂಧವನ್ನು ಅನುಭವಿಸಿದ ಬಳಿಕ ಆಕೆಯ ಅಂಡಾಶಯಗಳು ಈಸ್ಟ್ರೋಜೆನ್‌ ಸ್ರವಿಸುವುದನ್ನು ನಿಲ್ಲಿಸುತ್ತವೆ. ಆಗ ಪೆಲ್ವಿಕ್‌ ಫ್ಲೋರ್‌ ಸ್ನಾಯುಗಳಿಗೆ ಹಿಂದೆ ಆಗಿದ್ದ ಗಾಯಗಳು ಮುನ್ನೆಲೆಗೆ ಬರುತ್ತವೆ. ಹೀಗಾಗಿ ಈಗಾಗಲೇ ಗಾಯಗೊಂಡಿರುವ ಮತ್ತು ದುರ್ಬಲವಾಗಿರುವ ಪೆಲ್ವಿಕ್‌ ಫ್ಲೋರ್‌ ಅಂಗಾಂಗಗಳನ್ನು ಅವುಗಳ ಸ್ವಸ್ಥಾನದಲ್ಲಿ ಹಿಡಿದಿರಿಸಿಕೊಳ್ಳಲು ಅಶಕ್ತವಾಗುತ್ತದೆ. ಇದರ ಪರಿಣಾಮವಾಗಿ ಪೆಲ್ವಿಕ್‌ ಫ್ಲೋರ್‌ ಅಂಗಗಳಾದ ಗರ್ಭಕೋಶ, ಮೂತ್ರಕೋಶ ಮತ್ತು ಗುದನಾಳಗಳು ಯೋನಿಗೆ ಮತ್ತು ಕೆಲವೊಮ್ಮೆ ಅದರಿಂದ ಹೊರಕ್ಕೂ ಜಾರುತ್ತವೆ.

ಸಾಮಾನ್ಯ ಲಕ್ಷಣಗಳು ಯಾವುವು?
ಲಕ್ಷಣಗಳು ಗರ್ಭಕೋಶ ಜಾರುವಿಕೆಯ ತೀವ್ರತೆಯನ್ನು ಆಧರಿಸಿವೆ. ಆರಂಭಿಕ ಹಂತಗಳಲ್ಲಿ ರೋಗಿಯು ಯಾವುದೇ ಲಕ್ಷಣಗಳನ್ನು ಅನುಭವಿಸದಿರಬಹುದು. ವೈದ್ಯರು ಯೋನಿ ಮೂಲಕ ತಪಾಸಣೆ ನಡೆಸಿದ ಬಳಿಕವಷ್ಟೇ ಗರ್ಭಕೋಶ ಜಾರಿರುವುದು ಗಮನಕ್ಕೆ ಬರಬಹುದಾಗಿದೆ. ತೀವ್ರತೆಯ ಆಧಾರದಲ್ಲಿ ಗರ್ಭಕೋಶ ಜಾರುವಿಕೆಯನ್ನು ಡಿಗ್ರಿಗಳಾಗಿ ವಿಭಾಗಿಸಲಾಗಿದೆ. ಆರಂಭಿಕ ಹಂತದಲ್ಲಿ ಜಾರುವಿಕೆಯು ಪ್ರಥಮ ಡಿಗ್ರಿಯಲ್ಲಿದ್ದಾಗ ಮಹಿಳೆಗೆ ಯಾವುದೇ ಸಮಸ್ಯೆಯು ಅನುಭವಕ್ಕೆ ಬರುವುದಿಲ್ಲ. ಆದರೆ ಜಾರುವಿಕೆಯು ಮುಂದುವರಿಯುತ್ತಿದ್ದಂತೆ ಯೋನಿಯಲ್ಲಿ ಮಾಂಸದ ಮುದ್ದೆಯೊಂದು ಇರುವ ಅನುಭವ ಮಹಿಳೆಗೆ ಉಂಟಾಗುತ್ತದೆ. ದೀರ್ಘ‌ಕಾಲ ನಿಂತಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ದಿನಾಂತ್ಯದಲ್ಲಿ ಈ ಲಕ್ಷಣಗಳು ಹೆಚ್ಚುತ್ತವೆ. ಮಲಗಿದಾಗ ಈ ಲಕ್ಷಣಗಳು ಕಡಿಮೆಯಾಗಲು ಆರಂಭವಾಗುತ್ತವೆ, ಬೆಳಗ್ಗಿನ ಸಮಯದಲ್ಲಿ ಹೆಚ್ಚಾಗಿ ಇರುವುದಿಲ್ಲ.

