ಝಣ ಝಣ ಲಾಂಛನ; ಜನರ ಮನದಲ್ಲಿ ಕಂಪನಿ ಒತ್ತುವ ಸೀಲು!

Team Udayavani, Jan 20, 2020, 5:55 AM IST

ಯಾವುದೇ ಸಂಸ್ಥೆಗೆ, ಅದರ ಲೋಗೋ ಮುಖವಾಣಿ ಇದ್ದಂತೆ. ಜನರು ಮತ್ತು ಸಂಸ್ಥೆಯ ನಡುವಣ ಸೇತುವೆಯಂತೆ ಕೆಲಸ ಮಾಡುತ್ತದೆ ಲೋಗೋ. ಬಹುತೇಕರು ಲೋಗೋ ಎಂದರೆ ಸಂಸ್ಥೆಯ ಹೆಸರನ್ನು ಕ್ರಿಯಾತ್ಮಕ ರೀತಿಯಲ್ಲಿ ಮೂಡಿಸುವುದು ಎಂದಷ್ಟೇ ತಿಳಿಯುತ್ತಾರೆ. ಆದರೆ, ಸಂಸ್ಥೆಯ ಹೆಸರಿನ ಜೊತೆಗೆ, ಅದು ನಿರ್ವಹಿಸುವ ಕೆಲಸ, ವೈಶಿಷ್ಟ್ಯ, ಅದರ ಧ್ಯೇಯೋದ್ದೇಶ ಇವೆಲ್ಲವನ್ನೂ ಗ್ರಾಫಿಕ್‌(ಚಿತ್ರ) ರೂಪದಲ್ಲಿ, ಸಂಕೇತಾಕ್ಷರಗಳಲ್ಲಿ ಹಿಡಿದಿಡುವುದೇ ಲೋಗೋ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಜನಪ್ರಿಯ ಸಂಸ್ಥೆಗಳ ಲೋಗೋಗಳನ್ನು ಗಮನಿಸಿದರೆ ಈ ಸಂಗತಿ ಮನದಟ್ಟಾಗುತ್ತದೆ. ಲೋಗೋಗಳನ್ನು ಗ್ರಾಫಿಕ್‌ ಡಿಸೈನರ್‌ಗಳು, ಚಿತ್ರಕಲಾವಿದರು ರೂಪಿಸುತ್ತಾರೆ. ನಮ್ಮ ನಡುವಿನ ಪ್ರಖ್ಯಾತ ಲೋಗೋಗಳು ಮತ್ತದರ ಅರ್ಥ ಇಲ್ಲಿವೆ-

1. ಟಾಟಾ
ಮಕ್ಕಳಿಂದ ಹಿಡಿದು ದೊಡ್ಡವರ ತನಕ ಗುರುತಿಸುವ ಆಟೋಮೊಬೈಲ್‌ ಸಂಸ್ಥೆ ಟಾಟಾದ ಲೋಗೋ ಸರಳತೆಗೆ ಹೆಸರಾಗಿದೆ. ಅದರಲ್ಲಿ ಸಂಸ್ಥೆಯ ಮೊದಲಾಕ್ಷರ “ಟಿ’ಯನ್ನು ಕಾಣಬಹುದಾಗಿದೆ. ಅಲ್ಲದೆ ಅದರ ಮಧ್ಯದಲ್ಲಿ ಕಂಡುಬರುವ ಆಕೃತಿ ಮರ ಹಾಗೂ ಜ್ಞಾನದ ಕಾರಂಜಿಯನ್ನೂ ಸಂಕೇತಿಸುತ್ತದೆ.

