ಹೊಲದಾಗೆ ಹಳ್ಳಿ ಮೇಷ್ಟ್ರು

Team Udayavani, Sep 30, 2019, 3:03 AM IST

ದಿನದ ಹೊತ್ತಿನಲ್ಲಿ ಪುಸ್ತಕ ಹಿಡಿದು ಮಕ್ಕಳಿಗೆ ಪಾಠ ಹೇಳುವ ಈ ಮೇಷ್ಟ್ರು, ಮುಂಜಾನೆ, ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ನೇಗಿಲು ಹಿಡಿದು ತಾವೇ ಕೃಷಿಯ ವಿದ್ಯಾರ್ಥಿಯಾಗುತ್ತಾರೆ.

ಕಾಯಕವೇ ಕೈಲಾಸ ಎಂದರು ಹಿರಿಯರು. ಅದರಂತೆಯೇ, ಶಿಕ್ಷಕ ವೃತ್ತಿಯ ಜೊತೆಗೇ ಪ್ರವೃತ್ತಿಯಾಗಿ ಕೃಷಿಯನ್ನೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿರುವ ವ್ಯಕ್ತಿಯ ಪರಿಚಯ ಇಲ್ಲಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದ ಮಾರುತಿ ಭೀಮಪ್ಪ ಸರಣ್ಣನವರೇ ಅವರು. ಇವರು ಮುಖ್ಯೋಪಾಧ್ಯಾಯರಾಗಿರುವ ಶತಮಾನದಷ್ಟು ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು “ಸ್ಮಾರ್ಟ್‌ ಮಾದರಿ ಶಾಲೆ’ಯನ್ನಾಗಿಸಿದ್ದು ಇವರ ಹೆಗ್ಗಳಿಕೆ. ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅವರಿಗೆ ಚಿಕ್ಕಂದಿನಿಂದಲೇ ವ್ಯವಸಾಯದಲ್ಲಿ ಆಸಕ್ತಿ. ದಿನದ ಹೊತ್ತಿನಲ್ಲಿ ಪುಸ್ತಕ ಹಿಡಿದು ಪಾಠ ಹೇಳುತ್ತಾರೆ. ಮುಂಜಾನೆ, ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ನೇಗಿಲು ಹಿಡಿದು ಹೊಲ ಉಳುತ್ತಾರೆ.

ಪರಿಣತರ ಮಾರ್ಗದರ್ಶನ: ಶಾಲೆಯಲ್ಲಿ, ಅರಳುವ ಹೂಗಳ ನಡುವೆಯೇ ಇರುವುದರಿಂದಲೋ ಏನೋ ಮಾರುತಿಯವರಿಗೆ ಹೂ ಬೆಳೆಯುವುದೆಂದರೆ ಇಷ್ಟ. ಅವರು ಚೆಂಡು ಹೂವನ್ನೇ ಬೆಳೆಯುವುದಕ್ಕೆ ಕಾರಣವಿದೆ. ಗುಲಾಬಿ, ಸೇವಂತಿಗೆ, ಮಲ್ಲಿಗೆ, ಸುಗಂಧರಾಜ ಮುಂತಾದ ಹೂಗಳ ಕೃಷಿಗಳಿಗೆ ಹೋಲಿಸಿದರೆ ಚೆಂಡು ಹೂವಿಗೆ ರೋಗ ಬಾಧೆ ಕಡಿಮೆ. ಇದನ್ನು ಬೆಳೆಯಲು ತಗುಲುವ ಖರ್ಚೂ ಕಡಿಮೆ. ಚೆಂಡು ಹೂವಿನ ಕೃಷಿಯಲ್ಲಿ ಹಾಕಿದ ಬಂಡವಾಳದ ಮೂರು ಪಟ್ಟು ಆದಾಯ ಗಳಿಸಬಹುದು. ಇದನ್ನು ಅರಿತೇ ಮಾರುತಿಯವರು ಚೆಂಡು ಹೂವು ಬೆಳೆಯಲು ನಿರ್ಧರಿಸಿದ್ದರು. ಉತ್ತಮ ತಳಿಯಾದ ಎಲ್‌-3 ಹೈಬ್ರಿಡ್‌ ಚೆಂಡು ಹೂವಿನ ಬೀಜಗಳನ್ನು ಹಾಗೂ ಕೀಟಗಳ ನಿಯಂತ್ರಣಕ್ಕಾಗಿ ಕೀಟನಾಶಕಗಳನ್ನು, ತಿಪಟೂರು ತಾಲ್ಲೂಕಿನ ಹುಲಕುರ್ಕೆ ಗ್ರಾಮದಲ್ಲಿ ಎ.ವಿ.ಟಿ ನ್ಯಾಚುರಲ್‌ ಪ್ರಾಡಕ್ಟ್ ಸಂಸ್ಥೆಯವರಿಂದ ಖರೀದಿಸಿದರು.