ಜಾರುವಿಕೆಯು ಎಲ್ಲರಲ್ಲಿಯೂ ಒಂದೇ ರೀತಿಯಾಗಿರುವುದಿಲ್ಲ. ಪೆಲ್ವಿಕ್‌ ಫ್ಲೋರ್‌ನ ಯಾವ ಭಾಗವು ಗಾಯಗೊಂಡು ದುರ್ಬಲವಾಗಿದೆ ಎಂಬುದನ್ನು ಆಧರಿಸಿದೆ. ದುರ್ಬಲತೆಯು ಪೆಲ್ವಿಕ್‌ ಫ್ಲೋರ್‌ನ ಮುಂಭಾಗದಲ್ಲಿ ಹೆಚ್ಚಿದ್ದರೆ ಮೂತ್ರಕೋಶವು ಕೆಳಜಾರುತ್ತದೆ. ಈ ಹಂತದಲ್ಲಿ ರೋಗಿಯು ಆಗಾಗ ಮೂತ್ರಾಂಗ ವ್ಯೂಹ ಸೋಂಕುಗಳು, ಮೂತ್ರ ವಿಸರ್ಜಿಸಲು ಆತುರ, ಮೂತ್ರ ತಡೆಹಿಡಿಯಲಾಗದಿರುವುದು, ಪೂರ್ತಿ ಮೂತ್ರ ವಿಸರ್ಜನೆಯಾಗದಿರುವ ಅನುಭವ ಮತ್ತು ಮೂತ್ರ ವಿಸರ್ಜಿಸುವಾಗ ಸಂಕಷ್ಟ ಇತ್ಯಾದಿ ಮೂತ್ರ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಪೆಲ್ವಿಕ್‌ ಫ್ಲೋರ್‌ನ ಹಿಂಬದಿಯಲ್ಲಿ ದುರ್ಬಲವಾಗಿದ್ದರೆ ರೋಗಿಯು ಮಲವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಇವುಗಳಲ್ಲಿ ಮಲ ವಿಸರ್ಜನೆ – ಜಠರ ವಾಯು ತಡೆಹಿಡಿಯಲು ಕಷ್ಟ, ಮಲ ಪೂರ್ತಿಯಾಗಿ ವಿಸರ್ಜನೆಯಾಗದಿರುವ ಅನುಭವ ಸೇರಿರುತ್ತದೆ. ಗರ್ಭಕೋಶ ಜಾರಿದ ಪ್ರಕರಣಗಳಲ್ಲಿ ಗಂಡ- ಹೆಂಡತಿಗೆ ಲೈಂಗಿಕ ಸಂಪರ್ಕವೂ ಸುಖದಾಯಕವಾಗಿರುವುದಿಲ್ಲ.

ಸಾಮಾನ್ಯವಾಗಿ ಪೆಲ್ವಿಕ್‌ ಅಂಗಾಂಗಗಳ ಜಾರುವಿಕೆಯು ಅಪಾಯಕಾರಿಯಲ್ಲದ ಅನಾರೋಗ್ಯ ಸ್ಥಿತಿಯಾಗಿರುತ್ತದೆ. ಆದರೆ ಹಲವು ವರ್ಷಗಳ ಕಾಲ ಅದನ್ನು ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ ಅದು ಪ್ರಾಣಾಪಾಯಕಾರಿಯಾದ ಸಂಕೀರ್ಣ ಅನಾರೋಗ್ಯಗಳನ್ನು ಉಂಟು ಮಾಡಬಹುದಾಗಿದೆ. ಜಾರಿಕೊಂಡ ಗರ್ಭಕೋಶದಲ್ಲಿ ಹುಣ್ಣುಗಳು ಉಂಟಾಗಬಹುದು ಹಾಗೂ ರಕ್ತಸ್ರಾವ ಮತ್ತು ಸೋಂಕುಗಳು ಉಂಟಾಗಬಹುದು. ಕೆಲವೊಮ್ಮೆ ಸಂಕುಚನೆಯಿಂದಾಗಿ ಮನುಷ್ಯ ಪ್ರಯತ್ನದ ಹೊರತಾಗಿಯೂ ಜಾರಿದ ಪೆಲ್ವಿಕ್‌ ಅಂಗಾಂಗಗಳನ್ನು ಮರಳಿ ಸ್ವಸ್ಥಾನ ಸೇರಿಸುವುದು ಕಷ್ಟವಾಗಬಹುದು. ಈ ಸ್ಥಿತಿಯನ್ನು ಇರೆಡ್ನೂಸಿಲ್‌ ಪ್ರೊಲ್ಯಾಪ್ಸ್‌ ಎಂದು ಕರೆಯಲಾಗುತ್ತದೆ. ದೀರ್ಘ‌ಕಾಲೀನ ಜಾರುವಿಕೆಗಳು ಗರ್ಭಕೋಶಕ್ಕೆ ಅಡಚಣೆಯಾಗಿ ಮೂತ್ರಪಿಂಡ ವೈಫ‌ಲ್ಯಕ್ಕೆ ಕಾರಣವಾಗಬಹುದು. ಹೊರಜಾರಿರುವ ಗರ್ಭಕೋಶವು ಕೆಲವೊಮ್ಮೆ ತೀವ್ರ ತೆರನಾದ ಸೋಂಕುಗಳನ್ನು ಬೆಳೆಸಿಕೊಳ್ಳಬಹುದಲ್ಲದೆ ಅಪರೂಪಕ್ಕೆ ಕ್ಯಾನ್ಸರ್‌ಗೂ ತುತ್ತಾಗಬಹುದು.