2. ಎಸ್‌ಬಿಐ
ಭಾರತದಲ್ಲಿ ಬ್ಯಾಂಕುಗಳ ದೊಡ್ಡಣ್ಣ ಎಂದೇ ಹೆಸರಾದ ಎಸ್‌ಬಿಐನ ಈಗಿನ ಲೋಗೋವನ್ನು 1971ರಲ್ಲಿ ಸೃಷ್ಟಿಸಲಾಯಿತು. ಅಹಮದಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌ನ ವಿದ್ಯಾರ್ಥಿ ಶೇಖರ್‌ ಕಾಮತ್‌ ಎಂಬುವವರು ಅದರ ಸೃಷ್ಟಿಕರ್ತರು. ಲೋಗೋ ಹಿಂದಿನ ಅರ್ಥದ ಕುರಿತು ಹಲವು ಕಥೆಗಳು ಚಾಲ್ತಿಯಲ್ಲಿವೆ. ಬೀಗದ ಕೈ ತೂರುವ ಜಾಗದಂತೆ ಕಾಣುವುದರಿಂದ ಅದು ಭದ್ರತೆ ಮತ್ತು ಸುರಕ್ಷತೆಯನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಕೆಲವರು. ಇನ್ನು ಕೆಲವರು ಅಹಮದಾಬಾದ್‌ನಗರದ ಕನ್‌ಕೇರಿಯಾ ಕೆರೆಯ ನಕ್ಷೆಯನ್ನು ಹೋಲುತ್ತದೆ ಎಂದೂ ಹೇಳುತ್ತಾರೆ.

3. ಏರ್‌ಟೆಲ್‌
ಈಗಿನ ಏರ್‌ಟೆಲ್‌ ಲೋಗೋ, 2010ರಲ್ಲಿ ಡಿಸೈನ್‌ ಮಾಡಿದ್ದು. ಅದು ಇಂಗ್ಲೀಷ್‌ನ ಎ ಆಕಾರದಲ್ಲಿದೆ. ಸ್ಮಾಲ್‌ ಎ ಆಗಿದ್ದರೂ ಅದು ಕೂಡಿಕೊಂಡಿಲ್ಲದೇ ಇರುವುದಕ್ಕೆ ಕಾರಣವಿದೆ. ಯಶಸ್ಸಿಗೆ ಬೌಂಡರಿ ಇಲ್ಲ ಎನ್ನುವುದನ್ನು ಅದು ಸಂಕೇತಿಸುತ್ತದೆ.

4. ಏಷ್ಯನ್‌ ಪೇಂಟ್ಸ್‌
ಲೋಗೋದಲ್ಲಿ ಎ ಮತ್ತು ಪಿ ಅಕ್ಷರಗಳನ್ನು ಯಾರು ಬೇಕಾದರೂ ಗುರುತಿಸಬಹುದು. ಅಷ್ಟಕ್ಕೇ ಅದೆಷ್ಟು ಸರಳವಾಗಿದೆ ಎಂದು ತಿಳಿಯದಿರಿ. ಆ ಅಕ್ಷರಗಳನ್ನು ಮೂಡಿಸಿರುವ ಶೈಲಿಯನ್ನು ಗಮನಿಸಿ. ಪೇಂಟ್‌ ಮಾಡುವಾಗಿನ ಚಲನೆ, ಬ್ರಷ್‌ ಸ್ಟ್ರೋಕ್‌ನಂತೆಯೇ ಲೋಗೋ ರೂಪಿಸಲಾಗಿದೆ. ಅದು ಗ್ರಾಫಿಕ್‌ ಡಿಸೈನರ್‌ನ ಜಾಣ್ಮೆ.