ಅರಳಿದ ಚೆಂಡು ಹೂವುಗಳೇ…: ಮೊದಲಿಗೆ 3 ಎಕರೆ 35 ಗುಂಟೆ ಹೊಲವನ್ನು ಉಳುಮೆ ಮಾಡಿ, ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿದರು. ನಂತರ ಜೂನ್‌ ತಿಂಗಳಿನಲ್ಲಿ ಚೆಂಡು ಹೂವಿನ ಬೀಜಗಳನ್ನು ಬಿತ್ತಿದರು. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರ ಬಿಟ್ಟು ಕೃಷಿ ಮಾಡಿದರು. ಹೊಲದಲ್ಲಿ ಬೋರ್‌ವೆಲ್‌ ಇದ್ದು ವಾರಕ್ಕೊಮ್ಮೆ ನೀರು ಹಾಯಿಸುತ್ತಾರೆ. ವಾರಕ್ಕೆ ಒಂದು ಸಲ ಕಂಪನಿ ಕೊಡುವ ಟಾನಿಕ್‌ ಹಾಗೂ ಔಷಧಗಳನ್ನು ಹೊಲದ ತುಂಬೆಲ್ಲ ಸಿಂಪಡಿಸುತ್ತಾರೆ. ಜುಲೈ ಕೊನೆಯ ವಾರದಲ್ಲಿ ಚೆಂಡು ಗಿಡಗಳು ಮೊಗ್ಗು ನೀಡಲು ಆರಂಭಿಸುತ್ತವೆ. ಕೃಷಿ ಮಾಡಿದ 2 ತಿಂಗಳಲ್ಲಿ ಹೊಲದಲ್ಲಿ ಚೆಂಡು ಹೂವು ಅರಳಿತು.

ಮೊದಲನೆ ವಾರದಲ್ಲಿ ಒಂದೂವರೆ ಟನ್‌ ಹೂವು ಸಿಗುತ್ತವೆ. 2ನೇ ವಾರದಲ್ಲಿ 3 ಟನ್‌, 3ನೇ ವಾರದಲ್ಲಿ 5 ಟನ್‌, 4ನೇ ವಾರದಲ್ಲಿ 8 ಟನ್‌ ಹೀಗೆ ಉತ್ತಮವಾಗಿ ಬೆಳೆ ಬರುತ್ತಿದೆ. ಪ್ರತಿ ವಾರ ಎ.ವಿ.ಟಿ ಸಂಸ್ಥೆಯವರೇ ಹೊಲಕ್ಕೆ ಬಂದು ಕಟಾವಾದ ಚೆಂಡು ಹೂವುಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿ ಕೆ.ಜಿ.ಗೆ ರೂ.10 ರಂತೆ ಮಾರುತಿಯವರ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ಮಾರುಕಟ್ಟೆಯ ಸಮಸ್ಯೆಯೇ ಬರುವುದಿಲ್ಲ. ಆದರೂ ಹೂವಿನ ಕೃಷಿಯಲ್ಲಿ ಮಾರುಕಟ್ಟೆ ಮತ್ತು ಬೇಡಿಕೆಯ ಬಗ್ಗೆ ತಿಳಿದಿರಬೇಕಾದುದು ಅತೀ ಅವಶ್ಯ. ಬೇಡಿಕೆ ಇರುವ ಹಂತದಲ್ಲಿ ಹೂವು ಕಟಾವಿಗೆ ಬಂದರೆ ಮಾತ್ರ ಬೆಳೆಗಾರ ಲಾಭ ಗಳಿಸಲು ಸಾಧ್ಯ ಎನ್ನುತ್ತಾರೆ ಸರಣ್ಣವರ್‌.