ಚಿಕಿತ್ಸೆಯ ಆಯ್ಕೆಗಳೇನು?
ಪ್ರೊಲ್ಯಾಪ್ಸ್‌ ಹೊಂದಿರುವ ರೋಗಿಗಳಿಗೆ ಚಿಕಿತ್ಸೆಯ ಹಲವಾರು ಆಯ್ಕೆಗಳಿವೆ. ರೋಗಿಯ ವಯಸ್ಸು, ಸಾಮಾನ್ಯ ಆರೋಗ್ಯ ಸ್ಥಿತಿಗತಿ ಮತ್ತು ಜಾರುವಿಕೆಯ ತೀವ್ರತೆಯ ಆಧರಿಸಿ ಯಾವ ರೋಗಿಗೆ ಯಾವ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ರೋಗಿಯ ಜತೆಗೆ ಚರ್ಚೆ ನಡೆಸಿ, ರೋಗಿಯ ಅಗತ್ಯಗಳಿಗೆ ಅನುಸಾರವಾಗಿ ಯಾವ ಚಿಕಿತ್ಸೆಯನ್ನು ಒದಗಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ.

ಫಿಸಿಯೋಥೆರಪಿ
ಪೆಲ್ವಿಕ್‌ ಫ್ಲೋರ್‌ ಬಲಪಡಿಸುವ ವ್ಯಾಯಾಮಗಳ ರೂಪದ ಫಿಸಿಯೋಥೆರಪಿಯು ಯುವ ರೋಗಿಗಳಿಗೆ ಆರಂಭಿಕ ಹಂತಗಳಲ್ಲಿ ಉಪಯುಕ್ತವಾಗುತ್ತದೆ. ಫಿಸಿಯೋಥೆರಪಿ ಮುಂದುವರಿಯುತ್ತಿದ್ದಂತೆ ನಿರೀಕ್ಷಿತ ಬದಲಾವಣೆಗಳನ್ನು ಕಾಣುವುದಕ್ಕೆ ರೋಗಿಯು ಬದ್ಧತೆ ಮತ್ತು ನಿರಂತರತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಪ್ರೊಲ್ಯಾಪ್ಸ್‌ ಮುಂದುವರಿಯುವುದನ್ನು ತಡೆಯುವುದಕ್ಕೂ ಪೆಲ್ವಿಕ್‌ ಫ್ಲೋರ್‌ ವ್ಯಾಯಾಮವು ಸಹಕಾರಿಯಾಗುತ್ತದೆ. ಶಸ್ತ್ರಚಕಿತ್ಸೆಯ ಬಳಿಕವೂ ಈ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಸಮಸ್ಯೆಗಳು ಮರುಕಳಿಸುವುದನ್ನು ತಡೆಯಬಹುದು.