5. ದೂರದರ್ಶನ್‌
ಜಗತ್ತಿನ ಅತಿ ದೊಡ್ಡ ಪ್ರಸಾರ ಮಾಧ್ಯಮ ಎಂದೇ ಕರೆಸಿಕೊಳ್ಳುವ ದೂರದರ್ಶನ್‌ನ ಈ ಲೋಗೋ, ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅದನ್ನು ರೂಪಿಸಿದ್ದು ದೇವಶಿಷ್‌ ಭಟ್ಟಾಚಾರ್ಯ. ಅಹಮದಾಬಾದ್‌ನ ನ್ಯಾಷನಲ್‌ ಸ್ಕೂಲ್‌ ಆಫ್ ಡಿಸೈನ್‌ನಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಕಾಲೇಜ್‌ ಪ್ರಾಜೆಕ್ಟ್ಗೆಂದು ಮಾಡಿದ್ದನ್ನೇ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೂರದರ್ಶನ್‌ ಲೋಗೋವನ್ನಾಗಿ ಆರಿಸಿದ್ದರು. ಲೋಗೋದಲ್ಲಿರುವ ಎರಡು ಆಕೃತಿಗಳು ಚೀನೀ ತತ್ವಶಾಸ್ತ್ರದಲ್ಲಿ ಬರುವ “ಯಿನ್‌ ಮತ್ತು ಯಾಂಗ್‌’ ವಸ್ತುವನ್ನು ಸಂಕೇತಿಸುತ್ತವೆ. ಬೌದ್ಧ ಧರ್ಮದಲ್ಲಿ ಯಿನ್‌ ಮತ್ತು ಯಾಂಗ್‌ ಪ್ರಾಕೃತಿಕ ಸಮತೋಲನವನ್ನು ಪ್ರತಿನಿಧಿಸುತ್ತದೆ.

6. ಎಚ್‌.ಪಿ
ರಸ್ತೆಗಳಲ್ಲಿ ಈ ಲೋಗೋ ಎಷ್ಟೇ ದೂರದಲ್ಲಿ ಕಂಡರೂ ವಾಹನ ಸವಾರರಿಗೆ ಮುಂದೆ ಎಚ್‌ಪಿ ಪೆಟ್ರೋಲ್‌ ಬಂಕ್‌ ಇರುವುದು ತಿಳಿದುಬಿಡುತ್ತಿತ್ತು. ಭಾರತೀಯರಿಗೆ ಅತ್ಯಂತ ಸರಳವಾಗಿ ಅರ್ಥವಾಗುವಂತೆ ರೂಪಿಸಲಾಗಿದ್ದು ಇದರ ಹೆಗ್ಗಳಿಕೆ. ಚಿತ್ರದಲ್ಲಿ ಎಚ್‌ಪಿ ಅಕ್ಷರಗಳ ಕೆಳಗೆ ಕಂಡುಬರುವ ವಿ ಆಕಾರ, ತೈಲವನ್ನು ಇಂಧನ ಟ್ಯಾಂಕಿನೊಳಗೆ ಸುರಿಯುವುದನ್ನು ಪ್ರತಿನಿಧಿಸುತ್ತದೆ.

7. ಫೆವಿಕಾಲ್‌
ಅಂಟಿಸಲಾದ ಎರಡು ಜೋಡಣೆಗಳನ್ನು ಎರಡು ಆನೆಗಳು ವಿರುದ್ಧ ದಿಕ್ಕಿನಲ್ಲಿ ಎಳೆಯುವ ಲೋಗೋ, ಯಾವ ಸಂಸ್ಥೆಯದ್ದೆಂದು ಹೇಳುವ ಅಗತ್ಯವೇ ಇಲ್ಲ. ಈ ಫೆವಿಕಾಲ್‌ ಲೋಗೋ ಸಂಸ್ಥೆಯ ಉತ್ಪನ್ನವನ್ನು ಮತ್ತದು ನೀಡುತ್ತಿರುವ ಭರವಸೆಯನ್ನು ಮನದಟ್ಟಾಗುವಂತೆ ತಿಳಿಸುತ್ತದೆ. ಫೆವಿಕಾಲ್‌ ಅಂಟು ಎಷ್ಟು ಸದೃಢವಾಗಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಈ ಲೋಗೋವನ್ನು ರೂಪಿಸಿದ್ದು “ಓ ಅÂಂಡ್‌ ಎಂ’ ಆ್ಯಡ್‌ ಏಜೆನ್ಸಿಯಲ್ಲಿ ಗ್ರಾಫಿಕ್‌ ಡಿಸೈನರ್‌ ಆಗಿದ್ದ ಸ್ವಾಮಿನಾಥನ್‌.