ಲಾಭ ಎಷ್ಟು ಬರುತ್ತಿದೆ?: ಸದ್ಯ, ಮೂವರು ಪುರುಷ ಹಾಗೂ 18 ಮಹಿಳಾ ಕಾರ್ಮಿಕರು ಇವರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಚೆಂಡು ಹೂವನ್ನು ಬೆಳೆಯುವ ಜಮೀನುಗಳಿಗೆ ಉತ್ತಮ ರಸ್ತೆ ಸೌಲಭ್ಯವಿದ್ದರೆ ಸಾಗಾಣಿಕೆಗೆ ಅನುಕೂಲ ಎನ್ನುವುದು ಅವರ ಅನುಭವದ ಮಾತು. ಹೂವಿನ ಕೃಷಿ ಮಾಡುವ ಸಮಯದಲ್ಲಿ 10 ಸಾವಿರ ರೂ.ಗಳನ್ನು ಖರ್ಚು ಮಾಡಿರುವ ಮಾರುತಿಯವರು ಪ್ರತಿ ವಾರ ಹೂವು ಕಟಾವು ಮಾಡುವ ಸಂದರ್ಭದಲ್ಲಿ ಅಂದಾಜು ಹತ್ತು ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ಖರ್ಚು ಮಾಡುತ್ತಾರೆ. ಒಟ್ಟಾರೆ ಚೆಂಡು ಹೂವು ಬೆಳೆದ ನಾಲ್ಕು ತಿಂಗಳ ಅವಧಿಯಲ್ಲಿ ಖರ್ಚು ಕಳೆದು ಮೂರು ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಪ್ರಾಥಮಿಕ ಶಾಲೆಯ ಮೇಷ್ಟರೊಬ್ಬರು ಸದ್ದಿಲ್ಲದೆ ಈ ಮಟ್ಟಿಗಿನ ಕೃಷಿಯಲ್ಲಿ ತೊಡಗಿ ಯಶಸ್ಸು ಕಂಡಿರುವುದು ಶ್ಲಾಘನೀಯ.

ಸಂಪರ್ಕಿಸಲು ಮೊಬೈಲ್‌ ಸಂಖ್ಯೆ: 9972565425

* ಸುರೇಶ ಗುದಗನ‌ವರ


ಈ ವಿಭಾಗದಿಂದ ಇನ್ನಷ್ಟು

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....

  • ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಅಮೆರಿಕದ...

  • ಮನೆ ವಿನ್ಯಾಸ ಮಾಡುವಾಗ ಆರ್ಕಿಟೆಕ್ಟ್ ಹಾಗೂ ಮನೆಯವರು ಸಾಕಷ್ಟು ಯೋಚಿಸುವುದು ವಿವಿಧ ಭಾಗಗಳು ಎಷ್ಟೆಷ್ಟು ಎತ್ತರ ಇರಬೇಕು? ಎಂಬುದರ ಬಗ್ಗೆ. ಮುಂದಿರುವ ರಸ್ತೆಯ...

  • ಅನಿಯಮಿತ ಕರೆ ಸೌಲಭ್ಯ, ಕಡಿಮೆ ದರಕ್ಕೆ ಹೆಚ್ಚು ಡಾಟಾ ನೀಡುತ್ತಿದ್ದ ಕಂಪೆನಿಗಳ ಕೊಡುಗೆಗಳು ಈಗ ಅಂತ್ಯವಾಗಿವೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಕಂಪೆನಿಗಳು...

ಹೊಸ ಸೇರ್ಪಡೆ