ಆಟೋ ಚಾಲಕ ಓಡೋಡಿ ಬಂದಿದ್ದ…

Team Udayavani, May 14, 2019, 6:00 AM IST

ಒಂದು ಕನಸಿತ್ತು… ಹೇಗಾದ್ರೂ ಮಾಡಿ ಮಾಸ್ಟರ್‌ ಡಿಗ್ರಿಯನ್ನು ನನ್ನ ಹೆಸರಿನ ಮುಂದೆ ಅಚ್ಚು ಹಾಕಿಸಬೇಕೆಂದು. ಆದರೆ, ಊರಲ್ಲೇ ಇದ್ರೆ ಅದೆಲ್ಲ ಆಗುತ್ತಾ? ಹೇಗೋ ಗಟ್ಟಿ ಮನಸ್ಸು ಮಾಡಿ, “ಹೊರಗೆ ಇದ್ದು ಓದುತ್ತೇನೆ’ ಅಂತ ಮನೆಯಲ್ಲಿ ಹೇಳಿಬಿಟ್ಟೆ. ಅಪ್ಪ- ಅಮ್ಮನಿಗೆ ತಲೆಬಿಸಿ… ಮಗಳನ್ನು ಹೇಗೆ ದೂರದಲ್ಲಿ ಬಿಟ್ಟಿರೋದು ಅಂತ.

ಪುಟ್ಟ ಜಗಳವನ್ನೂ ಮಾಡಿಕೊಂಡೆ. ಹಾಗೂ ಹೀಗೂ ಯುನಿವರ್ಸಿಟಿಗೆ ಸೇರಿಯೂಬಿಟ್ಟೆ. ಅದು ಸೆಮಿಸ್ಟರ್‌ ಪರೀಕ್ಷೆ. ಏನೂ ಗೊತ್ತಿರದ ಊರಿನಲ್ಲಿ, ಮೊದಲ ಸೆಮಿಸ್ಟರ್‌ ಬಂದಿದ್ದೇ ಗೊತ್ತಾಗಲಿಲ್ಲ. ಪರೀಕ್ಷೆಗೆ ತಡವಾಯ್ತು ಅಂತ ಆಟೋ ಹತ್ತಿದೆ. ಕೈಯಲ್ಲಿ ಬ್ಯಾಗ್‌ ಇತ್ತು. ಆದರೆ, ಆ ಬ್ಯಾಗ್‌ನಿಂದ ಏನನ್ನೋ ತೆಗೆಯುವಾಗ ಆಟೋದೊಳಗೆ ಹಾಲ್‌ ಟಿಕೆಟ್‌ ಬಿದ್ದಿದ್ದೇ ಗೊತ್ತಾಗಲಿಲ್ಲ. ಪರೀಕ್ಷೆ ಬರೆಯುವ ಗಾಬರಿಯಲ್ಲಿ, ಕೊಠಡಿಗೂ ಬಂದುಬಿಟ್ಟೆ. ಹಾಲ್‌ ಟಿಕೆಟ್‌ ತೆಗೆಯೋಣ ಅಂತ ಬ್ಯಾಗ್‌ ನೋಡಿದರೆ, ಸಿಗುತ್ತಲೇ ಇಲ್ಲ. ನಿಂತ ನೆಲ ಕುಸಿದಂತಾಯಿತು. ಜೋರು ಅಳು ಬಂತು. ಆಟೋದಿಂದ ಇಳಿದ ಜಾಗದಿಂದ, ಕೊಠಡಿವರೆಗೆ ಎಲ್ಲೆಲ್ಲೂ ಹುಡುಕಿದೆ. ಹಾಲ್‌ ಟಿಕೆಟ್‌ ಸಿಗಲಿಲ್ಲ. ಅಷ್ಟರಲ್ಲೇ, ಹಿಂದಿನಿಂದ “ಹಲೋ…’ ಎಂಬ ಧ್ವನಿ ಕೇಳಿತು. ತಿರುಗಿ ನೋಡಿದಾಗ, ಆಟೋ ಡ್ರೈವರ್‌! ಅವನ ಕೈಯಲ್ಲಿ ಹಾಲ್‌ ಟಿಕೆಟ್‌ ಇತ್ತು. ಹೋದ ಜೀವ ಮರಳಿ ಬಂದಷ್ಟು ಖುಷಿ ಆಯಿತು. ರಿಕ್ಷಾ ಚಾಲಕನ ಒಳ್ಳೇತನಕ್ಕೆ ಒಂದು ಸಲ್ಯೂಟ್‌ ಹೊಡೆದಿದ್ದೆ.

ಸುನಿತಾ ಫ‌. ಚಿಕ್ಕಮಠ, ವಿಜಯಪುರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