8. ಹಿಂದೂಸ್ತಾನ್‌ ಲಿವರ್‌
ಇಂದು ಯುನಿಲಿವರ್‌ ಆಗಿ ಹೆಸರು ಬದಲಾಯಿಸಿಕೊಂಡಿರುವ “ಹಿಂದೂಸ್ತಾನ್‌ ಲಿವರ್‌’ನ ಹಳೆಯ ಲೋಗೋ ಎಲ್ಲರಿಗೂ ನೆನಪಿರುತ್ತದೆ. ಒಂದು ಎಲೆಯ ರೇಖೆಗಳ ನಡುವೆ ಎಚ್‌ ಅಕ್ಷರವನ್ನು ಕೂರಿಸಿರುವ ಬಗೆ, ಅದನ್ನು ರೂಪಿಸಿದ ಡಿಸೈನರ್‌ನ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಹಸಿರು ಬಣ್ಣ ಸಮೃದ್ಧ ಮತ್ತು ನಿಸರ್ಗವನ್ನು ಪ್ರತಿನಿಧಿಸುತ್ತದೆ. ಅದು ಸಂಸ್ಥೆಯ ಉತ್ಪನ್ನಗಳ ಕುರಿತು ಸದಭಿಪ್ರಾಯವನ್ನು ಮೂಡಿಸುತ್ತದೆ.

9. ಇಂಡಿಯಾ ಪೋಸ್ಟ್‌
ಆರ್‌.ಕೆ. ಜೋಷಿ ಎಂಬುವವರು ರೂಪಿಸಿದ ಈ ಲೋಗೋ ಭಾರತೀಯ ಅಂಚೆ ಇಲಾಖೆಯದ್ದು. ಲೋಗೋದಲ್ಲಿ ಕಂಡು ಬರುವ ಶಾರ್ಪ್‌ ತುದಿಗಳು ವೇಗವನ್ನು ಸಂಕೇತಿಸುತ್ತವೆ. ತ್ವರಿತ ಗತಿಯಲ್ಲಿ ಅಂಚೆಗಳನ್ನು ಬಟವಾಡೆ ಮಾಡುತ್ತೇವೆ ಎನ್ನುವುದರ ಸೂಚ್ಯ ಸಂದೇಶ ಲೋಗೋದಲ್ಲಿದೆ.

10. ಮಾರುತಿ ಸುಝುಕಿ
ಭಾರತೀಯರ ಮೊದಲ ಅಚ್ಚುಮೆಚ್ಚಿನ ಆಟೋಮೊಬೈಲ್‌ ಸಂಸ್ಥೆ ಎಂದೇ ಕರೆಯಬಹುದಾದ ಸಂಸ್ಥೆ, ಮಾರುತಿ ಸುಝುಕಿ(ಹಿಂದೆ ಮಾರುತಿ ಉದ್ಯೋಗ್‌ ಪ್ರೈವೇಟ್‌ ಲಿಮಿಟೆಡ್‌). ಅದರ ಲೋಗೋವನ್ನು ರೆಡಿಫ್ಯೂಷನ್‌ ಆ್ಯಡ್‌ ಏಜೆನ್ಸಿಯ ರಮೇಶ್‌ ಮುಲೆ ರೂಪಿಸಿದ್ದರು. ಇಂಗ್ಲೀಷ್‌ನ ಎಂ ಅಕ್ಷರವನ್ನಂತೂ ಎಲ್ಲರೂ ಗಮನಿಸಿಯೇ ಇರುತ್ತಾರೆ. ಆದರೆ, ಲೋಗೋ ಒಳಗೆ ಕಾಣುವ ಗೆರೆಗಳು ಟಯರಿನ ಅಚ್ಚುಗಳನ್ನು ಪ್ರತಿನಿಧಿಸುತ್ತವೆ.