ಪೆಸರಿ
ಪೆಸರಿ ಒಂದು ಉಂಗುರದಂತಹ ರಚನೆಯಾಗಿದ್ದು, ಪ್ಲಾಸ್ಟಿಕ್‌ ಅಥವಾ ಸಿಲಿಕಾನ್‌ನಿಂದ ತಯಾರಾಗಿರುತ್ತದೆ. ಶಸ್ತ್ರಚಿಕಿತ್ಸೆಯನ್ನು ಬಯಸದ ಅಥವಾ ಇತರ ವೈದ್ಯಕೀಯ ಸ್ಥಿತಿಗಳಿಂದಾಗಿ ಶಸ್ತ್ರಕ್ರಿಯೆಯನ್ನು ನಡೆಸಲಾಗದ ರೋಗಿಗಳಿಗೆ ಈ ಆಯ್ಕೆಯನ್ನು ನೀಡಲಾಗುತ್ತದೆ. ಇವು ವಿವಿಧ ಗಾತ್ರ ಮತ್ತು ವಿಧಗಳಲ್ಲಿ ಲಭ್ಯವಿವೆ. ಸರಿಯಾದ ಗಾತ್ರದ ಪೆಸರಿಯನ್ನು ಅಳವಡಿಸುವುದು ಅತ್ಯಂತ ಪ್ರಾಮುಖ್ಯವಾಗಿದ್ದು, ಇದು ಒಂದೇ ಪ್ರಯತ್ನದಲ್ಲಿ ಸಾಧ್ಯವಾಗದೆ ಹೋಗಬಹುದು. ಒಮ್ಮೆ ಅಳವಡಿಸಿದ ಬಳಿಕ ಅದು ಸರಿಯಾಗಿದೆಯೇ ಅಥವಾ ಯೋನಿಯಿಂದ ಉರಿಯೂತಗಳು, ರಕ್ತಸ್ರಾವ ಅಥವಾ ಹುಣ್ಣು ಕಾಣಿಸಿಕೊಂಡಿದೆಯೇ ಎಂಬುದನ್ನು ಪತ್ತೆಹಚ್ಚಲು ನಿಯಮಿತವಾಗಿ ತಪಾಸಣೆ ನಡೆಸುತ್ತಿರಬೇಕಾಗುತ್ತದೆ. ರೋಗಿಯ ದೈಹಿಕ ಸ್ಥಿತಿಗತಿ ಮತ್ತು ಹಿಮ್ಮಾಹಿತಿಗಳನ್ನು ಆಧರಿಸಿ ಪೆಸರಿಯನ್ನು ಪ್ರತೀ ಮೂರರಿಂದ ಆರು ತಿಂಗಳುಗಳ ಅವಧಿಗೊಮ್ಮೆ ಬದಲಾಯಿಸುವುದು ವಿಹಿತ.

ಗರ್ಭಾಶಯ ಜಾರುವಿಕೆ (ಪ್ರೊಲ್ಯಾಪ್ಸ್‌) ಅಂದರೇನು?
ಮಹಿಳೆಯ ವಸ್ತಿಕುಹರದ ಒಳಗಿರುವ ಅಂಗಾಂಗಗಳು (ಗರ್ಭಕೋಶ, ಮೂತ್ರಕೋಶ ಮತ್ತು ಗುದನಾಳ) ಸಾಮಾನ್ಯವಾಗಿ ಲಿಗಮೆಂಟ್‌ ಮತ್ತು ಸ್ನಾಯುಗಳಿಂದ ಸ್ವಸ್ಥಾನದಲ್ಲಿ ಹಿಡಿದಿಡಲ್ಪಟ್ಟಿರುತ್ತವೆ. ಪೆಲ್ವಿಕ್‌ ಫ್ಲೋರ್‌ ಎಂದು ಕರೆಯಲಾಗುವ ಭಾಗದಲ್ಲಿ ಈ ಅಂಗಾಂಗಗಳನ್ನು ಸ್ವಸ್ಥಾನದಲ್ಲಿ ಹಿಡಿದಿರಿಸಲು ಬೇಕಾದ ಬೆಂಬಲ ವ್ಯವಸ್ಥೆಯಾಗಿ ಈ ಲಿಗಮೆಂಟ್‌ಗಳು ಮತ್ತು ಸ್ನಾಯುಗಳು ಕೆಲಸ ಮಾಡುತ್ತವೆ. ಪೆಲ್ವಿಕ್‌ ಫ್ಲೋರ್‌ ಅಥವಾ ಈ ಆಧಾರಕ ವ್ಯವಸ್ಥೆಯಲ್ಲಿ ಯಾವುದಾದರೊಂದು ಅತಿಯಾಗಿ ಬಳಸಲ್ಪಟ್ಟು ದುರ್ಬಲವಾದರೆ ಪೆಲ್ವಿಕ್‌ ಅಂಗಾಂಗಗಳು ತಮ್ಮ ನೈಸರ್ಗಿಕ ಸ್ಥಾನದಿಂದ ಕೆಳಕ್ಕೆ ಯೋನಿಯತ್ತ ಜಾರುತ್ತವೆ. ಇದನ್ನು ಗರ್ಭಾಶಯ ಜಾರುವಿಕೆ ಅಥವಾ ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಜಾರುವಿಕೆಯು ಯೋನಿಯಿಂದ ಹೊರಕ್ಕೆ ಚಾಚಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.

ಡಾ| ದೀಕ್ಷಾ ಪಾಂಡೆ,
ಡಾ| ಸ್ವಾತಿ ಕಾಂಚನ್‌,
ಡಾ| ಮಧಾನಾ ಶಿಶಿರ್‌,
ಡಾ| ಶ್ರೀಪಾದ್‌ ಹೆಬ್ಟಾರ್‌
ಒಬ್‌ಸ್ಟೆಟ್ರಿಕ್ಸ್‌ ಮತ್ತು ಗೈನಕಾಲಜಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.