11. ಸಿಂಡಿಕೇಟ್‌ ಬ್ಯಾಂಕ್‌
ಸಿಂಡಿಕೇಟ್‌, ಹೊಸ ರೂಪವನ್ನು ಪಡೆದು ತುಂಬಾ ಸಮಯ ಕಳೆದಿದೆ. ಹೊಸ ಬದಲಾವಣೆ ಮಾಡಿಕೊಳ್ಳುವಾಗಲೂ ಸಂಸ್ಥೆ ಒಂದು ಅಂಶವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ. ಅದು ಲೋಗೋದಲ್ಲಿರುವ ಶ್ವಾನದ್ದು. ಎಲ್ಲರಿಗೂ ಗೊತ್ತಿರುವ ಹಾಗೆ ಶ್ವಾನ ನಿಯತ್ತಿಗೆ ಹೆಸರಾದದ್ದು. ಅದನ್ನು ಲೋಗೋದಲ್ಲಿ ಅಳವಡಿಸುವ ಮೂಲಕ, ತಾನು ವಿಶ್ವಾಸಕ್ಕೆ ಪಾತ್ರ ಎನ್ನುವುದನ್ನು ಸರಳವಾಗಿ ತಿಳಿಸುತ್ತದೆ ಈ ಲೋಗೋ.

ಚಾರ್ಜ್‌ ಹೇಗೆ ನಿಗದಿ ಪಡಿಸುತ್ತಾರೆ?
ಸಾಮಾನ್ಯವಾಗಿ ಲೋಗೋ ಬೆಲೆ ನಿಗದಿ ಪಡಿಸಲು ಅನೇಕ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಕಲಾವಿದನ ರೆಪ್ಯೂಟೇಷನ್‌, ಆ್ಯಡ್‌ ಏಜೆನ್ಸಿಯ ರೆಪ್ಯೂಟೇಷನ್‌ ಅಲ್ಲದೆ ಗ್ರಾಹಕ ಸಂಸ್ಥೆ ಎಷ್ಟು ಜನಪ್ರಿಯವಾದುದು ಹೀಗೆ… ಗ್ರಾಫಿಕ್‌ ಪ್ರತಿಭಾನ್ವಿತ ಡಿಸೈನರ್‌ಗಳು ಆರ್ಡರ್‌ ತೆಗೆದುಕೊಳ್ಳುವ ಮುನ್ನವೇ 40,000- 50,000 ರೂ. ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ. ಕೆಲ ಫ್ರೀಲ್ಯಾನ್ಸರ್‌ಗಳು ಅದಕ್ಕಿಂತ ಕಡಿಮೆ ಹಣಕ್ಕೆ ಲೋಗೋ ಮಾಡಿಕೊಡಬಹುದು. ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಲೋಗೋಗಳನ್ನು ಎತ್ತಿಕೊಂಡು ಅವುಗಳೆಲ್ಲವುಗಳನ್ನೂ ಸೇರಿಸಿಯೋ, ಪ್ರೇರಣೆ ಪಡೆದೋ ಲೋಗೋ ಸೃಷ್ಟಿಸುತ್ತಾರೆ. ಆದರೆ, ಹೆಚ್ಚು ಶುಲ್ಕ ಪಡೆಯುವ ಗ್ರಾಫಿಕ್‌ ಡಿಸೈನರ್‌ ಒರಿಜಿನಾಲಿಟಿಗೆ ಮಹತ್ವ ಕೊಡುತ್ತಾನೆ. ಆತನ ಲೋಗೋ ವಿಭಿನ್ನವಾಗಿರುತ್ತದೆ. ಆತ ಕಾಪಿ ಹೊಡೆಯುವುದಕ್ಕಿಂತ ಸ್ವಂತ ಸೃಷ್ಟಿಸುವುದಕ್ಕೇ ಒತ್ತು ನೀಡುತ್ತಾನೆ. ಒಂದು ಲೋಗೋ ಸೃಷ್ಟಿಸುವುದಕ್ಕೆ ಮುನ್ನ ಆತ ಏನಿಲ್ಲವೆಂದರೂ 250 ಸ್ಕೆಚ್‌ಗಳನ್ನು ಬಿಡಿಸಿರುತ್ತಾನೆ.

ಲೋಗೋ ಸೃಷ್ಟಿಯೂ ಒಂದು ಕಲೆ. ಆದರೆ ಕೆಲ ಸಂಸ್ಥೆಯವರು ಲೋಗೋ ಈ ರೀತಿಯೇ ಇರಬೇಕು ಎಂದು ಹಲವು ಸಿದ್ಧಸೂತ್ರಗಳನ್ನು ಇಟ್ಟುಕೊಂಡು ಬಂದಿರುತ್ತಾರೆ. ಇದರಿಂದ ಕಲಾವಿದನಿಗೆ ಸ್ವಾತಂತ್ರ್ಯಸಿಗುವುದಿಲ್ಲ. ಒಂದು ವೇಳೆ ಮಾಡುವ ಮುನ್ನ ಕಂಡೀಷನ್‌ ಹಾಕದಿದ್ದರೂ ಲೋಗೋ ಸಿದ್ಧಗೊಂಡ ನಂತರ ನೂರಾ ಎಂಟು ಕರೆಕ್ಷನ್‌ಗಳನ್ನು ಹಾಕಿಸುತ್ತಾರೆ. ಇದರಿಂದ ಕಲಾವಿದನ ಸ್ವಂತಿಕೆಯೇ ಹೋಗಿಬಿಡುತ್ತದೆ.
– ಪ್ರವೀಣ್‌ ಹೆಗಡೆ, ಗ್ರಾಫಿಕ್‌ ಡಿಸೈನರ್‌, ಬೆಂಗಳೂರು

ಅಂತಾರಾಷ್ಟ್ರೀಯ ಲೋಗೋಗಳು
– ನೈಕಿ- ವಿಜಯಕ್ಕೆ ಕಾರಣಳಾಗುವ(ವಿಜಯಲಕ್ಷ್ಮೀ) ಗ್ರೀಕ್‌ ದೇವತೆಯ ಹೆಸರೇ ನೈಕಿ. ಲೋಗೋದಲ್ಲಿರುವ ರೈಟ್‌ ಮಾರ್ಕ್‌ ಅವಳ ರೆಕ್ಕೆ ಭಾಗ.
– ಬಿ.ಎಂ.ಡಬ್ಲ್ಯು- ಮಹಾಯುದ್ಧದ ಸಮಯದಲ್ಲಿ ವಿಮಾನಗಳನ್ನು ತಯಾರಿಸುತ್ತಿತ್ತು ಬಿಎಂಡಬ್ಲ್ಯು. ಲೋಗೋದಲ್ಲಿರುವ ವೃತ್ತ ಮತ್ತು ನಾಲ್ಕು ವಿಭಾಗಗಳು ವಿಮಾನದ ಮುಂಭಾಗದ ಪ್ರೊಪೆಲ್ಲರ್‌ಅನ್ನು ಹೋಲುತ್ತದೆ.
– ನೆಸ್ಲೆ- ಜರ್ಮನ್‌ನಲ್ಲಿ ನೆಸ್ಲೆ ಎಂದರೆ ಹಕ್ಕಿ ಗೂಡು ಎಂದರ್ಥ. ಹೀಗಾಗಿ ಹಕ್ಕಿಯೊಂದರ ಕುಟುಂಬ ಗೂಡಿನಲ್ಲಿರುವುದನ್ನೇ ಡಿಸೈನರ್‌ ಲೋಗೋವಾಗಿಸಿದ. ಕುಟುಂಬಕ್ಕೆ ಪೋಷಣೆ ನೀಡುವುದನ್ನು ಲೋಗೋ ಸಂಕೇತಿಸುತ್ತದೆ.
– ಆ್ಯಡಿಡಾಸ್‌- ಅದನ್ನು ಅನೇಕರು ಆಲ್‌ ಡೇ ಆ ಡ್ರೀಮ್‌ ಅಬೌಟ್‌ ನ್ಪೋರ್ಟ್ಸ್ ಎಂಬುದರ ಶಾರ್ಟ್‌ ಫಾರ್ಮ್ ಎಂದೇ ತಿಳಿದಿದ್ದರು. ಆದರೆ ಅದು ಸ್ಥಾಪಕ ಅಡಾಲ್ಫ್ ಡಾಸ್ಲರ್‌ನ ಶಾರ್ಟ್‌ಫಾರ್ಮ್. ಮೇಲಿನ ಮೂರು ಕಡ್ಡಿಗಳು ಪರ್ವತಗಳನ್ನು ಸೂಚಿಸುತ್ತವೆ. ಜೀವನದಲ್ಲಿ ಎತ್ತರೆತ್ತರಕ್ಕೆ ಏರಬೇಕು, ಬೆಳೆಯಬೇಕು ಎನ್ನುವುದೇ ಅದರ ಅರ್ಥ.
– ಆ್ಯಪಲ್‌- ಲೋಗೋ ಮಹತ್ವ ಹೇಳುವುದಕ್ಕೆ ಆ್ಯಪಲ್‌ ಸಂಸ್ಥೆಗಿಂತ ಬೇರೆ ಬೇಕಿಲ್ಲ. ಜಗತ್ತಿನ ಅತಿ ಹೆಚ್ಚು ಬ್ರ್ಯಾಂಡ್‌ ಮೌಲ್ಯ ಹೊಂದಿರುವ ಲೋಗೋಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತೆ ಸಂಸ್ಥೆಯ ಲೋಗೋ. ಐಸಾಕ್‌ ನ್ಯೂಟನ್‌ಗೆ ಗುರುತ್ವಾಕರ್ಷಣೆ ಕುರಿತ ಹೊಳಹನ್ನು ನೀಡಿದಕ್ಕಾಗಿ ಆ್ಯಪಲ್‌ ಅನ್ನು ಲೋಗೋ ಆಗಿ ಬಳಸಲಾಗಿತ್ತು. ಮೊದಲಿಗೆ ಪೂರ್ತಿ ಆ್ಯಪಲ್‌ ಚಿತ್ರವನ್ನು ಅನೇಕರು ಚೆರ್ರಿ ಎಂದುಕೊಳ್ಳುತ್ತಿದ್ದುದಕ್ಕೆ ಆ್ಯಪಲ್‌ ಅನ್ನು ಕಚ್ಚಿದ ರೀತಿಯಲ್ಲಿ ವಿನ್ಯಾಸಗೊಳಿಸಲಾಯಿತು.
– ಅಮೆಝಾನ್‌- ಜಗತ್ತಿನ ಅತಿ ದೊಡ್ಡ ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಯ ಲೋಗೋದಲ್ಲಿ ಕೆಳಗೆ ಒಂದು ಬಾಣದ ಗುರುತಿದೆ. ಅದು ಹೆಸರಿನಲ್ಲಿರುವ “ಎ”ಇಂದ ಝೆಡ್‌ಅನ್ನು ಪಾಯಿಂಟ್‌ ಮಾಡುತ್ತಿದೆ. ಎ ಟು ಝೆಡ್‌, ಅಂದರೆ ಪ್ರತಿಯೊಂದು ವಸ್ತುವೂ ಅಮೆಝಾನ್‌ನಲ್ಲಿ ಲಭ್ಯ ಎನ್ನುತ್ತಿದೆ ಲೋಗೋ.
– ಔಡಿ- ನಮ್ಮ ನಡುವೆ ಜನಪ್ರಿಯವಾಗಿರುವ ವಿದೇಶಿ ಕಾರುಗಳಲ್ಲೊಂದು ಔಡಿ. ಅದರ ಲೋಗೋದಲ್ಲಿ ನಾಲ್ಕು ವೃತ್ತಗಳು ಒಂದಕ್ಕೊಂದು ಬೆಸೆದುಕೊಂಡಿರುವುದನ್ನು ಕಾಣಬಹುದು. ಔಡಿ ಸಂಸ್ಥೆ ನಾಲ್ಕು ಸಂಸ್ಥೆಗಳ ವಿಲೀನದ ಫ‌ಲ. ಅದಕ್ಕಾಗಿಯೇ ನಾಲ್ಕು ವೃತ್ತಗಳು ಬೆಸೆದಿರುವಂತೆ ಲೋಗೋವನ್ನು ರೂಪಿಸಲಾಗಿದೆ.

-ಹವನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